ತಂಪು ಮಡಿಕೇರಿ
ಉಳ್ಳವರು ಫ್ರಿಜ್‌ನಲ್ಲಿರುವ ತಂಪನೆಯ ನೀರನ್ನು ಕುಡಿದು ಬಿಸಿಲಿನ ಬೇಗೆ ಆರಿಸಿಕೊಂಡರೆ, ಬಡವರಿಗೆ ಯಾವುದೇ ಖರ್ಚಿಲ್ಲದೇ ..

ಉಳ್ಳವರು ಫ್ರಿಜ್‌ನಲ್ಲಿರುವ ತಂಪನೆಯ ನೀರನ್ನು ಕುಡಿದು ಬಿಸಿಲಿನ ಬೇಗೆ ಆರಿಸಿಕೊಂಡರೆ, ಬಡವರಿಗೆ ಯಾವುದೇ ಖರ್ಚಿಲ್ಲದೇ ತಂಪನೆಯ ನೀರನ್ನು ನೀಡುವ ಮಡಿಕೆಗಳು ತಲಾತಲಾಂತರದಿಂದ ನಮ್ಮ ಮಧ್ಯೆ ಇವೆ. ಅಂತಹ ಮಡಿಕೆಗಳಿಗೀಗ ಎಲ್ಲಿಲ್ಲದ ಬೇಡಿಕೆ. ಪಾರಂಪರಿಕತೆ ಎನ್ನುವುದು ಎಲ್ಲರೂ ಉತ್ತಮ ಬದುಕು ಸಾಗಿಸಲು ಅವಕಾಶ ಕಲ್ಪಿಸಿದೆ ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ.
ಮಡಿಕೆಗಳನ್ನು (ಗಡಿಗೆ) ಮೊದಲಿನಿಂದಲೂ ಬಡವರ ಫ್ರಿಜ್‌ಗಳೆಂದೇ ಕರೆಯುತ್ತಾರೆ. ಮಡಿಕೆಯಲ್ಲಿ ಸಂಗ್ರಹಿಸಿದ ನೀರು ಸಾಕಷ್ಟು ಸಮಯ ತಂಪಾಗಿರುತ್ತದೆ. ಉತ್ತಮ ಗುಣಮಟ್ಟದ ಮಡಿಕೆಗಳು ಇಂದು ರು. 100ರಿಂದ 300 (ಸೈಜ್ ಮೇಲೆ ದರ ನಿಗದಿಯಾಗುತ್ತದೆ)ರ ವರೆಗೆ ಮಾರಾಟವಾಗುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಹಲವಾರು ಜನರು ತಮ್ಮ ಹೈನೋತ್ಪಾದನೆಯ ವೇಳೆಯಲ್ಲಿ ಮಡಿಕೆಗಳನ್ನು (ಫ್ರಿಜ್) ಮಾದರಿಯಲ್ಲಿಯೇ ಬಳಕೆ ಮಾಡುವುದು ಸಾಮಾನ್ಯವಾಗಿದೆ.
ಮಡಿಕೆಗಳನ್ನು ಬಡವರ ಫ್ರಿಜ್ ಎಂದು ನಂಬಲಾಗಿತ್ತು. ಆದರೆ, ಪಟ್ಟಣ ಮತ್ತು ನಗರ ಪ್ರದೇಶ ಸೇರಿದಂತೆ ಸಾಕಷ್ಟು ಪ್ರಮಾಣದಲ್ಲಿ ವಿದ್ಯುತ್ ಸಮಸ್ಯೆ ತಲೆದೋರಿ ಅನಿಯಮಿತ ಲೋಡ್‌ಶೆಡ್ಡಿಂಗ್ ಜಾರಿಯಲ್ಲಿರುವುದರಿಂದ ಶ್ರೀಮಂತರು ಸಹಿತ ಇಂದು ಮನೆಯಲ್ಲೊಂದು ಮಡಿಕೆ ಇರಲಿ ಎನ್ನುವ ಭಾವನೆಯಿಂದ ಮಡಿಕೆ ಖರೀದಿಗೆ ಮುಂದಾಗುತ್ತಿದ್ದಾರೆ. ಹಾಗಾಗಿ ಬಡವರಿಗಷ್ಟೆ ಸೀಮಿತವಾಗಿದ್ದ ಮಡಿಕೆಗಳು ಇಂದು ಮಧ್ಯಮ, ಶ್ರೀಮಂತ ವರ್ಗದವರಿಗೂ ತಂಪು ನೀರು ನೀಡುವ ಸಾಧನಗಳಾಗಿ ಮತ್ತೆ ಎಲ್ಲರ ಮನೆ ಸೇರುತ್ತಿವೆ. ಮಡಿಕೆ ಉತ್ಪಾದನೆ ಮಾಡುವ ಕುಂಬಾರಿಕೆ ಕುಟುಂಬಗಳಿಗೂ ಆಧಾರವಾಗಿದೆ. ಗುಡಿ ಕೈಗಾರಿಕೆ ಪರಸ್ಪರ ನಂಬಿಕೆಯ ಜೀವನಕ್ಕೆ ರಹದಾರಿಯಾಗಿತ್ತು ಎನ್ನುವುದನ್ನು ರಸ್ತೆ ಬದಿಯಲ್ಲಿ ಮಾರಲಿಟ್ಟಿರುವ ಈ ಮಡಿಕೆಗಳು ಇಂದು ಸಾರಿ ಸಾರಿ ಹೇಳುತ್ತಿವೆ. ಈ ಹಿಂದೆ ರೈತ ಸಮುದಾಯ ಹೊಲಗಳಿಗೂ ನೀರನ್ನು ಕೊಂಡೋಯ್ಯಲು ಮಡಿಕೆ ಮಾದರಿಯ ತತ್ರಾಣಿಗಳನ್ನು ಬಳಕೆ ಮಾಡುತ್ತಿದ್ದರು.
ವೈಜ್ಞಾನಿಕ ಹಿನ್ನೆಲೆ
ಈ ಮಡಿಕೆಗಳನ್ನು ತಯಾರಿಸಲು ಕೆಂಪು ಮತ್ತು ಕಪ್ಪು ಮಣ್ಣನ್ನೆ ಬಳಕೆ ಮಾಡಲಾಗುತ್ತದೆ. ಈ ಮಡಿಕೆಗಳಲ್ಲಿ ನೀರನ್ನು ಸಂಗ್ರಹಿಸಿ ಕುಡಿಯುವುದು ಆರೋಗ್ಯಕ್ಕೆ ಹೆಚ್ಚು ಉಪಯುಕ್ತಕಾರಿ. ಇದರೊಟ್ಟಿಗೆ ಮಡಿಕೆ ತಯಾರಿಕೆಯಲ್ಲಿ ಯಾವುದೇ ರಾಸಾಯನಿಕ ಬಳಕೆ ಮಾಡಲ್ಲ. ಇನ್ನು ಮಣ್ಣಿನಲ್ಲಿರುವ ಹಲವಾರು ಖನಿಜಾಂಶಗಳು ಮಡಿಕೆಯಲ್ಲಿ ಸಂಗ್ರಹಿಸಿದ ನೀರಿನ ಮೂಲಕ ನಮ್ಮ ದೇಹವನ್ನು ಸೇರುವುದರಿಂದ ಆರೋಗ್ಯಕ್ಕೆ ಸಹಕಾರಿಯಾಗಿದೆ.
ಕುಂಬಾರರಿಗೆ ತಲುಪದ ಲಾಭ
ಒಮ್ಮೆಲೇ ಬೇಡಿಕೆ ಹೆಚ್ಚಿದ್ದರಿಂದ ಕುಂಬಾರರು ಮಡಿಕೆಗಳ ತಯಾರಿಕೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಇದರಿಂದ ಅವುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ವಾಹನಗಳಲ್ಲಿ ತಂದು ನಗರ ಪ್ರದೇಶಗಳಲ್ಲಿನ ಸ್ಥಳೀಯ ಮಾರಾಟಗಾರರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಬೇಸಿಗೆಯ ಹಿನ್ನೆಲೆಯಲ್ಲಿ ಹಿಂದಿನ ದರಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಮಡಿಕೆಗಳು ಮಾರಾಟವಾಗುತ್ತಿದ್ದರೂ ಮಡಿಕೆ ತಯಾರಿಕೆಯನ್ನೇ ನಂಬಿ ಬದುಕುತ್ತಿರುವ ಕುಂಬಾರರಿಗೆ ಮಾತ್ರ ಬೆಲೆಯಲ್ಲಿ ಆಗಿರುವ ಹೆಚ್ಚಳದ ಲಾಭ ತಲುಪುತ್ತಿಲ್ಲ.
ಹೆಚ್ಚಿದ ಬೇಡಿಕೆ
ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಮಡಿಕೆಗಳ ಬೇಡಿಕೆ ಹೆಚ್ಚಾಗಿ ಕೇಳಿ ಬರುತ್ತಿದೆ. ಹಿಂದೆ ತಿಂಗಳಿಗೆ ನಾಲ್ಕೈದು ಮಡಿಕೆಗಳು ಮಾತ್ರ ಮಾರಾಟವಾಗುತ್ತಿದ್ದವು. ಆದರೆ, ಕಳೆದ ಒಂದು ವಾರದಿಂದ ಬೇಸಿಲಿನ ತಾಪ ಹೆಚ್ಚಾಗುತ್ತಿದ್ದಂತೆ ಸಾರ್ವಜನಿಕರು ಆಸಕ್ತಿಯಿಂದ ಮಡಿಕೆಗಳನ್ನು ಖರೀದಿಸುತ್ತಿದ್ದಾರೆ. ಇನ್ನು ಹೆಚ್ಚಿನ ಬೇಡಿಕೆ ಕಂಡು ಬರುವ ಸಾಧ್ಯತೆ ಇದೆ.
-ಸಿದ್ದಪ್ಪ ಕುಂಬಾರ,
ಮಡಿಕೆ ಮಾರಾಟಗಾರ
-ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


