ಬೈಟುಕಾಫಿ

ಮರೆವು ಜಾಸ್ತಿಯಾ? ಬೆರ್ರಿಹಣ್ಣು ತಿನ್ನಿ!

ಮರೆವು ಜಾಸ್ತಿಯಾ? ಬೆರ್ರಿಹಣ್ಣು ತಿನ್ನಿ!
Published On :

ಜ್ಞಾಪಕ ಶಕ್ತಿ ಮತ್ತು ಆಲೋಚನಾ ಸಾಮರ್ಥ್ಯಗಳು ಹೆಚ್ಚಾಗಬೇಕು. ಗ್ರಹಿಕೆಯ ಸಾಮರ್ಥ್ಯ ಜಾಸ್ತಿಯಾಗಬೇಕು. ತ್ವರಿತವಾಗಿ ಪ್ರತಿಕ್ರಿಯಿಸುವ ಮತ್ತು ನಿರ್ಧಾರ ತೆಗೆದುಕೊಳ್ಳುವ ತಾಕತ್ತು ಬೆಳೆಸಿಕೊಳ್ಳಬೇಕು. ಇದೆಲ್ಲ ಆಗಬೇಕು ಅಂತಿದ್ದರೆ ನಮ್ಮ ಮೆದುಳು ಚೆನ್ನಾಗಿರಬೇಕು. ಹಣ್ಣು ಮತ್ತು ನಟ್ಸ್‌ಗಳನ್ನು ತಿನ್ನುವುದರಿಂದ ಮೆದುಳು ಶಕ್ತಿಶಾಲಿಯಾಗಿರುತ್ತದೆ. ಕೆಲವು ಹಣ್ಣುಗಳು ಮತ್ತು ಬೀಜಗಳು ಮೆದುಳಿಗೆ ಬಲ ತುಂಬಬಲ್ಲವು. ಇವು ಪೌಷ್ಟಿಕಾಂಶಗಳಿಂದ ಶ್ರೀಮಂತವಾಗಿರುತ್ತವೆ. ಮೆದುಳಿಗೆ ವಿದ್ಯುಚ್ಛಕ್ತಿಯಂತೆ ಕೆಲಸ ಮಾಡಲು ಉತ್ತೇಜಿಸುವ ಬೊರೊನ್ ಎನ್ನುವ ಖನಿಜ ಹಣ್ಣು, ಬೀಜಗಳಲ್ಲಿ ಇರುತ್ತದೆ. ಈ ಖನಿಜ ಮೆದುಳು ಜಡವಾಗುವುದನ್ನು ತಡೆಯುವುದರ ಜತೆಗೆ ಕ್ರಿಯಾಶೀಲವಾಗಿರುವಂತೆಯೂ ನೋಡಿಕೊಳ್ಳುತ್ತದೆ. ಕೆಲವು ಮನಶ್ಯಾಸ್ತ್ರಜ್ಞರು ಫ್ರುಟ್ಸ್ ಅಂಡ್ ನಟ್ಸ್‌ಗಳನ್ನು ಹೆಚ್ಚೆಚ್ಚು ಸೇವಿಸುವಂತೆ ಸಲಹೆ ಮಾಡುವುದು ಇದೇ ಕಾರಣಕ್ಕೆ.
ಹಣ್ಣುಗಳನ್ನು ಬೇರಾವುದೇ ಪದಾರ್ಥಗಳ ಜತೆಗೆ ಬೆರೆಸಿಕೊಳ್ಳದೆ ಪ್ರತ್ಯೇಕವಾಗಿಯೇ ಸೇವಿಸಬೇಕು. ಆಗ ಅದರ ಪರಿಣಾಮ ಜಾಸ್ತಿ. ಈಗೀಗ 'ಸಾವಯವ ಹಣ್ಣು'ಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಅವುಗಳನ್ನೇ ಆರಿಸಿಕೊಳ್ಳುವುದು ಒಳ್ಳೆಯದು. ಎಲ್ಲಾ ಹಣ್ಣುಗಳಲ್ಲಿಯೂ ಸತ್ವ ಇರುತ್ತದೆ, ಎಲ್ಲಾ ಹಣ್ಣುಗಳೂ ಒಳ್ಳೆಯದೆ. ನಿರ್ದಿಷ್ಟವಾಗಿ ಮೆದುಳಿಗೆ ಸಂಬಂಧಿಸಿಯೇ ಡಯಟ್ ಪಾಲಿಸುತ್ತಿರಿ ಅಂತಾದರೆ ಅಂದರೆ ಮಾನಸಿಕ ಒತ್ತಡ, ಖಿನ್ನತೆ, ಒತ್ತಡದ ಸಂದರ್ಭಗಳಲ್ಲಿ ಕಾಡುವ ತಲೆನೋವು ಇತ್ಯಾದಿ ತೊಂದರೆಗಳಿಂದ ಬಳಲುತ್ತಿರುವಾಗ ಬೆರ್ರಿ ಹಣ್ಣುಗಳು ಅತ್ಯುತ್ತಮ ಆಯ್ಕೆ. ಬ್ಲೂಬೆರ್ರಿ, ಸ್ಟ್ರಾಬೆರ್ರಿ, ಗೋಜ ಬೆರ್ರಿ ಸೇರಿದಂತೆ ಯಾವುದೇ ಬೆರ್ರಿ ಹಣ್ಣು ಆಗಬಹುದು. ಇವುಗಳಲ್ಲಿ ಶಕ್ತಿಶಾಲಿ ಆ್ಯಂಟಿಆಕ್ಸಿಡೆಂಟ್‌ಗಳಿರುತ್ತವೆ. ಇವು ಮೆದುಳಿನ ಕೋಶಗಳು ಮತ್ತು ನರಕೋಶಗಳ ನಡುವಿನ ಸಂಪರ್ಕವನ್ನು ಉತ್ತಮಪಡಿಸುತ್ತವೆ. ಮೆದುಳಿನ ಕೋಶಗಳು ಹೆಚ್ಚು ಆ್ಯಕ್ಟೀವ್ ಆಗಿರುತ್ತವೆ ಅಂತಾದರೆ ನೀವು ಹೊಸ ವಿಷಯಗಳನ್ನು ಬಹುಬೇಗ ಗ್ರಹಿಸಿಕೊಳ್ಳಲು ಶಕ್ತರಾಗುತ್ತೀರಿ.
ಅಲ್ಲದೆ ಬೆರ್ರಿ ಹಣ್ಣುಗಳು ಮಾಡುವ ಇನ್ನೊಂದು ಉಪಕಾರ ಎಂದರೆ ಮೆದುಳಿನ ಭಾಗದಲ್ಲಿ ರಕ್ತಚಲನೆ ಸರಾಗವಾಗಿರುವಂತೆ ನೋಡಿಕೊಳ್ಳುವುದು. ಹೆಚ್ಚು ರಕ್ತ ಮೆದುಳಿಗೆ ಪೂರೈಕೆಯಾಗುತ್ತಿದೆ ಎಂದರೆ ಅಧಿಕ ಪ್ರಮಾಣದ ಆಮ್ಲಜನಕ ಮತ್ತು ಪೌಷ್ಟಿಕಾಂಶಗಳು ಸಿಗುತ್ತವೆ ಎಂದರ್ಥ. ರಕ್ತಸಂಚಾರ ಸರಾಗವಾಗಿದ್ದರೆ ಮೆದುಳಿನ ಬೆಳವಣಿಗೆಯೂ ಚೆನ್ನಾಗಿರುತ್ತದೆ. ಕೆಲವು ಬೆರ್ರಿ ಹಣ್ಣುಗಳಲ್ಲಿ ವಿಟಮಿನ್ 'ಎ' ಕೂಡ ಸಮೃದ್ಧವಾಗಿರುತ್ತದೆ. ಮರೆವಿನ ಕಾಯಿಲೆ ಇರುವವರಲ್ಲಿಯೂ ಬೆರ್ರಿ ಹಣ್ಣುಗಳು ಆಚ್ಚರಿ ಅನ್ನಿಸುವಂತಹ ಪರಿಣಾಮ ಬೀರಬಲ್ಲವು. ಟಿ

(ಮುಂದುವರಿಯುವುದು)
ಮೊ.9900113699 (ಎಸ್‌ಎಂಎಸ್‌ಗೆ ಮಾತ್ರ)
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.