ಬೈಟುಕಾಫಿ

ಕಲರ್ ಕಲರ್ ಕನಸು

ಕಲರ್ ಕಲರ್ ಕನಸು
Published On :

ಮಿಷನ್ ಸಪ್ನೇ...! ಎರಡು ವಾರಗಳ ಹಿಂದೆಯಷ್ಟೇ ಕಲರ್ಸ್ ವಾಹಿನಿಯಲ್ಲಿ ಆರಂಭವಾದ ಈ ರಿಯಾಲಿಟಿ ಶೋ ಜನಮನ ಗೆಲ್ಲುತ್ತಾ ಪಯಣ ಮುಂದುವರಿಸಿದೆ. ಅಮೀರ್ ಖಾನ್ ನಡೆಸಿಕೊಟ್ಟ 'ಸತ್ಯಮೇವ ಜಯತೇ' ಕಾರ್ಯಕ್ರಮದ ನಂತರ 'ಥಿಂಕ್ ಹಟ್‌ಕೆ' ಎಂಬಂತೆ ಅದ್ಭುತವಾದ ಕಾನ್ಸೆಪ್ಟನ್ನು ಜನರ ಮುಂದಿರಿಸಿ ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು 'ಮಿಷನ್ ಸಪ್ನೇ' ಕಾರ್ಯಕ್ರಮ ಮಾಡುತ್ತಿದೆ. ಈ ಕಾರ್ಯಕ್ರಮದ ಕಾನ್ಸೆಪ್ಟ್ ಏನು ಗೊತ್ತಾ? ಒಬ್ಬ ಸೆಲೆಬ್ರಿಟಿ ಒಂದು ದಿನ ಆಮ್ ಆದ್ಮಿಯಾಗಿ ದುಡಿಯಬೇಕು. ಅಂದರೆ ಸೆಲೆಬ್ರಿಟಿ ಲೈಫ್‌ಸ್ಟೈಲನ್ನು ಬಿಟ್ಟು ಜನಸಾಮಾನ್ಯರಂತೆ ದುಡಿಯಬೇಕು. ಹಾಗೆ ದುಡಿದು ಸಂಪಾದಿಸಿದ ಹಣವನ್ನು ನೂರರಿಂದ ಗುಣಿಸಿ ಸಿಕ್ಕ ಮೊತ್ತವನ್ನು ನೆರವು ಕೋರಿ ಬಂದ ಕುಟುಂಬಗಳಿಗೆ ನೀಡಲಾಗುತ್ತದೆ.
ಏಪ್ರಿಲ್  27ರಂದು ಪ್ರಸಾರವಾದ ಮೊದಲ ಎಪಿಸೋಡ್‌ನಲ್ಲಿ ಬ್ಲಡ್‌ಕ್ಯಾನ್ಸರ್‌ನಿಂದ ಬಳಲುತ್ತಿರುವ ಸುನಿತಾ ಇಂಗಳೆ ಎಂಬ ಬಾಲಕಿಗೆ ನೆರವು ನೀಡಲಾಗಿತ್ತು. ಸುನಿತಾಳ ಚಿಕಿತ್ಸೆಗಾಗಿ 4 ಲಕ್ಷದ ಅವಶ್ಯಕತೆಯಿದ್ದು, ಅದನ್ನು ಮಿಷನ್ ಸಪ್ನೇ ಪೂರೈಸಿದೆ. ಪ್ರಸ್ತುತ ಎಪಿಸೋಡ್‌ನಲ್ಲಿ ಸುನಿತಾಳ ನೆರವಿಗೆ ಹಣ ಸಂಪಾದನೆ ಮಾಡಿದ್ದು ಯಾರು ಗೊತ್ತಾ?  ಬಾಲಿವುಡ್ ನಟ ರಣ್‌ಬೀರ್‌ಕಪೂರ್. ಸುನಿತಾಳ ಚಿಕಿತ್ಸಾ ವೆಚ್ಚ ಭರಿಸುವುದಕ್ಕಾಗಿ ರಣ್‌ಬೀರ್‌ಕಪೂರ್ ಒಂದು ದಿನದ ಮಟ್ಟಿಗೆ ಪುಣೆಯಲ್ಲಿ ಪಾವ್‌ಬಾಜಿ ಮಾರಿದರು. ಆ ದಿನ ಬಿಸಿಲಲ್ಲಿ ನಿಂತು ಪಾವ್‌ಬಾಜಿ ಮಾರುತ್ತಾ, ಜನರಿಗೆ ಆಟೋಗ್ರಾಫ್ ನೀಡಿ, ಅವರೊಂದಿಗೆ ಫೋಟೋಗೆ ಪೋಸ್ ನೀಡಿ ರಣ್‌ಬೀರ್ ಸಂಪಾದಿಸಿದ ಒಟ್ಟು ಹಣ 9,500ರೂ! ಪಾವ್‌ಬಾಜಿ ತಯಾರಿಸುವುದಕ್ಕೆ 2000 ಖರ್ಚಾಗಿರುವುದರಿಂದ ಕೈಗೆ ಸಿಕ್ಕಿದ ಒಟ್ಟು ಮೊತ್ತ 7,500. ಈ ಕಾರ್ಯಕ್ರಮದ ಪ್ರಾಯೋಜಕರಾದ ಟಾಟಾ ಮೋಟಾರ್ಸ್ ಹೀಗೆ ಸಿಕ್ಕಿದ ಮೊತ್ತವನ್ನು 100ರಿಂದ ಗುಣಿಸಿ ಒಟ್ಟು ಮೊತ್ತವನ್ನು ನೆರವು ಬೇಡಿ ಬಂದವರಿಗೆ ನೀಡುತ್ತದೆ. ಹೀಗೆ ರಣ್‌ಬೀರ್‌ಕಪೂರ್ ದುಡಿಮೆಯ ಹಣ 7,50,000! ಈ ಮೊತ್ತವನ್ನು ಚೆಕ್‌ರೂಪದಲ್ಲಿ ಸುನಿತಾಳ ಕುಟುಂಬಕ್ಕೆ ನೀಡಿದಾಗ, ಸುನಿತಾಳ ಮುಖದಲ್ಲಿ ಅಚ್ಚರಿ, ರಣ್‌ಬೀರ್‌ಕಪೂರ್ ಮುಖದಲ್ಲಿ  ಧನ್ಯತಾಭಾವ!
ಕಾರ್ಯಕ್ರಮದ ಇನ್ನೊಂದು ವಿಶೇಷವೇನೆಂದರೆ ಇಲ್ಲಿ ನೆರವು ಬಯಸಿ ಬಂದವರೊಂದಿಗೆ ನಿರೂಪಕಿ ಸೋನಾಲಿ ಬೇಂದ್ರೆ ಮಾತನಾಡುವ ರೀತಿ ತುಂಬಾ ಆಪ್ತವೆನಿಸುತ್ತ್ತದೆ. ತಮ್ಮ ಕಷ್ಟಗಳನ್ನು ಅವರು ವಿವರಿಸುವಾಗ ಇಲ್ಲಿ ಕ್ಯಾಮೆರಾ ನೊಂದವರನ್ನೇ ಫೋಕಸ್ ಮಾಡಿ ತೋರಿಸಿ ಹಿನ್ನೆಲೆಯಲ್ಲಿ  ದುಃಖದ ಮ್ಯೂಸಿಕ್‌ಕೇಳಿಸುವುದಿಲ್ಲ.     ಸತ್ಯಮೇವಜಯತೆಯ ಅಮೀರ್‌ಖಾನ್‌ನಂತೆ, ಸೋನಾಲಿ ಕಣ್ಣೀರು ಸುರಿಸುವುದೂ ಇಲ್ಲ.  ನೆರವು ಆಗ್ರಹಿಸಿ ಬಂದವರ ಜತೆ ಅಷ್ಟೇ ಮುಕ್ತವಾಗಿ ಬೆರೆಯುವ ಸೆಲೆಬ್ರಿಟಿಗಳು ನಾವೂ ನಿಮ್ಮೊಂದಿಗೆ ಇದ್ದೇವೆ ಎನ್ನುವ ಮೂಲಕ ಧೈರ್ಯ ತುಂಬುತ್ತಾರೆ.
ಕಳೆದ ಭಾನುವಾರ ಪ್ರಸಾರವಾದ ಎರಡನೇ ಎಪಿಸೋಡ್‌ನಲ್ಲಿ ಖ್ಯಾತ ಗಾಯಕ ಮಿಖಾ ಸಿಂಗ್ ದಿಲ್ಲಿಯಲ್ಲಿ ಚಾಯ್‌ವಾಲನಾಗಿ ದುಡಿದು ಲಖೇಂದ್ರ ಪಾಸ್ವಾನ್ ಎಂಬುವರ ಮೊಮ್ಮಗನ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಿದ್ದರು. 'ನಾನು ಚಹಾ ಮಾರುವ ಮೂಲಕ ಜನರ ಕಷ್ಟಗಳನ್ನು ಅರಿತಿದ್ದೇನೆ. ಇದು ಐ ಓಪನರ್ ಆಗಿತ್ತು' ಎಂದು ಹೇಳಿದ ಮಿಖಾ ಪ್ರಸ್ತುತ ಕಾರ್ಯಕ್ರಮದ ಟೈಟಲ್‌ಸಾಂಗನ್ನು ಫಲಾಪೇಕ್ಷೆಯಿಲ್ಲದೆ ಹಾಡುವ ಮೂಲಕ ಹೆಚ್ಚುಗಾರಿಕೆ ಮೆರೆದಿದ್ದಾರೆ.
ಮುಂದಿನ ಎಪಿಸೋಡ್‌ನಲ್ಲಿ ಬಾಲಿವುಡ್ ನಟ ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಹೀರೋ ವರುಣ್ ತರಕಾರಿ ಮಾರುವ ಮೂಲಕ ನೆರವು ನೀಡಲಿದ್ದಾರೆ. ಇಲ್ಲಿ ಬರುವ ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕಾಗಿ ಹಣ ಪಡೆಯುವುದಿಲ್ಲ ಎಂಬುದು ಇದರ ಇನ್ನೊಂದು ವಿಶೇಷ. ಮುಂಬರುವ ಎಪಿಸೋಡ್‌ಗಳಲ್ಲಿ ಸಲ್ಮಾನ್‌ಖಾನ್  ಹೇರ್ ಡ್ರೆಸ್ಸರ್) , ಕರಣ್ ಜೋಹರ್(ಫೋಟೋಗ್ರಾಫರ್), ದೃಷ್ಟಿಧಾಮಿ (ನಿಂಬೆಹಣ್ಣು ಮಾರುವವಳು), ರಾಮ್‌ಕಪೂರ್(ಟ್ಯಾಕ್ಸಿ ಡ್ರೈವರ್) ಆಮ್ ಆದ್ಮಿಯಾಗಿ ದುಡಿದು ನೆರವು ನೀಡಲಿದ್ದಾರೆ. ಸ್ಟಾರ್, ಸೆಲೆಬ್ರಿಟಿಗಳೇ  ಜನರ ನಡುವೆ ಹೋಗಿ , ದುಡಿದು ಸಂಪಾದಿಸಿದ ಹಣವನ್ನು ನೇರವಾಗಿ ಸಂತ್ರಸ್ತರಿಗೆ ನೀಡುವ ಮಿಷನ್ ಸಪ್ನೇ ಒಂದು ವಿಭಿನ್ನ ಜನಪರ ಸಮಾಜಮುಖಿ ಕಾರ್ಯಕ್ರಮ ಎಂಬುದರಲ್ಲಿ ಎರಡು ಮಾತಿಲ್ಲ.

= ಕೆ.ರಜನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.