ಬೈಟುಕಾಫಿ

ರೈಸ್ ಬಾತ್!

ರೈಸ್ ಬಾತ್!
Published On :

ಚಿತ್ರರಂಗದಲ್ಲಿ ಹೀರೋ ಎನಿಸಿಕೊಳ್ಳುವುದು ಸುಲಭ. ಸ್ಟಾರ್‌ಗಿರಿಯನ್ನು ಇನ್ನೂ ಸುಲಭವಾಗಿ ದಕ್ಕಿಸಿಕೊಳ್ಳಬಹುದು. ಯಾರೋ ಕೊಟ್ಟ ಪಾತ್ರಕ್ಕೆ ಮೇಕಪ್ ಹಚ್ಚುವುದೂ ಕೂಡ ಸರಳ. ಆದರೆ, ಆ ಪಾತ್ರವೇ ತಾನಾಗಿ, ತಾನೇ ಆ ಪಾತ್ರವನ್ನು ಕಟ್ಟಿಕೊಡಬೇಕೆಂದಾಗ ಎದುರಾಗುವ ಸವಾಲುಗಳು ಬೇರೆ. ಅದರಲ್ಲೂ ಆ ಪಾತ್ರಕ್ಕೂ ತಾನೇ ಕಥೆ ಸಂಯೋಜಿಸಲು ಹೊರಟಾಗಲೇ ನಿಜವಾದ ಕಲಾ ಪರೀಕ್ಷೆ ಶುರುವಾಗುತ್ತದೆ. ಹೀರೋ, ಸ್ಟಾರ್, ದುಬಾರಿ ನಟ ಎನ್ನುವ ಖ್ಯಾತಿಯ ಆಚೆಗೆ ನಿಲ್ಲುವ ಕಲಾವಿದ ಈ ಪರೀಕ್ಷೆಯಲ್ಲಿ ಗೆಲ್ಲುತ್ತಾನೆ. ಅಥವಾ ತನ್ನನ್ನು ಅಭಿಮಾನಿಸುವ ಪ್ರೇಕ್ಷಕ ವರ್ಗಕ್ಕೆ ಮೆಚ್ಚುಗೆಯಾಗುವಂಥ ಪ್ರಯತ್ನವನ್ನಾದರೂ ಮಾಡುತ್ತಾನೆ.
 ಹಾಗೆ, ಯಾರೋ ಕೊಟ್ಟ ಪಾತ್ರವನ್ನು ಮಾತ್ರವಲ್ಲ, ತಾನೇ ಒಂದು ಅಪರೂದ ಪಾತ್ರವನ್ನು ಸೃಷ್ಟಿಸಬಲ್ಲೆ ಎಂದು ತೋರಿಸಿಕೊಟ್ಟ ಕಲಾವಿದ ಪ್ರಕಾಶ್ ರೈ. ಕನ್ನಡದ ಈ ರೈ, ಭಾರತೀಯ ಚಿತ್ರರಂಗದ ಮಟ್ಟದಲ್ಲಿ 'ರಾಜ್‌'. ಪ್ರಕಾಶ್ ರೈ ಎಷ್ಟು ಅದ್ಭುತ ನಟನೋ ಅಷ್ಟೇ ಅವರ ಕಥೆಗಳಲ್ಲೂ ಕೂಡ ಸ್ವತ್ವ ಅಡಗಿರುತ್ತವೆ. ನಿಜವಾದ ಅರ್ಥದಲ್ಲಿ ಮನೆಮಂದಿ ಕೂತು ನೋಡುವಂಥ ಕಥೆ-ಚಿತ್ರ ಅವರ ನಿರ್ದೇಶನದ ನೆರಳಿನಲ್ಲಿ ಮೂಡುತ್ತವೆ. ಅದಕ್ಕೆ ಸಾಕ್ಷಿ 'ನಾನೂ ನನ್ನ ಕನಸು' ಹಾಗೂ 'ಧೋನಿ'. ಈಗ ಮತ್ತೊಮ್ಮೆ ಭಿನ್ನ ಎನಿಸುವ ಮತ್ತು ಅಪರೂಪವಾದ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.ಪೋನಿ ವರ್ಮ ನೃತ್ಯ ನಿರ್ದೇಶನ ಮಾಡಿರುವ, ಇಳೆಯರಾಜ ಸಂಗಿತ ಸಂಯೋಜಿಸಿರುವ, ಕನ್ನಡತಿ ಪ್ರೀತಿ ಛಾಯಾಗ್ರಹಣ ಮಾಡಿರುವ ಈ 'ಒಗ್ಗರಣೆ' ಚಿತ್ರದ ಬಗ್ಗೆ ಸ್ವತಃ ಪ್ರಕಾಶ್ ರೈ ಅವರೇ ಪ್ರೇಕ್ಷಕನಂತೆ ಕುತೂಹಲದಲ್ಲಿದ್ದಾರೆ.

ಒಗ್ಗರಣೆ ಚಿತ್ರ ಏಕ ಕಾಲಕ್ಕೆ ಮೂರು ಭಾಷೆಯಲ್ಲಿ ಬರುತ್ತಿದ್ದು, ಪ್ರೇಕ್ಷಕ ಒಂದೇ ಅಡುಗೆಯಲ್ಲಿ ಮೂರು ರುಚಿಗಳನ್ನು ಸವಿಯುತ್ತಾನೆಯೇ?

ರುಚಿ ಎನ್ನುವುದು ನಾಲಿಗೆಗೆ ಸಂಬಂಧಿಸಿದ್ದು. ಆದರೆ, ಕೆಲ ರುಚಿಕಟ್ಟಾದ ತಿನಿಸುಗಳು ಯೂನಿವರ್ಸೆಲ್ ಆಗಿರುತ್ತವೆ. ಅಂಥ ಅಡುಗೆಯನ್ನೇ ನಾನು ಮಾಡಿದ್ದೇನೆ. ಒಬ್ಬ ವ್ಯಕ್ತಿ ತಾನು ಇಷ್ಟಪಟ್ಟಿದ್ದನ್ನು ಸವಿಯಲು ಅವನದ್ದೇ ಆದ ಪಯಣ ಇರುತ್ತದೆ. ಆ ಪಯಣಕ್ಕೆ ತಕ್ಕಂತೆ ನಾನು ಕನ್ನಡದಲ್ಲಿ 'ಒಗ್ಗರಣೆ' ಹಾಕಿದ್ದೇನೆ, ತೆಲುಗಿನಲ್ಲಿ 'ಉಲವಚಾರು ಬಿರಿಯಾನಿ' ಮಾಡಿದ್ದೇನೆ, ಹಾಗೆ ತಮಿಳಿನಲ್ಲಿ 'ಅನ್ ಸಮಲ್ ಅರಾಯಿಲ್‌' (ಇನ್ ಯುವರ್ ಕಿಚನ್) ರೂಪಿಸಿದ್ದೇನೆ. ಹೀಗಾಗಿ ಆಯಾ ಪ್ರಾಂತ್ಯಕ್ಕೆ ತಕ್ಕಂತೆ ಅವರವರದ್ದೇ ಮನೆಯ ರುಚಿ ಇಲ್ಲಿ ಸಿಗುತ್ತದೆ. ಮೂರು ವಿಭಿನ್ನ ಪ್ರಾಂತ್ಯಗಳ ಸಂಸ್ಕೃತಿ ಇದರಲ್ಲಿದೆ.

ಈ ಚಿತ್ರದ ಚಿತ್ರೀಕರಣಕ್ಕೆ ಮೈಸೂರನ್ನೇ ಆಯ್ಕೆ ಮಾಡಿಕೊಂಡಿದ್ದು ಯಾಕೆ? ಏನಾದರೂ ಭಾವನಾತ್ಮಕ ನಂಟು ಉಂಟೆ?
ಒಬ್ಬ ನಿರ್ದೇಶಕನಾದವನಿಗೆ ತನ್ನ ಕಥೆ ಯಾವ ರಸ್ತೆಯಲ್ಲಿ ಅರಳಬೇಕು, ಯಾವ ಪರಿಸರದಲ್ಲಿ ಅನಾವರಣಗೊಳ್ಳಬೇಕೆಂದ ನಿರ್ದಿಷ್ಟ ಯೋಚನೆ ಇರುತ್ತದೆ. ಆ ಯೋಚನೆಯಲ್ಲಿ ನಾನು ಮೈಸೂರು ನಗರಿಯನ್ನು ಚಿತ್ರೀಕರಣಕ್ಕೆ ಆಯ್ಕೆ ಮಾಡಿಕೊಂಡೆ. ಸುಂದರವಾದ ಊರು, ನೇಟಿವಿಟಿಗೆ ಹೇಳಿ ಮಾಡಿಸಿದಂತಹ ವಾತಾವರಣ, ಹೊರಗಿನ ವ್ಯಕ್ತಿಗಳನ್ನೂ ಪರಿಚಿತರಂತೆ ನೋಡುವ ಸಂಸ್ಕೃತಿ ಈ ಊರಿನದ್ದು. ಎಂದಿನಂತೆ ನನಗೆ ಗೊತ್ತಿಲ್ಲದ ನನ್ನ ಬಾಲ್ಯದ ಕಥೆಗಳು ಇಲ್ಲಿವೆ. ಇವೆಲ್ಲವೂ 'ಒಗ್ಗರಣೆ' ಮೈಸೂರಿನಲ್ಲಿ ಹಾಕಲು ಕಾರಣವಾಯಿತು.

ಚಿತ್ರರಂಗದಲ್ಲಿ ಸಾಕಷ್ಟು ಅನುಭವ ಇದ್ದವರಿಗೇ ಸ್ಟಾರ್‌ಗಳ ಚಿತ್ರಗಳಲ್ಲಿ ಕೆಲಸ ಸಿಗುವುದು ಕಷ್ಟ. ಆದರೆ, ನೀವು 9 ಮಂದಿ ಹೊಸ ಹುಡುಗಿಯರನ್ನು ಸಹಾಯಕರನ್ನಾಗಿ ನೇಮಿಸಿಕೊಂಡಿದ್ದೀರಲ್ಲ?
ನಾನು ಹೊಸ ಹೊಸ ಪ್ರತಿಭಾವಂತರನ್ನು ಗೌರವಿಸುತ್ತೇನೆ. ನನ್ನ ಹಿಂದಿನ ಚಿತ್ರಗಳಲ್ಲೂ ಹೊಸಬರ ಜೊತೆ ಕೆಲಸ ಮಾಡಿಸಿದ್ದೇನೆ. ಇನ್ನು ಹುಡುಗಿಯರನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣ ಇದು ಅಡುಗೆ ಮನೆಗೆ ಸಂಬಂಧಿಸಿದ ಚಿತ್ರ. ಹೀಗಾಗಿ ತುಂಬಾ ಸೂಕ್ಷ್ಮವಾದ ಇನ್‌ಫುಟ್‌ಗಳು ಹೆಣ್ಣು ಮಕ್ಕಳಿಂದ ಸಿಗುತ್ತವೆಂಬ ನಿರೀಕ್ಷೆಯಲ್ಲಿ ಹುಡುಗಿಯರಿಗೆ ಅವಕಾಶ ಕೊಟ್ಟೆ. ನನ್ನ ಚಿತ್ರಕ್ಕೆ ಇವರು ಒಂದು ಶಕ್ತಿ ಥರಾ ಕೆಲಸ ಮಾಡಿದ್ದಾರೆ. ಮುಂದೆ ಕೂಡ ಹೊಸಬರಿಗೆ ಹೀಗೆಯೇ ಜಾಗ ಕಲ್ಪಿಸುತ್ತೇನೆ. ಯಾಕೆಂದರೆ ನಾನೂ ಕೂಡ ಸಿನಿಮಾ ವಿದ್ಯಾರ್ಥಿಯೇ. ಸಿನಿಮಾ ಎಂದರೆ ಎಲ್ಲರನ್ನೂ ಒಳಗೊಳ್ಳುವ ಕಲೆ ಎಂಬುದು ನನ್ನ ನಂಬಿಕೆ.

ಈ ಚಿತ್ರಕ್ಕೆ 'ಒಗ್ಗರಣೆ' ಹೆಸರು ಹೊಳೆದಿದ್ದು ಹೇಗೆ? ಮತ್ತು ಇದೇ ಹೆಸರು ಯಾಕೆ ಬೇಕಿತ್ತು?

ಚಿತ್ರ ಮಾಡಬೇಕು ಎಂದು ನಮ್ಮ ಜಯಂತ್ ಕಾಯ್ಕಿಣಿ ಜೊತೆ ಮಾತನಾಡುತ್ತಿದ್ದಾಗ ಅವರು ಕಥೆ ಕೇಳಿ, 'ಚೆನ್ನಾಗಿದೆ ಒಗ್ಗರಣೆ ಅಂತ ಹೆಸರಿಡಿ' ಅಂದ್ರು. ನಾನು ಆ ಹೆಸರು ಕೇಳಿದಾಕ್ಷಣ ಒಂದು ರುಚಿಕಟ್ಟಾದ ಅಡುಗೆ ನೆನಪಾಯಿತು. ಇದು ಕೇವಲ ಶೀರ್ಷಿಕೆಯಲ್ಲ, ನಮ್ಮ ಭಾವನಾತ್ಮಕ ಸಂಬಂಧಗಳು ಇಲ್ಲಿವೆ. ಆ ಚಿಟಿ ಚಿಟಿ ಶಬ್ದ, ಕರಿಬೇವು ಹಾಕಿದಾಕ್ಷಣ ಹೊರಡುವ ಸುವಾಸನೆ, ಒಂಚೂರು ನಾಲಿಗೆ ಮೇಲೆ ಹಾಕಿಕೊಂಡಾಗ ಸಿಗುವ ರುಚಿ... ಅಬ್ಬಾ ಎಂಥ ವರ್ಣನೆ ಅಲ್ಲವೇ? ಕನ್ನಡಿಗರ ಮಟ್ಟಿಗೆ 'ಒಗ್ಗರಣೆ' ಎಂದಾಕ್ಷಣ ಹತ್ತಾರು ನೆನಪುಗಳು ಬರುತ್ತವೆ.
ನಿಮ್ಮ ನಿರ್ದೇಶನದ ಚಿತ್ರಗಳು ಕಥೆ ವಿಚಾರದಲ್ಲಿ ಪ್ರೇಕ್ಷಕನಿಗೆ ಮೋಸ ಮಾಡಿಲ್ಲ. ಆದರೂ, ಕನ್ನಡದ್ದೇ ಕಥೆ ನಿಮ್ಮ ನಿರ್ದೇಶನದಲ್ಲಿ ಸಿನಿಮಾ ಆಗುವುದು ಎಂದು?
ಪದೇ ಪದೆ ಈ ಪ್ರಶ್ನೆ ನನಗೆ ಎದುರಾಗುತ್ತಿದೆ. ಆ ಭಾಷೆಯ ಕಥೆ, ಈ ಭಾಷೆಯ ಕಥೆ ಎನ್ನುವ ಭೇದವಿಲ್ಲ. ಹೀಗಾಗಿ ರಿಮೇಕು, ಸ್ವಮೇಕು ಎನ್ನುವುದರ ಬಗ್ಗೆಯೂ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಒಳ್ಳೆಯ ವಿಚಾರಗಳು ಯಾವುದೇ ಭಾಷೆಯ, ಯಾವುದೇ ನೆಲದಲ್ಲಿ ಸಿಕ್ಕರೂ ಅವುಗಳನ್ನು ಸ್ವೀಕರಿಸುತ್ತೇನೆ. ನನ್ನ ವಿಚಾರ, ಚಿಂತನೆ, ಅಭಿರುಚಿ, ಕಲಾಸಕ್ತಿ ಒಂದು ನೆಲಕ್ಕೆ ಸೀಮಿತ ಮಾಡಿಕೊಳ್ಳಲಾರೆ. ಈ ವಿಚಾರದಲ್ಲಿ ನಾನು ಜಗತ್ತಿನ ಕೂಸು. ನನ್ನನ್ನ ಹಾಗೆ ಬೆಳೆಯಲಿಕ್ಕೆ ಸ್ವಾತಂತ್ರ್ಯ ಕೊಡಿ. ಗುಜರಾತ್‌ನಲ್ಲಿ ಹುಟ್ಟಿದ ಮಹಾತ್ಮ ಗಾಂಧಿಯನ್ನು ಯಾರೂ ಗುಜರಾತಿ ಎನ್ನುವುದಿಲ್ಲ, ರವೀಂದ್ರನಾಥ್ ಠಾಗೂರ್ ಅವರ 'ಗೀತಾಂಜಲಿ'ಯನ್ನು ಯಾರೂ ಬೆಂಗಾಲಿಯದ್ದು ಎನ್ನಲ್ಲ, ಶೇಕ್ಸ್‌ಪಿಯರ್ ಸಾಹಿತ್ಯ, ನಾಟಕಗಳನ್ನು ಲಂಡನ್‌ಗೆ ಸೀಮಿತ ಮಾಡಿಲ್ಲ. ನನ್ನ ಸಿನಿಮಾ ಜಗತ್ತು ಹಾಗೆ. ನಾನು ಹಾರುವ ಹಕ್ಕಿ. ಹಾಗೊಂದು ವೇಳೆ ನೀವು ಹೇಳುವ ಪ್ರಕಾರ ಮುಂದೆ ಕನ್ನಡದ್ದೇ ಕಥೆ ಮಾಡಿದರೂ ನಾನು ಅದನ್ನು ಕನ್ನಡಕ್ಕೆ ಸೀಮಿತ ಮಾಡಿ ನೋಡಲಾರೆ.

ನಟನಾಗಿ ಎಲ್ಲವನ್ನೂ ಸಾಧಿಸಿದ್ದು ಆಗಿದೆ. ನಿರ್ದೇಶನವನ್ನೂ ಒಂದು ಕೈ ನೋಡೋಣ ಅಂತ ಕ್ಯಾಮೆರಾ ಹಿಂದೆ ಕೂತಿದ್ದಾ?
ಅಯ್ಯೋ ನಟನಾಗಿ ನಾನು ಇನ್ನೂ ಏನೂ ಕಲಿತಿಲ್ಲಪ್ಪ. ಯಾವುದೇ ವಿಚಾರ ಆಗಲಿ ಕಲಿಕೆ ಎನ್ನುವುದು ನಿರಂತರ. ನನ್ನ ಪ್ರಕಾರ ನಟನೆ ಆ ಕ್ಷಣದ ಕೃಷಿ. ನಿರ್ದೇಶನ ನನ್ನ ಪ್ರೀತಿಯ ಕೆಲಸ. ಮನುಷ್ಯ ಹುಟ್ಟಿದ ಮೇಲೆ ಬಾಲ್ಯ, ಯೌವ್ವನ ದಾಟಿ ಗೃಹಸ್ಥನಾಗುತ್ತಾನೆ, ಮುಂದೆ ಅಪ್ಪ, ತಾತನಾಗುತ್ತಾನೆ. ಜೀವನದ ಈ ಪಯಣ ನನ್ನ ವೃತ್ತಿಯಲ್ಲೂ ನೋಡಲು ಹೊರಟಿದ್ದೇನೆ. ಸಣ್ಣ ಪುಟ್ಟ ಪಾತ್ರ ಮಾಡಿದೆ, ನಾಯಕನಾದೆ, ಖಳನಾಯಕನಾದೆ, ನಿರ್ಮಾಪಕನಾದೆ, ಈಗ ನಿರ್ದೇಶಕನಾಗುತ್ತಿದ್ದೇನೆ.

ದಕ್ಷಿಣ ಭಾರತದ ಪ್ರಸಿದ್ಧ ನಟ ಎನ್ನುವ ಕಾರಣಕ್ಕೆ 'ಒಗ್ಗರಣೆ' ಚಿತ್ರ ನೋಡಬೇಕಾ?
ಚಿತ್ರ ನೋಡಿದ ಮೇಲೆ ನೀವು ಯಾವ ಕಿರೀಟ ಕೊಟ್ಟರೂ ಧರಿಸುವೆ. ಆದರೆ, ಒಗ್ಗರಣೆ ಚಿತ್ರವನ್ನು ನಿಮ್ಮ ಮನೆಯ ಕಥೆಯನ್ನು ಹೇಳುವ ಸಿನಿಮಾ ಎನ್ನುವ ಪ್ರೀತಿಯಿಂದ ನೋಡಿ.

ಈ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರ ಬಗ್ಗೆ ಹೇಳಿ?
ಇಲ್ಲಿನ ಪ್ರತಿಯೊಬ್ಬರು ನನ್ನ ಚಿತ್ರದ ಒಂದೊಂದು ಪಿಲ್ಲರ್‌ಗಳೇ. ಅನುಭವಿ ನಟಿಯರಾದ ಸ್ನೇಹಾ, ಊರ್ವಶಿ, ನಿಮ್ಮನ್ನು ಸದಾ ನಗಿಸುವ ಮಂಡ್ಯ ರಮೇಶ್, ಆತ್ಮೀಯತೆಯಿಂದ ಅಪ್ಪಿಕೊಳ್ಳುವ ನಟನೆಯ ಅಚ್ಯುತ್ ಕುಮಾರ್, ಸಂಯುಕ್ತ ಬೆಳವಾಡಿ, ಹರ್ಷ, ನಿಮ್ಮ ಪ್ರಕಾಶ್ ರೈ... ಕಲಾವಿದರ ದೊಡ್ಡ ದಂಡೇ ಇಲ್ಲಿದೆ. ಪ್ರತಿಯೊಬ್ಬರೂ ನಿಮ್ಮವರೇ, ನಿಮ್ಮ ಮನೆಯ ಕಥೆಯ ಪಾತ್ರಧಾರಿಗಳೇ.

ಇಡೀ ಚಿತ್ರದಲ್ಲಿ ನಿಮಗೆ ನೆನಪಾಗುವ ಅಂಥ 5 ಹೈಲೈಟ್ಸ್‌ಗಳು ಯಾವುವು?
ಚಿತ್ರವೇ ನನಗೆ ಟಾಪ್ 1. ಹೀಗಾಗಿ ಅದರಲ್ಲಿ 5 ಅಂಶಗಳನ್ನು ಮಾತ್ರ ಹೆಕ್ಕಿ ತೆಗೆಯಲಾರೆ. ಪ್ರೇಮ, ವಯಸ್ಸಿನಲ್ಲಿ ಕಾಡುವ ಒಂಟಿತನ, ಆ ಕ್ಷಣಕ್ಕೆ ಪ್ರಭಾವಿಸುವ ಹಸಿವು, ಅಳಿಸುವ ಸನ್ನಿವೇಶಗಳು, ನಗಿಸುವ ಘಟನೆಗಳು, ಒಗ್ಗರಣೆಯ ಘಮಲು ಸೂಚಿಸುವ ಅಡುಗೆ ಮನೆ, ಅಲ್ಲಿನ ಸಂಬಂಧಗಳು... ಈ ಎಲ್ಲವನ್ನೂ ಒಳಗೊಂಡಿರುವ ಚಿತ್ರವಿದು.

ಈಗ ಪ್ರೇಕ್ಷಕರು ಭಾಷಾತೀತರಾಗಿರುವುದರಿಂದ ಒಂದೇ ಚಿತ್ರ ಏಕಕಾಲಕ್ಕೆ ಮೂರು ಭಾಷೆಗಳಲ್ಲಿ ಬಂದರೆ ಗಳಿಕೆಯ ದೃಷ್ಟಿಯಿಂದ ಹಿನ್ನಡೆಯಾಗುವುದಿಲ್ಲವೇ?

ಒಂದು ಯೂನಿವರ್ಸೆಲ್ ಕಥೆಯನ್ನು ಏಕಕಾಲಕ್ಕೆ ಮೂರು ಭಾಷೆಗಳಲ್ಲಿ ಕೊಡುತ್ತಿದ್ದೇನೆ ಎನ್ನುವುದೇ ಅದ್ಭುತ ಮತ್ತು ಸಾಹಸ ಪ್ರಯತ್ನ. ಇದೊಂದು ಒಳ್ಳೆಯ ಚಿತ್ರ ಎನ್ನುವ ನಂಬಿಕೆ ನನಗೆ ಇದೆ. ಆದರೆ, ಗಳಿಕೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ನಿಮ್ಮ ಪ್ರಕಾಶ್ ರೈ ಒಂದು ಒಳ್ಳೆಯ ಸಿನಿಮಾ ಮಾಡಿದ್ದಾನೆ ನೋಡಿ ಎನ್ನುವ ಸಣ್ಣ ಮನವಿ ಅಷ್ಟೇ ನನ್ನದು. ಉಳಿದ್ದು ಪ್ರೇಕ್ಷಕರಿಗೆ ಬಿಟ್ಟಿದ್ದು.


-ಆರ್.ಕೇಶವಮೂರ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.