ಆಯಾಮ

ಆಯಾಮ
Updated on: 

ಇದರಾಚೆ ಬದುಕೇ ಇಲ್ಲವೆನ್ನುವಷ್ಟು ಹುಚ್ಚು ಹಿಡಿಸುವಂತೆ ಸುರಿವ ಹಿಮ, ನಾಗರಿಕತೆಯ ಒಂದೂ ಕುರುಹನ್ನು ಉಳಿಸದಂತೆ ಪಣ ತೊಟ್ಟಂತಿತ್ತು. ಸೂರ್ಯನೇ ಕಾಣದ ದಕ್ಷಿಣ ಸೈಬೀರಿಯಾದ ಕಣಿವೆ ಪ್ರಾಂತ್ಯದ ಆ ಹಳ್ಳಿಯಲ್ಲಿ ದಿನವೂ ರಾತ್ರಿ ಅಲ್ಲೊಂದು ಹಿಮಾವೃತಗೊಂಡ ಹಳೆಯ ಮನೆ. ಮನೆಯ ಹಿಂಭಾಗ ಹಸಿರ ಎಂದೋ ಕಳೆದುಕೊಂಡ ಓಕ್ ಹಾಗೂ ಪೈನ್ ಮರಗಳ ದಂಡು. ವಿದ್ಯುತ್ ಇಲ್ಲದ ಆ ಮನೆಯಲ್ಲಿ ಅಗ್ಗಿಷ್ಟಿಕೆ ಧಗ ಧಗನೆ ಉರಿಯುತಿತ್ತು, ಮನೆ ತುಂಬಾ ಕೆಂಡದ ಬೆಳಕು. ಕೆಂಡದ ಬೆಳಕಿನಲ್ಲಿ ಕಾಣುತಿದ್ದ ತೆರೆದ ಕಪಾಟಿನೊಳಗೆ ಒಪ್ಪವಾಗಿ ಜೋಡಿಸಿಟ್ಟ ಲಿಯೋ ಟಾಲ್‌ಸ್ಟಾಯ್, ಮಾರ್ಕ್ಸ್, ಲೆನಿನ್ನನ ಕೆಲವು ಪುಸ್ತಕಗಳು ಹಾಗೂ ನಾಲ್ಕೈದು ಸಾಲುಗಳಲ್ಲಿದ್ದ ಐನ್‌ಸ್ಟೈನ್, ನೀಲ್ ಬೋರ್, ಡಾವಿಂಚಿ ಇನ್ನೂ ಹೆಸರಾಂತ ವಿಜ್ಞಾನಿಗಳ ಸಂಶೋಧನಾ ಗ್ರಂಥಗಳು ಮತ್ತು ಫಿಸಿಕ್ಸ್ ಪಠ್ಯಪುಸ್ತಕಗಳು ಮನೆಯಾತ ಪ್ರೊಫೆಸರ್ ಇದ್ದಿರಬಹುದೇನೋ ಎಂದು ಅನುಮಾನ ಮೂಡಿಸುವಂತಿದ್ದವು. ಅಗ್ಗಿಷ್ಟಿಕೆಯ ಮುಂದೆ ಆರಾಮ ಕುರ್ಚಿಯಲ್ಲಿ ಮನೆಯಾತ ಬೆಚ್ಚಗೆ ಪ್ರಜ್ಞೆ ಇಲ್ಲದೆ ಒರಗಿದ್ದ. ಕುರ್ಚಿಯ ಕಾಲ ಬಳಿ ಅರ್ಧ ಖಾಲಿಯಾದ ವೋಡ್ಕ ಗ್ಲಾಸು ಅದಕ್ಕೆ ಕಾರಣ ಹೇಳುತಿತ್ತು. ಅವನ ತೊಡೆಯ ಮೇಲೆ ತಾನೇ ಬರೆದ ಅಂತರಿಕ್ಷ ಯಾನದ ಬಗೆಗಿನ ಪುಸ್ತಕ ಮುಚ್ಚಿತ್ತು. ಅಮಲುಗಣ್ಣಲಿ ಪುಸ್ತಕದ ಮೇಲೆ ಕಣ್ಣು ಹಾಯಿಸಿದಾತನಿಗೆ ಕನ್ನಡಕ ಧರಿಸಿದ್ದರೂ ಏನೊಂದೂ ಕಾಣಲಿಲ್ಲ, ಅವನಿಗೆ ಗುರುತಿಸಲು ಸಾಧ್ಯವಾಗಿದ್ದು ಪುಸ್ತಕದ ಕೆಳಭಾಗಲ್ಲಿದ್ದ ತನ್ನದೇ ಸಹಿ ಮಾತ್ರ, 'ಮಿಖಾಯಿಲ್‌' ಎಂದರುಹಿದ ಆತ ಮತ್ತೆ ಏಳುವಂತೆ ಕಾಣಲಿಲ್ಲ. ಮನೆಯೊಳಗಿಂದ ಹೆಂಗಸೊಬ್ಬಳು ನಡೆದು ಬಂದಳು. ಮಿಖಾಯಿಲ್ಲನ ಕೈಯಿಂದ ಜಾರಿ ಬೀಳುವುದರಲ್ಲಿದ್ದ ಪುಸ್ತಕವನ್ನೂ, ಆತನ ಕನ್ನಡಕವನ್ನೂ ಪಕ್ಕಕ್ಕೆ ತೆಗೆದಿರಿಸಿ ಕಾಲ ಬಳಿಯಿದ್ದ ವೋಡ್ಕ ಗ್ಲಾಸನ್ನು ಕೈಗೆತ್ತಿಕೊಂಡು ಒಂದು ನಿಮಿಷ ಅವನನ್ನೇ ದಿಟ್ಟಿಸಿದಳು ಆಕೆ. ಕೊಂಚ ವಯಸ್ಸಾದಂತೆ ಕಂಡರೂ, ಕೆಂಡದ ಬೆಳಕಿನಲ್ಲಿ ಆಕೆಯ ಸೌಂದರ್ಯ ದೇದೀಪ್ಯಮಾನವಾಗಿ ಸುಡುತ್ತಿತ್ತು. ಅವಳು ಓಲ್ಗಾ. ಓಲ್ಗಾಳ ಕಣ್ಣಲಿ ಮಿಖಾಯಿಲನ ಬಗೆಗಿನ ಉತ್ಕಟ ಪ್ರೇಮ ನೀರಾಗಿ ತುಂಬಿದ್ದವು. ಅವಳು ತನ್ನ ಮೃದುವಾದ ಕೈಗಳನ್ನು ಅವನ ಮುದಿ ಒರಟುಗೆನ್ನೆಗಳ ಮೇಲೆ ನಿಧಾನಕೆ ಆಡಿಸುತ್ತಿದ್ದಂತೆ ಅವನು ಅವಳ ಕೈಗಳನ್ನು ನೂಕಿ ನಿದ್ದೆಯ ಅಮಲಿನಲ್ಲಿ ಏನೋ ಬೈದನು. ಓಲ್ಗಾ ನಿರ್ಭಾವುಕಳಾಗಿ ಅವನಿಗೆ ಚಾದರ ಹೊದೆಸಿ ಅವನಿಗಾಗಿ ಕನಿಕರಿಸುತ್ತ ಕತ್ತಲಲ್ಲಿ ಮರೆಯಾದಳು. ಓಲ್ಗಾ ಡ್ರಾಯಿಂಗ್ ರೂಮಿನ ಕತ್ತಲೆಯಲ್ಲಿ ಸೋಫಾದ ಮೇಲೆ ನಿದ್ರಿಸಲೆತ್ನಿಸಿದಳು. ಮಿಖಾಯಿಲನನ್ನು ಸಂಧಿಸುವ ಮೊದಲು ತಾನು ಇತರ ಹುಡುಗರೊಂದಿಗೆ ಸುತ್ತಾಡುತ್ತಿದ್ದುದು, ನಂತರ ಮಿಖಾಯಿಲನ ಪ್ರೀತಿಯಲ್ಲಿ ಬಿದ್ದುದು, ತನ್ನ ನಡತೆ ಸರಿಯಿಲ್ಲವೆಂದೂ ತನ್ನ ಬಿಡೆಂದೂ ಹೆತ್ತವರು ಎಷ್ಟು ಹೇಳಿದರೂ ಕೇಳದೆ ಮಿಖಾಯಿಲ ಅವರ ವಿರೋಧದ ನಡುವೆಯೂ ತನ್ನನ್ನು ವರಿಸಿದ್ದು, ಆನಂತರ ತಾನು ಮಿಖಾಯಿಲನೊಂದಿಗೆ ಕಳೆದ ಆ ಸಾರ್ಥಕ ಇಪ್ಪತ್ತು ವರುಷಗಳು, ಇವೆಲ್ಲವೂ ಒಂದು ಕ್ಷಣದಂತೆ ಭಾಸವಾಯಿತು ಓಲ್ಗಾಳಿಗೆ. ದೇವರು ಮಿಖಾಯಿಲನ ಪ್ರೀತಿ ಜೀವನಪೂರ್ತಿ ಸಿಗಲಾರದೆಂದೇ ಅಷ್ಟೂ ಪ್ರೀತಿಯನ್ನು ಆ ಇಪ್ಪತ್ತು ವರುಷಗಳಲ್ಲಿ ತುಂಬಿದನೇನೋ ಎಂದು ನಿಟ್ಟುಸಿರಿಟ್ಟಳು ಓಲ್ಗಾ. ಏನೋ ಸದ್ದಾದಂತಾಗಿ ಆಕೆ ಕಣ್ತೆರೆದಳು. ಮಿಖಾಯಿಲ ಎಂದಿನಂತೆ ಎದ್ದಿರುವನೆಂದು ಅವನ ಜೊತೆಗಿರಲು ಹೊರಟಳಾಕೆ. ಮಿಖಾಯಿಲ ತನ್ನ ಹಳೆಯ ಸಂಶೋಧನೆಯೊಂದಕ್ಕೆ ಸಂಬಂಧಿಸಿದ ಗ್ರಂಥಗಳು, ನಕ್ಷತ್ರ ಆಕಾಶಕಾಯಗಳ ಪಥದ ನಕ್ಷೆಗಳು, ವಾಹನವೊಂದರ ನೀಲನಕ್ಷೆ, ತನ್ನ ರಿಸರ್ಚ್ ಪೇಪರ್ ಎಲ್ಲವನ್ನೂ ನೆಲದಲ್ಲಿ ಹರವಿ ಕುಳಿತು ಅಸಂಬದ್ಧವಾಗಿ ಒದರುತ್ತಿದ್ದ. ಓಲ್ಗಾಳನ್ನು ಕಂಡು 'ನೋಡು, ಇವಾನ್ ಬಂದಿದ್ದಾನೆ' ಎಂದು ಖಾಲಿ ಕುರ್ಚಿಯತ್ತ ಕೈ ತೋರಿದ. ಓಲ್ಗಾ ಹ್ಹೂಂಗುಟ್ಟಿ ಇನ್ನೊಂದು ಕುರ್ಚಿಯಲ್ಲಿ ಕುಳಿತಳು. ಮಿಖಾಯಿಲ ತನ್ನ ಅಸಂಬದ್ಧ ಒದರುವಿಕೆಯ ಮುಂದುವರಿಸಿದ 'ಇವಾನ್, ನಾನು ಮಾಡುವುದು ಬಹಳಷ್ಟಿದೆ. ಮೊದಲು ನನ್ನ ಕಾಲಯಂತ್ರವನ್ನು ಸರಿಪಡಿಸಬೇಕು. ಹೌದು ನೀನು ಹೇಳಿದ್ದು ಸರಿಯಿರಬಹುದು, ವಿದ್ಯುತ್ಕಾಂತೀಯ ಕ್ಷೇತ್ರದ ಅನುಪಾತವನ್ನೊಮ್ಮೆ ಬದಲಾಯಿಸಿ ನೋಡಬೇಕು'. ಇತ್ತ ಓಲ್ಗಾ ಕುರ್ಚಿಯ ಮೇಲೆ ಮತ್ತೆ ನಿದ್ರಿಸಲೆತ್ನಿಸಿದಳು. ಮಿಖಾಯಿಲನಿಗೆ ಸ್ಕಿಜೋಫ್ರೇನಿಯ ಖಾಯಿಲೆ ಇದೆ ಎಂದು ತಿಳಿದಾಗ ತಾನ್ಯಾಕೆ ಅವನನ್ನು ಬಿಟ್ಟು ಹೋಗಲಿಲ್ಲ ಎಂಬ ಪ್ರಶ್ನೆ ಅವಳ ಮನದಲಿ ಸುಳಿದಾಡಿತು. ಆ ಕ್ಷಣ ತಾನು ಪ್ರೀತಿಸಿದ ಮಿಖಾಯಿಲನ ಹಳೆಯ ಮುದ್ದು ಮುಖ ಅವಳ ಕಣ್ಣಲಿ ಮೂಡಿ ನೀರಾಡಿತು. ಅದೆಷ್ಟು ಪ್ರೀತಿಸುತ್ತಿದ್ದ ನನ್ನನ್ನು. ತಾನು ಬೇರೆ ಹುಡುಗರೊಂದಿಗೆ ಸಲುಗೆಯಿಂದಿದ್ದಾಗಲೂ ಪ್ರೀತಿಸುತ್ತಿದ್ದ. ನನ್ನಂಥವಳನ್ನು ಆ ಪರಿಯಾಗಿ ಯಾರಾದರೂ ಪ್ರೀತಿಸಲು ಹೇಗೆ ಸಾಧ್ಯ? ಖಾಯಿಲೆ ಇಲ್ಲದಿರುತ್ತಿದ್ದರೆ ಈಗಿನ ನನ್ನನ್ನು ಅವನು ಅಷ್ಟೇ ಪ್ರೀತಿಸುತ್ತಿದ್ದನೇ? 'ನನಗೆಲ್ಲಾ ಗೊತ್ತು, ನನ್ನ ತಲೆಯೊಳಗಿನ ದನಿಗಳು ಹೇಳುತ್ತವೆ, ನೀನು ಸರಿಯಿಲ್ಲವಂತೆ' ಮಿಖಾಯಿಲ ಅರಚಿದ. ಓಲ್ಗಾ ತನ್ನ ಯೋಚನಾಲಹರಿಯಿಂದ ಹೊರಬಂದಳು. ಅವಳಿಗೆ ಇದೇನು ಹೊಸದಲ್ಲವಾದ್ದರಿಂದ ಬಳಿ ಬಂದು ಸಂಯಮದಿಂದ ಅವನ ಭುಜ ಹಿಡಿದು ಸಮಾಧಾನಿಸತೊಡಗಿದಳು. ಇಡೀ ಹಳ್ಳಿಯೇ ಅವಳನ್ನು ನಡತೆಗೆಟ್ಟವಳೆಂದು ದೂಷಿಸಿದಾಗಲೂ ಆಕೆ ತಲೆಕೆಡಿಸಿಕೊಂಡಿರಲಿಲ್ಲ. ಹಳ್ಳಿಯಲ್ಲಿ ಅವಳ ಬಗೆಗಿನ ಗಾಳಿಸುದ್ದಿಗಳು ಮಾತ್ರ ಆಗಿಂದಾಗ್ಗೆ ಹರಿದಾಡುತ್ತಿದ್ದವು. ಅವಳ ಮನೆಗೆ ಯುವಕನೊಬ್ಬ ಅಪರರಾತ್ರಿಯಲ್ಲಿ ಬರುವನೆಂದೂ, ಒಬ್ಬ ಅವನನ್ನು ನೋಡಿದನೆಂದೂ ಇವೇ ಕತೆಗಳು ಹಳ್ಳಿಗರ ನಾಲಗೆಯಲ್ಲಿ ವಿವಿಧ ರೂಪಗಳ ಪಡೆಯುತ್ತಿದ್ದವು. ಕೆಲವರು ಪಾಪ, ಗಂಡನ ಸುಖದಿಂದ ವಂಚಿತಳಾದ ಆಕೆ ಇನ್ನೇನು ತಾನೆ ಮಾಡುತ್ತಾಳೆ ಎಂಬ ಕುಹಕದ ಅನುಕಂಪ ಬೇರೆ. ಮಿಖಾಯಿಲ ನೆಲದಲ್ಲೇ ಮಲಗಿದ. ಯಾರೋ ಮನೆಯ ಹಿಂದಿನ ಬಾಗಿಲು ತಟ್ಟಿದಂತಾಯಿತು. ಓಲ್ಗಾ ಎದ್ದು ಬಾಗಿಲು ತೆರೆದು, ಬಂದಿದ್ದ ಯುವಕನನ್ನು ತನ್ನ ಕೋಣೆಗೆ ಕರೆದೊಯ್ದಳು. ನೆಲದಲ್ಲಿ ಬಿದ್ದಿದ್ದ ಕಾಲಯಂತ್ರದ ನೀಲನಕ್ಷೆಯ ಕಂಡು ವಿಷಾದದ ನಗೆ ನಕ್ಕ ಯುವಕ ಓಲ್ಗಾಳೊಂದಿಗೆ ಒಳನಡೆದನು. ಅವಳು ಅವನ ಮುದ್ದು ಮುಖವನ್ನೇ ದಿಟ್ಟಿಸುತ್ತಿರಲು, ಅವಳ ಕೆನ್ನೆಗಳನ್ನು ತನ್ನೆರಡೂ ಕೈಗಳಿಂದ ಬಾಚಿ ಹಿಡಿದ ಇಪ್ಪತ್ತೇಳು ವರುಷದ ತರುಣ ಮಿಖಾಯಿಲನೆಂದ ಆರ್ದ್ರನಾಗಿ 'ನನ್ನನ್ನು ಎಷ್ಟು ಸಹಿಸಿಕೊಂಡಿದ್ದೀ ನೀನು!'

-ಹರ್ಷ ಮೂರ್ತಿ
harsh.9mile@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com