ಕಪ್ಪು ಚುಕ್ಕಿಗಳು

ಚಿತ್ರ: ಎ ಡ್ರೈ ವೈಟ್ ಸೀಸನ್ (1989)
ಭಾಷೆ: ಇಂಗ್ಲಿಷ್ (ಸೌಥ್ ಆಫ್ರಿಕ)
ನಿರ್ದೇಶನ: ಯೂಝನ್ ಪಾಲ್ಸಿ
ಅವಧಿ: 97 ನಿಮಿಷ
ತಾರಾಗಣ: ಡೊನಾಲ್ಡ್ ಸದರಲೆಂಡ್, ಜೆನೆಟ್ ಸುಝ್ಮನ್, ರ್ಜುರ್ಗೆನ್ ಪ್ರಾಕ್ನೊ, ಝೇಕ್ಸ್ ಮೊಕೆ, ಮರ್ಲಾನ್ ಬ್ರಾಂಡೊ.
ದೃಶ್ಯ ಒಂದು...
ನೀವು ಹೀಗೆ ಕುಡಿದು ತೂರಾಡಿಕೊಂಡಿರ್ರಿ. ನಿಮ್ಮ ಮಕ್ಕಳ ಭವಿಷ್ಯವನ್ನು ನೀವೇ ಕೊಲ್ಲುತ್ತಿದ್ದೀರಿ. ಈಗಲಾದರೂ ಎಚ್ಚರಕೊಳ್ಳಿ... ಬಾರ್ವೊಂದರಲ್ಲಿ ನಿಂತು ಯುವಕನೊಬ್ಬ ಹೀಗೆ ಅಬ್ಬರಿಸುತ್ತಾನೆ. ಅರ್ಧ ಜೀವನ ಮುಗಿಸಿ ಪರಾವಲಂಬಿಗಳಾಗಿ ಬದುಕುತ್ತಿರುವವರು ಆ ಯುವಕನ ಸ್ವಾಭಿಮಾನದ ಮಾತುಗಳಿಗೆ ರೋಮಾಂಚನಗೊಳ್ಳುವುದಿಲ್ಲ. ತಮ್ಮ ನೆಲೆ ಯಾರ ಕೈಯಲ್ಲಿದೆ? ಎಂದು ಯೋಚಿಸಲ್ಲ. ಬದಲಾಗಿ ಅವನಿಗೆ ಬುದ್ಧಿ ಹೇಳಿ ಬಾರ್ನಿಂದ ಹೊರ ದಬ್ಬುತ್ತಾರೆ.
ದೃಶ್ಯ ಎರಡು...
ಶಾಲೆಯ ಯೂನಿಫಾರಂ ಧರಿಸಿರುವ ಹುಡುಗ ಆತ. ಪ್ರಾಯಕ್ಕೆ ಎರಡು ಹೆಜ್ಜೆ ದೂರದಲ್ಲಿದ್ದಾನೆ. ಅವನ ಸುತ್ತಲೂ ಮಕ್ಕಳು ನೂರಾರು ಸಂಖ್ಯೆಯಲ್ಲಿ ನೆರೆದಿದ್ದಾರೆ. 'ನಮಗೆ ಸ್ವಾತಂತ್ರ್ಯ, ಪ್ರಜಾಪ್ರಭುತ್ವದ ಆಡಳಿತ ಬೇಕು. ಮುಖ್ಯವಾಗಿ ನಮ್ಮೂರಿನಲ್ಲಿ ನಮ್ಮದೇ ಶಾಲೆಗಳಲ್ಲಿ ನಮ್ಮದೇ ಭಾಷೆಯನ್ನು ಕಲಿಯಬೇಕು. ಬನ್ನಿ ನಮ್ಮ ಹಕ್ಕುಗಳಿಗಾಗಿ ಹೋರಾಡೋಣ. ನೆನಪಿನಡಿ, ಇದು ಯಾರನ್ನೂ ಹಿಂಸಿಸುವ ಹೋರಾಟವಲ್ಲ. ಶಾಂತಿಯುತವಾಗಿ ನಡೆಸುವ ಮೆರವಣಿಗೆ' ಎಂದು ಏರು ದನಿಯಲ್ಲಿ ಭಾಷಣ ಮಾಡುತ್ತಾನೆ ಆ ಹುಡುಗ. ಸುತ್ತಲೂ ನೆರೆದ ಮಕ್ಕಳು ಹಲ್ಲು ಕಡಿಯುತ್ತಾರೆ. ಅವನ ಮಾತುಗಳಿಂದ ರೋಮಾಂಚನಗೊಳ್ಳುತ್ತಾರೆ. ಯಾಕೆಂದರೆ ನಿರ್ಲಿಪ್ತವಾಗಿರಲು ಅವರೇನು ವಯಸ್ಸು ಮುಗಿದು ಮುಪ್ಪಿನಂಚಿನಲ್ಲಿರುವವರಲ್ಲ. ಭವಿಷ್ಯದ ಕನಸುಗಳನ್ನು ಅಂಗೈಯಲ್ಲಿಟ್ಟುಕೊಂಡು ಬದುಕಿನ ಕಷ್ಟಗಳನ್ನು ಬೆನ್ನಿಗೆ ಕಟ್ಟಿಕೊಂಡ ಪುಟ್ಟ ಮಕ್ಕಳು. ಪ್ರಾಯದ ಹುಡುಗ, ಹುಡುಗಿಯರು.
ದೃಶ್ಯ ಮೂರು...
ನೆತ್ತಿ ಸುಡು ಬಿಸಿಲಿನ ಧಗೆಯಿಂದ ಬೆಂಕಿಯಂತಾಗಿರುವ ಹಳ್ಳಿಯ ವಾತಾವರಣ. ಪಾಳು ಬಿದ್ದು ಗೂಡುಗಳನ್ನು ನೆನಪಿಸುವ ಮನೆಗಳು. 'ನಮಗೆ ನಮ್ಮದೇ ಭಾಷೆಯಲ್ಲಿ ಶಿಕ್ಷಣ ಕಲಿಯುವ ಹಕ್ಕು ಕೊಡಿ' ಎಂದು ಘೋಷಣೆ ಹಾಕುತ್ತ ಆ ಹಳ್ಳಿಯ ನಾಲ್ಕು ದಿಕ್ಕುಗಳಿಂದ ಇರುವೆಯ ದಂಡಿನಂತೆ ಶಾಲಾ ಮಕ್ಕಳು ಮೆರವಣಿಗೆ ಹೊರಟಿದ್ದಾರೆ. ತಮ್ಮದೇ ಭಾಷೆಯಲ್ಲಿ ಹಾಡೊಂದನ್ನು ಹಾಡುತ್ತ ನಿಂತ ಮಕ್ಕಳ ಮೇಲೆ ಶಸ್ತ್ರಸಜ್ಜಿತ ಪೊಲೀಸರು ಮೊದಲು ಟಿಯರ್ ಗ್ಯಾಸ್ ಸಿಡಿಸುತ್ತಾರೆ. ಗಾಬರಿಗೊಂಡು ಓಡುವ ಮಕ್ಕಳ ಮೇಲೆ ಗುಂಡಿನ ದಾಳಿ ನಡೆಯುತ್ತದೆ. ಪೊಲೀಸರ ಬಂದೂಕುಗಳು ಓಡುತ್ತಿರುವ ಮಕ್ಕಳನ್ನು ಬೆನ್ನಟ್ಟಿಸಿಕೊಂಡು ಬರುತ್ತವೆ. ಮನೆಗಳಲ್ಲಿ ಅವಿತುಕೊಂಡರೂ ಬಿಡದೆ ಶೂಟ್ ಮಾಡುತ್ತಾರೆ. ಹಳ್ಳಿಯಲ್ಲಿ ಸ್ಮಶಾನ ಮೌನ. 100ಕ್ಕೂ ಹೆಚ್ಚು ಮಕ್ಕಳು ಪೊಲೀಸರ ಗುಂಡಿಗೆ ಬಲಿ. ಬದುಕುಳಿದವರ ಬಂಧನ. ಅಲ್ಲಿಯವರೆಗೂ ಧಗಧನೆ ಉರಿಯುತ್ತಿರುವ ಇಡೀ ಹಳ್ಳಿ, ಮಕ್ಕಳ ರಕ್ತದಿಂದ ತಣ್ಣಗಾಗುತ್ತದೆ.
ಇದು 'ಎ ಡ್ರೈ ವೈಟ್ ಸೀಸನ್' ಚಿತ್ರದ ಆರಂಭದ ಒಂದಿಷ್ಟು ದೃಶ್ಯಗಳು. ಸೌಥ್ ಆಫ್ರಿಕದ ಪುಟ್ಟ ಹಳ್ಳಿಯಲ್ಲಿ ನಡೆಯುವ ಕಥೆಯಾದರೂ ಅಲ್ಲಿನ ಸುತ್ತಮುತ್ತಲ ಹಳ್ಳಿಗಳ ಒಟ್ಟು ಸ್ಥಿತಿ ಇದು. ಯಾರೋ ದಾನ ಮಾಡುವ ಹಣದಲ್ಲಿ ಇಂಗ್ಲಿಷ್ ಎನ್ನುವ ಪರಭಾಷೆ ಕಲಿಯುವ ಅಗತ್ಯವಿಲ್ಲ. ನಮ್ಮದೇ ಆಫ್ರಿಕನ್ ಭಾಷೆಯನ್ನು ನಮ್ಮ ಶಾಲೆಗಳಲ್ಲಿ ಕಲಿಯುವ ಹಕ್ಕು ಇಲ್ಲವೇ? ಎನ್ನುವ ಮಕ್ಕಳ ದನಿಯೇ ಚಿತ್ರದ ಕಥೆಯ ವಸ್ತು. ಆದರೆ ಹಾಗೆ ದನಿ ಎತ್ತಿದ ಮಕ್ಕಳ ಸಾವು, ಬ್ರಿಟಿಷ್ ಶಿಕ್ಷಕನ ಮನೆಯಲ್ಲಿ ಕೆಲಸ ಮಾಡುವ ಕಾರ್ಮಿಕ ಮಗನ ನಿಗೂಢ ಸಾವು, ಹಳ್ಳಿಗಳಲ್ಲಿ ಪೊಲೀಸರ ಅಟ್ಟಹಾಸ... ಹೀಗೆ ಚಿತ್ರ ಹತ್ತಾರು ತಿರುವುಗಳಲ್ಲಿ ಸಂಚರಿಸುತ್ತದೆ. 1976ರಲ್ಲಿ ಸೌಥ್ ಆಫ್ರಿಕದ ಸೊವೆಟೋ ಸಿಟಿಯಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ 176 ವಿದ್ಯಾರ್ಥಿಗಳು ಸತ್ತು 700ಕ್ಕೂ ಹೆಚ್ಚು ಮಕ್ಕಳು ತೀವ್ರ ಗಾಯಗೊಂಡರು. ಈ ಕ್ರೌರ್ಯವನ್ನುಆಧರಿಸಿದ ನೈಜ ಚಿತ್ರವಿದು. ಇದೇ ಘಟನೆ ಕುರಿತು ಕಾದಂಬರಿಯನ್ನು ಬರೆಯಲಾಗಿದ್ದು, ಅದು ನಂತರ ಸಿನಿಮಾ ರೂಪ ಪಡೆದುಕೊಂಡಿದೆ.
ಸಾರ್ವಜನಿಕ ರಜೆ ದಿನ ನಡೆದ ಈ ಘಟನೆ ಆಗ ದಕ್ಷಿಣ ಆಫ್ರಿಕದ ಬುಡಕಟ್ಟು ಜನರ ನಡುವೆ ಸಂಚಲನ ಮೂಡಿಸಿತು. ಇಂಥ ಪೈಶಾಚಿಕ ಕೃತ್ಯವನ್ನು ತೆರೆ ಮೇಲೆ ತಂದ ದಿಟ್ಟ ನಿರ್ದೇಶಕಿ ಯೂಝನ್ ಪಾಲ್ಸಿ. ವಿಶೇಷ ಎಂದರೆ ಈ ಚಿತ್ರದ ನಿರ್ದೇಶಕಿಗೆ, ಮಜೂರ್ ಹಾಲಿವುಡ್ ಸ್ಟುಡಿಯೋದಲ್ಲಿ ಚಿತ್ರವೊಂದನ್ನು ನಿರ್ದೇಶಿಸಿ, ನಿರ್ಮಿಸಿದ ಮೊದಲ ಕಪ್ಪು ಮಹಿಳೆ ಎಂಬ ಹೆಗ್ಗಳಿಕೆ ಕಾರಣವಾಗಿಸಿದ ಚಿತ್ರವಿದು. ದಿ ಫ್ರಾನ್ಸ್ ಆಕಾಡೆಮಿ ಪ್ರಶಸ್ತಿಗೂ ಪಾತ್ರರಾಗಿರುವ ಯೂಝನ್ ಪಾಲ್ಸಿ, ಸಾಕಷ್ಟು ಟಿವಿ ಧಾರಾವಾಹಿ ಹಾಗೂ ಸಾಕ್ಷ್ಯಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಫ್ರೆಂಚ್ ಸಾಹಿತ್ಯದಲ್ಲಿ ಪದವಿ ಮಾಡಿಕೊಂಡು ಸಿನಿಮಾ ಭಾಷೆ ಕಲಿಯಲು ಈಕೆಗೆ ಸ್ಫೂರ್ತಿಯಾಗಿದ್ದು ಹಿಚ್ಕಾಕ್, ಫ್ರಿಥಿಝ್ ಲಾಂಗ್ ಬೆಳ್ಳಿ ವೆಲ್ಡರ್ ಅವರ ಚಿತ್ರಗಳು. ಕಿರುಚಿತ್ರ, ಸಾಕ್ಷ್ಯಚಿತ್ರ ಹಾಗೂ ಟಿವಿ ಸಿನಿಮಾ ಸೇರಿದಂತೆ ಒಟ್ಟು ಹನ್ನೊಂದು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಆಫ್ರಿಕದ ಕಪ್ಪು ಜನರ ಕಣ್ಣೀರ ಕಥೆಯನ್ನು ಹಾಲಿವುಡ್ ಸ್ಟುಡಿಯೋದಲ್ಲಿ ನಿಂತು ಹೇಳುವ 'ಎ ಡ್ರೈ ವೈಟ್ ಸೀಸನ್' ಚಿತ್ರಕ್ಕೆ ನಿಜವಾದ ತಿರುವು ಸಿಗುವುದು ಬ್ರಿಟಿಷ್ ಶಿಕ್ಷಕನಿಂದ. ತಮ್ಮ ಮನೆಯಲ್ಲಿ ಕೂಲಿ ಮಾಡುವ ವ್ಯಕ್ತಿಯ ಮಗ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸತ್ತಿದ್ದಾನೋ, ಬದುಕಿದ್ದಾನೋ ತಿಳಿಯದೆ ಒದ್ದಾಡುವ ಕಪ್ಪು ಕುಟುಂಬಕ್ಕೆ ಈ ಶಿಕ್ಷಕ ನೆರವಾಗಲು ಹೊರಡುತ್ತಾನೆ. ಮಾನವ ಹಕ್ಕುಗಳಿಗೆ, ಪತ್ರಿಕಾ ಸ್ವಾತಂತ್ರ್ಯಕ್ಕೂ ಅವಕಾಶವಿಲ್ಲದ ಆ ದಿನಗಳಲ್ಲಿ ಪೊಲೀಸರ ಕ್ರೌರ್ಯದ ವಿರುದ್ಧ ತಣ್ಣಗೆ ತಿರುಗಿ ನಿಲ್ಲುವ ಶಿಕ್ಷಕ, ತನ್ನ ಮಗನ ಸಾವಿಗೆ ಕಾರಣವಾದವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಹೊರಡುವ ಹಳ್ಳಿಯ ಕುಟುಂಬದ ಸುತ್ತ ಚಿತ್ರ ಸಾಗುತ್ತದೆ. ಒಂದು ವ್ಯವಸ್ಥೆಯೇ ಮುಂದೆ ನಿಂತು ಸಾವಿನ ಬೇಟೆಯಾಡಿದರೆ ಹೇಗಿರುತ್ತದೆ? ಎನ್ನುವವರು ಒಮ್ಮೆ ಈ ಚಿತ್ರ ನೋಡಬೇಕು. ನೈಜ ಘಟನೆಯನ್ನು ಇಲ್ಲಿ ಅಷ್ಟೇ ಸಹಜವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕಿ. ಪೊಲೀಸ್ ವ್ಯವಸ್ಥೆಯ ಈ ಸಾವಿನ ಬೇಟೆ ಎಲ್ಲ ದೇಶಗಳಲ್ಲೂ ಕಾಣುತ್ತವೆ. ಹೀಗಾಗಿ ಚಿತ್ರ ನೋಡುವಾಗ ನಮ್ಮ ನೆಲದ ಯಾವುದಾದರೂ ಘಟನೆ ನೆನಪಾದರೂ ಅಚ್ಚರಿ ಇಲ್ಲ.
-ಆರ್. ಕೇಶವಮೂರ್ತಿ
keshavarkm1@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


