

ಶಂಕರನ ಮುಖಕ್ಕೆ ಮಂಕು ಬಡಿದಿತ್ತು. ಬಾಳು ನೀರಸವಾಗಿತ್ತು. ಮೂರು ದಿನದಿಂದ ಅವನ ಹೃದಯದರಸಿ ರಾಧೆ ಕಾಲೇಜಿಗೆ ಬಂದಿರಲಿಲ್ಲ. ಅವಳಿದ್ದ ಎರಡನೆಯ ಬಿ.ಎ. ತರಗತಿಗೆ ಹೋಗುವುದೆಂದರೆ, ಅಲ್ಲಿ ತನ್ನ ಪಾಂಡಿತ್ಯವನ್ನೆಲ್ಲ ಮೆರೆದು, ಇಂಗ್ಲಿಷ್ ಸಾಹಿತ್ಯ ಕಲಿಸುವುದೆಂದರೆ ಶಂಕರನ ಮನಸ್ಸು ಗರಿ ಬಿಚ್ಚಿ ಕುಣಿಯುವ ನವಿಲಾಗುತ್ತಿತ್ತು. ಆದರೆ ಮೂರು ದಿನದಿಂದ ಅವಳಿಲ್ಲದ ಆ ತರಗತಿ ಸ್ಮಶಾನ ಸದೃಶವಾಗಿ, ಅಲ್ಲಿ ಶಂಕರ ನರಿಯಂತೆ ಊಳಿಟ್ಟು ಬಂದಿದ್ದ.
ಮೂರು ದಿನದಿಂದ ನಿರೀಕ್ಷೆ, ಭರವಸೆ, ನಿರಾಸೆಗಳಿಂದ ಅವನ ಹೃದಯ ಬೆಂದುಹೋಗಿತ್ತು. ರಾಧೆಯ ಗೈರುಹಾಜರಿಗೆ ಕಾರಣ ಯಾರನ್ನು ಕೇಳುವುದು? ಅವಳ ಮನೆಗೆ ಹೋಗಿ ವಿಚಾರಿಸಲು ಸಾಧ್ಯವೆ? ಅವಳ ತಂದೆ ಗಜೇಂದ್ರ ವಿಲಾಸ- ಉಡುಪಿ ಬ್ರಾಹ್ಮಣರ ಉಪಾಹಾರ ಮಂದಿರದ ಮಾಲೀಕ ಶ್ರೀನಿವಾಸ ಹೆಬ್ಬಾರರನ್ನು ಕೇಳಲು ಸಾಧ್ಯವೇ? ಶಂಕರ ಅವಿವಾಹಿತ ತರುಣನಾದರೂ ಖಾಸಗಿ ಕಾಲೇಜೊಂದರ ಸಂಭಾವಿತ ಇಂಗ್ಲಿಷ್ ಉಪನ್ಯಾಸಕ. ಸದಾ ಸದ್ವರ್ತನೆಯ ತಂತಿಯ ಮೇಲೆ ದೊಂಬರಾಟದವನಂತೆ ಜೋಲಿ ತಪ್ಪದೆ ಜಾಗರೂಕನಾಗಿ ನಡೆಯಬೇಕಾದ್ದು ಅವನಿಗೆ ಅನಿವಾರ್ಯವಲ್ಲವೆ? ಪಾಪ, ಶಂಕರ ವಿಹ್ವಲನಾಗಿದ್ದ.
ಮೂರು ದಿನದಿಂದ ಗಜೇಂದ್ರ ವಿಲಾಸದ ಮುಂದೆ ಹಲವು ಬಾರಿ ಠಳಾಯಿಸಿದ್ದ, ಹೆಬ್ಬಾರರ ದರ್ಶನವೇನಾದರೂ ಆದೀತೋ ಎಂದು. ಆದರೆ ಆ ಮಹಾನುಭಾವ ಸಹ ನಾಪತ್ತೆಯಾಗಿದ್ದು, ಗಲ್ಲಾಪೆಟ್ಟಿಗೆಯ ಹಿಂದೆ ಯಾರೋ ಅಪರಿಚಿತ ವ್ಯಕ್ತಿ ವಿರಾಜಮಾನನಾಗಿದ್ದ. ಕಾಫಿ ಕುಡಿಯುತ್ತ, ಯಜಮಾನರು ಊರಲ್ಲಿಲ್ಲವೇ ಎಂದು ವಿಚಾರಿಸಿದ್ದಕ್ಕೆ, ಆ ವ್ಯಕ್ತಿ ಶಂಕರನನ್ನು ಸಾಲ ವಸೂಲಿಗೆ ಬಂದವನೇನೋ ಎಂಬಂತೆ ಸಂದೇಹದಿಂದ ನೋಡಿ, ಬೆಂಗಳೂರಿಗೆ ಹೋಗಿದ್ದಾರೆ. ಯಾವಾಗ ಬರ್ತಾರೋ ಗೊತ್ತಿಲ್ಲ ಎಂದು ಕಡ್ಡಿ ಮುರಿದಿದ್ದ. ಯಜಮಾನರೊಂದಿಗೆ ಅವರ ಮಗಳೂ ಹೋಗಿದ್ದಾಳೆಯೇ ಎಂದು ಕೇಳಲು ಸಾಧ್ಯವೆ?
ಮೂರು ಸಂಜೆ ಸಂಗೀತ ವಿದ್ವಾನ್ ಹಯಗ್ರೀವಾಚಾರ್ಯರ ಬಳಿ ಸಂಗೀತ ಪಾಠಕ್ಕೆ ಚಕ್ಕರ್ ಹಾಕಿ, ತನ್ನ ಕೊಠಡಿಯ ಏಕಾಂತದಲ್ಲಿ ಕೂತು, ಉದ್ವಿಗ್ನ ಮನಸ್ಕನಾಗಿ, ಹಲವು ವಿಷಾದ ಪ್ರೇಮಕವನಗಳನ್ನು ಗೀಚಿದ್ದ.
ಭಾನುವಾರ ಬೆಳಗ್ಗೆ ಕಾಫಿಗೆಂದು ಶಂಕರ ಮತ್ತೊಮ್ಮೆ ಗಜೇಂದ್ರ ವಿಲಾಸಕ್ಕೆ ಹೊರಟ. ಅವನ ಭಾಗ್ಯದೇವತೆಯೇ ಮೈವೆತ್ತಿ ಕೂತಂತೆ ಹೆಬ್ಬಾರರು ಗಲ್ಲಾಪೆಟ್ಟಿಗೆಯ ಹಿಂದೆ ಆಸೀನರಾಗಿದ್ದರು. ಶಂಕರ ಆನಂದತುಂದಿಲನಾಗಿ, ಹೋಟೆಲ್ ಹೊಕ್ಕು, 'ನಮಸ್ಕಾರ, ಹೆಬ್ಬಾರರಿಗೆ...' ಎಂದ. 'ಓ ಬನ್ನಿ ಮೇಸ್ಟ್ರೇ... ನಮಸ್ಕಾರ, ಸೌಖ್ಯವಾ ಲೋ.. ಮಂಜಾ.. ಮೇಸ್ಟ್ರಿಗೆ ಒಂದು ಸ್ಟ್ರಾಂಗ್ ಕಾಫಿ ತಾರೋ...' ಎಂದು ಕೂಗಿ ಹೇಳಿ, ಹೆಬ್ಬಾರರು ಮಂದಸ್ಮಿತರಾಗಿ, 'ಕೂರಿ.. ಮೇಸ್ಟ್ರೇ...' ಎಂದು, ಹತ್ತಿರದಲ್ಲೇ ಇದ್ದ ಖಾಲಿ ಕುರ್ಚಿ ತೋರಿದರು. ಕಾಫಿ ಗುಟುಕರಿಸುತ್ತ ಕೇಳಿದ, 'ಏನು ಹೆಬ್ಬಾರರೇ, ಮೂರು ದಿನದಿಂದ ಕಾಣಲಿಲ್ಲವಲ್ಲ?'
ತಮ್ಮ ಕವಳ ತುಂಬಿದ ಕೆಳದವಡೆಯನ್ನು ಮುಂದೆ ಚಾಚಿ ಹೆಬ್ಬಾರರು ಹೇಳಿದರು, 'ಇರುತ್ತದಲ್ಲ ಮೇಸ್ಟ್ರೇ, ಹೆಣ್ಣು ಹೆತ್ತವರ ಕಷ್ಟ. ಬೆಂಗಳೂರಲ್ಲಿ ನಮ್ಮ ಬಂಧುಗಳ ಪೈಕಿ ಒಂದು ವರ ಇತ್ತು. ಐಐಟಿಯಲ್ಲಿ ನೌಕರಿ. ನಮ್ಮ ರಾಧೆ ಜಾತಕ ಕೊಟ್ಟಿದ್ದೆ. ಕೂಡಿಬರುತ್ತೆ. ಹುಡುಗೀನ ನೋಡೋಣ. ಕರ್ಕೊಂಡು ಬನ್ನಿ ಅಂತ ಬರೆದಿದ್ದರು. ಅದಕ್ಕೆ ನಾನು, ನನ್ನಾಕೆ ರಾಧೇನ ಬೆಂಗಳೂರಿಗೆ ಕರ್ಕೊಂಡುಹೋಗಿದ್ವಿ. ಗುರುವಾರ ಹೋದೋರು ನಿನ್ನೆ ರಾತ್ರಿ ವಾಪಸಾದೆವು.'
ಕುಡಿಯುತ್ತಿದ್ದ ಕಾಫಿ ಕಾರ್ಕೋಟಕ ವಿಷವಾದಂತಾಯಿತು ಶಂಕರನಿಗೆ. ಎದೆ ಢವಢವಗುಟ್ಟಿ, ಮುಖ ಬೆವರಿತು. ನೀರು ಕುಡಿದ. ಇದ್ದಬದ್ದ ಧೈರ್ಯವನ್ನೆಲ್ಲ ಒಗ್ಗೂಡಿಸಿಕೊಂಡು ಕೇಳಿದ, 'ಏನು, ಇಷ್ಟು ಆತುರವಾಗಿ ಮದುವೆ ತಯಾರಿ ನಡೆಸಿದ್ದೀರಲ್ಲ, ಇನ್ನೊಂದು ವರ್ಷ ತಡೆದಿದ್ದರೆ ಹುಡುಗಿಯ ಗ್ರ್ಯಾಜುಯೇಷನ್ ಆದರೂ ಮುಗೀತಿತ್ತಲ್ಲ?'.
'ಅಯ್ಯೋ ಬಿಡಿ ಮೇಸ್ಟ್ರೇ, ಇವಳು ಗ್ರ್ಯಾಜುಯೇಟಾಗಿ ಮಾಡಬೇಕಾದ್ದಾದರೂ ಏನುಂಟು? ನೌಕರಿಗೆ ಹೋಗಬೇಕಾ? ದುಡಿದು ತಂದುಹಾಕಬೇಕಾ? ಜೊತೆಗೆ ಇವಳು ಗ್ರ್ಯಾಜುಯೇಟ್, ಆದರೆ ಇವಳಿಗೆ ಎಂಜಿನಿಯರನ್ನೋ ಡಾಕ್ಟರನ್ನೋ ನೋಡಬೇಕಾಗುತ್ತೆ. ಈ ಕಾಲದ ಗಂಡುಗಳ ಧಿಮಾಕು, ಅವರ ಡಿಮ್ಯಾಂಡುಗಳು ನಿಮಗೇ ಗೊತ್ತುಂಟು. ಈ ಐಐಟಿ ಹುಡುಗನ ಮನೆಯವರೇ ಹುಡುಗಿಗೆ ಹತ್ತು ತೊಲ ಬಂಗಾರ, ಐದು ಕೆ.ಜಿ. ಬೆಳ್ಳಿ ಹಾಕಬೇಕು ಅಂತ ಕೇಳ್ತಿದಾರೆ. ಹೇಗೆ ಹೊಂದಿಸುವುದು ಕೇಶವಾ ಅಂತ ಕಣ್ಣುಕಣ್ಣು ಬಿಡ್ತಾ ಇದೇನೆ. ಜೊತೆಗೆ, ಇವಳಲ್ಲದೆ ಇನ್ನೂ ಇಬ್ಬರು ಹೆಣ್ಣುಮಕ್ಕಳಿದ್ದಾರಲ್ಲ, ಹೇಗೋ ಸದ್ಯಕ್ಕೆ ಇವಳ ಮದುವೆ ಮುಗಿಸಿದರೆ ಸಾಕಾಗಿದೆ' ಎಂದು ವ್ಯಾಕುಲಚಿತ್ತರಾದರು ಹೆಬ್ಬಾರರು.
ಯಾಕೆ ಚಿಂತಿಸುತ್ತೀರಿ, ಹೆಬ್ಬಾರರೇ? ಬೆಳ್ಳಿ ಬೇಡ, ಬಂಗಾರ ಬೇಡ. ನಾನು ನಿಮ್ಮ ಮಗಳನ್ನು ಮದುವೆಯಾಗ್ತೀನಿ ಎಂದು ಹೇಳಿಬಿಡಬೇಕನ್ನಿಸಿತು ಶಂಕರನಿಗೆ. ಆದರೆ ಧೈರ್ಯ ಸಾಲಲಿಲ್ಲ. ಮುಖ್ಯ ಕಾರಣ, ಶಂಕರ ಸ್ಮಾರ್ತ, ಹೆಬ್ಬಾರರು ಮಾಧ್ವರು. ಜೊತೆಗೆ ಇಂಥ ವಿಚಾರವನ್ನು ನೇರವಾಗಿ ಅವರೊಂದಿಗೆ ಪ್ರಸ್ತಾಪಿಸುವುದು ಸಾಧುವೇ? ಅವರು ನಿರ್ದಾಕ್ಷಿಣ್ಯವಾಗಿ ನಿರಾಕರಿಸಿಬಿಟ್ಟರೆ ಎಂಥ ನಾಚಿಕೆಗೇಡು?
'ಹಾಗಾದರೆ ಮದುವೆಯ ಮಾತುಕತೆಯೆಲ್ಲ ಮುಗೀತು ಅನ್ನಿ' ಗೊಗ್ಗರು ದನಿಯಲ್ಲಿ ಕೇಳಿದ. 'ಎಲ್ಲಿ ಬಂತು ಮೇಸ್ಟ್ರೇ? ಹುಡುಗ, ಅವನ ತಂದೆ ತಾಯಿ ಹುಡುಗೀನ ನೋಡಿದ್ದಾಯ್ತು. ಅವರ ಅಭಿಪ್ರಾಯ ಕೂಡಲೇ ತಿಳಿಸಿಬಿಡ್ತಾರಾ? ಎಷ್ಟಾದರೂ ಗಂಡಿನವರ ಗತ್ತು, ಬಿಂಕ ಇರಲ್ಲವೇ? ಬರೆದು ತಿಳಿಸ್ತೀವಿ ಅಂದಿದಾರೆ. ಈ ವಾರದಲ್ಲಿ ಅವರ ಅಭಿಪ್ರಾಯ ತಿಳೀಬಹುದು'.
'ಸರಿ, ನಾ ಬರ್ತೀನಿ, ಹೆಬ್ಬಾರರೇ, ಕೊಂಚ ಪೇಟೇ ಕಡೆ ಹೋಗೋದಿದೆ' ಎಂದು ಎದ್ದ ಶಂಕರ.
----------
ಇನ್ನು ಹೀಗೆ ಸುಮ್ಮನೆ ಕೂತರೆ ಪ್ರಯೋಜನವಿಲ್ಲ. ಕೂಡಲೇ, ಈ ಕೂಡಲೇ ಏನಾದರೂ ಮಾಡಬೇಕು. ಇಲ್ಲದಿದ್ದರೆ ರಾಧೆಯನ್ನು ಕಳೆದುಕೊಂಡು ಜೀವನವಿಡೀ ಕೊರಗುವುದೊಂದೇ ನನ್ನ ಹಣೆಬರಹವಾಗುತ್ತೆ. ಶಂಕರ ತನ್ನ ಕೊಠಡಿಯಲ್ಲಿ ಕೂತು, ತಳಮಳಿಸುತ್ತ ಯೋಚಿಸತೊಡಗಿದ.
ಎರಡು ವರ್ಷಗಳಿಂದ ಶಂಕರ, ರಾಧೆಯನ್ನು ತನ್ನ ಮನದಲ್ಲೇ ಆರಾಧಿಸುತ್ತಿದ್ದ. ಅವಳ ಮುಗ್ಧ, ಸರಳ ಚೆಲುವು, ಇಂಪಾದ ಹಾಡುಗಾರಿಕೆ, ಕಲಿಕೆಯಲ್ಲಿ ಅವಳಿಗಿದ್ದ ಚುರುಕುತನ, ಬುದ್ಧಿವಂತಿಕೆ- ಹೀಗೆ ವಿವರಣೆಗೆ ಸಿಕ್ಕುವ ಕೆಲವು, ಹಾಗೆಯೇ ವ್ಯಾಖ್ಯಾನಕ್ಕೆ ದಕ್ಕದ ಹಲವು ಕಾರಣಗಳಿಗಾಗಿ ಶಂಕರ ರಾಧೆಯನ್ನು ಗಾಢವಾಗಿ, ಆದರೆ ಗೂಢವಾಗಿ ಪ್ರೀತಿಸುತ್ತಿದ್ದ.
ರಾಧೆ ಸಹ ತನ್ನನ್ನು ಇಷ್ಟೇ ತೀವ್ರವಾಗಿ ಪ್ರೀತಿಸುತ್ತಿದ್ದಾಳೆಂಬ ಬಗ್ಗೆ ಶಂಕರನಿಗೆ ಬಲವಾದ ನಂಬಿಕೆಯಿತ್ತು. ಇದಕ್ಕೆ ಆಧಾರವಾಗಿ ಹಲವಾರು ಸ್ಪಷ್ಟ ನಿದರ್ಶನಗಳು ಅವನೆದುರಿಗಿದ್ದವು. ಅವಳು ತರಗತಿಯಲ್ಲಿ ಇವನೆಡೆಗೆ ಹಾಯಿಸುತ್ತಿದ್ದ ಮಾದಕನೋಟ, ಸಿಹಿಸಿಹಿನಗೆ, ಇವನೊಂದಿಗೆ ಮಾತಾಡುವಾಗ ನಾಚಿ ನೀರಾಗುವ ಬಗೆ, ಈ ಪ್ರತಿನಿತ್ಯದ ಸೂಕ್ಷ್ಮ ಸಂಕೇತಗಳಿಗೆ ಬೇರೆ ಅರ್ಥವೇನಿದ್ದೀತು? ಜೊತೆಗೆ ಈ ಒಂದೆರಡು ಪ್ರಸಂಗಗಳೂ ಇದ್ದವಲ್ಲ!
ಒಂದು ಭಾನುವಾರ ಉಪಾಧ್ಯಾಯ ವರ್ಗ ಮತ್ತು ವಿದ್ಯಾರ್ಥಿಗಳ ನಡುವೆ ಒಂದು ಕ್ರಿಕೆಟ್ ಪಂದ್ಯ ಏರ್ಪಾಟಾಗಿತ್ತು. ಉಪಾಧ್ಯಾಯ ವರ್ಗಕ್ಕೆ ಶಂಕರನೇ ನಾಯಕ. ಬ್ಯಾಟು ಮಾಡಲು ಹೋದಾಗ, ತನ್ನ ಕೌಶಲ್ಯವನ್ನು ಮೆರೆಯಲು, ಶಂಕರ ರಾಧೆ ಕುಳಿತಿದ್ದ ಹುಡುಗಿಯರ ಗುಂಪಿನ ಕಡೆಗೆ ಸಿಕ್ಸರ್ ಬಾರಿಸಲು ಚೆಂಡನ್ನು ಹುಕ್ ಮಾಡಲು ಹೋಗಿ, ಟೈಮಿಂಗ್ ತಪ್ಪಿ, ಚೆಂಡು ಅವನ ಬಲ ದವಡೆಗೆ ಫಿರಂಗಿ ಗುಂಡಿನಂತೆ ಬಡಿಯಿತು. ಕುಸಿದುಬಿದ್ದ. ಕೆನ್ನೆ ಪೂರಿಯಂತೆ ಊದಿ, ಬಾಯಿಂದ ದಳದಳನೆ ರಕ್ತ ಹರಿದಿತ್ತು. ಪುಣ್ಯವಶಾತ್ ಹಲ್ಲುಗಳು ಉದುರಲಿಲ್ಲ. ಕೂಡಲೇ ವಿದ್ಯಾರ್ಥಿಗಳು ಆಟೋ ತಂದು, ಅವನನ್ನು ಆಸ್ಪತ್ರೆಗೆ ಸಾಗಿಸಿದರು. ಕಾಲೇಜಿಗೆ ಒಂದು ವಾರ ರಜಾ ಹಾಕಿ ಮನೆಯಲ್ಲಿ ಸುಧಾರಿಸಿಕೊಳ್ಳಬೇಕಾಯಿತು. ಕೆಲವು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆಗಾಗ ಬಂದು, ಅವನ ಆರೋಗ್ಯ ವಿಚಾರಿಸಿ ಹೋದರು. ಆದರೆ ರಾಧೆ ಬರಲಿಲ್ಲ. ಶಂಕರನಿಗೆ ಭಾರಿ ನಿರಾಸೆಯಾಗಿತ್ತು. ನಾಲ್ಕು ದಿನಗಳ ನಂತರ, ಕೊನೆಗೂ ಒಂದು ಸಂಜೆ, ರಾಧೆ ತನ್ನ ಚಿಕ್ಕ ತಂಗಿಯೊಂದಿಗೆ ಅವನ ಮನೆಗೆ ಬಂದಳು. ಸಂತೋಷದ ಬುಗ್ಗೆಯಂತೆ ಪುಟಿದೆದ್ದು ಕೂತು, ಶಂಕರ ಅವಳನ್ನು ಸ್ವಾಗತಿಸಿದ. ಅವಳು ಮೌನವಾಗಿ ಅವನೆದುರು ನಿಂತು, ಅವನ ಊತ ಇಳಿಯುತ್ತಿದ್ದ ಕೆನ್ನೆಯ ಕಡೆ ಒಮ್ಮೆ ನೋಡಿ, ಅವನ ಕಣ್ಣಲ್ಲಿ ಕಣ್ಣು ನೆಟ್ಟಳು. ಅವಳ ಕಂಗಳಿಂದ ಎಳೆ ಎಳೆ ನೀರಿಳಿಯಿತು. ತಟ್ಟನೆ ಹಿಂತಿರುಗಿ ಸರಸರನೆ ಹೋಗಿಯೇ ಬಿಟ್ಟಳು. ಅವನು ಎಷ್ಟು ಕರೆದರೂ ಹಿಂತಿರುಗಿಯೂ ನೋಡಲಿಲ್ಲ. ಆ ಹುಡುಗಿ ಶಂಕರನನ್ನು ಎಷ್ಟು ಹಚ್ಚಿಕೊಂಡಿದ್ದಾಳೆನ್ನಲು ಇದಕ್ಕಿಂತ ಸಾಕ್ಷ್ಯ ಬೇಕೆ?
ಒಮ್ಮೆ ತರಗತಿಯಲ್ಲಿ ಯಾವುದೋ ಸಂದರ್ಭದಲ್ಲಿ ಶಂಕರ ಹೇಳಿದ್ದ, 'ನನ್ನ ಜನ್ಮದಿನವನ್ನು ಇಡೀ ರಾಷ್ಟ್ರವೇ ಆಚರಿಸುತ್ತೆ. ಯಾಕೆಂದರೆ ನಾನು ಹುಟ್ಟಿದ್ದು ಆಗಸ್ಟ್ ಹದಿನೈದರಂದು.' ನಂತರ ಈ ವಿಷಯ ಅವನಿಗೇ ಮರೆತುಹೋಗಿತ್ತು. ಆದರೆ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಸಂಜೆ, ರಾಧೆ ಅದೇ ತನ್ನ ಚಿಕ್ಕ ತಂಗಿಯೊಂದಿಗೆ ಶಂಕರನ ಮನೆಗೆ ಬಂದು, ಅವನಿಗೆ ಸ್ವೀಟ್ ಪ್ಯಾಕೆಟ್ ಕೊಟ್ಟು, ಜನ್ಮದಿನದ ಶುಭಾಶಯ ಹೇಳಿ, ಜೇನ್ನಗೆ ನಕ್ಕುಹೋದಾಗ, ಶಂಕರ ಕಕ್ಕಾವಿಕ್ಕಿಯಾಗಿದ್ದ. ಆ ರಾತ್ರಿಯೆಲ್ಲ ಖುಷಿಗೆ ಅವನಿಗೆ ನಿದ್ದೆ ಹತ್ತಿರಲಿಲ್ಲ.
ಇಷ್ಟಾಗಿ ಒಮ್ಮೆಯಾದರೂ ರಾಧೆಗೆ ತನ್ನ ಮನದಿಂಗಿತವನ್ನು ನೇರ ಬಿಚ್ಚುಮಾತಲ್ಲಿ, ಕಾದಂಬರಿಯ ಅಥವಾ ಸಿನಿಮಾದ ನಾಯಕನಂತೆ (ಎಷ್ಟೊಂದು ಸಲೀಸಾಗಿ), 'ಐ ಲವ್ ಯು' ಎಂದು ಹೇಳಿಬಿಡಲು ಶಂಕರನಿಗೆ ಸಾಧ್ಯವಾಗಿರಲಿಲ್ಲ. ಅದು ಎಂಥ ಕಷ್ಟದ ಕೆಲಸವೆಂದು ನಿಜವಾದ ಪ್ರೇಮಿಗಳಿಗೆ ಮಾತ್ರ ಗೊತ್ತು. ಇನ್ನು ಪ್ರೇಮಪತ್ರ ಬರೆಯುವ ಸಾಹಸದ ಮಾತು ದೂರವೇ ಉಳಿಯಿತು. ಅದು ಒಬ್ಬ ಸಂಭಾವಿತ ಉಪಾಧ್ಯಾಯ ಮಾಡಬಹುದಾದ ಕೆಲಸವೇ? ಆ ಪತ್ರ ಅಕಸ್ಮಾತ್ ಬೇರೆ ಯಾರ ಕೈಗಾದರೂ ಸಿಕ್ಕರೆ ಏನೆಲ್ಲ ಅವಾಂತರಗಳಾಗಬಹುದು? ಹೀಗಾಗಿ ಶಂಕರ ಈವರೆಗೆ ಕೇವಲ ಪ್ರಚ್ಛನ್ನ ಪ್ರೇಮಿಯಾಗಿಯೇ ಉಳಿಯಬೇಕಾಗಿ ಬಂದಿತ್ತು. ಆದರೆ ಇನ್ನಾದರೂ ಅವನು ತನ್ನ ದಿಗಿಲು, ಸಂಕೋಚಗಳ ಚಿಪ್ಪಿನಿಂದ ಹೊರಬಂದು, ಲೋಕವನ್ನು ಎದುರಿಸದೆ ಗತ್ಯಂತರವಿರಲಿಲ್ಲ.
ಈಗ ಮೊದಲ ಹೆಜ್ಜೆಯಾಗಿ ರಾಧೆಗೆ ತನ್ನ ಪ್ರೇಮಸಂದೇಶ ಮುಟ್ಟಿಸಬೇಕು. ಅವಳು ನನ್ನನ್ನು ಮದುವೆಯಾಗಲು, ಮತ್ತು ಅದಕ್ಕಾಗಿ ಅಗತ್ಯ ಬಿದ್ದರೆ ತನ್ನ ತಂದೆ ತಾಯಿಯರನ್ನು ಎದುರಿಸಲು ಸಿದ್ಧಳಿದ್ದಾಳೆಯೇ, ಎಂದು ತಿಳಿದುಕೊಳ್ಳಬೇಕು. ಇದನ್ನು ಸಾಧಿಸುವ ಬಗೆ ಹೇಗೆ?
ನವರಾತ್ರಿ ಮುಂದಿನ ವಾರದಿಂದ ಶುರುವಾಗಲಿತ್ತು. ಮಾಮೂಲಿನಂತೆ ದಸರಾ ರಜೆಗೆ ಅಕ್ಕ ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ಬೆಂಗಳೂರಿಂದ ಬರುವುದಾಗಿ ಬರೆದಿದ್ದಳು. ಶಂಕರ ಹೀಗೆ ನಿರ್ಧರಿಸಿದ. ಅಕ್ಕ ಇಲ್ಲಿಗೆ ಬಂದ ಮೇಲೆ ಅವಳಿಗೆ ಈ ಎಲ್ಲ ವಿಷಯ ತಿಳಿಸಿ, ಒಂದು ಪತ್ರ ಬರೆದುಕೊಡುವುದು. ನೀನೇ ಈ ವಿಷಯ ರಾಧೆಗೆ ತಿಳಿಸಿ, ಅವಳ ಅಭಿಪ್ರಾಯ ತಿಳಿದು ಹೇಳು ಎಂದು ಶಂಕರ ಕೇಳಿಕೊಳ್ಳುವುದು. ಹೌದು, ಇದೇ ಸರಿಯಾದ ಮಾರ್ಗ ಎಂದು ಶಂಕರ ನಿರಾಳನಾದ.
---
ಅಕ್ಕ ಬಂದಿದ್ದಾಯ್ತು. ಶಂಕರನಿಗೆ ದಸರಾ ರಜೆಯಿರಲಿಲ್ಲ. ಅವನ ಕಾಲೇಜಿಗೆ ನವೆಂಬರ್ ಒಂದರಿಂದ ರಜೆ ಶುರುವಾಗಲಿತ್ತು. ಒಂದು ಸಂಜೆ ಕೂತು, ಅಕ್ಕನಿಗೆ ವಿಷದವಾಗಿ ಪತ್ರ ಬರೆದು, ಮಡಿಸಿ ಇಟ್ಟುಕೊಂಡ. ಮಾರನೆಯ ದಿನ ಬೆಳಗ್ಗೆ ಕಾಲೇಜಿಗೆ ಹೊರಡುವ ಮುನ್ನ ಅದನ್ನು ಅಕ್ಕನ ಕೈಗೆ ಕೊಟ್ಟು, ಬಿರಬಿರ ಹೋಗಿಬಿಟ್ಟ.
ಸಂಜೆ ಅಕ್ಕ ಇವನ ಕೊಠಡಿಗೆ ಬಂದು, 'ನಾಳೆ ಸಂಜೆ ಆ ಹುಡುಗೀನ ನಮ್ಮನೆಗೆ ಕರಿ. ನಾ ಮಾತಾಡ್ತೇನೆ' ಎಂದಳು. 'ಥಾಂಕ್ಯೂ' ಎಂದ ಶಂಕರ.
ಮಾರನೆಯ ದಿನ ಕಾಲೇಜಿನಲ್ಲಿ, ತನ್ನ ಪಾಠ ಮುಗಿದ ಮೇಲೆ, ಶಂಕರ ಭಂಡಧೈರ್ಯ ಮಾಡಿ, 'ಮಿಸ್. ರಾಧಾ, ಒಂದು ನಿಮಿಷ' ಎಂದು ಕರೆದ. ಹುಡುಗಿಯರ ಗುಂಪಿನಲ್ಲಿ ಹೊರ ಹೋಗುತ್ತಿದ್ದ ರಾಧೆ ಸಂಕೋಚ, ನಾಚಿಕೆಯ ಮುದ್ದೆಯಾಗಿ ಮುದುರಿ ನಿಂತಳು. 'ಊರಿಂದ ನನ್ನ ಅಕ್ಕ ಬಂದಿದ್ದಾಳೆ. ನಿಮ್ಮನ್ನು ನೋಡಬೇಂಕಂತೆ. ಇವತ್ತು ಸಂಜೆ ನಮ್ಮ ಮನೆಗೆ ಬರ್ತೀರಾ?' ಪಿಸುಮಾತಲ್ಲಿ ಕೇಳಿದ. 'ಆಯ್ತು, ಸಾರ್' ಎಂದು ಸರಸರ ಹೋಗಿ ಹುಡುಗಿಯರ ಗುಂಪು ಸೇರಿಕೊಂಡಳು. ಶಂಕರ ಕರವಸ್ತ್ರದಿಂದ ಬೆವರೊರೆಸಿಕೊಳ್ಳುತ್ತ ಕ್ಲಾಸ್ರೂಮಿಗೆ ನಡೆದ.
ಸಂಜೆ ಮತ್ತೆ ನಿರೀಕ್ಷೆ, ಆತಂಕ... ಬರ್ತಾಳೋ.. ಇಲ್ಲವೋ? ಎದೆಯ ಢವಢವ, ಒಸರುವ ಬೆವರು... ಸದ್ಯ, ಹೆಚ್ಚು ಹೊತ್ತು ಕಾಯಿಸಲಿಲ್ಲ. ಐದೂವರೆಗೆಲ್ಲ ತನ್ನ ಅದೇ ಬಾಲಂಗೋಸಿ ತಂಗಿಯೊಂದಿಗೆ ಬಂದಳು. ಅಮ್ಮ ಶಂಕರಮಠದಲ್ಲಿ ಪುರಾಣ ಪ್ರವಚನಕ್ಕೆ ಹೋಗಿದ್ದಳು. ಮಕ್ಕಳು ಆಟಕ್ಕೆ. ಅಕ್ಕ ರಾಧೆಯನ್ನು ಸ್ವಾಗತಿಸಿ ಒಳಮನೆಗೆ ಕರೆದೊಯ್ದಳು. ಬಿಸ್ಕತ್ತು, ಕಾಫಿ ಆಯಿತು. ಶಂಕರ ನಾನು ಹೊರಗೆ ಹೋಗಿಬರ್ತೀನಿ ಎಂದು ಹೇಳಿ, ಊರಾಚೆ ಬಯಲಿಗೆ ವಾಕಿಂಗ್ ಹೊರಟ. ಕಾದ ಬಾಣಲೆಯಂತಿದ್ದ ಎದೆಯಲ್ಲಿ ಹೃದಯ ತಕಪಕ ಬೇಯುತ್ತಿತ್ತು. ಉದ್ವೇಗ ತಾಳಲಾರದೆ ಏಳು ಗಂಟೆಗೆಲ್ಲ ಮನೆಗೆ ಹಿಂತಿರುಗಿದ.
ರಾಧೆ ತನ್ನ ತಂಗಿಯೊಂದಿಗೆ ಹೊರಟುಹೋಗಿದ್ದಳು. ಅಕ್ಕ ಯಾಕೋ ಸಪ್ಪಗಿದ್ದಳು. ಶಂಕರನ ಹೃದಯ ಕುಸಿಯತೊಡಗಿತ್ತು. ಅವನ ಕೊಠಡಿಗೆ ಬಂದು ಕೂತು ಅಕ್ಕ ಹೇಳಿದಳು, 'ಶಂಕರ, ನೀನಿನ್ನೂ ಮುಗ್ಧ. ಹುಡುಗಿಯರ ಮನಸ್ಸು ನಿನಗೆ ಅರ್ಥವಾಗೋದಿಲ್ಲ. ನೀನು ಅವಳನ್ನು ತುಂಬಾ ಪ್ರೀತಿಸ್ತಿದೀಯ, ಮದುವೆ ಮಾಡ್ಕೋಬೇಕೂಂತಿದೀಯ ಅಂತ ಅವಳಿಗೆ ಹೇಳಿದಾಗ ಅವಳು ಏನು ಹೇಳಿದಳು, ಗೊತ್ತಾ? ನಾನು ಮೇಸ್ಟ್ರನ್ನ ಎಂದೂ ಆ ದೃಷ್ಟಿಯಿಂದ ನೋಡೇ ಇರಲಿಲ್ಲ. ನನಗೆ ಅಣ್ಣತಮ್ಮಂದಿರಿಲ್ಲ. ಮೇಸ್ಟ್ರನ್ನ ನನ್ನ ಅಣ್ಣ ಅಂತ ತಿಳ್ಕೊಂಡಿದ್ದೆ. ಅವರು ನನ್ನನ್ನು ತಪ್ಪು ತಿಳಿದುಕೊಂಡಿದಾರೆ. ದಯವಿಟ್ಟು ಕ್ಷಮಿಸಲಿಕ್ಕೆ ಹೇಳಿ ಅಂತ ಬಿಕ್ಕಿಬಿಕ್ಕಿ ಅತ್ತುಬಿಟ್ಟಳು. ಸಮಾಧಾನ ಮಾಡಿ, ಈ ವಿಷಯ ಯಾರಿಗೂ ಹೇಳಬೇಡಾಂತ ಪ್ರಮಾಣ ಮಾಡಿಸಿ, ಅವಳ ಮನೇ ತನಕ ಬಿಟ್ಟು ಬಂದೆ. ಹೋಗಲಿ ಬಿಡು, ಆದದ್ದಾಯಿತು. ಮನಸ್ಸಿಗೆ ಹಚ್ಚಿಕೊಂಡು ಕೊರಗಬೇಡ. ಅವಳನ್ನು ಮರೆತು ಬಿಡು. ಅವಳಿಗಿಂತ ಒಳ್ಳೇ ಹುಡುಗೀನ ನಾನು ಹುಡುಕಿ ತಂದು, ನಿನಗೆ ಮದುವೆ ಮಾಡಿಸ್ತೀನಿ'.
ಆ ರಾತ್ರಿ ಶಂಕರನಿಗೆ ನಿದ್ದೆ ಸಾಧ್ಯವೇ? ಹಾಸಿಗೆಯಲ್ಲಿ ಹೊರಳಾಡುತ್ತ ಯೋಚಿಸಿದ, ಇದು ನಿಜವಿರಬಹುದೆ? ರಾಧಾ ನನ್ನನ್ನು ಕೇವಲ ಅಣ್ಣನ ಹಾಗೇ ಕಂಡಿರಬಹುದೆ? ಇಲ್ಲ, ಇದು ಸುಳ್ಳು. ಇದರಲ್ಲೇನೋ ಮೋಸವಿದೆ?
ಆ ವರೆಗಿನ ಎಷ್ಟೋ ಘಟನೆಗಳನ್ನು ತನ್ನ ಮನಸ್ಸಿನ ಹಗೇವಿನಿಂದ ಹೊರ ತೆಗೆದು ಸೂಕ್ಷ್ಮವಾಗಿ ವಿಶ್ಲೇಷಿಸಿ ನೋಡಿದ. ರಾಧೆಯ ಹೇಳಿಕೆಗೆ ಸಮರ್ಥನೆಯಾಗುವಂಥ ಯಾವ ಪುರಾವೆಯೂ ಅವನಿಗೆ ಸಿಕ್ಕಲಿಲ್ಲ.
ಹಾಗಾದರೆ ಇದ್ದಕ್ಕಿದ್ದಂತೆ ಅಕ್ಕನಿಗೆ ಹೀಗೇಕೆ ಹೇಳಿದಳು ಅಥವಾ ಅವಳನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾನೇ ತಪ್ಪಿರಬಹುದೆ? ಹೆಣ್ಣಿನ ಮನಸ್ಸು ಇಷ್ಟು ಗೂಢವೆ? ಸಂಕೀರ್ಣವೆ? ಹಾಳಾಗಲಿ, ಇಂದಿನಿಂದ ಅವಳನ್ನು ಮರೆತುಬಿಡಲು ಪ್ರಯತ್ನಿಸುತ್ತೇನೆ. ಮನಸ್ಸನ್ನು ಗಟ್ಟಿ ಮಡಿಕೊಳ್ಳುತ್ತೇನೆ!
ಆದರೆ ಯಾಕೋ ಮನಸ್ಸು ಖಾಲಿ ಖೋಲಿಯಾದಂತಾಗಿ ಭಣಭಣಗುಟ್ಟಿತು. ಹೃದಯ ಹಿಂಡಿದಂತಾಯಿತು. ಹೊದಿಕೆಯನ್ನು ಬಾಯಿಗೆ ಒತ್ತಿಕೊಂಡು, ನಿಶ್ಶಬ್ದವಾಗಿ ಬಿಕ್ಕಿಬಿಕ್ಕಿ ಅಳತೊಡಗಿದ.
ಮಾರನೆಯ ದಿನದಿಂದ ಶಂಕರ ರಾಧೆಯನ್ನು ತನ್ನ ಕಣ್ಣೆತ್ತಿ ನೋಡಲಿಲ್ಲ. ತರಗತಿಯಲ್ಲಿ ಬೇಕೆಂದೇ ಅವಳ ಕಡೆ ನೋಡದೆ, ಗಂಭೀರವಾಗಿ ಪಾಠ ಮಾಡತೊಡಗಿದ. ನಗುಮುಖ, ಹಾಸ್ಯ ಚಟಾಕಿಗಳು ಮಾಯವಾಗಿ, ಅವನ ಉಪನ್ಯಾಸಗಳು ನೀರಸವಾಗಿ, ಅವನಿಗೇ ಅಸಹ್ಯವಾಗತೊಡಗಿದವು. ಅಕಸ್ಮಾತ್ ರಾಧೆಯ ಕಡೆ ದೃಷ್ಟಿ ಹರಿದಾಗ, ಅದೇ ಮಾದಕನೋಟ, ಅದೇ ಜೇನ್ನಗೆ ಇದು ಅಣ್ಣನನ್ನು ನೋಡುವ ರೀತಿಯೇ ಇವಳು ನನ್ನ ಹೃದಯದೊಂದಿಗೆ ಚೆಲ್ಲಾಟ ಆಡುತ್ತಿರಬಹುದೇ ವಂಚಕಿ..? ನಾನಿನ್ನು ನಿನಗೆ ಮರುಳಾಗಲಾರೆ ಎಂದು ಮನಸ್ಸನ್ನು ಇನ್ನಷ್ಟು ಕಹಿ ಮಾಡಿಕೊಂಡ.
ಅಂತರ ಕಾಲೇಜು ಭಾವಗೀತೆ ಗಾಯನಸ್ಪರ್ಧೆಗೆ ತನ್ನ ಕಾಲೇಜಿನ ಪ್ರತಿನಿಧಿಗಳನ್ನು ಆಯ್ಕೆಮಾಡುವ ಕೆಲಸ ಮಾಮೂಲಿನಂತೆ ಶಂಕರನ ಪಾಲಿಗೆ ಬಂತು. ರಾಧೆ ತನ್ನ ಇಂಪಾದ ದನಿಯಲ್ಲಿ ವಿಷಾದ ತುಂಬಿ ಹಾಡಿದಳು;
ಹರಿಸಬೇಡ ಕಣ್ಣ ನೀರು ನನ್ನ ನೆನೆದು, ಚೆನ್ನ,
ಮರೆತುಬಿಡು ನನ್ನ, ದಹಿಸಬೇಡ ಪ್ರಾಣ
ಅಲ್ಲಿ 'ಚೆನ್ನ' ಎಂಬ ಪದಕ್ಕೆ ಬದಲು 'ಅಣ್ಣ' ಎಂದು ತಿದ್ದಿಕೊ ಎಂದು ವ್ಯಂಗ್ಯವಾಡಬೇಕೆನಿಸಿತ್ತು ಶಂಕರನಿಗೆ. ತುಟಿ ಕಚ್ಚಿ ಸುಮ್ಮನಾದ. ರಾಧೆಯ ಬಗ್ಗೆ ಮನಸ್ಸಿನಲ್ಲಿ ಎಷ್ಟೇ ಕಹಿಯಿದ್ದರೂ ಅವಳನ್ನು ಮತ್ತು ಇನ್ನೊಬ್ಬ ಹುಡುಗನನ್ನು ಆಯ್ಕೆ ಮಾಡಿ, ಮೌನವಾಗಿ ಎದ್ದು ಬಂದ.
ಅಂದು ಸಂಜೆ ಇದ್ದಕ್ಕಿದ್ದಂತೆ ಚಳಿಜ್ವರ ಶುರುವಾಯಿತು, ಮಲಗಿಬಿಟ್ಟ. ಮೂರು ದಿನಕ್ಕೆ ಜ್ವರ ಬಿಟ್ಟಿತು. ಆದರೆ ತುಂಬ ನಿತ್ರಾಣನಾಗಿದ್ದ. ರಜೆ ಮುಂದುವರಿಸಿ ಮನೆಯಲ್ಲೇ ಉಳಿದ. ಏನು ಮಾಡಲೂ ಉತ್ಸಾಹವಿಲ್ಲದೆ ಹಾಸಿಗೆಯಲ್ಲಿ ಕೊರಡಿನಂತೆ ಬಿದ್ದುಕೊಂಡು, ಮನಸ್ಸಿನ ಮರಳುಗಾಡಿನಲ್ಲಿ ಅಲೆದಲೆದು ದಣಿದ. ಹೀಗೇ ಇನ್ನೆರಡು ದಿನ ಕಳೆದು ಅವನ ಆರೋಗ್ಯ ತಕ್ಕ ಮಟ್ಟಿಗೆ ಸುಧಾರಿಸಿತು.
ಅಂದು ಸಂಜೆ ಅಕ್ಕ ತನ್ನ ಮಕ್ಕಳೊಂದಿಗೆ ಸಿನಿಮಾಗೆ ಹೋಗಿದ್ದಳು. ಅಮ್ಮ ಯಥಾಪ್ರಕಾರ ಪುರಾಣ ಪ್ರವಚನಕ್ಕೆ. ಶಂಕರ ತನ್ನ ಮಂಚದ ಮೇಲೆ ಮಲಗಿ, ಯಾವುದೋ ಪುಸ್ತಕವನ್ನು ಓದುವ ವ್ಯರ್ಥ ಪ್ರಯತ್ನದಲ್ಲಿ ತೊಡಗಿದ್ದ.
ಬಾಗಿಲು ತಟ್ಟಿದ ಸದ್ದಾಯಿತು. ಯಾರಿರಬಹುದು? ರಾಧೆಯೇ ಮೈ ನವಿರೆದ್ದಿತು. ಛೇ, ನನ್ನ ದರಿದ್ರ ಮನಸ್ಸು ಇನ್ನೂ ಅವಳ ಆಸೆ ಬಿಡುತ್ತಿಲ್ಲವಲ್ಲ. ಅವಳೇಕೆ ಬಂದಾಳು? ಯಾರೋ ಗೆಳೆಯರಿರಬಹುದು ಎಂದು ಮನಸ್ಸನ್ನು ಸ್ಥಿಮಿತಕ್ಕೆ ತಂದುಕೊಂಡು ಮೇಲೆದ್ದು, ಲುಂಗಿಯನ್ನು ಸೊಂಟಕ್ಕೆ ಸರಿಯಾಗಿ ಬಿಗಿದುಕೊಂಡು, ನಿಧಾನವಾಗಿ ಹೋಗಿ ಮುಂಬಾಗಿಲು ತೆರೆದ. (ಮುಂದುವರಿಯಲಿದೆ)
-ಬಿ.ಆರ್. ಲಕ್ಷ್ಮಣ್ ರಾವ್