ನಮ್ಮೂರಿನ ನ್ಯಾಯಾಲಯದಲ್ಲಿ ಒಂದು ವಿಚಿತ್ರ ಘಟನೆ ನಡೆಯಿತು. ಅದನ್ನು ನಿಮಗೆ ಹೇಳಿಬಿಡುತ್ತೇನೆ.
ಶೇಖರ ಎಂಬವನು ವಸಂತ ಎಂಬವನನ್ನು ಕೊಂದ. ವಸಂತನ ಹೆಂಡತಿ ವೀಣಾ ಇದಕ್ಕೆ ಸಾಕ್ಷಿಯಾಗಿದ್ದಳು.
ಶೇಖರನನ್ನು ನ್ಯಾಯಾಲಯದ ಕಟಕಟೆಗೆ ತರಲಾಯಿತು. ವಿಚಾರಣೆ ನಡೆಯುತ್ತಿದ್ದಾಗಲೇ, ವೀಣಾಳ ಮೈಮೇಲೆ ವಸಂತನ ಆತ್ಮವು ಬಂದು, ಆಕೆ ಪಕ್ಕದಲ್ಲಿದ್ದ ಪೊಲೀಸನ ಬಂದೂಕು ತೆಗೆದುಕೊಂಡು ಗುಂಡು ಹಾರಿಸಿ ಶೇಖರನನ್ನು ಕೊಂದಳು.
ಈಗ ನ್ಯಾಯಾಧೀಶರು ಯಾರಿಗೆ, ಯಾವ ಅಪರಾಧಕ್ಕೆ ಶಿಕ್ಷೆ ವಿಧಿಸಬೇಕು?
ವಿಚಾರಣೆಯನ್ನು ಮುಂದೂಡಲಾಗಿದೆ.
ಕೆಟ್ಟದಾಗಿದೆ
ಜಗತ್ತು ಕೆಟ್ಟದಾಗಿದೆ. ಜಗತ್ತು ಖೂಳರಿಂದ ತುಂಬಿದೆ. ಜಗತ್ತು ಜೀವಿಸಲು ಅರ್ಹವಾಗಿಲ್ಲ.
ಸರಿ, ಇನ್ನು ನಾನು ನನ್ನ ಮನೆಯಲ್ಲಿರುವ ಬೆಕ್ಕಿನ ಮರಿಯ ಬಗ್ಗೆ ಮಾತನಾಡಲೆ?
ಇದ್ದಿದ್ದರೆ
ಒಂದು ಕತ್ತರಿ, ಒಂದು ಸೂಜಿ, ಒಂದು ಗಮ್‌ಟೇಪ್ ಮೇಜಿನ ಮೇಲೆ ಕುಳಿತುಕೊಂಡು ನನ್ನನ್ನೇ ದಿಟ್ಟಿಸುತ್ತಿದ್ದವು.
ಅವು ಯಾಕೆ ಹಾಗೆ ನೋಡುತ್ತಿದ್ದವು?
ನನಗೆ ಗೊತ್ತಿಲ್ಲ.
ಅದರ ಬದಲು ಒಂದು ರೊಟ್ಟಿಯ ತುಣುಕು, ಒಂದು ಕಾಗದದ ತುಂಡು, ಒಂದು ಚ್ಯೂಯಿಂಗ್ ಗಮ್ ಇದ್ದಿದ್ದರೆ ಹಾಗೆ ನೋಡುತ್ತಿರಲಿಲ್ಲ ಅನಿಸುತ್ತದೆ.
ಆದರೆ ನಾನು ಅವುಗಳನ್ನು ನೋಡುವ ರೀತಿ ಬೇರೆ ಆಗಿರುತ್ತಿತ್ತು ಅನಿಸುತ್ತದೆ.
ಆತ್ಮಹತ್ಯೆ
ನಾನು ನೋಡ ನೋಡುತ್ತಿದ್ದಂತೆ, ಆ ದೊಡ್ಡ ಕಟ್ಟಡದ ಹತ್ತನೇ ಮಹಡಿಯಿಂದ ಯಾರೋ ಕೆಳಗೆ ಬಿದ್ದರು.
ಮಹಡಿ ಬಾಲ್ಕನಿಯನ್ನು ನೋಡಿದೆ. ಅಲ್ಲಿ ಇನ್ನೂ ಯಾರೋ ಒಬ್ಬರು ಅಂಚಿನಲ್ಲಿ ನಿಂತಿದ್ದರು.
ಅವರೂ ಕೆಳಗೆ ಹಾರಬಹುದೆಂದು ಭಾವಿಸಿದೆ.
ಆದರೆ ಹಾಗಾಗಲಿಲ್ಲ.
ಅವರು, ಬಾಲ್ಕನಿಯಿಂದ ಹಾರಿ, ಗಾಳಿಯಲ್ಲಿ ತೇಲುತ್ತಾ ಎಲ್ಲೋ ಹೊರಟುಹೋದರು.
ಒಬ್ಬನಿದ್ದ
ಒಂದೂರಿನಲ್ಲಿ ಒಬ್ಬನಿದ್ದ. ಅವನು ಕತೆಗಳನ್ನು ಕೇಳಲು ಇಷ್ಟಪಡುತ್ತಿದ್ದ. ಆದರೆ ಅವನ ಬಗ್ಗೆ ಯಾರಾದರೂ ಕತೆ ಹೇಳುವುದನ್ನು ಸಹಿಸುತ್ತಿರಲಿಲ್ಲ.
ಆದ್ದರಿಂದ ಅವನ ಬಗ್ಗೆ ನಾನು ನಿಮಗೆ ಕತೆ ಹೇಳುವಂತಿಲ್ಲ, ಕ್ಷಮಿಸಿ.
ಪುಸ್ತಕ
ಒಂದು ಪುಸ್ತಕವನ್ನು ಓದಲೆಂದು ತೆರೆದೆ.
ನಾನು ಅದನ್ನು ಓದಲು ಶುರುಮಾಡುವ ಮುನ್ನವೇ, ಅದು ನನ್ನನ್ನು ಓದಲು ಶುರುಮಾಡಿತು.
ನನ್ನ ಪೆನ್ನು
ಇತ್ತೀಚೆಗೆ ನನ್ನ ಪೆನ್ನು ನಾನು ಹೇಳಿದಂತೆ ಕೇಳುತ್ತಿಲ್ಲ ಎಂದು ನನಗೆ ಅನಿಸಹತ್ತಿದೆ.
ನಾನು ಗುಲ್‌ಮೊಹರ್ ಗಿಡದ ಬಗ್ಗೆ ಬರೆಯಲು ಹೊರಟರೆ, ಅದು ನನ್ನ ಹಳೇ ಪ್ರೇಮಿಯ ಬಗ್ಗೆ ಬರೆಯುತ್ತದೆ. ನಾನು ಮಳೆಗಾಲದ ಬಗ್ಗೆ ಬರೆಯಲು ಮುಂದಾದರೆ, ಅದು ನಮ್ಮೂರಿನ ಮಹಾ ಬೋರು ಕೊರಕನೊಬ್ಬನ ಬಗ್ಗೆ ಬರೆದು ಬಿಸಾಕುತ್ತದೆ. ನಾನು ನನ್ನ ಪ್ರೇಯಸಿಯ ಬಗ್ಗೆ ಬರೆಯತೊಡಗಿದೆನೆಂದರೆ, ಅದು ತೆರಿಗೆ ಕದಿಯುವ ಬಗ್ಗೆ ಕೆರೆದು ಬೆಚ್ಚಿಬೀಳಿಸುತ್ತದೆ.
ನನ್ನ ಪೆನ್ನಿನಲ್ಲಿ ಯಾರಾದರೂ ಹಳೆಯ ಸಾಹಿತಿಯ ಆತ್ಮವು ಸೇರಿಕೊಂಡಿರಬಹುದೆ?ಟಿ
= ಕೇರ