'ಮಾತಿನಲ್ಲಿ/ ಗೆಲ್ಲಲಾರೆ/ ಮೌನದಲ್ಲೂ/ ಸೋತುಗೆದ್ದರೂ/ ಗೆದ್ದುಸೋತರೂ/ ಎಲ್ಲ ಒಂದೇ/ ಆತ್ಮಸಂಗಾತಕ್ಕೆ/ ನನಗೀಗ ಇರುವುದೊಂದೇ/ ಈ ಕವಿತೆಯೊಂದೇ'- ಎಂದು 'ಕರೆ' ಎಂಬ ಕವಿತೆಯಲ್ಲಿ ಕಾವ್ಯ ಬರೆಯುವುದು ತಮಗೆ ಎಷ್ಟೊಂದು ಅನಿವಾರ್ಯ ಎಂದು ಗಿರಿಜಾ ಶಾಸ್ತ್ರಿಯವರು ಹೇಳಿಕೊಂಡಿದ್ದಾರೆ. ತಮ್ಮ ವ್ಯಕ್ತಿತ್ವದ ಶೋಧಕ್ಕೆ ಕಾವ್ಯ ಅವರಿಗೆ ಬೇಕೇಬೇಕು. 'ಕುರಿತೋದಿ'ದ ಕುರುಹುಗಳು ಅವರ ಕಾವ್ಯದಲ್ಲಿ ಕಾಣುತ್ತವೆ. ಆ ಓದು ಕವಿತೆಯ ಕಸುವನ್ನು ಹೆಚ್ಚಿಸಿವೆ. ಇಲ್ಲಿ ಹೆಣ್ಣೇ ನಾಯಕಿ. ತಾಯಿ, ಅಜ್ಜಿ, ಮುತ್ತಜ್ಜಿಯರ ನೆನಪುಗಳು ಈ ಸಂಕಲನದಲ್ಲಿವೆ. ಆದರೆ ಅಪ್ಪ, ಅಜ್ಜ ಮೊದಲಾದ ಪುರುಷ ತಲೆಗಳ ಸ್ಮರಣೆಯಿಲ್ಲ. ಇದು ಆಕಸ್ಮಿಕವಲ್ಲ, ಪ್ರಜ್ಞಾಪೂರ್ವಕವಾಗಿ ಗಿರಿಜಾ ಶಾಸ್ತ್ರಿ ಇಲ್ಲಿ ಅದನ್ನು ಸಾಧಿಸಿದ್ದಾರೆ. ಮುಂಬಯಿ ಮಹಾನಗರದಲ್ಲಿ ವಾಸಿಸುತ್ತಿರುವ ಅವರು ಅಲ್ಲಿಯ ರಸ್ತೆಗಳು, ಟ್ರೈನುಗಳು, ಚಾಳುಗಳು, ಗಡಿಬಿಡಿಗಳನ್ನೆಲ್ಲ ತಮ್ಮ ಕಾವ್ಯದಲ್ಲಿ ತಂದಿದ್ದಾರೆ. ಕವಿತೆ ಅವರಿಗೆ ಕಳ್ಳಬೆಕ್ಕು, ಒಳಗೊಳಗೇ ಅನಾಮತ್ತು ಬೆಳೆದುಬಿಡುವ ಸೋಜಿಗ. 'ಅವರು ನಮ್ಮ ಈ ಕಾಲದ ಪ್ರತಿಭಾವಂತ ಸಾಹಿತಿಗಳಲ್ಲಿ ಒಬ್ಬರು. ಇವರ ಪದ್ಯಗಳು ಆಪ್ತ ವಾಕ್ಯಗಳಂತೆ ನಮ್ಮನ್ನು ತಟ್ಟುತ್ತವೆ. ಸಾಮಾಜಿಕ/ ವೈಯಕ್ತಿಕ ಇತ್ಯಾದಿ ವಿಂಗಡಣೆ ಮಾಡಲು ಬಾರದಂತೆ ನಮಗೆ ನಾವು ಸತ್ಯವಾಗಿ, ಮೌನವಾಗಿ ಹೇಳಿಕೊಳ್ಳುವ ಮಾತುಗಳಂತೆ ಇವರ ಕವಿತೆಗಳು' ಎಂದು ಯು.ಆರ್. ಅನಂತಮೂರ್ತಿ ಬೆನ್ನುಡಿಯಲ್ಲಿ ಬೆನ್ನು ಚಪ್ಪರಿಸಿದ್ದಾರೆ.
ಪ್ರ: ಅಭಿನವ, ಬೆಂಗಳೂರು. ಪುಟಗಳು 172, ಬೆಲೆ ರು. 150.
ಬಾಲ್ಯದ ಕಿಂಕಿಣಿ
ಬಾಲ್ಯವೆಂಬುವುದೊಂದು ಮಧುರ ಭಾವಗೀತೆ ಎಂದು ಕವಿ ಹಾಡಿದ್ದಾರೆ. ಮಂಗಳೂರು ಆಕಾಶವಾಣಿಯಲ್ಲಿ ಉದ್ಯೋಗಿಯಾಗಿರುವ ಶಕುಂತಲಾ ಆರ್. ಕಿಣಿಯವರು ತಮ್ಮ ಬಾಲ್ಯವನ್ನು ಕಳೆದ ಕೇರಳದ ಕಾಸರಗೋಡು ತಾಲೂಕಿನ ಪೆರಡಾಲದ ಬಳ್ಳಂಬೆಟ್ಟಿನ ಬಗ್ಗೆ ಅತ್ಯಂತ ಆಪ್ತವಾಗಿ ಇಲ್ಲಿ ಬರೆದಿದ್ದಾರೆ. ಅಲ್ಲಿಯ ಗಿಡಮರಗಳು, ಹೊಳೆ ಗದ್ದೆ, ಹೂ ಹಣ್ಣು, ತಿಂಡಿ ತಿನಿಸು, ಜನ ಜಾನುವಾರುಗಳೆಲ್ಲ ಇಲ್ಲಿ ಮರುಹುಟ್ಟು ಪಡೆದಿವೆ. ಓದುತ್ತ ಹೋದ ಹಾಗೆ ಅದರಲ್ಲಿ ನಾವೂ ಒಬ್ಬರಾಗಿಬಿಡುತ್ತೇವೆ. ಈ ಬರೆವಣಿಗೆಯಲ್ಲಿ ಉದ್ವೇಗವಿಲ್ಲ, ಪೂರ್ವಗ್ರಹಗಳಿಲ್ಲ. ಬರೆಯುತ್ತ ಬರೆಯುತ್ತ ಶಕುಂತಲಾ ಮರಳಿ ಬಾಲ್ಯಕಾಲಕ್ಕೆ ಹೋಗಿಬಿಟ್ಟಿದ್ದಾರೆ. ಹೊನ್ನೆ ಸುರಹೊನ್ನೆಯ ಬಗ್ಗೆ ಪಂಪ ಕವಿ ವರ್ಣಿಸಿದ್ದಾನೆ. ಇಲ್ಲಿ ಹೊನ್ನೆ ಎಣ್ಣೆಯ ಬಗ್ಗೆ ಇವರು ವರ್ಣಿಸಿದ್ದಾರೆ. ಅದೆಷ್ಟು ತಂಪು, ಅದು ಬೆಳಗುವ ದೀಪ ಅದೆಷ್ಟು ಸೌಮ್ಯ ಎಂಬುದನ್ನೆಲ್ಲ ಹೇಳುತ್ತಾರೆ. ಇಲ್ಲಿ ಮಳೆಗಾಲದ, ಅಬ್ಬರಿಸಿ ಹರಿಯುವ ಹೊಳೆಯ ವರ್ಣನೆ ಇದ್ದರೂ ಬರೆವಣಿಗೆ ಮಾತ್ರ ಪ್ರಶಾಂತ ಸಾಗರದಂತೆ. ಇದನ್ನು ಓದುತ್ತಿದ್ದರೆ ನಿಮ್ಮ ಬಾಲ್ಯದ ನೆನಪುಗಳೂ ಬಿಚ್ಚಿಕೊಳ್ಳುವುದು ನಿಶ್ಚಿತ. ಬಾಲ್ಯದ ಮಧುರ ಲಹರಿಯ ಕಿಂಕಿಣಿ ನಿಮ್ಮಲ್ಲೂ ಮೊಳಗಬಹುದು. ತಮ್ಮೂರಿನ ಹತ್ತು ಸಮಸ್ತರ ಬಗ್ಗೆಯೂ ಶಕುಂತಲಾ ಬರೆದಿದ್ದಾರೆ. ಇಲ್ಲಿ ಸಿಗುವ ಕೆಲವು ವ್ಯಕ್ತಿಚಿತ್ರಗಳು ಶಕುಂತಲಾ ಶೈಲಿಯ ವಿಶೇಷತೆ.
ಪ್ರ: ನ್ಯೂ ವೇವ್ ಬುಕ್ಸ್, ಬೆಂಗಳೂರು. ಪುಟಗಳು 194 ಬೆಲೆ ರು. 120.
ನೌಕಾ ಬಂಡಾಯ
ದೇಶದ ಸ್ವಾತಂತ್ರ್ಯ ಹಲವರ ತ್ಯಾಗ, ಬಲಿದಾನ, ಹೋರಾಟಗಳ ಫಲವಾಗಿ ಬಂದಿದೆ. ಅಹಿಂಸೆ, ಸತ್ಯಾಗ್ರಹಗಳ ಗಾಂಧೀಜಿ ನೇತೃತ್ವದ ಕಾಂಗ್ರೆಸ್ಸಿನ ಹೋರಾಟ ಒಂದು ಕಡೆಯಾದರೆ ಇಂಡಿಯನ್ ನ್ಯಾಶನಲ್ ಆರ್ಮಿಯನ್ನು ಕಟ್ಟಿದ ಸುಭಾಷಚಂದ್ರ ಬೋಸರ ಕ್ಷಾತ್ರ ಮಾರ್ಗ ಇನ್ನೊಂದೆಡೆ. ಜೊತೆಗೆ ಭಗತ್ಸಿಂಗ್, ರಾಜಗುರು, ಸುಖದದೇವ್, ಚಂದ್ರಶೇಖರ್ ಆಜಾದ್ ಮೊದಲಾದವರ ಹೋರಾಟದ ಹಾದಿ ಮತ್ತೊಂದೆಡೆ. ತಮಗೆ ತೋಚಿದಂತೆ ಸ್ವಾತಂತ್ರ್ಯ ಹೋರಾಟ ಮಾಡಿದ ಜನಸಾಮಾನ್ಯರ ಗುಂಪು ಮತ್ತೊಂದೆಡೆ. ಸುದೀರ್ಘವಾದ ಸ್ವಾತಂತ್ರ್ಯ ಹೋರಾಟದ ಚಿತ್ರಣವನ್ನು ಇಡಿಯಾಗಿ ಇದುವರೆಗೆ ಬರೆದು ಪ್ರಕಟಿಸಿದವರಿಲ್ಲ. 1946ರಲ್ಲಿ ನಡೆದ ನೌಕಾ ಪಡೆಯ ಬಂಡಾಯ ಸರಿಯಾಗಿ ದಾಖಲಾಗದ ಇಂಥ ಹೋರಾಟಗಳಲ್ಲಿ ಒಂದಾಗಿದೆ. ಭಾರತವನ್ನು ಇನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವುದು ಅಸಾಧ್ಯ ಎಂಬ ಭಾವನೆಯನ್ನು ಬ್ರಿಟಿಷರಲ್ಲಿ ಮೂಡಿಸಿದ ಹೋರಾಟ ಇದು. ಸುಭಾಷರ ಐಎನ್ಎ ಈಶಾನ್ಯ ಭಾರತವನ್ನು ಗೆದ್ದುಕೊಂಡಿದ್ದರಿಂದ ಸ್ಫೂರ್ತಿ ಪಡೆದ ನೌಕಾಪಡೆಯು ಕಲ್ಕತ್ತಾ, ಮದ್ರಾಸು, ಕೊಚ್ಚಿ, ಮುಂಬಯಿ, ಕರಾಚಿಗಳಲ್ಲಿ ಏಕಕಾಲದಲ್ಲಿ ಬಂಡಾಯವನ್ನು ನಡೆಸಿತು. ಈ ಕೃತಿ ರಚಿಸಲು ಬಿ.ಪಿ.ಪ್ರೇಮಕುಮಾರ ಅವರು ಆಳವಾದ ಅಧ್ಯಯನವನ್ನು ನಡೆಸಿದ್ದಾರೆ. ಇದುವರೆಗೆ ಸಾರ್ವಜನಿಕವಾಗಿ ಗೊತ್ತಿಲ್ಲದ ಅನೇಕ ಮಾಹಿತಿಗಳು ಇದರಲ್ಲಿವೆ. ಸ್ವಾತಂತ್ರ್ಯದ ಹೋರಾಟಕ್ಕೆ ಇದೊಂದು ಹೊಸ ಭಾಷ್ಯ.
ಪ್ರ: ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು, ಪುಟಗಳು 350, ಬೆಲೆ ರು. 200.
ಹೇ ರಾಮ್!
ಗಾಂಧೀಜಿಯವರ ಬಗ್ಗೆ ಅಸಂಖ್ಯ ಗ್ರಂಥಗಳು ಬಂದಿವೆ. ನಾಟಕಗಳು ರಂಗದ ಮೇಲೆ ಪ್ರದರ್ಶನಗೊಂಡಿವೆ. ಸಿನಿಮಾಗಳು ಬಂದಿವೆ. ಗಾಂಧೀಜಿಯನ್ನು ಹಲವರು ಹಲವು ರೀತಿಯಲ್ಲಿ ತಮ್ಮ ಕೃತಿಗಳಲ್ಲಿ ಒರೆಗೆ ಹಚ್ಚಿದ್ದಾರೆ. ಗಾಂಧೀಜಿ ಮುಸ್ಲಿಂ ಪಕ್ಷಪಾತಿ, ಅವರಿಂದಾಗಿಯೇ ದೇಶ ವಿಭಜನೆಯಾಯಿತು ಎಂಬಂಥ ಅರ್ಧಸತ್ಯದ ವಾದಗಳೂ, ನಾಥೂರಾಮ್ ಗೋಡ್ಸೆ ಹಿಂದೂ ಮೂಲಭೂತವಾದಿಯೆಂದೂ, ಗಾಂಧೀಜಿಯನ್ನು ಕೊಂದು ದೇಶಕ್ಕೆ ಉಪಕಾರ ಮಾಡಿದನೆಂದೂ ಹೇಳುವಂಥ ಒಳನೋಟಗಳಿಲ್ಲದ ಅಭಿಪ್ರಾಯಗಳೂ ಸತ್ಯದರ್ಶನವನ್ನು ಮಾಡಲಾರವು. ಇತಿಹಾಸದ ಘಟನೆಗಳನ್ನು ಸಾಹಿತ್ಯ ಕೃತಿಯಾಗಿ ರಚಿಸುವಾಗ ಕೃತಿಕಾರ ತುಂಬ ಎಚ್ಚರಿಕೆ ವಹಿಸಬೇಕಾಗುತ್ತದೆ. ಕಲ್ಪನೆಗಳನ್ನು ಇದರಲ್ಲಿ ಸೇರಿಸಲು ಬರುವುದಿಲ್ಲ. ಪತ್ರಕರ್ತರಾಗಿರುವ ಅನಂತ ಚಿನಿವಾರ್ಅವರು ತಮ್ಮ ನಾಟಕ 'ಹೇ ರಾಮ್'ನಲ್ಲಿ ತಮ್ಮ ಸೃಜನಶೀಲ ಸ್ವಾತಂತ್ರ್ಯವನ್ನು ಜವಾಬ್ದಾರಿಯಿಂದ ಬಳಸಿದ್ದಾರೆ. ನಾಟಕದ ಕೇಂದ್ರ ಗಾಂಧೀ ಹತ್ಯೆಯ ಒಳಸಂಚು. ಇವೆಲ್ಲ 24 ದಿನಗಳಲ್ಲಿ ನಡೆದು ಹೋದವು. ಇಲ್ಲಿ ಬರುವ ಗಾಂಧೀ ಮತ್ತು ಗೋಡ್ಸೆ ಆಡಿರುವ ಮಾತುಗಳು ಆ 24 ದಿನಗಳಲ್ಲಿಯೇ ಆಡಿದ್ದು ಅಲ್ಲ, ಅವರು ಬೇರೆಬೇರೆ ಸಂದರ್ಭದಲ್ಲಿ ಆಡಿದ್ದು. ನಾಟಕದಲ್ಲಿ ಅವನ್ನು ಸೂಕ್ತವಾಗಿ ಬಳಸಿಕೊಂಡಿದ್ದಾರೆ. ಇದು ಓದು ನಾಟಕವಲ್ಲ, ಆಡು ನಾಟಕ. ಅದೇ ಇದರ ವಿಶೇಷ.
ಪ್ರ: ಅಭಿನವ, ಬೆಂಗಳೂರು. ಪುಟಗಳು 96, ಬೆಲೆ ರು. 60.
= -ಡಾ. ವಾಸುದೇವ ಶೆಟ್ಟಿ