

ಪಂಡಿತರು ಕಾಶ್ಮೀರ ಕೊಳ್ಳದ ಮೂಲನಿವಾಸಿಗಳು. 1990ರ ದಶಕದಲ್ಲಿ ಭಯೋತ್ಪಾದನೆಯ ಕರಿನೆರಳು ಅವರನ್ನು ಆವರಿಸಿತು. ಪಂಡಿತರ ಮಾರಣಹೋಮವೇ ನಡೆಯಿತು. ಆ ಸಮುದಾಯದ ಮಹಿಳೆಯರು, ಯುವತಿಯರು ಸಾಮೂಹಿಕ ಅತ್ಯಾಚಾರದಿಂದ ನಲುಗಿದರು. ಅನ್ಯರ ಕೈಯ್ಯಲ್ಲಿ ಸಾಯುವುದಕ್ಕಿಂತ ನಾವೇ ಪ್ರಾಣಹರಣ ಮಾಡಿಕೊಳ್ಳುವುದು ಲೇಸೆಂದು ಅಸಂಖ್ಯಾತ ಪಂಡಿತರು ಜೀವ ತೆಗೆದುಕೊಂಡರು. ಲಕ್ಷಾಂತರ ಮಂದಿ ಮನೆ-ಮಠ, ಆಸ್ತಿ-ಪಾಸ್ತಿ ಬಿಟ್ಟು ನಿರ್ಗತಿಕರಾಗಿ ಕೊಳ್ಳ ತೊರೆದರು. ಹಾಗೆ ಕಾಶ್ಮೀರ ಬಿಟ್ಟವರಲ್ಲಿ ಒಬ್ಬರಾದ ರಾಹುಲ್ ಪಂಡಿತ್ ಕೊಳ್ಳದಲ್ಲಿ ಶಾಂತಿ ಕದಡಿದ ಪರಿ, 'ಪಂಡಿತರಿಲ್ಲದ ಕಾಶ್ಮೀರ'ಕ್ಕೆ ನಡೆದ ಹುನ್ನಾರಗಳನ್ನು ಎಳೆಎಳೆಯಾಗಿ ವಿವರಿಸಿದ್ದಾರೆ ತಮ್ಮOur Moon Has Blood Clots (ನಮ್ಮ ಚಂದ್ರಮನಲ್ಲಿ ರಕ್ತದ ಕಲೆಗಳಿವೆ) ಕೃತಿಯಲ್ಲಿ. ನಿರಾಶ್ರಿತರ ಶಿಬಿರದಲ್ಲಿನ ದಾರುಣ ಸ್ಥಿತಿ, ತನ್ನ ಹತ್ತಿರದವರೇ ಗುಂಡೇಟಿಗೆ ಬಲಿಯಾದದ್ದು... ಅಲ್ಲಿನ ಕ್ರೌರ್ಯವನ್ನು ಕಣ್ಣಿಗೆ ಕಟ್ಟುವಂತೆ ಬಿಚ್ಚಿಟ್ಟಿದ್ದಾರೆ. ಆ ಪುಸ್ತಕದ ಆಯ್ದಭಾಗ...
ಕಾಶ್ಮೀರ ಕೊಳ್ಳ, ಜ.19, 1990
ಮಧ್ಯರಾತ್ರಿ. ಗಾಢನಿದ್ದೆಯಲ್ಲಿದ್ದೆ. ಏನೋ ವಿಚಿತ್ರ ಸದ್ದು. ಬೆನ್ನಲ್ಲೇ ಭಯ. ಅದೋ, ನಮ್ಮ ಕಂಪೌಂಡ್ ಗೋಡೆ ಬಳಿ ಯಾರದೋ ನೆರಳು. ಅಯ್ಯೋ, ಆತ ಕಂಪೌಂಡ್ ಹತ್ತಿ ಒಳಕ್ಕೆ ನೆಗೆದೇ ಬಿಟ್ಟ. ಓಹ್, ಒಬ್ಬನೇ ಇಲ್ಲ. ಅವನ ಹಿಂದೆ ಇನ್ನೊಬ್ಬ, ಆತನ ಬೆನ್ನಲ್ಲಿ ಮಗದೊಬ್ಬ... ಇನ್ನೂ ಬರುತ್ತಲೇ ಇದ್ದಾರೆ...
ಭೀತಿಯಿಂದ ದಿಗ್ಗನೆ ಎದ್ದು ಕುಳಿತೆ. ರಾತ್ರಿ ಸದಾ ಉರಿಯುತ್ತಿದ್ದ ಜೀರೊ ವೋಲ್ಟ್ ಬಲ್ಬ್ ಬದಲು ನೂರು ವೋಲ್ಟ್ ಬಲ್ಬ್ ಉರಿಯುತ್ತಿತ್ತು. ಅಪ್ಪ ನನ್ನನ್ನು ಎಬ್ಬಿಸಿದ್ದರು. 'ಏನೋ ನಡೆಯುತ್ತಿದೆ...' ಗಾಬರಿಯಿಂದ ಉಸುರಿದರು. ಬೀದಿಯಲ್ಲಿ ಯಾರೋ ಅಡ್ಡಾಡುತ್ತಿದ್ದಾರೆ. ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ. ಆ ಬಿರುಸಾದ ಹೆಜ್ಜೆಗಳ ಸದ್ದು, ಜೋರು ಮಾತು ನನಗೂ ಕೇಳುತ್ತಿದೆ. ಏನೋ ನಡೆಯುತ್ತಿದೆ. ನಮ್ಮ ಪ್ರದೇಶದಲ್ಲಿ ಎಲ್ಲಿ ಬೆಂಕಿ ಹಚ್ಚಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ?
ನಾನು ಕಂಡಿದ್ದು ಕನಸಲ್ಲ. ಅವರು ಈಗ ನಮ್ಮ ಕಂಪೌಂಡ್ ಒಳಗಡೆ ಜಿಗಿಯುತ್ತಾರಾ?
ಅಷ್ಟರಲ್ಲೇ ಸಮೀಪದ ಮಸೀದಿಯ ಧ್ವನಿವರ್ಧಕದಿಂದ ಜೋರು ಸದ್ದು. ದಿನಾ ಮುಂಜಾನೆ ನಮಗೆ ಕೇಳುವ ಸದ್ದೇ ಅದು. ಸಾಮಾನ್ಯವಾಗಿ ಅದು ಹೆಚ್ಚು ಹೊತ್ತು ಇರುವುದಿಲ್ಲ. ಈ ಅಪರಾತ್ರಿಯಲ್ಲಿ ಎಷ್ಟು ಹೊತ್ತಾದರೂ ನಿಲ್ಲುತ್ತಲೇ ಇಲ್ಲವಲ್ಲ. ನಿಶ್ಚಿತವಾಗಿಯೂ ಇದು ಅಶುಭದ ಸೂಚನೆ.
ನಮ್ಮ ಮನೆ ಹೊರಗೆ ಕೇಳುತ್ತಿದ್ದ ಗದ್ದಲ ನಿಧಾನಕ್ಕೆ ಕಡಿಮೆಯಾಯಿತು. ಆದರೆ ಮಸೀದಿಯಿಂದ ಜನರ ಧ್ವನಿ ಇನ್ನೂ ಕೇಳಿಸುತ್ತಲೇ ಇತ್ತು. ಯಾವುದೋ ವಿಚಾರದಲ್ಲಿ ಅಲ್ಲಿ ವಾದ ನಡೆಯುತ್ತಿದೆ. ಏನೆಂದು ತಿಳಿಯುತ್ತಿಲ್ಲ.
ಪಕ್ಕದ ಮನೆಯಲ್ಲಿದ್ದ ಚಿಕ್ಕಪ್ಪ ಮೆಲ್ಲಗೆ ಹೊರಬಂದರು. 'ಏನಾಗುತ್ತಿದೆ?' ಚಿಕ್ಕಪ್ಪನ ಪ್ರಶ್ನೆ. 'ಏನೋ ನಡೆಯುತ್ತಿದೆ. ಏನು ಅಂತ ತಿಳಿಯುತ್ತಿಲ್ಲ' ಅಪ್ಪ ಹೇಳಿದರು, 'ಅವರು ಗಟ್ಟಿ ನಿರ್ಧಾರಕ್ಕೆ ಬಂದಂತಿದೆ'
ಮಸೀದಿಯಲ್ಲಿ ಎಲ್ಲವೂ ಪಿಸುಮಾತಿನಲ್ಲಿ ನಡೆಯುತ್ತಿದೆ. ದೀರ್ಘ ಸಮಯದ ಬಳಿಕ ಹಿಂದಿನ ಗಟ್ಟಿ ಸದ್ದಿನೊಂದಿಗೆ ಧ್ವನಿವರ್ಧಕ ಮತ್ತೆ ಮೊಳಗಿತು.
'ನಾರಾ-ಇ-ತಕ್ಬೀರ್, ಅಲ್ಲಾ ಹೋ ಅಕ್ಬರ್!'
ಅಪ್ಪನ ಮುಖ ನೋಡಿದೆ. ಉದ್ವಿಗ್ನತೆಯೇನೂ ಕಾಣಲಿಲ್ಲ. ಎಂದಿನಂತೆ ಭಾವನೆಗಳನ್ನು ಹಿಡಿತದಲ್ಲಿಟ್ಟುಕೊಂಡಿದ್ದರು. ಮಸೀದಿಯ ಧ್ವನಿವರ್ಧಕದಿಂದ ಹೊಮ್ಮಿದ ಘೋಷಣೆಯ ಅರ್ಥ ಅವರಿಗೆ ಚೆನ್ನಾಗಿ ಗೊತ್ತಿತ್ತು. ಅದು ಯುದ್ಧ ಘೋಷಣೆ!
ಕೆಲ ನಿಮಿಷಗಳಲ್ಲಿಯೇ ಯುದ್ಧ ಕೂಗು ಸನಿಹದಲ್ಲಿಯೇ ಕೇಳತೊಡಗಿತು. ಕೈಯ್ಯಲ್ಲಿ ವಿಷಕಾರಿ ಈಟಿಗಳನ್ನು ಹಿಡಿದವರಂತೆ ನಮ್ಮತ್ತ ನುಗ್ಗಿ ಬರುತ್ತಿದ್ದಾರೆ ಅನ್ನಿಸಿತು.
'ಹಮ್ ಕ್ಯಾ ಚಾಹ್ತೆ: ಆಝಾದಿ!
ಇಯ್ ಝಲಿಮೋನ್, ಇಯ್ ಕಾಫಿರೋನ್, ಕಾಶ್ಮೀರ್ ಹಮಾರಾ ಚೋಡ್ ದೊ'
(ನಮಗೇನು ಬೇಕು? ಸ್ವಾತಂತ್ರ್ಯ! ಓ ಪ್ರಜಾಪೀಡಕರೆ, ಓ ಭೂಮಿ ಆಕ್ರಮಿಸಿಕೊಂಡವರೆ, ನಮ್ಮ ಕಾಶ್ಮೀರ ಬಿಟ್ಟು ತೊಲಗಿ)
ಇದ್ದಕ್ಕಿದ್ದಂತೆ ಘೋಷಣೆಗಳು ನಿಂತವು. ಕೆಲ ಕ್ಷಣಗಳೂ ಕಳೆದಿರಲಿಕ್ಕಿಲ್ಲ. ಅದರ ಪಕ್ಕದ ಮಸೀದಿಯಿಂದ, ಅಪ್ಘಾನಿಸ್ತಾನ ಆಕ್ರಮಿಸಿಕೊಳ್ಳಲು ಬಂದ ಸೋವಿಯತ್ ಒಕ್ಕೂಟದ ಸೈನಿಕರನ್ನು ಮುಜಾಹಿದ್ದೀನ್‌ಗಳು ಎದುರಿಸಿದ ಬಗೆಯನ್ನು ಸಾರುವ ಹಾಡುಗಳು ತೂರಿಬಂದವು. ಮತ್ತೆ ಘೋಷಣೆಗಳು. ನಮ್ಮಲ್ಲಿ ಇನ್ನಾವ ಅನುಮಾನವೂ ಉಳಿಯಲಿಲ್ಲ. ಆ ಘೋಷಣೆಗಳನ್ನು ಕೇಳುತ್ತಿದ್ದಂತೆ ಅಮ್ಮ ಗಡಗಡ ನಡುಗಿದ್ದು ನನಗಿನ್ನೂ ಕಣ್ಣಿಗೆ ಕಟ್ಟಿದಂತಿದೆ. ಆ ಗುಂಪು ಕಾಶ್ಮೀರವನ್ನು ಪಾಕಿಸ್ತಾನ ಮಾಡಲು ಬಯಸಿತ್ತು; ಪಂಡಿತರಿಲ್ಲದೆ, ಆದರೆ ಪಂಡಿತ ಸಮುದಾಯದ ಹೆಣ್ಣುಮಕ್ಕಳು ಮಾತ್ರ ಅವರಿಗೆ ಬೇಕಾಗಿದ್ದರು.
ಅವರು ಇನ್ನೇನು ನಮ್ಮಲ್ಲಿಗೆ ಬರುತ್ತಾರೆ ಮತ್ತು ನಮ್ಮನ್ನು ಸಾಯಿಸಿ ಬಿಡುತ್ತಾರೆ. ಅದು ಕೆಲವೇ ನಿಮಿಷಗಳ ಕೆಲಸ. ನಾವು ಆಲೋಚನೆಯಲ್ಲಿ ಮುಳುಗಿದ್ದಂತೆ ಅಮ್ಮ ಅಡುಗೆಮನೆಗೆ ಓಡಿದಳು. ಮರುಕ್ಷಣವೇ ಮರಳಿದವಳ ಕೈಯ್ಯಲ್ಲಿ ದೊಡ್ಡ ಚಾಕು! 'ಅವರು ಬಂದರೆ, ನಾನಿವಳನ್ನು ಸಾಯಿಸಿಬಿಡುತ್ತೇನೆ' ನನ್ನ ಪಕ್ಕದಲ್ಲಿಯೇ ಇದ್ದ ಅಕ್ಕನನ್ನು ನೋಡುತ್ತ ಹೇಳಿದಳು, 'ಆ ನಂತರ ನನ್ನನ್ನೂ ಇರಿದುಕೊಳ್ಳುತ್ತೇನೆ. ನೀವಿಬ್ಬರು ಏನು ಮಾಡುತ್ತೀರೊ ನಿಮಗೆ ಬಿಟ್ಟದ್ದು'. ಅಪ್ಪ ಸ್ತಂಭೀಭೂತರಾಗಿದ್ದರು. ಅವರ ಬಾಯಿಯಿಂದ ಒಂದೇ ಒಂದು ಮಾತೂ ಹೊರಡಲಿಲ್ಲ.
ನಾವೆಲ್ಲ ದಿಗಿಲು ಬಿದ್ದಿದ್ದೆವು. ಏನು ಮಾಡಬೇಕೆಂಬುದು ತೋಚದೆ ದಿಙ್ಮೂಢರಾಗಿ ನಿಂತಿದ್ದೆವು. ಎಲ್ಲಿಗೆ ಓಡಿ ಹೋಗುವುದು? ಅಮ್ಮ ತನ್ನನ್ನು ತಾನು ಕೊಂದುಕೊಳ್ಳುವಳೆ? ಅಕ್ಕನ ಗತಿ ಏನು? ಮಾತಿಲ್ಲದ ಸಿನಿಮಾದಂತೆ ನನ್ನ ಮನಸ್ಸು ಅಕ್ಕನೊಟ್ಟಿಗೆ ಕಳೆದ ಮಧುರ ಕ್ಷಣಗಳನ್ನು ಜ್ಞಾಪಿಸಿಕೊಳ್ಳತೊಡಗಿತು. ನಾವು 'ಟೀಚರ್ ಟೀಚರ್' ಆಟ ಆಡುತ್ತಿದ್ದುದು, ಕಷ್ಟದ ಸ್ಪೆಲ್ಲಿಂಗ್‌ಗಳನ್ನು ಆಕೆ ಹೇಳಿಕೊಡುತ್ತಿದ್ದುದು, ಕೆಂಪನೆಯ ರಿಬ್ಬನ್‌ನಲ್ಲಿ ಜಡೆ ಕಟ್ಟಿಕೊಂಡಾಗಿನ ಅವಳ ಬಿಂಕ, ನನ್ನನ್ನು ಕಿಚಾಯಿಸಿದ ಪುಂಡ ಪೋರನೊಬ್ಬನತ್ತ ಅವಳು ಸಿಟ್ಟಿನಿಂದ ಡಸ್ಟರ್ ಎಸೆದದ್ದು ಎಲ್ಲವು ಸರಸರನೆ ಕಣ್ಮುಂದೆ ಹಾದುಹೋಯಿತು. ಇಂತಹ ಅಕ್ಕನನ್ನು ಅಮ್ಮ ಸಾಯಿಸಿಬಿಡುತ್ತಾಳಾ?
'ಬಿಎಸ್‌ಎಫ್‌ನವರು ಏನಾದರೂ ಮಾಡಬಹುದು' ಚಿಕ್ಕಪ್ಪ ಆಶಾಭಾವದಿಂದ ಹೇಳಿದರು. ಯಾರೂ, ಏನೂ ಮಾಡಲಿಲ್ಲ. ಘೋಷಣೆ ರಾತ್ರಿಯಿಡೀ ಕೇಳಿಬರುತ್ತಲೇ ಇತ್ತು. ದೂರದಲ್ಲೆಲ್ಲೊ ಒಂದಷ್ಟು ಸರ್ಚ್‌ಲೈಟ್‌ಗಳು ಮಿಣುಕಿದವು. ಬಿಎಸ್‌ಎಫ್‌ನವರು ಪಹರೆ ಕಾಯುತ್ತಿರಬಹುದಾ? ಅವರ್ಯಾಕೆ ಈ ಹುಚ್ಚುತನವನ್ನು ನಿಯಂತ್ರಿಸುತ್ತಿಲ್ಲ?
ಬೆಳಗ್ಗೆವರೆಗೂ ಗೌಜು ಮುಂದುವರಿದಿತ್ತು. ನಿದ್ದೆಯಿಲ್ಲದ ರಾತ್ರಿಯನ್ನು ದುಗುಡದಲ್ಲೇ ಕಳೆದೆವು. ಇಡೀ ಕಾಶ್ಮೀರ ಕೊಳ್ಳದಲ್ಲಿ ಆ ರಾತ್ರಿ ಹೀಗೆಯೇ ನಡೆದಿತ್ತು ಎನ್ನುವುದು ನಮಗೆ ನಂತರ ತಿಳಿಯಿತು. ನಮ್ಮನ್ನು ಗಡೀಪಾರು ಮಾಡಲು ಮತ್ತು ಅದಕ್ಕಾಗಿ ಭಯ ಹುಟ್ಟಿಸಲು ಅತ್ಯಂತ ವ್ಯವಸ್ಥಿತವಾಗಿ ಎಲ್ಲವನ್ನೂ ನಿರ್ವಹಿಸಲಾಗಿತ್ತು.
---
ಇದಾದ ಕೆಲ ದಿನಗಳಲ್ಲಿ ನಾವು ಅಮ್ಮನ ತಂಗಿ ಮನೆಯಲ್ಲಿ ಆಶ್ರಯ ಪಡೆದೆವು. ಅವರ ಮನೆ ಸೇನಾ ದಂಡು ಪ್ರದೇಶದಲ್ಲಿ ಇದ್ದ ಕಾರಣ ಹೆದರಿಕೆ ಇರಲಿಲ್ಲ. ಅಪ್ಪ ರೇಡಿಯೊ ವಾರ್ತೆ ಕೇಳುತ್ತ ದಿನ ನೂಕುತ್ತಿದ್ದರು. ಯಾವ ಬಾನುಲಿಯಲ್ಲಿಯೂ ಕಾಶ್ಮೀರ ಕೊಳ್ಳದಲ್ಲಿ ನಡೆದ ಘಟನೆ ಬಗ್ಗೆ ಸುದ್ದಿಯೇ ಇರಲಿಲ್ಲ. ಬಿಬಿಸಿ ಮಾತ್ರ ಸ್ಪಷ್ಟ ಚಿತ್ರಣ ನೀಡಿತಲ್ಲದೇ, ಪರಿಸ್ಥಿತಿ ಸಂಪೂರ್ಣ ಕೈಮೀರಿದೆ ಎನ್ನುವ ವಾಸ್ತವವನ್ನೂ ತೆರೆದಿಟ್ಟಿತು.
ಎಷ್ಟು ದಿನ ಅಂತ ಅಲ್ಲಿ ನಿರಾಶ್ರಿತರಂತೆ ಕಳೆಯುವುದು? ಅದೊಂದು ದಿನ ಅಪ್ಪ ಶ್ರೀನಗರದ ಮನೆಗೆ ಮರಳುವ ನಿರ್ಧಾರ ಮಾಡಿದರು. ಅಕ್ಕನನ್ನು ಅಲ್ಲಿಯೇ ಬಿಟ್ಟು, ನಾವು ಮೂವರು ಅಂದರೆ ಅಪ್ಪ, ಅಮ್ಮ ಮತ್ತು ನಾನು ಶ್ರೀನಗರದಲ್ಲಿನ ಮನೆಗೆ ಮರಳಿದವು. ನಿರ್ಮಾನುಷವಾಗಿದ್ದ ಬೀದಿ ಸ್ಮಶಾನದಂತೆ ಕಾಣುತ್ತಿತ್ತು. ಮನೆಗಳು ಭೂತ ಬಂಗಲೆಗಳಂತೆ ಕಾಣುತ್ತಿದ್ದವು. ದರೋಡೆಕೋರರಂತೆ ಮನೆ ಅಂಗಳಕ್ಕೆ ಕಾಲಿಟ್ಟೆವು. ಮುಂಬಾಗಿಲಿಗೆ ಬೀಗ ಹಾಕಿದ್ದು ಹಾಗೆಯೇ ಇತ್ತು. ಅಪ್ಪ ಹಿತ್ತಿಲು ಬಾಗಿಲು ಮೂಲಕ ಒಳ ಹೊಕ್ಕರು. ಮನೆಯಲ್ಲಿ ಬೇರೆ ಯಾರಾದರೂ ಇದ್ದಾರೆಯೇ ಎಂದು ಪರೀಕ್ಷಿಸುವುದು ಅವರ ಉದ್ದೇಶವಾಗಿತ್ತು. ಯಾರೂ ಇಲ್ಲ ಎನ್ನುವುದು ಖಚಿತವಾದ ಮೇಲೆ ನಮ್ಮನ್ನು ಕರೆದರು. ದೊಡ್ಡ ಬಲ್ಬ್ ಹಚ್ಚದಂತೆ ಮತ್ತು ಪಿಸುಮಾತಿನಲ್ಲಿಯೇ ಮಾತನಾಡುವಂತೆ ಸೂಚಿಸಿದರು. ತಮ್ಮ ಸಹೋದ್ಯೋಗಿ ಸತೀಶ್ ಅವರಿಗೆ ಕರೆ ಮಾಡಿ ಆ ರಾತ್ರಿ ನಮ್ಮೊಂದಿಗೆ ಮಲಗಲು ಬರುವಂತೆ ಕೇಳಿಕೊಂಡರು. ಕಾಶ್ಮೀರ ಕೊಳ್ಳದಾದ್ಯಂತ ಪಂಡಿತರ ಹತ್ಯೆ ನಡೆಯುತ್ತಿರುವ ಬಗ್ಗೆ ಸತೀಶ್ ವಿವರಿಸುತ್ತಿದ್ದರು.
ಅಷ್ಟರಲ್ಲಿ...
ಮನೆ ಹೊರಗಡೆ ನಗುವಿನ ಕೇಕೆ. ಯಾರೋ ಏನೋ ಹೇಳುತ್ತಿದ್ದರು, ಅದಕ್ಕೆ ಪ್ರತಿಕ್ರಿಯೆಯಾಗಿ ಉಳಿದವರು ಜೋರಾಗಿ ನಗುತ್ತಿದ್ದರು. ನಿಧಾನಕ್ಕೆ ಕಿಟಕಿ ಬಳಿ ಬಂದು ನೋಡಿದೆವು. ಹುಡುಗರ ಗುಂಪು. ಕೆಲವರು ಸಿಗರೇಟ್ ಸೇದುತ್ತಿದ್ದರು. ಅವರಲ್ಲಿ ಒಂದಷ್ಟು ಮಂದಿ ನನ್ನ ಗುರುತಿನವರೇ. ಅವರೊಂದಿಗೆ ಕ್ರಿಕೆಟ್ ಆಡಿದ್ದೆ. ಅವರ ರಿಂಗ್ ಲೀಡರ್ ನಮ್ಮ ಮನೆ ಸಮೀಪ ವಾಸಿಸುತ್ತಿದ್ದವನೇ ಆಗಿದ್ದ. 'ಅವರು ಅವನಿಗೆ ರಾಕೆಟ್ ಉಡಾಯಿಸುವುದನ್ನೂ ಕಲಿಸುತ್ತಾರೆ' ಉಗ್ರಗಾಮಿ ತಂಡ ಸೇರಿಕೊಂಡಿದ್ದ ತನ್ನ ಕಸಿನ್ ಬಗ್ಗೆ ಒಬ್ಬಾತ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ. 'ಈಗ ಈ ಮನೆಗಳನ್ನು ಹಂಚಿಕೊಳ್ಳೋಣ' 'ಏಯ್, ಹುಡುಗಿಯರಿಲ್ಲದೆ ಬರೀ ಮನೆಯನ್ನಷ್ಟೇ ಹಂಚಿಕೊಳ್ಳೋದು ಹೇಗೆ?'. ಮತ್ತೆ ನಗುವಿನ ಅಟ್ಟಹಾಸ. ರಿಂಗ್‌ಲೀಡರ್ ನಮ್ಮ ಮನೆಯತ್ತ ಬೆಟ್ಟು ಮಾಡಿ ಹೇಳಿದ, 'ಈ ಮನೆ ನನಗಿರಲಿ.' 'ಗುಡ್ ಚಾಯ್ಸ್, ಭಯ್ಯಾ ಗುಡ್ ಚಾಯ್ಸ್' ಜತೆಗಿದ್ದವರು ಮೆಚ್ಚುಗೆ ಸೂಚಿಸಿದರು. ಕರ್ಟನ್ ಅಪ್ಪನ ಹಿಡಿತದಿಂದ ತಪ್ಪಿತು. ಅಪ್ಪ ನಡುಗುತ್ತಿದ್ದರು. ಮರು ಸೆಕೆಂಡ್‌ನಲ್ಲಿ ಪಕ್ಕದ ರಾಜ್‌ಧನ್ ಅವರ ಮನೆಯತ್ತ ಕಲ್ಲು ಎಸೆದ, ಕಿಟಕಿ ಗಾಜುಗಳು ಪುಡಿಪುಡಿಯಾದ ಸದ್ದು ಕಿವಿಗೆ ಅಪ್ಪಳಿಸಿತು.
'ಎಲ್ಲವೂ ಮುಗಿಯಿತು. ನಾವು ಇನ್ನು ಕಾಶ್ಮೀರ ತೊರೆಯಲೇಬೇಕು' ಅಪ್ಪ ಹೇಳಿದರು. ಅಮ್ಮ ಒಂದಷ್ಟು ಮೇಣದಬತ್ತಿ ತಂದರು. ಆ ಮಂದ ಬೆಳಕಿನಲ್ಲಿಯೇ ಚಿತ್ರಾನ್ನ ಮಾಡಿದರು. ಬೇಗ ತಿಂದು ಮುಗಿಸಿದೆವು. ಮರುದಿನ ಮುಂಜಾನೆ ಬೇಗ ಹೊರಡಬೇಕೆಂದು ಅಪ್ಪ ಹೇಳಿದರು. ಆವತ್ತು ಸಿಕ್ಕಾಪಟ್ಟೆ ಹಿಮ. ಒಬ್ಬರ ಮುಖ ಮತ್ತೊಬ್ಬರಿಗೆ ಕಾಣಿಸದಷ್ಟು. 'ಹೊರಡುವುದು ಸುರಕ್ಷಿತವೆ ನೋಡಿ ಬರುವೆ' ಎಂದ ಅಪ್ಪ ಹೊರಗಡಿ ಇಟ್ಟರು. ಎಲ್ಲ ಕೋಣೆಗಳಿಗೂ ಗಡಿಬಿಡಿಯಲ್ಲೇ ಬೀಗ ಹಾಕಿದೆವು. ಮುಖ್ಯದ್ವಾರಕ್ಕೆ ಕಾಗದ ಅಂಟಿಸಿದ್ದು ಕಂಡಿತು. ಮೇಲ್ಭಾಗದಲ್ಲಿ 'ಒಓಔಋ' ಎಂದೂ, ಉಳಿದಂತೆ ಉರ್ದುವಿನಲ್ಲಿಯೂ ಬರೆಯಲಾಗಿತ್ತು. ಅದು, ತಕ್ಷಣ ಕಾಶ್ಮೀರ ಕೊಳ್ಳ ತೊರೆಯುವಂತೆ ಪಂಡಿತರಿಗೆ ನೀಡಿದ್ದ ಎಚ್ಚರಿಕೆ; ಇಲ್ಲದಿದ್ದರೆ ಕೊಲ್ಲುವ ಬೆದರಿಕೆ. ಜೆಕೆಎಲ್‌ಎಫ್ ಸಾಯಿಸಲು ಉದ್ದೇಶಿಸಿದ್ದ ಪಂಡಿತರ ಪಟ್ಟಿ.
ರಸ್ತೆಯಲ್ಲಿ ಯಾರೂ ಇಲ್ಲವೆಂಬುದನ್ನು ಖಾತ್ರಿಪಡಿಸಿಕೊಂಡು ಗೇಟಿನಿಂದ ಹೊರಕ್ಕೆ ಬಂದೆವು. ಅಂಗಳದಿಂದ ಆಚೆ ಹೆಜ್ಜೆ ಇಡುವ ಮುನ್ನ ಅಪ್ಪ ಅದೇನೋ ಪಠಿಸಿದ್ದು ಮಾತ್ರ ನನಗೆ ನೆನಪಿದೆ. ಎಲ್ಲರ ಮನಸ್ಸುಗಳೂ ಭಾರ. ಮನೆಯನ್ನೊಮ್ಮೆ ದಿಟ್ಟಿಸಿ ನೋಡಿದೆವು. ಹೊಟ್ಟೆಯಲ್ಲೇನೋ ಸಂಕಟ, ತಳಮಳ. ಹುಟ್ಟಿ, ಆಡಿ, ಬೆಳೆದ ಮನೆಯನ್ನು ಬಿಟ್ಟು ನಿರ್ಗತಿಕರಾಗಿ ಬೀದಿಯಲ್ಲಿ ನಿಂತಿದ್ದೆವು. ಅಪ್ಪನ ಕಣ್ಣುಗಳಲ್ಲಂತೂ ಧಾರಾಕಾರ ನೀರು. ಅಮ್ಮ ಮಂಜಿನಂತೆ ತಣ್ಣಗಿದ್ದಳು.
ನನಗೆ ಆಗ 14 ವರ್ಷ. ನಾವು ನಿರಾಶ್ರಿತರು ಎನ್ನುವುದು ಆಗಲೇ ತಿಳಿದಿತ್ತು. ಆದರೆ, ನಾವು ಮತ್ತೆಂದೂ ಈ ಮನೆಗೆ ಮರಳುವುದು ಸಾಧ್ಯವೇ ಇಲ್ಲ ಎನ್ನುವ ಕಟುವಾಸ್ತವವನ್ನು ಊಹಿಸಲು ಮಾತ್ರ ನಾನು ಅಸಮರ್ಥನಾಗಿದ್ದೆ.
= -ರಾಹುಲ್ ಪಂಡಿತ
ಅನು: ರಾಜೇಶ ಮುಂಡಿಗೇಸರ