ವೃತ್ತಿಯಿಂದ ಸಿವಿಲ್ ಎಂಜಿನಿಯರ್ ಆಗಿರುವ ಚಂದ್ರಪ್ರಭ ಕಠಾರಿಯವರು ಕಟ್ಟಡದ ಕೆಲಸವನ್ನು ಎಷ್ಟು ಕುಶಲತೆಯಿಂದ ನಿರ್ವಹಿಸುತ್ತಾರೋ ಅಷ್ಟೇ ಕುಶಲತೆಯಿಂದ ಇಲ್ಲಿ ಕಥೆಗಳನ್ನೂ ನಿರ್ಮಿಸಿರುವರು. ಪಾತ್ರಗಳ ನಿರ್ಮಾಣ, ಸನ್ನಿವೇಶಗಳ ನಿರ್ಮಾಣ ಕ್ಲೈಮ್ಯಾಕ್ಸ್ ನಿರ್ಮಾಣ ಹೀಗೆ ಪ್ರತಿಯೊಂದರಲ್ಲೂ ಅವರ ಕುಸುರಿಗಾರಿಕೆಯನ್ನು ಇಲ್ಲಿಯ ಹನ್ನೆರಡು ಕಥೆಗಳಲ್ಲಿ ಗುರುತಿಸಬಹುದು. ಭೂಮಾಫಿಯಾ, ಕೂಲಿಕಾರ್ಮಿಕರ ಶೋಷಣೆ, ಮಧ್ಯವರ್ತಿಗಳ ಕುತಂತ್ರಗಳು, ವಂಚನೆಗೊಳಗಾಗುವ ಗ್ರಾಹಕರು ಇವು ಅವರ ವೃತ್ತಿ ಅನುಭವದ ಕಾರಣದಿಂದಾಗಿ ಸಮರ್ಥವಾಗಿ ಚಿತ್ರಿತವಾಗಿವೆ. ನಗರ ಕೇಂದ್ರಿತ ಜೀವನದ್ರವ್ಯ ಅವರ ಮೂಲ ಆಸಕ್ತಿ. ಅವರ ಕಥೆಗಳನ್ನು ಓದಿಕೊಂಡು ನೀವು ಬೆಂಗಳೂರಿನ ರಸ್ತೆಗಳಲ್ಲಿ, ಬಡಾವಣೆಗಳಲ್ಲಿ ಸುತ್ತಾಡಿದರೆ ಕಥೆಗಳಲ್ಲಿಯ ಪಾತ್ರಗಳೊಂದಿಗೆ ನಿಮ್ಮ ಮುಖಾಮುಖಿಯಾಗಬಹುದು. ಬೆಂಗಳೂರಿನ ಕಳೆದುಹೋದ ಮಾನವೀಯ ಮುಖಗಳು, ಆಪ್ತವೆನಿಸುವ ನೆನಪುಗಳು ಈ ಕಥೆಗಳ ಮೂಲಕ ಪ್ರಕಟವಾಗುತ್ತವೆ. ಒಂದು ಸುಭಿಕ್ಷ ಸಮಾಜವಾಗಬಹುದಾಗಿದ್ದ ಸಾಧ್ಯಗಳನ್ನು ಅದರೊಳಗಿನ ವ್ಯಕ್ತಿಗಳೇ ಹೇಗೆ ಹಾಳುಗೆಡಹುತ್ತಾರೆ ಎಂಬುದನ್ನು ಕಥೆಯ ಮೂಲಕವಾದರೂ ಹೇಳುವುದಕ್ಕೆ ಧೈರ್ಯಬೇಕು. ಕಠಾರಿಯವರಲ್ಲಿ ಆ ಧೈರ್ಯವಿದೆ. ಸುತ್ತು ಬಳಸಿ ಹೇಳದೆ ನೇರವಾಗಿ ಹೇಳುವ ಕಾರಣ ಅವು ಓದುಗರಿಗೆ ಆಪ್ತವಾಗುತ್ತವೆ. ಮತ್ತು ಅವರ ಒಳಗನ್ನು ದ್ರವಿಸುವ ಶಕ್ತಿಯನ್ನು ಪಡೆದುದರ ಸೂಚನೆ ಇದು.
ಪ್ರ: ಕಿಕ್ಕೇರಿ ಪಬ್ಲಿಕೇಷನ್ಸ್, ಬೆಂಗಳೂರು. ಪುಟಗಳು 162, ಬೆಲೆ ರು. 120.
ಪ್ರಸನ್ನ ಸಾಹಿತ್ಯ
ಸೋಸಲೆ ಶ್ರೀವ್ಯಾಸರಾಜ ಮಠಾಧೀಶರಾಗಿದ್ದ ಶ್ರೀವಿದ್ಯಾಪ್ರಸನ್ನತೀರ್ಥರ ಸಮಗ್ರ ಕೃತಿ ಶ್ರೇಣಿಯನ್ನು ಜಯಸಿಂಹ (ಶ್ರೀ ತಿರುಮಲೇಶ ಹರಿ ವಿಠಲದಾಸರು) ಇಲ್ಲಿ ಸಂಪಾದಿಸಿಕೊಟ್ಟಿದ್ದಾರೆ. ಹರಿದಾಸ ಪರಂಪರೆ ಮತ್ತು ಹರಿದಾಸ ಸಾಹಿತ್ಯ ರಚನೆ ಇಪ್ಪತ್ತನೆ ಶತಮಾನದಲ್ಲಿಯೂ ಮುಂದುವರಿದಿರುವುದಕ್ಕೆ ಶ್ರೀವಿದ್ಯಾಪ್ರಸನ್ನ ತೀರ್ಥರ ಕೃತಿಗಳೇ ಉದಾಹರಣೆ. 'ಪ್ರಸನ್ನ' ಅಂಕಿತದಿಂದ ಅವರು ತಮ್ಮ ಪದಗಳನ್ನು ರಚಿಸಿದ್ದಾರೆ. ವಿಶೇಷವೆಂದರೆ ಇವರು ಆಂಗ್ಲವಿದ್ಯಾಭ್ಯಾಸವನ್ನು ಮಾಡಿದವರು. ಸಾಮಾಜಿಕ ನಾಟಕಗಳನ್ನೂ ಇವರು ರಚಿಸಿದ್ದರು ಎಂಬುದು ಗಮನಾರ್ಹ. ಕೃತಿ ರಚನೆ ಮತ್ತು ಪ್ರಕಟಣೆಯ ಮುಖ್ಯ ಉದ್ದೇಶ ಪರಂಪರಾಗತವಾಗಿ ಬಂದಿರುವ ಸತ್ಸಂಪ್ರದಾಯದ ಮುಂದುವರಿಕೆ ಮತ್ತು ಭಗವತ್ಸೇವೆ. ಶ್ರೀಕೃಷ್ಣ ಮತ್ತು ಗೋಪಿಯರ ನಡುವಿನ ಸಂಭಾಷಣಾರೂಪದ ಕೀರ್ತನೆಗಳು ಶ್ರೀಗಳ ಕವಿತಾ ಚಾತುರ್ಯಕ್ಕೆ ನಿದರ್ಶನ. ಕೃಷ್ಣನ ಬಾಲಲೀಲೆಗಳು, ಭಾಗವತದ ಹಲವಾರು ಪ್ರಸಂಗಗಳು ಇವರ ಕೀರ್ತನೆಗಳಿಗೆ ವಸ್ತುವಾಗಿವೆ. ಲಾವಣಿಗಳು, ನೀತಿಪದಗಳು, ಮುಕ್ತಕಗಳನ್ನೂ ಇವರು ರಚಿಸಿದ್ದಾರೆ. ಇಲ್ಲಿಯ ಕೀರ್ತನಗಳು ಆತ್ಮಶೋಧ, ಪಶ್ಚಾತ್ತಾಪದ ಪ್ರಲಾಪ, ದೈನ್ಯ, ಧನ್ಯತೆ, ಸಮರ್ಪಣ ಭಾವಗಳನ್ನು ತೆರೆದಿಡುತ್ತವೆ. ಶ್ರೀಗಳ ಪರಿಚಯ, ಕೃತಿ ವಿಶ್ಲೇಷಣೆ ಸೇರಿದಂತೆ ವಿಸ್ತಾರವಾದ ವಿವರಗಳನ್ನು ಜಯಸಿಂಹ ಒದಗಿಸಿದ್ದಾರೆ.
ಪ್ರ: ಪರಿಮಳ ಪ್ರಕಾಶನ, ಬೆಂಗಳೂರು. ಪುಟಗಳು 812, ಬೆಲೆ ರು. 400.
ಅಥಣೀಶರ ವಚನಗಳು
ಧಣಿಗಳ್ಯಾರು ದಣಿಯುವುದಿಲ್ಲ/ ದಣಿದವರು ಧಣಿಯಾಗುವುದಿಲ್ಲವಯ್ಯಾ/ ಗಣಿಯ ಮಾಲು- ಮೇವಿನ ಪಾಲು/ ಗೋವಿನ ಹಾಲು- ಬಡವರ ಬಿಲ್ಲು/ ಕಂಡವರ ಶಾಲು- ಸರ್ಕಾರವೇ ಗೋಲ್‌ಮಾಲು/ ದಿಢೀರನೇ ಶ್ರೀಮಂತರಾಗುವರಯ್ಯ/ ಇಂದಿನ ದೊರೆಗಳು/ ಅಥಣೀಶ ಬಡವರಿಗೆಂದು ತೆರೆವುದು ನಿನ್ನ ಭಾಗ್ಯದ ಬಾಗಿಲಯ್ಯಾ!- ಇದು ಅಥಣೀಶ ಅಂಕಿತದಲ್ಲಿ ಪ್ರಭುಚನ್ನಬಸವ ಸ್ವಾಮೀಜಿ ಬರೆದಿರುವ ಒಂದು ವಚನ. ಅವರು ಬರೆದಿರುವ ಆಧುನಿಕ ವಚನಗಳ ಸಂಕಲನ 'ವಚನ ಮಾನಸ'ದಲ್ಲಿ ಇಂಥ ಜನಪರವಾದ ನಿಲುವಿನ ಪ್ರತಿಪಾದನೆಯಾಗಿದೆ. ಬಸವಾದಿ ಶರಣರ ವಚನ ಪರಂಪರೆಯ ಬಳಿಕ ಆಧುನಿಕ ಕನ್ನಡದಲ್ಲಿ ಈ ಪ್ರಕಾರವನ್ನು ಸಿದ್ದಯ್ಯ ಪುರಾಣಿಕರು ಸಮರ್ಥವಾಗಿ ಬಳಸಿಕೊಂಡಿದ್ದರು. ಇಲ್ಲಿ ಪ್ರಭುಚನ್ನಬಸವ ಸ್ವಾಮೀಜಿಯವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆಧುನಿಕ ಬದುಕಿನ ಎಲ್ಲ ಸಂವೇದನೆಗಳನ್ನು ಕ್ರಿಯೆಗಳನ್ನು ತಮ್ಮ ಪ್ರತಿಕ್ರಿಯೆಯಲ್ಲಿ ಹಿಡಿದಿಟ್ಟಿದ್ದಾರೆ. ಇಲ್ಲಿಯ ವಚನಗಳನ್ನು ಕೇಳುತ್ತಿದ್ದಂತೆ ಹಿರಿಯರೊಬ್ಬರು, ಹಿತೈಷಿಯೊಬ್ಬರು ಬಳಿ ಕುಳ್ಳಿರಿಸಿ ಕಿವಿಮಾತು ಹೇಳಿದಂತೆ ಭಾಸವಾಗದಿರದು. ಸ್ವಾಮೀಜಿಯವರು ಎಷ್ಟೊಂದು ಸಮಕಾಲೀನರಾಗಿದ್ದಾರೆ ಎಂದರೆ ಅವರು
ವರದಕ್ಷಿಣೆ ವಿರುದ್ಧ ಬರೆದಿದ್ದಾರೆ. ಹಾಗೆಯೇ ಲ್ಯಾಪ್‌ಟಾಪ್, ಐಪ್ಯಾಡ್, ಇಂಟರ್ನೆಟ್ ಇತ್ಯಾದಿಗಳ ಬಗೆಗೂ ಬರೆದಿದ್ದಾರೆ. ದೇಶ ವಿದೇಶಗಳ ಸಮಕಾಲೀನ ವ್ಯಕ್ತಿಗಳ ಪ್ರಸ್ತಾಪವೂ ಇದರಲ್ಲಿ ಬಂದಿದೆ.
ಪ್ರ: ಶ್ರೀಗುರುಚನ್ನಬಸವೇಶ್ವರ ಗ್ರಂಥಮಾಲೆ, ಅಥಣಿ. ಪುಟಗಳು 176, ಬೆಲೆ ರು. 100.
ಲಕ್ಷ್ಮಣ ಮಾಲೆ
ಕನ್ನಡದ ಸಮಕಾಲೀನ ಕವಿಗಳಲ್ಲಿ ಪ್ರಮುಖರಾದ ಬಿ.ಆರ್. ಲಕ್ಷ್ಮಣರಾವ್ ಅವರು 'ಮಯೂರ' ಮಾಸಿಕಕ್ಕೆ ಬರೆದ ವ್ಯಕ್ತಿಚಿತ್ರಗಳ ಸಂಪುಟ 'ಮಣಿಮಾಲೆ'. ತಮ್ಮ ಸಂಪರ್ಕಕ್ಕೆ ಬಂದ, ತಮ್ಮನ್ನು ತೀವ್ರವಾಗಿ ಪ್ರಭಾವಿಸಿದ, ತಮ್ಮ ಬದುಕನ್ನು ರೂಪಿಸಿದ ವ್ಯಕ್ತಿಗಳ ಬಗ್ಗೆ ಬಹುವಾದ ಪ್ರೀತಿಯಿಂದ ಎದೆತುಂಬಿ ಅವರು ಬರೆದಿದ್ದಾರೆ. ಇಲ್ಲಿ ಲಂಕೇಶರಿದ್ದಾರೆ, ವೈಎನ್ಕೆ, ಅನಂತಮೂರ್ತಿ, ಎಚ್.ಎಸ್. ವೆಂಕಟೇಶಮೂರ್ತಿ, ಬಿ.ಸಿ. ರಾಮಚಂದ್ರಶರ್ಮ ಇದ್ದಾರೆ. ಹಾಗೆಯೇ ಸಿನಿಮಾ ನಟರಾದ ಶ್ರೀನಾಥ, ಶಿವರಾಮ, ಡಾ.ರಾಜಕುಮಾರ್, ಹಾಡುಗಾರರಾದ ಸಿ.ಅಶ್ವತ್ಥ, ಶಿವಮೊಗ್ಗ ಸುಬ್ಬಣ್ಣ ಮೊದಲಾದವರ ವ್ಯಕ್ತಿಚಿತ್ರಗಳು ಹಲವು ಹೊಸ ವಿಷಯಗಳನ್ನು ಹೇಳುತ್ತವೆ. ಅವರದೇ ಕವನದ ಸಾಲು 'ಪ್ರೀತಿಯೆಂದರೆ ಹೌದೇ ಒಪ್ಪ ಓರಣ? ಅಲ್ಲವೇ ಪ್ರೀತಿ ವಿನಾ ಕಾರಣ?' ಇಲ್ಲಿ ಅಡಕಗೊಂಡಿರುವ ಎಲ್ಲ ವ್ಯಕ್ತಿಗಳ ಬಗ್ಗೆಯೂ ಲಕ್ಷ್ಮಣರಾವ್ ಅವರ ವಿನಾಕಾರಣ ಪ್ರೀತಿ ಬಿತ್ತರಗೊಂಡಿದೆ. ಇಲ್ಲಿರುವ ಕೆಲವರ ಬಗ್ಗೆ ಇನ್ನಷ್ಟು ವಿಸ್ತಾರವಾಗಿ ಬರೆಯಬಹುದಿತ್ತು ಎಂದು ಅನ್ನಿಸಬಹುದು. ಆದರೆ ಲಕ್ಷ್ಮಣರಾವ್ ಅತೀವವಾದ ಸಂಯಮವನ್ನು ಇಲ್ಲಿ ತೋರಿಸಿದ್ದಾರೆ. ಪ್ರಮಾಣ ಜ್ಞಾನ ಅವರಿಗೆ ಚೆನ್ನಾಗಿದೆ. ತಮ್ಮ ಆತ್ಮೀಯರನ್ನು ಅವರು ಕೃತಿಯಲ್ಲೂ ಏಕವಚನದಲ್ಲಿಯೇ ಸಂಬೋಧಿಸಿದ್ದಾರೆ. ಕಪಟವಿಲ್ಲದ ಬರೆವಣಿಗೆಗೆ ಲಕ್ಷ್ಮಣರಾಯರ ಈ ಕೃತಿ ಒಂದು ಉತ್ತಮ ಉದಾಹರಣೆ.
ಪ್ರ: ಅಂಕಿತ ಪುಸ್ತಕ, ಬೆಂಗಳೂರು. ಪುಟಗಳು 208, ಬೆಲೆ 150.
- ಡಾ. ವಾಸುದೇವ ಶೆಟ್ಟಿ