

ಕಿರುತೆರೆ ನಟಿ, ಲೋಕೇಶ್ ಕುಟುಂಬದ ಸೊಸೆ, ನಟ ಸೃಜನ್ ಲೋಕೇಶ್ರ ಪತ್ನಿ ಗ್ರೀಷ್ಮಾ ನೃತ್ಯಲೋಕಕ್ಕೆ ಕಾಲಿಟ್ಟ ಅಪರೂಪದ ಘಳಿಗೆ ಅದು. ತಮ್ಮ ಗುರುಗಳಾದ, ಪೂಜಾ ತುಷಾರ್ ಡ್ಯಾನ್ಸ್ ಕಂಪನಿಯ ತುಷಾರ್ ಭಟ್ ಮತ್ತು ಪೂಜಾಭಟ್ರ ಕಥಕ್ ರಂಗಮಂಚ ಪ್ರವೇಶದ ಕಾರ್ಯಕ್ರಮದಲ್ಲಿ ಗ್ರೀಷ್ಮಾ ಕೂಡಾ ಕಳೆದ ಗುರುವಾರ ಕಾಲಿಗೆ ಗೆಜ್ಜೆ ಕಟ್ಟಿ ಹೆಜ್ಜೆ ಇಟ್ಟರು.
ನೃತ್ಯರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಮಾಯಾ ರಾವ್, ಉಷಾ ದತ್ತಾರ್, ವೈಜಯಂತಿ ಕಾಶಿ, ನಟಿಯರಾದ ಜಯಂತಿ, ಹೇಮಾಚೌಧರಿ ಸಮ್ಮುಖದಲ್ಲಿ ಗ್ರೀಷ್ಮಾರ ರಂಗಪ್ರವೇಶ ನೆರವೇರಿತು.
ಫೆಬ್ರವರಿ 7ರಂದು ರಂಗಪ್ರವೇಶ ಮಾಡಿದ ಗ್ರೀಷ್ಮಾರಿಗೆ ಅಂದು ಇನ್ನೊಂದು ಸಂಭ್ರಮ ಕೂಡಾ ಕಾದಿತ್ತು. ಕಾಕತಾಳೀಯ ಎಂಬಂತೆ ಅಂದು ನಟ ಸೃಜನ್ರೊಂದಿಗೆ ಅವರ ವಿವಾಹವಾಗಿ 3 ವರ್ಷಗಳು. ಹಾಗಾಗಿ ರಂಗಪ್ರವೇಶ ಮತ್ತು ವಿವಾಹ ವಾರ್ಷಿಕೋತ್ಸವದ ಡಬಲ್ಸಂಭ್ರಮ ಗ್ರೀಷ್ಮಾ ಅವರದ್ದು. ಹಾಗಾಗಿ, ಗೆಜ್ಜೆ ಕಟ್ಟಿ ನೃತ್ಯಮಾಡುವ ಮೊದಲ ಖುಷಿ ಮತ್ತು ಸೃಜನ್ರ ಬಾಳಸಂಗಾತಿಯಾಗಿ ಹೆಜ್ಜೆ ಇಟ್ಟು ಮೂರು ವರ್ಷ ಪೂರೈಸಿದ ಖುಷಿ ಅವರಿಗೆ.
ನಟನೆ, ನಟನೆಯಿಂದ ಗಾಯನ, ಗಾಯನದಿಂದ ನೃತ್ಯ... ಹೀಗೆ ಬೆಳೆಯುತ್ತಾ ಹಲವು ವಿವಿಧತೆಗಳು ಬೆರೆತ ಗ್ರೀಷ್ಮಾರ ಕಲಾಸಕ್ತಿ ನಿರಂತರ. ಬೆಂಗಳೂರಿನ ಹವ್ಯಾಸಿ ಕಲಾರಂಗದ ಕಲಾವಿದರಾದ ಉದಯಶಂಕರ ಮತ್ತು ಮಂಜುಳಾ ದಂಪತಿ ಮಗಳು ಗ್ರೀಷ್ಮಾ ಶಾಲಾದಿನಗಳಲ್ಲೇ ನಾಟಕಾಭಿನಯದ ಅನುಭವ ಪಡೆದುಕೊಂಡವರು. ಅಲ್ಲಿಂದ ಮುಂದೆ ಕಿರುತೆರೆಯ 'ಗುಪ್ತಗಾಮಿನಿ'ಯ 'ಸಾಕ್ಷಿ'ಯಂಥ ಸೂಕ್ಷ್ಮ ಪಾತ್ರಗಳಲ್ಲಿ ಕಾಣಿಸಿಕೊಂಡಾಗ ಗ್ರೀಷ್ಮಾ ಇನ್ನೂ ಕಾಲೇಜು ಕನ್ಯೆ. ಅನಂತ್ನಾಗ್ರ ಮಗಳಾಗಿ 'ಪ್ರೀತಿ ಇಲ್ಲದ ಮೇಲೆ' ಧಾರಾವಾಹಿಯ ಪ್ರಬುದ್ಧ ಪಾತ್ರದಲ್ಲಿ ಅಭಿನಯಿಸಿದ ಈ ಹುಡುಗಿ ನಂತರ ಅದಕ್ಕೆ ತದ್ವಿರುದ್ಧವಾಗಿ ತುಂಟ ಹುಡುಗಿಯಾಗಿ ಕಾಣಿಸಿಕೊಂಡು ಹೆಸರು ಮಾಡಿದ್ದು 'ಜೋಗುಳ' ಧಾರಾವಾಹಿಯಲ್ಲಿ. ನಟನೆಯಲ್ಲಿ ಬಳಸಿಕೊಂಡ ತಮ್ಮ ತೀಕ್ಷ್ಣನೋಟ ಮತ್ತು ತುಂಟನಗುವನ್ನು ನೃತ್ಯದಲ್ಲೂ ಅಳವಡಿಸಿಕೊಳ್ಳುವ ಮೊದಲ ಪ್ರಯತ್ನದಲ್ಲಿ ಈಗ ಮೊದಲ ಹೆಜ್ಜೆ ಇಟ್ಟಿದ್ದಾರೆ ಗ್ರೀಷ್ಮಾ. 2005ರಲ್ಲಿ, ನಿರುಪಮಾ- ರಾಜೇಂದ್ರ ಆಶೀರ್ವಾದದೊಂದಿಗೆ ಕಥಕ್ನ ಸ್ವರತಾಳಕ್ಕೆ ಗೆಜ್ಜೆ ಕಟ್ಟಿ ಪುಟ್ಟ ಹೆಜ್ಜೆಗಳನ್ನಿಡಲಾರಂಭಿಸಿದ ಅವರು ಈಗ ತುಷಾರ್ ಭಟ್ರ ಪ್ರೀತಿಯ ಶಿಷ್ಯೆಯಾಗಿ ರಂಗಪ್ರವೇಶ ಮಾಡಿದ್ದಾರೆ.
ಕಳೆದ ಗುರುವಾರ ಸಂಜೆ ನಟಿ ಅಪರ್ಣಾ ಅವರ ನಿರೂಪಣೆಯೊಂದಿಗೆ ಶುರುವಾದ ಸುಂದರ ಸಮಾರಂಭದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ, ಲೋಕೇಶ್ ಕುಟುಂಬದ ಇನ್ನೊಂದು ಪ್ರತಿಭೆಯ ಅನಾವರಣಕ್ಕೆ ಸಾಕ್ಷಿಯಾಯಿತು.