ಓಂ ಮಣಿ ಪದ್ಮೇ ಹಂ

ಓಂ ಮಣಿ ಪದ್ಮೇ ಹಂ
Updated on: 

ನಾವು ಅಲ್ಲಿ ಹಾಗೆ ಕುಳಿತು ಕಾಯುತ್ತಿರುವಂತೆಯೇ, ಹತ್ತು ಹದಿನೈದು ವಿದೇಶಗರನ್ನು ತುಂಬಿಕೊಂಡ ಟಾಟಾ ಟ್ರಾವೆಲ್ಲರ್ ಗಾಡಿಯೊಂದು ಬಂದು ನಿಂತಿತು. ಅದರಲ್ಲಿದ್ದವರೆಲ್ಲ ಇಳಿದರು. ಹೆಚ್ಚಿನವರು ಹರೆಯದ ಹುಡುಗ-ಹುಡುಗಿಯರು. ಯಾವ ನಾಚಿಕೆಯೂ ಇಲ್ಲದೇ ಮೇಲುಡುಪುಗಳನ್ನು ಕಳಚಿಯೇ ಬಂದಿದ್ದ ಅವರು, ಬೆಟ್ಟದ ಮೇಲಿಂದ ಬರುತ್ತಿದ್ದ, ಪೈಪ್ ಮೂಲಕ ಸುರಿಯುತ್ತಿದ್ದ ತಂಪು ನೀರಿಗೆ ತಮ್ಮನ್ನು ತಾವು ಒಡ್ಡಿಕೊಂಡರು. ಸಂಜೆ ಸೂರ್ಯನ ಕೆಂಪುಕಿರಣಗಳಿಂದ ಅವರ ಮೈ ಗೋಧಿನಾಗರಗಳಂತೆ ಹೊಳೆಯುತ್ತಿದ್ದವು. ಮೈಗೆ ಬಿದ್ದು ಸುತ್ತಮುತ್ತಲೂ ಚಿಮ್ಮುತ್ತಿದ್ದ ನೀರ ಹನಿಗಳಲ್ಲೂ ಕಿರಣ ಪ್ರತಿಫಲಿಸಿ ರಾಗರಂಜಿತ ಆವರಣವನ್ನೇ ಏರ್ಪಡಿಸಿದವು. ಅತ್ತ ನೋಡಬೇಕೆಂದು ಆಶೆ, ಮರ್ಯಾದೆಯ ಭಯ. ಸ್ಥಳೀಯರು ಮಾತ್ರ ಯಾವ ಮುಜುಗರಕ್ಕೂ ಒಳಗಾದಂತಿರಲಿಲ್ಲ. ಪ್ರಿಯಾ ಹೇಳಿದಳು, 'ಅವರನ್ನು ನೋಡಿದರೆ ನಂಗೂ ಹಾಗೇ ಮುಕ್ತವಾಗಿ ಮೀಯಬೇಕು ಎಂಬ ಆಶೆಯಾಗ್ತಿದೆ.' ತಣ್ಣೀರು, ಜ್ವರ, ಎಂದೆಲ್ಲ ಹೇಳಿ ಸುಮ್ಮನಾದರೂ, ಅದು ದ್ರಾಕ್ಷಿ ಹುಳಿಯ ಕತೆಯೇ ಆಗಿತ್ತು. ನಮ್ಮ ಆಶೆಗಳನ್ನು ಬಚ್ಚಿಟ್ಟುಕೊಳ್ಳುವುದನ್ನು ಸಂಸ್ಕೃತಿ ನಮಗೆ ಕಲಿಸಿರುವುದು ಇಂದು ನಿನ್ನೆ ಅಲ್ಲವಲ್ಲ. ಅತ್ತ ಪುರಾತನ ವಿಹಾರ, ಇತ್ತ ಪ್ರವಾಸಿಗರ ವಿಹಾರ... ಎರಡನ್ನೂ ನೋಡುತ್ತ ಆ ಸಂಜೆ ಅನಿಸಿದ್ದು 'ಇಲ್ಲಿ ಲೌಕಿಕವೂ ಅಲೌಕಿಕವೂ ಜತೆಯಾಗಿಯೇ ಹೊಳೆಯುತ್ತಿವೆ.'
ಬೌದ್ಧಧರ್ಮಕ್ಕೆ ಯುರೋಪಿಯನ್ನರು ಮಾರುಹೋಗಿರುವುದು ಅಷ್ಟಿಷ್ಟಲ್ಲ. ಹಿಂದೂ ಧರ್ಮದಂತೆಯೇ ಅದೂ ಕೂಡ, ಸಾವಿರಾರು ದೈವದೇವತೆಗಳ, ಸಾವಿರಾರು ಸ್ಫೂರ್ತಿಯ, ಲಕ್ಷಾಂತರ ಆಚರಣೆಗಳ ಆಡುಂಬೊಲ. ತಮಗಿಂತ ಅನ್ಯವಾದುದನ್ನೂ, ವಿಶಿಷ್ಟವಾದುದನ್ನೂ ಅರಸಿ ಹೊರಡುವ ವಿದೇಶಿಗರಿಗೆ ಟಿಬೇಟ್ ಮತ್ತು ಹಿಮಾಲಯಗಳು ನಮಗೆ ಕಾಶಿ-ಮಾನಸ ಸರೋವರ ಇದ್ದಂತೆ. ಇಂತಹ ನೂರಾರು ಕುತೂಹಲಿ ಯಾತ್ರಿಕರನ್ನು ನಮ್ಮ ಪ್ರವಾಸದ ವೇಳೆ ನಾವು ಕಂಡೆವು. ಇವರಲ್ಲಿ ಹೆಚ್ಚಿನವರು ಒಬ್ಬಂಟಿಗರಾಗಿ ಊರೂರು ಸುತ್ತುತ್ತಿರುತ್ತಾರೆ. ಅವರ ಬೆನ್ನುಗಳಲ್ಲಿ ಭಾರವಾದ ರಕ್‌ಸಾಕ್, ಕೈಗಳಲ್ಲಿ ಟ್ರಾವೆಲ್ ಗೈಡ್ ಮತ್ತು ಕ್ಯಾಮರಾ ಕಡ್ಡಾಯ. ಏಕಾಂತದ ಸ್ಥಳಗಳಲ್ಲಿ ಧ್ಯಾನಸ್ಥರಾಗಿ ಕುಳಿತಿರುವುದನ್ನೂ ಕಾಣಬಹುದು. ಬಿಡುವಿನ ವೇಳೆಯಲ್ಲಿ ಯಾವುದಾದರೂ ಬೆಸ್ಟ್ ಸೆಲ್ಲರ್ ಓದುತ್ತಿರುತ್ತಾರೆ. ನಾನು ನೋಡಿದ ಹೆಚ್ಚಿನವರ ಕೈಗಳಲ್ಲಿ 'ಫಿಫ್ಟಿ ಶೇಡ್ಸ್ ಆಫ್ ಗ್ರೇ'ಎಂಬ ಮೂರನೇ ದರ್ಜೆಯ ಲೈಂಗಿಕ ಕಾದಂಬರಿ ಇತ್ತು. ಅವರ ಯಾತ್ರೆಯ ಉದ್ದೇಶಕ್ಕೂ ಅವರು ಓದುತ್ತಿರುವುದಕ್ಕೂ ಸಂಬಂಧವೇ ಇದ್ದಂತಿರಲಿಲ್ಲ.
ತುಂಬಾ ಮಂದಿ ಸ್ಪಿಟಿ ಕಣಿವೆಯಲ್ಲಿ ಟ್ರೆಕ್ಕಿಂಗ್‌ಗಾಗಿ ಬರುತ್ತಾರೆ. ಇಲ್ಲಿನ ನದಿ ಕಣಿವೆಗಳ ನಡುವೆ, ಎತ್ತರದ ಶಿಖರಗಳ ಅಂಚಿನಲ್ಲಿ, ಪಾಸ್‌ಗಳ ಮೂಲಕ ಸಾವಿರಾರು ಚಾರಣ ಮಾರ್ಗಗಳಿವೆ. ಒಮ್ಮೆ ಮೂಲ ನೆಲೆಯಿಂದ ಹೊರಟರೆ ಗುರಿ ಸೇರುವವರೆಗೂ ಮತ್ತೆ ಯಾವ ಸಂಪರ್ಕಗಳೂ ಇಲ್ಲದ ಬೆಂಗಾಡು. ಬೆನ್ನ ಹೊರೆಗಳನ್ನು ಹೊರಲು ಬಾಡಿಗೆ ಕತ್ತೆ, ಕುದುರೆಗಳು. ಸ್ಥಳೀಯ ಮಾರ್ಗದರ್ಶಕರು. ಈ ಚಾರಣಗಳು ದಿನಗಟ್ಟಲೆ, ತಿಂಗಳುಗಟ್ಟಲೆ ಇರುತ್ತವೆ. ಸ್ಪಿಟಿ ಇಂತಹ ರಿಮೋಟ್ ದಾರಿಗಳಿಗೆ ಪ್ರಸಿದ್ಧ. ಇಲ್ಲಿ ಇನ್ನೂ ಲೇಹ್, ಲಡಾಕ್‌ನ ದಟ್ಟಣೆ ಇಲ್ಲವಾದುದರಿಂದ ನಿಜವಾದ ಏಕಾಂತವಿದೆ. ಜುಲೈಯಲ್ಲಿ ಹಿಮ ಕರಗುತ್ತಾ ಬಂದು ಆಗಸ್ಟ್ ವೇಳೆಗೆ ಪಾಸ್‌ಗಳೆಲ್ಲ ಮುಕ್ತವಾಗುತ್ತವೆ. ಆಗಸ್ಟ್‌ನಿಂದ ಅಕ್ಟೋಬರ್‌ವರೆಗೆ ಸುರಕ್ಷಿತ ನಡಿಗೆ ಬಯಸುವವರಿಗೆ ಪ್ರಶಸ್ತ ಕಾಲ. ನಂತರ ಜೂನ್‌ವರೆಗೆ ಎಲ್ಲ ಹಾದಿಗಳೂ ಹಿಮದಿಂದ ಮುಚ್ಚಿಹೋಗುತ್ತದೆ. ನುರಿತ ಪರ್ವತಾರೋಹಿಗಳಲ್ಲದವರನ್ನು ಹೋಗಲು ಬಿಡುವುದಿಲ್ಲ.
ನಾವಿಲ್ಲಿದ್ದಾಗ ಆಸ್ಟ್ರೇಲಿಯಾದವನೊಬ್ಬನ ಪರಿಚಯವಾಯ್ತು. ಆತನ ಬಳಿ ದೊಡ್ಡದೊಂದು ಕ್ಯಾರವಾನ್ ಇತ್ತು. ಅದನ್ನು ಓಡಿಸಿಕೊಂಡು ಇಡೀ ಉತ್ತರ ಭಾರತ ಸುತ್ತಿದ್ದಾನೆ. ನಮಗೆ ಕಝಾ-ತಾಬೋ ದಾರಿಗಳಲ್ಲೂ, ಚಂದ್ರತಾಲ್‌ನ ರಾತ್ರಿಯ ಕ್ಯಾಂಪ್ ಬಳಿಯಲ್ಲೂ ಸಿಕ್ಕಿದ. ಆತನ ಜತೆಗೊಂದು ಲ್ಯಾಬ್ರಡಾರ್ ನಾಯಿ. ಆತನ ಅಡುಗೆ, ಊಟ, ನಿದ್ದೆ, ಓದು, ಪ್ರಯಾಣ ಎಲ್ಲವೂ ವ್ಯಾನ್‌ನಲ್ಲಿಯೇ. ಆತ ಡ್ರೈವ್ ಮಾಡುತ್ತಿರುವಾಗ ನಾಯಿ ಎದುರಿನ ಸೀಟ್‌ನಲ್ಲಿ ಕುಳಿತು ತದೇಕವಾಗಿ ನಿಸರ್ಗ ನೋಡುತ್ತಿರುತ್ತಿತ್ತು. ಜಾಲಿ ಮನುಷ್ಯನಂತೆ ಕಂಡ ಈತ ಚಂದ್ರತಾಲ್‌ನ ಕೊರೆಯುವ ಚಳಿಯ ಮುಂಜಾನೆ ಬಿಯರ್ ಕುಡಿಯುತ್ತ ಕುಳಿತಿದ್ದ.
=
ಹಿಂದೂಗಳಿಗೆ ಹೇಗೋ ಹಾಗೆಯೇ, ಬೌದ್ಧರಿಗೂ 'ಓಂ'ಕಾರವು ಪವಿತ್ರವಾದದ್ದು. ನೀವಿಲ್ಲಿ ಎಲ್ಲಿ ಹೋದರೂ 'ಓಂ ಮಣಿ ಪದ್ಮೇ ಹಂ' ಎಂಬ ಮಂತ್ರವನ್ನು ನೋಡುತ್ತೀರಿ, ಕೇಳುತ್ತೀರಿ, ಅನುಭವಿಸುತ್ತೀರಿ. ಅದರ ಸರಳವಾದ ಅರ್ಥ 'ಮಣಿಯು ತಾವರೆಯಲ್ಲಿದೆ' ಎಂಬುದಷ್ಟೇ. ಅನ್ನಮಯ ದೇಹ ಹಾಗೂ ಮನಸ್ಸುಗಳಿಂದ ಆವೃತವಾದ ನನ್ನ ವಿವೇಕ, ಪ್ರಜ್ಞೆಗಳನ್ನು ಜಾಗೃತಗೊಳಿಸಿಕೊಳ್ಳುತ್ತೇನೆ ಎಂಬುದು ಅದರ ಧ್ವನಿ. ರಿಸರ್ಚ್ ಮಾಡಬಯಸುವವರಿಗೆ ಇದರ ಕುರಿತು ರೀಮುಗಟ್ಟಲೆ ವಿಷಯ ಲಭ್ಯವಿದೆ.
ಟಿಬೆಟಿಯನ್ ಬೌದ್ಧರ ನಂಬಿಕೆ, ಆಚರಣೆಗಳೂ ವಿಶಿಷ್ಟ. ಮನೆ, ವಿಹಾರಗಳ ಮೇಲೆ ಬಣ್ಣದ ಬಾವುಟಗಳನ್ನು ಹಾರಿಸಿರುತ್ತಾರೆ. ಅವು ತಮ್ಮ ಪ್ರಾರ್ಥನೆಗಳನ್ನು ದೈವಕ್ಕೆ ತಲುಪಿಸಲೂ, ಮನೆಯಲ್ಲಿ ಎಷ್ಟು ಸದಸ್ಯರಿದ್ದೇವೆಂಬುದನ್ನು ಇತರರಿಗೆ ತಿಳಿಸಲೂ ಅವರು ಕಂಡುಕೊಂಡ ದಾರಿ. ಹಿಂದೆಲ್ಲ ವರ್ಷಪೂರ್ತಿ ಹಿಮ ಎಲ್ಲೆಡೆ ಮುಸುಕಿದಾಗ, ಆ ಅಪಾರ ಧವಳ ರಾಶಿಯಲ್ಲಿ ಜನವಸತಿಯ ಸ್ಥಳವನ್ನು ದೂರಕ್ಕೆ ಸಾರಿ ಹೇಳಲೊಂದು ಗುರುತೂ ಬೇಕಿತ್ತಲ್ಲ! ಬಾವುಟಗಳ ಮೇಲೆಲ್ಲ ಮಂತ್ರಗಳಿರುತ್ತವೆ.
ಧ್ಯಾನಕ್ಕೆ ಕುಳಿತಾಗ, ಪ್ರಾರ್ಥನಾಚಕ್ರಗಳನ್ನು ಹಿಡಿದುಕೊಂಡಿರುತ್ತಾರೆ. ಅದರೊಳಗೆ ಮಂತ್ರಗಳು ಬರೆದ ಕಾಗದದ ಸುರುಳಿ. ನಾವು ರುದ್ರಾಕ್ಷಿ ಮಾಲೆ ತಿರುಗಿಸಿದಂತೆ ಅವರ ಚಕ್ರದ ಪ್ರದಕ್ಷಿಣೆ ಪಥ. ವಿಹಾರದೊಳಗೆ ಹೋಗಿ ಬರುವಾಗಲೂ ಅಲ್ಲಿ ನೆಟ್ಟ ದೊಡ್ಡ ಪ್ರೇಯರ್ ರೀಲ್‌ಗಳನ್ನು ತಿರುಗಿಸಲಾಗುತ್ತದೆ ಎಂದು ಮೊದಲೇ ಹೇಳಿದ್ದೇನೆ.
ದಾರಿಯ ನಡುವೆ ವೃತ್ತಗಳಂತೆ ಕಲ್ಲುಗುಪ್ಪೆಗಳಿರುತ್ತವೆ. ಎಲ್ಲರೂ ಅವುಗಳನ್ನು ಗೌರವದಿಂದ ಬಳಸಿಕೊಂಡು ಹೋಗುತ್ತಾರೆ. ರಾಶಿ ಹಾಕಿದ ಕಲ್ಲುಗಳಲ್ಲಿ ಮಂತ್ರಗಳು ಕೆತ್ತಿರುತ್ತವೆ. ಅವನ್ನು ನೋಡಿದಾಗಲೆಲ್ಲಾ ನನಗೆ ನೆನಪಾಗುತ್ತಿದ್ದುದು ಪಾನ್ ನಳಿನ್ ನಿರ್ದೇಶನದ 'ಸಂಸಾರ' ಚಲನಚಿತ್ರದ ದೃಶ್ಯ. ಸಂಸಾರಜೀವನದ ಬಗ್ಗೆ ಸಂದಿಗ್ಧಕ್ಕೊಳಗಾದ ನಾಯಕನಿಗೆ ಈ ಕಲ್ಲುರಾಶಿಯಲ್ಲಿ ಕಾಣುವ ಕೆತ್ತನೆ- 'ನೀರಿನ ಹನಿಯೊಂದು ಆವಿಯಾಗದಂತೆ ನೀನು ಹೇಗೆ ರಕ್ಷಿಸಬಲ್ಲೆ?' ಚಿತ್ರದ ಕೊನೆಯಲ್ಲಿ ಅದೇ ಕಲ್ಲಿನ ಇನ್ನೊಂದು ಬದಿಯಲ್ಲಿ ನಾಯಕನಿಗೆ ಕಾಣುವ ಸೂತ್ರ- 'ಹನಿಯನ್ನು ಅಗಾಧ ಕಡಲಿಗೆ ಎಸೆಯುವ ಮೂಲಕ!' ನಾಯಕ ಸಂಸಾರದಲ್ಲಿ ಒಂದಾಗುತ್ತಾನೋ, ತೊರೆಯುತ್ತಾನೋ?
ಮುಂದಿನ ಎರಡು ದಿನಗಳ ನಮ್ಮ ಪ್ರಯಾಣ ಮಾತ್ರ ನಮ್ಮನ್ನು ಹಿಮಾಲಯವೆಂಬ ಅಗಾಧ ರೋಮಾಂಚನದ ಕಡಲಿಗೆ ಎಸೆದು ತಮಾಷೆ ನೋಡಿತು.
(ಮುಂದಿನ ವಾರ- ಕಾಝಾದ ಕೊನೆಯ ರಾತ್ರಿ)

- ಹರೀಶ್ ಕೇರ
harishkhera@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com