ವಿವಾದಗ್ರಸ್ತ ಸರದಾರ 'ಶರದ್ ಪವಾರ್'

Updated on: 

ಈಗಿನ ಕೇಂದ್ರ ಕೃಷಿ ಮಂತ್ರಿ ಹಾಗೂ ರಾಷ್ಟ್ರೀಯತಾ ಕಾಂಗ್ರೆಸ್ಸಿನ ಅಧ್ಯಕ್ಷ ಶರದ್ ಪವಾರ್ ಅವರನ್ನು ಮುತ್ತಿಕೊಂಡಷ್ಟು ವಿವಾದಗಳು, ಆರೋಪಗಳು ಪ್ರಾಯಶಃ ಬೇರೆ ಯಾವ ರಾಷ್ಟ್ರೀಯ ರಾಜಕಾರಣಿಯನ್ನೂ ಮುತ್ತಿಕೊಂಡಿಲ್ಲ.
ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಪಕ್ಷಾಂತರ, ಸ್ವಾರ್ಥ- ಹೀಗೆ ಬಗೆಬಗೆಯ ಆರೋಪಗಳಿದ್ದರೂ, 71 ವರ್ಷದ ಹಿರಿಯ ಶರದ್ ಪವಾರ್, ಚುನಾವಣೆಯಲ್ಲಿ ಒಮ್ಮೆಯೂ ಸೋತಿಲ್ಲ.
ಕೇಂದ್ರದಲ್ಲಿ ಮಂತ್ರಿ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ, ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ, ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕ, ವಿಧಾನ ಪರಿಷತ್ತಿನಲ್ಲೂ ವಿರೋಧ ಪಕ್ಷದ ನಾಯಕರ ಸ್ಥಾನಗಳಲ್ಲಿ ಕೆಲಸ ಮಾಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಪೀಠ, ಪ್ರಧಾನಿಯ ಸ್ಥಾನಕ್ಕೂ ಶರದ್‌ಪವಾರ್ ಪ್ರಯತ್ನಿಸಿದ್ದು ಉಂಟು. ಆದರೆ ಅದು ದಕ್ಕಲಿಲ್ಲ. ಹಾಗೆಂದು ಅವರು ಸುಮ್ಮನೆ ಕೂತಿಲ್ಲ. ಬಹಿರಂಗವಾಗಿ ಅವರು ಏನೇ ಹೇಳಲಿ, ಅವರ ಅಂತರಂಗದ ಚಿಂತನೆಯೇ ಬೇರೆ ಎನ್ನುವುದು ಅವರನ್ನು ಬಲ್ಲವರಿಗೆಲ್ಲ ಗೊತ್ತು.
ರಾಜಕೀಯದಲ್ಲಿ ಅವರು ಯಾವ ಕಾಲದಲ್ಲೂ ಕುರ್ಚಿ ಇಲ್ಲದೇ ಇರಲಿಲ್ಲ. ಸುಮಾರು ಅರ್ಧ ಶತಮಾನಕ್ಕೂ ಹೆಚ್ಚಿನ ರಾಜಕೀಯದಲ್ಲಿ, ವಿಧಾನಸಭೆ, ವಿಧಾನಪರಿಷತ್ತು, ಲೋಕಸಭೆಯ ಸದಸ್ಯತ್ವವನ್ನು ಉಳಿಸಿಕೊಂಡೇ ಬಂದಿದ್ದಾರೆ. ಅವರು ಯಾವುದೇ ಪಕ್ಷದಲ್ಲಿದ್ದರೂ ಸೈ, ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆ.
ದಿವಂಗತ ಯಶವಂತರಾವ್ ಚವಾಣ್ ಅವರ ಅನುಯಾಯಿಯಾಗಿದ್ದ ಶರದ್ ಪವಾರ್ ಹಲವು ಪಕ್ಷಗಳನ್ನು ಕಂಡಿದ್ದಾರೆ. ಕಾಂಗ್ರೆಸ್, ಸಮಾಜವಾದಿ ಕಾಂಗ್ರೆಸ್, ಇಂದಿರಾ ಕಾಂಗ್ರೆಸ್, ರಾಷ್ಟ್ರೀಯತಾ ಕಾಂಗ್ರೆಸ್- ಹೀಗೆ ಹಲವಾರು ಸಂಘಟನೆಗಳಲ್ಲಿ ಕೆಲಸ ಮಾಡಿದ್ದರೂ ಅವರು 'ಕಾಂಗ್ರೆಸ್‌' ಹೆಸರನ್ನು ಬಿಡಲಿಲ್ಲ.
ಈಗ ಅವರು ಸುದ್ದಿಯಲ್ಲಿದ್ದಾರೆ ಎನ್ನುವುದು ನಿಜ. ಹಿಂದೆಯೇ ಒಮ್ಮೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು. ಆದರೆ ಅದನ್ನು ಆಗ ಯಾರೂ ನಂಬಿರಲಿಲ್ಲ. ಈಗ ಮತ್ತೊಮ್ಮೆ ಅದೇ ಘೋಷಣೆಯನ್ನು ಸ್ವಯಂಪ್ರೇರಿತವಾಗಿಯೇ ಮಾಡಿರುವುದರಿಂದ ಅದು ದೊಡ್ಡ ಸುದ್ದಿಯೇ.
ಶರದ್‌ಪವಾರ್ ರಾಜಕೀಯದಿಂದ ನಿವೃತ್ತಿಯಾಗುವ ಮಾತಾಡಿಲ್ಲ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಷ್ಟೇ ಹೇಳಿದ್ದಾರೆ. ಅವರನ್ನು ಅನೇಕರು ರಾಷ್ಟ್ರೀಯ ನಾಯಕರೆಂದು ಬಣ್ಣಿಸಿದ್ದರೂ, ವಾಸ್ತವದಲ್ಲಿ ಅವರ ನಾಯಕತ್ವ ಮಹಾರಾಷ್ಟ್ರಕ್ಕೇ ಸೀಮಿತ. ದೆಹಲಿಯಲ್ಲಿ, ಕೇಂದ್ರ ಸರ್ಕಾರದಲ್ಲಿ ಪ್ರಭಾವಿ ಮಂತ್ರಿಯಾದ ಕೂಡಲೇ ಯಾರೂ ರಾಷ್ಟ್ರೀಯ ನಾಯಕರಾಗಿ ಬಿಡುವುದಿಲ್ಲ. ಶರದ್ ಪವಾರ್ ಅಪ್ಪಟ ಮಹಾರಾಷ್ಟ್ರೀಯ, ಮರಾಠಾ ಸರದಾರ.
ಮಹಾರಾಷ್ಟ್ರದ ಎಲ್ಲ ಸಾರ್ವಜನಿಕ ಕಾರ್ಯಕರ್ತರಂತೆಯೇ, ಶರದ್ ಪವಾರ್ ಕೂಡಾ ಬೆಳಗಾವಿ ಮಹಾರಾಷ್ಟ್ರಕ್ಕೇ ಸೇರಬೇಕೆಂದು ವಾದಿಸುವವರು. ಅದಕ್ಕಾಗಿ ಹೋರಾಟಕ್ಕೂ ಸಿದ್ಧವಂತೆ. ಆದರೆ ಕೇಂದ್ರದಲ್ಲಿ ಮಂತ್ರಿಯಾಗಿರುವುದರಿಂದ ಈಗ ಆ ಪ್ರಸ್ತಾಪವನ್ನು ಎತ್ತುತ್ತಿಲ್ಲ.
ಹಿಂದೊಮ್ಮೆ ಶರದ್‌ಪವಾರ್, ಮಹಾರಾಷ್ಟ್ರ ಸೀಮಾ ಸಮಿತಿಯ ನಾಯಕರಾಗಿದ್ದರು. ಬೆಳಗಾವಿಯಲ್ಲಿ ನಿಷೇಧಾಜ್ಞೆ ಇದ್ದಾಗಲೇ ಬೆಳಿಗ್ಗೆಯಿಂದ ಸಂಜೆಯವರೆಗೂ ತಲೆ ಮರೆಸಿಕೊಂಡಿದ್ದು ಸಂಜೆಯ ಅನಂತರ ಊರು ಬಿಟ್ಟು ಹೀರೋ ಆಗಿ ಬಿಟ್ಟರು.
ಈಗಲೂ ಅವರು ಕರ್ನಾಟಕಕ್ಕೆ ಬರುವುದು ಕಡಿಮೆ. ಕೇಂದ್ರದಲ್ಲಿ, ಮಹಾರಾಷ್ಟ್ರದಲ್ಲಿ ಅವರು ತಮ್ಮ ರಾಜಕೀಯ ಉತ್ತರಾಧಿಗಳನ್ನು ಆರಿಸಿದ್ದಾಗಿದೆ. ದೆಹಲಿಗೆ ಏಕಮಾತ್ರ ಪುತ್ರಿ ಸುಪ್ರಿಯಾ ಸುಳೆ ಅವರನ್ನು ಕಳಿಸಿ, ಮಹಾರಾಷ್ಟ್ರದಲ್ಲಿ ಸೋದರನ ಮಗ ಅಜಿತ್ ಪವಾರ್ ಅವರನ್ನು ಉಪಮುಖ್ಯಮಂತ್ರಿಯಾಗಿ ಕೊಡಿಸಿದ್ದಾರೆ.
ಪುಣೆ ಬಳಿಯ ಬರಾಮತಿ ಅವರ ಊರು ಈಗಿನ ಲೋಕಸಭೆ ಕ್ಷೇತ್ರ ಮಾಧಾ. ಅವರ ತಂದೆ ಗೋವಿಂದರಾವ್ ಪವಾರ್, ಬಾರಾಮತಿಯ ಕೃಷಿಕರ ಸಹಕಾರ ಸಂಘದ ಉದ್ಯೋಗಿ. ಮನೆತನದ ಆಸ್ತಿಯನ್ನು ಜೋಪಾನ ಮಾಡಿದ್ದು ಅವರ ತಾಯಿ. ಅವರಿಗೆ ಶರದ್ ಪವಾರ್ ಸೇರಿದಂತೆ ಆರು ಮಕ್ಕಳು. ಎಲ್ಲರೂ ಚೆನ್ನಾಗಿದ್ದಾರೆ.
ತಮ್ಮ ಪ್ರತಾಪ ಪವಾರ್, ಮಹಾರಾಷ್ಟ್ರದ ಪ್ರಮುಖ ಪತ್ರಿಕಾ ಸಮೂಹಗಳಲ್ಲಿ ಒಂದಾದ ಸಕಾಳರ ಒಡೆಯ. ಶರದ್ ಪವಾರ್ ಓದಿದ್ದು ಪುಣೆಯ ಕಾಲೇಜಿನಲ್ಲಿ. 1956ರ ಸುಮಾರಿನಲ್ಲಿ ರಾಜಕೀಯ ಪ್ರವೇಶ. ಆಗ ವಿದ್ಯಾರ್ಥಿ ನಾಯಕ.
ನಾಲ್ಕು ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾರೆ. ಎರಡು ಬಾರಿ ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ಅವರಿಗೆ ಆಗದವರು ಪ್ರಚಾರ ಮಾಡುತ್ತಿರುವ ಒಂದು ಸಂಖ್ಯೆ ಗಮನಾರ್ಹ.
ಶರದ್ ಪವಾರ್ ಕೃಷಿ ಮಂತ್ರಿಯಾಗಿರುವ ಅವಧಿಯಲ್ಲಿ ದೇಶದಲ್ಲಿ ಪ್ರತಿ ವರ್ಷ 15000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದುವರೆಗೆ ಸುಮಾರು ಎರಡು ಲಕ್ಷ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ರಾಜೀವ ಗಾಂಧಿ ಹತ್ಯೆಯಾದಾಗ, ಇನ್ನೂ ಚುನಾವಣೆ ಪ್ರಕ್ರಿಯೆ ನಡೆಯುತ್ತಿತ್ತು. ಚುನಾವಣೆಯ ಮಧ್ಯದಲ್ಲೇ ಶರದ್ ಪವಾರ್ ತಾವೇ ಪ್ರಧಾನಿಯಾಗಬಾರದೇಕೆ ಎಂದು ಭಾವಿಸಿ, ಅದೇ ರೀತಿಯ ಪ್ರಚಾರ ನೀಡಿದ್ದೂ ಉಂಟು. ಆದರೆ ಆಗ ಪ್ರಧಾನಿ ಪೀಠಕ್ಕೇರಿದ್ದು ನರಸಿಂಹರಾಯರು.
ಶರದ್ ಪವಾರ್ ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿಯಾಗಿದ್ದಾಗ, ಬೃಹತ್ ಮುಂಬೈ ಮಹಾನಗರಪಾಲಿಕೆಯ ಡೆಪ್ಯೂಟಿ ಕಮಿಷನರ್ ಖೈರನಾರ್ ಬ್ರಹ್ಮಾಂಡ ಸ್ವರೂಪದ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದರು. ಆಗ ದೇಶದ ಪ್ರಖ್ಯಾತ ನಿರಶನ ಸತ್ಯಾಗ್ರಹಿ ಅಣ್ಣಾ ಹಜಾರೆ ನಿರಶನ ಸತ್ಯಾಗ್ರಹ ಮಾಡಿದ್ದೂ ಉಂಟು.
ಆ ಕಾಲದಲ್ಲೇ ಶರದ್ ಪವಾರ್‌ಗೆ ಭೂಗತ ಲೋಕದ ಜರನ ನಿಕಟ ಪರಿಚಯವಿದೆ ಎನ್ನುವ ಆರೋಪಗಳೂ ಇದ್ದವು. ಆದರೆ ಯಾವುದಕ್ಕೂ ಸಾಕ್ಷ್ಯ- ಪುರಾವೆಗಳಿರಲಿಲ್ಲ.
ದೆಹಲಿಯಲ್ಲಿ ಕೇಂದ್ರ ಮಂತ್ರಿಯಾಗಿರುವ ಸಮಯದಲ್ಲೂ ಅವರ ವಿರುದ್ಧ ಗೋಧಿಯ ಆಮದು- ರಫ್ತು ಅವಾಂತರದ ಆರೋಪಗಳಿದ್ದವು. ಅದನ್ನು ಋಜುವಾತು ಮಾಡುವವರಿರಲಿಲ್ಲ.
ಒಮ್ಮೆ ಅವರು ಸೀತಾರಾಮ ಕೇಸರಿ ಅವರನ್ನು ಕಾಂಗ್ರೆಸ್ ಅಧ್ಯಕ್ಷರ ಗಾದಿಯಿಂದ ಪದಚ್ಯುತಿಗೊಳಿಸಲು ಪ್ರಯತ್ನಿಸಿದ್ದೂ ನಿಜ. ಆದರೆ ಆ ಪ್ರಯತ್ನ ಸೋನಿಯಾ ಗಾಂಧಿ ಅವರಿಗೆ ಅನುಕೂಲವಾಯಿತು. ಶರದ್ ಪವಾರ್ ಕಾಂಗ್ರೆಸ್ ಬಿಟ್ಟು ರಾಷ್ಟ್ರೀಯತಾ ಕಾಂಗ್ರೆಸ್ಸನ್ನು ಸ್ಥಾಪಿಸಿಕೊಂಡರು. ಒಂದು ದಶಕಕ್ಕೂ ಹೆಚ್ಚಿನ ಅವಧಿಗೆ ಅವರೇ ಆ ಪಕ್ಷದ ಅಧ್ಯಕ್ಷರಾಗಿದ್ದಾರೆ. ರಾಹುಲ್ ಗಾಂಧಿ ಕಾಂಗ್ರೆಸ್ ಉಪಾಧ್ಯಕ್ಷರಾದ ಅನಂತರ ಶರದ್ ಪವಾರ್, ಪ್ರಧಾನಿಯಾಗುವ ಆಸೆಯನ್ನು ಬಿಟ್ಟಿರಬಹುದು.
ಲೋಕಸಭೆ ಚುನಾವಣೆಯಲ್ಲಿ ಅವರು ಸ್ಪರ್ಧಿಸದೇ ಹೋದರೂ, ಅವರ ಮಂದಿಯನ್ನು ಲೋಕಸಭೆಗೆ ಆರಿಸಿ ಕಳಿಸುವ ಪ್ರಯತ್ನವನ್ನೇನೂ ಬಿಡುವುದಿಲ್ಲ. ಶರದ್ ಪವಾರ್ ಒಂದು ರೀತಿಯಲ್ಲಿ ಅಸಾಮಾನ್ಯ ರಾಜಕಾರಣಿ. 2014ರ ಅನಂತರ ಅವರ ರಾಜಕೀಯ ಯಾವ ಸ್ವರೂಪ ಪಡೆಯಬಹುದೆನ್ನುವುದನ್ನು ಈಗಲೇ ಊಹಿಸುವುದಕ್ಕೆ ಆಗುವುದಿಲ್ಲ.
ಅವರು ಸುಮ್ಮನೆ ಇರುವುದಿಲ್ಲ.

- ಸತ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com