ಮಿಂಚು ಕಣ್ಣಲಿ ನಿನ್ನ
ಹಾಲ್ದುಟಿಯ ಚಂದದಲಿ
ಪುಟ್ಟ ಕೈಕಾಲುಗಳ
ಪ್ರೀತಿ ಮಾಡಿದಳು
ನಗೆಬುಗ್ಗೆ ಹೊನಲಿನಲಿ
ಹುಬ್ಬು ಕೆನ್ನೆಯ ತೀಡಿ
ಮುಖಕೆ ಪೌಡರು ಹಚ್ಚಿ
ಪ್ರೀತಿ ಮಾಡಿದಳು
ಮುಖವು ಚಂದದಿ ಕಂಡು
ದೃಷ್ಟಿ ಬಾರದಿರಲೆಂದು
ಕಾಡಿಗೆಯ ಬೊಟ್ಟಿಟ್ಟು
ಪ್ರೀತಿ ಮಾಡಿದಳು
ಹಲ್ಲಿರದ ಬಾಯಿಂದ
ಜೊಲ್ಲು ಸೇರುವ ತುಟಿಗೆ
ಚೋಟು ಅರಿವೆಯ ಒರೆಸಿ
ಪ್ರೀತಿ ಮಾಡಿದಳು
ನನಕಂದ ಶ್ರೀರಾಮ
ನನಕರುಳು ನನ್ನಪ್ಪ
ಕಂದ ಅಳದಿರಲೆಂದು ಹಾಲುಣಿಸಿ
ಪ್ರೀತಿ ಮಾಡಿದಳು
- ಅಕ್ಬರ್ ಸಿ. ಕಾಲಿಮಿರ್ಚಿ