ಸಮ್ಮೇಳನ ಸುಮ್ಮನೆ!?

ಸಮ್ಮೇಳನ ಸುಮ್ಮನೆ!?
Updated on: 

79 ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದಿವೆ. ಬೇರೆ ಯಾವ ಭಾಷೆಯಲ್ಲೂ ಇಷ್ಟು ಸಮ್ಮೇಳನಗಳು ನಡೆದಿಲ್ಲ ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದು ನಿಜ. ಅದರಿಂದ ಭಾಷೆಗೇನು ಸಹಾಯವಾಯಿತು ಎಂದು ಯಾರಾದರೂ ಮರುಪ್ರಶ್ನಿಸಿದರೆ ನಾವು ಉತ್ತರಕ್ಕಾಗಿ ತಡಕಾಡಬೇಕಾಗುತ್ತದೆ. ಮೊನ್ನೆ ಬಿಜಾಪುರದಲ್ಲಿ ಅದೇ ಪ್ರಶ್ನೆಯ ಬೀಜ ಸಸಿಯಾಗಿದೆ...

ಬರೋಬ್ಬರಿ 79 ಕನ್ನಡ ಸಾಹಿತ್ಯ ಸಮ್ಮೇಳನಗಳು. ಇಂಥ ಅದ್ಧೂರಿತನವನ್ನು ಇಲ್ಲಿ ತನಕ ಜಗತ್ತಿನ ಬೇರಾವ ಭಾಷೆಯೂ ಅನುಭವಿಸಿಲ್ಲ. ಆ ಭಾಗ್ಯ ಕನ್ನಡಕ್ಕೆ ದಕ್ಕಿದೆ. ಹಾಗಂದಮಾತ್ರಕ್ಕೆ ಕನ್ನಡವನ್ನು ಅತಿ ಮುಂದುವರಿದ ಭಾಷೆ ಅಂತ ಲೆಕ್ಕದ ತರ್ಕಕ್ಕೆ ಹಚ್ಚಿದರೆ ಖಂಡಿತಾ ನಿರೀಕ್ಷೆ ತಲೆಕೆಳಗೆ! ನಮಗೆ ಸಂಪ್ರದಾಯವೇ ಸರಿ, ಸುಧಾರಣೆಯ ಹೆಜ್ಜೆಗಳು ನಮ್ಮ ಪಾದಗಳಿಂದ ಮೂಡಲು ಸಾಧ್ಯವೇ ಇಲ್ಲ. ತಂತ್ರಜ್ಞಾನದ ಅಪ್ಪುಗೆ ಬೇಡ. ನಮ್ಮ ತಂತ್ರಾಂಶಗಳ ಸುಧಾರಣೆ ಬಗ್ಗೆ ಚರ್ಚೆಗಳೇ ಬೇಡ. ಸಮ್ಮೇಳನಗಳು ಇನ್ನೂ ಅಪ್ಪನೆಟ್ಟ ಆಲದಮರಕ್ಕೆ ಜೋತುಹಾಕುವುದನ್ನು ಬಿಟ್ಟಿಲ್ಲ. ಬಹುಶಃ ಹತ್ತು ವರ್ಷದ ಹಿಂದಿನ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ತೆಗೆದು ನೋಡಿದರೇ ಈಗಿರುವ ಗೋಷ್ಠಿಗಳೇ ಬೇರೆ ರೂಪದಲ್ಲಿ ಕಾಣಬಹುದಷ್ಟೇ. ಪ್ರಿಂಟಿಂಗ್‌ನಲ್ಲಿ ಸ್ವಲ್ಪ ಸುಧಾರಣೆಯಾಗಿದೆ!
ಜಗತ್ತು ಕ್ಷಣಕ್ಷಣಕ್ಕೂ ಬದಲಾಗುತ್ತಿದೆ. ಕನ್ನಡ ಇಷ್ಟು ವರ್ಷಗಳಲ್ಲಿ ಅದೆಷ್ಟು ಹೊಸ ಸಂಗತಿಗಳಿಗೆ ತೆರೆದುಕೊಂಡಿದೆ. ಹೊಸ ಶಬ್ದಗಳ ಸೇರ್ಪಡೆಯಾಗಿದೆ. ಆಧುನಿಕ ಜಗತ್ತಿನ ಸವಾಲಿಗೆ ತಕ್ಕಂತೆ ಕನ್ನಡ ತನ್ನನ್ನು ತಾನು ಬದಲಾಯಿಸಿಕೊಂಡಿದೆ. ಒಗ್ಗಿಸಿಕೊಂಡಿದೆ. ಇದ್ಯಾವುದರ ಬಗ್ಗೆ ಒಂದು ಗೋಷ್ಠಿಯಿಲ್ಲ. ಮೊಬೈಲ್, ಕಂಪ್ಯೂಟರ್, ಅಂತರ್ಜಾಲ ಯುಗದಲ್ಲಿ ಕನ್ನಡದ ಸವಾಲುಗಳು, ಯುನಿಕೋಡ್ ಬಳಕೆ, ಕನ್ನಡ ತಂತ್ರಾಂಶಗಳ ಆವಿಷ್ಕಾರ, ಆಂಡ್ರಾಯ್ಡ್, ವಿಂಡೋಸ್ 8, ಆ್ಯಪಲ್ ಸೇರಿದಂತೆ ಖ್ಯಾತ ಮೊಬೈಲ್ ಆಪರೇಟಿಂಗ್ ವ್ಯವಸ್ಥೆಗಳಲ್ಲಿ ಕನ್ನಡ ಅಳವಡಿಕೆ ಇವ್ಯಾವ ವಿಷಯದ ಕುರಿತೂ ಒಂದು ಗೋಷ್ಠಿಯಿಲ್ಲ. ಇದರ ಪರಿಣಾವಾಗಿಯೇ ಇಂದು ಸಾಹಿತ್ಯ ಸಮ್ಮೇಳನಗಳು ಜಾತ್ರೆಯ ರೂಪ ಪಡೆದುಕೊಳ್ಳುತ್ತಿರುವುದು. ಜನ ಜಾತ್ರೆಗೆ ಬಂದಂತೆ ಸಾಹಿತ್ಯ ಸಮ್ಮೇಳನಕ್ಕೂ ಬಂದುಹೋಗುತ್ತಿದ್ದಾರೆ.

ಗುಣಮಟ್ಟಕ್ಕೇಕೆ ಆದ್ಯತೆಯಿಲ್ಲ?
ಇನ್ನು ಸಮ್ಮೇಳನದಲ್ಲಿ ವಿಷಯದ ಗುಣಮಟ್ಟವನ್ನಂತೂ ನಿರೀಕ್ಷಿಸುವುದೇ ಅಪರಾಧ. 79ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನೇ ತೆಗೆದುಕೊಳ್ಳಿ. ಸಮ್ಮೇಳನಾಧ್ಯಕ್ಷ ಕೊ. ಚೆನ್ನಬಸಪ್ಪ ಅವರೊಂದಿಗೆ ಸಂವಾದ ಕಾರ್ಯಕ್ರಮವಿತ್ತು. ಅಧ್ಯಕ್ಷರೊಂದಿಗೆ ಸಂವಾದ ಎಂದರೆ ಅಧ್ಯಕ್ಷರಾದವರ ಬದುಕು- ಬರಹ, ಒಲವು- ನಿಲುವು, ಪ್ರಮುಖ ಘಟನೆ- ವಿಷಯಗಳ ಕುರಿತು ಅವರ ಅಭಿಪ್ರಾಯಗಳು ಜನರಿಗೆ ಗೊತ್ತಾಗುವಂತಿರಬೇಕು. ಈ ಬಾರಿಯ ಸಂವಾದ ಅಪ್ಪಟ ಕಾಟಾಚಾರಕ್ಕೆಂಬಂತೆ ನಡೆಯಿತು. 91 ವರ್ಷದ ಹಿರಿಯ ಸಾಹಿತಿ ಕೊ. ಚೆನ್ನಬಸಪ್ಪ ಅವರೊಂದಿಗೆ ಸಂವಾದಕ್ಕೆ (ಪ್ರಶ್ನೆ ಕೇಳಲು) ಕುಳಿತಿದ್ದ ಬಹುತೇಕರ ಪರಿಚಯವೇ ಇರಲಿಲ್ಲ. ಖ್ಯಾತನಾಮರು ಒಬ್ಬರೂ ಇರಲಿಲ್ಲ. ಒಬ್ಬ ಸಂವಾದಕರಂತೂ 'ನೀವು ನ್ಯಾಯಾಧೀಶರಾಗಿದ್ದಾಗ ಎಷ್ಟು ಜನ ಮಹಿಳೆಯರಿಗೆ ನ್ಯಾಯ ದೊರಕಿಸಿದ್ದೀರಿ?' ಎಂದು ಪ್ರಶ್ನಿಸುವ ಮೂಲಕ ಅಧ್ಯಕ್ಷರನ್ನು ಹಾಗೂ ಪ್ರೇಕ್ಷಕರನ್ನು ಕಕ್ಕಾಬಿಕ್ಕಿಗೊಳಿಸಿದರು.
ಸಮ್ಮೇಳನದ ಕೊನೆಯ ದಿನ ಬೆಳಗ್ಗೆ ಕವಿಗೋಷ್ಠಿಯಿತ್ತು. 29 ಕವಿತೆಗಳನ್ನು ಓದಲಾಯಿತು. 4-5 ಕವಿತೆಗಳನ್ನು ಬಿಟ್ಟರೆ ಇನ್ಯಾವುದೂ ಗಮನಸೆಳೆಯಲಿಲ್ಲ.

ಕವಿಗೋಷ್ಠಿಯಲ್ಲಿ ಭಾಗವಹಿಸುವುದಕ್ಕೂ ಮೊದಲು ಆಯ್ಕೆ ಪ್ರಕ್ರಿಯೆ ನಡೆಸಬಹುದಲ್ಲವೇ? ಆಗ ಉತ್ತಮ ಕವಿತೆಗಳನ್ನು ಮಾತ್ರ ಓದಲು ಅವಕಾಶ ಕಲ್ಪಿಸಬಹುದಲ್ಲವೇ? ಕವಿತೆಗಳನ್ನು ಕೇವಲ ಓದುವ ಬದಲು, ಅದನ್ನು ಹಾಡಿಸಬಹುದಲ್ಲವೇ? ಎಷ್ಟನೇ ಸಾಹಿತ್ಯ ಸಮ್ಮೇಳನವೋ ಅಷ್ಟು ಪುಸ್ತಕ ಬಿಡುಗಡೆ ಮಾಡಲಾಗುತ್ತದೆ. ಅವುಗಳ ಗುಣಮಟ್ಟವನ್ನು ಕೇಳುವವರಿಲ್ಲ. ಬರೆದವರು ಯಾರು ಎಂಬುದು ಮುಖ್ಯವೇ ಅಲ್ಲ. ಸಂಖ್ಯೆಗಾಗಿ ಯಾರ ಮತ್ತು ಯಾವ ಪುಸ್ತಕವನ್ನಾದರೂ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆ ಮಾಡಬಹುದು. ಅದರಿಂದ ಲೇಖಕರಿಗಾಗಲಿ, ಸಮ್ಮೇಳನಕ್ಕಾಗಲೀ ಯಾವ ಪ್ರಯೋಜನವೂ ಇಲ್ಲ. ಸಾಹಿತ್ಯ ಸಮ್ಮೇಳನಗಳಲ್ಲಿ ಸಂಖ್ಯೆ ಮುಖ್ಯವಾಗುತ್ತಿದೆಯೇ ಹೊರತು, ಗುಣಮಟ್ಟದ ಬಗ್ಗೆ ಯಾರೂ ಕಾಳಜಿವಹಿಸುತ್ತಿಲ್ಲ.

ಆಳುವವರಿಗೆ ಲೆಕ್ಕಕ್ಕಿಲ್ಲ
ಸಮ್ಮೇಳನ ಉದ್ಘಾಟನೆಗೆ, ಸಮಾರೋಪಕ್ಕೆ ಬಂದು ದೀಪ ಬೆಳಗಿದರೆ ನಮ್ಮ ಜನಪ್ರಿತಿನಿಧಿಗಳ ಕೆಲಸ ಮುಗಿಯಿತು. ಸಾಹಿತ್ಯ ಸಮ್ಮೇಳನ ಅವರ ಪಾಲಿಗೆ ಇಷ್ಟಕ್ಕೇ ಸೀಮಿತ. ಬಿಜಾಪುರದಲ್ಲಿ ನಡೆದ 79ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ ಅವರ ಹೆಸರು ಆಮಂತ್ರಣ ಪತ್ರಿಕೆಯಲ್ಲಿತ್ತು. ಆದರೆ ಅವರ್ಯಾರೂ ಅತ್ತ ಬರುವ ಮನಸ್ಸು ಮಾಡಲಿಲ್ಲ. ಕಾರಣ ಬಹುಶಃ ಸಾಹಿತ್ಯ ಸಮ್ಮೇಳನ ಮತ ತರುವುದಿಲ್ಲ ಎಂಬ ನಿರ್ಲಕ್ಷ್ಯವಿರಲೂಬಹುದು.
ಸಾಹಿತ್ಯಾಸಕ್ತಿ ಹೊಂದಿರುವ, ಪುಸ್ತಕಗಳನ್ನು ಬರೆದಿರುವ ರಾಜಕಾರಣಿಗಳಿದ್ದಾರೆ. ಅವರನ್ನು ಸಮ್ಮೇಳನಗಳಲ್ಲಿ ತೊಡಗಿಸಿಕೊಳ್ಳಬಹುದು. ಅಂಥ ಮನಸ್ಸು ಸಾಹಿತಿಗಳಿಗಿಲ್ಲ. ತಮಗೆ ಪ್ರಶಸ್ತಿ, ಯಾವುದಾದರೂ ಸ್ಥಾನ ಬೇಕಾದಾಗ ರಾಜಕಾರಣಿಗಳಿಂದಲೇ ಲಾಬಿ ಮಾಡಿಸುವ ಇವರು, ಸಮ್ಮೇಳನದಲ್ಲಿ ರಾಜಕಾರಣಿಗಳ ವಿರೋಧಿಗಳಂತೆ ವೀರಾವೇಶದ ಭಾಷಣ ಮಾಡುತ್ತಾರೆ.

ಒಗ್ಗೂಡಿಸುವ ವೇದಿಕೆ ಆಗಬಾರದೇಕೆ?
ಕನ್ನಡ ಭಾಷೆ, ಜನ, ನೆಲ-ಜಲ ವಿಷಯಗಳಲ್ಲಿ ಹೋರಾಟ ನಡೆಸುವ, ಅದಕ್ಕಾಗಿ ಪ್ರಕರಣಗಳನ್ನು ಎದುರಿಸುತ್ತಿರುವ ಕನ್ನಡ ಸಂಘಟನೆ ಮತ್ತು ಕಾರ್ಯಕರ್ತರಿದ್ದಾರೆ. ಖಾಸಗಿ ಮತ್ತು ಸಾರ್ವಜನಿಕ ಕಾರಣಗಳಿಗಾಗಿ ಅವು ಒಡೆದು ಹೋಳಾಗಿವೆ. ಅವುಗಳನ್ನು ಒಗ್ಗೂಡಿಸುವ, ಮನಸ್ತಾಪಗಳನ್ನು ದೂರ ಮಾಡಿ ಕನ್ನಡಕ್ಕಾಗಿ ಅವರನ್ನು ಒಗ್ಗಟ್ಟಿನಲ್ಲಿರುವಂತೆ ಮಾಡಬಹುದು. ಸ್ವಯಂಸೇವಕರಾಗಿ, ಸಮ್ಮೇಳನದ ಆಯೋಜನೆಯಲ್ಲಿ ಅವರನ್ನು ತೊಡಗಿಸಿಕೊಳ್ಳಬಹುದು. ಕನ್ನಡದ ಹೋರಾಟಗಾರರ ಸಂಕಷ್ಟ, ಸವಾಲುಗಳು ಮತ್ತು ಪರಿಣಾಮದ ಕುರಿತು ಗೋಷ್ಠಿ ಇಟ್ಟು, ಅದರ ಕುರಿತು ಮಾತನಾಡಲು ಅವರಿಗೆ ಅವಕಾಶ ನೀಡಬಹುದು. ಕನ್ನಡದ ಅಭಿವೃದ್ಧಿಗಾಗಿ ಕೆಲಸ ಮಾಡುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಗಡಿನಾಡು ಅಭಿವೃದ್ಧಿ ಪ್ರಾಧಿಕಾರ, ಪುಸ್ತಕ ಪ್ರಾಧಿಕಾರ ಸೇರಿದಂತೆ ಸರ್ಕಾರದ ಅಂಗಸಂಸ್ಥೆಗಳಿವೆ. ಅವುಗಳನ್ನೆಲ್ಲ ಒಂದೇ ವೇದಿಕೆಯಲ್ಲಿ ಸೇರಿಸಿ, ಅವು ಮಾಡುತ್ತಿರುವ ಕೆಲಸ, ಅದರಿಂದಾದ ಪ್ರಯೋಜನ, ಅವುಗಳ ಮುಂದಿನ ಗುರಿಗಳ ಬಗ್ಗೆ ಚರ್ಚೆ ಮಾಡಬಹುದು. ಬುದ್ದಿಜೀವಿ ಸಾಹಿತಿಗಳೆಲ್ಲ ಸೇರಿ ಅವುಗಳಿಗೊಂದು ಹೊಸರೂಪ ನೀಡಬಹುದು. ಅವುಗಳತ್ತ ಯಾರೂ ತಲೆ ಓಡಿಸುವುದೇ ಇಲ್ಲ.

ರಂಗ- ಸಿನಿಮಾ... ಸಾಹಿತ್ಯವಲ್ಲವೇ?
ಸಾಹಿತಿಗಳು ತಮ್ಮ ಸುತ್ತಲೂ ಕೋಟೆ ಕಟ್ಟಿಕೊಂಡಿದ್ದಾರೆ. ಪರಿಣಾಮವಾಗಿ ಸಿನಿಮಾ ಮತ್ತು ರಂಗಭೂಮಿ ಸಾಹಿತಿಗಳನ್ನು ಸಾಹಿತ್ಯ ಸಮ್ಮೇಳನದಿಂದ ದೂರವಿರಿಸಿದ್ದಾರೆ. ಸಿನಿಮಾ ಸಾಹಿತ್ಯವನ್ನು ಸಾಹಿತ್ಯವೇ ಅಲ್ಲ ಎಂದು ಹೇಳುವವರೇ ಹೆಚ್ಚಿದ್ದಾರೆ. ಆದರೆ ಇಂದಿನ ಕವಿಗಳು ಬರೆದಿರುವ ಕವಿತೆಗಳಿಗಿಂತ ಸಿನಿಮಾ ಹಾಡುಗಳೇ ಜನರಿಗೆ ಹೆಚ್ಚು ಪರಿಚಿತ ಎಂಬುದನ್ನು ಸಾಹಿತಿಗಳು ಒಪ್ಪಿಕೊಳ್ಳಲೇಬೇಕಿದೆ. ಸಿನಿಮಾ ಹಾಡುಗಳೆಲ್ಲ ಒಳ್ಳೆಯ ಸಾಹಿತ್ಯವಲ್ಲ ಎಂಬುದು ಸತ್ಯವಾದರೂ, ಅಲ್ಲಿ ಒಳ್ಳೆಯ ಸಾಹಿತ್ಯವೂ ಇದೆ. ಹೊಸ ಹೊಳಹುಗಳಿವೆ. ಹಾಗೆ ನೋಡಿದರೆ ಇತ್ತೀಚಿನ ಕವಿತೆಗಳೆಲ್ಲ ಭಾರಿ ಉತ್ತಮವಾಗಿವೆಯೇ ಕನ್ನಡ ಭಾಷೆಯ ಉಳಿವಿನಲ್ಲಿ ಸಿನಿಮಾ ಸಾಹಿತಿಗಳ ಪಾತ್ರ ಏನೂ ಇಲ್ಲವೇ?

ಹೊಸ ಸಾಹಿತಿಗಳೇಕೆ ದೂರ?
ಜಯಂತ ಕಾಯ್ಕಿಣಿ, ವಸುಧೇಂದ್ರ, ನಾಗರಾಜ ವಸ್ತಾರೆ, ವಿವೇಕ ಶಾನಭಾಗ, ಕೆ.ಎನ್. ಗಣೇಶಯ್ಯ ಮುಂತಾದ ಸಾಹಿತಿಗಳನ್ನೇಕೆ ಸಮ್ಮೇಳನದಿಂದ ದೂರವಿಡಲಾಗಿದೆ? ಅಥವಾ ಅವರೇಕೆ ದೂರ ಉಳಿದಿದ್ದಾರೆ? ಅವರಂಥ ಸಾಹಿತಿಗಳಿಗೆ ಗೋಷ್ಠಿಗಳಲ್ಲಿ ಅವಕಾಶ ನೀಡಲು ಯಾಕೆ ಮಡಿವಂತಿಕೆ? ಅಂತರ್ಜಾಲದಲ್ಲೂ ಮರಿ ಸಾಹಿತಿಗಳ ಪಡೆಯೇ ಇದೆ. ಅವರು ಪುಸ್ತಕ ಪ್ರಕಟಿಸಿಲ್ಲದೇ ಇರಬಹುದು. ಆದರೆ ಅವರೂ ಉತ್ತಮವಾಗಿ ಕತೆ, ಕವನ ರಚಿಸಬಲ್ಲರು. ಅವರೂ ಬರಹಗಾರರೇ. ಅವರಿಗೂ ಸಮ್ಮೇಳನದಲ್ಲಿ ಅವಕಾಶ ನೀಡಬಹುದಲ್ಲವೇ? ಅಂತರ್ಜಾಲದಲ್ಲಿ ಕನ್ನಡ ಸಾಹಿತ್ಯ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅವರ ಸಹಾಯ ಪಡೆಯಬಹುದಲ್ಲವೇ?

ನಿರ್ಣಯ; ಆಟಕ್ಕುಂಟು ಲೆಕ್ಕಕ್ಕಿಲ್ಲ
ಸಮ್ಮೇಳನದ ನಿರ್ಣಯಗಳು ಕೇವಲ ಕಾಗದದ ಹುಲಿ. ಪತ್ರಿಕೆಗಳೇನೋ ಅದನ್ನು ಭಾರಿ ಮಹತ್ವದ ಸಂಗತಿ ಎಂದು ಇಂದಿಗೂ ಮುಖಪುಟದಲ್ಲೇ ಪ್ರಕಟಿಸುತ್ತ ಬಂದಿವೆ. ಆದರೆ ಸರ್ಕಾರ, ಸ್ವತ- ಸಾಹಿತ್ಯ ಪರಿಷತ್ತು ಮತ್ತು ಸಾಹಿತಿಗಳು ಇದರ ಬಗ್ಗೆ ಎಷ್ಟು ಕಾಳಜಿ ವಹಿಸಿದೆ ಎಂಬುದನ್ನು ನೋಡಿದರೆ ನಿರ್ಣಯಗಳ ನಿಜವಾದ ಸಾಮರ್ಥ್ಯ ಅರಿವಾಗುತ್ತದೆ. ಇದಕ್ಕೆ ಕಾರಣವೂ ಇದೆ. ಸಮ್ಮೇಳನದ ನಿರ್ಣಯಗಳು ಭಾವನಾತ್ಮಕವಾಗಿರುವುದೇ ಹೆಚ್ಚು. 79ನೇ ಕನ್ನಡ ಸಾಹಿತ್ಯ ಸಮ್ಮೇಳನ ವಿಜಾಪುರದಲ್ಲಿ ನಡೆದಿದೆ ಎಂಬ ಕಾರಣಕ್ಕೆ 371 ಜೆ ವಿಧಿಯನ್ವಯ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಸಿಕ್ಕಿರುವ ವಿಶೇಷ ಸ್ಥಾನ-ಮಾನವನ್ನು ಬಿಜಾಪುರಕ್ಕೂ ವಿಸ್ತರಿಸಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿದೆ. ಹೈದರಾಬಾದ್ ಕರ್ನಾಟಕ ಹೋರಾಟ ನಡೆಯುತ್ತಿದ್ದಾಗ ಬಿಜಾಪುರವನ್ನು ಸೇರಿಸಬೇಕು ಎಂದು ಸೊಲ್ಲೆತ್ತದ ಸಾಹಿತಿಗಳು ಬಿಜಾಪುರದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ ಎಂಬ ಏಕೈಕ ಕಾರಣಕ್ಕೆ ಅದನ್ನು ಹೈ-ಕ ಭಾಗಕ್ಕೆ ಸೇರಿಸಬೇಕು ಎಂಬ ನಿರ್ಣಯ ಕೈಗೊಂಡಿದ್ದಾರೆ. ಆದರೆ ತಾಂತ್ರಿಕವಾಗಿ ಇದು ಸಾಧ್ಯವಿಲ್ಲ. ವಿಶೇಷ ಸ್ಥಾನ-ಮಾನ ನೀಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುವಾಗ ಪ್ರದೇಶಗಳನ್ನು ಗುರುತಿಸಿಯೇ ಅಧಿಸೂಚನೆ ಹೊರಡಿಸುತ್ತದೆ. ನಮಗೆ ಮನಸ್ಸಿಗೆ ತೋಚಿದ ಹಾಗೆ ಪ್ರದೇಶಗಳನ್ನು ಸೇರಿಸುವುದು ಸಾಧ್ಯವಿಲ್ಲ ಎಂಬ ಚಿಕ್ಕ ಅರಿವು ದೊಡ್ಡ ಸಾಹಿತಿಗಳಿಗೆ ಇಲ್ಲವಾಯಿತು.

'ಜ್ಞಾನಪೀಠಿಗಳು ಬಾರದಿದ್ದಿದ್ದು ನಷ್ಟವಿಲ್ಲ'
'ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಬಾರದೇ ಇದ್ದುದರಿಂದ ಸಾಹಿತ್ಯ ಸಮ್ಮೇಳನಕ್ಕೇನೂ ನಷ್ಟವಿಲ್ಲ. ಅವರು ವಯಕ್ತಿಕ ಕೆಲಸದಲ್ಲಿ ಅಥವಾ ಇದಕ್ಕಿಂತ ಮಹತ್ವದ ಸಾಹಿತ್ಯ ರಚನೆಯಲ್ಲಿ ನಿರತರಾಗಿರಬೇಕು. ಅವರು ಸಮ್ಮೇಳನಕ್ಕೆ ಆಗಮಿಸಿದ್ದರೆ ಲಕ್ಷಾಂತರ ಜನರ ಪ್ರಶಂಸೆಗೆ, ಗೌರವಕ್ಕೆ ಪಾತ್ರರಾಗುತ್ತಿದ್ದರು. ಅವರನ್ನು ನೋಡಿ ಜನ ಖುಷಿಪಡುತ್ತಿದ್ದರು. ಬರದೇ ಇರುವುದರಿಂದ ನಷ್ಟವೇನೂ ಆಗಿಲ್ಲ' ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
 - ಕೊ. ಚೆನ್ನಬಸಪ್ಪ, 79ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ

'ಸಾಹಿತ್ಯ ಸಮ್ಮೇಳನಗಳು ಜೀವಂತಿಕೆ ಕಳೆದುಕೊಳ್ಳುತ್ತಿವೆಯಾ?'
ಸಾಹಿತ್ಯ ಪ್ರೀಯರಿಂದ ಈ ಚರ್ಚೆಗೆ ಮುಕ್ತ ಆಹ್ವಾನ. ನಿಮ್ಮ ಅನಿಸಿಕೆಗಳನ್ನು ನಮಗೆ ಬರೆದು ಅಥವಾ ಮಿಂಚಂಚೆ ಮೂಲಕ ಕಳುಹಿಸಿ. ನಮ್ಮ ವಿಳಾಸ:
ಸಂಪಾದಕರು, ಕನ್ನಡಪ್ರಭ,
'ಸಾಪ್ತಾಹಿಕಪ್ರಭ' ವಿಭಾಗ,
ನಂ.1, ಕ್ವೀನ್ಸ್ ರಸ್ತೆ,
ಬೆಂಗಳೂರು - 560001

- ವಿನಾಯಕ ಭಟ್ಟ ಮೂರೂರು
vakradanta@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com