

ಸಾಹಿತ್ಯ ಸಮ್ಮೇಳನಗಳು ಅರ್ಥ ಕಳೆದುಕೊಳ್ಳುತ್ತಿವೆ ಅನ್ನೋದನ್ನು ನಾನು ಒಪ್ಪೋದೇ ಇಲ್ಲ. ಸಮ್ಮೇಳನದ ಮುಖ್ಯ ಉದ್ದೇಶ ಏನಂದ್ರೆ, ಸಾಹಿತ್ಯ ಸಂಸ್ಕೃತಿಯ ಬಗ್ಗೆ ಜಾಗೃತಿ ಉಂಟುಮಾಡೋದು. ಆ ಕೆಲಸ ಎಗ್ಗಿಲ್ಲದೆ ಆಗ್ತಾ ಇದೆ. ಪ್ರತಿ ಸಮ್ಮೇಳನಗಳಲ್ಲೂ ಆ ಉದ್ದೇಶ ಈಡೇರಿದೆ. ನಾನು 'ಸಮ್ಮೇಳನ ಅಗತ್ಯವಿಲ್ಲ' ಎಂಬುದರ ವಿರೋಧಿ. ಆದರೆ, ಬದಲಾವಣೆಗಳ ವಿರೋಧಿ ಅಲ್ಲ. ಹೊಸ ಹೊಸ ವಿಚಾರಗಳನ್ನು ನಿಜಕ್ಕೂ ಚರ್ಚೆಗೆ ಬಿಟ್ಟುಕೊಡಬೇಕಿದೆ. ಆಧುನಿಕ ಜಗತ್ತಿನ ಹಲವು ಮುಖಗಳನ್ನು ಸಮ್ಮೇಳನಗಳು ವಿಭಿನ್ನವಾಗಿ ಪರಿಚಯಿಸಬೇಕು.
ಎಲ್ಲರೊಳಗೂ ಕನ್ನಡ ಪ್ರೀತಿಯನ್ನು ಉಂಟುಮಾಡುವ ಸಮ್ಮೇಳನಗಳು ಸುಮ್ಮನೆ ಅಲ್ವೇ ಅಲ್ಲ. ಇಲ್ಲಾಂದ್ರೆ, ಯಾಕೆ ವರ್ಷಾನುವರ್ಷ ಅಷ್ಟೊಂದು ಜನ ಸೇರ್ತಾ ಇದ್ರು? ಸಾಹಿತ್ಯಾಸಕ್ತರು ಲಕ್ಷಾಂತರ ಜನರು ಹುಟ್ಟುಕೊಂಡಿದ್ದಾರೆಂಬುದು ಈ ಸಮ್ಮೇಳನಗಳಿಂದಲೇ ಗೊತ್ತಾಗುತ್ತಿದೆ. ಮುಂಚೆ ಇದ್ದ ಸ್ಥಿತಿಯೇ ಬೇರೆ. ಸಾಹಿತ್ಯ ಸಮ್ಮೇಳನ ಅಂದ್ರೆ ಸಾಹಿತಿಗಳೇ ಸೇರ್ತಾ ಇದ್ರು. ಈಗ ಆ ಸ್ಥಿತಿ ಇಲ್ಲ. ಕಾರಣ, ಸಮ್ಮೇಳನಗಳಲ್ಲಾದಂಥ ಸುಧಾರಣೆಗಳು. ಕೇವಲ ಕನ್ನಡದ ಹೆಸರಿನಿಂದ ಇಂಥ ಲಕ್ಷಾಂತರ ಜನರನ್ನು ಸೇರಿಸ್ತಾ ಇದ್ದೀವಿ ಅಂದ್ರೆ ಅದು ಸಾಮಾನ್ಯದ ಮಾತಲ್ಲ. ಇದು ಹೆಮ್ಮೆ.
ಕಳೆದವಾರ ವಿನಾಯಕ್ ಭಟ್ ಇನ್ನೊಂದು ಪ್ರಸ್ತಾಪ ಎತ್ತಿದ್ದರು. ಗೋಷ್ಠಿಗಳಲ್ಲಿ ತಂತ್ರಾಂಶಗಳ ಬಗ್ಗೆ ಚರ್ಚೆ ಆಗ್ತಿಲ್ಲ, ಸಾಹಿತಿಗಳಿಗೆ ವಿಜ್ಞಾನದ ಸಹವಾಸ ಬೇಕಿಲ್ಲ ಅಂತ. ಖಂಡಿತಾ, ಇದನ್ನು ಒಪ್ಪುತ್ತೇನೆ. ನಾನು ಕಸಾಪ ಅಧ್ಯಕ್ಷನಾಗಿದ್ದಾಗಲೂ ಇಂಥ ಗೋಷ್ಠಿಗಳನ್ನು ಏರ್ಪಡಿಸುವ ಬಗ್ಗೆ ಚಿಂತಿಸಿದ್ದೆ. ಆಧುನಿಕ ಮಾರ್ಗಗಳೇನಿವೆ, ಬ್ಲಾಗು ಮತ್ತೊಂದು... ಇವುಗಳನ್ನು ಒಳಗೊಂಡು ಕನ್ನಡ ಅಭಿವೃದ್ಧಿಯಾಗಬೇಕು ಎಂಬುದನ್ನು ಆಸೆಪಟ್ಟವನು ನಾನು. ಆದರೆ, ಈ ಆಧುನಿಕ ಪರಿಕರಗಳ ಪರಿಚಯ ನಮ್ಮ ಅನೇಕ ಹಿರಿಯ ಸಾಹಿತಿಗಳಿಗೆ ಆಗಿಲ್ಲ. ಕನ್ನಡ ಸಾಫ್ಟ್‌ವೇರ್ ಬಗ್ಗೆಯೇ ಕನಸು ಕಟ್ಟಿಕೊಂಡಿರುವ ಬನವಾಸಿ ಬಳಗವನ್ನು ಕರೆಸಿ, ತಂತ್ರಾಶದ ಬಗ್ಗೆ ಮಾಹಿತಿ ಕೊಡಿಸಬೇಕೆಂದೂ ಅಂದುಕೊಂಡಿದ್ದೆ. ತಂತ್ರಾಂಶ ಪರಿಣತರನ್ನು ಕರೆಯಿಸಿ, ಗೋಷ್ಠಿಗಳನ್ನು ಏರ್ಪಡಿಸುವ ಬಗ್ಗೆ ಪರಿಷತ್ ಗಂಭೀರವಾಗಿಯೇ ಯೋಚಿಸಬೇಕು.
ಬ್ಲಾಗ್ ಸಾಹಿತಿಗಳನ್ನು ಒಟ್ಟುಗೂಡಿಸುವ ಪ್ರಯತ್ನವೂ ನಮ್ಮಿಂದ ನಡೆಯಬೇಕು. ನಾನು ಇದುವರೆಗೂ ಐಪಾಡ್ ಮುಟ್ಟಿದೋನಲ್ಲ. ಈಗಷ್ಟೇ ನಾನು ಆಧುನಿಕ ಹತಾರಗಳನ್ನು ಬಳಸುತ್ತಿದ್ದೇನಷ್ಟೇ. ಈ ವಿಚಾರದಲ್ಲಿ ನಾನು ಪ್ರೈಮರಿ ಸ್ಕೂಲ್ ಸ್ಟೂಡೆಂಟ್. ಹ್ಞಾಂ, ಮೊನ್ನೆ ಯಾವುದೋ ಬ್ಲಾಗ್ ನೋಡಿದೆ. ಅಲ್ಲಿನ ಅಷ್ಟೊಂದು ಚೆಂದದ ಬರಹಗಳನ್ನು ನೋಡಿ ನಾನೇ ಹುಬ್ಬೇರಿಸಿಬಿಟ್ಟೆ.
ವಿನಾಯಕ್ ಇನ್ನೊಂದು ವಿಚಾರ ಹೇಳಿದರು, ಜ್ಞಾನಪೀಠ ಪ್ರಶಸ್ತಿ ಬಂದಂಥ ಪ್ರಸಿದ್ಧ ಸಾಹಿತಿಗಳೂ ಸಮ್ಮೇಳನದಿಂದ ದೂರ ಉಳಿದರು ಅಂತ. ಇದಕ್ಕೂ ಉತ್ತರಿಸುತ್ತೇನೆ. ಕೆಲವರಿಗೆ ಅವರದ್ದೇ ತೊಂದರೆ, ತಾಪತ್ರಯ ಇದ್ದಿರಬಹುದು. ಇನ್ನೊಂದು ಒಳವಿಚಾರವೆಂದರೆ, ನಮ್ಮ ಅನೇಕ ಪ್ರತಿಷ್ಠಿತರಿಗೆ ವೇದಿಕೆ ಮೇಲೆ ಕರೆದರಷ್ಟೇ ಸಮ್ಮೇಳನಕ್ಕೆ ಹೋಗಬೇಕು ಎಂಬ ಮನೋಭಾವ ಇದೆ. ಈ ಭಾವವನ್ನು ಕೈಬಿಡಬೇಕು. 'ವೇದಿಕೆ ಮೇಲಿದ್ದರೆ ಮಾತ್ರ, ಕೆಳಗಿದ್ದರೆ ನಾನಿಲ್ಲ' ಎಂಬ ನೀತಿಯಿಂದ ಕನ್ನಡ ಕಟ್ಟಲು ಸಾಧ್ಯವೇ ಇಲ್ಲ. ಸಾವಿರಾರು ಜನರಿಗೆ ಸಾಹಿತಿಗಳನ್ನು ನೋಡಬೇಕೆಂಬ ಆಸೆ ಇರುತ್ತದೆ. ಇದನ್ನು ಈಡೇರಿಸುವುದು ಸಾಹಿತಿಗಳ ಕರ್ತವ್ಯವಾಗಬೇಕು.
ಇನ್ನು 'ಕವಿತೆಗಳನ್ನು ಹಾಡಿಸಬೇಕು' ಎಂಬ ಸಲಹೆ ಓದಿದೆ. ಅದು ಕವಿಗೇ ಬಿಟ್ಟಿದ್ದು. ಬೇಂದ್ರೆ ಥರ ಬರೆಯಲು, ಹಾಡಲು ಎರಡೂ ಬಂದರೆ ತುಂಬಾ ಒಳ್ಳೆಯದಿತ್ತು. 'ಹಕ್ಕಿ ಹಾರುತ್ತಿದೆ ನೋಡಿದಿರಾ?' ಎಂದರೆ ಎಲ್ಲರೂ ಆಕಾಶ ನೋಡುತ್ತಿದ್ದ ಪರಿಸ್ಥಿತಿ ಇತ್ತು! ಕಾವ್ಯವನ್ನು ಸಂವಹನಗೊಳಿಸುವುದನ್ನು ಕವಿಯಾದವನೇ ಮಾಡಬೇಕು ಎಂಬುದು ನನ್ನ ವಾದ. ಉಳಿದಂತೆ ಸಾಹಿತ್ಯಾಸಕ್ತ ರಾಜಕಾರಣಿಗಳನ್ನು ಸಮ್ಮೇಳನಗಳಲ್ಲಿ ಒಳಗೊಳ್ಳುವ ಹಾಗೆ ಮಾಡಬೇಕು. ಸಂಘ-ಸಂಸ್ಥೆಗಳು, ಚಳುವಳಿ ಹಿನ್ನಲೆಯಲ್ಲಿ ಬಂದಿರುವಂಥವರನ್ನು ಪಾಲ್ಗೊಳ್ಳುವಂತೆ ಮಾಡಬೇಕು. ಇದು ಖಂಡಿತಾ ಒಳ್ಳೆಯ ಸಲಹೆ.
ಇನ್ನು ಸಿನಿಮಾ ಸಾಹಿತ್ಯವನ್ನು ಏಕೆ ಸಮ್ಮೇಳನಗಳಲ್ಲಿ ಪರಿಗಣಿಸುತ್ತಿಲ್ಲ ಎಂಬ ವಾದವನ್ನು ಖಂಡಿತಾ ಒಪ್ಪುತ್ತೇನೆ. ಅಕಾಡೆಮಿಕ್ ಸಾಹಿತಿಗಳು- ಸಿನಿಮಾ ಸಾಹಿತಿಗಳು... ಇವರಿಬ್ಬರ ನಡುವೆ ಮೊದಲಿಂದಲೂ ಅಂತರ ಇದ್ದೇ ಇದೆ. ದೊಡ್ಡ ಗೋಡೆಯೇ ಇದೆ. 'ಹತ್ತಿರವಿದ್ದರೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲ್ಲಿ' ಎಂಬರ್ಥದ ರೀತಿ. ಇವರಿಬ್ಬರನ್ನೂ ಒಗ್ಗೂಡಿಸುವ ಕೆಲ್ಸ ಆಗಬೇಕು ಅಂತ ಹಂಸಲೇಖರೊಂದಿಗೆ ಸಾಕಷ್ಟು ಬಾರಿ ಚರ್ಚಿಸಿದ್ದೆ. ನಾವುಗಳು ಎತ್ತರದಲ್ಲಿದ್ದೇವೆ ಎಂದು ಭಾವಿಸಿದಾಗಲಿ, ನಾವೇ ಸೂಪರ್ ಎಂದು ಅವರು ಕಲ್ಪಿಕೊಳ್ಳುವುದಾಗಲಿ ಇರಬಾರದು. ಈ ಗೋಡೆಯನ್ನು ಒಡೆಯುವ ಕೆಲಸ ನನ್ನ ಅವಧಿಯಲ್ಲಿ ಆಗಿದೆ. 'ಸಿನಿಮಾ ಸಾಹಿತ್ಯ ಸಮಾವೇಶ' ಮಾಡಬೇಕು ಅಂತ ನಾನು, ಬರಗೂರು, ಹಂಸಲೇಖ ಚರ್ಚಿಸಿದ್ದೆವು. ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ.
ಸಿನಿಮಾ ಅಂತ ಅಲ್ಲ. ಸಾಹಿತ್ಯ ಸಮ್ಮೇಳನ ರೈತರ ಸಮಸ್ಯೆ ಬಗ್ಗೆ, ದಲಿತನ ಸಮಸ್ಯೆ ಬಗ್ಗೆ, ಬಡವನ ಹಸಿವಿನ ಬಗ್ಗೆ... ಹೀಗೆ ಎಲ್ಲರ ಬಗ್ಗೆಯೂ ಚರ್ಚೆಗೆ ವೇದಿಕೆ ಆಗಬೇಕು. ಕನ್ನಡಿಗರ ಬದುಕಿನ ಸಮಸ್ತ ಸಂಗತಿಗಳನ್ನು ಚರ್ಚಿಸಲು ಸಮ್ಮೇಳನ ವೇದಿಕೆಯಾಗಬೇಕೆಂಬುದು ನನ್ನ ಒಟ್ಟು ಅಭಿಪ್ರಾಯ. ಇದಕ್ಕಾಗಿ ಕೆಲವು ಹೊಸತುಗಳನ್ನು ಕಸಾಪ ಅಳವಡಿಸಿಕೊಳ್ಳಬೇಕು. ಕಾರ್ಯರೂಪಕ್ಕೆ ಬರಬೇಕು.
ಅಭಿಪ್ರಾಯಗಳಿಗೆ ಸ್ವಾಗತ. ಸಮ್ಮೇಳನಗಳಲ್ಲಿ ಬದಲಾವಣೆ ತರಲು ನಾವು ಸಿದ್ಧ.
-ಡಾ. ನಲ್ಲೂರು ಪ್ರಸಾದ್