

ಧಂಕರ್ ಮೊನಾಸ್ಟ್ರಿಯ ರುದ್ರ ಗಂಭೀರ ಚೆಲುವು; ಅಲ್ಲಿಂದ ಹಿಂತಿರುಗುವಾಗಿನ ಮುಚ್ಚಂಜೆಯ ಅರುಣ ಧವಳ ಕಾಂತಿಯ ರಮಣೀಯ ನಿಲುವು. ಪಿನ್ ಮತ್ತು ಸ್ಪಿಟಿ ನದಿಗಳು ಸಂಗಮಿಸಿದ ಪ್ರವಾಹದ ಮೇಲಿನಿಂದ ಬೀಸಿಬಂದ ತಂಗಾಳಿ. ಇಲ್ಲೇ ಇದ್ದೇನೆ, ಯಾವಾಗ ನನ್ನ ತಲೆಯ ಮೇಲೆ ಕಾಲೂರುತ್ತೀ ಎಂದು ಕರೆಯುತ್ತಿರುವ ಹಿಮಾಚ್ಛಾದಿತ ಶಿಖರಗಳು. ಹೊಲಗಳಲ್ಲಿ ಕೆಲಸ ಮುಗಿಸಿ ಹಿಂತಿರುಗುತ್ತಿದ್ದ ಹಿಮಾಚಲದ ಚೆಲುವೆಯರು. ಇವರೆಲ್ಲರ ನಡುವೆ ದಾರಿ ಮಾಡಿಕೊಳ್ಳುತ್ತಾ ಸಾಗಿದ ನಮಗೆ ಕಾಝಾ ಬಂದದ್ದೇ ತಿಳಿಯಲಿಲ್ಲ.
ಕಾಝಾ ಎಂದಿನಂತೆ ಪ್ರಶಾಂತವಾಗಿತ್ತು. ಅದು ನನ್ನ ಸುತ್ತಮುತ್ತಲಿನ ನೂರಾರು ಚದರ ಕಿಲೋಮೀಟರ್ ವ್ಯಾಪ್ತಿಯ ಜಿಲ್ಲಾ ಕೇಂದ್ರ ಎಂಬುದನ್ನೇ ಮರೆತಂತಿತ್ತು. ನಮ್ಮ ಮಲೆನಾಡಿನ ಸಣ್ಣ ಹಳ್ಳಿಯೊಂದರಂತೆ ಮೇಲ್ನೋಟಕ್ಕೆ ತೋರುವ ಕಾಝಾ, ಅಲ್ಲಿನ ಜಿಲ್ಲಾಕೇಂದ್ರ. ಶತಮಾನಗಳ ಕಾಲದಿಂದ ದೂರದೂರದಲ್ಲಿದ್ದ ಲಡಾಕ್, ಕುಲು ಮತ್ತು ಟಿಬೆಟ್‌ಗಳ ನಡುವಿನ ತ್ರಿಕೋನದಲ್ಲಿ ಮಲಗಿದ್ದ ಈ ಸ್ಪಿಟಿ ಕಣಿವೆ ರಾಜಕೀಯವಾಗಿಯೂ ದುರ್ಬಲ ಪ್ರದೇಶ. ಬ್ರಿಟೀಷ್ ಆಡಳಿತದಲ್ಲಿ, 1846ರಲ್ಲಿ ಗುರುತಿಸುವವರೆಗೂ ಈ ಪ್ರದೇಶಗಳಿಗೆ ಅಧಿಕೃತ ಅಸ್ತಿತ್ವವೇ ಇರಲಿಲ್ಲ. ಕುಲು ಜಿಲ್ಲೆಯ ಉಪವಿಭಾಗವಾಗಿದ್ದು, 1960ರಲ್ಲಿ ಲಾಹೋಲ್ ಮತ್ತು ಸ್ಪಿಟಿ ಜಿಲ್ಲೆಯಾಗಿ ಮೈತಾಳಿದ ಈ ಪ್ರದೇಶಕ್ಕೆ ಕಾಝಾ ಪ್ರಮುಖ ಪಟ್ಟಣವಾಯಿತು. ಇದು ಪ್ರವಾಸಿಗರಿಗೆ ತೆರೆದುಕೊಂಡದ್ದೇ ಎರಡು ದಶಕದಿಂದೀಚೆಗೆ.
12,000 ಅಡಿ ಎತ್ತರದಲ್ಲಿರುವ ಈ ಪಟ್ಟಣದಲ್ಲಿ ಒಂದು ಪೆಟ್ರೋಲ್ ಬಂಕ್, ಒಂದು ಬಿಎಸ್‌ಎನ್‌ಎಲ್ ಕಚೇರಿ, ಸರ್ಕಾರಿ ಆಸ್ಪತ್ರೆ ಇವೆ. ಇಷ್ಟು ಎತ್ತರದಲ್ಲಿ ಪೆಟ್ರೋಲ್ ಬಂಕ್ ದೇಶದ ಇನ್ಯಾವ ಕಡೆಗೂ ಇಲ್ಲ. ಕಾಝಾದ ಜನಸಂಖ್ಯೆ 800. ನಗರದಲ್ಲಿ ಎರಡು ಭಾಗಗಳಿವೆ. ಮಣ್ಣು ಕಲ್ಲಿನ ಮನೆಗಳಲ್ಲಿ ವಾಸಿಸುವ, ಹೊಲಗಳಲ್ಲಿ ದುಡಿಯುವ ಸ್ಥಳೀಯರು ಹಳೆಯ ಕಾಝಾದಲ್ಲಿದ್ದಾರೆ. ಹೊಸ ಕಾಝಾದಲ್ಲಿ ಸರ್ಕಾರಿ ಕಚೇರಿಗಳು, ಗೆಸ್ಟ್‌ಹೌಸ್‌ಗಳಿವೆ. ಮಧ್ಯೆ ಮನಾಲಿಯಿಂದ ಶಿಮ್ಲಾಗೆ ಹೆದ್ದಾರಿ ಹರಿಯುತ್ತದೆ. ಹೆದ್ದಾರಿ ಎಂದರೇನು? ನದಿಯ ಪಕ್ಕದಲ್ಲಿ ಸಾಗುವ ಕಚ್ಚಾ ರಸ್ತೆಯಷ್ಟೇ. ಈ ದಾರಿಯ ಮೇಲೆ ಆಗಾಗ ಸ್ಪಿಟಿ ನದಿಗೆ ಪ್ರೀತಿ ಉಕ್ಕಿ ಬಂದು ಮಲಗುವುದುಂಟು. ಮೇಲಿನ ಬೆಟ್ಟಗಳಿಂದ ಕಲ್ಲುಗುಂಡುಗಳು ಬಂದು ಮುಚ್ಚುವುದುಂಟು. ಚಳಿಗಾಲದಲ್ಲಿ ಹಿಮ ಸುರಿದು ದಾರಿ ಮಂಗಮಾಯ. ಎಲ್ಲ ಉತ್ಪಾತಗಳಿಗೂ ಇಲ್ಲಿನ ಜನರು ಜೀವಂತ ಸಾಕ್ಷಿಗಳು.
ಆ ರಾತ್ರಿ ಅಂಥಾ ಚಳಿಯೇನೂ ಇರಲಿಲ್ಲ, ಅದು ಆಗಸ್ಟ್ ತಿಂಗಳ ಕೊನೆಯ ಭಾಗ. ಅಕ್ಟೋಬರ್ ನಂತರ ಈ ಪ್ರದೇಶವೆಲ್ಲ ಹಿಮದಿಂದ ಮುಚ್ಚಿಹೋಗುತ್ತದೆಂದೂ, ಇಲ್ಲಿ ಹಿಮದ ಮೇಲೆ ಜಾರುವ ಆಟಕ್ಕೆ ಜನ ಬರುತ್ತಾರೆಂದೂ ಗೆಸ್ಟ್‌ಹೌಸ್ ಮಾಲೀಕ ಸೇರಿಂಗ್ ಹೇಳಿದ. ನಮ್ಮ ಗೈಡ್ ತಶಿ, ಆ ಕಾಲದಲ್ಲಿ ಸ್ಕೀಯಿಂಗ್ ಹೇಳಿಕೊಡುತ್ತಾನೆ. ಹಿಮದ ಮೇಲೆ ಚಾರಣ ಹೋಗುತ್ತಾನೆ. ನಮ್ಮ ಜತೆಗಿದ್ದಷ್ಟು ದಿನ ಆತ ಅದೇ ಪ್ಯಾಂಟ್, ಅಂಗಿ, ಅದೇ ಜರ್ಕಿನ್ ಧರಿಸಿದ್ದ. ಈತನಿಗೆ ಸ್ನಾನವೆಂದರೇನೆಂದು ಗೊತ್ತಿರುವ ಬಗ್ಗೆ ನಮಗೆ ಗುಮಾನಿ ಇತ್ತು. ಆತನ ಜತೆಗೆ ಸದಾ ಮಹೇಶ ಮುಂದಿನ ಸೀಟಿನಲ್ಲಿ ಕುಳಿತಿರುತ್ತಿದ್ದರಿಂದ ನಾನು ಆತನ 'ತನುಗಂಧ'ದಿಂದ ಪಾರಾಗಿದ್ದೆ. ಮಾತಿನ ನಡುವೆ, ನಾಡಿದ್ದು ನಾನೂ ನಿಮ್ಮ ಜತೆ ಮನಾಲಿಗೆ ಬರುತ್ತಿದ್ದೇನೆಂದೂ, ಅಲ್ಲಿ ಸ್ವಲ್ಪ ಕೆಲಸವಿತ್ತೆಂದೂ ಹೇಳಿದ. ಸೀಮಿತ ಅವಕಾಶಗಳಿರುವ ಈ ಊರಿನಿಂದ ಮನಾಲಿ ಕುಲುವಿನಂತಹ ಪಟ್ಟಣಗಳಿಗೆ ಹೋಗಲು ಇಲ್ಲಿನವರು ಹಾತೊರೆಯುತ್ತಲೇ ಇರುತ್ತಾರೆ. ನಮ್ಮೂರಿನ ತರುಣರು ನಗರಗಳಿಗೆ ಧಾವಿಸುವುದಿಲ್ಲವೇ? ನಾವು ಅಲ್ಲಿಂದ ಹಿಂತಿರುಗಿದ ಎರಡು ತಿಂಗಳ ನಂತರ ಹಿಮಾಚಲ ಪ್ರದೇಶದಲ್ಲಿ ಸಿಕ್ಕಾಪಟ್ಟೆ ಮಳೆ ಬಂತು. ಹೆದ್ಧಾರಿಗಳು ಮುಚ್ಚಿಹೋದವು. ಸಹಿಸಲಾಗದ ಚಳಿ ಆವರಿಸಿಕೊಂಡಿತು. ಸ್ಪಿಟಿ ವಲಯದಲ್ಲಿ ಜನರ ಕಣ್ಣೀರು ಕೂಡ ಕೆಳಗಿಳಿಯದೆ ಹೆಪ್ಪುಗಟ್ಟುವಷ್ಟು ಚಳಿ ತಲೆದೋರಿತು ಎಂದು ಎಲ್ಲೆಡೆ ವರದಿಯಾಯಿತು.
ನಿಶ್ಶಬ್ದವಾಗಿರುವ ನಗರವನ್ನು ನೀವು ಎಲ್ಲಾದರೂ ನೋಡಿದ್ದೀರಾ? ಯಾವ ನಗರವೂ ಎಂದೂ ನೀರವವಾಗಲು ಸಾಧ್ಯವೇ ಇಲ್ಲವಷ್ಟೇ. ಏನಿಲ್ಲದಿದ್ದರೂ ವಾಹನ ಚಲಿಸುವ ಸದ್ದು, ನಾಯಿಯ ಬೊಗಳುವಿಕೆಯಾದರೂ ಇರುತ್ತದೆ. ಆದರೆ ಆ ರಾತ್ರಿ ನಾವು ಇಡೀ ಪಟ್ಟಣ ನಿಶ್ಶಬ್ದವಾಗಿ ಇರುವುದನ್ನು ಅನುಭವಿಸಿದೆವು. ತಡರಾತ್ರಿ ಯಾರಿಗೂ ಏನೂ ಕೆಲಸವಿಲ್ಲವಾದ್ದರಿಂದ ಎಲ್ಲರೂ ಇಲ್ಲಿ ಬೇಗನೆ ಮಲಗುತ್ತಾರೆ. ಏಕೈಕ ರಸ್ತೆ ಕೂಡ ನಿರ್ವಾಹನವಾಗುವುದು. ಗಾಳಿಗೆ ವೇಗವಿದ್ದರೂ ಎಲೆಗಳ ಸಪ್ಪಳವಿಲ್ಲ. ಬೆಟ್ಟಗುಡ್ಡಗಳ ನಡುವೆ ನಿಂತ ಕಾಝಾ ಮೊನಾಸ್ಟ್ರಿ ಇನ್ನೊಂದು ಗುಡ್ಡದಂತೆಯೇ ಕಾಣಿಸುತ್ತಿತ್ತು. ಅರ್ಧಚಂದ್ರ ಹಿತವಾದ ಬೆಳಕನ್ನು ಅದರ ಮೇಲೆ ಚೆಲ್ಲಿದ್ದ. ಮೋಡವೂ ಇಲ್ಲದ ಆಕಾಶದಲ್ಲಿ ನಕ್ಷತ್ರಗಳು ಪ್ರಕಾಶಮಾನವಾಗಿ ಬೆಳಗುತ್ತಿದ್ದವು. ಕೆಳಗೆಲ್ಲೋ ಸ್ಪಿಟಿ ನದಿಯ ಸಣ್ಣನೆಯ ಸಳಪಳ. ಇಲ್ಲಿನ ಏಕಾಂತ ಹಾಗೂ ಮೌನದ ಘನತೆಗೆ ಯಾವುದೂ ಎಂದೂ ಧಕ್ಕೆ ತರಲಾರದು ಎನಿಸತೊಡಗಿತು.
ಪ್ರವಾಸದಲ್ಲಿದ್ದಾಗ ಮನಸ್ಸು ಅನೇಕ ರೀತಿಯಲ್ಲಿ ಎತ್ತೆತ್ತಲೋ ಹೊರಟಿರುತ್ತದೆ. ಅದನ್ನು ಕಟ್ಟಿಹಾಕಿ ಸದ್ಯವನ್ನು ಅನುಭವಿಸುವಂತೆ ಮಾಡುವುದೇ ಕಷ್ಟಕರ. ನಾವಾಗಲೇ ಊರು ಬಿಟ್ಟು ಹತ್ತು ದಿನವಾಗಿತ್ತು. ಒಂದೂವರೆ ವರ್ಷದ ಮಗಳು ಪುಟ್ಟು ಊರಲ್ಲಿ ಅಜ್ಜಅಜ್ಜಿಯ ಜತೆಗಿದ್ದಳು. ಆಕೆ ಜತೆಗಿದ್ದಿದ್ದರೆ ಹೇಗೆ ಈ ಪ್ರವಾಸ ಬೇರೆ ರೀತಿ ಇರುತ್ತಿತ್ತು, ಅವಳ ಅನುಭವ ಲೋಕ ಹೇಗೆ ಇದನ್ನೆಲ್ಲ ಒಳಗೊಳ್ಳುತ್ತಿತ್ತು ಎಂಬ ಯೋಚನೆ. ನಾಲ್ಕು ವರ್ಷದ ಹಿಂದೆಯೇ ತೀರಿಕೊಂಡ ನನ್ನಮ್ಮನನ್ನು ಇಲ್ಲಿಗೆ ಒಮ್ಮೆ ಕರೆದುಕೊಂಡು ಬರಲು ಸಾಧ್ಯವಾಗಿದ್ದಿದ್ದರೆ ಎಂಬ ಯೋಚನೆ. ಪ್ರಿಯಾ ಮೊಬೈಲ್‌ನಲ್ಲಿದ್ದ ಪುಟ್ಟುವಿನ ಫೋಟೋಗಳನ್ನು ನೋಡುತ್ತಿದ್ದಳು.
ಅದು ಕಾಝಾದಲ್ಲಿ ನಮ್ಮ ಕೊನೆಯ ರಾತ್ರಿಯಾಗಿತ್ತು. ಮರುದಿನ ಬೆಳಗ್ಗೆ ನಾವು ಚಂದ್ರತಾಲ್ ಸರೋವರದತ್ತ ಹೊರಡಲಿದ್ದೆವು. ಕ್ಷಣಕ್ಕೊಮ್ಮೆ ಬಣ್ಣ ಬದಲಾಯಿಸುವ ಸರೋವರ, ಚಂದ್ರನ ತುಣುಕಿನಂತಿರುವ ಸರೋವರ, ಹಿಮಚಿರತೆಗಳು ನೀರು ಕುಡಿಯುವ ಸರೋವರ, ನಮ್ಮ ಪ್ರಯಾಣಕ್ಕೊಂದು ಅಂತಿಮ ಕ್ಲೈಮ್ಯಾಕ್ಸ್ ಕೊಡಲಿದ್ದ ಸರೋವರ.
(ಮುಂದಿನ ವಾರ - ಕಿನೌರ್ ಎಂಬ ಕಿನ್ನರಭೂಮಿ)
- ಹರೀಶ್ ಕೇರ
harishkhera@gmail.com
ಚಿತ್ರಗಳು: ಪ್ರೀಯಾ ಕೆರ್ವಾಶೆ