

ದಕ್ಷಿಣ ಕಾಶಿಯ ಭಕ್ತಸಾಗರ
ಪವಿತ್ರ ತ್ರಿವೇಣಿ ಸಂಗಮ ಕ್ಷೇತ್ರಗಳಲ್ಲಿ ಕುಂಭಮೇಳದಂತಹ ಉತ್ಸವಗಳನ್ನು ಆಚರಿಸಿ, ಪರ್ವಕಾಲದಲ್ಲಿ ಪುಣ್ಯ ಸ್ನಾನ ಮಾಡುವ ಪದ್ಧತಿ ಪ್ರಾಚೀನ ಕಾಲದಿಂದಲೂ ಜಾರಿಯಲ್ಲಿದೆ. ಉತ್ತರ ಭಾರತದ ಪ್ರಯಾಗ, ಹರಿದ್ವಾರ, ನಾಸಿಕ್, ಉಜ್ಜಯಿನಿಗೆ ಸೀಮಿತವಾಗಿದ್ದ ಕುಂಭಮೇಳವನ್ನು 24 ವರ್ಷ ಹಿಂದೆಯೇ ದಕ್ಷಿಣ ಭಾರತಕ್ಕೆ ಪರಿಚಯಿಸಲಾಗಿದೆ. ಕಾವೇರಿ, ಕಪಿಲಾ ಮತ್ತು ಸ್ಫಟಿಕ ಸರೋವರ ಸಮಾಗಮವಾಗುವ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರ ಪುಣ್ಯ ಕ್ಷೇತ್ರದಲ್ಲಿ ಕುಂಭಮೇಳ ಪ್ರತಿ ಮೂರು ವರ್ಷಕ್ಕೊಮ್ಮೆ ಮೂರು ದಿನ ನಡೆದುಕೊಂಡು ಬರುತ್ತಿದೆ.
ದಕ್ಷಿಣ ಭಾರತದವರು ಕುಂಭಮೇಳದ ಪುಣ್ಯಸ್ನಾನದ ಸೌಭಗ್ಯದಿಂದ ವಂಚಿತರಾಗುತ್ತಿರುವುದನ್ನು ಮನಗಂಡು ಕೈಲಾಸಾಶ್ರಮದ ಶ್ರೀ ತಿರುಚ್ಚಿ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಓಂಕಾರಶ್ರಮದ ಶ್ರೀ ಶಿವಪುರಿ ಸ್ವಾಮೀಜಿ ಅವರು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮೈಸೂರಿನ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರೊಂದಿಗೆ ಸೇರಿ 1989 ರಲ್ಲಿ ತಿರುಮಕೂಡಲು ನರಸೀಪುರದಲ್ಲಿ ಕುಂಭಮೇಳ ಆರಂಭಿಸಿದರು. ಅಲ್ಲಿಂದ ಇಲ್ಲಿಯವರೆಗೆ ಪ್ರತಿ ಮೂರು ವರ್ಷಗಳಿಗೊಮ್ಮೆ ಅಂದರೆ 1989, 1992, 1995, 1998, 2001, 2004, 2007, 2010 ರಲ್ಲಿ ಕುಂಭಮೇಳಗಳನ್ನು ನಡೆಸಲಾಗಿದೆ. 2013ರ ಫೆ.23 ರಿಂದ 25 ರವರೆಗೆ ಶ್ರೀ ನಂದನನಾಮ ಸಂವತ್ಸರದಲ್ಲಿ ನಡೆಯುತ್ತಿರುವುದು 9ನೇ ಕುಂಭಮೇಳ.
ಮೂರು ದಿನಗಳ ಕುಂಭಮೇಳದಲ್ಲಿ ಸಹಸ್ರಾರು ಮಂದಿ ಭಾಗವಹಿಸುತ್ತಾರೆ. ಅಂತಿಮ ದಿನವಾದ ಫೆ.25 ರಂದು ಮಹೋದಯ ಪುಣ್ಯಸ್ನಾನ ನೆರವೇರುವುದರಿಂದ ಅಂದು ಒಂದು ಲಕ್ಷ ಮಂದಿ ಭಾಗವಹಿಸುವರ ನಿರೀಕ್ಷೆ ಇದೆ. ಅಂದು ಕುಂಭ ಲಗ್ನದಲ್ಲಿ ಪ್ರಾತಃಕಾಲ 5.53 ರಿಂದ 7.39, ವೃಷಭ ಲಗ್ನದಲ್ಲಿ ಮಧ್ಯಾಹ್ನ 12.17 ರಿಂದ 1.05 ರವರೆಗೆ ಪುಣ್ಯಸ್ನಾನಕ್ಕೆ ಮುಹೂರ್ತ ನಿಗದಿಯಾಗಿದೆ.
ತಿರುಮಕೂಡಲು ನರಸೀಪುರವು ಪುರಾಣೇತಿಹಾಸಗಳಲ್ಲಿ ಕೂಡ ಮಹತ್ವದ ಮನ್ನಣೆ ಪಡೆದಿದೆ. ಅಲ್ಲಿನ ಎರಡೂ ದಂಡೆಗಳಲ್ಲಿಯೂ ಪ್ರಾಚೀನ ಕಾಲದ ಶ್ರೀ ಗುಂಜಾನರಸಿಂಹಸ್ವಾಮಿ ಮತ್ತು ಶ್ರೀ ಅಗಸ್ತ್ಯೇಶ್ವರಸ್ವಾಮಿ ದೇವಸ್ಥಾನಗಳಿವೆ. ಅಗಸ್ತ್ಯ ಮುನಿಗಳು ಸ್ವತಃ ಮರಳಿನಿಂದ ಲಿಂಗ ಮಾಡಿ, ಪ್ರತಿಷ್ಠಾಪಿಸಿ, ಪೂಜಿಸಿ ಕೀರ್ತಿವಂತರಾದರೆಂದು ಶ್ರೀ ಅಗಸ್ತ್ಯೇಶ್ವರಸ್ವಾಮಿ ದೇವಸ್ಥಾನದ ಇತಿಹಾಸ ತಿಳಿಸುತ್ತದೆ. ಅಲ್ಲಿ ಹರಿಯುವ ತೀರ್ಥ ಗಂಗಾತೀರ್ಥಕ್ಕಿಂತಲೂ ಒಂದು ಗುಲಗಂಜಿ ತೂಕದಷ್ಟು ಶ್ರೇಷ್ಠವೆಂದು ಶ್ರೀ ಗುಂಜಾನರಸಿಂಹಸ್ವಾಮಿ ಹಸ್ತದಲ್ಲಿರುವ ತಕ್ಕಡಿಯು ಸಂಕೇತಿಸುತ್ತದೆ.
ಇದಲ್ಲದೇ ಅತ್ಯಂತ ಪ್ರಾಚೀನವಾದ ಅಲ್ಲಿನ ಶ್ರೀ ಭಾರದ್ವಾಜ ಋಷ್ಯಾಶ್ರಮ, ಶ್ರೀ ಚೌಡೇಶ್ವರಿ ದೇವಸ್ಥಾನ, ಬಸವ ರುದ್ರಪಾದ, ಅಕ್ಷಯ ವಟವೃಕ್ಷ, ಅಶ್ವತ್ಥವೃಕ್ಷ, ಗುಡಿ, ಮಂಟಪಗಳು, ಶ್ರೀ ವ್ಯಾಸರಾಜ ಮಠ ಮೊದಲಾದವು ಕ್ಷೇತ್ರದ ಪಾವಿತ್ರ್ಯತೆ ಹೆಚ್ಚಿಸಿವೆ. ಹೀಗಾಗಿ ಇದು ಅನೇಕ ಮತ- ಪಂಥ- ಧರ್ಮಗಳ ಏಕತ್ರ ಸಮ್ಮಿಲನದಿಂದ ಸರ್ವಧರ್ಮಗಳ ಸಂಗಮ ಕ್ಷೇತ್ರ ಎನಿಸಿಕೊಂಡಿದೆ.
ಕುಂಭಮೇಳವು ಯಾವುದೇ ಮತ- ಪಂಥ, ವರ್ಗ- ವರ್ಣ ಭೇದಭಾವವಿಲ್ಲದೇ ಅತ್ಯಂತ ಸಡಗರ, ಸಂಭ್ರಮದಿಂದ ನಡೆಯುತ್ತದೆ. ಸರ್ವ ಜನಾಂಗಗಳ ಶಾಂತಿ- ಸೌಹಾರ್ದಗಳ, ಸಂತೋಷ- ಸಾಮರಸ್ಯಗಳ ಸಂಗಮವೇನೋ ಎಂಬಂತೆ ನಡೆದುಕೊಂಡು ಬರುತ್ತಿದೆ. ಈ ಸಂದರ್ಭದಲ್ಲಿ ವಿಶ್ವಶಾಂತಿಗಾಗಿ ಸಂಕಲ್ಪ, ಹೋಮ, ಹವನ, ಜಪ, ಅಭಿಷೇಕ, ಯಜ್ಞ, ಸಾಧುಸಂತರ ಮೆರವಣಿಗೆ, ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಕುಂಭಮೇಳಕ್ಕೆ ಬರುವ ಪ್ರತಿಯೊಬ್ಬರಿಗೂ ಜಿಲ್ಲಾಡಳಿತ, ವಿವಿಧ ಮಠಮಾನ್ಯಗಳಿಂದ ಅನ್ನದಾಸೋಹ ಏರ್ಪಡಿಸಲಾಗುತ್ತದೆ.
ಜಿಲ್ಲಾಡಳಿತವು ಕುಡಿಯುವ ನೀರು, ಶೌಚಾಲಯ, ತಂಗುದಾಣ, ಸ್ನಾನಘಟ್ಟ, ತಾತ್ಕಾಲಿಕ ಸೇತುವೆ, ವಿದ್ಯುತ್ ದೀಪಾಲಂಕಾರ ಮೊದಲಾದ ವ್ಯವಸ್ಥೆ ಮಾಡುತ್ತಿದೆ. ಪೊಲೀಸ್ ಇಲಾಖೆ ಬಂದೋಬಸ್ತ್, ಅಗ್ನಿಶಾಮಕ ಇಲಾಖೆ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ.
ದಕ್ಷಿಣ ಕಾಶಿ
ತಿರಮಕೂಡಲು ನರಸೀಪುರದ ಸಮೀಪವೇ ಇರುವ ತಲಕಾಡಿನಲ್ಲಿ ಪ್ರತಿ 13 ವರ್ಷಗಳಿಗೊಮ್ಮೆ ಪಂಚಲಿಂಗ ದರ್ಶನ ನಡೆಯುತ್ತದೆ. ಆದರೆ ಕಾರ್ತಿಕ ಮಾಸದಲ್ಲಿ ಐದು ಸೋಮವಾರಗಳು ಬಂದು ಕಡೇ ಕಾರ್ತಿಕ ಸೋಮವಾರದಂದು ಅಮವಾಸ್ಯೆ ಬಂದಲ್ಲಿ 3 ವರ್ಷಗಳಿಗೆ ಪಂಚಲಿಂಗ ದರ್ಶನ ಬರುತ್ತದೆ. ಒಟ್ಟಾರೆ ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕು ಕುಂಭಮೇಳ ಹಾಗೂ ಪಂಚಲಿಂಗ ದರ್ಶನದಿಂದಾಗಿ ಖ್ಯಾತಿ ಪಡೆದಿದೆ. ಬಹುಶಃ ಹೀಗಾಗಿಯೇ ತಿರುಮಕೂಡಲು ನರಸೀಪುರವನ್ನು ದಕ್ಷಿಣ ಕಾಶಿ ಎಂದೂ ಕರೆಯಲಾಗುತ್ತದೆ.
ನಾಳೆ ಪುಣ್ಯಸ್ನಾನ
ಕುಂಭಮೇಳದ ಅಂತಿಮ ದಿನವಾದ ನಾಳೆ (ಫೆ.25) ಮಹೋದಯ ಪುಣ್ಯಸ್ನಾನ. ಒಂದು ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಕುಂಭ ಲಗ್ನದಲ್ಲಿ ಪ್ರಾತಃಕಾಲ 5.53 ರಿಂದ 7.39, ವೃಷಭ ಲಗ್ನದಲ್ಲಿ ಮಧ್ಯಾಹ್ನ 12.17 ರಿಂದ 1.05 ರವರೆಗೆ ಪುಣ್ಯಸ್ನಾನಕ್ಕೆ ಮುಹೂರ್ತ ನಿಗದಿಯಾಗಿದೆ.
-ಅಂಶಿ ಪ್ರಸನ್ನಕುಮಾರ್