ಅಷ್ಟ ದಿಕ್ಪಾಲಕರು ಕಾವಲಿರುವ ಕಾಡಿನಲಿ
ಸುರಿಯುತಿದೆ ಅನಾದಿಕಾಲದ ಬೆಳದಿಂಗಳು
ಕಾರಣ ತಿಳಿದೆ ಸುಳಿದಾಡುತಿದೆ
ನಿರ್ವಿಕಾರ ಕತ್ತಲು
ಊರುಕೇರಿಯ ಹಾದಿ
ಬೀದಿಗಳಲಿ ಅದ ನುಂಗಲೆಂದು
ಎಂತೋ ಕಾರ್ಕೋಟಕ ವಿಷವುಂಡ ನನ್ನ ಎದೆ
ಯೊಳಗೆ ಈಗಷ್ಟೇ ಅರಳಿದ ಮಲ್ಲಿಗೆಯ ಗಮಕೂ
ಕೋಳ ತೊಡಿಸಿರಲು
ಈಗಲೂ ನಿನ್ನ ಶುಭ್ರ ಬಿಳಿ ಅಂಗಾಲ ಮಣ್ಣನು
ನಾನು ನೆತ್ತಿ ಮೇಲೆ ಹೊತ್ತು ಅಂಡಲೆಯುತ್ತಿದ್ದೇನೆ
ಮರುಭೂಮಿಯಲಿ ಶುದ್ಧ ಅಬ್ಬೇಪಾರಿಯಂತೆ
ನಿನ್ನ ಗಾಜುಗಣ್ಣುಗಳು ಅದೆಷ್ಟು ಹರಿತ
ಕತ್ತಿಯಂತೆ ಇರಿಯುತಿರಲು ಹೀಗೆಯೇ
ನೆಲಕೆ ತೊಟ್ಟಿಕ್ಕುವ ಪ್ರತೀಹನಿಯೂ
ನಿನ್ನದೇ ಹೆಸರನು ಉಸುರಿದೆ
ಇಲ್ಲಿ,
ಹಗಲು ರಾತ್ರಿಗಳನು ಸದೆ ಬಡಿದವರು
ದಿಕ್ಕುಗೇಡಿ ಹೆಣದ ನೆಣ
ಸುಡುತಿರಲು ಬೆಂಕಿಯಲಿ
ಗಾಳಿಯು ಕೂಡ ನಿಶ್ಚಲವಾಗಿ
ನಿಂತು ನೋಡುತಿರಲು
ನಿನ್ನದೇ ಆತ್ಮದ ಕಣ್ಣೀರ ಕಡಲಲೂ
ನಿನ್ನ ಹೊತ್ತ ನಾವೆಯೊಂದು
ತೇಲಿಬರಲಿ ಮುಂದಾದರೊಮ್ಮೆ
ಚೂರೇಚೂರು ಬೆಳದಿಂಗಳುಕತ್ತರಿಸಿ ಬೀಳಲಿ ದೇವರೇ
ಯಾವತ್ತೂ ನನ್ನ ಖಾಸಾ ಅಂಗಳದಲಿ ರಂಗೋಲಿ
ಬರೆಯಲು ಕಾಯುತಿರುವೆ...
- ಕಲ್ಲೇಶ್ ಕುಂಬಾರ್