ಮನುಷ್ಯ ಮತ್ತು ಕಾಗೆ

Updated on: 

ಕಾಗೆ ಕರ್ರಗಿದೆ ಎಂದು ಗೊತ್ತು. ಅದನ್ನು ಯಾರೂ ಪ್ರೀತಿಸುವುದಿಲ್ಲ; ಸತ್ತಾಗ, ಪಿಂಡ ಪ್ರದಾನ ಮಾಡುವಾಗ ಅದರ ಪಾತ್ರ ಹಿರಿದು ಎಂದು ಗೊತ್ತು. ಕಾಗೆ ಕೂಟ ನೋಟದಿಂದ ಸಾವು ಸಂಭವಿಸುವುದು ಎಂದು ಅವನು ಕೇಳಿದ್ದ. ಎಲ್ಲೆಂದರಲ್ಲಿ ಕಾ...ಕಾ... ಎಂದು ಹಾರುವ ಕಾಗೆ ಅನಿಷ್ಠ ಸಂಕೇತವಾಗಿ ಮನುಷ್ಯನ ಪಾರಿಭಾಷಿಕ ಕೋಷದಲ್ಲಿ ಪ್ರತಿಷ್ಠಾಪಿತವಾಗಿತ್ತು. ಆದರೂ ಆತ ಕಾಗೆಯನ್ನು ಕರೆಯಹತ್ತಿದ.
ಮನುಷ್ಯನಂತಹ ನಂಬಿಕೆ ಇಲ್ಲದ ಪ್ರಾಣಿ ಕರೆದರೆ ಯಾವ ಕಾಗೆ ಬರಬಲ್ಲದು, ಪಿಂಡಾಹ್ವಾನವಲ್ಲದ ಸಮಯದಲ್ಲಿ! ಅವನಿಗೆ ಸಾಕಾಯಿತು.  ಆದರೆ ಕಾ ಕಾ ಕಾ ಎಂದು ಕರೆದಾಗ ಗಿಣಿ, ಪಾರಿವಾಳ, ಟುವ್ವಿಟಾರಗಳು ರಿಯಾಕ್ಟ್ ಮಾಡಹತ್ತಿದವು. ಆ ಪಕ್ಷಿಗಳಿಗೆ ಇವನು ಕಾಗೆಯನ್ನು ಕರೆಯುತ್ತಿದ್ದಾನೆ ಎಂದು ತಿಳಿದಿತ್ತು. ಅವನು ಹಾಕುವ ಆಹಾರ ಪದಾರ್ಥದ ಪ್ರಥಮ ಫಲಾನುಭವಿಗಳಾಗಲು ನಾಮುಂದು ತಾಮುಂದು ಎಂದು ಪೈಪೋಟಿಗಿಳಿದವು. ಒಂದು ಕಾಗೆಯೂ ಸುಳಿಯಲಿಲ್ಲ. ಕಾಗೆ ಕರೆದರೆ ಬರುವ ಪಕ್ಷಿಯಲ್ಲ ಎಂದು ಆತನಿಗೂ ಅರ್ಥವಾಗಹತ್ತಿತ್ತು. ಮುಂಜಾನೆ ಕಾಗೆಯನ್ನು ಕರೆಯಲು ಮಾಳಿಗೆ ಏರಿ ಕಾಳುಗಳನ್ನು ಚೆಲ್ಲಿದರೆ ಬೇರೆ ಪಕ್ಷಿಗಳು ಅದರ ಫಲಾನುಭವಿಗಳಾಗುತ್ತಿದ್ದವು. ಅವನು ಪ್ರಯತ್ನ ಬಿಡಲಿಲ್ಲ. ಮುಂಜಾನೆ, ಸಂಜೆ, ಕಾಳುಗಳ ತೋರಿಸಿ ಕಾ...ಕಾ...ಕಾ... ಎಂದು ಕರೆದರೆ, ಗಿಣಿ, ಪಾರಿವಾಳ, ಟುವ್ವಿಟಾರಗಳ ದಂಡು ಬರಹತ್ತಿತ್ತು. ಬರಲಿ, ಪಕ್ಷಿ ಸಮೂಹದ ಜತೆ ಕಾಗೆಗಳು ಬಂದಾವೆಂದು ಆತ  ಬಹುದಿನ ಕಾದ. ಅಷ್ಟರಲ್ಲಿ ಗಿಣಿ ಮಾತಾಡಹತ್ತಿತು. ಪಾರಿವಾಳವೂ 'ಏನಾದರೂ ಸಂದೇಶವಿದ್ದರೆ ಹೇಳು, ಕೊಟ್ಟು ಬರುತ್ತೇವೆ' ಎಂದು ಹೇಳುತ್ತಿತ್ತು. ಇವುಗಳ ಒಡನಾಟದಲ್ಲಿ ಮೂಲ ಉದ್ದೇಶವೇ ಮರೆತ ಹಾಗಿತ್ತು.
ಮುಂಜಾನೆ ಗಿಣಿ ಬಂದು ಹಾಡು ಹೇಳಿ ಕಾಳು ತಿಂದು ಹೋಗುತ್ತಿತ್ತು. ಸಂಜೆ ಪಾರಿವಾಳಗಳು ಬಂದು ಕಾಲಿಗೆ ಸಂದೇಶ ಕಟ್ಟಿಸಿಕೊಂಡು ಹಾರುತ್ತಿದ್ದವು. ಗಿಣಿ ಚೆಂದದ ಮಾತಾಡುತ್ತಲೇ ಹಕ್ಕು ಚಲಾಯಿಸಹತ್ತಿತು. 'ನನಗೆ ಸೀಬೆ ಹಣ್ಣು ಪ್ರೀತಿ. ಬಾಳೆಹಣ್ಣು ಬೇಕು. ಇಂಥ ಅಡಿಮಿಟ್ಟಿ ಕೊಳೆತ ಹಣ್ಣುಗಳು ಬೇಡ' ಎಂದು ಮೂಗು ಮುರಿಯುತ್ತಿತ್ತು. ಪಾರಿವಾಳಗಳೂ ವಿವಿಧ ಕಾಳುಗಳ ಬೇಡಿಕೆ ಇಡಹತ್ತಿದವು. ತನ್ನ ಸಂಬಳದಲ್ಲೇ ಇವುಗಳನ್ನು ತಂದು ಪೂರೈಸಹತ್ತಿದ. ಮನೆಯವರಿಗೂ ಇದು ದುಬಾರಿ ಹವ್ಯಾಸ ಎಂದು ಗೊತ್ತಾಗಹತ್ತಿತ್ತು. ಆದರೂ ಅವನ ಶ್ರಮದ ಸಂಬಳ ಎಂದು ಸುಮ್ಮನಾಗಿದ್ದರು. ಗಿಣಿಯ ಮಧುರ ಕಂಠ ಬರುಬರುತ್ತ ಏಕತಾನತೆಗೆ ಒಳಗಾಗಿತ್ತು. ಪಾರಿವಾಳಗಳ ಸಂದೇಶಗಳು ಹೊಸ ವಿಷಯಗಳನ್ನೊಳಗೊಂಡಿರಲಿಲ್ಲ. ಮತ್ತು ಒಮ್ಮಿಂದೊಮ್ಮೆಲೆ ಕಾಗೆ ನೆನಪಾಗಹತ್ತಿತು ಆತನಿಗೆ. ಮುಂಜಾನೆ ಮಾಳಿಗೆ ಏರಿ ಮತ್ತೆ ಕಾಗೆಯನ್ನು ಕರೆಯಹತ್ತಿದ. ಕಾ... ಕಾ... ಕಾ... ಎಂದು.
ಮತ್ತೆ ಗಿಣಿ, ಪಾರಿವಾಳಗಳ ದಂಡೇ ಬಂದವು. ಇಷ್ಟು ದಿನ ಕಾ...ಕಾ... ಕಾ...ಕಾ... ಎನ್ನುವುದು ಬಿಟ್ಟು, ಇವುಗಳ ಜತೆ ಮಾತ್ರ ಸಂವಹನ ಮಾಡುತ್ತಿದ್ದ ಅವನು, ಒಮ್ಮಿಂದೊಮ್ಮೆಲೆ ಕಾ...ಕಾ... ಅಂದದ್ದು ಅವುಗಳಿಗೆ ಕೊಂಚ ಅಸಮಾಧಾನವಾದಂತಾಗಿತ್ತು. ಗಿಣಿ 'ಮನುಷ್ಯರನ್ನು ನಂಬಬಾರದು' ಎನ್ನುವ ಧಾಟಿಯಲ್ಲಿ ಹಾಡಹತ್ತಿತು. ಪಾರಿವಾಳಗಳು 'ಇವನ ಸಲುವಾಗಿ ನಾವು ರೆಕ್ಕೆಗೆ ಗಾಯ ಮಾಡಿಕೊಂಡಿದ್ದೇವೆ, ಈಗ ಮತ್ತೆ ಕಾಗೆಗಳನ್ನು ಕರೆಯುತ್ತಿದ್ದಾನೆ ಎಂದರೆ ಸೊಕ್ಕೇ ಸರಿ' ಎನ್ನುತ್ತಿದ್ದವು.
ಇಲ್ಲಿ ಕಾಗೆಗಳು ಬರಲು ಸಾಧ್ಯವೇ ಇಲ್ಲ. ನಾವು ಕೂಡ ಹದ್ದುಗಳನ್ನು ಕಾಯಲಿಕ್ಕೆ ಹಚ್ಚಿದ್ದೇವೆ. ಕೋಗಿಲೆಗಳನ್ನು ಕಾಗೆಗಳ ಗೂಡಿನಲ್ಲಿ ತತ್ತಿ (ಮೊಟ್ಟೆ) ಇಡಲು ಹೇಳಿದ್ದೇವೆ. ಮತ್ತೆ ನಮ್ಮಂಥ ಸಂಸ್ಕಾರವಂತ ಸವರ್ಣೀಯರ ಮುಂದೆ ಅವು ಸುಳಿಯುವುದಿಲ್ಲ ಕೂಡ. ಮೊದಲಿನಂತೆ ಅವನಿಗೆ ಈಗ ಅವುಗಳ ಜತೆ ಉತ್ತಮ ಸಂಬಂಧವಿರದಿದ್ದರೂ ಕಾ...ಕಾ... ಎಂದರೆ ಇವೆಲ್ಲ ಬರುತ್ತಿದ್ದವು. ಇದ್ದಬದ್ದುದನ್ನು ಅವುಗಳಿಗೆ ಹಾಕಿ ಕಾಗೆಯನ್ನು ದಿನಾಲು ನಿರೀಕ್ಷಿಸುತ್ತ ಕುಳಿತ. ಒಂದು ದಿನವೂ ಕಾಗೆ ಬರಲಿಲ್ಲ. ಯಾರೋ ಹೇಳಿದರು,
'ಮನುಷ್ಯರನ್ನು ಅವು ನಂಬುವುದು ಕಷ್ಟ. ಪಿಂಡ ತಿನ್ನುವಾಗ ಅದು ಮನುಷ್ಯನ ಅನಿವಾರ್ಯ ಎಂದು ಗೊತ್ತಾಗುತ್ತಿರುವುದರಿಂದ ಕಾಗೆ ಅಲ್ಲಿ ಮಾತ್ರ ಆತ್ಮವಿಶ್ವಾಸದಿಂದ ಪಾಲ್ಗೊಳ್ಳುತ್ತದೆ'.
ಆದರೂ ಆತ ಕಾದ. ಕಾಗೆ ಬರಲೇ ಇಲ್ಲ. ಒಂದು ಮುಂಜಾನೆ ಕಾ...ಕಾ... ಎಂದು ಕರೆದ. ಮತ್ತೆ ಕಾಯಂ ಫಲಾನುಭವಿಗಳೇ ಬಂದವು. ಅದೇ ಮಂಕಾದ ಆಶಯದೊಂದಿಗೆ ಅವನು ನಿಂತಿದ್ದ. ದೂರದಲ್ಲಿ ಒಂದು ಕಾಗೆ ಕಾಣಿಸಿಕೊಂಡಿತು. ಖುಷಿಯಾಯಿತು, ಜೋರಾಗಿ ಕಾ...ಕಾ... ಎಂದು ಕೂಗಹತ್ತಿದ. ಅದು ಅಂಜುತ್ತ ಆಳುಕುತ್ತ ಬರಹತ್ತಿತು. ಇವನಿಗೆ ಇನ್ನೂ ಖುಷಿಯಾಯಿತು, ಕಾಕಾ ಕಾಕಾ ಕಾಕಾ ಎಂದು ಇನ್ನೂ ಜೋರಾಗಿ ಅನ್ನಹತ್ತಿದ.
ಅದು ಹತ್ತಿರವೇ ಬಂದಿತು. ಉಳಿದ ಪಕ್ಷಿಗಳು ಕಿಜಿಪಿಜಿ ಎಂಬ ಧ್ವನಿಯಲ್ಲಿ ಅದನ್ನು ಓಡಿಸಲು ನೋಡಿದವು. ಅದು ಮೇಲೆ ಏರುತ್ತ ಕೆಳಗೆ ಬರುತ್ತ ಅಂಜುತ್ತ ಆಳುಕುತ್ತ ಆಕಾಶದಲ್ಲಿ ತೇಲಾಡಹತ್ತಿತು. ಒಮ್ಮಿಂದೊಮ್ಮೆಲೆ ರಣಹದ್ದೊಂದು ಬಂದು ಅದರ ಒಂದು ರೆಕ್ಕೆ ಕಿತ್ತು ಹಾಕಿತು. ಒಂದು ಕಣ್ಣು ತೂತು ಕೆಡವಿತು. ಕಾಗೆ ಮುಳ್ಳಿನ ಕಂಟಿಯ ನಡುವೆ ಬಿದ್ದಿತು. ಉಳಿದ ಪಕ್ಷಿಗಳೆಲ್ಲವೂ ವಿಜಯೋತ್ಸವ ಆಚರಿಸಿದವು.
ಇವನಿಗೆ ಅಘಾತವಾಯಿತು. ಇದೇನಿದು ಎಂದು ಯೋಚಿಸಹತ್ತಿದ. ಆ ಕಾಗೆಯು ಬಿದ್ದ  ಕಂಟಿಯನ್ನು ಹುಡುಕುತ್ತ ಹೋದ. ಹಳ್ಳದ ದಂಡೆಯಾಚೆಯಲ್ಲಿರುವ ಕಂಟಿಯ ಆಳದಲ್ಲಿ ಕಾಗೆ ಬಿದ್ದು ಒದ್ದಾಡಹತ್ತಿತ್ತು. ಅವರ ಬಂಧುಗಳು ಅದರ ಸುತ್ತಲೂ ಗೋಳಿಡುತ್ತಿದ್ದವು, 'ಮನುಷ್ಯನನ್ನು ನಂಬುವುದು ಬೇಡ ಎಂದು ಹೇಳಿದರೂ ನೀನು ಕೇಳಲಿಲ್ಲ್ಲ' ಎಂದು ಅಳಹತ್ತಿದವು. ಇವನು ಕಂಟಿಯ ಆಳಕ್ಕೆ ನುಗ್ಗಿ ಅದರ ಮುಂದೆ ನಿಂತುಕೊಂಡ. ಕರಳು ಕಿತ್ತು ಬಂದಂತಾಯಿತು. ಉಳಿದ ಕಾಗೆಗಳು ಹಾರಿಹೋದವು. ಇವನು ಆ ಕಾಗೆಯನ್ನು ನೋಡಿದ. ಒಂದು ಕಣ್ಣು, ಒಂದು ರೆಕ್ಕೆ ಇಲ್ಲದೆ ಅದು ಕಾ...ಕಾ... ಎಂದು ಶರಶಯ್ಯೆಯಲ್ಲಿ ಬಿದ್ದ ಭೀಷ್ಮನಂತೆ, ರಾವಣನಿಂದ ಹಲ್ಲೆ ಮಾಡಿಸಿಕೊಂಡ ಜಟಾಯುವಿನಂತೆ ಮುಳ್ಳಿನ ಮೇಲೆ ಬಿದ್ದಿತ್ತು. ಅವನು ಅದನ್ನು ತೆಗೆದುಕೊಂಡು ಓಡಿದ. ಎಲ್ಲಾ ಕಾಗೆಗಳು ದಾಳಿ ಮಾಡಿದವು. ಇವನ ಮೇಲೆ ಮುಗಿ ಬಿದ್ದವು. ಕಾಗೆಯನ್ನು ಎರಡು ಕೈಯಲ್ಲಿ ಜೋಪಾನವಾಗಿ ಹಿಡಿದುಕೊಂಡು ಓಡಹತ್ತಿದ. ಓಡಿ ಓಡಿ ಮನೆ ತಲುಪಿದ. ತಂದೆ-ತಾಯಿ, ಅಣ್ಣ-ತಮ್ಮಂದಿರು ಗಾಬರಿಯಾದರು.
'ನಿಲ್ಲು, ಅದನ್ನು ಒಳಗೆ ತರಬೇಡ. ಕಾಗೆ ಮನೆಯೊಳಗೆ ಹೊಕ್ಕರೆ ಅಪಶಕುನ, ನಾಶದ ಸಂಕೇತ ಎನ್ನುತ್ತೇವೆ. ಅದರಲ್ಲಿ ನೀನು ಕಾಗೆಯನ್ನು ಕೈಯಲ್ಲಿ ಹಿಡಿದುಕೊಂಡು ಬರುವುದೇ? ಮೊದಲು ಶನಿಯನ್ನು ತೊಲಗಿಸು' ಎಂದರು. 'ಶಾಸ್ತ್ರದಲ್ಲಿ ಪಿಂಡ ತಿನ್ನುವಾಗ ಮಾತ್ರ ಕಾಗೆಗೂ ಮನುಷ್ಯನಿಗೂ ಸಂವಹನವಾಗಬೇಕು ಎಂದು ಸ್ಪಷ್ಟವಾಗಿ ಹೇಳಿದೆ. ನೀನು ಮನೆಗೆ ಕಾಗೆಗಳನ್ನು ತರುತ್ತೀ ಎಂದರೆ ದ್ರಾಷ್ಟ್ಯವೇ ಸರಿ' ಎಂದು ಎಲ್ಲರೂ ಬಯ್ಯಹತ್ತಿದರು.
ಅವನು ಅವರ ಮಾತನ್ನು ಕೇಳಲಿಲ್ಲ. ಕಾಗೆಯ ರೆಕ್ಕೆ, ಕಣ್ಣಿನ ಸುತ್ತಲೂ ಡೆಟಾಲ್ ಸವರಿ ಪಶು ಚಿಕಿತ್ಸಾಲಯಕ್ಕೆ ಕರೆದುಕೊಂಡು ಹೋಗಿ ಉಪಚರಿಸಿದ. ಡಾಕ್ಟರ್ ಔಷಧಿ ಹಚ್ಚಿ 'ಒಂದು ಕಣ್ಣು, ಒಂದು ರೆಕ್ಕೆ ಮತ್ತೆ ಹುಟ್ಟಲು ಸಾಧ್ಯವಿಲ್ಲ. ಇದು ಇನ್ನು ಮೇಲೆ ಹಾರಲಾರದ ಹಾಗೂ ಒಂದೇ ಕಣ್ಣಿನಿಂದ ನೋಡಬಹುದಾದ ಪಕ್ಷಿ' ಎಂದು ಬೀಳ್ಕೊಟ್ಟರು.
ಕಾಗೆಗೂ ಇವನ ಮೇಲೆ ಸಿಟ್ಟು. ತನ್ನನ್ನು ಮೋಸದಿಂದ ಕರೆದು ರಣಹದ್ದುಗಳ ಬಾಯಿಗೆ ಹಾಕಿದವನು ಎನ್ನುವ ಭಾವನೆ ಕಾಗೆಯಲ್ಲಿ ದಟ್ಟವಾಗಿತ್ತು.  ಮನೆಗೆ ಹೋದ. ಇವನು ಮನೆಯ ಆರ್ಥಿಕ ಕಂಬಗಳಲ್ಲಿ ಒಬ್ಬನಾಗಿದ್ದ. ಮನೆಯವರೆಲ್ಲರೂ ಜಂಕಿಸಿ ಬುದ್ಧಿ ಹೇಳುತ್ತಿದ್ದರು. 'ನಿನಗೆ ಅದು ಸರಿ ಕಾಣಬಹುದು. ಆದರೆ ಅದು ಧರ್ಮದರ್ಶನಕ್ಕೆ ವಿರುದ್ದ. ದಯಮಾಡಿ ಒಳಗೆ ತರಬೇಡ. ಬೇಕಾದರೆ ಹೊರಗಿನ ಕೋಣೆಯಲ್ಲಿ ಅದನ್ನು ಇಡು. ಅದರ ಜತೆ ನೀನೂ ಇರು, ನಮ್ಮದೇನೂ ಅಭ್ಯಂತರವಿಲ್ಲ' ಎಂದು ಹೇಳಿಹೋದರು.
ಒಂದು ಪಂಜರದಲ್ಲಿ ಅದನ್ನು ಹಾಕಿ ರಕ್ಷಿಸಹತ್ತಿದ. ಕಾಳು ಹಾಕಿದ. ಹಣ್ಣುಹಂಪಲ ಹಾಕಿದ. ಅದು ಹೊಂದಿಕೊಳ್ಳಹತ್ತಿತು. ರೂಮಿನಲ್ಲಿ ಓಡಾಡಹತ್ತಿತು. ಮನೆಯವರಿಗೆ ಹೇಗಾದರೂ ಮಾಡಿ ಇದನ್ನು ಕೊಲ್ಲಬೇಕು ಎನ್ನುವ ಯೋಚನೆ ಬರಹತ್ತಿತು. ಮುಂಜಾನೆ ಪೂಜೆ ಮಾಡುವಾಗ ಕಾ...ಕಾ... ಕಾ...ಕಾ... ಎಂದು ಕೂಗುತ್ತಿತ್ತು. ಸಂಧ್ಯಾವಂದನೆಗೆ ಕಾಗಕ್ಕನ ಸ್ವರ ಸೇರಿಸುತ್ತಿತ್ತು.
ಎಂದಿನಂತೆ ಕಾಲೇಜಿಗೆ ಹೋದ. ತಾನು ಪಾಠ ಮಾಡುವ ರಾಜಕೀಯ ಶಾಸ್ತ್ರದಲ್ಲಿ ಬರುವ ಕಾರ್ಲ್‌ಮಾರ್ಕ್ಸ್‌ನ ಸಮಾಜವಾದದ ಬಂಡವಾಳ ಶೇಖರಣೆ ಮತ್ತು ವರ್ಗಕ್ರಮ ಪ್ರತಿಪಾದನೆಯ ಪಾಠ ಇಂದು ಜೋರಾಗಿಯೇ ಮಾಡಿದ. ಕಪ್ಪು ಬಟ್ಟೆಯ ಜನರು ಒಂದಾಗಿ ಬಂಡವಾಳ ಶೇಖರಣೆಯಂಥ ಅರ್ಥ ವ್ಯವಸ್ಥೆಯ ರಾಕ್ಷಸನನ್ನು ಕೊಲ್ಲುವ ಜರೂರತ್ತಿನ ಬಗ್ಗೆ ಮಾತನಾಡಹತ್ತಿದ. ತನ್ನ ಆಶಯವನ್ನು ಪರೋಕ್ಷವಾಗಿ ಬಿತ್ತಿ ಬೆಳೆಯುವ ಬಗ್ಗೆ ಅಭಿಯಂತರ ಆಶಯವೆಂಬ ಹೊಸ ವಿಧಾನದ ಮೂಲಕ ಹೊಸ ಕಿಚ್ಚನ್ನು ಬೆಳೆಯಲು ತಡಕಾಡಹತ್ತಿದ. ಮಾರ್ಕ್ಸ್‌ನ ವಿಲೋಮ ಬಂಡವಾಳ ವಾದವು ಹೇಗೆ ಕಪ್ಪು ಜನರನ್ನು ರಕ್ಷಿಸಬಹುದು ಎಂದು ವಿದ್ಯಾರ್ಥಿಗಳನ್ನು ಉದ್ದೀಪನಗೊಳಿಸಲು ಪ್ರಯತ್ನಿಸಿದ. ತನ್ನ ವಿದ್ಯಾರ್ಥಿಗಳ ಭೂಮಿ, ಆರ್ಥಿಕ ಹಿನ್ನಲೆ ಕಲೆಹಾಕಿದ. ಇಲ್ಲಿಯೂ ಆತನ ಪಾಠದ ಫಲಾನುಭವಿಗಳು ಮತ್ತು ಆಭಿಮಾನಿ ವರ್ಗ, ಜಮೀನ್ದಾರರು, ಮಧ್ಯಮ ವರ್ಗದಿಂದ ಬಂದ ವಿದ್ಯಾರ್ಥಿಗಳಿಂದ ಸೃಷ್ಟಿಯಾಯಿತು.
ತಾನು ಕಾಗೆಯನ್ನು ಕರೆದಂತೆ, ಕಪ್ಪು ಹುಡುಗರನ್ನು ಕರೆದು  ಬಟ್ಟೆ, ಫೀಸು, ಅಷ್ಟುಇಷ್ಟು ಸಹಾಯ ಮಾಡಹತ್ತಿದ. ಆದರೂ ಇವರಾರೂ ಅಷ್ಟಾಗಿ ಇವನ ಹತ್ತಿರ ಮನಬಿಚ್ಚಿ ಮಾತಾಡಲಿಲ್ಲ. ಶ್ರೀಮಂತ, ಮಧ್ಯಮ ವರ್ಗದ ವಿದ್ಯಾರ್ಥಿಗಳು ಇವನ ಹತ್ತಿರ ಬಂದು ಮಾರ್ಕ್ಸ್‌ವಾದವನ್ನು ಒಂದು ಪ್ಯಾಶನ್‌ನನಂತೆ ತೆಗೆದುಕೊಂಡರು. ಆ ಬಗ್ಗ್ಗೆ ಮಾತಾಡುವುದು, ಸ್ಟೈಲಿಶ್ ಆಗಿ ಇರುವದು, ದೇವರು ಇಲ್ಲ ಎಂದು ಹೇಳುವುದು, ಯಾವದೋ ಒಂದು ಡಿಬೇಟಿನಲ್ಲಿ ಬಾಯಿಪಾಠದ ಮಾತನಾಡುವುದು, ಇವೆಲ್ಲವೂ ಸಾಂಗೋಪಾಂಗವಾಗಿ ಮಾಡಹತ್ತಿದರು. ಕಪ್ಪು ಜನರು ಮುಂದೆ ಬಂದು ಮಾತಾಡಲು ಹಿಂಜರಿದರು. ಇವನು ಕಾದು ಕಾದು ಸುಸ್ತಾದ. ಏನು ಮಾಡಬೇಕೆಂದು ತಿಳಿಯದೆ ಒದ್ದಾಡಹತ್ತಿದ. ವೈಯಕ್ತಿಕವಾಗಿ ಒಬ್ಬೊಬ್ಬ ಹುಡುಗನನ್ನು ತನ್ನ ಕೋಣೆಗೆ ಕರೆದು ಮಾತಾಡಹತ್ತಿದ. ಅಷ್ಟರಲ್ಲಿ ಈ ಜಮೀನ್ದಾರ ಹುಡುಗರು, ಮಧ್ಯಮ ವರ್ಗದ ವಿದ್ಯಾರ್ಥಿಗಳು ಬಂದು ಜೋರಾಗಿ ಆತ್ಮವಿಶ್ವಾಸದ ಧ್ವನಿಯಲ್ಲಿ ಮಾತಾಡಹತ್ತಿದಾಗ ಕಪ್ಪು ಹುಡುಗರು ಮಾಯವಾಗುತ್ತಿದ್ದರು. ಜಮೀನ್ದಾರ ವಿದ್ಯಾರ್ಥಿಗಳು ಮಾತಾಡಿ ಮಾತಾಡಿ ಒಂದು ಹಂತ ತಲುಪಿದರು. ಅವರಿಗೆ 'ದಂಡಕಾರಣ್ಯಕ್ಕೆ ಹೋಗುತ್ತೀರಾ' ಎಂದು ಕೇಳಿದ. 'ಇಲ್ಲೇ ಮಾತಾಡಲು ಚಂದ...ಹೀಗೆ ಡಿಬೇಟ್ ಮಾಡಲು ಇನ್ನೂ ಅಂದ. ನಮ್ಮ  ಹೊಲ ನೋಡಿಕೊಳ್ಳುವವರು ಯಾರು? ಇಲ್ಲೇ ಮಾತಾಡುವುದಿದ್ದರೆ ಹೇಳಿ, ನಾವು ಮಾತಾಡುತ್ತೇವೆ' ಎಂದು ಹೇಳಿದರು. ಕೆಲ ವಿದ್ಯಾರ್ಥಿಗಳು ನಿಜವಾಗಿಯೂ ಪರಿವರ್ತನೆಗೊಂಡಿದ್ದರು. ಅವರ ಸಂಖ್ಯೆ ಕಡಿಮೆ ಇತ್ತು. ಅವನ ಆಶಯ ಮುಖ್ಯವಾಗಿ ಕಪ್ಪುಜನರು ಚಳುವಳಿಯ ಮುಂಚೂಣಿಯಲ್ಲಿರಬೇಕು ಎಂಬುದು ಆಗಿತ್ತು. ಯಾಕೆಂದರೆ ಇಲ್ಲಿ ಯಾವುದೇ ಇಸಂಗಳನ್ನು ತಿರುಚುವ ಸಂಭವನೀಯತೆ ಕಡಿಮೆ ಇರುತ್ತದೆ ಎಂದು ಆತ ತಿಳಿದಿದ್ದ.
ಜಮೀನ್ದಾರ ವಿದ್ಯಾರ್ಥಿಗಳು ದಂಡಕಾರಣ್ಯಕ್ಕೆ ಶಸ್ತ್ರಾಸ್ತ್ರ ಹಿಡಿದು ಹೋಗಲು ಹಿಂಜರಿದರಲ್ಲ, ಅದಕ್ಕೆ ಆತ ಲಾ ಆಫ್ ಡಿಮ್ನಿಶಿಂಗ್ ಮಾರ್ಟಿನಲ್ ರಿಟರ್ನ್ ಎಂದು ಹೆಸರಿಸಿದ. ಅಂದರೆ ಲಾಭರೇಖೆಯ ವಿಲೋಮ ತತ್ವ ಎಂದು. ಒಳಸುರಿ ಹೆಚ್ಚಾದರೆ ಒಂದು ಹಂತದಲ್ಲಿ ಹೊರಸುರಿ ಹೆಚ್ಚಾದಂತೆ ಕಂಡರೂ ಒಳಸುರಿ ಮತ್ತು ಹೊರಸುರಿ  ಸಮಪ್ರಮಾಣದಲ್ಲಿರುತ್ತದೆ. ಇಲ್ಲಿ ಹಾಗೇ ಆಯಿತು. ಚಳುವಳಿ ಮಾಡುತ್ತೇವೆ ಎಂದು ಬಂದ ವಿದ್ಯಾರ್ಥಿಗಳು 'ಇದಕ್ಕಿಂತಲೂ ನಮಗೆ ಜೆ.ಪಿ. ಮಾರ್ಗ ಇಷ್ಟ. ಗಾಂಧಿ ಮಾರ್ಗ ಇಷ್ಟ' ಎಂದು ಹೇಳಿ ಗಂಟು ಕಟ್ಟಹತ್ತಿದರು. ಶ್ರೀಮಂತರನ್ನು ಕೊಲ್ಲುವುದರ ಬದಲು ಮನಸ್ಸು ಪರಿವರ್ತನೆಯ ಮುಖಾಂತರ ಬದಲಾವಣೆ ಸಾಧ್ಯವೆಂದು ಹೇಳಿ ಕಾಲುಕಿತ್ತರು. ಆತನಿಗೆ ಅಂದು ಬಹಳ ಬೇಜಾರಾಗಿತ್ತು. ಮನೆಗೆ ಬಂದ. ಕಾಗೆಯ ಜತೆ ಸುಮ್ಮನೆ ಆಟವಾಡುತ್ತ ಕುಳಿತ. ಅದಕ್ಕೆ ಹಣ್ಣು ಹಾಕಿದ. ಕಾಳು ಹಾಕಿದ. ತಾನು ತಯಾರು ಮಾಡಿದ ಸೈನ್ಯ ಆಭಿಮುಖವಾಗಿ ತಿರುಗಿತ್ತು. ಕಪ್ಪುಬಟ್ಟೆಯ ಜನರು ಯಾಕೆ ಇನ್ನೂ ತನ್ನನ್ನು ನಂಬುತ್ತಿಲ್ಲ ಎನ್ನುವುದು ಪ್ರಶ್ನಾರ್ಥಕವಾಗಿತ್ತು. ಮಹಾಚೈತ್ರದಲ್ಲಿ ಬರುವ ಮಡಿವಾಳ ಮಾಚಿದೇವನ ಅಪೇಕ್ಷಿತ ಮಾತು ನೆನಪಾಯಿತು. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಬಿಜ್ಜಳನ ಆನೆಬಲವನ್ನು ಎದುರಿಸಲು ಶೂದ್ರ ಜನಾಂಗವೇ ಉಳಿದಿದೆ. ಬಸವಣ್ಣನನ್ನು ಒಳಗೊಂಡು ಎಲ್ಲರೂ ಪಲಾಯನ ಮಾಡಿದ್ದಾರೆ. ಅಂದಿನಿಂದ ಇಂದಿನವರೆಗೂ ಮತ್ತು ಚಾರ್ತುವರ್ಣ ಹುಟ್ಟಿದಂದಿನಿಂದಲೂ ಮೇಲ್ವರ್ಗದ ಸೋಗಲಾಡಿತನ ಅವರಿಗೆ ತಿಳಿದಿದೆ.  ಮಾರ್ಕ್ಸ್ ಜತೆ ಇದ್ದ ಯಂಗಲ್ಸ್ ಸಹ ದೊಡ್ಡ ಸಿರಿವಂತನೆ. ಆತನೂ ಸೋಗಲಾಡಿಯೇ?  ಕಮ್ಯೂನಿಸ್ಟ ಪಕ್ಷದ ಪ್ರಣಾಳಿಕೆ ಬರೆಯಲು ಸಹಾಯ ಮಾಡಿದ ಈತ ಛೆ...
ಕಾಗೆ ಹೇಳಹತ್ತಿತ್ತು, 'ನನ್ನ ಬಂಧುಗಳನ್ನು ಬಿಟ್ಟು ಇಲ್ಲಿಗೆ ಬಂದಿದ್ದೇನೆ. ನಾನು ಓಡಬೇಕೆಂದರೂ ಒಂದು ರೆಕ್ಕೆಯನ್ನು ರಣಹದ್ದು ತಿಂದುಹಾಕಿದೆ. ಒಂದು ಕಣ್ಣು ಕಳೆದುಕೊಂಡಿದ್ದೇನೆ. ನೀನು ನನ್ನ ಬಂಧುಗಳ ಹತ್ತಿರ ನನ್ನನ್ನು ಬಿಡಬಹುದೇ?' ಅವನಿಗೆ ವಿಚಿತ್ರವೆನ್ನಿಸಿತು. ಇಲ್ಲಿ ತಿನ್ನಲಿಕ್ಕೆ ಉಣ್ಣಲಿಕ್ಕೆ ಕಡಿಮೆಯಂತೂ ಮಾಡಿಲ್ಲ. ಅದರ ಸ್ವಾತಂತ್ರ್ಯ ಅದಕ್ಕೆ. ಈತನ ಪ್ರಯೋಗಾಲಯ ಮೌಲ್ಯಗಳು ಇವನಿಗೆ. 'ಇಲ್ಲಿ ನನಗೆ ಭಯವಿದೆ. ನಿಮ್ಮವರು ಮಾತನಾಡುವ ಮಾತುಗಳು ನನಗೂ ಕಿವಿಗೆ ಬೀಳುತ್ತಲಿವೆ. ಮಿಲಿಟರಿ ಬೆಕ್ಕುಗಳನ್ನು ತರುತ್ತಾರಂತೆ. ನಿರ್ದಾಕ್ಷಿಣ್ಯವಾಗಿ ಒಂದೇ ಹೊಡೆತಕ್ಕೆ ಪ್ರಾಣ ಹೋಗುತ್ತದೆ ಅಂತೆ. ನಿನ್ನ ಜತೆ ಸಲುಗೆ ಆದಂದಿನಿಂದಲೂ ಸಾವು ಬೆನ್ನಹತ್ತಿದೆ' ಎಂದಿತು ಕಾಗೆ. ಅವನಲ್ಲಿ ಉತ್ತರಗಳು ಇರಲಿಲ್ಲ.
ಮುಂಜಾನೆ ಕಾಲೇಜಿಗೆ ಹೋದ. ಇವತ್ತು ಮಾರ್ಕ್ಸ್ ಬಗ್ಗೆ ಪಾಠ ಇಲ್ಲದಿದ್ದರೂ ಮಾರ್ಕ್ಸ್ ಬಗ್ಗೆ ಮಾತಾಡಹತ್ತಿದ. ಮತ್ತೆ ಕಪ್ಪು ಹುಡುಗರನ್ನು ಅಭಿಪ್ರೇರಿಸುವ ಕೆಲಸಕ್ಕೆ ಮುಂದಾದ. ಈವತ್ತು ನಿಜವಾಗಿಯೂ ಖುಷಿಗೊಂಡ. ಯಾಕೆಂದರೆ, ನಾಲ್ಕು ಕಪ್ಪು ಹುಡುಗರು ಈತನ ಜತೆ ಮಾತಾಡಲು ಬಂದಿದ್ದರು. ಆತನಿಗೆ ನಿಜವಾಗಿಯೂ ಧೈರ್ಯ ಬಂದಿತ್ತು. ದಿನಾಲು ಆತನ ರೂಮಿಗೆ ಆ ಹುಡುಗರು ಬರಹತ್ತಿದರು.  ಕಾಗೆಗೂ ಏನೋ ಒಂದು ಥರಹ ಖುಷಿ ಖುಷಿ. ಇವರನ್ನು ನೋಡಿ ತನ್ನ ಬಂಧುಗಳು ನೋಡಿದಂತೆ ಅದು ಸಂತಸಪಡಹತ್ತಿತು. ಒಂದು ದಿನ ಕಪ್ಪು ಕೋಟು ಹಾಕಿಕೊಂಡು ಬಲಭುಜದ ಮೇಲೆ ಕರಿಯ ಕಾಗೆಯನ್ನು ಕ್ರೂಡಿಸಿಕೊಂಡು ತನ್ನ ನಾಲ್ಕು ವಿದ್ಯಾರ್ಥಿಗಳನ್ನು ಕರೆದುಕೊಂಡು ಒಂದು ಉದ್ದದ ಪ್ರಭಾತ್‌ಪೇರಿಗೆ ಹೊರಟ.   
ಅಸಮಾನತೆಗೆ ಧಿಕ್ಕಾರ
ಭೂ ಹಂಚಿಕೆ ವೈಜ್ಞಾನಿಕವಾಗಲಿ
ಬುಡಕಟ್ಟುಗಳು ಉಳಿಯಲಿ
ಎಂದು ಘೋಷಣೆ ಕೂಗುತ್ತ ಹೊರಟ. ಬಸ್‌ಸ್ಟ್ಯಾಂಡಿನಲ್ಲಿ, ರೈಲ್ವೆ ಸ್ಟೇಶನ್ನಿನಲ್ಲಿ, ಊರಿನ ಪ್ರಮುಖ ಗಲ್ಲಿಗಳಲ್ಲಿ ಈ ಮಾಸ್ತರರನ್ನು ನೋಡಿ ಎಲ್ಲರೂ ದಂಗುಬಡಿದರು. ಕ್ರಾಂತಿ ಜಿರೋದಿಂದ ಆರಂಭವಾಗಿ, ಬೃಹತ್ ಸಮುದ್ರವಾಗುತ್ತದೆ ಎಂದು ತಿಳಿದಿದ್ದ ಆತ. ನಂತರ ಆ ಹುಡುಗರಿಗೆ ನಿರ್ದಿಷ್ಟ ಭೋದನೆ ಆರಂಭಿಸಿದ. ಮೊದಲನೆಯದು ಆಭಿಪ್ರೇರಣೆ, ಯೋಜನೆ (ಸೊನ್ನೆ), ಯೋಜನೆ (1). ಆಮೇಲೆ ಮೌಲ್ಯಮಾಪನ, ಅನುಷ್ಠಾನ ಎಂಬ ನಿರ್ದಿಷ್ಟ ಭೋದನಾಕ್ರಮದ ಹಿನ್ನಲೆಯಲ್ಲಿ ಆ ಹುಡುಗರನ್ನು ತಯಾರು ಮಾಡಿದ. ಕಾಗೆಯೂ ಲವಲವಿಕೆಯಿಂದ ಇತ್ತು. ಕೊನೆಯ ದಿನ ಧೈರ್ಯ ತುಂಬಿ ಬೀಳ್ಕೊಟ್ಟ. ಕರಿಯ ಹುಡುಗರು ದಂಡಕಾರಣ್ಯ ಪ್ರವೇಶಿಸಿದ್ದರು.
ಮತ್ತೆ ಈತ ಕಾಲೇಜಿನಲ್ಲಿ ಕರಿಯ ಹುಡುಗರಿಗೆ ಅಭಿಪ್ರೇರಿಸುವ ಕೆಲಸಕ್ಕೆ ಮುಂದಾದ. ಒಂದು ದಿನ ಸಂಜೆ ಮನೆಗೆ ಪೋಲಿಸರು ಬಂದರು. ಈತನ ಬಗ್ಗೆ ಮಾಹಿತಿ ಕಲೆ ಹಾಕಿದರು. ಈತನ ಸಾಹಿತ್ಯವನ್ನು ಪರಿಶೀಲಿಸಿದರು. ಆ ಒಂಟಿಕಣ್ಣಿನ ಒಂದೇ ರೆಕ್ಕೆಯ ಕಾಗೆಯನ್ನು ನೋಡಿ ಮರಳಿ ಹೋದರು. ಆತ ಕಾಲೇಜು ಮುಗಿಸಿಕೊಂಡು ಬಂದೊಡನೆಯೇ ಅಣ್ಣ, ತಮ್ಮ, ಅಮ್ಮ, ಅಪ್ಪ ಎಲ್ಲರೂ ಬಂದು ನಿಂತರು. 'ನೋಡು ಇದು ಒಳ್ಳೆಯದಲ್ಲ. ಭಾರತದಲ್ಲಿ ಅಂತಹ ಕ್ರಾಂತಿ ಆಗಲು ಸಾಧ್ಯವಿಲ್ಲ. ಕ್ರಾಂತಿ ಮಾಡಲು ಬಂದವರೆಲ್ಲ ಏನೇನೋ ಆಗಿದ್ದಾರೆ. ಬಸವಣ್ಣನನ್ನು ಬಸವಳಿಸಲಾಗಿದೆ. ಬುದ್ಧನಿಗೆ ಬೇರೆ ದೇಶಗಳ ದಾರಿ ತೋರಿಸಿ ದಶಾವತಾರಗಳಲ್ಲಿ ಒಂದು ಸ್ಥಾನ ಕಲ್ಪಿಸಲಾಗಿದೆ. ಈ ದೇಶದಲ್ಲಿ ಕ್ರಾಂತಿ ಎಂಬುದು ಅಸಾಧ್ಯವಾಗುತ್ತದೆ. ನೀನು ತಪ್ಪು ತಿಳಿದುಕೊಂಡಿದ್ದಿ.  ಇಂತಹ ಕ್ಲಿಷ್ಟಕರವಾದ ಸಮಯದಲ್ಲಿ ಈ ವ್ಯವಸ್ಥೆ ತನ್ನ ಸಾರ್ವಭೌಮತ್ವ ಮೆರೆದಿದೆ. ನೋಡು ಹಾಗೆಲ್ಲ ಮಾಡುವುದು ಒಳ್ಳೆಯದಲ್ಲ' ಎಂದು ಪರಿಪರಿಯಾಗಿ ತಿಳಿಸಿಹೇಳಿದರು. ಈತ ಕೇಳಬೇಕಲ್ಲ? ಕೇಳುವವನೂ ಅಲ್ಲ. ಅವರಿಗೆ ಒಳಗೊಳಗೆ ಕುದಿ, ಕ್ಲಿಷ್ಟತೆ, ಆಳದಲ್ಲಿ ಬೆಂಕಿ. ಈತನನ್ನು ಬದಲಾಯಿಸಲು ಸಾಧ್ಯವೇ ಇಲ್ಲವೋ ಎನ್ನುವಂತೆ ಎಲ್ಲರೂ ಮನೆಯ ಒಳಗೆ ಹೋದರು. ಈ ದಿನ ಏಕಾದಶಿ ಆದುದರಿಂದ, ಧ್ಯಾನ ಕರ್ಮಕ್ಕೆ ಸನ್ನದ್ಧರಾದರು. ಕಾಗೆ ಹಾಡು ಹೇಳಹತ್ತಿತು.
ನನ್ನ ಬಂಧುಗಳಿಂದ ನಾನು ದೂರ
ನಾನು ಇನ್ನೂ ಭೂಮಿಗೆ ಭಾರ
ಇಲ್ಲಿದೆ ಒಂದು ಪ್ರಯೋಗಾಲಯ
ನಾನು ಆಗಿದ್ದೇನೆ ಮೂಲ ದ್ರವ್ಯ
ನನ್ನ ಬಿಡುಗಡೆ ಎಂದೋ ಆಗುವುದು
ನಾನು ಇಲ್ಲಿದ್ದರೆ ಏನೂ ತಿಳಿಯದು
ಅವರಿಗೆ ಬಹಳ ಕಿರಿಕಿರಿ ಅನ್ನಿಸಹತ್ತಿತ್ತು. ಕಾಗೆ ಹೊಕ್ಕ ಮನೆ ಅಧಃಪತನದ ಸಂಕೇತ. ಅದರಲ್ಲಿ ನಾವು ಕಾಗೆಯ ಜತೆ ವಾಸ ಮಾಡುತ್ತಿದ್ದೇವೆ. ಈ ದಿನ ಏನಾದರೂ ಮಾಡಬೇಕು ಎಂದು ಎಲ್ಲರೂ ತೀರ್ಮಾನಿಸಿದರು. ಆತ ಕಾಲೇಜಿಗೆ ಹೋದ. ಮಿಲಿಟರಿ ಬೆಕ್ಕುಗಳನ್ನು ಮೆಲ್ಲಗೆ ಕಿಟಕಿ ತೆಗೆದು ಕಾಗೆ ಇದ್ದ ರೂಮಿನೊಳಗೆ ಬಿಟ್ಟರು. ಕಾಗೆ ಪ್ಯಾನಿನ ಮೇಲೆ ಬಂದು ಕುಳಿತುಕೊಂಡಿತು. ಮಿಲಿಟರಿ ಬೆಕ್ಕುಗಳು ಕಾದು ಕಾದು ಸೋತು ಹೊರಬಂದವು. ಕಾಗೆ ಎರಡನೆ ಸಲ ಜನ್ಮ ಉಳಿಸಿಕೊಂಡಿದ್ದಕ್ಕೆ ಸಮಾಧಾನಗೊಂಡಿತು.
ಇಂದು ಆತನಿಗೆ ಮೇಲಿಂದ ಮೇಲೆ ಫೋನ್ ಬರಹತ್ತಿತು. ದಂಡಕಾರಣ್ಯದಲ್ಲಿ ಕೋಂಬಿಂಗ್ ಆರಂಭವಾಯಿತಂತೆ, ನಾಲ್ಕು ಜನ ಸತ್ತುಹೋದರಂತೆ. ತಾನು ಕಳುಹಿಸಿದ ಆ ನಾಲ್ಕು ಹುಡುಗರು ಸತ್ತು ಹೋದರೆ? ಮನೆಗೆ ಬಂದ. ಟಿ.ವಿ. ಆನ್ ಮಾಡಿದ. ಕಾಗೆಯೂ ಕಾಣಲಿಲ್ಲ. ಬ್ರೇಕಿಂಗ್ ಸಮಾಚಾರ ಪದೇಪದೇ ಬರುತ್ತಿತ್ತು. ಕಪ್ಪಗೆ ಗುಂಡಗಿದ್ದ ನಾಲ್ಕು ಜನರನ್ನು ದಂಡಕಾರಣ್ಯದಲ್ಲಿ ಕೊಲ್ಲಲಾಗಿದೆ. ಒಬ್ಬನನ್ನು ಲಿಂಗಂ ಎಂದು ಗುರುತಿಸಲಾಗಿದೆ. ಇನ್ನೂ ಮೂವರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಕುಸಿದು ಮಂಚದ ಮೇಲೆ ಅಂಗಾತ ಮಲಗಿದ. ಫ್ಯಾನಿನ ಮೇಲೆ ಕಾಗೆ ನಡುಗುತ್ತ ಕುಳಿತಿತ್ತು. 'ಬಾ' ಎಂದು ಕರೆದ. ಅದು ಬರಲಿಲ್ಲ. ನಡುಗುತ್ತ ಅಲ್ಲೇ ಕುಳಿತಿತ್ತು.
ಪೋಲಿಸರು ಬಂದು ಇವನನ್ನು ಕರೆದುಕೊಂಡು ಹೋದರು. ತಕ್ಷಣವೇ ಇವನ ಬಂಧುಗಳು ಅವನ ರೂಮಿಗೆ ಬಂದು ಫ್ಯಾನಿನ ಮೇಲೆ ಕುಳಿತಿದ್ದ ಕಾಗೆಯನ್ನು ಕೆಳಗಿಳಿಸಿದರು, ಒತ್ತಾಯಪೂರ್ವಕವಾಗಿ. ಒಂದು ರೆಕ್ಕೆಯನ್ನು ಮತ್ತೊಂದು ಕಣ್ಣನ್ನು ಕಿತ್ತರು. ಅದು ಚೀರುತ್ತಾ ಕಾ...ಕಾ... ಎಂದು ನೆಲದ ಮೇಲೆ ಬಿದ್ದು ಒದ್ದಾಡಹತ್ತಿತು. ಅವನಿಗೆ ಸಂಜೆಯವರೆಗೂ ಠಾಣೆಯಲ್ಲಿ ಮಾಹಿತಿಗಾಗಿ ಹಿಂಸಿಸಿದರು. ಆಮೇಲೆ ಹೊರಗಡೆ ಹೋಗದ ಮುಚ್ಚಳಿಕೆಯೊಂದಿಗೆ ಮನೆಗೆ ಕಳುಹಿಸಿದರು. ಮನೆಗೆ ಬಂದ. ಕಾಗೆ ನೆಲದ ಮೇಲೆ ಬಿದ್ದು ಒದ್ದಾಡಹತ್ತಿತ್ತು. ಅದಕ್ಕೆ ಡೆಟಾಲ್ ಹಾಕಿ ತೊಳೆದು ಔಷಧಿ ಹಚ್ಚಿದ. ಕಾಗೆ ತನಗೆ ಬಂದ ದುಃಸ್ಥಿತಿಗೆ ಇವನೇ ಕಾರಣ ಎಂದು ದೂಷಿಸಿತು.  ಅವನ ಕೂದಲು ಕೆದರಿದ್ದವು. ಅಂಗಿ ಪೋಲಿಸರ ಹೊಡೆತದಿಂದ ಹರಿದಿತ್ತು. ಕಾಗೆಯನ್ನು ಹೆಗಲ ಮೇಲೆ ಕೂಡ್ರಿಸಿಕೊಂಡು ಪಥಸಂಚಲನಕ್ಕೆ ಹೊರಟ.
ಶೋಷಣೆ ಅಸಮಾನತೆಗೆ ಧಿಕ್ಕಾರ
ಭೂಮಿ ಮರು ಹಂಚಿಕೆಯಾಗಲಿ
ಕಪ್ಪು ಜನರು ಒಂದಾಗಲಿ
ಮಾಸ್ತರರ ಪಥಸಂಚಲನ ಪ್ರಮುಖ ಬೀದಿಗಳಿಂದ ಮಾರ್ಕೆಟ್, ಬಸ್‌ಸ್ಟ್ಯಾಂಡ್, ರೈಲ್ವೆ ನಿಲ್ದಾಣಗಳಲ್ಲಿ ಮುಂದೆ ಹೊರಟಿತ್ತು.
ಎರಡೂ ಕಣ್ಣು ಕಳೆದುಕೊಂಡ ಕಾಗೆ,
ಎರಡೂ ರೆಕ್ಕೆ ಕಳೆದುಕೊಂಡ ಆ ಕಾಗೆ,
ಕಾ...ಕಾ... ಕಾ...ಕಾ... ಎಂದು ತನ್ನ ಬಳಗವನ್ನು ಕರೆಯಹತ್ತಿತು. ಮನುಷ್ಯನ ಜತೆಗಿದ್ದ ಇದನ್ನು ನೋಡಿ ಅವು ಕೂಡ ಬರಲಿಲ್ಲ.

=  ಮಹಾಂತೇಶ ನವಲಕಲ್
     mahantnavalkal
    @gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com