ಓದಿನ ಮೋದ
ಅಂತಾರಾಷ್ಟ್ರೀಯ ಅಂಕಿಅಂಶಗಳು ಏನೇ ಹೇಳಲಿ, ಭಾರತೀಯರ ಓದಿನ ಅಭಿರುಚಿ ತಗ್ಗಿಲ್ಲ. ಅದರಲ್ಲೂ ನಮ್ಮ ದೇಶದ ಪುಸ್ತಕ ಮುದ್ರಣ ಉದ್ಯಮವಂತೂ ನಾಗಾಲೋಟದಿಂದ ಮುನ್ನಡೆಯುತ್ತಲೇ ಇದೆ. ಹೊಸ ವಿವರಗಳು ಇದನ್ನು ಖಚಿತಪಡಿಸಿವೆ. ಅಂದಹಾಗೆ ನಮ್ಮ ದೇಶದ ಪುಸ್ತಕೋದ್ಯಮದ ಅಂದಾಜು ವಹಿವಾಟು ಎಷ್ಟು ಗೊತ್ತೆ? 10 ಸಾವಿರ ಕೋಟಿ ರುಪಾಯಿ ಮತ್ತು ಅದು ಬೆಳೆಯುತ್ತಲೇ ಇದೆ.
ಭಾರತೀಯರ ಈ ಸಾಹಿತ್ಯ ಪ್ರೀತಿಗೆ ಕಾರಣ ಏನಿರಬಹುದು? ತಜ್ಞರ ಅಭಿಪ್ರಾಯದಂತೆ ಕೆಲವು ಕಾರಣಗಳು ಇಲ್ಲಿವೆ: ಮುದ್ರಿತ ಪುಸ್ತಕ ಓದುವ ಶತಮಾನದ ಹವ್ಯಾಸ, ಸಾಂಪ್ರದಾಯಿಕ ಮನಃಸ್ಥಿತಿ, ಓದುವ ಹವ್ಯಾಸವನ್ನು ಪ್ರಚೋದಿಸುವ ಸನ್ನಿವೇಶಗಳು, ಇತ್ತೀಚೆಗೆ ಎಲ್ಲ ಕಡೆಗೆ ಹೆಚ್ಚುತ್ತಿರುವ ಸಾಹಿತ್ಯ ಮತ್ತು ಪುಸ್ತಕ ಮೇಳಗಳು, ಉದ್ಯಮವನ್ನು ಜೀವಂತವಾಗಿಟ್ಟುಕೊಳ್ಳಲು ಬೆಲೆಯಲ್ಲಿ ತೋರುತ್ತಿರುವ ವಿನಾಯಿತಿ ಮುಂತಾದವು.
ಇದು ಗೊತ್ತಾದದ್ದು ಇತ್ತೀಚೆಗೆ ನಡೆದ ಫ್ರಾಂಕ್‌ಫರ್ಟ್ ಪುಸ್ತಕ ಮೇಳದಲ್ಲಿ. ಅಲ್ಲಿ ಭಾರತೀಯ ಪುಸ್ತಕೋದ್ಯಮವೇ ಶೇಕಡ 15ರಷ್ಟು ಹೆಚ್ಚಿನ ವ್ಯಾಪಾರ ದಾಖಲಿಸಿತಂತೆ. ಇತ್ತೀಚೆಗೆ ನ್ಯಾಷನಲ್ ಬುಕ್ ಟ್ರಸ್ಟೇ ನಡೆಸಿದ ಸರ್ವೆಯೂ ಇದನ್ನೇ ಹೇಳಿದೆ. ಭಾರತೀಯ ಯುವಜನತೆಯ ನಾಲ್ಕನೇ ಒಂದು ಭಾಗ ಸಕ್ರಿಯ ಓದುಗರು (ಸುಮಾರು 8.4 ಕೋಟಿ). ಭಾರತದಲ್ಲಿರುವ ಸಣ್ಣ, ದೊಡ್ಡ ಪುಸ್ತಕೋದ್ಯಮಿಗಳ ಸಂಖ್ಯೆ ಸುಮಾರು 60,000. ಇಲ್ಲಿ ಪ್ರತಿವರ್ಷ ಮುದ್ರಿತವಾಗುವ ಇಂಗ್ಲಿಷ್ ಹಾಗೂ ಸ್ಥಳೀಯ ಭಾಷೆಯ ಪುಸ್ತಕಗಳ ಸಂಖ್ಯೆ ಸುಮಾರು 1 ಲಕ್ಷ.
ಕೊಳ್ಳುವವರೇನೋ ಇದ್ದಾರೆ. ಆದರೆ ಓದುವವರಿದ್ದಾರೆಯೆ? ಯಾವುದನ್ನು ಓದುತ್ತಾರೆ? ಇದರಲ್ಲಿ ವ್ಯಕ್ತಿತ್ವ ವಿಕಸನ ಪುಸ್ತಕಗಳನ್ನು ಮಾತ್ರ ಓದುವವರೆಷ್ಟು? ಗಂಭೀರ ಸಾಹಿತ್ಯದ ಓದುಗರೆಷ್ಟು? ಈ ಬಗ್ಗೆ ಯಾವ ಸರ್ವೆಯೂ ನಡೆದಂತಿಲ್ಲ.
ಕತೆಯೂ ನೀತಿಯೂ
ಒಮ್ಮೆ ಝೆನ್ ಯತಿಯೊಬ್ಬನಿದ್ದ. ಹತ್ತಾರು ವರ್ಷ ಕಾಲ ಧ್ಯಾನ, ತಪ ನಡೆಸಿದ ಬಳಿಕ ಆತನಿಗೆ ಜ್ಞಾನೋದಯವಾಯಿತು. ಅದಾದ ಕೂಡಲೇ ಆತ ಎದ್ದು ಬಂದು, ತಾನು ಅಷ್ಟು ವರ್ಷ ಕಾಲ ಓದುತ್ತಿದ್ದ ಪುಸ್ತಕಗಳನ್ನೆಲ್ಲ ಬೆಂಕಿ ಹಾಕಿ ಸುಟ್ಟುಬಿಟ್ಟ. ಇಲ್ಲಿಗೆ ಕತೆ ಪೂರ್ತಿಯಾಯಿತು. ಇದರ ನೀತಿ ಏನು? ನೀತಿಯ ವಿಚಾರ ಅತ್ಲಾಗಿರಲಿ. ಈ ಕತೆಯ ಬಗ್ಗೆ ಜನರ ಅಭಿಪ್ರಾಯ ಏನು ಎಂಬುದನ್ನು ನೋಡುವುದೇ ಕುತೂಹಲಕರ. ಅವು ಹೀಗಿವೆ:
ಜ್ಞಾನೋದಯ ಪುಸ್ತಕಗಳಿಂದ ಆಗುವುದಿಲ್ಲ, ಅನುಭವದಿಂದಾಗುತ್ತದೆ.
ಇನ್ನೊಬ್ಬರ ಯೋಚನೆಗಳು ನಮಗೆ ನೆರವಾಗುವುದಿಲ್ಲ. ನಮ್ಮ ಸ್ವಂತದ್ದು ಮಾತ್ರ.
ಅಷ್ಟೂ ಪುಸ್ತಕಗಳಿಂದ ದೊರೆಯಬಲ್ಲದ್ದು ಒಂದು ಕ್ಷಣದ ಬೆಳಕಿನಿಂದ ದೊರೆಯುತ್ತೆ ಎನ್ನುವುದೇ ಇದರ ಅರ್ಥ.
ಜ್ಞಾನೋದಯಕ್ಕೆ ಸಹಾಯ ಮಾಡಿದ ಪುಸ್ತಕಗಳನ್ನೇ ಸುಟ್ಟನಲ್ಲ, ಅದೆಂಥ ಜ್ಞಾನೋದಯ?
- ನನ್ನ ಸ್ಕೂಲಿನ ಪುಸ್ತಕಗಳನ್ನು ಸುಟ್ಟು ಹಾಕಬೇಕೆನಿಸುತ್ತೆ. ನನಗೂ ಜ್ಞಾನೋದಯ ಆಗಿರಬಹುದಾ?
-ಅಲ್ಲಿ ತುಂಬಾ ಚಳಿ ಇತ್ತಾ?
ಅಳಿಲಿನಂತೆ
ಬದುಕುವುದೆಂದರೆ ತಮಾಷೆಯಲ್ಲ
ಬದುಕಿರಬೇಕು ಜತನವಾಗಿ
ಗಂಭೀರವಾಗಿ
ಉದಾಹರಣೆಗೆ ಅಳಿಲಿನಂತೆ
ಜೀವನವೆಂದರೆ ಅದರಾಚೆಗೂ
ಅಲ್ಲ ಮೇಲೂ ಅಲ್ಲ
ಬದುಕಿಡೀ ಬದುಕೇ ವ್ಯಾಪಿಸಿರುವಂತೆ.
- ನಜೀಂ ಹಿಕ್ಮೆತ್
- ಕೇರ