ಅನುಕಂಪದ ನೌಕರಿ

Updated on: 

ಊರು, ಹೆಸರಿಲ್ಲ
ತಂದೆ ತಾಯಿ ಇಬ್ಬರೂ ಸರ್ಕಾರಿ ನೌಕರಿಯಲ್ಲಿದ್ದು ತಂದೆ ಹೃದಯಾಘಾತದಿಂದ ಮೃತಪಟ್ಟಿರುತ್ತಾರೆ. ತಾಯಿಯ ವಾರ್ಷಿಕ ಆದಾಯ 2,30,000/- ರೂಗಳು ಇವರ ಮಗಳಿಗೆ ಅನುಕಂಪದ ಆಧಾರದ ಮೇಲೆ ನೌಕರಿ ದೊರೆಯುವುದೇ ?
ತಂದೆ ನೌಕರಿಯಲ್ಲಿದ್ದಾಗಲೇ ಮೃತಪಟ್ಟಿದ್ದು ಕುಟುಂಬದ ಮಾಸಿಕ ಆದಾಯ (ತಾಯಿಯ ಆದಾಯವೂ ಸೇರಿದಂತೆ) ಬೆಂಗಳೂರಿನಲ್ಲಿ ಒಬ್ಬ ಮೊದಲ ದರ್ಜೆ ಗುಮಾಸ್ತನ ಸರಾಸರಿ ಆದಾಯಕ್ಕಿಂತ ಕಡಿಮೆ ಇದ್ದರೆ ಮಾತ್ರ ಅನುಕಂಪದ ಆಧಾರದ ಮೇಲೆ ನೌಕರಿ ಪಡೆಯಲು ಅರ್ಹತೆ ಇರುತ್ತದೆ. ಸರಾಸರಿ ಆದಾಯವೆಂದರೆ ಅವರ ವೇತನ ಶ್ರೇಣಿಯ ಕನಿಷ್ಠ ಹಾಗೂ ಗರಿಷ್ಠಗಳ ಸರಾಸರಿ ಹಾಗೂ ಅದರ ಮೇಲೆ ಡಿ.ಎ, ಎಚ್.ಕ್ಯೂ.ಎ, ಸಿ.ಸಿ.ಎ ಮೊತ್ತಗಳು ಆದರೆ ತಂದೆಯ ಕುಟುಂಬ ವೇತನ ಇತರೆ ಪಿಂಚಣಿ ಸೌಲಭ್ಯಗಳು ಸೇರುವುದಿಲ್ಲ. ಸತ್ತ ನೌಕರನ ಹೆಂಡತಿ, ಮಗ, ನಂತರ ಮಗಳು ಈ ರೀತಿಯಲ್ಲಿ ಆದ್ಯತೆ ಮೇಲೆ ನೌಕರಿ ಕೊಡಲಾಗುವುದು.
ಮಕ್ಕಳ ಸ್ವಾಧೀನ
ಕೃಷ್ಣಾರೆಡ್ಡಿ, ಊರಿಲ್ಲ
ನಮ್ಮ ಮಗಳ ವರದಕ್ಷಿಣೆ ಸಾವಿನ ಪ್ರಕರಣದಲ್ಲಿ ಆರೋಪ ಸಾಬೀತಾಗದೆ ಆರೋಪಿಗಳು ಬಿಡುಗಡೆಯಾಗಿದ್ದಾರೆ. ಆಕೆಯ ಮೇಂಟೇನನ್ಸ್ (ನಿರ್ವಹಣೆ) ಪ್ರಕರಣ ನ್ಯಾಯಾಲಯದಲ್ಲಿದೆ. ಈಗ ಆ ಮಕ್ಕಳ ತಂದೆ (ನಮ್ಮ ಅಳಿಯ) ಮಕ್ಕಳನ್ನು ತಮ್ಮ ವಶಕ್ಕೆ ಕೇಳಬಹುದೇ? ನಾವು ಬಿಡುಗಡೆ ವಿರುದ್ಧ ಹೈಕೋರ್ಟ್‌ಗೆ ಹೋಗಬಹುದೆ?
ಬಿಡುಗಡೆಯಾದ ಪ್ರಕರಣದಲ್ಲಿ ಬಿಡುಗಡೆ ಆದೇಶ ತಲುಪಿದ 90 ದಿನಗಳೊಳಗೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು. ಮಕ್ಕಳ ಸ್ವಾಧೀನದ ಬಗ್ಗೆ ಹಿಂದೂ ವಿವಾಹ ಕಾಯ್ದೆ 1935 ಇದರ ಕಲಂ 26ರಂತೆ ಮಕ್ಕಳ ಹಿತದೃಷ್ಟಿಯಿಂದ ನ್ಯಾಯಾಲಯವು ಸೂಕ್ತ ಆದೇಶ ನೀಡಬಹುದು.
ಮದುವೆ ಸಾಬೀತು
ಎಂ.ಎಸ್ ಛಪ್ಪರ್‌ಬಂದ್, ವಿಜಾಪುರ
1) ಮುಸ್ಲಿಂ ಹೆಂಗಸೊಬ್ಬಳು ಜೀವನಾಂಶ ಭತ್ಯೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ತಿಂಗಳಿಗೆ ರೂ 1500/- ನೀಡುವಂತೆ ಆದೇಶ ಪಡೆದಳು. ಹಣ ಪಾವತಿ ಆಗದೆ ಇದ್ದಾಗ ರಿಕವರಿಗಾಗಿ ಅರ್ಜಿಹಾಕಿದಳು, ಅದು ಮುಗಿಯುವುದರೊಳಗೆ ಅವಳು ತೀರಿಕೊಂಡಳು ಅಲ್ಲಿಯವರೆಗೆ ಬಾರದಿದ್ದ ಹಣವನ್ನು ಆಕೆಯ ತಾಯಿಯು ಪಡೆಯಬಹುದೇ? 2) ಮುಸ್ಲಿಂ ಹೆಂಗಸೊಬ್ಬಳು ಮದುವೆಯಾಗಿ 12 ವರ್ಷವಾದರೂ ಮಕ್ಕಳನ್ನು ಹಡೆಯಲಿಲ್ಲ, ಆಕೆಯ ಗಂಡ ಮದುವೆಯ ದಾಖಲೆಗಳನ್ನು ನಾಶ ಮಾಡಿದ್ದರಿಂದ ಆಕೆ ಮದುವೆಯಾದಾಗಿನ ಭಾವಚಿತ್ರ, ಪಡಿತರ ಚೀಟಿ ಇತ್ಯಾದಿಗಳನ್ನು ಕೋರ್ಟ್‌ನಲ್ಲಿ ಹಾಜರುಪಡಿಸಿದ್ದಾಳೆ. ತೀರ್ಪು ಏನಾಗಬಹುದು ?
1) ಮುಸ್ಲಿಂ ಷರಿಯಾತ್ ಕಾನೂನಿನಂತೆ ತಾಯಿಯು ಮಗಳ ಬಾಕಿಯಿರುವ ಜೀವನಾಂಶ ಭತ್ಯೆ ಪಡೆಯಲು ಅರ್ಹಳು. 2) ಮುಸ್ಲಿಂ ವಿವಾಹ ಪದ್ಧತಿಯಲ್ಲಿ (ಸುನ್ನಿಗಳಲ್ಲಿ) ಮದುವೆಯು ಇಬ್ಬರು ಸಾಕ್ಷಿಗಳ ಮುಂದೆ ನಡೆಯಬೇಕೆಂದು ಕಡ್ಡಾಯ. ಆ ಸಾಕ್ಷಿಗಳಿದ್ದರೂ ನೆರೆಹೊರೆಯವರ ಸಾಕ್ಷಿಗೆ ಬೇರೆ ದಾಖಲಾತಿಗಳು, ಪಡಿತರ ಚೀಟಿ, ಜೊತೆಗಿನ ಭಾವಚಿತ್ರ ಮುಂತಾದವು ಮದುವೆಯಾಗಿದೆ ಎಂದು ಸಾಬೀತು ಪಡಿಸಲು ಸಾಕು.
ಸಹಿಯ ಭಾಷೆ
ಊರು ಹೆಸರಿಲ್ಲ.
ಸಹಿ ಮಾಡಲು ನಿಗದಿತ ಭಾಷೆ ಅಥವಾ ರೀತಿ ಇದೆಯೇ ?
ಇಲ್ಲ, ಯಾವುದೇ ಭಾಷೆ ಅಥವಾ ರೀತಿಯಲ್ಲಿ ಸಹಿ ಮಾಡಬಹುದು. ಆದರೆ ಅದು ಯಾವಾಗಲೂ ಒಂದೇ ಭಾಷೆ ಹಾಗೂ ರೀತಿಯಲ್ಲಿರಬೇಕು.
ತಂದೆಯ ಆಸ್ತಿ ಹಕ್ಕು
ಪುಷ್ಪಲತಾ, ಚಿಕ್ಕಮಗಳೂರು
ತಂದೆಗೆ ನಾವು ಮೂರು ಜನ ಹೆಣ್ಣು ಮಕ್ಕಳು, ತಾಯಿ ತೀರಿಕೊಂಡ ನಂತರ ತಂದೆ ಮತ್ತೊಂದು ಮದುವೆಯಾಗಿ ಆ ಹೆಂಡತಿಗೂ ಮೂರು ಜನ ಮಕ್ಕಳು. ನಮಗೆ ತಂದೆಯ ಆಸ್ತಿಯಲ್ಲಿ ಹಕ್ಕಿಲ್ಲವೇ ?
ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಎಲ್ಲ ಮಕ್ಕಳಿಗೂ ಸಮಾನವಾದ ಹಕ್ಕಿದೆ. (ಕಲಂ 6 ಹಿಂದೂ ವಿವಾಹ ಕಾಯ್ದೆ, 1956).
-ಎಚ್.ಆರ್. ಕಸ್ತೂರಿರಂಗನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com