

ರೆಡ್ ಪಿರೆಟ್... ಇದರ ವೈಜ್ಞಾನಿಕ ಹೆಸರು ತಲಿಕಡ ನೈಸಿಯಸ್. ಇವು ಸಣ್ಣ ಗಾತ್ರದ ಚಿಟ್ಟೆಗಳು. ಈ ಚಿಟ್ಟೆಗಳು ಭಾರತ, ಶ್ರೀಲಂಕಾ ಮತ್ತು ಮಯನ್ಮಾರ್ಗಳಲ್ಲಿ ಕಾಣ ಸಿಗುತ್ತವೆ. ಇವುಗಳು ಮಂದಗತಿಯಲ್ಲಿ ಹಾರುತ್ತವೆ. ಇವುಗಳ ಮೇಲ್ಭಾಗದ ರೆಕ್ಕೆ ಕಪ್ಪು ಬಣ್ಣ ಹೊಂದಿದ್ದು, ಹಿಂದಿನ ಅಂಚು ಕೇಸರಿ ಬಣ್ಣದಿಂದ ಕೂಡಿದೆ. ಇವುಗಳ ಮೇಲ್ಭಾಗದ ರೆಕ್ಕೆಯ ಅಂಚಿನ ಸುತ್ತಲೂ ಇರುವ ಬಿಳಿ ಚುಕ್ಕೆಗಳು ಈ ಚಿಟ್ಟೆಗಳನ್ನು ಇನ್ನೂ ಮನಮೋಹಕವಾಗಿ ಕಾಣುವಂತೆ ಮಾಡುತ್ತವೆ. ಇದರ ಕೆಳಭಾಗದ ರೆಕ್ಕೆಯು ಪ್ರಮುಖವಾಗಿ ಬಿಳಿ ಬಣ್ಣವನ್ನು ಹೊಂದಿದ್ದು, ಮುಂಭಾಗದ ರೆಕ್ಕೆಯ ಅಂಚು ಕಪ್ಪು ಬಣ್ಣವನ್ನೂ, ಹಿಂಭಾಗದ ರೆಕ್ಕೆಯ ಅಂಚು ಕೇಸರಿ ಬಣ್ಣವನ್ನೂ ಹೊಂದಿವೆ. ಇದರ ಹೊಟ್ಟೆ ಮತ್ತು ಎದೆಯ ಮೇಲ್ಭಾಗ ಕಪ್ಪು ಮತ್ತು ಕೆಳಭಾಗವು ಬಿಳಿ ಬಣ್ಣದಿಂದ ಕೂಡಿವೆ. ಇವುಗಳ ರೆಕ್ಕೆಯ ಅಗಲ 30-36 ಮಿ.ಮೀ.
ವಿಶೇಷ ಮಾಹಿತಿ: ಕೆಲವು ಚಿಟ್ಟೆಗಳು ಅವುಗಳ ಕಾಲಿನಲ್ಲಿರುವ ಸಣ್ಣ ಕೂದಲಿನಿಂದ ತಮ್ಮ ಮೀಸೆಯನ್ನು ಸ್ವಚ್ಛ ಮಾಡಿಕೊಳ್ಳುತ್ತವೆ.
-ಆನಂದ್ ಎಸ್. ಜೋಶಿ
ananda.s.joshi@gmail.com