ಆರೋಹಣ (ಕಾಲ)

Updated on: 

ಆ ಸಂಜೆ ಬನಾರಸ್ಸಿನ ಕೇದಾರೇಶ್ವರ ಮಂದಿರದ ಕಂಬ ಕಂಬಗಳೂ ಸಿತಾರಿನ ತಂತಿಗಳ ಆರ್ದ್ರ ನಾದವನ್ನು ಮಾರ್ದನಿಸುತ್ತಿದ್ದವು. ಸಂಜೆ ಐದಕ್ಕೆಲ್ಲ ಆಗಲೇ ತುಂಬಿದ್ದ ಮಂದಿರದೊಳಗಿನ ಕೇದಾರನಾಥ ಸಭಾಂಗಣದಲ್ಲಿ  ಪ್ರಣಾಮ್, ಲಲತ್ ರಾಗದ ಆರಂಭದ ಆಲಾಪದಲ್ಲಿ ಎಳೆದು ತೋರಿಸಿದ್ದ ನಾಲ್ಕಾರು ಮೀಂಡುಗಳಿಗೆ ಸ್ತಬ್ಧವಾಗಿದ್ದ ಸಭಾಂಗಣವು ಸುಮಾರು ಒಂದು ತಾಸು ಅವನು ನುಡಿಸಿದ್ದ ಆಲಾಪ್ ಜೋಡ್‌ಗಳಲ್ಲಿ ಮೈಮರೆತಿತ್ತು. ಆ ಅವಧಿಯಲ್ಲಿ ಅಲ್ಲಿ ತುಂಬಿಕೊಂಡಿದ್ದು ಕೇವಲ ಮಧ್ಯಮಶ್ರುತಿಯ ಹದವಾದ ಝೇಂಕಾರ. ನಿಷಾದವನ್ನು ದಾಟಿ ತಾರಕದ ಕೋಮಲ ಋಷಭವನ್ನು ಸ್ಪರ್ಶಿಸಿ ತಾರ ಷಡ್ಜದಲ್ಲಿ ಆನಂದದಿಂದ ನಿಂತು ಮತ್ತೆ ಋಷಭವನ್ನು ಹತ್ತಿ ಕೋಮಲ ಧೈವತವನ್ನು ಹಾದು ತೀವ್ರಮಧ್ಯಮದಲ್ಲಿ ಪುಳಕಗೊಂಡು ಶುದ್ಧಮಧ್ಯಮದಲ್ಲಿ ಬಂದು ನಿಂತು ಮತ್ತೇನು ಎಂಬ ಲಲಿತ ಚಲನೆ ನಡುವೆ ಆಗಾಗ ಇಡೀ ರಾಗದ ಕೋಮಲ ತೀವ್ರತೆಯನ್ನು ತೋರಿಸುವ ತರಾಫಿನ ತಂತಿಗಳ ಕಲರವ ಝಾಲಾದ ತೀವ್ರಗತಿಗೆ ಜಗತ್ತನ್ನೇ ಮರೆತ ಸಂಗೀತ ಪ್ರಿಯರ ಮಾನಸ ಸರೋವರದಲ್ಲಿ ಮನೋಹರ ಲಯಬದ್ಧ ತರಾನಾತರಂಗ!
ಸಭೆಗೆ ಸಭೆಯೇ ಎದ್ದು ನಿಂತಿದ್ದು ಕಾರ್ಯಕ್ರಮದ ಕೊನೆಯ ತಿಹಾಯಿ ಮುಗಿಯುವ ಹೊತ್ತು.
'ಪ್ರಣಾಮ್ ಭಾಯೀ... ಪ್ರಣಾಮ್ ಹೊ ಯಾರ್!' ಇನ್ನೂ ಇಪ್ಪತ್ತೆಂಟರ ಆಸುಪಾಸಿನಲ್ಲಿದ್ದ ಪ್ರಣಾಮ್ ತನ್ನ ಕಚೇರಿಗೆ ವಂದನೆಗಳನ್ನು ಸ್ವೀಕರಿಸಿದ್ದು ಹಾಗೆ. ಕಾರ್ಯಕ್ರಮವನ್ನು ಮುಗಿಸಿ ಕೇದಾರನಾಥನ ಆರತಿಯ ಎದುರು ನಿಂತು ತುಸು ಹೊತ್ತು ತನ್ನ ಸಿತಾರನ್ನು ಬ್ಯಾಗಿಗೆ ಹೊಂದಿಸಿ ಇನ್ನೇನು ಪ್ರಣಾಮ್ ಹೊರಡಬೇಕೆನ್ನುವಷ್ಟರಲ್ಲಿ ನಡುವಯಸ್ಸಿನ ಆತ ಜೊತೆಗೊಂದು ಸಣ್ಣ ಕಣ್ಣಿನ ಹುಡುಗಿಯೊಂದಿಗೆ ಬಂದು ನಿಂತು, 'ಆಪ್ ಕೆ ಸಾಥ್  ಥೋಡಾ ಬಾತ್ ಕರ್ನಾ ಥಾ ಪ್ರಣಾಮ್ ಜಿ' ಎಂದು ಕೈ ಮುಗಿದು ನಿಂತ. ಮೂರು ತಾಸಿನ ಸತತ ನುಡಿಸಾಣಿಕೆಯಲ್ಲಿ ಕೊಂಚ ಬಳಲಿದ್ದವನಂತೆ ತೋರುತ್ತಿದ್ದ ಪ್ರಣಾಮ್, ಕೈ ಮುಗಿದು, 'ಕಹೀಯೆ...' ಎನ್ನುತ್ತ ವೇದಿಕೆಯ ಕೆಳಗಿಳಿದು ಬಂದ.
'ಇವರ ಹೆಸರು -ಶೊಶಿ ಕುಹೋಸ. ಜಪಾನಿನವರು. ನಾನು ಮಂದಾರ್ ಶರ್ಮಾ. ಇವರ ಟ್ರಾವೆಲ್ ಗೈಡ್.  ಇವರಿಗೆ ನಿಮ್ಮ ಬಳಿ ಸಿತಾರ್ ಕಲಿಯುವಾಸೆಯಂತೆ. ಆದರೆ ಇವರಿಗೆ ಇಂಗ್ಲಿಷ್, ಹಿಂದಿ ಬರೋದಿಲ್ಲ. ನಿಮ್ಮಿಂದ ಸಹಾಯವಾಗಬಹುದೇ?' ಭಯಭಯಂಕರ ಘರಾನಾದಾರರು ಬನಾರಸ್ಸಿನಲ್ಲಿ ತಮ್ಮ ಘರಾನೆಯನ್ನು ವಿಸ್ತರಿಸುತ್ತ ಕುಳಿತಿದ್ದರೆ ಕೇರಳದ ಹಳ್ಳಿಯೊಂದರಿಂದ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಸಂಗೀತದಲ್ಲಿ ಬ್ಯಾಚುಲರ್ ಮಾಡಲು ಈಗ್ಗೆ ಐದು ವರ್ಷಗಳ ಹಿಂದೆ ಬಂದಿದ್ದ ಪ್ರಣಾಮ್, ಈ ಐದು ವರ್ಷಗಳಲ್ಲಿ ಮಾಸ್ಟರ್ ಮೊದಲ ವರ್ಷವನ್ನೂ ಪೂರೈಸಿ, ತನ್ನ ಅಕಾಡೆಮಿಕ್ ಕೆರಿಯರ್‌ಗಾಗಿ ಚಿನ್ನದಪದಕಗಳನ್ನು ವರ್ಷ ವರ್ಷ ಪಡೆದುಕೊಳ್ಳುತ್ತ ಅದ್ಯಾವ ಹಂತವನ್ನು ತಲುಪಿದ್ದನೆಂದರೆ, ಹೆಸರಾಂತ ಘರಾನೆಗಳ ಹುಡುಗರು ಇವನಲ್ಲಿ ಐಡಿಯಾಗಳಿಗಾಗಿ ಬರುತ್ತಿದ್ದರು. ಅಂಥ ಘನವೆತ್ತ ಘರಾನೆದಾರರ ಊರಾದ ಬನಾರಸ್ಸಿನಲ್ಲಿ ಎಲ್ಲ ದೊಡ್ಡ ಹೆಸರುಗಳನ್ನೂ ಬಿಟ್ಟು ಈಕೆ ತನ್ನನ್ನೆ ನೆಚ್ಚಿಕೊಂಡು ಬಂದಿದ್ದು ಪ್ರಣಾಮನ ಮನಸಿನೊಳಗೆ ವಿಚಿತ್ರವಾದ ಹೆಮ್ಮೆಯ ಕೋಡೊಂದನ್ನು ಹುಟ್ಟಿಸುತ್ತಿರುವ ಹೊತ್ತಿನಲ್ಲಿ ಅವನು ಆಕೆಯ ಕಡೆಗೆ ನೋಡಿದ.
ಅವಳು ಅವನತ್ತ ಕೈ ಮುಗಿದು ಪಕ್ಕದಲ್ಲಿದ್ದ ತನ್ನ ಗೈಡ್‌ನತ್ತಲೂ ಪ್ರಣಾಮನತ್ತಲೂ ನೋಡುತ್ತ ಮೆಲ್ಲನೆ ಜಪಾನೀ ಭಾಷೆಯಲ್ಲಿ ಏನೋ ಹೇಳಿದಳು.
'ಇವರು ಕಳೆದವಾರ ನಿಮ್ಮ ಪ್ರೋಗ್ರಾಮನ್ನು ಸಿಟಿ ಹಾಲಿನಲ್ಲಿ ನೋಡಿದಾಗಿನಿಂದ ನಿಮ್ಮಲ್ಲಿ ಕಲಿಯುವ ಇರಾದೆಯನ್ನು ಹೊಂದಿದ್ದಾರೆ. ಅದನ್ನು ಅವರು ನನ್ನ ಬಳಿ ಆಗಲೇ ಹೇಳಿದ್ದರು. ಇವತ್ತು ನಿಮ್ಮ ಪ್ರೋಗ್ರಾಮ್ ಇಲ್ಲಿರೋದು ನನಗೆ ಗೊತ್ತಿತ್ತು, ಮತ್ತು ಆವತ್ತು ನೀವು ಬಹಳ ಬ್ಯುಸಿ ಇದ್ರಿ. ಹಾಗಾಗಿ ಇವತ್ತು ನಿಮ್ಮ ಭೇಟಿ ಮಾಡ್ತಾ ಇದೀವಿ'. ಶರ್ಮಾ ಪ್ರಣಾಮನಿಗೆ ಆಕೆ ಹೇಳಿದ ಮಾತನ್ನು ಅನುವಾದಿಸಿ ಹೇಳಿದ. ಅವಳಾಡಿದ ಜಪಾನೀ ಭಾಷೆಯ ಅಷ್ಟು ಸಣ್ಣ ವಾಕ್ಯವು ಹಿಂದಿಯಲ್ಲಿ ಅನುವಾದ ಮಾಡಿದಾಗ ಇಷ್ಟು ಉದ್ದವಾಗತ್ತಾ ಎಂಬ ಗೊಂದಲದಲ್ಲಿದ್ದವನಂತೆ ಕಂಡ ಪ್ರಣಾಮ್ ಆಕೆಯತ್ತ ತಿರುಗಿ ಮುದ್ದಾಗಿ ನಕ್ಕು 'ಧನ್ಯವಾದ್‌' ಎಂದು ಅದುವರೆಗೆ ಪ್ರೊಗ್ರಾಮಿನಲ್ಲಿ ತನಗೆ ತಬಲಾದಲ್ಲಿ ಸಾಥ್ ಕೊಟ್ಟು ಈಗ ಪಕ್ಕದಲ್ಲಿ ಬಂದು ನಿಂತಿದ್ದ ರಮೇಶನತ್ತ ನೋಡಿದ. ಈ ಸಂದರ್ಭಕ್ಕೆ ಯಾವ ಮಾತೂ ಸೂಕ್ತವಲ್ಲವೇನೋ ಎಂಬಂತೆ ಹತ್ತಾರು ಧ್ವನಿಗಳಿಗೆ ಆಹಾರವಾಗಬಲ್ಲ ಒಂದು ಮುಖಭಾವವನ್ನು ಹೊತ್ತು ರಮೇಶ್ ನಿಂತಿದ್ದ. ಅಷ್ಟರಲ್ಲಿ ಆಕೆ ಶರ್ಮಾಗೆ ಮತ್ತೇನೇನೋ ಪಟ ಪಟ ಹೇಳಿಬಿಟ್ಟಳು. ಶರ್ಮಾ ಸಣ್ಣ ಗೊಂದಲದಲ್ಲಿದ್ದವನಂತೆ, 'ತಾವು ಈಕೆಗೆ ಸಿತಾರ್ ಕಲಿಸುತ್ತೀರ ಎಂದಾದರೆ ನಾವು ನಾಳೆ ಬೆಳಗ್ಗೆ, ತಮಗೆ ಅನುಕೂಲವಾದರೆ ಕುಳಿತು ಮಾತನಾಡಬಹುದು ಎಂಬುದು ಈಕೆಯ ಅಭಿಪ್ರಾಯ' ಅರೆ, ಆಕೆ ಅಷ್ಟು ಉದ್ದವಾದ ವಾಕ್ಯಗಳನ್ನು ಹೇಳಿದ್ದಳು, ಈತ ಇಷ್ಟು ಸಣ್ಣ ವಾಕ್ಯದಲ್ಲಿ ಮುಗಿಸಿಬಿಟ್ಟನಲ್ಲ ಅನುವಾದಚತುರ ಎಂಬ ಮನೋಲಹರಿಯಲ್ಲಿ ತನ್ನ ರೂಮಿನ ವಿಳಾಸ ಕೊಟ್ಟು ಬೆಳಗ್ಗೆ ಎಂಟು ಗಂಟೆಗೆ ತನ್ನ ರೂಮಿಗೆ ಅವರಿಬ್ಬರನ್ನು ಬರಹೇಳಿ ರಮೇಶನೊಂದಿಗೆ ರಿಕ್ಷಾ ಹತ್ತಿದ ಪ್ರಣಾಮ್.
'ಕ್ಯಾ ತೀರ್ಮಾರಾ ಯಾರ್ ತುಮ್ ಭೀ!' ರಮೇಶ ಪ್ರಣಾಮನನ್ನು ಸಣ್ಣಗೆ ಚುಡಾಯಿಸಲು ತೊಡಗಿದ.
'ಅರೆ ಕಾ ಬತಿಯಾರಹೆ ಹೊ ಯಾರ್... ತೀರ್ ಥೋಡೀ ಮಾರಾ ಮೆ... ತಾರ್ ಮಾರಾ ಸಾಲೆ..' ಎಂದು ನಗತೊಡಗಿದ ಪ್ರಣಾಮ್, 'ನಂಗೆ ನಿಜವಾಗಿಯೂ ಅರ್ಥ ಆಗ್ತಾ ಇಲ್ಲ ನೋಡು, ಭಾಷೆಯೇ ಬರದ ಆಕೆಗೆ ಸಿತಾರ್ ಹೇಗೆ ಕಲಿಸ್ಲಿ?' ಎನ್ನುತ್ತ ಮತ್ತೇನೋ ಹೇಳಲು ಹೋಗುವಷ್ಟರಲ್ಲಿ ನಡುವೆ ಬಾಯಿ ಹಾಕಿದ ರಮೇಶ್, ' ಅಲ್ಲಪ್ಪಾ... ಕಳೆದ ವರ್ಷ ಒಬ್ಳು ಫಾರಿನ್ ಅಜ್ಜಿಗೆ ಸಿತಾರ್ ಹೇಳ್ ಕೊಡ್ತಾ ಇದ್ಯಲ್ಲ, ಹಂಗೇ ಹೇಳ್ಕೊಡು, ನಿಂಗೇನ್ ಭಾರೀ ಇಂಗ್ಲಿಷ್ ಬರತ್ತೆ ನೋಡು. ದಿಸ್ ಮೈನ್ ಸ್ಟ್ರಿಂಗ್, ದಿಸ್ ಬೇಸ್ ಸ್ಟ್ರಿಂಗ್, ಯು ಗಿವ್ ಮೀಂಡ್ ಲೈಕ್ ದಿಸ್... ಹ್ಹಹ್ಹ... ಭಗವಂತಾ.. ಆ ಅಜ್ಜಿ ಅದ್ ಹೇಗ್ ನಿನ್ನ್ ಹತ್ರ ಸಿತಾರ್ ಕಲಿತಳೋ ಏನೋಪ್ಪಾ...' ಎಂದು ನಗತೊಡಗಿದ.
'ಇಸೀಲಿಯೇ ನಾ, ಇಸ್ ಸಾಲ್ ಭೀ ಆರಹೀ ಹೈ ವೊ, ಈ ಡಿಸೆಂಬರ್‌ಗೆ ಬರ್ತಾ ಇದಾರೆ ಆಕೆ ಮತ್ತೆ, ಕಲಿಯೋದಕ್ಕೆ' ಪಕ್ಕಾ ಬನಾರಸೀ ಗತ್ತಿನಲ್ಲಿ ಪ್ರಣಾಮ್ ಹೇಳಿದ.
'ಅರೇ ಛೋಡೋ ಯಾರ್, ಅದಿರ್ಲಿ, ನೀನ್ ಈ ಹುಡುಗೀನ ಗಮನಿಸಿದ್ಯಾ? ಅದೆಂಥಾ ವಿನಯ, ಅದೆಂಥಾ ರೂಪು... ತಬಲಾವಾದಕ ಆಗಬಾರದು ನೋಡು, ಯಾವ್ ಹುಡುಗೀರೂ ಕಲ್ಯಕ್ಕೆ ಬರಲ್ಲ' ತನ್ನ ಅಳಲನ್ನು ನಾಟಕೀಯವಾಗಿಯೋ ಎಂಬಂತೆ ತೋಡಿಕೊಳ್ಳುತ್ತ ರಮೇಶ್, ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಗೇಟ್‌ನ ಎದುರು ಇಳಿದು 'ನಾಳೆ ಒಳ್ಳೆ ಮೀಟಿಂಗ್ ಮಾಡಪ್ಪಾ... ಒಳ್ಳೆ ಹುಡುಗಿ ಪಾಪ' ಎನ್ನುತ್ತ ಹೆಗಲಿಗೆ ತಬಲಾದ ಬ್ಯಾಗ್ ಹಾಕಿಕೊಂಡು ಹೊರಟ.
ರಿಕ್ಷಾವಾಲಾ ದಣಿದವನಂತಿದ್ದ. ಅವನ ಎರಡೂ ಕಾಲಿನ ಕರೀ ಮೀನಖಂಡಗಳಲ್ಲಿ ಉಬ್ಬಿನಿಂತಿದ್ದ ಕಡುಹಸಿರು ಬಣ್ಣದ ನರಗಳು ಇನ್ನೇನು ಒಡೆದು ಹೋಗುತ್ತವೆಯೇನೋ ಎನ್ನುವಂತಿದ್ದವು. ಬನಾರಸ್ಸಿನ ಆ ರಸ್ತೆಗಳೂ ದಣಿದಂತೆ ವಾಹನಗಳತ್ತ ತಮ್ಮ ಮೇಲೆ ಇನ್ನು ಹಾಯಬೇಡಿರೋ ಎಂದು ಬೇಡಿಕೊಳ್ಳುವಂತಿದ್ದವು ಮತ್ತು ವಾಹನಗಳ ಸಂಖ್ಯೆ ರಸ್ತೆಗಳ ಮೇಲೆ ಬೆರಳೆಣಿಕೆಯಷ್ಟಿದ್ದವು. ಹಗಲೆಲ್ಲ ತಮಗೆ ಈ ಟಾರು ರಸ್ತೆಗಳ ಮೇಲೆ ನೆಮ್ಮದಿಯಾಗಿ ಕಾಲೂರಲೂ ಸಾಧ್ಯವಾಗದ ಹಿನ್ನೆಲೆಯಲ್ಲಿ ಆ ಕಾರಣಕ್ಕೆ ಬೇಸತ್ತಂತಿದ್ದ ಬೀದಿನಾಯಿಗಳು ರಾಜಾರೋಷವಾಗಿ ಕಂಡಕಂಡಲ್ಲಿ ಮೂಸುತ್ತ ಮೂತ್ರ ಮಾಡುತ್ತ ರಾತ್ರಿಪಾಳಿಗಿಳಿದಂತಿದ್ದವು. ತನ್ನ ಸಿತಾರಿನ ದಂಡಿಯನ್ನು ಎದೆಗಾನಿಸಿಕೊಂಡು ಬುಡದ ತುಂಬುವನ್ನು ಕಾಲ್ಗಳ ನಡುವಿನಲ್ಲಿ ಸಿಕ್ಕಿಸಿಕೊಂಢಿಢಿರಾತ್ರಿಯ ಏರನ್ನು ತುಳಿಯಲಾಗದೇ ಬಸವಳಿಯುತ್ತಿದ್ದ ರಿಕ್ಷಾದವನ ಕಷ್ಟವನ್ನು ನೋಡಲಾಗದೇ ಪ್ರಣಾಮ್, ಇನ್ನೇನು ತನ್ನ ರೂಮಿಗೆ ಐದು ನಿಮಿಷದ ಕಾಲ್ನಡಿಗೆಯಿದ್ದದ್ದರಿಂದ, 'ಯಹೀ ಉತಾರೋ ಭಾಯ್‌' ಎಂದು ಬಾಡಿಗೆಯ ದುಡ್ಡು ಕೊಡುತ್ತ ಇಳಿದ. ತನ್ನ ಯೂನಿವರ್ಸಿಟಿಯ ಸಂಗೀತದ ಉಪಕರಣಗಳ ರಿಪೇರಿಯ ಕೋಣೆಯಲ್ಲಿ ವರ್ಷಗಳಿಂದ ಧೂಳು ಹೊತ್ತುಕೊಂಡು ಬಿದ್ದಿದ್ದ ಹಲವಾರು ಕಪ್ಪು ಮಣ್ಣಿನ ಡಗ್ಗಾಗಳಲ್ಲಿ ಯಾವುದಾದರೂ ಒಂದಕ್ಕೆ ಬೇಕಾದಂತೆ ಹೋಲಿಸುವಂತಾಗಿದ್ದ ರಿಕ್ಷಾದವನ ಮುಖವನ್ನು ದೈನ್ಯದಿಂದ ನೋಡಿ ತನ್ನ ಕೋಣೆಯತ್ತ ಹೆಜ್ಜೆ ಹಾಕಿದ.
----
ಗಂಗೆಯ ಪಕ್ಕದಲ್ಲಿ ಆಗಷ್ಟೇ ಎದ್ದಿದ್ದ ಸೂರ್ಯನನ್ನು ಮಳೆಗಾಲದ ಕೊನೆಯ ಮೋಡಗಳು ಇನ್ನು ಗಂಗೆಯ ಪಾಪವನ್ನು ತೊಳೆದಿದ್ದು ಸಾಕು ಎಂಬಂತೆ ಮರೆಮಾಡಿದ್ದವು. ಬನಾರಸ್ಸಿನ ನೂರಾರು ದೇವಾಲಯಗಳ ಮಂಗಳಾರತಿಯ ಘಂಟೆಗಳ ಸದ್ದು ಇಡೀ ಗಂಗೆಯ ತಪ್ಪಲನ್ನು ನಾದಮಯವಾಗಿಸಿದ್ದವು.
ಬನಾರಸ್ಸಿನ ಬೆಳಗು ಅಂಥಿಂಥ ಬೆಳಗಲ್ಲ! ಆ ಬೆಳಗಿನ ಕೊರಳಲ್ಲಿ ನೂರಾರು ದೇಗುಲಗಳ ಶ್ರುತಿಬದ್ಧ ಹಿತ್ತಾಳೆಯ ಘಂಟೆಗಳ ನಾದಮಾಲೆಯಿದೆ. ಎದೆಯಲ್ಲಿ ಅಸಂಖ್ಯಾತ ಸಂಗೀತಗಾರರ ತಾಲೀಮಿನ ಉಸಿರ ಹುರಿಗಟ್ಟುವ ಕಸರತ್ತಿನ ಹುಮ್ಮಸ್ಸಿದೆ. ವರ್ಷಗಳಿಂದ ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತ ಬಂದ ಬೆಚ್ಚಗಿನ ವೈದಿಕರ ವೇದಮಂತ್ರಗಳ ಕಾವಿ ಹೊದ್ದಿಕೆಯಿದೆ. ಜಗತ್ತಿನೆಲ್ಲೆಡೆಯಿಂದ ಕಾವಿಯ ಶಾಲಿಗೋ ಬಳಿದ ಬೂದಿಗೋ ಬಿಟ್ಟ ಜಟೆಗೋ ಆಕರ್ಷಿತರಾಗಿ ಬಂದು ದಕ್ಕಿದ್ದೂ ತನ್ನದಲ್ಲವೆಂಬ ಭಾವದಲ್ಲಿ ಊರ ತುಂಬ ಅಲೆಯುವ ಹಿಪ್ಪೀಗಳ ಅಸಹನೀಯ ಸಂತೃಪ್ತಿಯಿದೆ. ದಕ್ಷಿಣದಿಂದ ಬಂದು ಬೋಳಿಸಿದ ತಲೆಯ ಹೊತ್ತು ತಿರುಗುವ ಭಕ್ತ ಭಕ್ತೆಯರ ಹಿಡಿಯಲಾಗದ ನಿಟ್ಟುಸಿರಿದೆ. ಹಣೆಯ ಮೇಲೆ ಕಂಡ ಕಂಡಲ್ಲಿ ಕಳೆದ ಗಾಂಜಾದ ರಾತ್ರಿಗಳನ್ನು ನೇಯ್ದ ಬಣ್ಣದ ಜಟಾಧಾರೀ ನಾಗಾಸಾಧುಗಳ ಬೂದಿಯಿದೆ. ಜಗತ್ತಿನೆಲ್ಲ ವಾದ್ಯಗಳ ಮೇಳದ ಹಿನ್ನೆಲೆ ಸಂಗೀತವಿದೆ.
ಅಂಥ ಏಕಮೇವಾದ್ವಿತೀಯ ಬೆಳಗು ಹೀಗೆ ಬನಾರಸ್ಸಿನಲ್ಲಿ ಆ ದಿನ ದಿವ್ಯವಾಗಿ ಕಾಲಿಡುವಾಗ ಪ್ರಣಾಮ್ ತನ್ನ ಅಂತಿಮ ಹಂತದ ರಿಯಾಜಿನಲ್ಲಿದ್ದ. ಅವನ ಬೆರಳುಗಳು ಸಿತಾರಿನ ಪಡದಾಗಳ ಮೇಲೆ ರಪರಪನೆ ಓಡುತ್ತಿದ್ದವು. ಲಯಕ್ಕೆ ಬದಿಯಲ್ಲಿದ್ದ ರಾಡೆಲ್ ಡಿಜಿ 60 ತಬಲಾ ಅತಿದ್ರುತ ತೀನ್ ತಾಳದಲ್ಲಿ ಓಡಲಾಗದೇ ಪ್ರಣಾಮನ ಸಿತಾರಿನ ಲಯಕಾರಿಗೆ ಮರುಳಾದಂತಿತ್ತು. ನಿತ್ಯ ರಿಯಾಜಿನ ಅಲಂಕಾರಗಳ ವೇಗಕ್ಕೆ ತಾನು ಹಾಕಿಕೊಂಡಿದ್ದ ಗುರಿಗಳನ್ನು ಅದಾವಾಗಲೋ ದಾಟಿ ಇನ್ನು ಗುರಿಯಿರದ ಪಯಣ ತನ್ನದು ಎಂಬುದನ್ನು ನಿಖರಪಡಿಸಿಕೊಂಡಿದ್ದ ಪ್ರಣಾಮ್ ಕ್ಲಿಷ್ಟಕರವಾದ ಅಲಂಕಾರವೊಂದರ ತೀವ್ರಗತಿಯ ಚಲನೆಯ ಅಭ್ಯಾಸದಲ್ಲಿದ್ದಾಗ ಬಾಗಿಲು ಸದ್ದಾಯಿತು. ಎದುರು ತನ್ನ ಪ್ರಾಕ್ಟೀಸಿನ ನಿಗದಿಗೆಂದು ಮಲಗಿಸಿದ್ದ ತನ್ನ ಕೈಗಡಿಯಾರವನ್ನು ನೋಡಿದರೆ ಆಗಲೇ ಎಂಟುಗಂಟೆಯಾಗಿತ್ತು. ಒಮ್ಮೆ ತನ್ನ ರಿಯಾಜನ್ನು ನಿಲ್ಲಿಸಿ ಆಯಿಯೇ ಎಂದಷ್ಟೇ ಹೇಳಿದ ಪ್ರಣಾಮ್ ತನ್ನ ರಿಯಾಜನ್ನು ಮುಂದುವರಿಸಿದ. ಹೊರಗೆ ಅಮೋಘವಾಗಿ ಕೇಳಿಸುತ್ತಿದ್ದ ರಿಯಾಜನ್ನು ಈಗ ಕಣ್ಣೆದುರು ಸಾಕ್ಷಾತ್ಕರಿಸಿಕೊಳ್ಳುತ್ತ ಆ ಜಪಾನೀ ಹುಡುಗಿ ಮತ್ತವಳ ಭಾರತೀಯ ಗೈಡ್ ಇಬ್ಬರೂ ಒಳಬಂದು ಕುಳಿತರು.
ಪ್ರಣಾಮನ ಆ ಬೆಳಗಿನ ಕೊನೆಯ ಹಂತದ ರಿಯಾಜ ಮುಂದುವರಿದಿತ್ತು. ಸುಮಾರು ಇಪ್ಪತ್ತು ಅಡಿಗಳಷ್ಟು ಉದ್ದ ಮತ್ತು ಎಂಟು ಅಡಿಗಳಿಗಿಂತ ಹೆಚ್ಚಿಲ್ಲದಷ್ಟು ಅಗಲದ ಆ ಕೋಣೆಯ ಒಂದು ಬದಿಗೆ ನೆಲದ ಮೇಲೆ ಹಾಸಿದ್ದ ವಿಶಾಲವಾದ ಜಮಖಾನೆಯ ಗೋಡೆಯ ಬದಿಗೆ ಮೆತ್ತನೆಯ ಹಾಸಿನ ಮೇಲೆ ಪ್ರಣಾಮ್ ಸಿತಾರ್ ಹಿಡಿದು ಕುಳಿತಿದ್ದ. ಅವನೆದುರು ಶರ್ಮಾ ಚಕ್ಕಳಪಕ್ಕಳ ಹಾಕಿ ಕುಳಿತಿದ್ದ ಮತ್ತು ಶೊಶಿ ಮಂಡಿಯೂರಿ ವಜ್ರಾಸನದಲ್ಲಿ ಕುಳಿತಿದ್ದಳು. ತನಗೂ ಈ ಸಂಗೀತಕ್ಕೂ ಸಂಬಂಧವೇ ಇಲ್ಲದವನಂತೆ ಶರ್ಮಾ ತನ್ನ ಐಫೋನಿನ ಬ್ರೌಸರ್‌ನಲ್ಲಿ ತನ್ನ ಮುಂದಿನ ಗಿರಾಕಿಗಾಗಿ ಹುಡುಕುತ್ತಿದ್ದ.
ಹಾಗೆ ಸುಮಾರು ಐದು ನಿಮಿಷಗಳ ನಂತರ ತನ್ನ ರಿಯಾಜನ್ನು ನಿಲ್ಲಿಸಿದ ಪ್ರಣಾಮ್, ಚಕ್ಕಳಪಕ್ಕಳ ಹಾಕಿ ಕುಳಿತು ಸಿತಾರನ್ನು ತನ್ನ ಕಾಲಿನ ಮೇಲೆ ಅಡ್ಡಡ್ಡ ಮಲಗಿಸಿ ಅತಿಥಿಗಳತ್ತ ನಗುಮೊಗವಿಟ್ಟು ಮಾತನಾಡಿಸತೊಡಗಿದ.
'ಇವರ ಬಗ್ಗೆ ತಿಳಿದುಕೊಳ್ಳಲಿಕ್ಕೆ ಬಯಸ್ತೀನಿ. ಎಷ್ಟು ಕಾಲ ಇಲ್ಲಿರ್ತಾರೆ ಇವರು?' ಪ್ರಣಾಮ್ ಶರ್ಮಾಗೆ ಕೇಳಿದ.
'ಆಕ್ಚುಅಲೀ... ಇವರು ಬಂದು ಮೂರು ತಿಂಗಳಾಯ್ತು. ಇವರ ತಂದೆ ಜೋನ್ ಪುರ್ ಬಳಿ ಒಂದು ಖಾಸಗೀ ಶಾಲೆಯನ್ನು ದತ್ತು ತಗೊಂಡಿದ್ದರು. ಇತ್ತೀಚೆಗೆ ಅವರು ತೀರಿಕೊಂಡ ನಂತರ ಆ ಶಾಲೆಯ ಜವಾಬ್ದಾರಿಯನ್ನು ಶೊಶಿ ನೋಡಿಕೊಳ್ತಾ ಇದಾರೆ. ಒಂಥರಾ ಇಲ್ಲೇ ಇರ್ತಾರೆ ಅಂತಾನೂ ಹೇಳಬಹುದು. ನಡುವೆ ಆಗಾಗ ಜಪಾನ್‌ಗೆ ಹೋಗ್ತಾ ಇರಬಹುದು. ಇಲ್ಲೇ ಇರಲಿಕ್ಕೆ ಅವರಿಗೆ ಭಾಷೆಯ ಸಮಸ್ಯೆ ಇದೆ. ನಿಧಾನಕ್ಕೆ ಕಲಿತುಕೊಳ್ತಾರೆ' ಶರ್ಮಾ ತನ್ನ ಬಗ್ಗೆ, ಸ್ಕೂಲಿನ ಬಗ್ಗೆ, ತನ್ನ ತಂದೆಯ ಬಗ್ಗೆ ಏನೋ ಹೇಳುತ್ತಿದ್ದಾನೆ ಎಂಬುದಷ್ಟೇ ಗೊತ್ತಾದ ಶೊಶಿ ಸುಮ್ಮನೆ ಅವನನ್ನೂ ತನ್ನ ಪ್ರಣಾಮ್‌ನನ್ನೂ ನೋಡುತ್ತಿದ್ದಳು.
'ಓಕೆ, ಬೆಳಗ್ಗೆ ಕ್ಲಾಸಿಗೆ ಬರಬಹುದು. ಇದೇ ಹೊತ್ತಾದ್ರೆ ನಂಗೆ ಅನುಕೂಲ. ಆಮೇಲೆ ನಾನು ಕಾಲೇಜಿಗೆ ಹೋಗಬೇಕಾಗುತ್ತೆ. ಸಿತಾರ್ ಮೊದಲು ತಗೋಬೇಕು, ಎಲ್ಲಿ ತೊಗೋಬೇಕು ಅಂತ ನಿಮಗೆ ಗೊತ್ತಿಲ್ಲ ಅಂದ್ರೆ ನಾನು ಕರೆದುಕೊಂಡು ಹೋಗ್ತೀನಿ'- ಪ್ರಣಾಮನ ಮಾತನ್ನು ಕೇಳಿದ ಶೋಶಿ ಶರ್ಮಾನತ್ತ ನೋಡಿದಳು. ಶರ್ಮಾ ಪ್ರಣಾಮನ ಮಾತುಗಳನ್ನು ಅನುವಾದಿಸಿದ್ದನ್ನು ಗಮನವಿಟ್ಟು ಕೇಳಿ ಅವಳು ಮಾತನಾಡತೊಡಗಿದಳು, ಆಗಾಗ ಪ್ರಣಾಮನತ್ತಲೂ ಶರ್ಮಾನತ್ತಲೂ ನೋಡುತ್ತ. ಪ್ರಣಾಮ್ ಮೊದಲ ಬಾರಿಗೆ ಅವಳನ್ನು ಗಮನಿಸಿದ. ಅವಳು ತನಗೆ ಒಪ್ಪದ ನೀಲಿ ಬನಾರಸೀ ಸಿಲ್ಕ್ ಸೀರೆಯನ್ನುಟ್ಟಿದ್ದಳು. ಇನ್ನೇನು ಒಣಗಲುತೊಡಗಿದ್ದ ಗರಿಕೆಹುಲ್ಲಿನ ಬಣ್ಣದಂತೆ ಅತ್ತ ಹಳದಿಯೂ ಅಲ್ಲದ ಇತ್ತ ಬಿಳಿಯೂ ಅಲ್ಲದ ಬೆಣ್ಣೆಗಿಂತಲೂ ಮುದ್ದಾಗಿರಬಹುದಾದ ಅವಳ ಮುಖಕ್ಕೆ ಆ ನೀಲಿ ಬಣ್ಣದ ಬನಾರಸೀ ಸೀರೆಯೂ ತುಸುವೂ ಒಪ್ಪುತ್ತಿರಲಿಲ್ಲ. ಕಪ್ಪು ಫ್ರೇಮಿನ ಕನ್ನಡಕದ ಒಳಗೆ ಶಾಂತವಾಗಿ ಹೊಳೆಯುತ್ತಿದ್ದ ಅವಳ ಕಣ್ಣುಗಳಲ್ಲಿ ಒಂದು ಬಗೆಯ ಮುಗ್ಧತೆಯಿತ್ತು. ತಾನು ಭಾಷೆಯನ್ನು ಅರಿಯಲಾರೆನೆಂಬ ದುಗುಡವಿತ್ತು. ಸಂಗೀತದತ್ತ ತೀವ್ರವಾದ ವ್ಯಾಮೋಹವಿತ್ತು. ಇಷ್ಟೆಲ್ಲ ಭಾವವ್ಯತ್ಯಯಗಳ ನಡುವೆ ಅವಳು ಸುಂದರವಿದ್ದಳು. ಕನ್ನಡಕ ತೆಗೆದ ದಿನ ಅವಳ ಸೌಂದರ್ಯವನ್ನು ನಿಜವಾಗಿ ನೋಡಬಹುದೆಂದುಕೊಂಡ ಪ್ರಣಾಮ್. ಶರ್ಮಾ ಅವಳ ಮಾತುಗಳನ್ನು ಅನುವಾದಿಸಿದ. ಫೀಸು, ಕ್ಲಾಸಿನ ಸಮಯ, ಎಷ್ಟು ದಿನಕ್ಕೊಮ್ಮೆ ಕ್ಲಾಸು, ಒಳ್ಳೆಯ ಸಿತಾರ್ ಮೇಕರ್ ಬಳಿ ತಯಾರಾದ ಸಿತಾರ್ ತೆಗೆದುಕೊಳ್ಳುವ ಇಚ್ಛೆ, ಇತ್ಯಾದಿ ಅವರ ಮಾತುಗಳು ನಡೆದವು.
'ಇವರಿಗೆ ಸಂಗೀತದ ಬ್ಯಾಕ್‌ಗ್ರೌಂಡ್ ಏನಾದ್ರೂ ಇದೆಯಾ?' ಪ್ರಣಾಮ್ ಕೇಳಿದ್ದನ್ನು ಶರ್ಮಾ ಅವಳಿಗೆ ಹೇಳಿ, ಅವಳು ಹಲವಾರು ವಿಧದಲ್ಲಿ ಯೋಚಿಸುವಂತೆ ಭಾವಭಂಗಿಗಳನ್ನು ನೀಡಿ ಹೇಳಿದ್ದನ್ನು ಪೂರ್ಣ ರೂಪದಲ್ಲಿ ಶಾಂತ ಚಿತ್ತನಾಗಿ ಶರ್ಮಾ ಹೇಳಿದ. 'ಇವರು ವೆಸ್ಟರ್ನ್ ಮ್ಯೂಸಿಕ್ ಕಲ್ತಿದಾರೆ. ಸ್ಯಾಕ್ಸೋಫೋನ್ ಕಾರ್ಯಕ್ರಮಗಳನ್ನೆಲ್ಲ ಕೊಟ್ಟಿದಾರಂತೆ. ಈಗ ಭಾರತೀಯ ಸಂಗೀತದತ್ತ ಆಸಕ್ತಿ ಮೂಡಿದೆಯಂತೆ. ಹೀಗೆ ಹೇಳಿದ್ರು ನೋಡಿ'. ಶರ್ಮಾ ಮಾತು ಮುಗಿಸುತ್ತಿದ್ದಂತೆ, ಅವನ ಮಾತಿನಲ್ಲಿ ಸಿತಾರ್ ಎಂಬ ಶಬ್ದ ಬರದಿದ್ದುದನ್ನು ಕಂಡ ಶೋಶಿ ಮತ್ತೊಮ್ಮೆ ಸಿತಾರ್ ಎಂಬ ಶಬ್ದವನ್ನು ಕುರಿತಾಗಿ ಏನೇನೋ ಹೇಳಿದಳು. ಅವಳ ಮಾತುಗಳು ಪದೇ ಪದೇ ನಡುವೆ ನಿಲ್ಲುತ್ತಿದ್ದವು. ಹಾಗೆ ನಿಂತಾಗ ಅವಳು ಪ್ರಣಾಮ್‌ನತ್ತ ನೋಡುತ್ತಿದ್ದಳು. ಆ ಯತಿಯಲ್ಲೊಂದು ಬಗೆಯ ಭಾವುಕತೆಯಿತ್ತು. ಒಟ್ಟು ಅವಳಾಡಿದ ಮಾತುಗಳಲ್ಲಿ ಸುಮಾರು ಹತ್ತು ಬಾರಿಯಾದರೂ ಸಿತಾರ್ ಎಂಬ ಶಬ್ದ ಬಂದಿತ್ತು ಮತ್ತು ಒಮ್ಮೆ ವಿಚಿತ್ರ ಉಚ್ಚಾರಣೆಯಲ್ಲಿ ವಿಲಾಯತ್ ಖಾನರ ಹೆಸರು ಬಂದಿದ್ದು ಮಾತ್ರ ಪ್ರಣಾಮನಿಗೆ ಅರ್ಥವಾಯಿತು. ಮತ್ತು ಅವನು ಊಹಿಸಿದಂತೆ ವಿಲಾಯತ್‌ಖಾನರನ್ನು ಅವಳು ಕೇಳಿದ್ದಳು. ಶರ್ಮಾ ಅನುವಾದಿಸತೊದಗಿದ. 'ಇವರ ಖಯಾಲಿನಲ್ಲಿ ಸಿತಾರ್ ಒಂದು ಅಸಾಧಾರಣ ವಾದನ. ವಿಲಾಯತ್‌ಖಾನ್ ಅವರ ಸಿತಾರ್ ವಾದನದ ಹಲವಾರು ಸಿ.ಡಿ.ಗಳನ್ನು ಕೇಳಿದ್ದಾರೆ ಇವರು. ಜಪಾನಿನಲ್ಲಿ ಭಾರತೀಯ ಸಂಗೀತದ ಗುರುಗಳು ಇಲ್ಲ. ಅದರಲ್ಲೂ ಸಿತಾರಿಗೆ ಗುರುಗಳು ಸಿಗೋದೇ ಇಲ್ಲ. ಇವರಿಗೆ ಸಿತಾರ್ ಕೇಳಿದಾಗಲೆಲ್ಲ ಈ ಲೋಕದ ಖಯಾಲಿಯೇ ಇರೋದಿಲ್ವಂತೆ. ತಾನೂ ಸಿತಾರ್ ನುಡಿಸಿದರೆ ಎಷ್ಟು ಚೆಂದ ಎಂದು ಯಾವಾಗಲೂ ಕನಸು ಕಾಣ್ತಾ ಇರ್ತಾರಂತೆ' ಅಷ್ಟು ಹೇಳಿ ಶರ್ಮಾ ಶೋಶಿಯತ್ತ ನೋಡಿದ. ಶೊಶಿ ಮಂದಸ್ಮಿತಳಾಗಿ ಪ್ರಣಾಮನನ್ನು ನೋಡಿದಳು.
ಪ್ರಣಾಮ್ ಕೆಲಕ್ಷಣಗಳ ಕಾಲ ಸುಮ್ಮನಿದ್ದು ಹೇಳಿದ. 'ಸಂಗೀತವನ್ನು ಕೇಳುವುದರಲ್ಲಿ ಮೂರು ವಿಧ. ಸಂಗೀತವನ್ನು ನಿರಪೇಕ್ಷಿಯಾಗಿ ಆನಂದಿಸೋದು. ಸಂಗೀತಕಾರನ ತಪ್ಪುಗಳನ್ನು ಮಾತ್ರ ಹುಡುಕುತ್ತ ಕೇಳೋದು. ಸಂಗೀತದ ಉತ್ತಮ ಅಂಶಗಳನ್ನು, ಸಂಗೀತಕಾರನ ಉತ್ತಮ ಕೆಲಸಗಳನ್ನು ಗಮನಿಸುತ್ತ ಆನಂದಿಸೋದು. ಇವುಗಳಲ್ಲಿ ವಿದ್ಯಾರ್ಥಿಗೆ ಇರಬೇಕಾದದ್ದು ಮೂರನೆಯ ಗುಣ. ಇದನ್ನು ಅವರಿಗೆ ಹೇಳಿಬಿಡಿ'. ಪ್ರಣಾಮ್ ಹೇಳಿದ್ದನ್ನು ಬಹಳವೇ ಕಷ್ಟಪಟ್ಟು ಶರ್ಮಾ ಅನುವಾದಿಸಿ ಶೊಶಿಗೆ ಹೇಳಿದ.
'ಇವತ್ತು ಸಂಜೆ ಯುನಿವರ್ಸಿಟಿ ಎದುರು ಐದು ಗಂಟೆಗೆ ಬನ್ನಿ. ನಾನು ನಿಮ್ಮನ್ನು ಸಿತಾರ್ ಮೇಕರ್ ಬಳಿ ಕರೆದೊಯ್ತೇನೆ. ನಿಮ್ಮ ಬಜೆಟ್ಟಿಗೆ ಅನುಸಾರವಾಗಿ ಕೊಳ್ಳುವಿರಂತೆ.' ಪ್ರಣಾಮ್ ಹೇಳಿದ್ದಕ್ಕೆ ಶರ್ಮಾ ರಪ್ಪನೆ, 'ಯಾವ ಸಿತಾರ್ ಮೇಕರ್ ಹತ್ತಿರ ಕರೆದುಕೊಂಡು ಹೋಗ್ತೀರಿ? ಹಮಾರಾ ಭೀ ಕುಛ್ ಹೋಜಾಯೇಗಾ ನಾ?' ಎಂದು ಪಕ್ಕದಲ್ಲಿದ್ದ ತನ್ನ ಗಿರಾಕಿಗೆ ಗೊತ್ತಾಗದ ರೀತಿ ಹಲ್ಕಿಸಿದು ಬಾಯ್ಮುಚ್ಚಿದ. 'ಸಂಗೀತಕ್ಕೆ ವ್ಯವಹಾರ ಗೊತ್ತಿಲ್ಲ ಶರ್ಮಾ ಜೀ. ಸಾಯಂಕಾಲ ಬನ್ನಿ' ಎಂದಷ್ಟೆ ಹೇಳಿ ಪ್ರಣಾಮ್ ಅವರನ್ನು ಬೀಳ್ಕೊಟ್ಟ. ಶೊಶಿ ಪಕ್ಕಾ ತೊಂಭತ್ತು ಡಿಗ್ರಿ ಕೋನದಲ್ಲಿ ಬಗ್ಗಿ ಪ್ರಣಾಮನಿಗೆ ನಮಸ್ಕರಿಸಿ ಎದ್ದು ಹೊರಟಳು.
------
ಆ ಸಂಜೆ ತಾರಕ್ ಬಾಬಾನ ಎಂಟು ಬಯ್ ಎಂಟರ ಆ ಅಂಗಡಿಯ ಒಂದು ಮೂಲೆಯಲ್ಲಿದ್ದ ಒಂದಡಿ ಅಗಲದ ಉದ್ದ ಬೆಂಚಿನ ಮೇಲೆ ಶರ್ಮಾ ಶೊಶಿ ಮತ್ತು ಪ್ರಣಾಮ್ ಕುಳಿತಿದ್ದರು. ಪ್ರಣಾಮ್ ತಾರಕ್‌ಬಾಬಾನ ಆ ಅಂಗಡಿಯನ್ನು ಹೊಕ್ಕುತ್ತಲೇ ಪಕ್ಕದಲ್ಲಿದ್ದ ಟೀ ಸ್ಟಾಲಿನಿಂದ ನಾಲ್ಕು ಕಪ್ ಚಹಾಕ್ಕೆ ಆರ್ಡರ್ ಮಾಡಿದ್ದ.
ತಂತಿವಾದ್ಯಗಳ ಕೆಲಸದಲ್ಲಿ ಬನಾರಸ್ಸಿನ ನಾಲ್ಕಾರು ಉತ್ತಮರ ಹೆಸರುಗಳಲ್ಲಿ ತಾರಕ್‌ಬಾಬಾನ ಹೆಸರೂ ಇತ್ತು. ತಾರಕ್‌ಬಾಬಾನಲ್ಲಿ ಕೆಲಸ ಮಾಡಿಸಿಕೊಳ್ಳಬೇಕೆಂದರೆ ಒಂದು ಕಪ್ ಚಹಾದ ಜೊತೆಗೇ ಅವನ ಅಂಗಡಿಗೆ ಹೋಗಬೇಕು ಎಂಬ ಮಾತು ಎಷ್ಟು ಜನಪ್ರಿಯವಾಗಿತ್ತು ಮತ್ತು ತಾರಕ್ ಬಾಬಾ ಈ ರೂಢಿಗೆ ಎಷ್ಟು ಹೊಂದಿಕೊಂಡಿದ್ದನೆಂದರೆ, ತನ್ನಲ್ಲಿ ಬರುವ ಗಿರಾಕಿಗಳ ಕೈಯಲ್ಲಿ ಚಹಾದ ಕಪ್ ಇಲ್ಲದಿದ್ದರೆ ತಾರಕ್ ಬಾಬಾ ದಾರಿ ತಪ್ಪಿ ಬಂದಿದ್ದಾರೇನೋ ಈ ಗಿರಾಕಿಗಳು ಎಂಬಂಥ ಭಾವ ತಳೆದುಬಿಡುತ್ತಿದ್ದ. ಕಳೆದ ಇಪ್ಪತ್ತೋ ಇಪ್ಪತ್ತೈದೋ ವರ್ಷಗಳಿಂದ ಬನಾರಸ್ ಹಿಂದೂ ಯುನಿವರ್ಸಿಟಿಯಲ್ಲಿ ಅಧಿಕೃತವಾಗಿ ತಂತಿವಾದ್ಯಗಳ ಮೇಕರ್ ಆಗಿ ಕೆಲಸವನ್ನು ಮಾಡುತ್ತ ಜತೆಗೆ ತನ್ನ ಅಂಗಡಿಯನ್ನೂ ನಡೆಸುತ್ತಿದ್ದ ತಾರಕ್ ಬಾಬಾ. ಅವನ ಆ ಅಂಗಡಿಯೆಂದರೆ ಒಡೆದ, ಹಾಳಾದ ಧೂಳು ಹಿಡಿದ ಸಿತಾರು, ಸಾರಂಗಿ, ವಯೋಲಿನ್ನು, ಚಿತ್ರವೀಣೆ, ಸುರ್ ಬಹಾರ್ ಮೊದಲಾದ ವಾದ್ಯಗಳ ಸ್ಟೋರ್ ರೂಮು ಎನ್ನುವಂತಿತ್ತು. ಒಂದು ಮೂಲೆಯಲ್ಲಿ ಆ ಎಲ್ಲ ವಾದ್ಯಗಳು ಅತೀವ ದುಃಸ್ಥಿತಿಯಲ್ಲಿ ಗೋಡೆಗೆ ಒರಗಿಕೊಂಡು ನಿಂತಿದ್ದವು, ಮಲಗಿದ್ದವು ಮತ್ತು ಕೆಲವು ಬಿದ್ದಿದ್ದವು. ಜೀವವಿದ್ದಾಗ ಅದಾವ ಕಲಾವಿದನ ಕೈಯಲ್ಲಿ ತಮ್ಮನ್ನು ತಾವು ಗಂಟೆಗಟ್ಟಲೆ ತುಂಬಿಕೊಂಡು ನಾದವಿಸ್ಮಯವನ್ನು ಸೃಷ್ಟಿಸಿದ್ದವೋ. ಈಗ ಮತ್ತೆ ಮರುಜನ್ಮ ಪಡೆಯಲು ಹಕ್ಕುದಾರನ ಕೈಯ ಧೂಳು ಒರೆಸುವ ಒಲುಮೆಗೆ ಕಾಯುತ್ತ ನಿಂತಂತೆ, ಶಾಪಗ್ರಸ್ತ ಅಹಲ್ಯೆಯ ಸಜೀವ ಕಲ್ಲಿನ ಕಾಯುವಿಕೆಯಂತೆ!
ತಾರಕ್ ಬಾಬಾ ಯಾವ ಕೆಲಸವನ್ನೂ ಆರ್ಡರ್ ಬರದೆ ಮಾಡುತ್ತಿರಲಿಲ್ಲ ಮತ್ತು ತಯಾರಾದ ವಾದ್ಯಗಳನ್ನು ಚೆಂದದ ಶೋಕೇಸಿನಲ್ಲಿಟ್ಟು ಗಿರಾಕಿಗಳನ್ನು ಸೆಳೆಯುವ ಕುಶಲತೆಯನ್ನು ಯಾವತ್ತೂ ಸ್ವೀಕರಿಸಿರಲಿಲ್ಲ. ಅವನ ಅಂಗಡಿಯಿದ್ದ ಗಲ್ಲಿಯಾದರೋ ಒಂದು ರಾಯಲ್ ಎನ್‌ಫೀಲ್ಡ್ ಒಮ್ಮೆ ಆ ಗಲ್ಲಿಯನ್ನು ಹೊಕ್ಕಿತೆಂದರೆ ಗಲ್ಲಿಯ ಮತ್ತೊಂದು ಬದಿಯಿಂದ ಅದು ಹೊರಬೀಳುವವರೆಗೆ ಎದುರಿಂದ ನೋ ಎಂಟ್ರಿ! ಈ ತಾರಕ್‌ಬಾಬಾನ ನಿಜವಾದ ಪೂರ್ಣ ಹೆಸರು ತಾರಕ್‌ನಾಥ್ ಭಟ್ಟರಾಯ. ಮೂಲತಃ ಕಲ್ಕತ್ತೆಯಿಂದ ಅದಾವಾಗಲೋ ಅಜ್ಜನ ಕಾಲದಲ್ಲಿ ಬನಾರಸ್ಸಿಗೆ ವಲಸೆ ಬಂದಿತ್ತು ಅವನ ಕುಟುಂಬ. ರಿಪೇರಿಯ ಕೆಲಸಕ್ಕೆ ಕುಳಿತರೆ ಇಹವನ್ನೂ ಪರವನ್ನೂ ಮರೆತು ಕೈಯಲ್ಲಿದ್ದ ವಾದ್ಯದ ಆಳವನ್ನು ಹೊಕ್ಕು ರಿಪೇರಿಯ ಕೆಲಸ ಮುಗಿಯುವವರೆಗೂ ಹಿಮಾಲಯದ ಯೋಗಿಗಳಂತೆ ಕುಳಿತುಬಿಡುತ್ತಿದ್ದ ಅವನ ಕಾರ್ಯತತ್ಪರತೆಗೆ ಸಿಕ್ಕಿದ್ದ ಅನ್ವರ್ಥನಾಮವಾಗಿತ್ತು ಆ ಬಾಬಾ! ಈಗ ಆತ ತನ್ನ ಮೂಲ ಹೆಸರನ್ನು ಎಷ್ಟು ಮರೆತಿದ್ದನೆಂದರೆ ಯಾರಾದರೂ ಹೊಸಬರು ಸಿಕ್ಕಿ ಹೆಸರು ಹೇಳುವ ಸ್ಥಿತಿ ಬಂದರೆ ತಾರಕ್‌ಬಾಬಾ ಎಂತಲೇ ಹೇಳುತ್ತಿದ್ದ.
'ಯಾವಾಗ ಬೇಕು ಸಿತಾರ್?' ತಾರಕ್‌ಬಾಬಾ ವರ್ಷಗಟ್ಟಲೆಯಿಂದ ಸೇದಿದ್ದ ಲಕ್ಷಗಟ್ಟಲೆ ಸಿಗರೇಟಿನಿಂದ ಅತ್ಯಾಧುನಿಕ ಹುಡುಗಿಯ ಕಪ್ಪು ಲಿಪ್‌ಸ್ಟಿಕ್ಕಿನ ತುಟಿಯಂತಾಗಿದ್ದ ತನ್ನ ತುಟಿಗಳಿಂದ ಚಹಾ ಹೀರುತ್ತ ಕೇಳಿದ. 'ಎಷ್ಟು ಬೇಗ ಆಗುತ್ತೋ ಅಷ್ಟು ಬೇಗ ಗಾಂಧಾರ್ ಪಂಚಮ್ ಶೈಲಿಯ ಸಿತಾರ್ ಬೇಕು. ಸದ್ಯ ಯಾವುದೂ ರೆಡಿ ಇಲ್ಲವಾ ಕಾಕಾ' ಪ್ರಣಾಮ್ ಕೇಳಿದ. 'ರೆಡೀ ಇದೆ...' ತಾರಕ ಬಾಬಾ ಮಂದ್ರದಲ್ಲಿ ರಾಗವಾಗಿ ಹೇಳುತ್ತ, 'ಆದ್ರೆ ಗ್ವಾಲಿಯರ್‌ನಿಂದ ಒಬ್ರು ಆರ್ಡರ್ ಮಾಡಿದ ಸಿತಾರ್ ಅದು.. ಅವ್ರು ಬರೋದು ಮುಂದಿನ ತಿಂಗಳು... ನೋಡು ಒಮ್ಮೆ..' ಎಂದು ಗೋಡೆಯಲ್ಲಿ ಎತ್ತರದಲ್ಲಿ ತೂಗಿಹಾಕಿದ್ದ ಸಿತಾರ್ ತೆಗೆದು ಕೊಟ್ಟ.
ಪ್ರಣಾಮ್ ಐದಾರು ನಿಮಿಷಗಳಲ್ಲಿ ತಂತಿಗಳನ್ನು ಶುದ್ಧ ಸ್ವರಗಳಿಗೆ ಜೋಡಿಸಿ ಹೊಸ ಸಿತಾರಿನ ಪರೀಕ್ಷೆಯಲ್ಲಿ ತೊಡಗಿದ. 'ಈ ಸಿತಾರಿನ ಜವಾರಿ ಬಹಳ ಖುಲ್ಲಾ ಇದೆ ಕಾಕಾ, ಬಂದ್ ಜವಾರಿ ಮಾಡಿ ಕೊಡಬಹುದಾ?'. 'ಜರೂರ್... ಲೆಕಿನ್ ಬೇಟಾ... ಅದರ ದಾಮ್ ಎಷ್ಟು ಅನ್ನೋದನ್ನ ಮೊದಲು ತಿಳ್ಕೋ. ಪೂರಾ ಮುವ್ವತ್ತು ಸಾವಿರ. ಒಂದು ರುಪಾಯಿಯೂ ಕಡಿಮೆಯಿಲ್ಲ. ಗೊತ್ತಾಯ್ತಲ್ಲ ಹೇಳಿಬಿಡು ನಿನ್ನ ಸ್ಟೂಡೆಂಟಿಗೆ'. ಮುರಿದ ಕಡ್ಡಿಯ ತುಂಡಿನ ಲಟ್ ಸಪ್ಪಳದಷ್ಟೇ ಸ್ಪಷ್ಟವಾಗಿ ಹೇಳಿದ ತಾರಕ್ ಬಾಬಾ. ಒಮ್ಮೆ ಹುಬ್ಬೇರಿಸಿದ ಪ್ರಣಾಮ್, ಶರ್ಮಾನತ್ತ ನೋಡುತ್ತಲೇ ಶರ್ಮಾ ಶೋಶಿಯೊಂದಿಗೆ ಜಪಾನಿಯಲ್ಲಿ ಕೊರೆಯತೊಡಗಿದ. ಅವರಿಬ್ಬರ ಹಾವ ಭಾವಗಳಿಂದ, ಆ ಮೊತ್ತಕ್ಕೆ ಶೋಶಿಯ ತಕರಾರಿಲ್ಲದಿರುವುದೂ ಶರ್ಮಾಗೆ ಅಸಮಾಧಾನವಿರುವುದೂ ಪ್ರಣಾಮನಿಗೆ ಸ್ಪಷ್ಟವಾಗುತ್ತಿತ್ತು. ಗೈಡ್‌ಗಳ ಕೆಲಸಕ್ಕಿಳಿಯುವ ಎಲ್ಲ ಮಂದಿಯೂ ಇಷ್ಟೆ. ಒಡಹುಟ್ಟಿದ ತಂಗಿಗೆ ಕೊಡಿಸಿದ ಸೀರೆಗೂ ಸೀರೆಯಂಗಡಿಯಿಂದ ಕಮೀಶನ್ನು ಪಡೆಯುವ ಜಾತಿಯವರು ಎಂದುಕೊಳ್ಳುತ್ತ ಪ್ರಣಾಮ್ 'ಏನಾಯ್ತು ಶರ್ಮಾ ಜೀ?' ಎಂದ. 'ಏನಿಲ್ಲ... ಹಣ ಸ್ವಲ್ಪ ಜಾಸ್ತಿ ಆಯ್ತು ಎನ್ನುತ್ತಿದ್ದಾರೆ ಮೇಡಮ್‌' ಎಂದು ಹಲ್ಕಿರಿಯುತ್ತ ಹತ್ತು ಪರ್ಸೆಂಟ್ ವಿನಯದಲ್ಲಿ ತಾರಕ್ ಬಾಬಾನತ್ತಲೂ ಪ್ರಣಾಮ್‌ನತ್ತಲೂ ನೋಡುತ್ತ ಹೇಳಿದ ಶರ್ಮಾ. 'ಬೇಕಾದ್ರೆ ತಗೋ. ಕೆಲ್ಸ, ದುಡ್ಡು ಒಂದೇ ಮಾತು' ತಾರಕ್‌ಬಾಬಾ ಹೇಳಿದ. ಶರ್ಮಾನಿಗೆ ಇದು ಯಾಕೋ ತನಗೆ ವರ್ಕೌಟ್ ಆಗುವಂಥ ವ್ಯವಹಾರವಲ್ಲ ಎನ್ನಿಸಿತೇನೋ, ಶೊಶಿಯೊಂದಿಗೆ ಏನೋ ಮಾತನಾಡಿದವನಂತೆ ಮಾಡಿ, 'ಠೀಕ್ ಹೈ ಮಹಾರಾಜ್, ಮೇಡಮ್ ಒಪ್ಪಿಕೊಂಡ್ರು' ಎನ್ನುತ್ತ ಹಲ್ಕಿರಿಯತೊಡಗಿದ. ಇಂಥ ನಾಟಕಗಳನ್ನು ತನ್ನ ಜೀವನದಲ್ಲಿ ಸಾವಿರಾರು ಬಾರಿ ನೋಡಿ ಅನುಭವಿಸಿ ತಾನೂ ಪಾತ್ರ ಮಾಡಿ ಹಾರ್ಮೋನಿಯಮ್ ಹಿಡಿದು ಹಾಡಿ ರಂಜಿಸಿ ಗೆದ್ದಿದ್ದ ತಾರಕ್‌ಬಾಬಾ, 'ನಾಳೆ ಸಂಜೆ ಬನ್ನಿ ಅಷ್ಟರಲ್ಲಿ ತಯಾರ್ ಮಾಡಿ ಇಟ್ಟಿರ್ತೇನೆ'. ಕಾಕಾ ಚಹಾ ಕಪ್ಪಿನ ಕೊನೆಯ ಗುಟುಕನ್ನು ಹೀರಿ, ಶೊಶಿಯತ್ತ ನೋಡುತ್ತ, 'ಇವಳೇನಾ ನಿನ್ನ ಸ್ಟೂಡೆಂಟು' ಎಂದು ಮಾತಿಗೊಂದು ಅಗತ್ಯ ತಡೆಯನ್ನು ಕೊಟ್ಟು 'ಈ ಫಾರೀನರ್‌ಗಳು ಎಲ್ಲೆಲ್ಲಿಂದಾನೋ ಬರ್ತಾರೆ, ನಾಕ್ ದಿನ ಕಲಿತ ಹಾಗೆ ಮಾಡಿ ಸಾಜ್ ಸಮೇತ ಹೋಗಿ ಮನೆಯಲ್ಲಿ ಅಲಂಕಾರಕ್ಕೆ ಇಡ್ತಾರೆ. ನಮಗ್ ಲಾಭ ಅಷ್ಟೆ' ಎನ್ನುತ್ತ ಬದಿಯ ಮೂಲೆಯಲ್ಲಿ ಧೂಳು ನುಂಗುತ್ತ ಮಲಗಿದ್ದ ವಯೋಲಿನ್ನೊಂದನ್ನು ರಿಪೇರಿಗಾಗಿ ಕೈಗೆತ್ತಿಕೊಂಡು 'ಠೀಕ್ ಹೈ, ನಾಳೆ ಬನ್ನಿ' ಎಂದ. ಶೊಶಿಗೆ ಈತ ತನ್ನ ಬಗ್ಗೆಯೇ ಏನೋ ಹೇಳ್ತಾ ಇದ್ದಾನೆ ಎನ್ನಿಸಿತಾದರೂ ಏನು ಹೇಳ್ತಾ ಇದ್ದಾನೆ ಎಂದು ಗೊತ್ತಾಗದ ಕಾರಣ ಶರ್ಮಾನ ಮುಖವನ್ನೂ ಪ್ರಣಾಮನ ಮುಖವನ್ನೂ ಮಿಕಮಿಕ ನೋಡುತ್ತಿದ್ದಳು.

- ಡಾ. ಕಣಾದ ರಾಘವ
dr.kanada@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com