ಮಧ್ಯಕಾಲೀನ ಕರ್ನಾಟಕದ ಗ್ರಾಮ ಜಾನಪದ ಹೊಸ ಬಗೆಯ ಅಭಿವ್ಯಕ್ತಿಗಳನ್ನು ಮೌಖಿಕ ಪರಂಪರೆಯಲ್ಲಿ ಕಂಡುಕೊಳ್ಳುವಾಗ ಪುರುಷಪ್ರಧಾನ ಧೋರಣೆ ಪ್ರಧಾನವಾಯಿತು. ಮಾತೃ ಸಂವೇದನೆಯ ನೈಸರ್ಗಿಕ ಭಾವದ ತತ್ವ ಅಧಿಕಾರ ಕಳೆದುಕೊಂಡು ಅದು ಕೇವಲ ಗರತಿಯ ಮುಖವಾಣಿಯಾಗಲು ತೊಡಗಿತು. ಅಂದರೆ ಪುರುಷಾಧಿಪತ್ಯದ ಅಂಕೆಶಂಕೆಯ ಗರತಿಯ ಗುಣಗಳನ್ನು ಸ್ತುತಿಸಿ ಪುರುಷ ಪಾರಮ್ಯವನ್ನು ಕೊಂಡಾಡಬೇಕಾಯಿತು. ಪುರುಷ ದೈವಗಳು ಸ್ತ್ರೀ ದೈವಗಳ ಮೇಲೆ ಇದೇ ಕಾಲದಲ್ಲಿ ದಿಗ್ವಿಜಯ ಸಾಧಿಸಿದವು. ಕರ್ನಾಟಕದ ರಾಜವಂಶಗಳು ಸಾಮ್ರಾಜ್ಯದ ಕದನಗಳಲ್ಲಿ ಮುಳುಗಿ ದಿಗ್ವಿಜಯವನ್ನೋ, ಸೋಲನ್ನೋ, ಸಂಧಾನವನ್ನೋ ಮಾಡಿಕೊಳ್ಳುತ್ತಿದ್ದ ವೇಳೆಯಲ್ಲೇ ಬಹುರೂಪಿ ಸಮಾಜಗಳ ಒಳಗೆ ಅಸ್ತಿತ್ವದ ಅನೇಕ ಏರುಪೇರುಗಳು ಎದುರಾಗುತ್ತಿದ್ದವು. ಸಾಂಸ್ಕೃತಿಕ ಯುದ್ಧಗಳು ಅದರ ಸೋಲು ಹಾಗೂ ಒಪ್ಪಂದಗಳು ಮತ್ತು ಲಿಂಗ ತಾರತಮ್ಯದ ನೀತಿಗಳು ಕಳೆದುಹೋಗಿರುವ ಕೊಂಡಿಗಳಂತೆ ಭಾಸವಾಗುತ್ತವೆ. ಈ ಬಗ್ಗೆ ಚರಿತ್ರೆಕಾರರ ಮೌನವನ್ನು ಏನೆಂದು ಕರೆಯುವುದು? ಗ್ರಾಮದೈವ ಸ್ತ್ರೀಯೇ ಆಗಿದ್ದರೂ ಆ ಸ್ತ್ರೀದೈವದ ಪೂಜಾರಿ ಪುರುಷನೇ ಆಗಿದ್ದನೆಂಬುದನ್ನು ಉಪೇಕ್ಷಿಸಲಾಗದು. ಬಹುಪಾಲು ಎಲ್ಲ ಗ್ರಾಮದೈವಗಳ ಪೂಜಾರಿಗಳು ಆ ಗ್ರಾಮದ ಭೂಮಾಲೀಕನ ಅಣತಿಯಂತೆಯೇ ಸಾಂಸ್ಕೃತಿಕ ನೀತಿ ನಿಯಮಗಳನ್ನು ನಿರೂಪಿಸಬೇಕಾಗಿತ್ತು. ಇನ್ನೂ ಒಂದು ಮುಖ ಇಲ್ಲಿದೆ. ಗ್ರಾಮ ದೈವಗಳು ಹೆಚ್ಚಿನ ಪ್ರಮಾಣದಲ್ಲಿ ಪಶುಪಾಲಕ ಸಮುದಾಯಗಳ ಮೂಲದವು ಹಾಗೆಯೇ ತಳಸಮುದಾಯಗಳ ಕೇರಿಗಳಿಂದ ಬಂದವುಗಳು. ಏಕಕಾಲಕ್ಕೆ ತಳಜಾತಿ ಹಾಗೂ ಆ ಜಾತಿಗಳ ನಿಸರ್ಗನಿಷ್ಠ ಗ್ರಾಮದೈವಗಳ ಸ್ತ್ರೀ ಸಂಕೇತಗಳನ್ನು ಉಳಿಗಮಾನ್ಯ ವ್ಯವಸ್ಥೆಯು ಗೆದ್ದುಕೊಂಡು ತನ್ನ ವ್ಯವಸ್ಥೆಯನ್ನಾಗಿ ಮಾಡಿಕೊಂಡಿದೆ. ಈ ದಿಸೆಯಲ್ಲಿ ಮೌಖಿಕ ಪರಂಪರೆಯು ತನಗೆ ತಾನೇ ನಿಷ್ಠವಾಗದ ಹಾಡುವ ಹಾಡಿನಲ್ಲಿ ತನ್ನನ್ನು ತಾನೇ ಮರೆಮಾಚಿಕೊಳ್ಳುವ ಈ ಪರಿಯನ್ನು ಅಪ್ಪಟ ಜನತೆಯ ಸಾಹಿತ್ಯ, ಸಂಸ್ಕೃತಿ, ಚರಿತ್ರೆ ಎಂದು ಹೇಗೆ ಕರೆಯುವುದು?
ಸೋತ ಸ್ತ್ರೀ ದೈವಗಳು ಪುರುಷಾಧಿಪತ್ಯದ ಒಪ್ಪಂದಕ್ಕೆ ಸಿಲುಕಿದಾಗ ಗ್ರಾಮ ಸಮಾಜದ ಮನಸ್ಥಿತಿಯ ಮೇಲೆ ಅದರಲ್ಲೂ ಮಹಿಳೆಯರ ಮೇಲೆ ತೀವ್ರತರನಾದ ಆಘಾತವಾಗಿರುವುದನ್ನು ಗಮನಿಸಬಹುದು. ಸ್ತ್ರೀ ಕೇಂದ್ರಿತ ಆಚರಣೆಗಳು ಭಗ್ನವಾದಾಗ ಕೌಟುಂಬಿಕ ವ್ಯವಸ್ಥೆಯ ಮೇಲೆ ಏನೆಲ್ಲ ಪರಿಣಾಮಗಳುಂಟಾಗಿರಬಹುದು? ಗರತಿಯ ಗೌರವದ ಹುಸಿಗೂ ಅವಕಾಶವಿಲ್ಲದಾಗ ಆಕೆ ಯಾವ ಬಗೆ ದೈವದ ಮೊರೆ ಹೊಕ್ಕಳು? ವೀರಭದ್ರ, ಹನುಮಂತರಂಥ ವೀರಪುರುಷ ದೈವಗಳು ಮಧ್ಯಕಾಲೀನ ಕರ್ನಾಟಕದ ಸಾಮ್ರಾಜ್ಯಶಾಹಿ ಇತಿಹಾಸದಲ್ಲಿ ಜಾತಿಯ ಪತಾಕೆಗಳನ್ನೂ ಧರಿಸಿ ವಿಜೃಂಭಿಸುವುದನ್ನು ನೋಡಬಹುದು. ಇಂಥ ದೈವಗಳಿಗೆ ವಿರುದ್ಧವಾಗಿ ಮಹಿಳೆ ಎದುರು ನಿಲ್ಲಲು ಸಾಧ್ಯವಿರಲಿಲ್ಲ. ಎಲ್ಲಮ್ಮ, ಸಿರಿಯಂಥ ಸ್ತ್ರೀ ದೈವಗಳೂ ಪುರುಷಾಧಿಪತ್ಯದ ಲೈಂಗಿಕ ಶೋಷಣೆಗೆ ಪರವಾನಗಿ ಕೊಡುವಂತೆ ನಿಯಂತ್ರಣ ಆಗಿ ಹೋಗಿತ್ತು. ಈ ಸ್ಥಿತಿಯಲ್ಲಿ ಮಾನಸಿಕ ಹಿಂಸೆಗೆ ಒಳಗಾದ ಮಹಿಳೆ ಭೂತ ಪಿಶಾಚಿ ದೆವ್ವ ಗಾಳಿಯಂಥ ದುಷ್ಟಶಕ್ತಿಗಳನ್ನೇ ತನ್ನನ್ನು ಕಾಯುವ ಶಕ್ತಿಗಳು ಎಂಬಂತೆ ಭ್ರಮಿಸುವ ಇಚ್ಛಿತ ವಿಕಲ್ಪನೆಗಳಿಗೆ ಒಳಗಾಗಬೇಕಾಯಿತು. ಮೈಮೇಲೆ ದೆವ್ವ ಪಿಶಾಚಿ ಬರುವ ನಂಬಿಕೆ ಆಚರಣೆಗಳು ಇದರಿಂದ ಮೈದಳೆದವು. ಗಂಡನ ಮನೆಯಲ್ಲೂ ಸ್ವಾತಂತ್ರ್ಯವಿಲ್ಲದೆ, ತವರಿನಲ್ಲೂ ನೆಲೆ ಇಲ್ಲದೆ ಅತಂತ್ರರಾದ ಮಹಿಳೆಯರು ದೆವ್ವ ಎಂಬ ದೈವವನ್ನು ಸೃಷ್ಟಿಸಿಕೊಂಡದ್ದನ್ನು ಕೇವಲ ಮೂಢನಂಬಿಕೆ, ಅಜ್ಞಾನ ಎಂದು ನಾವೇ ಸರಳೀಕರಿಸಿ ನಮ್ಮ ಬುದ್ಧಿವಂತಿಕೆಯನ್ನು ಸಾರುವುದು ಎಷ್ಟು ಸರಿ? ಇಲ್ಲೂ ದೆವ್ವ ಭೂತಗಳನ್ನು ಬಿಡಿಸಲು ಪುರುಷ ಪೂಜಾರಿ ಉಗ್ರವಾಗಿ ದೆವ್ವಹಿಡಿದಿದೆ ಎಂದು ತೋರಿದ ಮಹಿಳೆಯನ್ನು ದಂಡಿಸುವ ಪರಾಕ್ರಮವಿದೆಲ್ಲಾ!
- ಲೇ: ಡಾ. ಮೊಗಳ್ಳಿ ಗಣೇಶ್,
(ಅವ್ಯಕ್ತ ಚರಿತ್ರೆ; ಚರಿತ್ರೆ ರಚನಾ ನಿರ್ವಚನ)