ಮಿರಾಕಲ್ ಗಾರ್ಡನ್

ದುಬೈ ಎಂಬ ಹೆಸರು ಕೇಳಿದ ತಕ್ಷಣ ಮನಸ್ಸಿನಲ್ಲಿ ಮೂಡುವ ಚಿತ್ರಣ ವಿವಿಧ ವಿನ್ಯಾಸದ ಗಗನಚುಂಬಿ ಕಟ್ಟಡಗಳು, ಸುಂದರವಾದ ಬೀಚುಗಳು, ಐಷಾರಾಮಿ ಹೋಟೆಲುಗಳು, ಬುರ್ಜ ಖಲೀಫ ಎಂಬ ಜಗತ್ತಿನ ಅತ್ಯಂತ ಎತ್ತರದ ಕಟ್ಟಡ... ಹೀಗೆ ಹತ್ತು ಹಲವು. ಬರಿಯ ಕಣ್ಣುಗಳಲ್ಲಿ ನೋಡಲು ಇದು ಧರೆಗೆ ಇಳಿದ ಸ್ವರ್ಗ. ಇಂತಿರುವ ದುಬೈಯಲ್ಲಿ ಇದಕ್ಕೆ ಉಪಮೆ ಎಂಬಂತೆ ಹೊಸ ಸೇರ್ಪಡೆ 'ಮಿರಾಕಲ್ ಗಾರ್ಡನ್'. ಹೆಸರೇ ಸೂಚಿಸುವಂತೆ ಇದೊಂದು ಅದ್ಭುತ. ಕಣ್ಮನಗಳನ್ನು ತಣಿಸುವ ಹೂರಾಶಿಯ ಬೃಂದಾವನ. ಇಲ್ಲಿಯ ಪ್ರಸಿದ್ಧ ತಾಣವಾದ ಅರೇಬಿಯನ ರಾಂಚಸ್ ಬಳಿಯ ದುಬೈ ಲ್ಯಾಂಡ್ ಎಂಬಲ್ಲಿ ಮೈತಳೆದ, 4 ಕಿ.ಮಿ ವ್ಯಾಪ್ತಿಯುಳ್ಳ ಕಾಲುದಾರಿ ಅಥವಾ ನಡೆದಾಡುವ ದಾರಿ (ಪಾಥ್ ವೇ) ಹೊಂದಿರುವ ಗಾರ್ಡನ್ನಲ್ಲಿ ಎತ್ತ ನೋಡಿದರತ್ತ ಹೂಗಳು. ಎಲ್ಲಿ ನೋಡಿದರೂ ಎರಕ ಹಾಕಿದ ಬಣ್ಣಗಳ ಓಕುಳಿ. ಬಿಳಿ, ಹಸಿರು, ಹಳದಿ, ಕೆಂಪು, ನೀಲಿ... 60 ಕ್ಕಿಂತಲೂ ಹೆಚ್ಚಿನ ಬಣ್ಣಗಳು! ಕಣ್ಣಿಗೆ ನಿಲುಕುವವರೆಗೂ ಕಾಣುವ ಹೂಗಳ ರಾಶಿ. ಅದುವೇ 'ಮಿರಾಕಲ್ ಗಾರ್ಡನ್' ಸೊಬಗು.
ನವೆಂಬರ್ 22, 2012 ರಂದು ಆರಂಭವಾದ ಈ ಗಾರ್ಡನ್ ಕೆಲಸದ ಹೊಣೆ ಹೊತ್ತ ಅಲ ಅಯಿನ್ ಎಂಬಲ್ಲಿಯ ಅಕ್ಬರ್ ಲ್ಯಾಂಡ್ ಸ್ಕೇಪಿಂಗ್ ಅಂಡ್ ಎಗ್ರಿಕಲ್ಚರಲ್ ಕಂಪನಿಯು ಸತತ ಪ್ರಯತ್ನದಿಂದ ಮೂರು ತಿಂಗಳಿನ ಒಳಗೇ ಉತ್ತಮವಾದ ಬೃಂದಾವನವನ್ನು ಇಲ್ಲಿ ರೂಪಿಸಿಕೊಟ್ಟಿತು. ಇದರಲ್ಲಿ ವಿವಿಧ ಶೈಲಿಗಳಲ್ಲಿ ಅಂದರೆ ಹ್ಯಾಂಗಿಗ್, ಹೃದಯದ ಆಕಾರ, ನಕ್ಷತ್ರ, ಪಿರಮಿಡ್, ವಿವಿಧ ಅಂತಸ್ತುಗಳಲ್ಲಿ ಸಿಂಗಾರಗೊಂಡ ಹೂಗಳು, ಎರಡು ಬದಿಗಳಲ್ಲಿ ಹೂಗಳಿಂದ ನಿರ್ಮಿತವಾದ ಗೋಲಗಳು, ಪಾಥ್ ವೇಯಲ್ಲಿ ಬಣ್ಣಬಣ್ಣದ ಹೂಗಳ ಚಪ್ಪರ ಹಾಗೂ ಹೂಗಳಲ್ಲಿ ಮಿಂದೆದ್ದ ವಿಂಟೇಜ್ ಕಾರುಗಳು ಚಿತ್ತಾಕರ್ಷಕವಾಗಿವೆ. ಈ ಗಾರ್ಡನ್ 72,000 ಚದರ ಮೀಟರ್ ವಿಸ್ತಾರ ಹೊಂದಿದ್ದು, ಇದರಲ್ಲಿ ಸುಮಾರು ನಾಲ್ಕುವರೆ ಕೋಟಿ ಹೂಗಳಿವೆ ಎಂದು ಅಂದಾಜಿಸಲಾಗಿದೆ. 60 ಕ್ಕಿಂತಲೂ ಹೆಚ್ಚಿನ ಬಗೆಯ ಬಣ್ಣದ ಹೂಗಳಿರುವ ಗಿಡಗಳನ್ನು ಹೊಂದಿದೆ. ಈ ಹೂಗಳೆಲ್ಲ ಹಲವು ದಿನಗಳ ಕಾಲ ಅರಳಿ ಸುವಾಸನೆ ಹೊಮ್ಮಿಸುವ ಸಾಮರ್ಥ್ಯ ಹೊಂದಿದ್ದು ಅಂಥ ಗಿಡಗಳನ್ನು ಬೇರೆಬೇರೆ ದೇಶಗಳಿಂದ ತರಿಸಿಕೊಳ್ಳಲಾಗಿದೆ. ಕೆಲವು ಗಿಡಗಳಂತೂ ಕೊಲ್ಲಿ ರಾಷ್ಟ್ರದಲ್ಲೇ ಮೊದಲ ಬಾರಿಗೆ ತರಿಸಿದ ಹೆಗ್ಗಳಿಕೆಗೆ ಭಾಜನವಾಗಿದೆ. ಗಿನ್ನೆಸ್ ಬುಕ್ನಲ್ಲಿ ದಾಖಲಾಗಿರುವ ಇದೇ (ಯು.ಎ.ಇ) ದೇಶದ ಅಲ್ ಅಯಿನ್ನಲ್ಲಿ ರೂಪುಗೊಂಡ ಅಲ ಅಯಿನ್ ಪ್ಯಾರಡೈಸ್ ಅನ್ನುವ ಜಗತ್ತಿನ ಅತಿ ದೊಡ್ಡ ಹ್ಯಾಂಗಿಂಗ್ ಗಾರ್ಡನ್ ಹೋಲುವ ಮಿರಾಕಲ್ ಗಾರ್ಡನ್ನ ಮತ್ತೊಂದು ವಿಶೇಷತೆ ಎಂದರೆ ಹೂಗಳಲ್ಲೇ ಆವೃತವಾದ ಅತ್ಯಂತ ಉದ್ದದ ಗೋಡೆ. ಇದರ ಉದ್ದ 1 ಕಿ.ಮೀ. ಈ ಗೋಡೆ ಗಿನ್ನೆಸ್ ಬುಕ್ನಲ್ಲಿ ಸ್ಥಾನ ಪಡೆಯಲು ಹೊರಟಿದೆ.
ಈಗ ಮರಳು ನಾಡಿನಲ್ಲಿ ಬೇಸಿಗೆ. ಹೀಗಾಗಿ ಸದ್ಯಕ್ಕೆ ಈ ಗಾರ್ಡನ್ ಮುಚ್ಚಲಾಗಿದೆ. ಬೇಸಿಗೆ ಮುಗಿದ ಕೂಡಲೇ ಪ್ರವಾಸಿಗರ ವೀಕ್ಷಣೆಗೆ ಪುನಃ ತೆರೆದುಕೊಳ್ಳುತ್ತದೆ.
= ರಜನಿ ಎಸ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


