ಬಾಸ್ ಸ್ವರದಂತೆ ಗಂಭೀರವಲ್ಲ ರಸಭರಿತ ಮೀಂಡ್ಗಳು

ಆಗ್ರಾ ಘರಾಣೆಯಲ್ಲಿ ಆ 'ರಸ' ತುಂಬುವುದಕ್ಕೆ ಕಾರಣ ಅವರು ಬಳಸುವ 'ಮೀಂಡ್'ಗಳು. ಒಂದು ಸ್ವರದಿಂದ ಇನ್ನೊಂದು ಸ್ವರಕ್ಕೆ ನಯವಾಗಿ ನಿಧಾನವಾಗಿ ಜಾರಿಕೊಂಡು ಹೋಗುವ ಈ ವಿಧಾನ ಸ್ವರ-ಸ್ವರಗಳನ್ನು ಬೆಸೆಯುವ ಹೃದಯ ಸ್ಪರ್ಶಿ ವಿಧಾನ. ನಾವು ಮಾತನಾಡುವಾಗಲೂ ಭಾವನೆ ವ್ಯಕ್ತಪಡಿಸುವಾಗ 'ಮೀಂಡ್' ಬಳಸುತ್ತಿರುತ್ತೇವೆ. ನಮ್ಮ ಪ್ರೀತಿ ಪಾತ್ರರನ್ನು 'ನಮ್ಮ ಜೊತೆ ಬನ್ನಿ' ಎಂದು ಒತ್ತಾಯಿಸುವಾಗ, 'ಬಾ... ಪ್ಲೀ....ಸ್...' ಎನ್ನುವುದಿಲ್ಲವೆ? 'ರಾಗ ಎಳೀಬೇಡ' ಎಂದು ಬೈಯ್ಯಿಸಿಕೊಳ್ಳುವುದಿಲ್ಲವೆ - ಹಾಗೆ. ಅದೇ ಸ್ವರಬದ್ಧವಾದಾಗ 'ಮೀಂಡ್' ಆಗುತ್ತದೆ. ಅಲ್ಲಿ ಧ್ವನಿಯನ್ನು ಸ್ವರದ ಮೂಲಕ ಎಳೆಯುವಾಗ ಅಲ್ಲೊಂದು ಅನುನಯ, ಪ್ರೀತಿ, ಭಾವ, ರಸ ಉಂಟಗುತ್ತದೆ. ಅದಕ್ಕೇ ಆಫೀಸ್ನಲ್ಲಿ ಬಾಸ್ ಆದವರು ಎಂದೂ ಧ್ವನಿ ಎಳೆಯುವುದಿಲ್ಲ. ಏಕೆಂದರೆ ಅಲ್ಲಿ ಭಾವನೆಗೆ ಅವಕಾಶವಿರುವುದಿಲ್ಲ.
ಹೀಗೆ ಹಿಗ್ಗಿಸಿ, ಹಿಗ್ಗಿಸಿ ಈ ಘರಾಣೆಯ ಗಾಯಕರ ಧ್ವನಿ ಸ್ವರ ಭರಿತವೂ, ಭಾವಭರಿತವೂ, ಶಕ್ತಿಶಾಲಿಯೂ ಆಗಿರುತ್ತದೆ. ಸುರೀಲಿ - ಬುಲಂದ್ ಆವಾಜ್ ಈ ಘರಾಣೆಯ ಗಾಯಕರ ಪ್ರಮುಖ ಲಕ್ಷಣಗಳಲ್ಲೊಂದು. ಅಲ್ಲದೇ ಇದರ ಜತೆ ಇನ್ನೆಲ್ಲೂ ಸಿಗದ 'ನೋಂ-ತೋಂ' ಎಂಬ ವಿಶಿಷ್ಟ ಶೈಲಿಯ ಉಚ್ಚಾರಣೆ ಇವರ ಇನ್ನೊಂದು ವಿಶೇಷ. ತ-ನ-ನೋಂ-ತ-ದ-ರಿ-ನ-ನ ಇಂತಹ ಅಕ್ಷರಗಳನ್ನು ಬಳಸಿಕೊಂಡು ಆಲಾಪನೆ ಮಾಡುವ ವಿಧಾನವನ್ನು 'ನೋಂ-ತೋಂ' ಎನ್ನುತಾರೆ.
ಆಟ ಆಡಿದಂತೆ, ರಮಿಸಿದಂತೆ, ಯುದ್ಧಕ್ಕೆ ಹೋದಂತೆ, ಮುದ್ದಿಸಿದಂತೆ, ಪ್ರಶಾಂತವಾಗಿರುವಂತೆ, ಗುಡುಗಿದಂತೆ ಹೀಗೆ ಎಲ್ಲ ಭಾವನೆಗಳನ್ನು - ನವ ರಸಗಳನ್ನೂ ಹಾಡುವಾಗ ಕೇವಲ 'ಆಡಡಡ' ಎಂದು ಹಾಡಲು ಸಾಧ್ಯವಾಗುವುದಿಲ್ಲ. ಈ, ಊ, ಓ, ಏ, ಅನುನಾಸಿಕಗಳು ಇವೆಲ್ಲವೂ ಭಾವೋತ್ಪತ್ತಿಗೆ ಬೇಕಾಗುತ್ತವೆ. ಇವೆಲ್ಲ ಬೇಕೆಂದರೆ ಶಬ್ದಗಳು ಬೇಕು. ಆದರೆ ಶಬ್ದಗಳನ್ನು ಬಳಸಿ ಆಲಾಪನೆ ಮಾಡುವಾಗ ಸ್ವಲ್ಪ ಮೈಮರೆತರೂ ಅಭಾಸಕ್ಕೆ ಆಸ್ಪದ ಹೆಚ್ಚು. ಉದಾಹರಣೆಗೆ 'ವೈಕುಂಠಪತಿ' ಎಂಬುದನ್ನು 'ವೈ...' ಎಂದು ಎಳೆದು 'ಕುಂಠಪತಿ' ಎಂದುಬಿಟ್ಟರೆ ಅಥವಾ 'ಮಧುಸೂದನ ಬಾರೋ' ಎಂಬಲ್ಲಿ 'ಮಧುಸೂ' ಆದಮೇಲೆ ನಿಂತು 'ದನ ಬಾರೋ' ಎಂದು ಬಿಟ್ಟರೆ ಎಂಥ ಆಭಾಸ! ಇದು ಉದ್ದೇಶರಹಿತವಾದರೂ ಅನರ್ಥಕ್ಕೆ ಕಾರಣವಾಗುತ್ತದೆ. ಬಹುಶಃ ಈ ಎರಡೂ ಅಂಶಗಳನ್ನು ಗಮನದಲ್ಲಿಟ್ಟು 'ನೋಂ- ತೋಂ' ಬಳಕೆಯಲ್ಲಿ ಬಂದಿರಬಹುದೇನೋ. ಏಕೆಂದರೆ ನೋಂ, ತೋಂ, ತ, ದ, ರಿ, ನ ಎಂಬುದನ್ನು ಎಲ್ಲಿಬೇಕಾದರೂ ಕತ್ತರಿಸಬಹುದು, ನಿಲ್ಲಿಸಬಹುದು, ಎಳೆಯಬಹುದು, ಹಿಂದೆ ಮುಂದೆ ಮಾಡಿ ಹಾಡಬಹುದು. ಯಾವ ಆಭಾಸಕ್ಕೂ ಎಡೆಯಿಲ್ಲ. ಇದರಿಂದ ಸ್ವರಗಳ ವಿನ್ಯಾಸ, ಜೋಡಣೆ, ನಿರಂತರವಾಗಿ ವಿಸ್ತಾರವಾಗುತ್ತ ಯಾವ ಪರಿಧಿಯೂ ಇಲ್ಲದಂತೆ ಅನಂತವಾಗಿ ಬೆಳೆಯುತ್ತ ಹೋಗುತ್ತದೆ.
ಈ ಘರಾಣೆಯ ಆಲಾಪನೆ ವಿಸ್ತಾರವೂ, ಲಯಭರಿತವೂ, ಎರಡು- ಮೂರು ಲಯಗಳಲ್ಲೂ, ಎರಡೂವರೆ- ಮೂರು ಸಪ್ತಕಗಳಲ್ಲೂ ಇರುತ್ತದೆ. ಸರಿಸುಮಾರು ಅರ್ಧ-ಮುಕ್ಕಾಲು ಗಂಟೆಗಿಂತಲೂ ಹೆಚ್ಚು ಒಂದು ರಾಗದಲ್ಲಿ 'ನೋಂ-ತೋಂ' ಹಾಡಿದಾಗ ಆ ಇಡೀ ಪರಿಸರ ಆ ರಾಗದ ಸ್ವರಗಳಲ್ಲಿ ಮುಳುಗಿರುವ ಅನುಭವವಾಗುತ್ತದೆ.
ಹೀಗೆ ಸ್ವರದ ಜೊತೆ ಜೊತೆಗೆ ಸಾಹಿತ್ಯಕ್ಕೂ ಮಹತ್ವ ಕೊಟ್ಟು ಆಗ್ರಾ ಘರಾಣೆಯ ಗಾಯಕರು ಬಹಳ ಅರ್ಥ್ಥಪೂರ್ಣವಾದ, ಆ ರಾಗದ ಸ್ವರಕ್ಕೆ ಅನುರೂಪವಾಗುವಂತಹ ಸುಂದರವಾದ 'ಚೀಜ್'ಗಳನ್ನು ರಚಿಸಿದ್ದಾರೆ. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಜತೆ ಆದರ ಸಾಹಿತ್ಯಕ್ಕೂ ಮಹತ್ವದ ಕೊಡುಗೆ ನೀಡಿದ್ದಾರೆ.
(ಮುಂದುವರಿಯುವುದು)
- ಶ್ರುತಿ ಭಟ್
shrutikbhat@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


