1967. ಆಗ ನನಗೆ ಇಪ್ಪತ್ತೊಂದು ವರ್ಷ ವಯಸ್ಸು. ಚಿಂತಾಮಣಿಯ ಡಿಲಿಜೆನ್ ಸಂಯುಕ್ತ ಪ್ರೌಢಶಾಲೆಯಲ್ಲಿ ಆಗಷ್ಟೇ ಇಂಗ್ಲಿಷ್ ಉಪಾಧ್ಯಾಯನಾಗಿ ಉದ್ಯೋಗಸ್ಥನಾಗಿದ್ದೆ. ಯೌವನದ ಹೊಸ ಹುರುಪಿನೊಂದಿಗೆ ನಾನು ಒಳ್ಳೆಯ ಹಾಡುಗಾರನೂ ಆಗಿದ್ದುದರಿಂದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅಚ್ಚುಮೆಚ್ಚಿನ ಮೇಸ್ಟರಾಗಿದ್ದೆ.
ಅಲ್ಲಿನ ವಿದ್ಯಾರ್ಥಿನಿಯರಲ್ಲಿ ಶಕುಂತಲ ಎಂಬ ನವ ತರುಣಿ ಇದ್ದಳು. ಓದಿನಲ್ಲಿ ಅಷ್ಟೇನೂ ಚುರುಕಾಗಿಲ್ಲದಿದ್ದರೂ ನೋಡಲು ಮುದ್ದಾಗಿದ್ದಳು. ಅವಳ ತಂದೆ ಬ್ಯಾಂಕೊಂದರಲ್ಲಿ ಅಕೌಂಟೆಂಟ್.
ಶಕುಂತಲ ನನ್ನಲ್ಲಿ ಅನುರಕ್ತಳಾಗಿದ್ದಳೆಂಬುದು ಅವಳ ಹಾವಭಾವವಿಲಾಸಗಳಿಂದ ನನಗೆ ಸ್ಪಷ್ಟವಾಗಿತ್ತು. ಅಂಥ ಪ್ರಥಮ ಪ್ರೀತಿಗಾಗಿ ಹಸಿದು, ಹಾತೊರೆಯುತ್ತಿದ್ದ ನಾನೂ ಸಹಜವಾಗಿ ಅವಳ ಪ್ರೇಮದ ಸುಳಿಗೆ ಸಿಕ್ಕಿಬಿದ್ದೆ. ಆಗಾಗ ಅವಳ ಮನೆಗೂ ಹೋಗಿಬರುತ್ತಿದ್ದೆ. ಅವಳ ತಂದೆ ತಾಯಿ ಮೊದಲುಗೊಂಡು ಅವಳ ಮನೆಯವರೆಲ್ಲರಿಗೂ ನನ್ನ ಬಗ್ಗೆ ಆದರ, ಅಕ್ಕರೆ ಇದ್ದವು. ಹೀಗಾಗಿ ಅವಳನ್ನೇ ಮದುವೆಯಾಗುವುದೆಂದು ನಾನು ನಿರ್ಧರಿಸಿದ್ದೆ.
ಶಕುಂತಲ ಎಸ್ಸೆಸ್ಸೆಲ್ಸಿ ಮುಗಿಸುವ ವೇಳೆಗೆ ಅವಳ ಮದುವೆಗಾಗಿ ಅವಳ ಮನೆಯಲ್ಲಿ ಸಿದ್ಧತೆ ಶುರುವಾಗಿರುವ ಸಂಗತಿ ನನಗೆ ತಿಳಿಯಿತು. ಇನ್ನು ತಡಮಾಡಿದರೆ ಅವಳು ನನ್ನ ಕೈತಪ್ಪಿಹೋಗುವುದು ನಿಶ್ಚಿತ ಅನ್ನಿಸಿತು. ಆದರೆ ನನ್ನ ಕುಟುಂಬದಲ್ಲಿ ನಾನೇ ಹಿರಿಮಗನಾಗಿದ್ದೆ. ನನ್ನ ಬೆನ್ನಿಗೆ ನಾಲ್ವರು ತಂಗಿಯರು, ಮೂವರು ತಮ್ಮಂದಿರಿದ್ದರು. ತಂಗಿಯರ ಮದುವೆಗೆ ಮೊದಲೇ ನಾನು ನನ್ನ ಮದುವೆಗೆ ಮುಂದಾಗುವುದು ಯುಕ್ತವಾಗಿರಲಿಲ್ಲ. ಆದರೆ, ಶಕುಂತಲಳನ್ನು ಕಳೆದುಕೊಳ್ಳಲು ನಾನು ಸಿದ್ಧನಿರಲಿಲ್ಲ. ಹೀಗಾಗಿ, ನನ್ನ ಮನದಿಂಗಿತವನ್ನು ಒಂದು ಪತ್ರದಲ್ಲಿ ಬರೆದು, ಅದು ನನ್ನ ತಂದೆಗೆ ಸಿಕ್ಕುವಂತೆ ಗುಟ್ಟಾಗಿ ಇಟ್ಟು, ಪರಿಣಾಮಕ್ಕಾಗಿ ಕಾದೆ.
ಮೂರು ನಾಲ್ಕು ದಿನ ನನ್ನ ತಂದೆ ನನಗೆ ಏನೂ ಹೇಳದೆ ಮುಗುಂ ಆಗಿದ್ದರು. ಅಷ್ಟರಲ್ಲಿ ಅವರು ಮಾಡಬೇಕಾದ್ದನ್ನೆಲ್ಲ ಒಳಗೊಳಗೇ ಮಾಡಿ ಮುಗಿಸಿದ್ದ ಸಂಗತಿ ನನಗೆ ಆಮೇಲಷ್ಟೇ ಗೊತ್ತಾಯಿತು.
ಅವರು ಶಕುಂತಲಳ ತಂದೆಯನ್ನು, ನಾನು ಶಾಲೆಗೆ ಹೋಗಿದ್ದ ಸಮಯದಲ್ಲಿ, ನಮ್ಮ ಮನೆಗೆ ಕರೆಸಿಕೊಂಡು, ಛೀಮಾರಿ ಹಾಕಿದ್ದರು. ಮಗಳನ್ನು ಬೇಕಾಬಿಟ್ಟಿ ಬಿಡದೆ ಹುಷಾರಾಗಿ ನೋಡಿಕೊಳ್ಳಿ, ಎಂದಿದ್ದರು. ನೀವು ಶಾಸ್ತ್ರಿಗಳು, ನಾವು ಬಡಗನಾಡು, ನಮಗೆ ಹೊಂದುವುದಿಲ್ಲ ಎಂದಿದ್ದರು. ಪುಗಸಟ್ಟೆಯಾಗಿ ಅಳಿಯನನ್ನು ಬುಟ್ಟಿಗೆ ಹಾಕಿಕೊಳ್ಳುವ ಸನ್ನಾಹ ಬಿಡಿ, ಎಂದಿದ್ದರು. ಒಟ್ಟಾರೆ, ನಾನು ಮತ್ತೆ ಹೋಗಿ ಅವರ ಕಾಲಿಗೆ ಬಿದ್ದು ಬೇಡಿದರೂ ಅವರು ತಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಡಲು ಖಡಾಖಂಡಿತವಾಗಿ ನಿರಾಕರಿಸುವ ಮಟ್ಟಿಗೆ ಶಕುಂತಲಳ ತಂದೆಯನ್ನು ಅವಮಾನಿಸಿ ಕಳಿಸಿದ್ದರು. ಇಷ್ಟಾಗಿಯೂ ನಾನು ಹಟ ಬಿಡದೆ ಹೋರಾಡಿದೆ. ಪ್ರಯೋಜನವಾಗಲಿಲ್ಲ. ಕೊನೆಗೂ ಶಕುಂತಲ ಕೈತಪ್ಪಿಹೋದಳು. ಈ ಪ್ರಕರಣದಲ್ಲಿ ಖಳನಾಯಕನಂತೆ ವರ್ತಿಸಿದ ನನ್ನ ತಂದೆಯ ಬಗ್ಗೆ ಒಂದು ಕಹಿಭಾವನೆ ಈ ಮನದಾಳದಲ್ಲಿ ಬಹುಕಾಲ ಉಳಿದುಕೊಂಡಿತ್ತು.
ಶಕುಂತಲಳನ್ನು ನೇರವಾಗಿ ಉದ್ದೇಶಿಸಿ ನಾನು ಬರೆದ ಹಲವು ಕವಿತೆಗಳು ನನ್ನ ಮೊದಲ ಕವನ ಸಂಕಲನ 'ಗೋಪಿ ಮತ್ತು ಗಾಂಡಲೀನ'ದಲ್ಲಿವೆ.
ಮುಂದೆ 1985ರಲ್ಲಿ, ಖ್ಯಾತ ಕತೆಗಾರರೂ, ನನ್ನ ಪ್ರಿಯ ಮಿತ್ರರೂ ಆದ ಜಿ.ಎಸ್. ಸದಾಶಿವ 'ಮಯೂರ' ಮಾಸಪತ್ರಿಕೆಯ ಸಂಪಾದಕರಾಗಿದ್ದಾಗ ಪ್ರೇಮಕತೆಗಳ ವಿಶೇಷಾಂಕಕ್ಕೆಂದು ನನ್ನಿಂದ ಒಂದು ಕತೆಯನ್ನು ಆಹ್ವಾನಿಸಿದ್ದರು. ಆಗ 'ಹೀಗೂ ಆಗುವುದುಂಟು' ಎಂಬ ಕತೆ ಬರೆದು ಕಳಿಸಿದೆ. ಅಲ್ಲಿನ ಪಾತ್ರಗಳು, ಸನ್ನಿವೇಶಗಳು ಕಲ್ಪಿತವಾದರೂ ಹಿನ್ನೆಲೆಗಿರುವುದು ನನ್ನ ಪ್ರಥಮ ಪ್ರೇಮ ಪ್ರಕರಣವೇ. ಆದರೆ, ಕತೆಯಲ್ಲಷ್ಟೇ ಅದು ಸುಖಾಂತವಾಗಿದೆ, ಸಂಪಾದಕರ ಅಪೇಕ್ಷೆಯಂತೆ.
ಸಖೀಗೀತ
ಅಪ್ಪನ
ಹೊನ್ನ ಚೌಕಟ್ಟಿನ
ಕನ್ನಡಕದ
ಕಣ್ಣಿಗೆ
ಕುರೂಪಿಯಾಗಿ ಕಂಡ
ನನ್ನ ಬಡ ಹೆಣ್ಣೇ,
ಶಕೂ,
ನನಗೆ ನೀನೇ ಬೇಕು.
ಅಪ್ಪನಿಗೆ ಹತ್ತಿದೆ
ಸಂಪ್ರದಾಯದ ತೊನ್ನು, ಪ್ರತಿಷ್ಠೆಯ ಕುತ್ತ;
ನನ್ನ ಪುಸ್ತಕದ ಮಸ್ತಕದಲ್ಲಿ
ಬೇರೂರುತ್ತಿದೆ
ನನ್ನತನದ ಬಿತ್ತ.
ಹಕ್ಯಲಿಸ್ ಅಟ್ಲಾಸನಿಗೆ ಹೇಳಿದೆ;
'ಅಪ್ಪ, ನನ್ನ ಹುಡುಗಿಯ ನನಗೆ ತಂದುಕೊಟ್ಟರೆ,
ನಿನ್ನ ಈ ಹೆಣಭಾರದ ಹೊರೆ,
ನಿನ್ನ ಪರಂಪರೆ
ನಾನು ಹೊರಲು ಸಿದ್ಧ;
ವಿರುದ್ಧವಿಲ್ಲದೆ, ನಿನ್ನೆಲ್ಲ ನಿಯಮಗಳಿಗೂ ನಾನು ಬದ್ಧ'.
ಅಪ್ಪ ಅಟ್ಲಾಸನಾಗಿದ್ದರೆ ಒಪ್ಪಿಬಿಡುತ್ತಿದ್ದ.
ಆದರೆ ಅವನು ಯಯಾತಿ;
ನನ್ನ ಹರೆಯ ಉರಿಯ ಹೀರಿ,
ಮುಪ್ಪು ಬೂದಿಯ ಹೇರಲು
ಹೋರುತ್ತಾನೆ;
ನಾನು ಪ್ರಾಕಾರ ಹಾರುತ್ತೇನೆ.
ಅವನ ಮಂದ ಮಿದುಳಿಂದ
ಚಿಮ್ಮುವ
ಮಂದಾಕಿನಿಯನ್ನು
ನಾನು ಒಂದಿಸುತ್ತೇನೆ.
ಅಮ್ಮನ ಕಣ್ಣೀರು ಜುಳುಜುಳು
ನನ್ನ ತಲೆ ತುಂಬ ಹುಳುಗಳು.
ಅಪ್ಪ ಅಮ್ಮ ತಮ್ಮ ತಂಗಿ
ಇವರೆಲ್ಲರ ಪ್ರೀತಿಯ ಖೋತಾ
ನಿನ್ನೊಬ್ಬಳಿಂದ ತುಂಬಲು ಆದೀತಾ?
'ಆದೀತು' ಎನ್ನಲು ಕಾಲ ಸಾಕ್ಷಿಯೇ,
ಕಾಮಾಕ್ಷಿಯೇ!
ನೆನಪು
ಶಕೂ, ಎಂಥ ಆತ್ಮವಂಚಕರು ನಾವು!
ನನ್ನ ಮನಸಾರೆ ಪ್ರೀತಿಸಿ ಕೈಕೊಟ್ಟೆ ನೀನು
ನಿನ್ನ ಮರೆಯಲಾರೆನೆಂದು ಘೋಷಿಸಿ ಮರೆತುಬಿಟ್ಟೆ ನಾನು
ಮರೆಯುವುದು, ತೊರೆಯುವುದು ಇಷ್ಟು ಸುಲಭವೇನೆ?
ಅಥವಾ ಇಂಥ ಭ್ರಮೆಗಳೂ ಮತ್ತೆ ಆತ್ಮವಂಚನೆಗೊ?
ಏಕೆಂದರೆ,
ಇಂದಿಗೂ ಒಮ್ಮೊಮ್ಮೆ ನನ್ನ ಕನಸಿನ ಗೊಂದಲದಲ್ಲಿ
ನಿಂತ ಮೆಟ್ಟಿಲು ಥಟ್ಟನೆ ಹೂತುಹೋದಂತಾಗಿ
ನಿನ್ನ ಕುಲುಕುಲು ಕಣಿವೆಯಾಳಕ್ಕೆ
ಕಂಬನಿಯಂತೆ ಕುಸಿದು ಬೀಳುತ್ತೇನೆ;
ಚಿಟ್ಟೆಯಂತೆ ಹಗುರಾಗಿ ತೇಲುತ್ತಾ ಮೇಲೇಳುತ್ತೇನೆ;
ಸುತ್ತ ಮೈಮನ ತೆರೆದ ನಿನ್ನ ನಗೆಮಲ್ಲಿಗೆ ಹೂಗಳು,
ನನ್ನ ನಾಗರಿಕ ಪ್ರಜ್ಞೆಯಾಳದಲ್ಲೂ ನಿನ್ನ ಕೋಗಿಲೆ ಕುಹ್ಹೂಗಳು,
ನಿನ್ನ ಕಣ್ಣು, ಅದರ ಭಾಷೆ, ಅದರ ಹ್ಞೂ.. ಹ್ಞುಹ್ಞೂಗಳು,
ನೀನು ನನಗೆ ಎಣಿಸಿ ಎಣಿಸಿ ಕೊಡುತ್ತಿದ್ದ ಮುತ್ತು!
ಶಕೂ, ನೀನು ಖಂಡಿತ ನನ್ನವಳಾಗಬೇಕಿತ್ತು,
ಈ ಹಾಳು ಗೋಡೆಗಳೆಲ್ಲ ಕುಸಿದು ಬೀಳಬೇಕಿತ್ತು.
ಒಮ್ಮೊಮ್ಮೆ, ನೆರಳೂ ಬೀಳದ ನಡುಹೊತ್ತಿನಲ್ಲಿ,
ಬೆಳಕು ಕಣ್ಣಿಗೆ ಕವಿಸಿದ ಕಗ್ಗತ್ತಲಲ್ಲಿ,
ನಾನು ಚೀರಿದಷ್ಟೂ ದಟ್ಟೈಸುವ ನಿಶ್ಶಬ್ದದಲ್ಲಿ,
ನಿರುತ್ತರದಲ್ಲಿ,
ನಿನಗಾಗಿ, ನಿನ್ನ ಜೊತೆಗಾಗಿ
ಎಷ್ಟು ಹಂಬಲಿಸುತ್ತೇನೆ, ಗೊತ್ತಾ?
ಮತ್ತೂ ಒಮ್ಮೊಮ್ಮೆ, ಬಚ್ಚಲ ತಳ ಸವೆದ ಹಳೆ ಹಂಡೆ ಸೋರಿ,
ಒಲೆ ಆರಿ,
ಧುತ್ತನೆ ಸುತ್ತಲೂ ಕವಿಯುವ ಹೊಗೆಯಂತೆ
ನಿನ್ನ ನೆನಪಿನ ಧಗೆ ನನ್ನೊಳಗೆಲ್ಲ ಅಡರುತ್ತೆ,
ನನ್ನ ಜೀವ ಹಿಂಡುತ್ತೆ.
ಈಗ ನಾನು ಮೊಗ್ಗುಗಳನ್ನು
ಎಷ್ಟು ಸಲೀಸಾಗಿ ಚಿವುಟಿ ಹಿಗ್ಗಬಲ್ಲೆ, ಗೊತ್ತಾ?
ಎಷ್ಟು ತರ್ಕಬದ್ಧವಾಗಿ ವಾದಿಸಬಲ್ಲೆ,
ವ್ಯಾವಹಾರಿಕವಾಗಿ ವರ್ತಿಸಬಲ್ಲೆ, ಗೊತ್ತಾ?
ಹೂವಿನ ಪಕಳೆ ಪಕಳೆ ಹರಿದು,
ವೈಜ್ಞಾನಿಕವಾಗಿ ಪಾಠ ಹೇಳಬಲ್ಲೆ,
ಯಾವ ಹೂವು ನಸುನಕ್ಕು ಕುಲುಕಿದರೂ
ತಟ್ಟನೆ ಪುಳಕಗೊಳ್ಳದೆ ತಾಳಬಲ್ಲೆ.
ಈ ಪರಿಜ್ಞಾನಕ್ಕಾದರೂ
ನಾನು ನಿನಗೆ ಚಿರಋಣಿಯಾಗಿರಬೇಕು, ಶಕೂ.
ಅದಿರಲಿ, ನಿನ್ನೆ
ನಿನ್ನ ಮನೆಯ ಕೆಲಸದವಳು ಸಿಕ್ಕಿ ಹೇಳಿದಳು;
'ಈ ಬಾರಿ ಮಗುವಿನೊಂದಿಗೆ ನೀನು ಬಂದಿದ್ದಾಗ
ನನ್ನನ್ನು ನೆನೆಸಿಕೊಂಡು
ಏಕೋ ಬಿಕ್ಕಿಬಿಕ್ಕಿ ಅತ್ತೆಯಂತೆ,
ಹೌದಾ?'
ಬಿ.ಆರ್. ಲಕ್ಷ್ಮಣ್ ರಾವ್