

ಚಿತ್ರ: ತಿರಕ್ಕಥಾ (2008)
ಭಾಷೆ: ಮಲೆಯಾಳಂ
ನಿರ್ದೇಶನ: ರಂಜಿತ್
ಅವಧಿ: 120 ನಿಮಿಷ
ತಾರಾಗಣ:
ಪೃಥ್ವಿರಾಜ್, ಪ್ರಿಯಾಮಣಿ, ಅನೂಪ್ ಮೆನನ್, ನಿಶಾಂತ್ ಸಾಗರ್, ರಂಜಿತ್, ಮಲ್ಲಿಕಾ ಸುಕುಮಾರನ್.
ಮಿನುಗು ತಾರೆ ಕಲ್ಪನಾ, ಮಂಜುಳಾ, ನಿವೇದಿತಾ ಜೈನ್, ಸೌಂದರ್ಯ, ಮಧುಬಾಲಾ, ಮೀನಾಕುಮಾರಿ, ಸಿಲ್ಕ್ ಸ್ಮಿತಾ, ದಿವ್ಯಾ ಭಾರತಿ, ಮರ್ಲಿನ್ ಮನ್ರೋ, ನಟಾಲಿಯಾ ವುಡ್... ಹೀಗೆ ಪಟ್ಟಿ ಮಾಡುತ್ತ ಹೋದರೆ ಚಿತ್ರಕನ್ನಡಿಯಲ್ಲಿ ಹತ್ತಾರು ದುರಂತ ನಾಯಕಿಯರ ಮುಖಗಳು ಪಳಪಳನೆ ಹೊಳೆಯುತ್ತವೆ. ಬೆಳಗುತ್ತಿರುವಾಗಲೇ ಬಾಡಿದ ತಾರೆಯರನ್ನು ಜಗತ್ತಿನ ಎಲ್ಲ ಭಾಷೆಯ ಚಿತ್ರರಂಗ ಕಂಡಿದೆ. ಸಾವು ಕಂಡ ಈ ನತದೃಷ್ಟ ನಾಯಕಿಯರ ಪೈಕಿ ಕೆಲವರ ಜೀವನದ ಮೇಲೆ ಈಗಾಗಲೇ ಒಂದಿಷ್ಟು ಸಿನಿಮಾಗಳೂ ಬಂದಿವೆ. ಹಾಗೆ ದುರಂತ ನಾಯಕಿಯರ ಪಟ್ಟಿಯಲ್ಲಿ ಕಾಣುವ ಮತ್ತೊಬ್ಬ ಪ್ರಸಿದ್ಧ ನಟಿ ಮಲೆಯಾಳಂನ ಶ್ರೀವಿದ್ಯಾ. ಈಕೆಯ ಜೀವನದ ಕೆಲ ಪುಟಗಳ ಮೇಲೆ ಬೆಳಕು ಚೆಲ್ಲುವ ಚಿತ್ರವೊಂದು ಮೂಡಿಬಂದಿದೆ. ಅದೇ 'ತಿರಕ್ಕಥಾ'. ಇದರರ್ಥ ಸ್ಕ್ರೀನ್ ಪ್ಲೇ, ಚಿತ್ರಕಥೆ ಎಂದು. ಯಾರು ಈ ಶ್ರೀವಿದ್ಯಾ? ಎನ್ನುವ ಪ್ರಶ್ನೆಯೊಂದಿಗೆ ಹೊರಟರೆ ಈಕೆಯ ಬದುಕಿನ ದೊಡ್ಡ ಗ್ರಂಥ ತೆರೆದುಕೊಳ್ಳುತ್ತದೆ. ಹಾಗೆ ಕುತೂಹಲಕ್ಕೆ ಶ್ರೀವಿದ್ಯಾಳ ಬದುಕಿನ ಪುಟಗಳನ್ನು ಕೆದುಕಿದ ನಿರ್ದೇಶಕ ರಂಜಿತ್, 'ತಿರಕ್ಕಥಾ' ರೂಪದಲ್ಲಿ ಒಬ್ಬ ದುರಂತ ನಾಯಕಿಯ ಜೀವನವನ್ನು ತೆರೆಯ ಕನ್ನಡಿಯಲ್ಲಿ ಬಿಡಿಸಿಟ್ಟಿದ್ದಾರೆ.
ಕನ್ನಡದ ಹೆಣ್ಣು ಮಗಳಾಗಿರುವ ಈಕೆ ತೆಲುಗು, ತಮಿಳು ಹಾಗೂ ಮಲೆಯಾಳಂ ಈ ಮೂರೂ ಚಿತ್ರರಂಗದಲ್ಲೂ ಮಿನುಗಿದವಳು. ಆರಂಭದಲ್ಲಿ ಮಲೆಯಾಳಂನಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಲೇ ಸ್ಟಾರ್ ನಟಿಯಾದ ಈಕೆ ತಮಿಳಿನ ಪ್ರಸಿದ್ಧ ಹಾಸ್ಯ ನಟ ಕೃಷ್ಣಮೂರ್ತಿ ಹಾಗೂ ಕರ್ನಾಟಕದ ಶಾಸ್ತ್ರೀಯ ಸಂಗೀತ ಗಾಯಕಿ ವಸಂತಕುಮಾರಿ ದಂಪತಿ ಪುತ್ರಿ. ಅಪ್ಪನ ನಟನಾ ಚಾತುರ್ಯ, ಅಮ್ಮನ ಕಂಠಸಿರಿಯನ್ನು ರಕ್ತಗತ ಮಾಡಿಕೊಂಡಿದ್ದ ಶ್ರೀವಿದ್ಯಾ ಅಭಿನಯದೊಂದಿಗೆ ಶಾಸ್ತ್ರೀಯ ಸಂಗೀತದಲ್ಲೂ ಪ್ರತಿಭೆ ಮೆರೆದಾಕೆ. ಇಂಥ ನಟಿಗೆ ಆರಂಭದ ದಿನಗಳಲ್ಲಿ ಪರಿಚಯವಾಗಿದ್ದು ನಟ ಕಮಲ್ಹಾಸನ್. ಮುಂದೆ ಇಬ್ಬರು ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದರು. 70 ದಶಕದಲ್ಲಿ ಮಿಂಚಿದ ಸ್ಟಾರ್ ಜೋಡಿ. ಆಗ ಇವರ ಅಫೇರ್ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಜೋಡಿ ಪಯಣದಲ್ಲಿ ಅದೇನಾಯಿತೋ ಗೊತ್ತಿಲ್ಲ, ಕ್ರಮೇಣ ಶ್ರೀವಿದ್ಯಾ ಬದುಕಿನ ತುಂಬಾ ವಿಷಾದವನ್ನೇ ತುಂಬಿಕೊಂಡಳು. ಕೊನೆ ಕಾಲದ ಬದುಕು ನೀರಿನಿಂದ ಹೊರಹಾಕಿದ ಮೀನಿನಂತಾಗಿತ್ತು. ಅತ್ಯಂತ ದಾರಿದ್ರ್ಯ ಸ್ಥಿತಿಯಲ್ಲಿ, ಅನಾಥವಾಗಿ, ಅತ್ತ ಬದುಕಲೂ ಆಗದೆ, ಇತ್ತ ಉಸಿರಾಡಲೂ ಆಗದ ಸ್ಥಿತಿಯಲ್ಲಿ ಹಾಸಿಗೆಯಲ್ಲಿ ನಿಶ್ಚಲಳಾಗಿದ್ದ ಈಕೆಯನ್ನು ಕ್ಯಾನ್ಸರ್ ರೂಪದಲ್ಲಿ ಯಮ ಇಹಲೋಕದಿಂದ ಓಡಿಸಿಕೊಂಡು ಹೋದ! ಆದರೆ ಚಿತ್ರಪ್ರೇಮಿಗಳಿಗೆ ನಿಜಕ್ಕೂ ನೋವಾಗಿದ್ದು ಆಕೆಯ ಸಾವಲ್ಲ, ನಂಬಿದವರೇ ನಡು ನೀರಿನಲ್ಲಿ ಕೈ ಬಿಟ್ಟು ಅನಾಥವಾಗಿಸಿದ್ದಕ್ಕೆ. ಇದರ ಪರಿಣಾಮ ಈಕೆಯ ಜೀವನ ಸೂತ್ರ ಹರಿದ ಗಾಳಿಪಟದಂತೆ ಆಗಿದ್ದಕ್ಕೆ. ಶ್ರೀವಿದ್ಯಾ ಹಾಸಿಗೆ ಹಿಡಿದಾಗ ಒಮ್ಮೆ ಕಮಲ್ಹಾಸನ್ ಬಂದು ನೋಡಿದ್ದು ಕೂಡ ಗುಟ್ಟಾಗಿ ಉಳಿದಿಲ್ಲ. ನೂರಾರು ಚಿತ್ರಗಳಲ್ಲಿ ಅಭಿನಯಿಸಿ, ಹೆಸರು, ಖ್ಯಾತಿ ಗಳಿಸಿದ್ದ ನಟಿ ಹೀಗೆ ಕೊನೆ ಕೊನೆಗೆ ಹೇಗೆ ದುರಂತದ ಹಾದಿಯತ್ತ ಮುಖ ಮಾಡಿದಳು? ಹಾಗೆಯೇ ಸುಂದರವಾಗಿ ಕಾಣುವ ರೋಜಾ ಹೂವಿನ ಸುತ್ತ ಚುಚ್ಚುವ ಮುಳ್ಳುಗಳೂ ಇರುತ್ತವೆ ಎಂಬುದನ್ನು ಹೇಳುವ ಚಿತ್ರ 'ತಿರಕ್ಕಥಾ'.
ಇಲ್ಲಿ ಕಮಲ್ಹಾಸನ್ ಪಾತ್ರದಲ್ಲಿ ಅನೂಪ್ ಮೆನನ್, ಶ್ರೀವಿದ್ಯಾ ಪಾತ್ರದಲ್ಲಿ ನಟಿ ಪ್ರಿಯಾಮಣಿ ಕಾಣಿಸಿಕೊಂಡಿದ್ದಾರೆ. ಚಿತ್ರ ನೋಡಿದವರು ಈ ಇಬ್ಬರು ಪಾತ್ರಧಾರಿಗಳು ನೈಜ ಪಾತ್ರಗಳಿಗೆ ತುಂಬಾ ಸನಿಹವಾಗಿದ್ದಾರೆಂಬ ಹೊಗಳಿಕೆ ಮಾತುಗಳು ಕೇಳಿ ಬಂದವು. ಸಿನಿಮಾದೊಳಗೆ ಸಿನಿಮಾ ಎನ್ನುವಂತೆ ಸಾಗುವ ಈ ಚಿತ್ರದ ಕಥೆ ಇಷ್ಟೇ, ಯುವ ನಿರ್ದೇಶಕ ಅಕ್ಬರ್ ಮೊದಲ ಚಿತ್ರದಲ್ಲೇ ಗೆಲುವಿನ ನಗೆ ಬೀರಿದರು. ತನ್ನ ಮುಂದಿನ ಚಿತ್ರವನ್ನು ಮತ್ತಷ್ಟು ವಿಶೇಷವಾಗಿ ಮಾಡಬೇಕು ಮತ್ತು ಅದು ಭಿನ್ನ ಕಥೆಯ ಚಿತ್ರವಾಗಿರಬೇಕೆಂದು ತನ್ನ ತಂಡದ ಜೊತೆ ಚರ್ಚಿಸುತ್ತಾನೆ. ಇಡೀ ರಾತ್ರಿ ಯೋಚಿಸಿ ಒಂದು ಕಾಲದ ಪ್ರಸಿದ್ಧ ನಟಿಯಾಗಿದ್ದ ಮಾಳವಿಕ ಈಗೆಲ್ಲಿದ್ದಾಳೆ? ಏನಾದಳು? ಅಷ್ಟು ದೊಡ್ಡ ಸ್ಟಾರ್ ನಟಿಯ ಜೀವನದಲ್ಲಿ ಎಂಥ ಘಟನೆಗಳು ಸಂಭವಿಸಿರಬಹುದು? ಆಕೆಯ ಜೊತೆ ಇದ್ದ ಅಜಯ್ ಚಂದ್ರನ್ ಈಗಲೂ ಸ್ಟಾರ್ ನಟನಾಗಿಯೇ ಉಳಿದ್ದಾನೆ. ಇವರಿಬ್ಬರಿಗೂ ಮದುವೆಯಾಗಿತ್ತು. ಈಗ ಬಿಟ್ಟಿದ್ದಾರೆ. ಯಾಕೆ? ಎಂಬಿತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟುಕೊಳ್ಳುವ ಅಕ್ಬರ್ ಮಾಳವಿಕಾಳ ಜೀವನವನ್ನೇ ಆಧರಿಸಿ ಸಿನಿಮಾ ಮಾಡುವ ನಿರ್ಧಾರಕ್ಕೆ ಬರುತ್ತಾನೆ.
ಚಿತ್ರದ ಶೀರ್ಷಿಕೆಗೆ ತಕ್ಕಂತೆ 'ಚಿತ್ರಕಥೆ'ಯೇ ಇದರ ನೈಜ ಬಂಡವಾಳ. ತನ್ನ ಸಿನಿಮಾದ ಕಥಾವಸ್ತುವಿಗಾಗಿ ಮಾಳವಿಕಾಳನ್ನು ಹುಡುಕುತ್ತ ಹೋಗುವ ಅಕ್ಬರ್ ತಂಡದ ವರ್ತಮಾನದ ಪಯಣ, ಮಾಳವಿಕಾಳ ಕಳೆದು ಹೋದ ಬದುಕಿನ ಪುಟಗಳು ತೆರೆದುಕೊಳ್ಳುತ್ತವೆ. ಏಕಕಾಲಕ್ಕೆ ಎರಡೂ ನೆಲೆಗಳಲ್ಲಿ ಸಾಗುವಂಥ ಚಿತ್ರಕಥೆ ನೋಡುಗನಲ್ಲಿ ಕುತೂಹಲ ಉಳಿಸುತ್ತಲೇ 'ತಿರಕ್ಕಥಾ' ಸಾಗುತ್ತದೆ. ಆದರೆ ಚಿತ್ರಕ್ಕೆ ನಿಜವಾದ ತಿರುವು ಸಿಗುವುದು ಅಕ್ಬರ್ಗೆ ಮಾಳವಿಕಾಳ ನಿಜ ರೂಪ ದರ್ಶನಗೊಂಡಾಗ. ಅಲ್ಲಿಯವರೆಗೂ ಮಾಳವಿಕಾಳ ಬದುಕನ್ನು ಆಧರಿಸಿ ಯಾವ ರೀತಿ ಸಿನಿಮಾ ಮಾಡಬೇಕು ಎಂದು ತಲೆ ಕೆಡಿಸಿಕೊಳ್ಳುತ್ತಿದ್ದ ಅಕ್ಬರ್, 'ನಾನು ಸಿನಿಮಾ ಮಾಡಬೇಕೆಂದುಕೊಂಡಿದ್ದೇ ಹೊರತು, ಯಾವ ನಟಿಯ ಖಾಸಗಿ ಜೀವನವನ್ನು ಹರಾಜಿಗಿಡಬೇಕು ಎಂದುಕೊಂಡಿಲ್ಲ. ಹೀಗಾಗಿ ನಾನು ಈ ಸಿನಿಮಾ ಮಾಡುತ್ತಿಲ್ಲ. ಆಕೆ ಇಲ್ಲಿವರೆಗೂ ನನಗೆ ಒಂದು ಕ್ಯಾರೆಕ್ಟರ್ ಆಗಿ ಕಾಣುತ್ತಿದ್ದಳು. ಆದರೆ ಈಗ ನಮ್ಮ ಕುಟುಂಬದ ಒಬ್ಬ ಸದಸ್ಯೆ. ಆಕೆಯ ಕೊನೆ ದಿನಗಳ ಬದುಕಿನ ಜವಾಬ್ದಾರಿ ನಮ್ಮ ಮೇಲಿದೆ' ಎನ್ನುತ್ತಾನೆ. ಚಿತ್ರ ಮುಗಿಯುತ್ತ ಬಂದಾಗ ಅದಕ್ಕೆ ಎಮೋಷನಲ್ ತಳಹದಿ ಒದಗಿಸುತ್ತಾರೆ ನಿರ್ದೇಶಕ ರಂಜಿತ್. ನೈಜತೆಯ ಪೊರೆಯಲ್ಲಿ ಆಗಾಗ ರಂಧ್ರಗಳು ಕಾಣಿಸುತ್ತವೆ. ಇಲ್ಲಿ ಎಲ್ಲ ಪಾತ್ರಗಳು ಬಂದು ಹೋಗುತ್ತಲೇ ತಮ್ಮ ನಟನೆಯ ಛಾಪು ಒತ್ತಿದ್ದರೂ ಪ್ರೇಕ್ಷಕನ ಮನಸು ಮಾತ್ರ ಮಾಳವಿಕ ರೂಪದಲ್ಲಿರುವ ನೈಜ ಶ್ರೀವಿದ್ಯಾಳನ್ನೇ ನೆನೆಯುತ್ತಾನೆ. ಒಂದು ಆರ್ಡಿನರಿ ಚಿತ್ರ ಎಂದುಕೊಳ್ಳುವ ಜೊತೆಗೆ, ದುರಂತ ನಾಯಕಿಯ ಬದುಕಿನ ಪುಟಗಳನ್ನು ಓದಲು ಒಮ್ಮೆ 'ತಿರಕ್ಕಥಾ' ಚಿತ್ರ ನೋಡಬಹುದು.
ಮುಖದಲ್ಲಿ ಕಲೆ, ಕಳೆ ಯಾವುದೂ ಇಲ್ಲ. ಇಡೀ ದೇಹ ಮಾಸಿದೆ, ಒಂದು ಕಾಲದಲ್ಲಿ ಆಕೆಯ ಸೌಂದರ್ಯವನ್ನು ಹೆಚ್ಚಿಸಿದ ತಲೆಕೂದಲು ಉದುರಿ ಹೋಗಿವೆ. ಹತ್ತಾರು ಕ್ಯಾಮೆರಾಗಳ ಲೆನ್ಸ್ನ ಬೆಳಕಿಗೆ ಸ್ಪರ್ಧೆ ಕೊಟ್ಟ ಮುಖ ತನ್ನ ಬಣ್ಣ ಕಳೆದುಕೊಂಡಿದೆ. ಅಕ್ಷರಶಃ ಮರುಭೂಮಿಯಲ್ಲಿನ ಪಾಪಸ್ ಕಳ್ಳಿಯಂತೆ ಆಕೆ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದಾಳೆ. ಇನ್ನೇನು ಕಣ್ಮುಚ್ಚುತ್ತಾಳೆ. ಆದರೆ ಆಕೆಗೊಂದು ಕೊನೆ ಆಸೆ ಇದೆ. ತಾನು ತುಂಬಾ ಪ್ರೀತಿಸಿದ, ಬದುಕಿನ ಸುಂದರ ಕನಸುಗಳನ್ನು ಕಟ್ಟಿಕೊಳ್ಳುವಂತೆ ಮಾಡಿ ಕೊನೆಗೆ ಹೀಗೆ ಅನಾಥವಾಗಿಸಿದ ಅಜಯ್ ಚಂದ್ರನ್ನನ್ನು ಕೊನೆ ಬಾರಿಗೆ ನೋಡಬೇಕೆಂದುಕೊಳ್ಳುತ್ತಾಳೆ. ಆಸೆ ಈಡೇರಿಸಲು ಅಕ್ಬರ್ ಮಾತು ಕೊಡುತ್ತಾನೆ. ಮಾಳವಿಕ ಸಾವಿನ ಮನೆಯಲ್ಲಿ ಇನಿಯನಿಗಾಗಿ ಕಾಯುತ್ತಿದ್ದಾಳೆ. ಆಕೆಗೆ ಮೊದಲು ದರ್ಶನ ಕೊಡುವುದು ಸಾವಾ ಅಥವಾ ಪ್ರಿಯಕರನಾ?
-ಆರ್. ಕೇಶವಮೂರ್ತಿ
keshavarkm1@gmail.com