ಸಾವೊಂದು ಬಳಿಬಂದು...

ಸಾವೊಂದು ಬಳಿಬಂದು...
Updated on: 

ಚಿತ್ರ: ಇಟ್ಸ್ ಎ ವಂಡರ್‌ಫುಲ್ ಲೈಫ್ (1946)
ಭಾಷೆ: ಇಂಗ್ಲಿಷ್
ನಿರ್ದೇಶನ: ಫ್ರಾಂಕ್ ಕಾಪ್ರಾ
ಅವಧಿ: 130 ನಿಮಿಷ
ತಾರಾಗಣ: ಜೇಮ್ಸ್ ಸ್ಟೀವರ್ಟ್, ಡೊನ್ನಾ ರೀಡ್, ಲಿಯೋನೆಲ್ ಬ್ಯಾರಿಮೋರ್, ಹೆನ್ರಿ ಟ್ರಾವರ್ಸ್.
ಆತ ಹುಟ್ಟಿದಾಗ ಎಲ್ಲರೂ ಗೇಲಿ ಮಾಡುತ್ತಾರೆ, 'ನಿನ್ನದು ದುರಾದೃಷ್ಟ ಜಾತಕ' ಎಂದು. ಆತ ಹುಡುಗಿಗೆ ಪ್ರಪೋಸ್ ಮಾಡಲು ಹೋದರೆ ಸ್ನೇಹಿತರು ಅಪಹಾಸ್ಯ ಮಾಡುತ್ತಾರೆ, 'ನಿನ್ನ ಸ್ಥಾನವೇನು, ಆಕೆಯ ಅಂತಸ್ತು, ಅಂದ ಎಲ್ಲಿ' ಅಂತ. ಸುತ್ತಲಿನವರ ಅವಮಾನ, ಅಪಹಾಸ್ಯಗಳ ನಡುವೆಯೇ ಬದುಕುತ್ತಾನೆ. ತಾನು ಪ್ರೀತಿಸಿದ  ಹುಡುಗಿ ಸತ್ತರೂ. ಇದು 'ಪ್ರೇಮಿಕುಲ ರೋಜು' ಚಿತ್ರದ ಕಥೆ. ಆದರೆ ಹಾಗೆ ಬದುಕಿನ ಭರವಸೆಯನ್ನು ಕೊಟ್ಟ ನಾಯಕ ಕುನಾಲ್ ನಿಜ ಜೀವನದಲ್ಲಿ ಮಾತ್ರ ಬದುಕಬೇಕೆನ್ನುವ ಆಸೆ ಕೈಬಿಟ್ಟು, ಆತ್ಮಹತ್ಯೆ ಮಾಡಿಕೊಂಡ. ಮುಪ್ಪಿನ ನೆರಳಲ್ಲಿದ್ದ ಮುದುಕನ ಮನಸ್ಸಿನಲ್ಲಿ ಹೊಸ ಪ್ರೇಮ ಬೀಜ ಬಿತ್ತಿ, ಪ್ರೀತಿಯ ನಿಜವಾದ ಅರ್ಥ ಹೇಳಿ, ಆತ ಎಲ್ಲ ಕಳೆದುಕೊಂಡಿದ್ದರೂ ತನ್ನ ನೆನಪುಗಳನ್ನು ಮರುಕಳಿಸುವ ಮೂಲಕ ಬದುಕಬೇಕೆಂಬ ಕನಸು ಚಿಗುರಿಸಿದ ಹದಿಹರೆಯದ ಹುಡುಗಿ. ಇಲ್ಲಿ ತನಗಿಂತ ಚಿಕ್ಕವಳ ಪ್ರೇಮದಿಂದ ಬದುಕನ್ನು ಮರಳಿ ಪಡೆಯುವ ಮುದುಕ ಅಮಿತಾಭ್ ಬಚ್ಚನ್. ಬಿಗ್‌ಬಿಗೆ ಜೀವನೋತ್ಸಾಹ ತುಂಬಿದ ಆ ಹುಡುಗಿ ಜಿಯಾಖಾನ್. ಇದು ರಾಮ್‌ಗೋಪಾಲ್ ವರ್ಮಾ ನಿರ್ದೇಶನದ 'ನಿಶ್ಶಬ್ದ್‌' ಚಿತ್ರದ ಕಥೆ. ಆದರೆ ತೆರೆ ಮೇಲೆ ಬದುಕುವುದನ್ನು ಕಲಿಸಿಕೊಟ್ಟ ಅದೇ ಜಿಯಾಖಾನ್ ನೇಣಿಗೆ ಶರಣಾದಳು.
ಚಿತ್ರಜಗತ್ತಿನ ಶ್ರೇಷ್ಠ ನಿರ್ದೇಶಕ ಅಕಿರಾ ಕುರಾಸೋವಾ 'ಇಕಿರು' ಚಿತ್ರದಲ್ಲಿ ಬದುಕಿನ ಗಮ್ಯತೆ ಹೇಳಿದ್ದರೂ ಆತನೂ ಆತ್ಮಹತ್ಯೆಗೆ ಮಾಡಿಕೊಳ್ಳಲು ಹೋಗಿದ್ದ. ತೆರೆಮೇಲೆ 'ಬದುಕಿ' ಎಂದವರೇ ಹೀಗೆ ತೆರೆ ಹಿಂದೆ ಸಾವಿನ ಕದ ತಟ್ಟುತ್ತಿದ್ದಾರೆ. ಧಾರಾವಾಹಿ ನೋಡಲು ಬಿಡಲಿಲ್ಲ ಎಂದು ಗಂಡನ ಮೇಲೆ ಸಿಟ್ಟಾಗುವ ಪತ್ನಿ, ಕಾಲೇಜಿನಿಂದ ತಡವಾಗಿ ಹೋದರೆ ಅಪ್ಪನಿಗೆ ಉತ್ತರ ಕೊಡುವುದು ಹೇಗೆ? ಎನ್ನುವ ಭಯದಿಂದ ಮಗಳು, ಬೈಕ್ ಕೊಡಿಸದಿದ್ದಕೆ ಸಿಟ್ಟಾಗುವ ಮಗ, ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ವಿದ್ಯಾರ್ಥಿ, ಕೆಲಸ ಸಿಗದೆ ಬೇಸರಗೊಂಡ ಯುವಕ, ಸಾಲ ತಾಳಲಾರದ ರೈತ... ಹೀಗೆ ಒಂದಲ್ಲ ಒಂದು ಕಾರಣಕ್ಕೆ ಬದುಕಿ ಬಾಳಬೇಕಾದ ಜೀವಗಳು ಅಂತ್ಯಗೊಳ್ಳುತ್ತಿವೆ. ಆತ್ಮಹತ್ಯೆಯೆಂಬ ಪಾಪದ ಮನೆಯಲ್ಲಿ ನೆಮ್ಮದಿ ಹುಡುಕಲು ಹೊರಟಿದ್ದೇವೆ. ಎಲ್ಲದಕ್ಕೂ ಸಾವೇ ಪರಿಹಾರ ಎನ್ನುವ ತೀರ್ಮಾನಕ್ಕೆ ಬರುತ್ತಿದ್ದೇವೆ. ಹೀಗಾಗಿ ಸಾವಿನಲ್ಲೂ ಬದುಕುವ ಪಾಠವನ್ನು ಹೇಳುವ 'ಆನಂದ್‌', 'ಮಿ ಶ್ರೇಯೋಭಿಲಾಷಿ' 'ಆ ನಲುಗುರು'ನಂಥ ಹತ್ತಾರು ಚಿತ್ರಗಳು ಆಗಾಗ ನೆನಪಾಗುತ್ತಲೇ ಇರುತ್ತವೆ.
ಹಾಗೆ ಬದುಕಿನಲ್ಲಿ ಎಲ್ಲ ಇದ್ದರೂ ಹಣ ಇಲ್ಲ, ಮಾರನೇ ದಿನ ಬ್ಯಾಂಕಿಗೆ ಹಣ ಕೊಡದಿದ್ದರೆ ತನಗೆ ಜೈಲೇ ಗತಿ ಎಂದು ಮಾನಸಿಕ ಖಿನ್ನತೆಗೊಳಗಾಗುವ ಉದ್ಯಮಿಯೊಬ್ಬ ಹೆಂಡತಿ, ಮಕ್ಕಳು, ಮನೆ-ಮಠ, ಬಂಧು, ಮಿತ್ರರನ್ನು ಮರೆತು ಸಾಯಲು ಹೋಗುತ್ತಾನೆ. ಸಾವಿನ ದಾರಿಯನ್ನೂ ಮುಚ್ಚುವಷ್ಟು ಹಿಮ ಬೀಳುತ್ತಿದ್ದರೂ ಆತ್ಮಹತ್ಯೆಯ ಗುರಿ ಹುಡುಕಿ ಹೋದವನ ಮುಂದೆ 'ನಿನ್ನ ಬದುಕು ಎಷ್ಟು ಅವಶ್ಯ' ಎಂದು ಹೇಳುವ ಚಿತ್ರ, 'ಇಟ್ಸ್ ಎ ವಂಡರ್‌ಫುಲ್ ಲೈಫ್‌'. ಶೀರ್ಷಿಕೆಯೇ ಸೂಚಿಸುವಂತೆ ಬದುಕೇ ಚಿತ್ರದ ನಿಜವಾದ ಜೀವ, ಕಥಾವಸ್ತು. ಅತ್ಯುತ್ತಮ ಸಿನಿಮಾ, ನಟ, ನಿರ್ದೇಶಕ, ಸಂಕಲನ, ಹಿನ್ನೆಲೆ ಧ್ವನಿ- ಐದು ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿ ಗಳಿಸಿ ಅಮೆರಿಕ ಫಿಲ್ಮ್ ಇನ್ಸ್‌ಟಿಟ್ಯೂಟ್‌ನಲ್ಲಿ ಅತ್ಯುತ್ತಮ 10 ಚಿತ್ರಗಳ ಪಟ್ಟಿಯಲ್ಲಿ ಫ್ಯಾಂಟಸಿ ವಿಭಾಗದಲ್ಲಿ ಎರಡನೇ ಸ್ಥಾನ ಅಲಂಕರಿಸಿದ ಚಿತ್ರವಿದು. ಜನ ಸಂಸ್ಕೃತಿ, ಆಚಾರ- ವಿಚಾರಗಳಿಗೆ ತುಂಬಾ ಹತ್ತಿರವಾಗಿರುವ ಅಥವಾ ಅದೇ ಕಥೆಯನ್ನು ಕೇಂದ್ರವಾಗಿಟ್ಟುಕೊಂಡು ಚಿತ್ರ ಮಾಡಿದರೆ ನಿಜಕ್ಕೂ ಅದು ಜನ ನೋಡುವ ಸಿನಿಮಾ ಮಾತ್ರವಲ್ಲದೆ, ಜಗತ್ತಿನ ಸಿನಿಮಾಸಕ್ತರ ಗಮನ ಸೆಳೆಯುತ್ತದೆ ಎಂಬುದಕ್ಕೆ ಫ್ರಾಂಕ್ ಕಾಪ್ರಾನ ಈ ಚಿತ್ರವೇ ಸಾಕ್ಷಿ.
'ದಿ ಗ್ರೇಟೆಸ್ಟ್ ಗಿಫ್ಟ್‌' ಎನ್ನುವ ಸಣ್ಣಕಥೆ ಆಧರಿಸಿದ ಈ ಚಿತ್ರ ಕ್ರಿಸ್‌ಮಸ್ ಸಂಭ್ರಮದ ಹಿನ್ನೆಲೆಯಲ್ಲಿ ಸಾಗುತ್ತದೆ. ಇಷ್ಟವಾದ ಕಡೆಗೆ ಹೋಗಬೇಕು, ದೊಡ್ಡ ಮಟ್ಟದಲ್ಲಿ ಓದಬೇಕು, ಅತ್ಯಂತ ಸುಂದರವಾದ ಹುಡುಗಿ ಮನದನ್ನೆಯಾಗಬೇಕು, ಎಲ್ಲರೂ ಅಚ್ಚರಿಪಡುವ ಸಾಧನೆ ಮಾಡಬೇಕು... ಹೀಗೆ ಕಥಾನಾಯಕನ ಮನಸ್ಸು ತುಂಬಾ ಕನಸುಗಳು. ಆದರೆ ಆತ ಕನಸಿನ ಹಿಂದೆ ಹೊರಟರೆ ಒಂದಲ್ಲ ಒಂದು ಅಡೆತಡೆಗಳು ಎದುರಾಗುತ್ತಲೇ ಇರುತ್ತವೆ. ನಾಯಕನ ತಂದೆ ಸಾವಿನ ನಂತರ ಅವರು ನಡೆಸುತ್ತಿದ್ದ ಮಧ್ಯಮ ವರ್ಗದವರು ಹಣ ಕೂಡಿಟ್ಟುಕೊಳ್ಳುವ ಪುಟ್ಟ ಬ್ಯಾಂಕ್ ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಳ್ಳಬೇಕಾಗುತ್ತದೆ. ಆದರೆ ನಾಯಕನಿಗೆ ಅದು ಬೇಕಿಲ್ಲ. ಒಂದು ವೇಳೆ ಅಪ್ಪನ ಬ್ಯಾಂಕ್ ತಾನು ನೋಡಿಕೊಳ್ಳದಿದ್ದರೆ ಜನರ ಹಣ ಲೂಟಿಕೋರನ ಕೈ ಸೇರುತ್ತದೆ. ಈ ಕಾರಣಕ್ಕೆ ಅನಿವಾರ್ಯವಾಗಿ ಅಪ್ಪನ ಬ್ಯಾಂಕ್ ಅನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತುಕೊಳ್ಳುತ್ತಾನೆ. ನಷ್ಟದಲ್ಲಿ ಮುಳುಗಿದ್ದ ಬ್ಯಾಂಕಿಗೆ ಜೀವ ತುಂಬುತ್ತಾನೆ. ಯಶಸ್ವಿ ಉದ್ಯಮಿಯಾಗುತ್ತಾನೆ. ನೆಚ್ಚಿನ ಹುಡುಗಿಯನ್ನೂ ಮದುವೆಯಾಗುತ್ತಾನೆ; ಬಡವರಿಗೆ ಕಡಿಮೆ ಬೆಲೆಯಲ್ಲಿ ಮನೆ ಕಟ್ಟಿಸುತ್ತಾನೆ; ತಾನೂ ಅಲ್ಲೇ ವಾಸಿಸುತ್ತಾನೆ.
ಈ ನಡುವೆ ಬ್ಯಾಂಕಿನ ಹಣ ನಾಪತ್ತೆಯಾಗುತ್ತದೆ. ಠೇವಣಿದಾರರು ಒಮ್ಮೆಲೇ ಹಣಕ್ಕಾಗಿ ಬ್ಯಾಂಕ್ ಮುಂದೆ ಜಮಾಯಿಸುತ್ತಾರೆ. ಬ್ಯಾಂಕ್ ಮುಚ್ಚುವ ಪರಿಸ್ಥಿತಿ ಎದುರಾಗುತ್ತದೆ. ಹಣಕ್ಕಾಗಿ ಶತಪ್ರಯತ್ನ ಮಾಡುತ್ತಾನೆ. ಆದರೆ ಎಲ್ಲೂ ಹಣ ಸಿಗಲ್ಲ. ನಾಯಕ ಮಾನಸಿಕ ಖಿನ್ನತೆಗೊಳಗಾಗುತ್ತಾನೆ. ಹಣ ಇಲ್ಲದೆ ಬ್ಯಾಂಕ್ ಬಳಿ ಹೋದರೆ ತನಗೆ ಜೈಲೇ ಗತಿ ಎಂದು ಭಾವಿಸಿ ಆತ್ಮಹತ್ಯೆ ದಾರಿ ಹಿಡಿಯುತ್ತಾನೆ. ನೀರಿಗೆ ಹಾರಲು ಹೋದಾಗ ಆಕಾಶದಿಂದ ದೇವದೂತ ಮಾನವ ರೂಪದಲ್ಲಿ ಬರುತ್ತದೆ. 'ನೀನಿಲ್ಲದ ನಿನ್ನೂರು, ನಿನ್ನ ಜನ, ನಿನ್ನನ್ನೇ ನಂಬಿದರು ಬದುಕು ಹೇಗಿರುತ್ತದೆ, ಅವರ ಸ್ಥಿತಿ ಏನಾಗಬಹುದು?' ಎಂದು ಹೇಳಿ ಬದುಕಿನ ವಿಶಾಲ ಹಾದಿ ತೋರಿಸಲಾಗುತ್ತದೆ. ಹೌದು, ತಾನಿಲ್ಲದ ಪ್ರಪಂಚ ಹೇಗಿರಬಹುದು? ಎಂದು ಊಹಿಸಿಕೊಳ್ಳುವ ನಾಯಕ 'ಬದುಕಬೇಕು, ಇದ್ದು ಸಾಧಿಸಬೇಕು' ಎಂದುಕೊಳ್ಳುತ್ತಾನೆ.
ಕಥೆ ಕೊಂಚ ಫ್ಯಾಂಟಸಿಯಾದರೂ, ಕ್ರಿಸ್‌ಮಸ್ ದಿನ ಮನೆಗೆ ಮರಳುವ ನಾಯಕನಿಗೆ ಈಗಾಗಲೇ ಆತನಿಂದ ಸಾಕಷ್ಟು ಸಹಾಯ ಪಡೆದು ಜೀವನ ರೂಪಿಸಿಕೊಂಡವರೇ ನೆರವಾಗುವುದು, ಕೈಲಾದಷ್ಟು ಹಣ ನೀಡುವ ಮೂಲಕ ನಾಯಕನ ಸಾವಿನ ಯೋಚನೆಯನ್ನು ದೂರ ಮಾಡವಂಥ ಆಪ್ತ ದೃಶ್ಯಗಳ ಮೂಲಕ ಚಿತ್ರ ಪ್ರೇಕ್ಷಕನಿಗೆ ಹತ್ತಿರವಾಗುತ್ತದೆ. ಹನಿಮೂನ್‌ಗೆ ತೆಗೆದಿಟ್ಟ ಹಣ ನಾಯಕನ ನೆರವಿಗೆ ಬರುತ್ತದೆ. ಇಲ್ಲಿ ಎಲ್ಲ ದೃಶ್ಯಗಳೂ ಕಲರ್‌ಫುಲ್. ಜೀವನದಲ್ಲಿ ಒಂದು ನಿರಾಶೆ ಎದುರಾದರೂ ನೋಡುವಂಥ ಇಂಥ ಜೀವಭರಿತ ಸಿನಿಮಾಗಳು ಸಾಕಷ್ಟಿವೆ. ಅದರಲ್ಲಿ 'ಇಟ್ಸ್ ಎ ವಂಡರ್‌ಫುಲ್ ಲೈಫ್‌' ಚಿತ್ರವನ್ನು ಸೇರಿಸಿಕೊಳ್ಳಿ.

= ಆರ್. ಕೇಶವಮೂರ್ತಿ
keshavarkm1@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com