

'ಸೆಂಟ್ರಲ್ ಸ್ಟೇಶನ್' ಚಿತ್ರ ಗಮನ ಸೆಳೆಯಲು ಕಾರಣ ನಿರ್ದೇಶಕ ವಾಲ್ಟರ್ ಸಲೆಸ್ ಹಾಗೂ ಈತ ತನ್ನ ದೇಶದ ನೆಲದಲ್ಲಿ ಹುಡುಕಲು ಹೊರಡುವ ಭಾವನಾತ್ಮಕ ಸಂಬಂಧಗಳು ಮತ್ತು ಅದರ ಪಯಣ. ಇಲ್ಲಿ ಮುಖ್ಯ ಪಾತ್ರಗಳು ಎರಡೇ ಆದರೂ ಚಿತ್ರ ಮುಂದುವರೆದಂತೆ ಕಥೆಯ ಆಳ ಆ ಎರಡು ಪಾತ್ರಗಳಿಗೂ ಮಿರಿದ್ದಾಗಿರುತ್ತದೆ.
ಅದು ನಿಗಿನಿಗಿ ಉರಿಯುವ ಬಿಸಿಲಿನಲ್ಲಿ ಸುಡುವಂತೆ ಭಾಸವಾಗುವ ಬ್ರೆಜಿಲ್ನ ಬಯಲು ಪ್ರದೇಶ. ಅಲ್ಲೊಂದು ನಿಷ್ಕಲ್ಮಶವಾದ ಮಮಕಾರ. ಯಾಂತ್ರಿಕ ಜೀವನದಿಂದ ಸಂಬಂಧಗಳಿಗೆ ದೂರಗೊಂಡಿರುವ ಜನರ ನಡುವೆ ತಂಗಾಳಿಯಂತೆ ಸಂಬಂಧ ಬೆಸೆಯುವ ಆಕೆ, ಪುಟ್ಟ ಹುಡುಗನೊಂದಿಗೆ ಪ್ರಯಾಣ ಬೆಳೆಸುತ್ತಾಳೆ. ಅವನ ಅಪ್ಪನನ್ನು ಹುಡುಕಿಕೊಂಡು. ಆ ಪ್ರಯಾಣದಲ್ಲಿ ಭಾವುಕತೆ, ಬಿಟ್ಟು ಹೊರಡಬೇಕೆಂದರೂ ಬಿಡಿಸಿಕೊಳ್ಳಲಾಗದ ನಂಟು ನೆಲೆಗೊಳ್ಳುತ್ತದೆ. ಒಂದು ಹಂತದಲ್ಲಿ ಅದೊಂದು 'ರೋಡ್ ಮೂವಿ'ಯಂತೆ ಕಂಡರೂ ಆ ಎರಡೇ ಪಾತ್ರಗಳ ಮೂಲಕ ನಿರ್ದೇಶಕ ವಾಲ್ಟರ್, ಬಡತದ ಬೇಗೆಯಲ್ಲಿ ಬೇಯುತ್ತಿರುವ ಬ್ರೆಜಿಲ್ನ ಸಾಮಾನ್ಯ ಹಳ್ಳಿ ಜನರ ಜೀವನವನ್ನು ತೆರೆದಿಡುತ್ತಾನೆ. 'ನಿನ್ನ ತಂದೆಯ ಬಳಿ ನಿನ್ನನ್ನು ಸೇರಿಸುತ್ತೇನೆ' ಎನ್ನುವ ನಡುವಯಸ್ಸಿನ ಮಹಿಳೆ, 'ಈಗ ತನ್ನ ಅಪ್ಪ ಹೇಗಿರಬಹುದು? ಆತ ನನಗೆ ಸಿಗುತ್ತಾನೆಯೇ?' ಎಂದು ಯೋಚಿಸುತ್ತ ಕನಸು ಕಾಣುವ ಆ ಬಾಲಕನ ಸುತ್ತ ಕಥೆ ಸಾಗುತ್ತದೆ.
ನಿರ್ದೇಶಕ ವಾಲ್ಟರ್ ಸೆಲಸ್ರದ್ದು ಬ್ರೆಜಿಲ್ ಚಿತ್ರರಂಗದಲ್ಲಿ ದೊಡ್ಡ ಹೆಸರು. ಮಾತು, ಪಾತ್ರಗಳನ್ನು ಆದಷ್ಟು ಕಡಿಮೆ ಮಾಡಿ ಮೌನದಲ್ಲೇ ಹೆಚ್ಚು ಪ್ರಭಾವಿಸಿದವನು. ಕಿರು ಚಿತ್ರ, ಸಾಕ್ಷ್ಯ ಚಿತ್ರ, ಧಾರಾವಾಹಿ ಸೇರಿದಂತೆ 20ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿರುವ ವಾಲ್ಟರ್ಗೆ 'ಬಿಹೈಂಡ್ ದಿ ಸನ್', 'ದಿ ಮೋಟಾರ್ ಸೈಕಲ್ ಡೈರೀಸ್' ಹಾಗೂ 'ಸೆಂಟ್ರಲ್ ಸ್ಟೇಶನ್' ಚಿತ್ರಗಳು ದೊಡ್ಡ ಹೆಸರು ತಂದುಕೊಟ್ಟವು. ನಿರ್ದೇಶನ, ನಿರ್ಮಾಣ, ಕಥೆ, ಚಿತ್ರಕಥೆ ಹೀಗೆ ಹಲವು ವಿಭಾಗಗಳಲ್ಲಿ ತೊಡಗಿಸಿಕೊಂಡಿರುವ ಈತ, ಕ್ಯೂಬಾದ ಕ್ರಾಂತಿಕಾರಿ ಹೋರಾಟಗಾರ ಚೆಗುವಾರನ ಹರೆಯದ ದಿನಗಳಿಗೆ ಸಿನಿಮಾ ರೂಪ ಕೊಟ್ಟು ಅಚ್ಚರಿ ಮೂಡಿಸಿದ. ವಿಶೇಷ ಎಂದರೆ ಬ್ರೆಜಿಲ್ನ 'ಬಿಹೈಂಡ್ ದಿ ಸನ್' ಚಿತ್ರ ತೆಲುಗಿನಲ್ಲಿ 'ಪೌರ್ಣಮಿ' ಹೆಸರಿನಲ್ಲಿ ಮೂಡಿ ಬಂದಿದೆ. ಪ್ರಭಾಸ್, ತ್ರಿಶಾ, ಚಾರ್ಮಿಕೌರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಚಿತ್ರ ಹಿಂದಿಗೂ ಡಬ್ ಆಗಿದೆ. ಇನ್ನೂ ಹತ್ತಾರು ಚಿತ್ರೋತ್ಸವಗಳಲ್ಲಿ ಜನ ಮೆಚ್ಚುಗೆ ಪಡೆದು, ಬಾಕ್ಸ್ ಆಫೀಸ್ನಲ್ಲೂ ಹಣ ಗಳಿಸಿ, ಆಸ್ಕರ್ ಪ್ರಶಸ್ತಿಯ ಗರಿಮೆಗೆ ಪಾತ್ರವಾಗಿರುವ 'ಸೆಂಟ್ರಲ್ ಸ್ಟೇಶನ್' ಚಿತ್ರದಲ್ಲಿ ಯಾವುದೇ ದೃಶ್ಯ ವೈಭವ ಇಲ್ಲ, ಮಾತಿನ ಅಬ್ಬರವಿಲ್ಲ, ತುಸು, ಕೋಪ, ಮುನಿಸು, ಮೌನಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಮನುಷ್ಯನ ಬದುಕಿನ ಕಷ್ಟ, ದುಃಖಗಳು ನಿಂತು ಸಂಭ್ರಮ ನೆಲೆಯಾಗಬೇಕು ಎಂಬುದು ವಾಲ್ಟರ್ನ ಚಿತ್ರಗಳ ಆಶಯ. ಅದೇ ಧಾಟಿಯಲ್ಲಿ ಅನಾವರಣಗೊಳ್ಳುವ 'ಸೆಂಟ್ರಲ್ ಸ್ಟೇಶನ್' ಚಿತ್ರದ ಡೋರಾ ಎಂಬ ಮಹಿಳೆಗೆ ಬ್ರೆಜಿಲ್ನ ರಿಯೊ ಡಿ ಜನೈರೊ ರೈಲ್ವೆ ನಿಲ್ದಾಣದಲ್ಲಿ ಅನಕ್ಷರಸ್ಥರಿಗೆ ಪತ್ರ ಬರೆದುಕೊಡುವ ಕೆಲಸ. ನೂರಾರು ಜನ ಓಡಾಡುವ ಆ ರೈಲು ನಿಲ್ದಾಣದಲ್ಲಿ ಬೆಳಗ್ಗಿನಿಂದ ಸಂಜೆ ತನಕ ಹತ್ತಾರು ಮಂದಿಯ ಮನಸ್ಸಿನ ಮಾತುಗಳಿಗೆ ಅಕ್ಷರ ರೂಪ ಕೊಡುವ ಡೋರಾಗೆ ಹಿಂದೆ, ಮುಂದೆ ಯಾರೂ ಇಲ್ಲ. ಪ್ರೇಮ ಸಂದೇಶಗಳನ್ನು ಬರೆಯುವಾಗ ತುಸು ನಾಚುವ, ತನ್ನವಳಿಗೆ ಮನಸ್ಸಿನ ಗುಟ್ಟು ತಿಳಿಸುವ ಪತ್ರಗಳನ್ನು ಬರೆಯುವಾಗ ಮುಜುಗರಗೊಳ್ಳುವ, ಕೆಟ್ಟ ಸಂದೇಶಗಳನ್ನು ಕೆತ್ತುವಾಗ ಸಿಟ್ಟಾಗುವ, ಯಾರೋ ಕಣ್ಣೀರು ತೋಡಿಕೊಂಡಾಗ ಕನಿಕರ ತೋರುವ ಡೋರಾ, ಸಾಮಾನ್ಯ ಜನರ ಬದುಕಿನ ಅನುಭವಗಳ ಕಣಜ! ಒಮ್ಮೆ ಈಕೆ ಬಳಿ ತಾಯಿ, ಮಗ ಇಬ್ಬರು ಬಂದು ದೂರದಲ್ಲಿರುವ ತನ್ನ ಗಂಡನಿಗೆ ಪತ್ರ ಬರೆಸಿಕೊಂಡು ಇನ್ನೇನು ರಸ್ತೆ ದಾಟಬೇಕು ಎನ್ನುವಷ್ಟರಲ್ಲಿ ಆಕೆಗೆ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾಯುತ್ತಾಳೆ. ಆಕೆಯ ಒಂಬತ್ತು ವರ್ಷದ ಮಗ ಅನಾಥ. ಆದರೆ ತನ್ನ ತಂದೆಯನ್ನು ನೋಡಬೇಕೆಂಬ ಆತನ ಆಸೆ? ಹೀಗೆ ನಡು ಬೀದಿಯಲ್ಲಿ ಅಮ್ಮನಿಂದ ಶಾಶ್ವತವಾಗಿ ದೂರವಾಗುವ ಬಾಲಕನನ್ನು ಅವನ ತಂದೆಯ ಬಳಿ ಸೇರಿಸುವ ಹೊಣೆಯನ್ನು ಡೋರಾ ಹೊತ್ತುಕೊಳ್ಳಬೇಕಾಗುತ್ತದೆ. ಇಲ್ಲಿಂದ ಇವರಿಬ್ಬರ ಪಯಣ ಸಾಗುತ್ತದೆ. ಈ ಪಯಣದಲ್ಲಿ ಇಬ್ಬರ ನಡುವೆ ಗಾಢವಾದ ಬಾಂಧವ್ಯ ಏರ್ಪಡುತ್ತದೆ.
ರೈಲಿನಲ್ಲಿ ಸೀಟು ಹಿಡಿಯಲು ಹೊರಡುವ ಪ್ರಯಾಣಿಕರ ಒದ್ದಾಟ, ವಿದೇಶಿ ಕುಟುಂಬದ ಮನೆಯಲ್ಲಿ ಬಿಟ್ಟು ಬಂದ ಹುಡುಗನನ್ನು ಮತ್ತೆ ಕರೆತರುವ, ಪ್ರಯಾಣದಲ್ಲಿ ಸಿಕ್ಕವನ ಜೊತೆ ಪ್ರೀತಿ ಬಯಸುವ ಡೋರಾ, ಕೊನೆಗೂ ಹುಡುಗನ ಅಪ್ಪನ ಮನೆ ಪತ್ತೆ ಮಾಡಿ ಆತನನ್ನು ಮನೆಗೆ ಬಿಟ್ಟು ಬರುವಾಗಿನ ಈಕೆಯ ಕಣ್ಣೀರಿನ ದೃಶ್ಯಗಳು ನೋಡುಗರಲ್ಲಿ ನೆನಪಾಗಿ ಉಳಿದು ಬಿಡುತ್ತವೆ. 'ಪರಸ್ಪರ ನಾವಿಬ್ಬರು ಒಬ್ಬರನ್ನೊಬ್ಬರು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎನ್ನಿಸಿದಾಗ ಈ ಭಾವಚಿತ್ರ ನೋಡಿಕೊಂಡರೆ ಸಾಕು' ಎನ್ನುವ ಸಂಭಾಷಣೆ ನೆನಪಾಗಿ ಇಬ್ಬರು ಒಟ್ಟಿಗೆ ತೆಗೆಸಿಕೊಂಡಿರುವ ಫೋಟೋ ನೋಡುತ್ತಾರೆ. ಇಂಥ ಭಾವಪೂರ್ಣ ಸನ್ನಿವೇಶಗಳಿಂದ ಚಿತ್ರ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುತ್ತದೆ. ಬ್ರೆಜಿಲ್ನ ಸುಡುವ ಭೂಮಿಯಲ್ಲಿ ಪ್ರೀತಿಯ ಸೆಳೆಯೊಂದು ತಣ್ಣಗೆ ಬೀಸಿದೆ.
-ಆರ್. ಕೇಶವಮೂರ್ತಿ
keshavarkm1@gmail.com