ರಾಭೂ ಕಾಲಯಾನ

9ನೇ ತರಗತಿಯಲ್ಲಿದ್ದಾಗ ಶೀರ್ಷಿಕೆಯ ಕುತೂಹಲಕ್ಕಾಗಿ ಕೈಗೆತ್ತಿಕೊಂಡ 'ರಾಕ್ಷಸದ್ವೀಪ'ದ ಮೂಲಕ ಓದಿನ ಗೀಳು ಹತ್ತಿಸಿದ ಪ್ರೊ. ರಾಜಶೇಖರ ಭೂಸನೂರಮಠ (ರಾಭೂ) ಅವರಿಗೆ 75 ವರ್ಷ ತುಂಬಿದೆ ಎಂದರೆ ನಂಬಿಕೆ ಬರುತ್ತಿಲ್ಲ. ಇಂದಿಗೂ ಅವರು ಬರೆಯುತ್ತಿರುವ ಸಾಹಿತ್ಯ ಎಷ್ಟು ತಾರುಣ್ಯಪೂರ್ಣವಾಗಿದೆ! ತಮ್ಮ ಪದಕೋಶದಿಂದ ನಿವೃತ್ತಿ ಎಂಬ ಪದ ಕಿತ್ತು ಹಾಕಿದವರಂತೆ ನಿರಂತರವಾಗಿ ಕ್ರಿಯಾಶೀಲರಾಗಿದ್ದಾರೆ.
ಕಲಿಯುವ ಹಾಗೂ ಕಲಿಸುವ ಕ್ರಿಯೆಗೆ ಬಿಡುವಿಲ್ಲ ಎನ್ನುವ ಅವರು ಬೆಂಗಳೂರು, ದೆಹಲಿ ಎಂದರೆ ಧಾರವಾಡದ ಪಕ್ಕದ ಮನೆ ಎಂಬಂತೆ ಚುರುಕಾಗಿ ಓಡಾಡುತ್ತಾರೆ. ದೇಶದ ಯಾವ ಮೂಲೆಗಾದರೂ ಹೋಗಿ ಭಾಷಣ, ಶಿಬಿರ ನಡೆಸಿಕೊಡುತ್ತಾರೆ. ವಯಸ್ಸಿನ ಪ್ರಭಾವದಿಂದ ಶರೀರ ಮಾಗಿದ್ದರೂ ಮನಸ್ಸು ಮಾತ್ರ ಇನ್ನೂ ಮಗುವಿನಂತಿದೆ.
ಎಲ್ಲರ ನೋವು- ಕಷ್ಟಗಳಿಗೂ ಸ್ಪಂದಿಸುತ್ತ ಸಂತೋಷ ಹಂಚುವ ಕಾಯಕದಲ್ಲಿ ತೊಡಗಿರುವ ರಾಭೂ ಅವರದು ಬಹುಮುಖ ವ್ಯಕ್ತಿತ್ವ. ಭೌತಶಾಸ್ತ್ರವನ್ನು ಆಸಕ್ತಿಕರವಾಗಿ ಬೋಧಿಸಿದ ಅವರಿಗೆ ಸಾವಿರಾರು ಶಿಷ್ಯರ ಪ್ರೀತ್ಯಾದರ ಸಿಕ್ಕಿದೆ. ಭೌತವಿಜ್ಞಾನಿಯಾಗಿರುವ ಅವರೊಳಗೊಬ್ಬ ಅಧ್ಯಾತ್ಮ ಜೀವಿಯಿದ್ದಾನೆ. 'ಆತನೇ ಸತ್ಯ, ನಾನು ಮಿಥ್ಯ' ಎಂದು ಸಾರುವ ವೈಭವಿ ಜ್ಞಾನ ಮಂದಿರದ ಮೂಲಕ ಪರ್ಯಾಯ ಚಿಕಿತ್ಸೆ ಹಾಗೂ ಶಿಬಿರಗಳನ್ನು ನಡೆಸುತ್ತಿದ್ದಾರೆ. ಪೆಂಡ್ಯೂಲಂ ಕೈಯಲ್ಲಿ ಹಿಡಿದರೆ ಭವಿಷ್ಯ ಹೇಳುತ್ತಾರೆ, ಕಾಯಿಲೆಗಳಿಗೆ ಚಿಕಿತ್ಸೆ ಕೊಡುತ್ತಾರೆ, ನೋವುಗಳನ್ನು ನಿವಾರಿಸುತ್ತಾರೆ. ಇಂತಹ ಸತತ ಪ್ರಯೋಗಗಳ ಫಲವೇ ನವಯುಗದ ಕೈಪಿಡಿಗಳು. ಅವರ ರೇಡಿಯೋ ಭಾಷಣಗಳು, ನಾಟಕಗಳೂ ಜನಪ್ರಿಯವಾಗಿವೆ. ಮಕ್ಕಳಿಗಾಗಿ ಅವರು ಬರೆದ ವೈಜ್ಞಾನಿಕ ಕೃತಿಗಳು ದೊಡ್ಡವರೂ ಆಸಕ್ತಿಯಿಂದ ಓದುವಂತಿವೆ. ಮಕ್ಕಳ ಬೌದ್ಧಿಕ ವಿಕಸನಕ್ಕೆ ಅವು ವಿಶಿಷ್ಟ ಕೊಡುಗೆ ನೀಡಿವೆ.
ವೈಜ್ಞಾನಿಕ ಕಥಾ ಸಾಹಿತ್ಯ ಕೊನೆಯ ಪುಟದ ವರೆಗೂ ಕುತೂಹಲ ಉಳಿಸಿಕೊಳ್ಳಬೇಕು. ಸಾಹಸಪೂರ್ಣ ನಿರೂಪಣೆ ರಂಜನೆ ನೀಡಬೇಕು. ಬುದ್ಧಿಗೆ ಕೆಲಸ, ಓದುಗನಿಗೆ ಮಾಹಿತಿಯನ್ನೂ ನೀಡಬೇಕು. ಈ ಎಲ್ಲ ವೈಶಿಷ್ಟ್ಯಗಳು ರಾಭೂ ಕೃತಿಗಳಲ್ಲಿವೆ. ವಿಶೇಷವೆಂದರೆ, 20 ವರ್ಷಗಳ ಹಿಂದೆ ಅವರು ಕಲ್ಪಿಸಿಕೊಂಡು ಬರೆದ ಸಂಗತಿಗಳೆಲ್ಲ ಈಗ ವೈಜ್ಞಾನಿಕ ಸಂಶೋಧನೆಗಳ ಫಲವಾಗಿ ಸಾಕಾರಗೊಂಡಿವೆ. ಅಂಥ ಮುನ್ನೋಟ ಅವರಿಗೆ ಮಾತ್ರ ಸಾಧ್ಯವೇನೋ.
ಇಬ್ಬರ ಬದುಕೂ ಕಾದಂಬರಿ
ಜನವರಿ 16, 1938ರಂದು ಹೆಸರಾಂತ ಸಂಶೋಧಕ-ಸಾಹಿತಿ ಸಂ.ಶಿ. ಭೂಸನೂರಮಠ ಹಾಗೂ ಪಾರ್ವತಿದೇವಿ ಅವರ ಪುತ್ರರಾಗಿ ಜನಿಸಿದ ರಾಜಶೇಖರರು ಹುಬ್ಬಳ್ಳಿ, ಬೆಳಗಾವಿಯಲ್ಲಿ ಶಿಕ್ಷಣ ಪೂರೈಸಿದರು. ಮುಂಬೈನ ಇನ್ಸ್ಟಿಟ್ಟೂಟ್ ಆಫ್ ಸೈನ್ಸ್ನಲ್ಲಿ ಬಿ.ಎಸ್ಸಿ. ಆನರ್ಸ್, ಬನಾರಸ್ನ ಹಿಂದೂ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. 1959ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿ, 1995ರಿಂದ ಮೂರು ವರ್ಷ ಅದೇ ಕಾಲೇಜಿನ ಪ್ರಾಂಶುಪಾಲರಾಗಿ ಹಲವಾರು ಕ್ರಾಂತಿಕಾರಕ ಬದಲಾವಣೆಗಳಿಗೆ ನಾಂದಿ ಹಾಡಿ, 1998ರಲ್ಲಿ ನಿವೃತ್ತರಾದರು. 1970ರ ದಶಕದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. 1963ರಲ್ಲಿ ಮಿಲಿಟರಿ ತರಬೇತಿ ಪಡೆದು, ಸೆಕೆಂಡ್ ಲೆಫ್ಟಿನೆಂಟ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಏಕಪ್ರಕಾರವಾಗಿ ಬರೆಯಬಲ್ಲ ರಾಭೂ ಕರ್ನಾಟಕ ವಿಜ್ಞಾನ ಪರಿಷತ್ತಿನ ಸ್ಥಾಪಕ ಸದಸ್ಯ, ಅಖಿಲ ಭಾರತ ವಿಜ್ಞಾನ ಕಥಾ ಲೇಖಕರ ಸಂಸ್ಥೆಯ ಉಪಾಧ್ಯಕ್ಷ, 2005ರಲ್ಲಿ ತಾವೇ ಸ್ಥಾಪಿಸಿದ ವೈಭವಿ ಜ್ಞಾನ ಮಂದಿರದ ನಿರ್ದೇಶಕ. ಅಮೆರಿಕದ ಬಯಾಗ್ರಫಿಕಲ್ ಇನ್ಸ್ಟಿಟ್ಯೂಟ್ 1999ರಲ್ಲಿ ವರ್ಷದ ವ್ಯಕ್ತಿ ಎಂದು ರಾಭೂ ಅವರನ್ನು ಗೌರವಿಸಿದೆ. 2000ದಲ್ಲಿ ಯುನಿವರ್ಸಲ್ ಅವಾರ್ಡ್ ಆಫ್ ಅಕಂಪ್ಲಿಷ್ಮೆಂಟ್ ಪ್ರಶಸ್ತಿ ಲಭಿಸಿದೆ.
1961ರಲ್ಲಿ ಬಿ.ಎ. ಪದವೀಧರೆ ಶೈಲಜಾ ಅವರನ್ನು ವಿವಾಹವಾದ ರಾಭೂ ಅವರಿಗೆ ನಾಲ್ವರು ಮಕ್ಕಳು, ಏಳು ಮೊಮ್ಮಕ್ಕಳು. ಸಾಧಕ ಪುರುಷನಿಗೆ ಸಮರ್ಥ ಸಾಥಿಯಾಗಿ ಅವರೂ ಕೆಲವು ಕಥೆ-ಕಾದಂಬರಿಗಳನ್ನು ಬರೆದಿದ್ದಾರೆ. ಧಾರವಾಡದ ಕಲಘಟಗಿ ರಸ್ತೆಯಲ್ಲಿರುವ ಗಿರಿನಗರದ ದಿಬ್ಬದ ಮೇಲೆ 'ಬದುಕು' ಕಟ್ಟಿಕೊಂಡಿರುವ ರಾಭೂ ಹಲವು ವೈಶಿಷ್ಟ್ಯಗಳ ಸಂಗಮ. ಆ ಮನೆಯೀಗ ವೈಭವಿ ಜ್ಞಾನಮಂದಿರವಾಗಿದೆ.
ಅದರ ಆವರಣವನ್ನು ಪ್ರವೇಶಿಸುವ ಎಲ್ಲರೂ ತಮ್ಮ ದುಗುಡ ಕಳೆದುಕೊಂಡು ನಿರಾಳರಾಗುತ್ತಾರೆ. ಗೇಟಿನ ಪಕ್ಕದಲ್ಲೇ ಕಣ್ಣಿಗೆ ಬೀಳುವ ದೊಡ್ಡ ಗಾತ್ರದ ಪಿರಮಿಡ್ ಧ್ಯಾನಕ್ಕೆ ಸೂಕ್ತವಾದ ಸ್ಥಳ. ಬಿಸಿಲಿನಲ್ಲಿ ದಣಿದು ಬಂದವರಿಗೆ ವಿಶ್ರಾಂತಿ ಪಡೆಯಲು ಲಲಿತ ಮಂಟಪವಿದೆ. ಹಬ್ಬಿರುವ ಬಳ್ಳಿಗಳು, ಹೂವುಗಳನ್ನು ಹೊತ್ತು ನಿಂತ ಗಿಡಗಳು ಮುದ ನೀಡುತ್ತವೆ. ರಾಭೂ ಅವರ ಮಡದಿ ಸಾಕ್ಷಾತ್ ಅನ್ನಪೂರ್ಣೇಶ್ವರಿ. ಅವರ ಮನೆಗೆ ಬಂದವರನ್ನು ಎಂದೂ ಬರಿಗೈಯಲ್ಲಿ ಕಳುಹಿಸಿದವರೇ ಅಲ್ಲ!
ಲೆಕ್ಕ ಇಟ್ಟಿಲ್ಲ...
ಯಾವ ಪ್ರಕಾರದಲ್ಲಿ ಬರೆದರೂ ರಾಭೂ ಪ್ರೌಢಿಮೆ ಮೆರೆಯುತ್ತಾರೆ. ವಿಷಯದ ಮೇಲೆ ಸಾಕಷ್ಟು ಅಧ್ಯಯನ ಮಾಡಿದ ಮೇಲಷ್ಟೇ ಅದು ಕೃತಿ ರೂಪಕ್ಕೆ ಇಳಿಯುತ್ತದೆ. ರುಚಿಕಟ್ಟಾದ ರಸಪಾಕದಂತಿರುತ್ತವೆ ಅವರ ಕೃತಿಗಳು.
ಆರು ತಿಂಗಳ ಹಿಂದೆ ರಾಭೂ ಅವರನ್ನು ಭೇಟಿಯಾದಾಗ, 'ನಿಮ್ಮ ನೂರು ಪುಸ್ತಕಗಳಾದರೂ ಪ್ರಕಟವಾಗಿರಬೇಕಲ್ಲ ಸರ್?' ಎಂದು ಕೇಳಿದ್ದೆ. 'ತಮಾಷೆ ಮಾಡಬೇಡಪ್ಪ, 40-50 ಆಗಿರಬೇಕು, ಅಷ್ಟೇ' ಎಂದು ನಕ್ಕಿದ್ದರು. ಆದರೆ, ಮರುದಿನ ಮುಂಜಾನೆ ಕರೆ ಮಾಡಿ, 'ನಿನ್ನೆ ರಾತ್ರಿ ಕುತೂಹಲಕ್ಕೆ ನನ್ನ ಪ್ರಕಟಿತ ಪುಸ್ತಕಗಳ ಪಟ್ಟಿ ಮಾಡಿದೆ. ಆಶ್ಚರ್ಯ! ಅವುಗಳ ಸಂಖ್ಯೆ 110 ದಾಟಿದೆ' ಎಂದು ಸಂಭ್ರಮಿಸಿದರು. ಬರೆಯುವ ಭರದಲ್ಲಿ ಅವರು ಲೆಕ್ಕವನ್ನೂ ಇಟ್ಟಿರಲಿಲ್ಲ.
ರಾಭೂ ಅವರಂತೆ ವೈಜ್ಞಾನಿಕ ಕಥಾ ಸಾಹಿತ್ಯವನ್ನು ಮುಂದುವರಿಸುವ ಪ್ರತಿಭೆ ಕನ್ನಡದಲ್ಲಿ ಕಾಣಿಸುತ್ತಿಲ್ಲ. ಆ ಕೊರಗು ಅವರನ್ನೂ ಬಾಧಿಸಿರಬೇಕು. ಅದಕ್ಕಾಗಿಯೇ ಮಹಿಳೆಯರು ಮತ್ತು ಮಕ್ಕಳಿಗಾಗಿ ವೈಜ್ಞಾನಿಕ ಕಥಾ ಸಾಹಿತ್ಯ ಶಿಬಿರಗಳನ್ನು ನಡೆಸಿದರು. ಅಲ್ಲಿ ರೂಪುಗೊಂಡ ಕಥೆಗಳನ್ನು ಸಂಪಾದಿಸಿ ಪ್ರಕಟಿಸಿದರು. ಅವರ ಕನಸಿನ ಈ ಹೊಸ ಪೀಳಿಗೆಯ ಮೇಲೆ ಅವರಿಗೆ ಭಾರಿ ಭರವಸೆ. ಅವರಿಗೆ ಮಾರ್ಗದರ್ಶನ ನೀಡುವುದಕ್ಕಾಗಿಯೇ ಈಗ ವೈಜ್ಞಾನಿಕ ಕಥಾ ಸಾಹಿತ್ಯ ರಚನೆಯ ಬೃಹತ್ ಕೈಪಿಡಿಯೊಂದನ್ನು ಸಿದ್ಧಪಡಿಸುತ್ತಿದ್ದಾರೆ.
ಇಂದು ಅಭಿನಂದನೆ
75 ತುಂಬಿದ ರಾಭೂ ಅವರಿಗೆ ಇಂದು (ಜೂ. 23) ಬೆಳಗ್ಗೆ 10 ಗಂಟೆಗೆ ಧಾರವಾಡದ ಸೃಜನಾ ರಂಗಮಂದಿರದಲ್ಲಿ ಅವರಿಗೆ ಅಭಿಮಾನಿಗಳು, ಶಿಷ್ಯರು, ಗೆಳೆಯರು ಹಾಗೂ ಕುಟುಂಬ ವರ್ಗದವರು ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದಾರೆ. ಈ ಸಂದರ್ಭ 'ವೈಭವಿ' ಅಭಿನಂದನ ಗ್ರಂಥದ ಸಮರ್ಪಣೆ ನಡೆಯಲಿದೆ. ಮೌಲಿಕ ಲೇಖನಗಳು, ಒಡನಾಡಿಗಳ ನೆನಪುಗಳು, ರಾಭೂ ಆತ್ಮಕಥೆಯ ತುಣುಕುಗಳಿಂದ ಈ ಗ್ರಂಥ ಸಾರ್ಥಕ ಗುರುಗೌರವ ಎನಿಸಿದೆ. ಸಾಧನೆಯ ಉತ್ತುಂಗಕ್ಕೇರಿದ್ದರೂ ವಿನಯವೇ ಮೂರ್ತಿವೆತ್ತಂತಿರುವ ರಾಭೂ ಅವರಿಗೆ ಶುಭಾಶಯ ಹೇಳುವುದಾದರೆ: 9886399690.
ಪ್ರಮುಖ ಕೃತಿಗಳು
ನಾಳೆ ನಿನ್ನ ಪಾಳಿ, ಅಟ್ಲಾಂಟಿಸ್, ರಾಕ್ಷಸದ್ವೀಪ, ಮಾಯಾ, ಆಪರೇಷನ್ ಯುಎಫ್ಓ, ನೌಕಾಘಾತ, ಮಹಾಶ್ವೇತೆ, ಮನ್ವಂತರ, ಮಂಗಳ, ಸೈಕೋರಮಾ, ಸಿಗ್ಮಾ (ಕಾದಂಬರಿಗಳು), ಶುಕ್ರಗ್ರಹದ ಸಾಹಸಿ, ಟಚೀರಮಾ, ಕಿರಣಾ, ಮಂಗಳ, ನಾನು ಮೆಚ್ಚಿದ ಪಾಶ್ಚಾತ್ಯ ವೈಜ್ಞಾನಿಕ ಕಥೆಗಳು, ಸಿಗ್ನೀ ಸಂಗೀತ, ಸೈಕೋರಮಾ (ಕಥಾ ಸಂಗ್ರಹಗಳು). ಇಂಗ್ಲಿಷ್ನ ಉತ್ಕೃಷ್ಟ ವೈಜ್ಞಾನಿಕ ಸಾಹಿತ್ಯ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ಇಂಗ್ಲಿಷ್ಗೂ ಭಾಷಾಂತರಿಸಿದ್ದಾರೆ. ಅವರ ಮಹತ್ವದ ಸರಣಿ ನವಯುಗದ ಕೈಪಿಡಿಗಳು. ಪರ್ಯಾಯ ಚಿಕಿತ್ಸೆಗಳು ಹಾಗೂ ಅತೀಂದ್ರಿಯ ಪ್ರಪಂಚದ ಬಗೆಗೂ ಸಾಕಷ್ಟು ಬರೆದಿದ್ದಾರೆ. ಅನೇಕ ಪಠ್ಯಪುಸ್ತಕಗಳನ್ನೂ ರಚಿಸಿ, ತಾವೇ ಪ್ರಕಾಶಕರೂ ಆಗಿದ್ದರು.
-ಅನಂತ ಹುದೆಂಗಜೆ
hudengaje@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


