ಸಾಪ್ತಾಹಿಕಪ್ರಭ

ವಾಸಂತಿ

Published On :

ಕತ್ತ ಹಿಗ್ಗಿಸಿ, ನುಂಗುವಂತೆ ಕಣ್ಣರಳಿಸಿ,
ಹಣಿಕಿ ನೋಡಿದ ಪೆಂಗು, ಜಿರಾಫೆ ತೆಂಗು,
ದೂರದಲ್ಲಿ ಅಲ್ಲಿ, ಭಾರವಾಗಿ,
ಮೈ ಹೊರಳಿಸಿ,
ನೆಲದ ಪೊಗದಸ್ತು ಮೊಲೆಗಳಿಂದ
ತನ್ನ ದುಂಡು ಮುಖವನ್ನೆತ್ತಿದ
ತರುಣ ಸೂರ್ಯನ್ನ ಕಂಡು
ಮೈಯೆಲ್ಲ ಉರಿದುಹೋಗಿ
ಲಟಲಟನೆ ನೆಟಿಕೆ ಮುರಿಯಿತು.
 
ಸಾಕಷ್ಟು ಖುಷಿಪಟ್ಟ ಸೂರ್ಯ,
ಸುಸ್ತಾಗಿ ಈ ಉದ್ದ ಬಿದ್ದು ನಿದ್ರಿಸುತ್ತಿದ್ದ
ನೆಲದ ಬೆತ್ತಲೆ ಮೈ ಮೇಲೆ
ಮಸ್ತಾಗಿ ಬಂಗಾರ ಸುರಿದು ಮೇಲೆದ್ದ
ಮೇಲೆದ್ದು ನಡೆದ, ಮುಗಿದಂತೆ ಕರ್ತವ್ಯ.
 ಆ ಮೇಲೆ ಕಣ್ಣೀರು ನೆಲದ ಪಾಲೆ?
 
ಇಂಥ ವೇಳೆ,
ಬಾವಿಕಟ್ಟೆಯ ಮೇಲೆ ಕುಳಿತ ವಾಸಂತಿ
ಎಂಥ ಸುಂದರಿ ಅಂತಿ!
ಬಾವಿ ಆಳದ ಬಗ್ಗೆ ಯೋಚಿಸಿದಳೆ?
ಅಥವಾ, ಮೋಸ ಮಾಡಿದ ಆ ಮೀಸೆ ಹೊತ್ತವನನ್ನು
ಮನದಲ್ಲೆ ಯಾಚಿಸಿದಳೆ?
 
ಬಂಗಾರ ಬಿಸಿಲಿಗೆ
ಅಮ್ಮ ಹರವಿದ ತೊಳೆದ ಅಕ್ಕಿ
ಕಣ್ಮುಂದೇ ಆ ಈ ಹಕ್ಕಿ ಪಾಲಿಗೆ
ಪೋಲಾಗುತ್ತಿದೆ
'ಓಡಿಸೇ, ಪಾಪಿಷ್ಠೆ!'
 
ಆರು ತಂಗಿಯರ ಏರುಪ್ರಾಯದ ತಂಡ
ವಾಸಂತಿಯನ್ನು ಕೊಕ್ಕೋಗೆ ಕರೆದುದು ದಂಡ
ಸೋಲೇ ಸೋಲಾಗುತ್ತಿದೆ
'ಹಾಳಾಗಬಾರದೇ ಈ ಅನಿಷ್ಠೆ!'
 
ವಠಾರದ ಒಡೆಯ ಸೆಟ್ಟಿಯನ್ನು,
ಅಮ್ಮನನ್ನು, ಮಕ್ಕಳನ್ನು, ಒಣರೊಟ್ಟಿಯನ್ನು
ಹೀನಾಮಾನ ಹಳಿಯುವುದರಲ್ಲಿ,
ದಿನದಿನಕ್ಕೆ ಬಿಳಿಯುವುದರಲ್ಲಿ
ಅಪ್ಪನ ಗೃಹಸ್ಥಧರ್ಮದ ಗಂಧ ತೇಯುತ್ತಿದೆ
'ರಕ್ಷಮಾಂ ಪುರುಷೋತ್ತಮ!'
 
ವಿಶ್ ಮಾಡಿ ಹೊರಟರು ಕಾಲೇಜಿಗೆ ಗೆಳತಿಯರು
ಪ್ರತಿನಿತ್ಯದಂತೆ
ಹುಡುಗರು ಚುಡಾಯಿಸಿದರು
ಬಡಿಯಿತು ಗಂಟೆ!
ಮನೆಯ ಗಡಿಯಾರದ... ಕಾಲೇಜಿನ...!
ಬೆಚ್ಚಿ, 'ಗಂಟೆ ಎಂಟೆ?
ಹದಿನೆಂಟೆ? ಇಪ್ಪತ್ತೆಂಟೆ?
ಸವಿಯಬೇಕಾದ್ದಿನ್ನೂ ಬಹಳವಿದೆ, ಗೊತ್ತುಂಟೆ?'
 
ಜಲದಲ್ಲೂ ಸಲ್ಲುವ, ನೆಲದಲ್ಲೂ ಸಲ್ಲುವ
ಕಪ್ಪೆ ಕುಪ್ಪಳಿಸಿ ಕದಡಿದ ಪ್ರತಿರೂಪಕ್ಕೆ,
ಪಾಪಕ್ಕೆ, ಶಾಪಕ್ಕೆ, ವ್ಯರ್ಥ ಪರಿತಾಪಕ್ಕೆ,
ತಿಳಿಯದಾಳದ ಬಾವಿಯ ಆಳ ಪಾತಾಳಕ್ಕೆ,
ಜಾರುವ ನುಣ್ಣನೆ ಗೋಳ ಭೂಗೋಳಕ್ಕೆ,
 
ನಕ್ಕು, ವಾಸಂತಿ
ಬಾವಿಕಟ್ಟೆಯ ಬಿಟ್ಟು
ಕೆಳಗಿದಳು.

 ಹುಡುಗಿ,
ಮುದ್ದು ಮುದ್ದಾಗಿ,
ಕ್ಲೀಷೆ ತುಂಬಿದ ಭಾಷೆಯಲ್ಲಿ,
ಪ್ರೇಮ ಗೀಮ ಮದುವೆ ಗಿದುವೆ ಇತ್ಯಾದಿ...
ಪೆದ್ದು ಪ್ರಶ್ನೆಗಳನ್ನೇ ಗುದ್ದಬೇಡ
ವೃಥಾ ಸದ್ದು ಬೇಡ.
 
ನಾನು
ಕಳ್ಳ ಟಂಕಸಾಲೆಯಿಂದ
ಪೊಳ್ಳು ಹಾವಗಳನ್ನು, ಭಾವಗಳನ್ನು,
ನೋವುಗಳನ್ನು, ಯಾವುಗಳನ್ನೂ
ಚಕಚಕ್ಕನೆ ಅಚ್ಚುಹಾಕಿ
ಚಲಾವಣೆಗೆ ತರಲಾರೆ.
ಇಗೊ, ಒಪ್ಪಿಕೊಂಡೆ, ನನ್ನದಲ್ಲ
ಶುದ್ಧಪ್ರೇಮದ ಹಾದಿ.
 
ಎಷ್ಟೆಷ್ಟೋ ಮನೆಗಳಿರುವ
ಈ ಗಿಜಿಗಜಿಬಿಜಿ ನಗರದಲ್ಲಿ
ಸದ್ಯಕ್ಕೆ ಬಾಡಿಗೆಯ ಮನೆಗಳೇ
ನನ್ನ ಧಾಮ.
 
ನನ್ನ ಪ್ರೇಮ
ಊಟವಾದೊಡನೆ
ಎಲೆಗೋಮ.
 
ಸೀಸೆಗಟ್ಟಲೆ ಶಾಯಿಯನ್ನು
ಸೊರ್ರೆಂದು ಹೀರಬಲ್ಲ
ಶೇಷಶಾಯಿ ಬ್ಲಾಟಿಂಗ್ ಪೇಪರ್
ನನ್ನ ಕಾಮ.
 
ಬಂಡೆಯಂತೆ ಒಂದೆಡೆ ಬಿಮ್ಮಂತ ಬಿದ್ದಿರದೆ
ಒದ್ದ ಕಡೆಗೆ ಪುಟಿಯುವ, ಪುಟಿದೆದ್ದು ಹಾರುವ
ನನ್ನ ಫುಟ್ಬಾಲ್ ಮನಸ್ಸಿಗೆ
ಮರ್ಕಟವೇ ಅನ್ವರ್ಥನಾಮ.
 
ವಿದ್ಯುತ್ ಹರಿದಾಗ ಮಾತ್ರ
ಝಗ್ಗೆಂದು ಹೊತ್ತಿ ಉರಿವ
ಕ್ಷುದ್ರ ವಿದ್ಯುದ್ದೀಪ, ಕಣೆ, ನನ್ನ ಪ್ರೇಮ
ನಿನ್ನ ಬಾಳ ನಂದಾದೀಪವಲ್ಲ.
 
ಆದ್ದರಿಂದ
ಕಣ್ಣಿಂದಲೇ ನನ್ನ ಹೃದಯ ವೃಥಾ ಬೆದಕಬೇಡ.
ನನ್ನ ಹೃದಯ ಸೀಳಿ ನಾನು
ನಿನಗೆ ತೋರಲಾರೆ.
ಏಕೆಂದರೆ
ಅಲ್ಲಿ ಕೊಳೆತು ನಾರುತ್ತಿದೆ ಒಂದು ಹೆಣ
ಒಂದೇ ಒಂದು ಹೆಣ
ಸುತ್ತ ಗುಂಯ್ಗುಡುವ ನೊಣ
ನನ್ನ ಒಬ್ಬಂಟಿ ಹೆಣ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.