ನಮ್ಮ ಪ್ರೀತಿಯ ಚಂದ್ರಶೇಖರ ಕಂಬಾರರು ಕೇಂದ್ರ ಅಕಾಡೆಮಿಯ ಉಪಾಧ್ಯಕ್ಷರಾಗಿದ್ದಾರೆ. ಅವರಿಗೊಂದು ಶುಭಾಶಯ ಹೇಳೋಣ. ಅವರ ದೇಸೀ ಸತ್ವದ ಕಾವ್ಯದ ಬಗ್ಗೆ ಸಾಕಷ್ಟು ವಿಮರ್ಶೆ ಬಂದಿದೆ. ಹಾಗೇ ಅವರ ನಡೆನುಡಿಯಲ್ಲಿರುವ ಜನಪದೀಯತೆಯೂ ಸಾಕಷ್ಟು ಪ್ರಸಿದ್ಧ. ಕಂಬಾರರ ಬಗ್ಗೆ ಬಹಳ ಜೋಕುಗಳಿವೆ ಎಂದರೆ ಅದರರ್ಥ, ಅವರು ಅಪ್ಪಟ ಮನುಷ್ಯರಂತೆಯೇ ವರ್ತಿಸುತ್ತಾರೆ ಎಂದೇ. ಕನ್ನಡದಲ್ಲಿ ತೇಜಸ್ವಿ ಬಿಟ್ಟರೆ ಇಂಥ ವ್ಯಕ್ತಿತ್ವ ಕಂಬಾರರದು ಮಾತ್ರ ಎಂಬುದು ಇಲ್ಲಿ ನೆನೆಯಬಹುದಾದ್ದು.
'ಕಟ್ಟಿರುವ ಕಣ್ಣಿ ಹರಕೊಂಡು ಢುರಕೀ ಹೊಡದು...' ಕೈಮೀರಿ ಬರುವ 'ಹೋರಿ'ಯ ದಿನಗಳಿಂದ, 'ದಿಲ್ಲಿಯೆಂಬ ದಿಲ್ಲಗಿ'ಯವರೆಗೆ ಈಗ ಕಂಬಾರರ ಕಾವ್ಯ ಮೈಚಾಚಿದೆ. ಈಗ ಅದು ತನ್ನ ಮ್ಯಾಜಿಕ್ ಕಳೆದುಕೊಂಡು 'ಬದುಕುವುದಕ್ಕೆ ಏನು ಬೇಕು? ಒಂದಷ್ಟು ಭ್ರಮೆಗಳು, ಅಷ್ಟಿಷ್ಟು ಕನಸುಗಳು' ಎಂಬ ಹೇಳಿಕೆಗಳ ಹಂತಕ್ಕೂ ಬಂದಿದೆಯೊ? ಅವರ ಸಮಗ್ರ ಕಾವ್ಯಕ್ಕೆ ಅನಂತಮೂರ್ತಿಯವರು ಬರೆದ ಮುನ್ನುಡಿ ಓದಿದರೆ ಅದು ಹೊಗಳಿಕೆಯೋ ವ್ಯಂಗ್ಯವೋ ಗೊತ್ತಾಗದಂತಿದೆ. 'ಬಫೂನ್‌ಗಿರಿಯೂ ಬಚಾವ್ ಆಗುವ ಒಂದು ಕ್ರಮ' ಎನ್ನುತ್ತಾರವರು. ಇದು ಚರ್ಚೆಗೆ ಸೂಕ್ತ ಸಮಯ.
ಪ್ರವಾಸ ಕಥನ
'ನಾವು ಯಾತ್ರೆ ಹೊರಡುವುದು ಮೊದಲಿಗೆ, ನಮ್ಮನ್ನೇ ಕಳೆದುಕೊಳ್ಳಲು; ನಂತರ, ನಮ್ಮನ್ನು ಕಂಡುಕೊಳ್ಳಲು. ನಮ್ಮ ಕಣ್ಣು, ಹೃದಯಗಳನ್ನು ಜಗತ್ತಿಗೆ ತೆರೆದಿಟ್ಟು, ನಮ್ಮ ವೃತ್ತಪತ್ರಿಕೆಗಳು ಕೊಡುವುದಕ್ಕಿಂತ ಮಿಗಿಲಾದ ಚಿತ್ರವನ್ನು ಈ ಪ್ರಪಂಚದ ಬಗ್ಗೆ ಕಾಣಲು. ನಮ್ಮ ಅರಿವಿಗೇ ಬಾರದಂತೆ ಈ ಜಗತ್ತಿನ ನಾನಾ ಕಡೆ ಹಂಚಿಹೋದ ಸಿರಿಯನ್ನು ಎಷ್ಟು ಸಾಧ್ಯವೋ ಅಷ್ಟು ನಮ್ಮ ತೆಕ್ಕೆಯೊಳಗೆ ತಂದುಕೊಳ್ಳಲು. ಮತ್ತೊಮ್ಮೆ ತಾರುಣ್ಯದ ಮೂರ್ಖರಾಗಲು- ಅಂದರೆ ಕಾಲವನ್ನು ನಿಧಾನಗೊಳಿಸಿ ಅದರೊಳಗೆ ಇಳಿಯಲು, ಮತ್ತೊಮ್ಮೆ ಪ್ರೀತಿಯಲ್ಲಿ ಬೀಳಲು.
ಪ್ರವಾಸದ ಸೊಗಸಿನ ಬಗ್ಗೆ, ಪ್ರವಾಸದ ಹುಮ್ಮಸ್ಸು ಜಗತ್ತನ್ನು ಆವರಿಸುವ ಎಷ್ಟೋ ಮೊದಲೇ, ಜಾರ್ಜ್ ಸಾಂತಾಯನ ತನ್ನ 'ಪ್ರವಾಸದ ತತ್ವಜ್ಞಾನ'ಪ್ರಬಂಧದಲ್ಲಿ ಹೇಳಿದ್ದು ನೆನಪಾಗುತ್ತಿದೆ. 'ನಾವು ಆಗಾಗ ತಪ್ಪಿಸಿಕೊಳ್ಳುವುದು ಅಗತ್ಯವಿದೆ- ಮುಕ್ತ ಏಕಾಂತಕ್ಕೆ, ಗುರಿಯಿರದ ನಡಿಗೆಯೆಡೆಗೆ, ಗೋಜಲುಗಳಾಚೆಯ ರಜಾದಿನಕ್ಕೆ, ಬದುಕಿನಂಚನ್ನು ಹರಿತಗೊಳಿಸಿಕೊಳ್ಳುವುದಕ್ಕೆ, ಸಂಕಷ್ಟಗಳ ರುಚಿ ನೋಡುವುದಕ್ಕೆ...'
'ಪರಿಚಿತದಿಂದ ಅಪರಿಚಿತತೆಯತ್ತ ತಿರುಗುವುದರಲ್ಲಿ ತಿಳಿವಳಿಕೆಯಿದೆ. ಅದು ಬುದ್ಧಿಯನ್ನು ಚುರುಕಾಗಿಡುತ್ತದೆ, ಪೂರ್ವಗ್ರಹಗಳನ್ನು ನಿವಾರಿಸುತ್ತದೆ, ವಿನೋದವನ್ನು ಪೋಷಿಸುತ್ತದೆ' ಎನ್ನುತ್ತಾನೆ ಸಾಂತಾಯನ'.
ನಿತ್ಯ ಪ್ರವಾಸಿಗ, ಪ್ರವಾಸ ಬರಹಗಾರ ಪಿಕೋ ಐಯರ್ ಬರೆದ 'ವೈ ವಿ ಟ್ರಾವೆಲ್' ಲೇಖನದ ಆಯ್ದ ಭಾಗವಿದು. ಅಮೆರಿಕದಲ್ಲಿ ನೆಲೆಸಿರುವ ಇವರ ದಿ ಲೇಡಿ ಆಂಡ್ ದಿ ಮಾಂಕ್, ದಿ ಗ್ಲೋಬಲ್ ಸೌಲ್ ಮುಂತಾದ ಕೃತಿಗಳು ಜನಪ್ರಿಯ. ಈ ಲೇಖನದ ಪೂರ್ಣಪಾಠ ಇಲ್ಲಿದೆ: http://www.salon.com/2000/03/18/why
ಜೇಬುಗಳು
ನನ್ನ ಜೇಬುಗಳು ಖಾಲಿ
ಒಂದಾನೊಂದು ಕಾಲದಲ್ಲಿ
ಅಲ್ಲೊಬ್ಬಳು ಹುಡುಗಿಯಿದ್ದಳು
ಗುಟ್ಟಾಗಿ ಸಂಧಿಸುತ್ತಿದ್ದೆ ಅವಳನ್ನು.
ಹೊರಟುಹೋದಳು,
ನನ್ನ ಜೇಬುಗಳು ದೊಡ್ಡದಾದವೆಂದು
- ಅರವಿಂದ ಕೃಷ್ಣ ಮೆಹ್ರೋತ್ರಾ
-ಕೇರ