ಗಂಗೆ ಗುಂಗು

ಮುಂಜಾನೆಯ ನಾಲ್ಕು ಗಂಟೆಯ ತಣ್ಣನೆಯ ಮರಳಿನಲ್ಲಿ ಕಾಲಿಡುತ್ತ ಕೊರೆಯುವ ಚಳಿಗಾಲದಲ್ಲಿ ಸ್ವಲ್ಪವೇ ದೂರ ನಡೆದರೆ ಗಂಗಾ...
ಗಂಗೆ ಗುಂಗು
Updated on: 

ಕುಂಭ ಕಹಳೆ
 ಮುಂಜಾನೆಯ ನಾಲ್ಕು ಗಂಟೆಯ ತಣ್ಣನೆಯ ಮರಳಿನಲ್ಲಿ ಕಾಲಿಡುತ್ತ ಕೊರೆಯುವ ಚಳಿಗಾಲದಲ್ಲಿ ಸ್ವಲ್ಪವೇ ದೂರ ನಡೆದರೆ ಗಂಗಾ ಯಮುನಾ ಸಂಗಮ. ಅಲ್ಲಿ ಸ್ನಾನ ಮಾಡಿ ಗಂಗೆಗೆ ನಮಿಸುವ ಹೊತ್ತಿಗೆ ಪೂರ್ವದಲ್ಲಿ ಸೂರ್ಯದೇವನ ಉದ್ಭವ. ಹಾಗೆಯೆ ಹಿಂದಿರುಗಿ ಬಂದರೆ ಸಾಧು ಸಂತರ ಕುಟೀರಾಶ್ರಮಗಳ ಸಾಲು ಸಾಲು.ಅವುಗಳ ಮುಂದೆ ಬೆಳಗಿನ ತಿಂಡಿ ಚಹಾಕಾಫಿಗಳ ಸೇವೆ. ಅಲ್ಲಿಯೋ ಇಲ್ಲಿಯೋ ತಿಂಡಿ ಮುಗಿಸಿ ಮುಂದೆ ಹೋದರೆ ನಾಗಾ ಸಾಧುಗಳ, ದೇಶದ ನಾನಾ ಮೂಲೆಗಳಿಂದ ಬಂದಿರುವ ವಿಧವಿಧದ ಸಂತರ, ಮಠಾಧಿಪತಿಗಳ  ಮೆರವಣಿಗೆ.
ಅಲ್ಲಿನ ಗಂಗಾನದಿಯ ಬಯಲಿನಲ್ಲಿರುವ ಸಾವಿರಾರು ಕುಟೀರಗಳಲ್ಲಿ ತಾತ್ಕಾಲಿಕವಾಗಿ ನೆಲೆಸಿರುವ ಸಾಧು ಸಂತರ ದರ್ಶನಗೈಯ್ಯುತ್ತಾ ಹೋದರೆ ಮಧ್ಯಾಹ್ನವೇ ಕಳೆದುಬಿಟ್ಟೀತು. ಇನ್ನು ಮಧ್ಯಾಹ್ನದ ಊಟವಂತೂ ಬಲುಸುಲಭ. ಮಧ್ಯಾಹ್ನ ಯಾವ ಶಿಬಿರದಲ್ಲಿರುತ್ತೀರೋ ಅಲ್ಲಿ ಕೊಡುವ ಉಚಿತ ಶುದ್ಧ ಶಾಖಾಹಾರಿ ಭೋಜನ ಮುಗಿಸಿ ಮಂದಿನ ಕುಟೀರಗಳಿಗೆ ತೆರಳಿದರಾಯ್ತು.


ನಡೆಯುತ್ತ ನಡೆಯುತ್ತ ಕಾಲ್ಗಳು ಸೋತು ಸುಣ್ಣವಾದರೂ ಸಂಜೆಯಾಗಿದ್ದು ಅರಿವೆಗೆ ಬರುವುದು ಗಂಗಾ ಆರತಿಯು ಆರಂಭವಾದಾಗಲೇ. ಮುಸ್ಸಂಜೆಯ ನೀಲಿ ಬೆಳಕಿನಲ್ಲಿ ಸಾವಿರಾರು ಆರತಿ ನೋಡಿ ಪಾವನರಾಗುವ ವೇಳೆಗೆ ಕತ್ತಲು ಆವರಿಸಿ ಬಿಟ್ಟಿರುತ್ತದೆ. ಅಲ್ಲಿ ಇಲ್ಲಿ ನಡೆಯುವ ಭಜನೆಗಳನ್ನೋ, ಯೋಗಿಗಳ ಪ್ರವಚನವನ್ನೋ, ಸ್ವಾಮಿಗಳ ರಾಮಕಥೆಯನ್ನೋ ಕೇಳಿ ರಾತ್ರಿಯ ಊಟವನ್ನು ಇನ್ನೊಂದಾವುದೋ ಶಿಬಿರದಲ್ಲಿ ಮುಗಿಸಿ ಅಲ್ಲಿಯೇ ಭಕ್ತಾದಿಗಳಿಗೆಂದು ವ್ಯವಸ್ಥಿಸಿರುವ ಚಿಕ್ಕ ಚಿಕ್ಕ ಶಿಬಿರಗಳಲ್ಲಿ ನಿದ್ದೆ ಹೋದರಾಯ್ತು.
ಇದು 10ನೇ ಶತಮಾನದ ಯಾವುದೋ ರಾಜರ ಕಾಲದ ಘಟನಾವಳಿಗಳಂದು ತಿಳಿಯಬೇಡಿರಿ. ಆಲಹಾಬಾದಿನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಆಗಮಿಸಿದ ಮಹಾನುಭಾವರೊಬ್ಬರ ದಿನಚರಿ! ರೈಲಿನ ಟಿಕೆಟ್ ಸಿಗಲಿಲ್ಲವೆಂದು ಮಧ್ಯಪ್ರದೇಶದ ಕುಗ್ರಾಮವೊಂದರಿಂದ ಕಾಲ್ನಡಿಗೆಯಲ್ಲಿ ಜನವರಿಯಲ್ಲೇ ಆಗಮಿಸಿದ ಈ ಮಹಾಶಯ ಕುಂಭಮೇಳ ಮುಗಿದಾಗಲೇ ಹಿಂದಿರುಗುತ್ತಾರಂತೆ. ಕುಂಭಸ್ನಾನಕ್ಕೆಂದು ತೆವಳುತ್ತಾ ಬಂದಿರುವ ಅಜ್ಜ ಅಜ್ಜಿಯರು, ಕಣ್ಣಿಲ್ಲದ ಇಬ್ಬರು ತಮ್ಮಂದಿರನ್ನು ಕರೆದು ತಂದಿರುವ ಅಣ್ಣ,  ತನ್ನ ಅಂಗವಿಕಲ ತಂದೆಯನ್ನು ಬೆನ್ನ ಮೇಲೆ ಹೊತ್ತು ತಂದಿರುವ ಮಗರಾಯ, ಮುನ್ನೂರು ಕಿಲೋಮೀಟರ್ ನಡೆದು ಬಂದಿರುವ ಮಗಳಿಗಾಗಿ ಹರಕೆ ಹೊತ್ತಿರುವ ತಾಯಿ, ಹನ್ನೊಂದು ವರ್ಷಗಳಿಂದ ನಿಂತೇ ಇರುವ ನಾಗಾಸಾಧು, ತನ್ನ ಅಂಬಾಸಿಡರ್ ಕಾರಿನಲ್ಲಿಯೇ ವಾಸ್ತವ್ಯ ಹೂಡಿರುವ ಸಂತ, ತನಗೆ ನೂರೈವತ್ತು ವರ್ಷಗಳೆಂದು ಹೇಳಿಕೊಳ್ಳುವ ಸನ್ಯಾಸಿ... ಹೀಗೆ ಕೋಟಿ ಕೋಟಿ ಜನ ಈಗಾಗಲೇ ಭೇಟಿ ನೀಡಿರುವ ಈ ಕುಂಭಮೇಳದಲ್ಲಿನ ವೈವಿಧ್ಯತೆ ವರ್ಣಿಸಲಸಾಧ್ಯ. ಆಗಮಿಸುವ ಜನರ ಧಾರ್ಮಿಕ ಶ್ರದ್ಧೆ ಊಹೆಗೂ ನಿಲುಕದ ವಿಷಯ.
ಕಾಲ್ತುಳಿತ, ಅವ್ಯವಸ್ಥೆ, ಮಾದಕ ವಸ್ತುಗಳು... ಮೊದಲಾದ ಲೋಪದೋಷಗಳ ಕಪ್ಪು ಚುಕ್ಕಿಯಿದ್ದರೂ ಅಲಹಾಬಾದಿನ ಕುಂಭಮೇಳ ಇಡಿ ಭೂಮಿಯಲ್ಲಿಯೇ ಅತಿ ದೊಡ್ಡ ಜನರ ಧಾರ್ಮಿಕ ಸಮಾವೇಶ ಎಂದು ಘೋಷಿತವಾಗಿದೆ. ದೇಶದ ಮೂಲೆ ಮೂಲೆಗಳಿಂದ ಬಂದು ಉಚ್ಚನೀಚರೆಂಬ ಬೇಧ ಭಾವಗಳಿಲ್ಲಿದೇ ತ್ರಿವೇಣಿ ಸಂಗಮದಲ್ಲಿ ಮಿಂದು ಪಾವನರಾಗಿತ್ತಿದ್ದಾರೆ. ಪ್ರತಿ ಭಾರತೀಯನೂ ಜೀವನದಲ್ಲಿ ಒಂದು ಬಾರಿಯಾದರೂ ನೋಡಲೇ ಬೇಕಾದ ಈ ಕುಂಭಮೇಳ ವಿಶ್ವದ ಒಂದು ಜೀವಂತ ಅದ್ಭುತ. ಮಾರ್ಚ್ 10 ಮಹಾಶಿವರಾತ್ರಿಯಂದು ಕೊನೆಯ ಶಾಹಿ ಸ್ನಾನವಾಗಿದ್ದು, 2013ರ ಈ ಕುಂಭಮೇಳ ಕೊನೆಗೊಳ್ಳಲಿದೆ. ಇನ್ನು ಇಲ್ಲಿ ಮಂದಿನ ಕುಂಭಮೇಳ ಹನ್ನೆರಡು ವರ್ಷಗಳ ನಂತರವೇ.



ಚಿತ್ರ-ಲೇಖನ:
ದಿನೇಶ್ ಹೆಗಡೆ ಮಾನೀರ್
dmhmaneer@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com