ಫೋನ್ ರಿಂಗ್ ಆಯಿತು. ಮಾಡ್ತಿದ್ದ ಕೆಲಸಕಾರ್ಯಗಳನ್ನೆಲ್ಲಾ ಬಿಟ್ಟು ಓಡ್ದೆ, ಯಾರಾದ್ರೂ ಎಡಿಟರ್ ಫೋನ ಮಾಡಿದ್ದಾರೋ ಎಂಬ ಆಸೆ; ಏನೂ ಕೇಳಿಸ್ಲೇ ಒಲ್ದು. ಮಾವನವರ ಹತ್ರ ಕೆಲಸದವಳು ಎತ್ತರದ ಗಂಟಲಲ್ಲಿ ಮಾತಾಡ್ತಿದ್ದಳು. ಅವರೋ ಕಿವುಡು-ಆದ್ರೆ ಪ್ರಪಂಚದ ಆಗುಹೋಗುಗಳೆಲ್ಲ ಅವರಿಗೆ ತಿಳಿಯಬೇಕು, ಮನೆ ಮುಂದಿನ ರಸ್ತೇಲಿ ನಡೀತಿರೋ ವಿಚಾರ ಮೊದಲ್ಗೊಂಡು! ಸಹನೆಯಿಂದ ಅವರು ಕೇಳಿದ್ದಕ್ಕೆಲ್ಲ ಉತ್ತರಿಸ್ತಿದ್ರೆ, ತನಗೆ ಬೇಕಾದಾಗಲೆಲ್ಲ ಸಾಲ ಕೊಡ್ತಾರೆ ಆಯಪ್ಪ ಎಂಬ ಆಸೆ ಲಿಂಗಿಗೆ. ಅಂತೆಯೇ ಕೆಲಸ ಎಲ್ಲಾ ಬಿಟ್ಟು ಅವರ ಮುಂದೆ ಹಾಜರಾಗಿದ್ದಳು, ಲೌಡ್ಸ್ಪೀಕರ್ ಧಾಟಿಯಲ್ಲಿ!
'ಏನದು ಗಲಾಟೆ'- ಕೂಗು ಹಾಕಿದೆ, 'ನಂಗೆ ಫೋನ್ ಬಂದಿರೋದು ಗೊತ್ತಿಲ್ವಾ?'
'ರಸ್ತೇಲಿ ಹೋಗ್ತಿರೋ ಹೆಣ ಯಾರ್ದು ಅಂತ, ದೊಡ್ಡ ಯಜಮಾನ್ರು ಕೇಳ್ತು ಅಮ್ಮ. ನಂಗೊತ್ತಿಲ್ಲಾ ಅಂದೆ.
ಅದಕ್ಕದು ಹೇಳ್ತು- ಹೋಗಿ ವಿಚಾರಿಸ್ಕೊಂಡು ಬಾ ಅಂತ. ಅದಕ್ ನಾನು...'
ಈ ಪುರಾಣದಲ್ಲಿ ನಂಗೆ, ಫೋನ್ನಲ್ಲಿ ಬಂದ ಮಾತು ಸರಿಯಾಗಿ ಕೇಳಿಸ್ಲೇ ಇಲ್ಲ.
'ಸ್ವಲ್ಪಹೊತ್ತು ಸುಮ್ನಿರು ಅಂತ ಹೇಳೇ ನಿನ್ನ ಯಜಮಾನ್ರಿಗೆ. ನಾನು ಫೋನಲ್ಲಿ ಮಾತಾಡ್ಬೇಕು' ಗದರಿದೆ.
'ಏಯ್, ಮುದುಕಪ್ಪ ನನ್ನ ಯಜಮಾನ್ರಲ್ಲ ಅಮ್ಮಾವ್ರೆ. ನನ್ನ ಗಂಡನ ಕಿವಿಗೇನಾರ ಈ ಮಾತು ಬಿತ್ತೋ, ಆಯ್ತು, ಕೈಗೆ ಮಚ್ಚು- ಮಚ್ಚು ತಗೊಂಡಾನು, ಉಸಾರ್'
'ಆಹಾಹಾ, ರಾಣಾ ಪ್ರತಾಪಸಿಂಹ, ನಿನ್ನ ಗಂಡ ಗೂನು, ಊನು, ನಾ ಕಂಡಿಲ್ವೇ ಸುಮ್ನಿರೆ'
'ಸುಮ್ನಿರ್ಬೇಕಂತೆ ಯಜಮಾನ್ರೇ. ಸೊಸೆಅಮ್ಮ ಏಳ್ತು...' ಅವಳ ದಪ್ಪ ಗಂಟಲು ಕೇಳಿಸ್ತು, ದಪ್ಪ ಮುಖಾನೂ ಕಾಣಿಸ್ತು.
'ಸೊಸೆ ಅಮ್ಮ ಯಾರೇ ನಂಗೆ ಹೇಳೊಕ್ಕೆ ನಾನ್ಯಾವಾಗ ಮಾತಾಡ್ಬೇಕು, ಮಾತಾಡ್ಬಾರ್ದು ಅಂತೆಲ್ಲಾ? ನಾನೀ ಮನೆ ಯಜಮಾನ ಅಲ್ವೆನೇ? ನಾನ್ಯಾಕೆ ಸುಮ್ನಿರ್ಬೇಕಂತೆ?' ಮಾವನವರ ಸಿಟ್ಟಿನ ಗಂಟಲು, ಸೂರೇ ಬಿರಿದು ಹೋಗುವಂತೆ.
'ಸೊಸೆ ಅಮ್ಮಾವ್ರೆ, ನಾನ್ಯಾಕೆ ಸುಮ್ನಿರ್ಬೇಕೂಂತ ಮುದುಕಪ್ಪ ಕೇಳತ್ತೆ' ಲಿಂಗಿಯ ಅದೇ ಗಂಟಲು.
'ಹೇಳೇ ಅವ್ರಿಗೆ, ನಾನು ಯಾರ ಹತ್ರಾನೋ ಫೋನ್ನಲ್ಲಿ ಮಾತಾಡ್ತಿದೀನಿ ಅಂತ...'
'ಸೊಸೆಅಮ್ಮಾ ಫ್ಹೋನಲ್ಲಿ ಮಾತಾಡ್ತಿದೆ ಯಜಮಾನ್ರೆ' ಮತ್ತೂ ದೊಡ್ಡ ಗಂಟಲಲ್ಲಿ.
'ಯಾರ ಹತ್ರ' ಮಾವನವರ ಪ್ರಶ್ನೆ, ಅದನ್ನೂ ಮೀರಿಸೋ ಎತ್ತರದ ಗಂಟಲಲ್ಲಿ.
'ಯಾರ ಹತ್ರ ಅಂತ ದೊಡ್ಡ ಯಜಮಾನ್ರು ಕೇಳ್ತಿದೆ' ಲಿಂಗಿಯ ಕೂಗು, ಅಲ್ಲಿಂದಲೇ.
'ನಿಮ್ಮ ಹೆಂಡ್ತಿ ಹತ್ರ ಅಂತ ಹೇಳೇ' ಒಂದೇ ಸಿಟ್ಟಿನಿಂದ ಒದರಿದೆ.
'ಯಜಮಾನ್ರೆ, ನಿಮ್ಮ ಹೆಂಡ್ತಿ ಹತ್ರನಂತೆ' ಲಿಂಗಿ ಅದನ್ನೂ ಗಟ್ಟಿಯಾಗಿ ಹೇಳ್ಬೇಕೆ, ನರಕದಲ್ಲಿ ಬೇಯ್ತಿರೋ ಆ ಮಹಾತಾಯಿ ಇಳಿದು ಬರೋ ಹಂಗೆ!
'ಹಾ...' ಅನ್ನುತ್ತಾ, ಗಾಬರಿಯಿಂದ ಮುದುಕ ಏಳ್ಬೇಕೆ? ಎಲ್ಲಿ ಮತ್ತೆ ಬಂದ್ಬಿಟ್ಟಳೊ ಆ ಪತಿವ್ರತೆ ಅಂತ!
'ಹೆಲೋ, ಹೆಲೋ' ಮತ್ತೆ ಫೋನಿನಲ್ಲಿ. ಯಾರಿರ್ಬಹುದು ವಿಚಾರಿಸೋಣ ಅನ್ನೋ ಹೊತ್ತಿಗೆ ಮುಂಬಾಗಿಲಿನ ಕರೆಗಂಟೆ.
'ಲಿಂಗಿ, ಯಾರೋ ಬೆಲ್ ಮಾಡ್ತಿದಾರೆ. ಯಾರದು, ಹೋಗ್ನೋಡು' ಫೋನ್ ರಿಸೀವರನ್ನ ಕೈಲಿ ಹಿಡಿದುಕೊಂಡೇ ಕೂಗ್ ಹಾಕ್ದೆ, ಒಂದೇ ಅಸಹನೆಯಿಂದ.
'ಅಮ್ಮಾ, ಬಾಗಿಲಿನ ಚೈನ್ ಹಾಕಿ ಬಾಗಿಲ್ತೆಗೀಲೋ, ಹಾಗೆ ತೆಗೀಲೋ' ಅಲ್ಲಿಂದಲೇ ಕಿರುಚಿತು, ಆ ತಲೆಹರಟೆ, ಊರಿಗೆಲ್ಲಾ ಕೇಳಿಸೋ ಹಾಗೆ.
'ಬೆಳಿಗ್ಗೆ ಹೊತ್ತು, ಏನೇ ಭಯ? ಅಕ್ಕಪಕ್ಕ ಎಲ್ಲಾ ಓಡಾಡ್ತಿರ್ತಾರೆ' ನಾನೂ ಕೂತಲ್ಲಿಂದಲೇ ಕೂಗಿದೆ.
'ಆದ್ರೂ, ಅಮ್ಮಾವ್ರೆ... ಹೇಳೊಕಾಗಲ್ಲ...' ಅನುಮಾನದಿಂದ ಕೂಗಿಕೊಂಡಳು.
'ಬೆಳಿಗ್ಗೆ ಹೊತ್ತು. ಯಾವ ಕೇಡಿ ಬರ್ತಾನೆ? ನೀನೊಬ್ಬಳು...' ಕೂತಲ್ಲೇ ದಬಾಯಿಸ್ದೆ.
'ನೀವೇ ಅಲ್ವಾ ಅಮ್ಮಾವ್ರೆ, ಪೇಪರ್ ಓದಿ, ನಂಗೆ ತಿಳಿಸಿರೋದು- ಹಗಲು ಹೊತ್ನಲ್ಲೆ ಮೆಲ್ಲಗೆ ತಿಳಿದೊವ್ರ ಹಾಗೆ ಒಳನುಗ್ಗಿ, ಕೊಲೆ-ದರೋಡೆ ಎಲ್ಲಾ ಮಾಡ್ತವ್ರೆ, ಉಸಾರಾಗಿರು, ಭಲೇ ಉಸರಾಗಿರು. ಚೈನ್ ಇಲ್ದೆ ಬಾಗಲ್ತೆಗೀಬೇಡ ಅಂತೆಲ್ಲಾ' ಜ್ಞಾಪಿಸಿದಳು. ಯಥಾಪ್ರಕಾರ, ಗಟ್ಟಿಯಾಗಿ, ಎಲೆಕ್ಷನ್ ಸ್ಪೀಚ್ ಕೊಡೋ ಸ್ಟೈಲ್ನಲ್ಲಿ.
'ತಲೆಹರಟೆ ಹೇಳಿದಷ್ಟು ಮಾಡು. ಜಾಸ್ತಿ ಮಾತಾಡ್ಬೇಡ' ಗದರಿದೆ ಅಸಹನೆಯಿಂದ. 'ಮೈ ತುಂಬಾ ಕೋಟ್ಯಾಂತರ ಒಡವೆ ಹಾಕ್ಕೊಂಡವಳ ಹಾಗೆ ಆಡ್ತಾಳೆ'.
'ಯಾಕಮ್ಮಾವ್ರೇ, ಹಿಂಗ್ ಹೇಳ್ತೀರಿ? ನೆನ್ನೆ ತಾನೆ ಎರಡೆಳೆ ಸರ ತಕ್ಕೊಡ್ಲಿಲ್ಲ ನನ್ನ ಗಂಡ? ಹಾಕ್ಕೊಂಡಿಲ್ಲಾ? ತೋರಿಸ್ಲಿಲ್ಲಾ? ನೀವು ನೋಡಿ ಪಸಂದಾಗಿದೆ ಅಂದ್ರಿ ಮರೆತ್ಬಿಟ್ರಾ ಇಷ್ಟು ಬೇಗ? ಹೊರಗಡೆ ಸರ ಹಾಕ್ಕೊಂಡು ಹೋದ್ರೆ ಬರೀ ಸರಾನ ಎಗರಿಸೋದು ಅಷ್ಟೆ. ಆದ್ರೆ, ಮನೆಗೆ ನುಗ್ಗಿದ್ರೆ, ಸರದ ಜೊತೆ ಪ್ರಾಣಾನೂ ತೆಗೀತಾರೆ ಕತ್ತು ಕುಯ್ದು. ಉಸಾರಾಗಿರು ಅಂತೆಲ್ಲಾ ನೀವೇ ಏಳಿದ್ರೀ' ಮುಂಬಾಗಿಲ ಹತ್ರಾನೆ ನಿಂತು, ಮತ್ತೂ ಗಟ್ಟಿಯಾಗಿ ಸಿಡುಕಿದಳು. ಬೆಂಗಳೂರು ಪೇಟೆಯ ದರೋಡೆಕೋರರಿಗೆಲ್ಲ ಔತಣ ಕೊಟ್ಟು, ಕರೆಸಿಕೊಳ್ಳೋ ಹಾಗೆ!
ಎಲಾ ಇವಳ ಜಂಭವೇ! ಬಿಟ್ಟೇನೇ...?
'ಬಿಡೆ. ಇಂದೆಲ್ಲಾ ಅದು ಬರಿ ರೋಲ್ಡ್ಗೋಲ್ಡ್ ಸರ. ಅದನ್ಯಾರೆ ಕದೀತಾರೆ?' ಹೀಯಾಳಿಸಿದೆ.
ಅವಳೇ ಸೋಲುವವಳು? 'ಕಳ್ಳನಿಗೆ ತಕ್ಷಣಕ್ಕೆ ಏನ್ ತಿಳೀತೈತೆ? ಅಮ್ಮ ಏನಾದ್ರೇನು? ಕೈಗೆ ನಾಲ್ಕು ಕಾಸು ಬಂದ್ರೆ ಸಾಕು ಅವನಿಗೆ, ಕುಡಿದ್ಬೀಳೋಕ್ಕೆ' ಇನ್ನೂ ಎತ್ತರದ ದನಿಯಲ್ಲಿ ಸಮರ್ಥಿಸಿದಳು ತನ್ನ ವಾಗ್ವಾದವನ್ನ.
ಕುಡಿದು ಬೀಳೋದು ಎಂಬ ಪದ ಕಿವಿಗೆ ಬಿದ್ದದ್ದೆ, ಅಪಾರ್ಥ ಮಾಡ್ಕೊಂಡ ಕಿವುಡಮಾವ ಅಲ್ಲಿಂದಲೇ ಜಬರದಸ್ತಿನಿಂದ ಬಂದ್ರು ತತ್ತರಿಸ್ತಾ. ತಮ್ಮ ವಾಕಿಂಗ್ ಸ್ಟಿಕ್ಕನ್ನೂ ತಿರುಗಿಸ್ತಾವೀರ ಅಭಿಮನ್ಯುವಿನ ಸ್ಟೈಲ್ನಲ್ಲಿ 'ಎಲ್ಲಿ ಆ ಕುಡುಕ? ಈಗ್ಲೇ ಒದ್ದು ಓಡಿಸ್ತೀನಿ, ಬೆಂಗಳೂರು ಪೇಟೆ ಆಚೆ ಒದ್ದು ಓಡಿಸ್ತೀನಿ...'ಎಂತೆಲ್ಲಾ ಡೈಲಾಗ್ ಉದುರುಸಿದ್ರು.
'ಯಾರ್ದೊ ಮದ್ವೆ ಪಾರ್ಟಿ ಬರ್ತಿದೆ ಮನೆ ಯಜಮಾನ್ರೆ. ಬನ್ನಿ ವಸಿ ನೋಡೋಣ' ಎಂದು ಅವರನ್ನ ವಾಪಸ್ ವರಂಡಾದಲ್ಲಿ ಕೂರ್ಸಿ ಬರೋದ್ರೊಳಗೆ ಲಿಂಗಿಗೆ ಸಾಕುಸಾಕಾಗಿಹೋಯ್ತು.
ನಾನೋ, ತಲೆ ಮೇಲೆ ಕೈಯಿಟ್ಟು ಕೂತ್ಬಿಟ್ಟೆ, ಸನ್ಯಾಸ ತಗೊಂಡವಳಂತೆ. ತನ್ನ ಪಾಡಿಗೆ ತಾನು ಟೆಲಿಫೋನ್ 'ಹೆಲೋ, ಹೆಲೊ' ಅಂತ ಶಬ್ದ ಮಾಡ್ತಾನೇ ಇತ್ತು.
'ಸ್ಪೀಕರ್ ಹಾಕ್ಕೋ ಮಹರಾಯ್ತಿ, ಆಗ ಚೆನ್ನಾಗಿ ಕೇಳ್ಸತ್ತೆ ಎಂಥಾ ಗಲಾಟೇಲೂ' ಎಂದು ಗದರಿದ್ರು ಕಂಪ್ಯೂಟರ್ ರೂಮ್ನಿಂದ ಹೊರಬಂದ ಯಜಮಾನ್ರು. 'ಬೆಳಿಗ್ಗೆಯಾಗೊತ್ಲೂ ಅದೇನ್ ಗಲಾಟೆ? ಅಬ್ಬಬ್ಬಾ ಕಂಪ್ಯೂಟರ್ ತಲೆ ಕೆಟ್ಹೋಯ್ತು'
..ನಗಲೇ ಅಳಲೇ
'ಹು, ಸ್ಪೀಕರ್ಸೀಸ್ಪೀಕರ್' ಎಂದೆ. ಅವರು ಮತ್ತೂ ಜಬರದಸ್ತು ಮಾಡಲು, ಆಗ, ನಾವು ಮಾತಾಡೋದೆಲ್ಲ ಎಲ್ರಿಗೂ ಕೇಳ್ಸತ್ತಲ್ರಿ' ಒದ್ದಾಡಿದೆ.
'ಈಗೇನು ಕೇಳಿಸ್ತಿಲ್ವಾ' ನಕ್ಕರು. 'ನಾಲ್ಕು ಬೀದಿಗೂ ಕೇಳಿಸಿರಬೇಕು, ಲಿಂಗಿ ಮಹಾರಾಣಿಯ ಜತೆ ನಡೆದ ನಿನ್ನ ಸಂಭಾಷಣೆ. ಸ್ವಾರಸ್ಯವಾಗಿತ್ತು ಕೇಳೋಕ್ಕೆ...ಒಳ್ಳೆ ಜೋಡಿ'.
ಲಿಂಗಿ ಮಹಾರಾಣಿ ಅಂದದ್ದು ಆಕೆಗೆ ಖುಷಿಯಾಯ್ತು. ನಕ್ಕಳು. ವಾತಾವರಣ ತಿಳಿಯಾಯ್ತು.
ಸ್ಪೀಕರ್ ಆನ್ ಮಾಡ್ದೆ. ಯಾರದೋ ಧ್ವನಿ... ಪತ್ರಿಕೆ ಸಂಪಾದಕರೇ ಇರ್ಬೇಕು ಅಥವಾ ಪ್ರೊಡ್ಯೂಸರ್ರೊ. ವಾರವ್ವಾ. ಜರುಬಾಗಿ ಕೂತೆ. 'ಯಾರು ಬೇಕು' ಜೇನಿನ ಧ್ವನಿಯಲ್ಲಿ ಪ್ರಶ್ನಿಸಿದೆ.
'ಹೆಲೋ ಮೇಡಮ್, ಇದು ಮೆಟರ್ನಟಿ ಹೋಮಾ (Maternety Home)'? ಕೇಳ್ತು ಆ ಕಡೆ ಧ್ವನಿ.
ಸಿಟ್ಟು ನೆತ್ತಿಗೇರ್ತು. 'ನೋ ಸರ್, ಹುಚ್ಚಾಸ್ಪತ್ರೆ...' ಫೋನನ್ನ ಕೆಳಗೆ ಕುಕ್ಕಿದೆ.
-ನುಗ್ಗೆಹಳ್ಳಿ ಪಂಕಜ