ಇದನ್ನು ನನಗೆ ಹೇಳಿದುದು ಚಲನಚಿತ್ರ ತಯಾರಕರಾದ ರುಯಿ ಗೆರಾ ಅವರು.
ಒಂದು ರಾತ್ರಿ ಅವರು ಸ್ನೇಹಿತರೊಂದಿಗೆ ಮೊಜಾಂಬಿಕ್‌ನ ಒಳವಲಯದಲ್ಲಿದ್ದ ಒಂದು ಮನೆಯಲ್ಲಿ ಮಾತಾಡುತ್ತ ಕುಳಿತಿದ್ದರಂತೆ. ಅದೇ ಸಮಯದಲ್ಲಿ ಆ ದೇಶದಲ್ಲಿ ಯುದ್ಧ ನಡೆಯುತ್ತಿದ್ದು, ಪೆಟ್ರೋಲ್‌ನಿಂದ ತೊಡಗಿ ವಿದ್ಯುದ್ದೀಪದ ವರೆಗೆ ಎಲ್ಲವೂ ಸಾಕಷ್ಟು ಪ್ರಮಾಣದಲ್ಲಿ ಪೂರೈಕೆಯಾಗುತ್ತಿರಲಿಲ್ಲವಂತೆ.
ಹೀಗೆಯೇ ಸಮಯ ಕಳೆಯಲು ಅವರಲ್ಲಿ ಪ್ರತಿಯೊಬ್ಬರೂ ತಾವು ಏನನ್ನು ತಿನ್ನಲು ಬಯಸುತ್ತಾರೆಂದು ಹೇಳತೊಡಗಿದರಂತೆ. ಪ್ರತಿಯೊಬ್ಬರೂ ತಮಗೆ ಇಷ್ಟವಾದ ಆಹಾರದ ಬಗ್ಗೆ ಹೇಳತೊಡಗಿದರಂತೆ. ರುಯಿಯ ಸರದಿ ಬಂದಾಗ ಅವರು ಹೇಳಿದರಂತೆ, 'ನನಗೆ ಒಂದು ಸೇಬು ತಿನ್ನಬೇಕೆಂದು ಅನಿಸುತ್ತಿದೆ'. ಆಗ ಎಲ್ಲವೂ ಪಡಿತರದಲ್ಲಿಯೇ ಸಿಗುತ್ತಿದ್ದು, ಯಾವುದೇ ಹಣ್ಣು ಸಿಗುವುದು ಅಸಾಧ್ಯವೆಂದು ತಿಳಿದೇ ಹಾಗೆ ಹೇಳಿದ್ದರಂತೆ.
ಸರಿಯಾಗಿ ಅದೇ ಕ್ಷಣಕ್ಕೆ ಅವರಿಗೆ ಒಂದು ಶಬ್ದ ಕೇಳಿಸಿತಂತೆ ಮತ್ತು ಒಂದು ಸುಂದರವಾದ ಹೊಳೆಯುವ ಸೇಬು ಉರುಳುತ್ತಾ ಆ ಕೋಣೆಯೊಳಗೆ ಬಂದು ಅವರ ಮುಂದೆ ನಿಂತಿತಂತೆ!
ಅನಂತರ ರುಯಿ ಅವರಿಗೆ ತಿಳಿದು ಬಂದದ್ದೇನೆಂದರೆ ಅಲ್ಲಿ ವಾಸಿಸುತ್ತಿರುವ ಹುಡುಗಿಯರಲ್ಲಿ ಒಬ್ಬಳು ಕಾಳಸಂತೆಯಲ್ಲಿ ಸ್ವಲ್ಪ ಹಣ್ಣನ್ನು ಖರೀದಿಸಲು ಹೊರಗೆ ಹೋಗಿದ್ದಳಂತೆ. ಅವಳು ಮೆಟ್ಟಿಲುಗಳನ್ನೇರಿ ಬರುತ್ತಿರುವಾಗ ಎಡವಿಬಿದ್ದು, ಅವಳು ಕೊಂಡುಕೊಂಡ ಸೇಬುಗಳ ಚೀಲ ಬಿರಿದು, ಅದರೊಳಗಿನಿಂದ ಒಂದು ಸೇಬು ಉರುಳುತ್ತಾ ಇವರ ಕೋಣೆಯೊಳಗೆ ಬಂದಿತ್ತು.
ಇದು ಕೇವಲ ಕಾಕತಾಳೀಯವೇ? ಹಾಗೆ ಹೇಳಿದರೆ ಅದು ಕತೆಯ ತೀರಾ ಬಡ ವಿವರಣೆಯಾದೀತು.
= -ಪೌಲೋ ಕೊಯೆಲೋ
= -ಅನು: ನಂದಿನಿ ಡಿ.ಕಾಮತ್