ಪ್ರತಿ ವರ್ಷ 2-3 ಕೋಟಿ ರು.ಗಳನ್ನು ಹುಡಿಯೆಬ್ಬಿಸುವುದನ್ನು ಬಿಟ್ಟು ಸಮ್ಮೇಳನಗಳಿಂದ ಇನ್ನೇನೂ ಸಾಧನೆಯಾಗಿಲ್ಲ. ಮೂರು ದಿನದಲ್ಲಿ, ಮುನ್ನೂರು ಮಂದಿ, ಸೂರ್ಯನ ಕೆಳಗಿನದೆಲ್ಲವನ್ನೂ ಚರ್ಚಿಸಿ, ಮೂವತ್ತು ಸಾವಿರ ಜನರಲ್ಲಿ ಅರಿವು ಹುಟ್ಟಿಸಲು ಸಾಧ್ಯವಿಲ್ಲ. ಕನ್ನಡ ಸಾಹಿತ್ಯಕ್ಕೆ ಪ್ರಥಮ ಆದ್ಯತೆ, ಕರ್ನಾಟಕದ ಜನಜೀವನ- ನುಡಿಜೀವನ ಇವೆರಡರ ಸಾಮರಸ್ಯದ ವಿಷಯಕ್ಕೆ ಎರಡನೇ ಆದ್ಯತೆ. ಸಂಸ್ಕೃತಿ- ಶಿಕ್ಷಣ- ಅನ್ಯ ಭಾಷಿಕರೊಡನೆಯ ಸಂಬಂಧ ಮೊದಲಾದ ಕೂಡು ವಿಷಯಗಳಿಗೆ ಮೂರನೇ ಆದ್ಯತೆ. ಆ ವರ್ಷದ ಜ್ವಲಂತ ಸಮಸ್ಯೆ, ಏನಾದರೂ ಇದ್ದರೆ ಅದಕ್ಕೆ ನಾಲ್ಕನೇ ಆದ್ಯತೆ. ಹೀಗೆ ಆದ್ಯತೆಯನುಸಾರ ಸಮ್ಮೇಳನಕ್ಕೆ ವಿಷಯಗಳನ್ನು ಆಯ್ದು, ಆಯಾ ವಿಷಯದ ಪರಿಣತರನ್ನು ಮಾತ್ರ ವೇದಿಕೆಗೆ ಆಹ್ವಾನಿಸಿ, ಮೂರು ದಿನಗಳಲ್ಲಿ ಇಂಥ ಹಿತಮಿತ ಸಂಖ್ಯೆಯ ಗೋಷ್ಠಿಗಳಲ್ಲಿ, ಕಡಿಮೆ ವಿದ್ವಾಂಸರಿಗೆ, ಹೆಚ್ಚು ಕಾಲಾವಕಾಶ ಕೊಟ್ಟು, ಶ್ರೋತೃಗಳೊಡನೆ ಸಂವಾದಕ್ಕೂ ಅವಕಾಶ ನೀಡಿದಲ್ಲಿ ಸಮ್ಮೇಳನವು ಅನ್ವರ್ಥಕವೂ, ಸಾರ್ಥಕವೂ ಆದೀತು.
ಹೀಗಾಗಬೇಕೆಂದರೆ, ಗೋಷ್ಠಿಯ ವಿಷಯಗಳ ಆಯ್ಕೆ ಮತ್ತು ವಿದ್ವಾಂಸರ ಆಯ್ಕೆ ಇವು ಆಯಾ ಕ್ಷೇತ್ರಗಳಲ್ಲಿನ ಪರಿಣತರಿಂದ ನಡೆಯಬೇಕೇ ಹೊರತು, ಪರಿಷತ್ತಿನ ಕೇಂದ್ರಾಧ್ಯಕ್ಷರು, ಜಿಲ್ಲಾ ಪ್ರಾತಿನಿಧ್ಯವೆಂಬ ಹಳವಂಡಕ್ಕೆ ಬಿದ್ದ ಜಿಲ್ಲಾಧ್ಯಕ್ಷರ ಸಹಕಾರದೊಂದಿಗೆ, ಮನಬಂದಂತೆ ಆರಿಸುವ ಪ್ರಸಕ್ತ ಪದ್ಧತಿಯಿಂದಲ್ಲ. ಪ್ರಾಜ್ಞರನ್ನು ಗುರುತಿಸಲಾರದೇ ಅಥವಾ ಅಪೇಕ್ಷಿಸಿ, ತಮಗೆ ಬೇಕಾದ ಅಜ್ಞಾನಿಗಳಿಗೆ ಮತ್ತು ರಿಪೀಟರ್‌ಗಳಿಗೆ ಸಮ್ಮೇಳನದ ವೇದಿಕೆ ನೀಡುತ್ತಿರುವ ಈಗಿನ ಪ್ರವೃತ್ತಿ ತೊಲಗಬೇಕು.
'ಹೋಟೆಲ್ ಸಪ್ಲೇಯರ್‌ಗಳೂ ಕವಿತೆ ಬರೆಯುತ್ತಾರೆ. ಎಲ್ಲರೂ ಈಗ ಕವಿಗಳೇ. ನಿಮ್ಮ ಬಗ್ಗೆ ನೀವು ಹೇಳಿಕೊಳ್ಳಬೇಕಯ್ಯ, ಇಲ್ಲದಿದ್ದರೆ ನಮಗೆ ಹೇಗೆ ಗೊತ್ತಾಗಬೇಕು?' ಎಂದು ಕೇಂದ್ರಾಧ್ಯಕ್ಷರೊಬ್ಬರು ಹಿಂದೊಮ್ಮೆ ನನಗೆ ಹೇಳಿದ್ದರು. ನಾನೇನೂ ಸಮ್ಮೇಳನದಲ್ಲಿ ಸೀಟು ಕೇಳಿರಲಿಲ್ಲ; ಆದರೂ ಅವರಾಗಿಯೇ ಈ ಉಡಾಫೆಯ ಮಾತಾಡಿದ್ದರು! ನಲವತ್ತು ವರ್ಷ- ಒಂದೂವರೆ ಸಾವಿರ ಪ್ರಕಟಿತ ಬರಹಗಳು- ಏಳು ಪತ್ರಿಕಾ ಅಂಕಣ- ಕೃತಿ ಪ್ರಕಟಣೆ- ಬಾನುಲಿ ಕಾರ್ಯಕ್ರಮ- ಉಪನ್ಯಾಸಗಳು, ನನ್ನ ಈ ಯಾವ ಸಾಧನೆಯೂ ಅವರ ಗಮನಕ್ಕೆ ಬಂದಿರಲಿಲ್ಲ! ಇನ್ನೊಬ್ಬ ಕೇಂದ್ರಾಧ್ಯಕ್ಷರು, ಸಮ್ಮೇಳನದಲ್ಲಿ ನನಗೆ ಅವಕಾಶ ನೀಡುವುದಾಗಿ ತಾವಾಗಿಯೇ ಹೇಳಿ, ಸನ್ಮಾನಿತರ ಮತ್ತು ವಿದ್ವಾಂಸರ ಪರಿಚಯ ಪುಸ್ತಕಗಳ ತಯಾರಿ, ಉದ್ಘಾಟನಾ ಸಮಾರಂಭದ ನಿರೂಪಣೆ, ಹೀಗೆ ಚೆನ್ನಾಗಿಯೇ ಬಳಸಿಕೊಂಡು ಆಚೆ ಎಸೆದರು! (ಗೌರವಧನ ನೀಡಿದರೆನ್ನಿ).
ಸಾಹಿತ್ಯ ಪರಿಷತ್ತು ಕೇಂದ್ರಾಧ್ಯಕ್ಷರ ಮತ್ತು ಜಿಲ್ಲಾಧ್ಯಕ್ಷರ ಜಹಗೀರಲ್ಲ. ಅದು ಕೇವಲ ಸದಸ್ಯರ ಸ್ವತ್ತೂ ಅಲ್ಲ, ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಅದು.
= ಎಚ್. ಆನಂದರಾಜು ಶಾಸ್ತ್ರೀ, ಸಾಹಿತಿ
ಗದ್ದಲಗಳ ಮೇಳ
ಸಮ್ಮೇಳನಗಳಲ್ಲಿ ಕೃತಿಗಳ ವಿಮರ್ಶೆ ಮತ್ತು ಮೌಲ್ಯವರ್ಧನೆಗೆ ಸಲಹೆಗಳೇ ಕಣ್ಮರೆಯಾಗಿವೆ. ದೃಶ್ಯ ಮಾಧ್ಯಮಗಳ ಹಾವಳಿಯ ಬಿಸಿ ತಟ್ಟಿರುವುದು ನಿಜ. ಆದರೆ ಸಾಹಿತ್ಯಾಭಿಮಾನಿಗಳು ಇದರಿಂದ ವಿಚಲಿತರಾಗಲು ಸಾಧ್ಯವಿಲ್ಲ. ಹಾಗಾಗಿ ಸಂಘಟನೆಯಲ್ಲೇ ಲೋಪವಿರುವುದು ಮೇಲ್ನೋಟಕ್ಕೆ ದಿಟ. ಕೋಟಿ- ಕೋಟಿ ಸುರಿದು ನಡೆಸುವ ಸಮ್ಮೇಳನದ ಪ್ರಯೋಜನ ಶೂನ್ಯವೆಂದಾದರೆ, ಯಾರದೋ ಕಿಸೆ ತುಂಬಿಸಲು ವರ್ಷಂಪ್ರತಿ ನಡೆಯುತ್ತಿದೆಯೇ? ಪ್ರತೀ ಬಾರಿ ಸಮ್ಮೇಳನ ನಡೆಯುವಾಗ ಬೇಕಾಗುವ ಚಪ್ಪರ, ಊಟೋಪಚಾರ ಮತ್ತು ವಸತಿ ವ್ಯವಸ್ಥೆಗಳೇ ಅಬ್ಬರದ ಪ್ರಚಾರ ಗಿಟ್ಟಿಸುತ್ತವೆಯೇ ಹೊರತು ಸಾಹಿತ್ಯ ಕೈಂಕರ್ಯವಲ್ಲ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ-ಮಾನ ದೊರೆತ ಮೇಲಾದರೂ ಕಾಟಾಚಾರಕ್ಕೆ ನಡೆಯದೆ, ಗಂಭೀರ ರೀತಿಯಲ್ಲಿ ಕಾರ್ಯೋನ್ಮುಖವಾಗಬೇಕಿತ್ತು. ಆದರೆ ವೈಮನಸ್ಸುಗಳನ್ನು ಹೊರ ಹಾಕುವ, ರಾಜಕೀಯದ ಛಾಯೆ ಕಾಣುವ ವೇದಿಕೆಯಾಗುತ್ತಿದೆ. ವೃತ್ತಿ ಮತ್ಸರ ಹೇಗೋ, ಹಾಗೆಯೇ ಪ್ರವೃತ್ತಿ ಮತ್ಸರವಿರುವುದು ಸಹಜ. ಆದರೆ ಇಂಥ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಸಮ್ಮೇಳನಗಳಲ್ಲಿ ತೋರಿಸುವುದರಿಂದ ಸಾಹಿತ್ಯಾಭಿಮಾನಿಗಳಲ್ಲೂ ನಿರಾಸಕ್ತಿಗೆ ಕಾರಣವಾಗುತ್ತದೆ. ರಾಜಕೀಯ ಅಧಿವೇಶನಗಳಲ್ಲಾಗುವ ಗೌಜಿ-ಗದ್ದಲಗಳು ಸಾಹಿತ್ಯ ಸಮ್ಮೇಳನಗಳಲ್ಲೂ ನಡೆಯುತ್ತಿರುವುದು ಶೋಭೆ ತರುವ ವಿಷಯವಲ್ಲ. ಆದರೆ ಇವೆಲ್ಲವೂ ಇಲ್ಲದೆ ಸಮ್ಮೇಳನ ನಡೆದರೆ ಆಶ್ಚರ್ಯವೆನ್ನುವ ಮಟ್ಟಿಗೆ ಬಂದಿದೆ.
= ಸಂದೀಪ ಫಡ್ಕೆ, ಸಾಹಿತ್ಯಾಸಕ್ತ
ಯುವಕರಿಗೆ ಯೋಗ್ಯ ದಿಕ್ಕು
ಸಾಹಿತ್ಯ ಸಮ್ಮೇಳನಗಳು ಖಂಡಿತಾ ಜೀವಂತಿಕೆ ಕಳೆದುಕೊಳ್ಳುತ್ತಿಲ್ಲ. ಬದಲಾಗಿ ನಾಡು- ನುಡಿಯ ವಿಭಿನ್ನ ಮುಖಗಳನ್ನು ಜಾಗೃತಗೊಳಿಸುವ ವೇದಿಕೆಯಾಗುತ್ತಿವೆ. ರಾಜ್ಯದ ಒಂದೇ ಭಾಗದಲ್ಲಿ ಅಥವಾ ಒಂದೇ ಸ್ಥಳದಲ್ಲಿ ಪ್ರತಿ ವರ್ಷವೂ ಇಂಥ ಸಮ್ಮೇಳನಗಳು ನಡೆಯುತ್ತಿದ್ದಲ್ಲಿ, ಪ್ರಾಯಶಃ ಅವುಗಳು ಜೀವಂತಿಕೆ ಕಳೆದುಕೊಳ್ಳುತ್ತಿವೆ ಎಂದು ಹೇಳಬಹುದಾಗಿತ್ತು. ರಾಜ್ಯದ 30 ಜಿಲ್ಲೆಗಳಲ್ಲಿ ಕನ್ನಡದ ತೇರನ್ನು ಪ್ರತಿಬಿಂಬಿಸುವುದರ ಜತೆಗೆ ಸ್ಥಳೀಯ ಅಂಶಗಳಿಗೆ ಮಹತ್ವ ನೀಡುತ್ತಿರುವುದು ಇದೇ ಸಮ್ಮೇಳನಗಳು ಎಂಬುದನ್ನು ಮರೆಯಬಾರದು.
ಅಷ್ಟಕ್ಕೂ, ಕನ್ನಡ ನಾಡಿನಲ್ಲಿ ಕನ್ನಡ ಉಳಿದಿದೆ ಎಂದಾದಲ್ಲಿ ಅದು ಗ್ರಾಮೀಣ ಕರ್ನಾಟಕದ ಜನತೆಯಿಂದ. ಇಂಥ ನುಡಿ ಹಬ್ಬವನ್ನು ಪ್ರಚುರಪಡಿಸುವ ಕೆಲಸವನ್ನು ಜಿಲ್ಲೆಗಳಿಗೆ ವಹಿಸುವುದರಿಂದ ಪ್ರಾದೇಶಿಕ ಜವಾಬ್ದಾರಿ ಹೆಚ್ಚುತ್ತದೆ. ವರ್ಷಕ್ಕೊಂದು ಬಾರಿ ಈ ರೀತಿಯ ಜಾಗೃತಿಯನ್ನು ನಾಡಿನ ಬೇರೆ ಬೇರೆ ಜಿಲ್ಲೆಗಳಲ್ಲಿ ಮಾಡುವುದರಿಂದ ನಮ್ಮ ಯುವಕರಿಗೆ ಸರಿಯಾದ ದಿಕ್ಕನ್ನು ತೋರಿಸಿದಂತಾಗುತ್ತದೆ. ಸುಮ್ಮನೆ ಈ ಬಗ್ಗೆ ಟೀಕೆ ಯಾಕೆ? <
= ಶೌರೀಶ್ ಕುದ್ಕುಳಿ, ಸಂಶೋಧಕರು