ಸಾ-ರೆ-ಗ-ಮ-ಪ-ಧ-ನಿ-ಸಾ ಕೆಳಗಿನಿಂದ ಮೇಲೆ ಆರೋಹ; ಸಾ-ನಿ-ಧ-ಪ-ಮ-ಗ-ರೆ-ಸಾ ಮೇಲಿಂದ ಕೆಳಗೆ ಅವರೋಹ. ಹೀಗೆ ಒಂದು ಸಪ್ತಕದಲ್ಲಿ ಆರೋಹ - ಅವರೋಹಗಳಿವೆ ಎಂಬುದು ಎಲ್ಲರಿಗೂ ತಿಳಿದ ವಿಷಯ.
ಆದರೆ ಒಂದು ದಿನ ಗುರುಗಳು ವಿಶೇಷವಾದ ಅಂಶವೊಂದನ್ನು ಹೇಳಿದರು, ಬರೀ ಸಪ್ತಕದಲ್ಲಷ್ಟೇ ಅಲ್ಲ. ಪ್ರತಿ ಸ್ವರಕ್ಕೂ ಒಂದು ಆರೋಹ-ಅವರೋಹಣಗಳಿವೆ. ನಾನಂತೂ ಬಹುಶಃ ಗುರುಗಳು ನನ್ನನ್ನು ಒಂದೋ ಪರೀಕ್ಷೆ ಮಾಡುತ್ತಿದ್ದಾರೆ ಅಥವಾ ತಮಾಷೆ ಮಾಡುತ್ತಿದ್ದಾರೆ ಎಂದುಕೊಂಡು ಸುಮ್ಮನೆ ಕುಳಿತುಬಿಟ್ಟೆ. ನನ್ನ ಗಲಿಬಿಲಿ ಅವರಿಗೆ ಅರ್ಥವಾಯಿತೇನೋ, ಹೇಳಿದರು 'ತಂಬೂರಿ ತಗೋ. ತೋರಿಸ್ತೇನೆ'.
ತಂಬೂರಿ ನುಡಿಸತೊಡಗಿದೆ. ಗುರುಗಳು ಹೇಳಿದರು, 'ನೋಡು ಈಗ. ನೀನು 'ಗ'- ಗಾಂಧಾರವನ್ನು ಹಾಡಬೇಕು. ಆದರೆ ಸುಮ್ಮನೇ ಅಲ್ಲ. ಮೊದಲು ಅದರ ಹಿಂದಿನ ಸ್ವರ 'ರೆ'ಯನ್ನು ಮನಸ್ಸಿನಲ್ಲಿ ಯೋಚಿಸಿ, ಹಾಡುವಾಗ 'ಗ' ಹಾಡು. ಮತ್ತು ಅದನ್ನು ಸೂಕ್ಷ್ಮವಾಗಿ ಗಮನಿಸು'. ನಾನು ಹಾಗೆ ಹಾಡುತ್ತ ಅದನ್ನು ಗಮನಿಸತೊಡಗಿದೆ. ಹೌದು ನಾನು ರೆ-ಗ ಎಂದೇನೂ ಹಾಡದಿದ್ದರೂ 'ಗ' ಎನ್ನುವಾಗ ನನಗೇ ಅರಿವಿಲ್ಲದಂತೆ ಕ್ಷಣ ಮಾತ್ರದಲ್ಲಿ ಅದರ ಕೆಳಗಿನ ಪರಿಧಿಯಿಂದ ಬಂದು 'ಗ'ವನ್ನು ಸೇರುತ್ತಿದ್ದೆ. ಏಕೆಂದರೆ ನಾನು 'ರೆ'ಯ ಕುರಿತು ಚಿಂತಿಸುತ್ತಿದ್ದೆ. ಅದು 'ಗ' ಗಾಂಧಾರದ ಆರೋಹ. ನನಗೆ ತಿಳಿದಿದ್ದನ್ನು ನೋಡಿ ಗುರುಗಳು ಹೇಳಿದರು, 'ಈಗ ಹಾಗೆಯೇ 'ಮ'ವನ್ನು ಚಿಂತಿಸಿ 'ಗ' ಹಾಡು'. ಹಾಗೆ ಮಾಡಿದಾಗ ನಾನು ಅದರ ಮೇಲಿನ ಪರಿಧಿಯಿಂದ ಬಂದು ಅದನ್ನು ಸೇರತೊಡಗಿದೆ, ಅವರೋಹಣದಂತೆ.
ಅಬ್ಬ ಈ ಸ್ವರದ ಸೂಕ್ಷ್ಮತೆಯೇ! ಪ್ರತಿದಿನ ಹಾಡುತ್ತಿದ್ದರೂ ಈ ಅಂಶವನ್ನು ಗಮನಿಸಿಯೇ ಇರಲಿಲ್ಲವಲ್ಲ. ನಾನೇ ಹಾಡುತ್ತಿದ್ದರೂ ಈಗ ಆ ದೃಷ್ಟಿ ಸಿಕ್ಕಾಗ, ಅದು ಹೊಚ್ಚ ಹೊಸದಾಗಿ ಕಾಣತೊಡಗಿತು. ಗುರುಗಳು ಮುಂದುವರಿಸಿದರು, 'ಈ ವಿಷಯ ಯಾಕೆ ಮಹತ್ವದ್ದು ಎಂದರೆ ಪ್ರತೀ ಸ್ವರಕ್ಕೂ ಅದರದೇ ಆದ ಒಂದು ಪರಿಧಿ (ಔರಾ) ಇರುತ್ತದೆ. ಬಾಳೆ ಎಲೆಯ ಹಾಗೆ ಈ ಸ್ವರಗಳು. ಮಧ್ಯದ ದೇಟು -ಸ್ವರದ ಮೂಲ. ಅದರ ಎರಡೂ ಪಕ್ಕ ಎಲೆ ಹರಡಿರುವ ಹಾಗೆ ಸ್ವರದ ಸುತ್ತ ಅದರ ಪ್ರಭಾವಳಿ ಇರುತ್ತದೆ. ಏಕೆಂದರೆ ಈ ಸ್ವರಗಳು ಕೇವಲ ಸಪ್ಪಳಗಳಲ್ಲ, ಅವು ನಾದಗಳು - ಅಂದರೆ ಅವಕ್ಕೆ ಅನುರಣನೆ (ರೆಸೋನೆನ್ಸ್) ಇರುತ್ತದಲ್ಲವೆ? ಹೀಗೆ ಒಂದೊಂದು ರಾಗದ ಆಲಾಪನೆ ಮಾಡುವಾಗಲೂ ಈ ಸ್ವರಗಳ ಆರೋಹ, ಅವರೋಹಗಳನ್ನು ನಿಖರ ಹಾಗೂ ಸ್ಪಷ್ಟಗೊಳಿಸಿಕೊಳ್ಳುತ್ತ ಹೋದಹಾಗೆ ಸ್ವರ-ಸ್ವರಗಳ ನಡುವಿನ ನಂಟು ಪರಿಶುದ್ಧವಾಗಿ, ಗಾಯನ ಸುರೀಲಿ ಹಾಗೂ ಆನಂದದಾಯಕವಾಗುತ್ತದೆ. ಹೀಗೆ, ಆಯಾ ರಾಗದ ಒಂದೊಂದೂ ಸ್ವರದ ಹಿಂದಿನ ಹಾಗೂ ಮುಂದಿನ ಸ್ವರಗಳ ಜತೆಗಿನ ಅದರ ಈ ಸಂಬಂಧವೇ ಆ ಸ್ವರವನ್ನು ನಿರ್ಧರಿಸುತ್ತದೆ. ಈ ಪ್ರಕ್ರಿಯೆಯಿಂದಲೇ ದರ್ಬಾರಿ ಕಾನಡಾದ ಕೋಮಲ ಗಾಂಧಾರ, ಮಿಯಾ ಮಲ್ಹಾರದ ಕೋಮಲ ಗಾಂಧಾರ ಎರಡೂ ಬೇರೆಯಾಗಿ ಕೇಳಿಸುತ್ತವೆ. ಇದೇ ರಾಗದ ಜೀವಾಳ. ಇದೇ ಅಂಶ ಒಬ್ಬ ಸಂಗೀತಗಾರನ ಗುಣಮಟ್ಟ ಎಷ್ಟು ಉತ್ತಮ ಎಂಬುದನ್ನು ನಿರ್ಧರಿಸುತ್ತದೆ'.
ಒಂದು ಮನೆಯಲ್ಲಿ ಐದೋ - ಆರೋ ಜನರಿರಬಹುದು. ಆದರೆ ಅಷ್ಟರಿಂದ ಅದು ಕುಟುಂಬ ಆಗಲಾರದು. ಅವರಲ್ಲಿ ಒಬ್ಬರಿಗೊಬ್ಬರಿಗೆ ಇರುವ ಸಂಬಂಧ, ನಂಟು ಹೇಗೆ ಅವರನ್ನು ಬೆಸೆದು ಒಂದು ಕುಟುಂಬವನ್ನಾಗಿಸುವುದೋ ಹಾಗೆ ಈ ಸ್ವರ-ಸ್ವರಗಳ ನಡುವಿನ ಸಂಬಂಧ ಅವುಗಳನ್ನು ಬೆಸೆದು ಒಂದು ರಾಗ ಎಂಬುದು ಉತ್ಪತ್ತಿಯಾಗುತ್ತದೆ.
ಜೀವಿ-ಜೀವಿಗಳ ನಡುವಿನ ನಂಟು - ಜೀವನದ ಅರ್ಥ ತಿಳಿಸುವಂತೆ ಸ್ವರ-ಸ್ವರಗಳ ನಡುವಿನ ಈ ಬೆಸುಗೆಯೇ ರಾಗದ ಜೀವಾಳ. ಸಂಗೀತದ ಆಳಕ್ಕಿಳಿಸುವ, ಅದರ ಹತ್ತಿರವಾಗುವ ಮಹತ್ವದ ಅಂಶ. (ಮುಂದುವರಿಯುವುದು)
- ಶ್ರುತಿ ಭಟ್
shrutikbhat@gmail.com