ಹಸಿವ ನೀಗುವ ಶಕ್ತಿ ರಕ್ತಕ್ಕಿಲ್ಲ/ ಕಷ್ಟವ ಕೊಲ್ಲುವ ಸಾಮರ್ಥ್ಯ ಕಣ್ಣೀರಿಗಿಲ್ಲ/ ಹಾಗಾದರೆ? ಹರಿಸಿ ನೋಡು ಬೆವರ/ ಸಿಕ್ಕರೂ ಸಿಗಬಹುದು ಉತ್ತರ/- ಎಂದು 'ಬೆವರು' ಕವಿತೆಯಲ್ಲಿ ಬರೆದಿರುವ ಎಸ್. ಶಿಶಿರಂಜನ್ ಅವರು ಉತ್ತಮ ಕವಿ ಎನ್ನುವುದಕ್ಕೆ ಬೇರೆ ಯಾರ ಶಿಫಾರಸೂ ಬೇಕಾಗಿಲ್ಲ. ಮೊದಲ ಸಂಕಲನ, ತೊದಲು ನುಡಿಗಳು ಎಂದೆಲ್ಲ ಅವರು ಮುನ್ನುಡಿಯಲ್ಲಿ ಹೇಳಿಕೊಂಡಿದ್ದಾರೆ. ಅದು ಅವರ ವಿನಯವಂತಿಕೆ ಅಷ್ಟೇ. ಈ ಸಂಕಲನದಲ್ಲಿ ಚಿಕ್ಕವು ದೊಡ್ಡವು ಎಂದು 95 ಕವಿತೆಗಳಿವೆ. ಮುಕ್ಕಾಲು ಪಾಲಿಗೂ ಅಧಿಕ ಉತ್ತಮ ಎನ್ನಬಹುದಾದ ಕವಿತೆಗಳೇ. 'ಕವಿತೆ ನನ್ನ ಕವಿತೆ ಬರಿ ಪ್ರಣಯದ ಗೀತೆಯಲ್ಲ, ಗೆಳತಿಗೆ ಮಾತ್ರ ಮೀಸಲಲ್ಲ' ಎಂದು ಹೇಳಿರುವ ಮಾತುಗಳಲ್ಲಿ ಪ್ರಾಮಾಣಿಕತೆ ಇದೆ. ಈ ಹಿನ್ನೆಲೆಯಲ್ಲಿಯೇ ಆರಂಭದಲ್ಲಿ ಬರೆದ ಸಾಲುಗಳನ್ನು ಗಮನಿಸಬೇಕು. 'ಅದೇ ಹೂವು ಅದೇ ಚಿಟ್ಟೆ ಹೊಸತು ಮಿಲನವು, ಅದೇ ಅಂಬರ ಅದೇ ನೇಸರ ಹೊಸತು ಉದಯವು' ಎಂಬಂಥ ಗೇಯತೆಯುಳ್ಳ ಕವಿತೆಗಳೂ ಇದರಲ್ಲಿವೆ.
ಕೃತಿ: ಸಂವೇದನೆ, ಪ್ರಕಾರ: ಕವನ, ಏಕೆ ಓದಬೇಕು?: ಹೊಸ ಕವಿಯ ಬೆನ್ನುತಟ್ಟಲು
ಪ್ರ: ಭಾಗೀರಥಿ ಪ್ರಕಾಶನ, ಮೈಸೂರು. ಪುಟಗಳು 120, ಬೆಲೆ ರು. 100
ಮನುವಿಹಾರ
ಸರ್ಕಾರಿ ಸೇವೆಯಲ್ಲಿದ್ದು ಈಗ ನಿವೃತ್ತರಾಗಿರುವ ಮನು ಬಳಿಗಾರ ಅವರು ಕಳೆದ ಹತ್ತು ವರ್ಷಗಳಲ್ಲಿ ಬರೆದ ಲೇಖನಗಳು, ಮಾಡಿದ ಉಪನ್ಯಾಸಗಳು ಮತ್ತು ಸಾಂದರ್ಭಿಕ ಬರೆಹಗಳ ಸಂಕಲನ 'ಸಂಸ್ಕೃತಿ ವಿಹಾರ' ಕೃತಿಯಾಗಿದೆ. ಇದರಲ್ಲಿ 29 ಲೇಖನಗಳಿವೆ. ಗಾಂಧೀಜಿಯ ಸತ್ಯಶೋಧನೆಯನ್ನು ಹೊಸ ನೆಲೆಯಲ್ಲಿ ನೋಡುವ, ಕುವೆಂಪು ಸಾಹಿತ್ಯದ ಸಂಸ್ಕೃತಿ ದರ್ಶನ ಮಾಡಿಸುವ, ಕಣವಿ ಕಾವ್ಯದ ನಾದಕ್ಕೆ ಶ್ರುತಿ ಹಿಡಿಯುವ, ದೊಡ್ಡರಂಗೇಗೌಡರ ಕಾವ್ಯಕ್ಕೆ ಕರಗುವ, ದೇಜಗೌ ವ್ಯಕ್ತಿತ್ವಕ್ಕೆ ಮಾರುಹೋಗುವ, ಕಲಬುರ್ಗಿಯವರಿಗೆ ಶರಣೆನ್ನುವ ಲೇಖನಗಳು ಇಲ್ಲಿವೆ. ಸುಮಿತ್ರಾ ಗಾಂಧಿಯವರ ಬಗ್ಗೆ, ಯಾವ ಮಿತಿಗಳೂ ಇಲ್ಲದ ಗಾಢವಾದ ಮಾನವ ಸಂಬಂಧಗಳನ್ನು ಕಾಯ್ದುಕೊಳ್ಳುವ ಬಗ್ಗೆ, ಆಡಳಿತದಲ್ಲಿ ಕನ್ನಡದ ಬಗ್ಗೆ ... ಹೀಗೆ ಮನು ಅವರ ಚಿಂತನೆಗಳಿಗೆ ಯಾವುದೇ ಗಡಿಗಳಿಲ್ಲ. ಸುದೀರ್ಘ ಅವಧಿಯ ಸಾರ್ವಜನಿಕ ಬದುಕಿನ ಅನುಭವ ಸಾರವನ್ನು ಬಳಿಗಾರರು ಇಲ್ಲಿ ಓದುಗರಿಗೆ ಬಡಿಸಿದ್ದಾರೆ.
ಕೃತಿ: ಸಂಸ್ಕೃತಿ ವಿಹಾರ, ಪ್ರಕಾರ: ಸಂಕೀರ್ಣ, ಏಕೆ ಓದಬೇಕು?: ಕರ್ನಾಟಕ ಸಾಂಸ್ಕೃತಿಕ ಬದುಕಿನ ಒಳನೋಟಕ್ಕಾಗಿ,
ಪ್ರ: ಐಬಿಎಚ್ ಪ್ರಕಾಶನ, ಬೆಂಗಳೂರು. ಪುಟಗಳು 168, ಬೆಲೆ ರು. 120