ಕತ್ತೆಯಲ್ಲ ಕುದುರೆ

ಕತ್ತೆಯಲ್ಲ ಕುದುರೆ
Updated on: 

ವಿಕ್ರಮಪುರವೆಂಬ ರಾಜಧಾನಿಯೊಂದಿತ್ತು. ಅಲ್ಲಿ ವಿದಂಡನೆಂಬ ರಾಜನು ರಾಜ್ಯವಾಳುತ್ತಿದ್ದನು. ಹಿರಿಯರು ಕಿರಿಯರು ಎಂಬ ಬೇಧವಿಲ್ಲದೇ ಮಾತನಾಡುವುದು ಅವನ ಸ್ವಭಾವವಾಗಿತ್ತು. ತಂದೆ, ಬಂಧು, ಮಂತ್ರಿ, ಪ್ರಜೆ, ಸೇವಕರು ಯಾರೇ ಇದ್ದರೂ ಎಲ್ಲರನ್ನೂ ಒಂದೇ ರೀತಿ ಮಾತನಾಡಿಸುತ್ತಿದ್ದನು. ಇದರಿಂದ ಕುದುರೆಯನ್ನು ಕತ್ತೆಯೆಂದು ಹೀಗಳೆಯುವ ಎಷ್ಟೋ ಪ್ರಸಂಗಗಳಿಂದ ಮಂತ್ರಿಗೆ ಮುಜುಗರವಾಗಿತ್ತು.
ಇದರಿಂದ ಪ್ರಜೆಗಳಿಗೆ ರಾಜನ ಬಗ್ಗೆ ಗೌರವಗಳೇ ಉಳಿಯದಂತಾಯಿತು. ಆಗ ಮಂತ್ರಿಯು ಹೇಗಾದರೂ ಮಾಡಿ ಇದಕ್ಕೆ ಉಪಾಯ ಮಾಡಬೇಕೆಂದು ಯೋಚಿಸಿ ರಾಜಧಾನಿಯಲ್ಲಿ ಎಲ್ಲರ ಕ್ಷೇಮಕ್ಕಾಗಿ ಯಜ್ಞವೊಂದನ್ನು ಮಾಡಲು ನಿರ್ಧರಿಸಿ ರಾಜನಿಗೆ ತಿಳಿಸಿದನು. ಆ ದಿನ ಎಲ್ಲ ಕುದುರೆಗಳನ್ನೂ ಮೇಯಿಸಿ ಶೃಂಗರಿಸಿ ರಾಜಬೀದಿಯಲ್ಲಿ ಅಶ್ವ ಸಂಚಲನ ಮಾಡಿಸಲು ತಿಳಿಸಿದನು.
ಅದೇ ರೀತಿ ಎಲ್ಲ ಸಾಮಂತರು, ದಂಡಾಧಿಪತಿಗಳು, ಸಭಾಪತಿಗಳು, ಖೇಣಿದಾರರು, ಸಣ್ಣ ವಗೆತನುದಾರರು, ಜಮೀನ್ದಾರು, ಪ್ರಜೆಗಳು, ರಾಜಧಾನಿಯ ಅಶ್ವ ವಿಭಾಗದವರು ರಾಜನ ಆಜ್ಞೆ, ಗುರುವಿನ ಪ್ರಜ್ಞೆ, ಮಾತೆಯ ಸಂಜ್ಞೆ ಮರೆತರೆ ಉಳಿವುಂಟೆ? ಆಯಿತೆಂದರು. ಆ ದಿನ ಹೇಳಿದಂತೆ ಎಲ್ಲರೂ ಅಶ್ವ ಸಂಚಲನಕ್ಕೆ ತಯಾರಾಗಿ ರಾಜಬೀದಿಯಲ್ಲಿ ಬಂದು ನಿಂತರು. ಆಗ ಮಂತ್ರಿಯು ರಾಜನನ್ನು ಅರಮನೆಯ ಉಪ್ಪರಿಗೆಯ ಮೇಲೆ ನಿಂತು ನೋಡಲು ನಿಲ್ಲಿಸಿದ್ದನು. ನೋಡಿದ ತಕ್ಷಣ ರಾಜನು ಅಯ್ಯೋ! ಕತ್ತೆಗಳೇ! ನಾನು ಕುದುರೆಗಳನ್ನು ಶೃಂಗರಿಸಿ ಕರೆತರಲು ಹೇಳಿದರೆ ತಾವೆಲ್ಲ ಕತ್ತೆಗಳನ್ನು ತಂದು ನಿಲ್ಲಿಸಿದ್ದೀರಲ್ಲ. ನಿಮ್ಮಂಥ ಕತ್ತೆಗಳಿಗೆ ಹೇಳುವ ನಾನೇ ಒಂದು ದೊಡ್ಡ ಕತ್ತೆ ಎನ್ನುತ್ತಾ ಕೂಗಾಡಲು- ಎಲ್ಲರೂ ಏಕಕಾಲಕ್ಕೆ ಧ್ವನಿತೆಗೆದು ಪ್ರಭುಗಳು ಮನ್ನಿಸಬೇಕು. ನಾವೆಲ್ಲಾ ಕುದುರೆಗಳೊಂದಿಗೇ ನಿಂತಿದ್ದೇವೆ. ಕಪ್ಪಾದ ಕಣ್ಣಿನ ದೃಷ್ಟಿಗೆ ಬೆಳಕು ಕಪ್ಪಾಗಿ ಕಾಣುವಂತೆ ತಮಗೆ ದೃಷ್ಟಿದೋಷವಾಗಿರಬೇಕು ಪ್ರಭು. ಇವು ನಿಜವಾಗಿ ಕುದುರೆಗಳು! ಕುದುರೆಗಳು! ಎಂದು ಜೋರಾಗಿ ಕೂಗಲಾರಂಭಿಸಿದರು.
ಸಾವಿರ ಮಂದಿ ಕೂಡಿ ಹೇಳಿದ ಸುಳ್ಳೂ ಸತ್ಯವಾಗಬಹುದು ಎಂಬ ಗಾದೆಯಂತೆ ರಾಜನು ಗೊಂದಲಕ್ಕೊಳಗಾಗಿ ಅರಮನೆಯ ಒಳಗೆ ಬಂದು ಚಿಂತಿತನಾಗಿ ಮಂತ್ರಿಯನ್ನು ಕೇಳಲು 'ಹೌದು ಅವು ಕತ್ತೆಗಳೇ! ಕುದುರೆಗಳಲ್ಲ. ಹೇಗೆ ಕತ್ತೆಗಳನ್ನು ಕುದುರೆಗಳು ಎನ್ನಲಾಗುವುದಿಲ್ಲವೋ, ಹಾಗೇ ಕುದುರೆಗಳನ್ನೂ ಕತ್ತೆಗಳು ಎನ್ನಲಾಗದು. ಹಾಗೆಯೇ ಮನುಷ್ಯರನ್ನೂ ಅವರವರ ವ್ಯಕ್ತಿತ್ವ, ಗುಣ ಸ್ವಭಾವದಂತೆ ಪರಿಗಣಿಸಬೇಕು' ಎಂದು ವಿನಮ್ರನಾಗಿ ನುಡಿದ.
ರಾಜನಿಗೆ ತನ್ನ ತಪ್ಪಿನ ಅರಿವಾಯಿತು. ಅಂದಿನಿಂದ ಆತ ತನ್ನ ಮಾತಿನ ಧಾಟಿಯನ್ನು ಬದಲಿಸಿಕೊಂಡು ರಾಜ್ಯಭಾರ ಮಾಡತೊಡಗಿದ.

-ಲಲಿತಾ ಕೆ. ಹೊಸಪ್ಯಾಟಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com