ಋಣದ ನೆರಳಿನ ಪ್ರೀತಿ

ಪರಿಶುದ್ಧ, ಪ್ರಾಮಾಣಿಕ ಪ್ರೀತಿಯೊಂದು ತನ್ನ ಸೆರಗಿನಂಚಿನಲ್ಲಿ ನಗುತ್ತಿದ್ದರೂ ಆಕೆ ಮಾತ್ರ ಆ ಪ್ರೀತಿಯನ್ನು ಅಪ್ಪಿಕೊಳ್ಳುವುದಿಲ್ಲ. ಆದರೂ ಆಕೆಗೆ ಅಂಥದ್ದೊಂದು ನಿರ್ಮಲ ಪ್ರೇಮದ ಮನಸ್ಸು ಬೇಕಿದ್ದರೂ ಅದಕ್ಕೆ ಬೆನ್ನುತಿರುಗಿಸುತ್ತಾಳೆ. ಯಾಕೆಂದರೆ ಅವಳು ಮತ್ತೊಬ್ಬನ ಹುಸಿ ಪ್ರೇಮದಲ್ಲಿ ಬಂಧಿತಳಾಗಿದ್ದಾಳೆ. ಆದರೆ ನಿಜವಾದ ಪ್ರೀತಿಯ ಮನಸ್ಸು ಮಾತ್ರ ಆಕೆಯ ಅಕ್ಕಪಕ್ಕದಲ್ಲೇ ಪಯಣಿಸುತ್ತದೆ. ಇಷ್ಟಪಟ್ಟು ಕಟ್ಟಿಕೊಂಡ ಹುಸಿ ಪ್ರಿಯಕರನನ್ನೂ ದೂರ ಮಾಡುತ್ತಾಳೆ. ಹಾಗಾದರೆ ತನಗಾಗಿ ಕಾಯುವ ಪ್ರೀತಿಯ ಜೀವಕ್ಕೆ ಹತ್ತಿರವಾಗುತ್ತಾಳೆಯೇ? ಇಲ್ಲ, ಮತ್ತೊಬ್ಬನ ಹಿಂದೆ ಹೊರಡುತ್ತಾಳೆ. ಆತನಿಗೆ ಮದುವೆಯಾಗಿದೆ. ಒಂದು ಮಗು ಇದೆ. ಪತ್ನಿ ಹಾಸಿಗೆ ಹಿಡಿದಿದ್ದಾಳೆ. ಅಂಥವನ ಹಿಂದೆ ಹೋಗುವ ಈಕೆಗೆ ಅಲ್ಲೂ ಪ್ರೀತಿ ಸಿಕ್ಕಲ್ಲ. ಮತ್ತೆ ಅಲ್ಲಿಂದ ಹೊರ ನಡೆಯುತ್ತಾಳೆ.
ಈ ನಡುವೆ ನಿರ್ದೇಶಕನೊಟ್ಟಿಗೆ ತನ್ನ ಜೀವನದ ಕನಸು ಕಾಣುತ್ತಾಳೆ. ಆತನೂ ನಡು ನೀರಿನಲ್ಲಿ ಕೈ ಬಿಡುತ್ತಾನೆ. ಪ್ರತಿ ಹಂತದಲ್ಲೂ ಆಕೆ ಪ್ರೀತಿಯಿಂದ ವಂಚಿತಳು. ಯಾರು ತನ್ನನ್ನು ಗೌರವಿಸಬೇಕು, ತನ್ನ ಬದುಕಿನ ನೆಲೆಗೆ ನೆರಳಾಬೇಕು ಎಂದುಕೊಳ್ಳುತ್ತಾಳೋ ಅವರು ಆಕೆಯನ್ನು 'ಬಳಸಿ'ಕೊಳ್ಳುತ್ತಾರಷ್ಟೇ. ಈಕೆಯ ಜೀವನದಲ್ಲಿ ಬಂದು ಹೋಗುವ ಗಂಡಸರಿಗೆ ಅವಳ ಅಂತರಂಗದ ತಳಮಳಗಳು ಬೇಕಿಲ್ಲ... ಹೀಗೆ ಸಾಗುತ್ತದೆ ಶ್ಯಾಮ್ ಬೆನಗಲ್ರ 'ಭೂಮಿಕಾ' ಚಿತ್ರ. ಗಂಡ ಕೇಶವ, ಪ್ರೀತಿಸುತ್ತೇನೆಂದಸುನೀಲ್, ಕಾಳೆ ಎಲ್ಲರಿಗೂ ಉಷಾ ಬೇಕು. ಆದರೆ ಆಕೆಯ ಮನಸ್ಸು ಮಾತ್ರ ಬೇಡ ಎನ್ನುವವರ ನಡುವೆ ಹೆಣ್ಣಿನ ಮನಸ್ಥಿತಿಯನ್ನು ತೆರೆದಿಡುತ್ತಾರೆ ಬೆನಗಲ್. ಮರಾಠಿ ರಂಗಭೂಮಿಯ ಪ್ರಸಿದ್ಧ ಕಲಾವಿದೆ ಹನ್ಸಾ ವಾಡ್ಕರ್ ಅವರ ಜೀವನ ಆಧರಿಸಿದ ಚಿತ್ರವಿದು. ಈ ಚಿತ್ರವನ್ನು ನೋಡದವರು ಕಡಿಮೆ!
ಬೆನಗಲ್ರ ಪ್ರತಿ ಚಿತ್ರವೂ ಸಾಮಾಜಿಕ ವ್ಯವಸ್ಥೆಯ ಕನ್ನಡಿಗಳು. 'ಅಂಕುರ್', 'ನಿಶಾಂತ್', 'ಮಂಥನ್', 'ಜುನೂನ್', 'ಕಲಿಯುಗ್', 'ಮಂಡಿ', 'ತ್ರಿಕಾಲ್', 'ಮಮ್ಮೊ', 'ಸರ್ದಾರಿ ಬೇಗಮ್', 'ದ ಮೇಕಿಂಗ್ ಆಫ್ ಮಹಾತ್ಮ', 'ಸಮರ್', 'ಜುಬೇದಾ'... ಮುಂತಾದವು. ಬಡವನ ಗೋಳು, ಹೆಣ್ಣಿನ ಶೋಷಣೆ, ಸ್ತ್ರೀಪರ ಚಿಂತನೆಗಳು, ಅನ್ಯಾಯದ ವಿರುದ್ಧ ಸಿಡಿದೇಳುವ ಧ್ವನಿಗಳು ಬೆನಗಲ್ರ ಚಿತ್ರಗಳನ್ನು ಅಲಂಕರಿಸಿರುತ್ತವೆ. ಹೀಗಾಗಿ ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆಯ ಚಿತ್ರಗಳ ಹಿಂದೆ ಕೇಳಿ ಬರುವ ಹೆಸರು ಶ್ಯಾಮ್ ಬೆನಗಲ್. ಹಣವೇ ಮುಖ್ಯ ಎನ್ನುವ ಸಿನಿಮಾ ಎಂಬ ಕಮರ್ಷಿಯಲ್ ಜಗತ್ತಿನಲ್ಲಿ ಕೇವಲ ಹಣದ ಹಿಂದೆ ಹೋಗಲಿಲ್ಲ. 12ನೇ ವಯಸ್ಸಿಗೆ ಕಿರು ಚಿತ್ರವನ್ನು ಮಾಡಿದವರು. ವ್ಯಾಣಿಜ್ಯ ಮತ್ತು ಕಲೆ ಎರಡನ್ನೂ ಚೆನ್ನಾಗಿ ಅರಿತಿದ್ದ ಬೆನಗಲ್, ನಿಜವಾದ 'ಸಿನಿಮಾ ಸಂಸ್ಕೃತಿ'ಯನ್ನು ಬಿಂಬಿಸಿದ ಚಿತ್ರಕರ್ಮಿ.
ಆದರೆ ಬೆನಗಲ್, ತಮ್ಮ ನಿಜವಾದ ಸಿನಿಮಾ ಚಿಂತನೆಗಳಿಂದ ದೂರವಾಗಿ ಬಾಲಿವುಡ್ನ ಅದೇ ಮಸಾಲ ಸೂತ್ರಗಳಿಗೆ ಒಳಗಾಗಿದ್ದಾರೆ ಎನ್ನುವ ಮಾತುಗಳು ಆಗಾಗ್ಗೆ ಕೇಳಿಬರುತ್ತವೆ. ದಾದಾಸಾಹೇಬ್ ಫಾಲ್ಕೆ ಗೌರವ ಸೇರಿದಂತೆ 15 ರಾಷ್ಟ್ರೀಯ ಪ್ರಶಸ್ತಿಗಳು, ಫಿಲ್ಮ್ಫೇರ್, ಗೋಲ್ಡನ್ ಪಾಮ್, ಪದ್ಮಶ್ರೀ, ಪದ್ಮಭೂಷಣ ಮುಂತಾದ ಗೌರವಗಳಿಗೆ ಪಾತ್ರರಾಗಿರುವ ಬೆನಗಲ್ರ 'ಭೂಮಿಕಾ' ಚಿತ್ರದ ವಿಚಾರಕ್ಕೆ ಬರುವುದಾದರೆ... ಅದು ಬಡತನವನ್ನು ಪಡಸಾಲೆಯಲ್ಲಿ ಮಲಗಿಸಿಕೊಂಡ ಕುಟುಂಬದ ಅದು. ಇದ್ದ ಒಬ್ಬ ಗಂಡು ಅನಾರೋಗ್ಯದಿಂದ ಹಾಸಿಗೆ ಹಿಡಿದ್ದಾನೆ. ವಯಸ್ಸಾದ ಹಿರಿಯ ಅಜ್ಜಿ. ಮಧ್ಯ ವಯಸ್ಸಿನ ಮಹಿಳೆ. ಇವರ ನಡುವೆ ಒಬ್ಬಳು ಪುಟ್ಟ ಹುಡುಗಿ ಉಷಾ. ಈ ಕುಟುಂಬದ ದಾರಿದ್ರ್ಯವನ್ನು ಬಂಡವಾಳ ಮಾಡಿಕೊಂಡು ಹಿತಚಿಂತಕನಂತೆ ನಟಿಸುತ್ತಲೇ ನಡುವಯಸ್ಸಿನವಳ ಮೇಲೆ ಕಣ್ಣು ಹಾಕುವ ಯುವಕ ಕೇಶವ.
ಆ ಮನೆ ಯಜಮಾನ ಕಾಲನ ಕರೆಗೆ ಓಗೊಟ್ಟ ಮೇಲೆ ಕೇಶವನೇ ಆ ಮನೆಗೆ ನೆರವಾಗುತ್ತಾನೆ. ಉಷಾಳಿಗೆ ಅಜ್ಜಿಯ ಸಂಗೀತವೇ ಬಾಲ್ಯದ ಗೆಳತಿ. ಒಂದಿಷ್ಟು ರಾಗಗಳನ್ನು ಕಲಿತಿರುವ ಉಷಾಳನ್ನು ಆಕೆಯ ತಾಯಿಯ ವಿರೋಧದ ನಡುವೆಯೇ ಕೇಶವ ಮುಂಬೈ ಸ್ಟುಡಿಯೋಗೆ ಉಷಾಳನ್ನು ಕರೆದುಕೊಂಡು ಹೋಗುತ್ತಾನೆ. ಉಷಾ ಬಾಲ ಗಾಯಕಿಯಾಗಿ ಆಯ್ಕೆಯಾಗುತ್ತಾಳೆ. ಮುಂದೆ ಉಷಾ ಮುಂಬೈ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಾಯಕಿಯಾಗುತ್ತಾನೆ. 'ನೀನು, ನಿನ್ನ ಕುಟುಂಬ ಚೆನ್ನಾಗಿರಲು ಕಾರಣ ನಾನೇ' ಎಂದು ಆಗಾಗ್ಗೆ ಕೇಶವ ಉಷಾಳಿಗೆ ನೆನಪಿಸುತ್ತಾನೆ. ಉಷಾ ಕೂಡ ಈ ಬದುಕು ಕೇಶವನ ಋಣ ಎಂದು ಭಾವಿಸುತ್ತಾಳೆ. ಈ ನಡುವೆ ತನ್ನ ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸುವ ನಟ ರಾಜನ್ ಉಷಾಳನ್ನು ಪ್ರೀತಿಸತೊಡಗುತ್ತಾನೆ. ಆದರೆ ಉಷಾ ಆಗಲೇ ಕೇಶವನ ಪ್ರೇಮದ 'ಋಣ'ದಲ್ಲಿ ಬಂಧಿ. ಕೇಶವನನ್ನು ಕೈಹಿಡಿದ ಮೇಲೆ ಚಿತ್ರರಂಗವನ್ನು ಬಿಡಬೇಕೆಂಬುದು ಆಕೆಯ ಯೋಚನೆ.
ಆದರೆ ಕೇಶವನಿಗೆ ಅದು ಬೇಕಿಲ್ಲ. ಆಕೆಯೂ ಬೇಕು, ಅವಳ ಹಣವೂ ಬೇಕು. ಹೀಗಾಗಿ ಮದುವೆಯಾದ ಮೇಲೆ ಉಷಾ ಒಂದು ಹೆಣ್ಣು ಮಗುವಿನ ತಾಯಿಯಾಗುತ್ತಾಳಷ್ಟೆ. ಸಾಲದಕ್ಕೆ ಕೇಶವನ ಅನುಮಾನದ ಪಿಶಾಚಿಗೆ ಉಷಾ ನರಕ ಅನುಭವಿಸುತ್ತಾಳೆ. ಗಂಡನ ಒತ್ತಾಯಕ್ಕೆ ಸಿನಿಮಾಗಳಲ್ಲಿ ಅಭಿನಯಿಸುತ್ತಲೇ ನೆಮ್ಮದಿಯ ಬದುಕು, ಪ್ರೀತಿಗಾಗಿ ತಡಕಾಡುತ್ತಾಳೆ. ಆಕೆಯ ಪ್ರೀತಿಯ ಹುಡುಕಾಟದಲ್ಲಿ ಸಿನಿಮಾ ನಿರ್ದೇಶಕ ಸುನೀಲ್, ವ್ಯಾಪರಸ್ಥ ಕಾಳೆ ಬಂದು ಹೋಗುತ್ತಾಳೆ. ಆದರೆ ಸ್ವಚ್ಛವಾಗಿ ಪ್ರೀತಿಸುವ ರಾಜನ್ ಮಾತ್ರ ದೂರದಲ್ಲಿ ನಿಂತಿದ್ದಾನೆ. ಉಷಾ ಮತ್ತು ಕೇಶವನ ಜಗಳದಿಂದಲೇ ಶುರುವಾಗುವ ಚಿತ್ರ ಹಲವು ತಿರುವುಗಳನ್ನು ಪಡೆದುಕೊಂಡು ಶೋಷಿತ ಹೆಣ್ಣೊಬ್ಬಳು ಪ್ರೌಢ ಮಹಿಳೆಯಾಗಿ ಪರಿವರ್ತನೆಗೊಳ್ಳುವ 'ಭೂಮಿಕಾ', ಪ್ರೇಕ್ಷಕನ ಆತ್ಮಸಂಗಾತಿಯಾಗುತ್ತದೆ.
ಉಷಾ ಪಾತ್ರದಲ್ಲಿ ಸ್ಮಿತಾ ಪಾಟೀಲ್, ಕೇಶವನಾಗಿ ಅಮುಲ್ ಪಾಲೇಕರ್, ಕಾಳೆಯಾಗಿ ಅಮರೀಷ್ ಪುರಿ, ಸುನೀಲ್ ಆಗಿ ನಾಸಿರುದ್ದೀನ್ ಶಾ ಒಬ್ಬೊಬ್ಬರು ಹೆಣ್ಣನ್ನು ಶೋಷಿಸುವ ಒಂದೊಂದು ಮುಖಗಳು. ಈ ಶೋಷಿತಮುಖಗಳ ನಡುವೆ ಶುದ್ಧ ಪ್ರೀತಿಯ ವ್ಯಕ್ತಿಯಾಗಿ ರಾಜನ್ ಪಾತ್ರದಲ್ಲಿ ಅನಂತನಾಗ್ ಕಾಣಿಸಿಕೊಳ್ಳುತ್ತಾರೆ. 'ನೋಡು ಉಷಾ, ಬದಲಾಗುವ ಮುಖವಾಡಗಳನ್ನು ನೀನು ತೆರೆ ಮೇಲೆ ನೋಡಿದ್ದೀಯಾ. ಆದರೆ ನಿಜ ಜೀವನದಲ್ಲಿ ಕಂಡಿಲ್ಲ. ಗಂಡಸರು ಎಂದೂ ಬದಲಾಗಲ್ಲ. ನೀನು ಈ ಮನೆ ಬಿಟ್ಟು ಹೋದರೆ ನಿನ್ನ ಅಡುಗೆಮನೆ ಬದಲಾಗಬಹುದು ಅಷ್ಟೆ' ಎನ್ನುವ ಕಾಳೆಯ ಮೊದಲ ಪತ್ನಿಯ ಮಾತು 'ಭೂಮಿಕಾ' ಚಿತ್ರಕ್ಕೆ ಹೊಸ ಭೂಮಿ ಕಟ್ಟಿಕೊಡುತ್ತದೆ. ಇಡೀ ಚಿತ್ರದ ಅಂತರಂಗವನ್ನು ಈ ಸಂಭಾಷಣೆಯಲ್ಲಿ ಬೆನಗಲ್ ಪ್ರೇಕ್ಷಕನೆದುರು ತಂದಿಡುತ್ತಾರೆ.
ಚಿತ್ರ: ಭೂಮಿಕಾ (1977)
ಭಾಷೆ: ಹಿಂದಿ
ನಿರ್ದೇಶನ: ಶ್ಯಾಮ್ ಬೆನಗಲ್
ಅವಧಿ: 142 ನಿಮಿಷ
ತಾರಾಗಣ: ಸ್ಮಿತಾ ಪಾಟೀಲ್, ಅಮುಲ್ ಪಾಲೆಕರ್, ಅನಂತನಾಗ್, ಅಮರೀಷ್ ಪುರಿ, ನಾಸಿರುದ್ದೀನ್ ಶಾ.
- ಆರ್. ಕೇಶವಮೂರ್ತಿ
keshavarkm1@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


