

ನಗರ ಎಂದೊಡನೆ ಪಟ್ಟಣದ ಕಲ್ಪನೆ ಎದುರಾಗುವುದು ಸಹಜ. ಆದರಿದು ಪಟ್ಟಣವಲ್ಲ ಹೆಸರಿಗೆ ಮಾತ್ರ ನಗರ ಎಂಬ ನಾಮಾಂಕಿತ ಹೊಂದಿದ ಪುಟ್ಟದೊಂದು ಹೋಬಳಿ.
ಇಲ್ಲಿ ಏನಿಲ್ಲ ಹೇಳಿ... ಪುರಾಣ, ಇತಿಹಾಸ, ಪ್ರಸ್ತುತ ಸನ್ನಿವೇಶದಲ್ಲೂ ಹಲವು ಪ್ರಥಮಗಳ ತಾಣ. ಅಂದು ಇಂದು ಪರೋಪಕಾರಕ್ಕಾಗಿ ತ್ಯಾಗ ಮಾಡಿದ ಹಿರಿಮೆ ಕೂಡ ಈ ಪ್ರದೇಶಕ್ಕಿದೆ. ಆದರೆ ದೀಪದ ಬುಡ ಕತ್ತಲು ಎನ್ನುವಂತೆ ಪರರಿಗಾಗಿ ತನ್ನದೆಲ್ಲವನ್ನೂ ಬರಿದು ಮಾಡಿಕೊಂಡ ಇಂಥ ನತದೃಷ್ಟ ಊರು ಮತ್ತೆಲ್ಲೂ ಉದಾಹರಣೆಗೆ ಸಿಗದು.
ಅಂದು ಆಶ್ರಯಕ್ಕಾಗಿ ಓಡೋಡಿ ಬಂದ ಶಿವಾಜಿ ಮಗ ರಾಜಾರಾಮನಿಗೆ ಆಶ್ರಯ ನೀಡಿದ್ದೇ ಶಾಪವಾಯಿತು. ಜನತಂತ್ರ ವ್ವವಸ್ಥೆ ಕಾಲಿಟ್ಟ ಮೇಲೆ ನಾಡಿನ ಬೆಳಕಿಗಾಗಿ ಮನೆ, ಜಮೀನು, ಸಕಲವನ್ನೂ ತ್ಯಾಗ ಮಾಡಿದ್ದೇ ಮುಳುವಾಯಿತು. ಮಾಡಿದ ತ್ಯಾಗಕ್ಕೆ ಪ್ರತ್ಯುಪಕಾರದ ಮಾತು ಹಾಗಿರಲಿ. ಕೃತಜ್ಞತೆಯ ನೋಟ ಕೂಡ ಇತ್ತ ಬೀರದಿರುವುದು ವ್ಯವಸ್ಥೆಯ ವಿಪರ್ಯಾಸ.
ಐತಿಹಾಸಿಕ ಆಕ್ರಮಣ
ಕೆಳದಿ ಅರಸರ ಮೂರನೇ ರಾಜಧಾನಿ ಬಿದನೂರು. ಅಲ್ಲಿಂದಲೇ ಕೆಳದಿ ಸಂಸ್ಥಾನ ತನ್ನ ವೈಶಿಷ್ಟ್ಯಪೂರ್ಣ ಆಡಳಿತದಿಂದಾಗಿ ದೇಶದಲ್ಲಿ ಮಾತ್ರವಲ್ಲ ನೆರೆದೇಶದಲ್ಲೂ ತನ್ನ ಮಹತ್ವ ಪಸರಿಸಿಕೊಂಡಿತು. ಇದಕ್ಕೂ ಮುನ್ನ ಇದಕ್ಕೆ 'ವೇಣುಪುರ' ಅಂತ ಕರೆಯಲಾಗುತ್ತಿತ್ತು. ಕೆಳದಿಯ ಬಹುಪಾಲು ಅರಸರು ಇಲ್ಲಿಂದಲೇ ಅಧಿಕಾರ ನಡೆಸಿದ್ದಾರೆ. ಅದಕ್ಕೆ ಪೂರಕವಾಗಿ 10 ಅರಸರ ಸಮಾಧಿಗಳು ಇಲ್ಲಿವೆ ಎನ್ನುವುದಕ್ಕಿಂತ ಹಾಳುಬಿದ್ದಿವೆ ಎನ್ನುವುದೇ ಸೂಕ್ತ. ಶಿಸ್ತಿನ ಶಿವಪ್ಪನಾಯಕ (1646-61), ಎರಡನೇ ವೆಂಕಟಪ್ಪ ನಾಯಕ (1661-62), ಭದ್ರಪ್ಪನಾಯಕ (1662-64), ಹಿರಿಯ ಸೋಮಶೇಖರ ನಾಯಕ (1664-72), ಚನ್ನಮ್ಮಾಜಿ (1672-98), ಹಿರಿಯ ಬಸಪ್ಪನಾಯಕ(1698-1715), ಇಮ್ಮಡಿ ಸೋಮಶೇಖರ ನಾಯಕ(1615-40) ಬಿದನೂರಿನಿಂದಲೇ ಆಡಳಿತ ನಡೆಸಿದವರಲ್ಲಿ ಪ್ರಮುಖರು.
ಅಂದಿನ ಆಳ್ವಿಕೆಯಲ್ಲಿ ಬಿದನೂರು ಪ್ರದೇಶದಲ್ಲಿ ಲಕ್ಷಕ್ಕೂ ಅಧಿಕ ಕಟ್ಟಡಗಳು, 3 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದ್ದು ಪ್ರಮುಖ ವಾಣಿಜ್ಯನಗರಿಯಾಗಿತ್ತು ಎಂಬ ಪ್ರತೀತಿಯನ್ನು ಈ ಪಳೆಯುಳಿಕೆಗಳು ಸ್ಪಷ್ಟೀಕರಿಸುವುದರಲ್ಲಿ ಸಂಶಯವಿಲ್ಲ.
ಶಿವಪ್ಪನಾಯಕನ ಕರಾರುವಾಕ್ಕು ಆಡಳಿತ, ಕೆಳದಿ ಚನ್ನಮ್ಮನ ವೀರಾವೇಶದಿಂದಾಗಿ ಬಿದನೂರು ತನ್ನದೇ ಐತಿಹಾಸಿಕ ಮಹತ್ವ ಪಡೆದಿದೆ. ಆದರೆ ಹೈದರಾಲಿಯ ವಿರೋಧ ಕಟ್ಟಿಕೊಂಡಿದ್ದ ಶಿವಾಜಿ ಮಗ ರಾಜಾರಾಮ ಆಶ್ರಯಕ್ಕಾಗಿ ಓಡೋಡಿ ಬಂದಿದ್ದು ಕೆಳದಿ ಚನ್ನಮ್ಮನ ಹತ್ತಿರ. ಸಹಾಯಕ್ಕಾಗಿ ಬಂದವರಿಗೆ ರಕ್ಷೆ ನೀಡಬೇಕೆಂಬ ಚನ್ನಮ್ಮನ ಪರೋಪಕಾರ ಧರ್ಮದಿಂದಾಗಿ ಹೈದರಾಲಿಯ ಮುನಿಸಿಗೆ ಕಾರಣವಾಗಿತ್ತು. ಅದೊಂದೇ ಕಾರಣಕ್ಕೆ ಇಡೀ ಬಿದನೂರು ಹೈದರನ ಕೈಸೇರಿದ್ದರೆ ಪರವಾಗಿರಲಿಲ್ಲ... ಆದರೆ, ಧ್ವಂಸವಾಯಿತು. ಮಾತ್ರವಲ್ಲ ಹೈದರ್ನಗರ ಎಂಬ ಮರುನಾಮಕರಣಗೊಂಡಿತು. ಇಂದು ಕೇವಲ ನಗರ ಎಂಬ ಹೆಸರಿನಲ್ಲಿ ಪ್ರಚಲಿತದಲ್ಲಿದೆ.
ಜನತಂತ್ರದ ಅಟ್ಟಹಾಸ
ಹೈದರಾಲಿಯ ಆಕ್ರಮಣದಿಂದ ಅಂದು ಕರ್ನಾಟಕದಲ್ಲೇ ಅತಿ ಹೆಚ್ಚು ಸಂಪದ್ಭರಿತ ನಗರ ಎಂಬ ಮನ್ನಣೆ ಪಡೆದಿದ್ದ ಬಿದನೂರು ನಾಮಾವಶೇಷಗೊಂಡಿತು. ಅಲ್ಲಿಂದ ಮೇಲೇಳಲು ಸಾಧ್ಯವಾಗಲಿಲ್ಲ. ಜನತಂತ್ರ ವ್ಯವಸ್ಥೆ ಬಂದ ನಂತರ ಅಭಿವೃದ್ಧಿಯ ಹೆಸರಿನಲ್ಲಿ ನಗರವನ್ನು ಹಾಳುಕೊಂಪೆ ಮಾಡಿದ್ದು ಮತ್ತೊಂದು ದುರಂತ. ಇದಕ್ಕೂ ಕಾರಣ ಇಲ್ಲಿಯ ನಿವಾಸಿಗಳ ತ್ಯಾಗದ ಮನೋಭಾವ.
ನಗರ ಒಂದು ಹೋಬಳಿ ಕೇಂದ್ರ. ಇಲ್ಲಿ ಬರೋಬ್ಬರಿ ನಾಲ್ಕು ಜಲಾಶಗಳ ಹಿನ್ನೀರು ವ್ಯಾಪಿಸಿದೆ ಎಂದರೆ ಅಚ್ಚರಿ ಬೇಡ. ಇದು ಈ ಗ್ರಾಮದ ವಾಸ್ತವ ಸ್ಥಿತಿ. ವಾರಾಹಿ ಯೋಜನೆಯ ಮಾಣಿ ಅಣೆಕಟ್ಟು, ಚಕ್ರಾ ಮತ್ತು ಸಾವೇಹಕ್ಲು ಅವಳಿ ಡ್ಯಾಂಗಳು ಇಲ್ಲಿವೆ. ಅಷ್ಟೆ ಅಲ್ಲ, ರಾಜ್ಯದ ಶೇ.30 ವಿದ್ಯುತ್ ಬವಣೆ ನೀಗಿಸುವ ಲಿಂಗನಮಕ್ಕಿ ಜಲಾಶಯದ ಹಿನ್ನೀರೂ ಇಲ್ಲಿಯ ಬಹುತೇಕ ಪ್ರದೇಶವನ್ನು ವ್ಯಾಪಿಸಿದೆ. ಲಿಂಗನಮಕ್ಕಿ ಡ್ಯಾಂ ತುಂಬಲು ನಗರ ಹೋಬಳಿಯಲ್ಲಾಗುವ ಮಳೆಯ ಪ್ರಮಾಣದ ಮೇಲೆ ಅವಲಂಬಿತ. ಹಾಗಾಗಿಯೇ ಅಧಿಕಾರಿಗಳ ನೋಟ ಇತ್ತಕಡೆಯೇ ಹೊರಳುತ್ತದೆ.
ಈ ಯೋಜನೆಗಳ ಕಾರ್ಯಗತದ ನಂತರ ಬೀದಿಗೆ ಬಂದ ಸಂತ್ರಸ್ತ ಕುಟುಂಬಗಳು ಸಮರ್ಪಕ, ಪುನರ್ವಸತಿ ಪರಿಹಾರಕ್ಕಾಗಿ ಕಳೆದ ನಾಲ್ಕಾರು ದಶಕದಿಂದ ಸರ್ಕಾರದೊಂದಿಗೆ ಗುದ್ದಾಟ ನಡೆಸುತ್ತಲೇ ಇದ್ದಾರೆ. ಇನ್ನು ಯೋಜನೆ ಅನುಷ್ಠಾನಗೊಳ್ಳುವ ವೇಳೆ ವಸಾಹತು ನಿರ್ಮಾಣ, ನಾಗರಿಕ ಸೌಲಭ್ಯ, ಕುಟುಂಬಕ್ಕೊಂದು ಉದ್ಯೋಗ ಸೇರಿ ಭರವಸೆಗಳ ಬಣ್ಣದ ಮಾತುಗಳಿಂದ ಸ್ಥಳೀಯ ನಿವಾಸಿಗಳನ್ನು ಒಪ್ಪಿಸಿದ ಸರ್ಕಾರ ಕೊನೆಗೆ ಸುವ್ಯಸ್ಥಿತ ಕಟ್ಟಡಗಳು, ರಸ್ತೆ, ನೀರು, ಆಸ್ಪತ್ರೆ, ಅಂಚೆ ಕಚೇರಿ ಇದರೊಂದಿಗೆ ಹತ್ತಾರು ಸೌಲಭ್ಯ ಕಂಡಿದ್ದ ಕೆಪಿಸಿ ವಸಾಹತನ್ನಾದರೂ ಹಾಗೆಯೇ ಉಳಿಸಿ ಎಂಬ ಜನರ ಕೂಗಿಗೆ ಸ್ಪಂದಿಸದೆ ನೆಲಸಮ ಮಾಡಿ ಕಾಲ್ಕಿತ್ತಿತು.
ಶಾಪ...
ಸಮೃದ್ಧ ಸಸ್ಯಕಾಶಿ, ಗಿರಿ-ಕಂದರಗಳು, ಆಕಾಶಕ್ಕೆ ನಿಲುಕುವ ಬೆಟ್ಟಗುಡ್ಡಗಳ ಸಾಲು, ಅಪೂರ್ವ ವನ್ಯಜೀವಿಗಳ ಆಗರ, ಇವೆಲ್ಲಾ ಇಲ್ಲಿಯ ಪ್ರಾಕೃತಿಕ ಶ್ರೀಮಂತಿಕೆಯ ದ್ಯೋತಕ. ಇದೇ ಶ್ರೀಮಂತಿಕೆಯ ಫಲವಾಗಿ ಮಳೆಗಾಲದ ಆರು ತಿಂಗಳು ಇಲ್ಲಿ ಮಳೆ... ಮಳೆ... ಮಳೆ... ಇಲ್ಲಿ ಮಾರ್ದನಿಸುವ ವರ್ಷಧಾರೆಯ ವೈಭವ ಬೆರಗಾಗುವಂಥದ್ದು. ವರ್ಷಕ್ಕೆ 8 ರಿಂದ 10,000 ಮಿ.ಮೀ. ಮಳೆ ಬೀಳುವ ಕಾರಣದಿಂದಲೇ ಮೇಲಿಂದ ಮೇಲೆ ಅಣೆಕಟ್ಟುಗಳು ನಿರ್ಮಾಣಗೊಂಡಲು. ಆದರೆ, ಹಿನ್ನೀರಿನ ಶೇಖರಣೆಯಿಂದಾಗಿ ಅದೆಷ್ಟೋ ಗ್ರಾಮಗಳು ನಡುಗಡ್ಡೆಗಳಾಗಿ ನಾಗರಿಕ ವ್ಯವಸ್ಥೆಯಿಂದ ಬಹುದೂರ ಸಾಗಿದ್ದು, ಸಹಜ ಸ್ಥಿತಿಗೆ ಇನ್ನೂ ಬಂದಿಲ್ಲ. ಅಲ್ಲದೇ ತಲಾತಲಾಂತರದಿಂದ ಬದುಕಿ ಬಾಳಿದ ಕುಟುಂಬಗಳು, ಬದುಕಿನೊಂದಿಗೆ ಹಾಸುಹೊಕ್ಕಾಗಿದ್ದ ನೆರೆಹೊರೆ, ಮಣ್ಣಿನ ವಾಸನೆ, ಸಂಸ್ಕೃತಿ ಎಲ್ಲವೂ ಮುಳುಗಡೆಯಾದವು. ಅವೆಲ್ಲಾ ಇಂದು ನೆನಪು ಮಾತ್ರ.
ಲಾರಿ ಬಂತು ಲಾರಿ...
ಇಲ್ಲಿಯ ದುರಂತ ಕತೆಗೆ ಇಲ್ಲೊಂದು ಸಣ್ಣ ನಿದರ್ಶನ ನೋಡಿ. ಯಡೂರು- ಸುಳುಗೋಡು ಗ್ರಾ.ಪಂ. ವ್ಯಾಪ್ತಿಯಲ್ಲಿ ಉಳ್ತಿಗಾ ಗ್ರಾಮವಿದ್ದು, ಇದು ಸ್ವಲ್ಪಮಟ್ಟಿನ ಪ್ರಸಿದ್ಧಿ ಕೂಡ ಪಡೆದಿದೆ. ಅಭಿವೃದ್ಧಿಯಿಂದ ದೇವರಾಣೆ ಅಲ್ಲ. ನಕ್ಸಲ್ಪೀಡಿತ ಪ್ರದೇಶವಾಗಿ ಗುರುತಾಗಿರುವುದೇ ಇದಕ್ಕೆ ಕಾರಣ. ಕುಂಬ್ರಿಬೈಲು, ಮೇಲಸುಂಕ, ಭುವನಡ್ಲು, ಕರಿಗೆರಸು ಗ್ರಾಮಗಳಿಂದ ಸೇರಿ 70ರಿಂದ 80 ಕುಟುಂಬಗಳಿವೆ. ಮಾಣಿ ಡ್ಯಾಂ ನಿರ್ಮಾಣದ ನಂತರ ಅಕ್ಷರಶಃ ಮುಖ್ಯವಾಹಿನಿಯಿಂದ ಬಹುದೂರ ಉಳಿದಿವೆ. ಪ್ರತಿಯೊಂದಕ್ಕೂ 6 ಕಿ.ಮೀ. ದೂರದ ಯಡೂರಿಗೆ ಬರಬೇಕು. ಯೋಜನೆ ಕಾರ್ಯಗತಗೊಂಡಾಗ ಸಂಪರ್ಕ ಸಾಧನವಾಗಿ ಲಾರಿಯೊಂದನ್ನು ಬಿಟ್ಟಿದ್ದರು. ಅದು ವಾರಕ್ಕೆ ಒಮ್ಮೆ ಮಾತ್ರ. ವಿಪರ್ಯಾಸವೆಂದರೆ... ಅದೇ ಕೆಪಿಸಿ ನೌಕರರ ಮಕ್ಕಳ ವ್ಯಾಸಂಗಕ್ಕೆ ದೂರದ ತೀರ್ಥಹಳ್ಳಿ, ಕುಂದಾಪುರಕ್ಕೆ ನಿತ್ಯ ಬಸ್ಸಿನ ವ್ಯವಸ್ಥೆಯಿತ್ತು.
ಅದಿರಲಿ ಗ್ರಾಮಕ್ಕೆ ಬೇರೆಯವರು ಹೋಗಬೇಕಾದಲ್ಲಿ ಮಾಸ್ತಿಕಟ್ಟೆ ಇಲ್ಲವೇ ಹೊಸಂಗಡಿ ಕೆಪಿಸಿ ಕಚೇರಿಗೆ ತೆರಳಿ ಅನುಮತಿ ಪಡೆಯಬೇಕು. ಆ ಗ್ರಾಮದ ನಿವಾಸಿಗಳು ನಿತ್ಯ ಓಡಾಡಲು ಮುಖ ಪರಿಚಯವಿದ್ದರೆ ಅಡ್ಡಿಯಿಲ್ಲ. ಇಲ್ಲವೇ ದೇವರೆ ಗತಿ. ಕಾರಣ ಈ ಗ್ರಾಮಗಳಿಗೆ ತೆರಳಲು ಮಾಣಿ ಜಲಾಶಯವೇ ಹಾದಿ. ಭದ್ರತಾ ಕಾರಣದಿಂದ ಈ ಸಮಸ್ಯೆಯಿದೆ. ಇಂದಿನ ಬ್ಯುಸಿ ಲೈಫಲ್ಲಿ ವೀಳ್ಯ ಕೊಟ್ಟು ಕರೆದರೂ ಪಕ್ಕದ ಮನೆಯತ್ತ ತಲೆಹಾಕುವುದೇ ವಿರಳ. ಇನ್ನು ಅನುಪತಿ ಪತ್ರ ಹಿಡಿದು ನೆಂಟರಿಷ್ಟರಿರಲಿ... ಪರಿಚಯದವರಿರಲಿ... ಯಾರು ತಾನೆ ಹೋಗುವ ಮನಸ್ಸು ಮಾಡುತ್ತಾರೆ ಹೇಳಿ?
ಬಿದನೂರಿನ ಹೆಮ್ಮೆ...
ಕರ್ನಾಟಕದ ಚಿರಾಪುಂಜಿ ಆಗುಂಬೆ ಅಲ್ಲ 'ಹುಲಿಕಲ್' ಎಂಬುದಾಗಿ ಅಂಕಿಅಂಶಗಳು ಹೇಳುತ್ತವೆ. ಅಪ್ರತಿಮ ಸೌಂದರ್ಯದಿಂದ ಗಮನ ಸೆಳೆದಿರುವ ಕೊಡಚಾದ್ರಿ ಗಿರಿ... ಅಲ್ಲಿರುವ ಪುರಾಣದ ಹಿನ್ನೆಲೆಯ ತ್ರಿಶೂಲದ ಮಹತ್ವದ ಬಗ್ಗೆ ಕೂಡ ಸಂಶೋಧನೆ ನಡೆಯುತ್ತಿದೆ. ಅಷ್ಟೆ ಏಕೆ, ಭಾರತದ ಸ್ಟೋನ್ಹೆಂಜ್ ಎಂಬ ಹೆಗ್ಗಳಿಕೆ ಹೊಂದಿ ಕ್ರಿ.ಪೂ. 1000ದಂದು ಹೇಳಲಾದ ಖಗೋಳ ವೀಕ್ಷಣೆಯ ಮಹತ್ವದ ಪ್ರಾಚೀನ ಸಾಕ್ಷಿ ದೊರೆತಿರುವುದು ಬೈಸೆ ಗ್ರಾಮದಲ್ಲಿ. ಈ ಸಂಶೋಧನೆ ನಿಖರಗೊಂಡಲ್ಲಿ ಭಾರತದ ಮುಕುಟಕ್ಕೆ ಮತ್ತೊಂದು ಗರಿ ಮೂಡಿದಂತೆ. ಭಾರತದ ಮೊದಲ ಭೂಗರ್ಭ ವಿದ್ಯುದಾಗಾರಕ್ಕೂ ಮಾಣಿ ಜಲಾಶಯವೇ ಆಸರೆ. ಇವೆಲ್ಲವೂ ನಗರ ಹೋಬಳಿಯಲ್ಲಿರುವ ಮಹತ್ವದ ಸ್ಥಳಗಳು.
ಇಂದಿಗೂ ಸದೃಢವಾಗಿರುವ ಐತಿಹಾಸಿಕ ನಗರ ಕೋಟೆ, ದೇಶದಲ್ಲೇ ಅಪರೂಪದ ಪಂಚಮುಖಿ ಆಂಜನೇಯ ಮೂರ್ತಿ, ಅಲ್ಲದೆ ಕೆಳದಿ ಅರಸರ ಆಳ್ವಿಕೆಯನ್ನು ಪ್ರಚುರ ಪಡಿಸುವ ನೂರಾರು ಅವಶೇಷಗಳು ಇಲ್ಲಿಯ ಐತಿಹಾಸಿಕ ಶ್ರೀಮಂತಿಕೆಯನ್ನು ಸಾರಿ ಸಾರಿ ಹೇಳುತ್ತಿವೆ. ಆದರೆ, ಇಲ್ಲಿನವರ ಬದುಕೇಕೆ ನಡುಗಡ್ಡೆಯಾಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ.
ಇಳುವರಿ ಇಲ್ಲ...
ಭಾರೀ ಮಳೆಯ ಕಾರಣದಿಂದ ಭೂಮಿಯ ಫಲವತ್ತತೆ ಉಳಿಯದೆ ಬತ್ತ, ಅಡಕೆ, ಇಲ್ಲಿಯ ಯಾವುದೇ ಬೆಳೆಯಿಂದ ಇಳುವರಿ ನಿರೀಕ್ಷಿಸುವಂತಿಲ್ಲ. ಬೆಳೆಗೆ ನಿರಂತರ ರೋಗಬಾಧೆಯಿಂದಾಗಿ ಕೃಷಿಕರ ಬದುಕು ದೇವರಿಗೆ ಪ್ರೀತಿ ಎಂಬಂತಾಗಿದೆ. ಇನ್ನು ಮುಳುಗಡೆಯ ನಂತರ ದಾಖಲೆ ಇದ್ದವರು ಅಲ್ಪಸ್ವಲ್ಪ ಪರಿಹಾರ ಕಂಡರು. ಬಗರ್ಹುಕುಂ ಮಾಡಿಕೊಂಡು ಬದುಕಿಬಾಳುತ್ತಿದ್ದ ಕುಟುಂಬಗಳು ಬೀದಿಗೆ ಬರುವಂತಾಯಿತು. ಅದೆಷ್ಟೋ ಕುಟುಂಬಗಳು ಹಿನ್ನೀರು ಇಳಿದ ನಂತರ ಆ ಪ್ರದೇಶದಲ್ಲಿ ಕೃಷಿ ಮಾಡಿ ಬದುಕುತ್ತಿವೆ. ಅಲ್ಲದೆ ಮುಳುಗಡೆಯ ನಂತರ ಹಿನ್ನೀರಿನ ದಂಡೆಯಲ್ಲೋ ಕಾಡಿನ ಅಂಚು ಪ್ರದೇಶದಲ್ಲೋ ಪುಟ್ಟದೊಂದು ಗುಡಿಸಲು ಕಟ್ಟಿಕೊಂಡು ಬದುಕುತ್ತಿದ್ದಾರೆ. ಅಂಥವರ ಜಮೀನು ಮಂಜೂರಾತಿಗೆ 75 ವರ್ಷದ ದಾಖಲೆ ಕೇಳಿದರೆ ಹೇಗೆ ಎಲ್ಲವು ಮುಳುಗಡೆ ಆಗಿ ಹೋದ ಮೇಲೆ...
ಚಿತ್ರ, ಬರಹ: ರವಿ ಬಿದನೂರು
bidanooru@gmail.com