ನನ್ನ ಕಣ್ಣಲ್ಲಿ ಕಣ್ಣೀರ ಪೊರೆ...ಏನು ನಡೆಯುತ್ತದೆ ಎಂದು ನನಗೆ ತಿಳಿದಿತ್ತು. ರವಿ ಎಡಗೈಯಲ್ಲಿ ಬಾಟಲ್ ಹಿಡಿದು ಬಲಗೈಯಿಂದ ಗಬಗಬಾ ಅಂತ ಬಾಟಲ್ ಮುಚ್ಚಳ ತೆಗೆದನು. ತಕ್ಷಣ ಆಸಿಡ್ ಅವನ ಕೈಮೇಲೆ ತುಳುಕಿತು. ಶೀಷೆಯನ್ನು ಬೀಳಿಸಿ ಗಟ್ಟಿಯಾಗಿ ಕಿರುಚಿದನು.
ಕ್ಲಾಸ್ ಮಧ್ಯಾಹ್ನ ಮೂರು ಗಂಟೆಗೇ ಮುಗಿಯಿತು. ಮನೆ ತಲುಪುವಷ್ಟರಲ್ಲಿ ನಾಲ್ಕಾಗುತ್ತದೆ. ಆಕಾಶವನ್ನು ಮೋಡಗಳು ಆವರಿಸುತ್ತಿವೆ. ಆದ್ದರಿಂದ ಸೂರ್ಯನ ಪ್ರತಾಪ ಕಡಿಮೆ ಆಗಿದೆ. ಆಹ್ಲಾದಕರ ವಾತಾವರಣ, ಸಾಯಂಕಾಲ ಮಳೆಯಾಗುವ ಸೂಚನೆಗಳು ಕಾಣಿಸುತ್ತಿವೆ... ಇಂತಹ ಟೈಂನಲ್ಲಿ ಸಾಯಂಕಾಲ ಮಕ್ಕಳು ಬಂದಾಗ ಬಿಸಿಬಿಸಿ ಪಕೋಡಾ, ಕಾಫೀ ಜೊತೆ ಎಂಜಾಯ್ ಮಾಡಬಹುದು. ಮನೆಗೆ ಹೋಗಿ ಆ ಕೆಲಸದಲ್ಲಿ ತೊಡಗಿಕೊಳ್ಳುವಾ ಅಂದುಕೊಂಡೆ.
'ಶಾರದಾ ಕ್ಲೈಮೇಟ್ ಚೆನ್ನಾಗಿದೆ ಅಲ್ವಾ... ಶಾಪಿಂಗ್‌ಗೆ ಹೋಗೋಣವಾ? ಜಯಾ ಕೂಡಾ ಬರ್ತಾಳೆ' ನನ್ನ ಸಹೋದ್ಯೋಗಿ ರಾಜ್ಯಲಕ್ಷ್ಮಿ ಹೇಳಿದಳು.
'ಸಾರೀ, ನೀವು ಹೋಗಿ. ನನಗೆ ಸ್ವಲ್ಪ ತಲೆನೋವಿದೆ. ಮನೆಗೆ ಹೋಗಿ ಸ್ಟ್ರಾಂಗ್ ಟೀ ಕುಡಿಯದಿದ್ರೆ ಕಡಿಮೆ ಆಗೋದಿಲ್ಲ. ನೆಕ್ಸ್ ಟೈಂ ನೋಡೋಣ' ಎಂದು ನಯವಾಗಿ ತಿರಸ್ಕರಿಸಿದೆ.
ಮನೆಗೆ ಹೋಗಿ ಯಾವ ಕೆಲಸ ಮೊದಲು ಮಾಡಬೇಕೆಂದು ಯೋಚಿಸುತ್ತಾ ಮನೆ ತಲುಪಿದೆ. ಹೊರಗೆ ಎರಡು ಬೈಸಿಕಲ್‌ಗಳಿದ್ದವು. ಬಾಗಿಲು ಮುಚ್ಚಿತ್ತು.
ಓಹೋ... ರವಿ ಇಷ್ಟು ಬೇಗ ಕಾಲೇಜ್‌ನಿಂದ ಬಂದು ಬಿಟ್ಟನೇ ಎಂದುಕೊಳ್ಳುತ್ತಾ ಬಾಗಿಲು ಬಡಿಯಲು ಕೈ ಚಾಚಿದೆ. ಒಳಗಿನಿಂದ ಗುಸುಗುಸು ಕೇಳಿಸಿತು. ನನಗೆ ತಿಳಿದಿಲ್ಲವೇ, ರವಿ ಬಡಬಡಾ ಅಂತ ಮಾತನಾಡುತ್ತಾನೆ. ಎಂದೂ ಮೆತ್ತಗೆ ಮಾತನಾಡುವವನೇ ಅಲ್ಲ. ಇವರ ಸೀಕ್ರೆಟ್ ಏನಿರಬಹುದು ಎಂದುಕೊಂಡು ಕಿವಿ ನಿಮಿರಿಸಿ ಕೇಳತೊಡಗಿದೆ. ಒಳಗೆ ರವಿ, ಅವನ ಫ್ರೆಂಡ್ ಆನಂದ್ ಮಾತನಾಡಿಕೊಳ್ಳುತ್ತಿದ್ದರು.
'ಅದಲ್ಲವೋ ಆನಂದ್... ಇನ್ನೊಂದ್ಸಾರಿ ಯೋಚನೆ ಮಾಡು. ಫೈನಲ್ ವಾರ್ನಿಂಗ್ ಕೊಡು. ಆಗಲೂ ಒಪ್ಪದಿದ್ದರೆ ನೀನು ಹೇಳಿದ ಹಾಗೇ ಮಾಡೋಣ'
'ಇಲ್ವೋ... ಅವ್ಳಿಗೆ ಕೊಬ್ಬು ಜಾಸ್ತಿಯಾಗಿದೆ. ಕಾಲೇಜ್ ಬ್ಯೂಟಿ ಅನ್ನೋ ಗರ್ವ. ಅವಳ ಮುಖಕ್ಕೆ ಆಸಿಡ್ ಬೀಳದಿದ್ದರೆ ಸೊಕ್ಕು ಕಡಿಮೆಯಾಗೋದಿಲ್ಲ'
'ಸರಿ, ನಿನ್ನಿಷ್ಟ. ಆದ್ರೆ...ಎಲ್ಲಿ?'
'ನಾಡಿದ್ದು ಭಾನುವಾರ. ಅವಳು ಡ್ಯಾನ್ಸ್ ಕ್ಲಾಸ್‌ಗೆ ಹೋಗ್ತಾಳೆ. ಕ್ಲಾಸ್ ಮುಗಿಸಿ ಹನ್ನೆರಡು ಗಂಟೆಗೆ ಬರ್ತಾಳೆ. ಮಧ್ಯಾಹ್ನದ ಹೊತ್ನಲ್ಲಿ ಆ ಏರಿಯಾದಲ್ಲಿ ಅಷ್ಟಾಗಿ ಜನ ಇರೋದಿಲ್ಲ. ಇಬ್ಬರೂ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಅವಳ ಮುಖದ ಮೇಲೆ ಆಸಿಡ್ ಸುರಿದು ಓಡಿ ಹೋಗೋಣ. ನಾನು ಮಾಸ್ಕ್, ಆಸಿಡ್ ರೆಡಿ ಮಾಡ್ತೀನಿ. ಪ್ಲೀಸ್... ನೀನೂ ನನ್ನ ಜೊತೇಲಿ ಇರ್ಬೇಕೋ...'
'ಅಫ್‌ಕೋರ್ಸ್, ಖಂಡಿತಾ... ನಿನ್ನ ನೋವು ನನಗೆ ಗೊತ್ತು' ರವಿ ಭರವಸೆ ಕೊಟ್ಟನು.
ಒಂದು ಕ್ಷಣ ನನ್ನ ಹೃದಯದ ಬಡಿತ ನಿಂತ ಹಾಗಾಯ್ತು. ನನ್ನ ಮನೆಯಲ್ಲಿ, ಅದೂ... ನನ್ನ ಮುದ್ದಿನ ಮಗ... ನನ್ನ ಬಂಗಾರ... ಒಂದು ಕ್ರೈಂ ಮಾಡಲು ಪ್ಲಾನ್ ಹಾಕುತ್ತಿದ್ದಾನಾ? ಪಿಯುಸಿ ಎರಡನೆ ವರ್ಷ ಓದ್ತಾ ಇದ್ದಾನೆ. ಈಗಲೂ ಅವನ ಬಾಲ್ಯ ನನ್ನ ಕಣ್ಣಿಗೆ ಕಾಣಿಸುತ್ತಿದೆ. ಅವನ ಮುದ್ದು ಮಾತುಗಳು...ತುಂಟ ಚೇಷ್ಟೆಗಳು...ತಪ್ಪು ತಪ್ಪು ಹೆಜ್ಜೆಗಳು...ನೆನ್ನೆ ಮೊನ್ನೆಯಷ್ಟೇ ನಡೆದ ಹಾಗಿವೆ. ಅಷ್ಟರಲ್ಲೇ ಇಷ್ಟು ದೊಡ್ಡವನಾಗಿಬಿಟ್ಟನೇ? ಒಂದು ಹೆಣ್ಣಿನ ಬದುಕಿನಲ್ಲಿ ಆಟವಾಡುತ್ತಿದ್ದಾನೆಯೇ? ಒಳಗೆ ಹೋಗಿ ಇಬ್ಬರನ್ನೂ ಹಿಗ್ಗಾಮುಗ್ಗಾ ಬೈಯಬೇಕೆನಿಸುವಷ್ಟು ಸಿಟ್ಟು ಬಂದಿತು.
ಆದರೆ ನಾನೊಬ್ಬ ಟೀಚರ್. ಟೀನೇಜ್ ಮಕ್ಕಳ ನಡವಳಿಕೆ ಗೊತ್ತು. ಸುಮ್ಮನೆ ನಿಂತೆ. ಒಮ್ಮೆಲೇ ಮೈಯನ್ನು ನಿಶ್ಶಕ್ತಿ ಆವರಿಸಿತು. ಆದರೂ ನಾಲ್ಕು ಹೆಜ್ಜೆ ಹಿಂದಕ್ಕೆ ಇಟ್ಟು, ಇಲ್ಲದ ಉತ್ಸಾಹ ತಂದುಕೊಳ್ಳುತ್ತಾ 'ರವೀ' ಎಂದು ಕೂಗುತ್ತಾ ಬಾಗಿಲು ತಳ್ಳಿದೆ. ನನ್ನನ್ನು ಕಂಡು ಇಬ್ಬರೂ ಬೆಚ್ಚಿದರು.
'ಹಾಯ್, ಏನ್ರೋ ಕ್ಲಾಸ್‌ಗೆ ಚಕ್ಕರ್ ಹಾಕಿದ್ರಾ?'
'ಇ...ಇಲ್ಲ ಆಂಟೀ...ಆಕ್ಚುಯಲೀ ಇವ್ನಿಗೆ ತಲೆನೋವು...ಅದಕ್ಕೇ ಲಾಸ್ಟ್ ಪೀರಿಯಡ್ ಪರ್ಮಿಷನ್ ತಗೊಂಡು ಬಂದುಬಿಟ್ಟೆವು' ತಡವರಿಸುತ್ತಾ ಆನಂದ್ ಹೇಳಿದನು.
'ಏನಪ್ಪಾ ತಲೆನೋವಾ?' ಮಮತೆಯಿಂದ ಕೇಳಿದೆ.
'ಕಡಿಮೆ ಆಯ್ತು ಮಮ್ಮೀ, ಆಗ್ಲೇ ಟ್ಯಾಬ್ಲೆಟ್ ನುಂಗಿದೆ' ಎಂದನು ರವಿ ಬೇರೆಲ್ಲೋ ನೋಡುತ್ತಾ. 'ಬರ್ತೀನಾಂಟಿ...' ಎಂದು ಗಡಿಬಿಡಿಯಿಂದ ಆನಂದ್ ಹೊರಟುಹೋದನು.
ಆ ರಾತ್ರಿ ಬಹಳ ಹೊತ್ತು ಯೋಚಿಸಿದೆ. ಬೆಳಿಗ್ಗೆ ಬೇಗ ಎದ್ದು ಅವಸರದಲ್ಲಿ ಅಡಿಗೆ ಮಾಡಿ, ಎಲ್ಲರ ಕ್ಯಾರಿಯರ್‌ಗಳನ್ನು ತುಂಬಿಸಿಟ್ಟೆ. ಮಗಳು, ಮಗ, ಯಜಮಾನರು ತಯಾರಾಗಿ ಬಂದರು.
'ಇದೇನು, ಈವತ್ತು ಲೇಟು. ಲೀವ್ ಹಾಕಿದ್ದೀಯಾ?' ಎಂದು ನನ್ನವರು ಪ್ರಶ್ನಿಸಿದರು.
'ಇಲ್ಲ, ಎಷ್ಟು ಹೊತ್ತು, ಈಗಲೇ ಬಾತ್‌ರೂಂ ಕ್ಲೀನ್ ಮಾಡಿ ಸ್ನಾನ ಮಾಡ್ತೇನೆ. ಬೇಗ ಮುಗಿಯುತ್ತೆ'
'ವರ್ಕಿಂಗ್ ಡೇ ಇವೆಲ್ಲ ಯಾಕಿಟ್ಟುಕೊಳ್ತೀಯಾ, ಸಂಡೇ ಮಾಡಬಹುದಲ್ಲ?'
'ಟೈಂ ಇದೇರೀ, ಬೇಗ ಮಾಡಿ ಮುಗಿಸ್ತೀನಿ' ಎಂದೆ ಸ್ಥಿರವಾಗಿ.
'ಹಠಮಾರಿ...ನಡಿಯೋ...ಬಾಮ್ಮಾ' ಎಂದು ಹೇಳಿ ಮಗಳೊಂದಿಗೆ ಕ್ಯಾರಿಯರ್ ಎತ್ತಿಕೊಂಡು ಹೊರಟರು.
ಅವಸರದಿಂದ ಬಾತ್‌ರೂಂಗೆ ಹೋದೆ. ಐದು ನಿಮಿಷ ತಡೆದು 'ರವೀ' ಎಂದು ಕೂಗಿದೆ.
'ಏನು ಮಮ್ಮೀ' ಎನ್ನುತ್ತಾ ಬಂದನು. ಹೊಸ ಬಟ್ಟೆಯಲ್ಲಿ ಮುದ್ದಾಗಿ ಕಾಣಿಸಿದ.
ಕಿಚನ್‌ನಲ್ಲಿ ಕಪ್‌ಬೋರ್ಡ್ ಪಕ್ಕದಲ್ಲಿ ಆಸಿಡ್ ಬಾಟಲ್ ಇದೆ, ತಂದುಕೊಡು
'ಏನೂ?' ಅವನ ಸ್ವರ ಸಣ್ಣದಾಗಿ ಕಂಪಿಸಿತು.
'ಆಸಿಡ್ ಬಾಟಲ್ ತಗೊಂಡು ಬಾ. ನೋಡಿಲ್ಲಿ, ಈ ಟೈಲ್ಸ್ ಹೇಗಿವೆ ಅಂತ...' ಅವನ ಕಡೆ ನೋಡದೆ ಲೆಟ್ರಿನ್ ಬೇಸಿನ್ ಅನ್ನು ಹಾರ್ಪಿಕ್ ಹಾಕಿ ತೊಳೆಯುತ್ತಾ ಹೇಳಿದೆ.
ಬಾಟಲ್ ತಂದನು. ಇತ್ತೀಚೆಗೆ ಕೊಂಡಿದ್ದ ಹೊಸ ಪ್ಲಾಸ್ಟಿಕ್ ಬಾಟಲ್ ಅದು.
'ಈ ಜಗ್‌ನಲ್ಲಿ ಅರ್ಧದಷ್ಟು ಹಾಕೋ...' ಎಂದು ಜಗ್ ಹಿಡಿದು ಹೇಳಿದೆ. ನನ್ನ ಕಣ್ಣಲ್ಲಿ ಕಣ್ಣೀರ ಪೊರೆ...ಏನು ನಡೆಯುತ್ತದೆ ಎಂದು ನನಗೆ ತಿಳಿದಿತ್ತು. ರವಿ ಎಡಗೈಯಲ್ಲಿ ಬಾಟಲ್ ಹಿಡಿದು ಬಲಗೈಯಿಂದ ಗಬಗಬಾ ಅಂತ ಬಾಟಲ್ ಮುಚ್ಚಳ ತೆಗೆದನು. ತಕ್ಷಣ ಆಸಿಡ್ ಅವನ ಕೈಮೇಲೆ ತುಳುಕಿತು. ಶೀಷೆಯನ್ನು ಬೀಳಿಸಿ ಗಟ್ಟಿಯಾಗಿ ಕಿರುಚಿದನು. ತಕ್ಷಣ ಅವನ ಕೈಮೇಲೆ ನೀರು ಸುರಿದು ಆನಂದ್‌ಗೆ ಫೋನ್ ಮಾಡಿದೆ.
ರವಿ ನನ್ನ ಕಡೆಗೆ ಒಂದು ರೀತಿಯಾಗಿ ನೋಡಿದನು. 'ಡ್ಯಾಡಿ ಡ್ರೈವ್ ಮಾಡ್ತಾ ಇರ್ತಾರೆ. ವಿಷಯ ತಿಳಿಸಿದ್ರೆ ಗಾಬರಿ ಆಗ್ತಾರೆ. ಅವ್ರಿಗೆ ಆಮೇಲೆ ತಿಳಿಸ್ತೇನೆ...' ಎಂದು ಅಳುತ್ತಲೇ ಹೇಳಿದೆ.
ಆನಂದ್ ಐದೇ ನಿಮಿಷಗಳಲ್ಲಿ ಬಂದನು. ತಕ್ಷಣ ಆಸ್ಪತ್ರೆಗೆ ಹೋಗಿ ರವಿಗೆ ಡ್ರೆಸಿಂಗ್ ಮಾಡಿಸಿ ಕರೆತಂದೆವು. ಅವರಿಬ್ಬರೂ ದಿಗಿಲುಗೊಂಡಿದ್ದರು.
ಮೂವರಿಗೂ ಕಾಫಿ ಬೆರೆಸಿ ತಂದೆ.
'ಬೇಡ ಆಂಟೀ...ನಾನು ಹೋಗ್ತೀನಿ' ಎಂದನು ಆನಂದ್ ಎದ್ದು ನಿಲ್ಲುತ್ತಾ.
'ಕಾಫಿ ಕುಡಿದು ಹೋಗು ಆನಂದ್...' ಎಂದು ಅವನನ್ನು ಹಿಡಿದು ಕುಳ್ಳಿರಿಸಿದೆ. ಆನಂದ್ ಕಾಫಿ ಕುಡಿದಾದ ಮೇಲೆ 'ಅವನ ಕೈ ಎಷ್ಟು ಸುಟ್ಟಿದೆ ನೋಡಿದ್ಯಾ ಆನಂದ್? ಅವನು ನೋವಿನಿಂದ ಅಳ್ತಾ ಇದ್ದಾಗ ನಿನ್ನ ಕಣ್ಣಲ್ಲೂ ನೀರು ಬಂತು. ಏಕೆ ಅಂದರೆ ನೀನವನ ಬೆಸ್ಟ್ ಫ್ರೆಂಡ್. ಅದೇ ರೀತಿ ಆ ಹುಡುಗಿ ಮುಖದ ಮೇಲೆ ಆಸಿಡ್ ಸುರಿದ್ರೆ ಅವಳೆಷ್ಟು ನರಕಯಾತನೆ ಅನುಭವಿಸಬಹುದೋ ಯೋಚನೆ ಮಾಡಿ ನೋಡಿ. ಮೃದುವಾದ ಕಣ್ಣಿನಂತಹ ಭಾಗಗಳು ಸುಟ್ಟು ನೋವಿನಿಂದ ಅವಳು ಮಾಡುವ ಆರ್ತನಾದ ಹೇಗಿರಬಹುದೋ ಊಹೆ ಮಾಡಿ ನೋಡಿ' ಹೇಳಿದೆ.
ಇಬ್ಬರೂ ಅಚೇತನರಾದರು.
'ರವೀ, ಈ ಗಾಯ ಸಣ್ಣದು. ಇದಕ್ಕೆ ನೀನೆಷ್ಟು ಅತ್ತೆಯಲ್ಲ? ಮತ್ತೆ ಆ ಹುಡುಗಿ ಸ್ಥಿತಿ ಹೇಗಿರಬಹುದು? ಈಗಿನ್ನೂ ಬೆಳೆಯುತ್ತಿರುವ ಹುಡುಗರು ನೀವು. ಇನ್ನೂ ಬದುಕಿನಲ್ಲಿ ನಿಮಗೊಂದು ಗುರಿ ಇಲ್ಲ. ಆಗಲೇ ಈ ಪ್ರೇಮ ಬೇಕಿತ್ತಾ? ಹುಡುಗಿಯರಿಗೂ ಅವರದೇ ಇಷ್ಟ, ಅ-ಇಷ್ಟ ಇರೋದಿಲ್ವೇನು? ನಮಗೆ ಅವರು ಇಷ್ಟವಾದ ಮಾತ್ರಕ್ಕೆ ಅವರೂ ನಮ್ಮನ್ನು ಇಷ್ಟಪಡಬೇಕು ಅನ್ನುವ ರೂಲ್ಸ್ ಇಲ್ಲ. ನಿಮ್ಮದು ಪ್ರೀತಿಯಲ್ಲ, ಜಸ್ಟ್ ಅಟ್ರಾಕ್ಷನ್... ಅಷ್ಟೇ ಯಾಕ್ರೋ, ಮೊನ್ನೆ ನಮ್ಮ ಶ್ರಾವಣಿಗೆ ಯಾವನೋ ಹುಡುಗ ಲವ್‌ಲೆಟರ್ ಕೊಟ್ಟ. ಇವ್ಳಿನ್ನೂ ಎಂಟನೇ ಕ್ಲಾಸು, ಆ ಹುಡುಗ ಟೆನ್ತ್ ಕ್ಲಾಸು...'
'ನನಗ್ಯಾಕೆ ಹೇಳಲಿಲ್ಲ ಮಮ್ಮೀ?' ರವಿ ಸಿಟ್ಟಿನಿಂದ ಕೇಳಿದ.
'ಅವನ್ಯಾರು ಅಂತ ಹೇಳಿ ಆಂಟೀ, ಸರಿಯಾಗಿ ಒದೀತೀವಿ'
'ಯಾಕಪ್ಪಾ...ಅವನು ಕೂಡಾ ಇವ್ಳು ಪ್ರೇಮಿಸಲಿಲ್ಲ ಅಂತ ಆಸಿಡ್ ಸುರಿಯಬೇಕಾ?' ಇಬ್ಬರ ಮುಖ ದಿಟ್ಟಿಸಿ ನೋಡುತ್ತ ಕೇಳಿದೆ. ಇಬ್ಬರೂ ತಣ್ಣಗಾದರು.
'ಆದರೆ, ನಿಮಗೆ ಆ ನೀರಜಾ ವಿಷಯ ಗೊತ್ತಿಲ್ಲ ಆಂಟೀ. ಫಸ್ಟ್ ಇಯರ್ ನನ್ಜೊತೆ ತುಂಬಾ ಕ್ಲೋಸ್ ಆಗಿದ್ಲು. ನಾನು ಕೊಟ್ಟ ಗಿಫ್ಟ್‌ಗಳ್ನ ತಗೊಳ್ತಾ ಇದ್ಲು. ಈಗ ಆ ಎಂಎಲ್‌ಎ ಮೊಮ್ಮಗನ ಜೊತೆ ಸುತ್ತುತ್ತಾ ಇದ್ದಾಳೆ. ಅದಕ್ಕೇ...'
'ಆನಂದ್. ಅಂಥವಳು ದೂರವಾಗಿದ್ದಕ್ಕೆ ಸಂತೋಷಪಡಬೇಕು. ಈ ಸಣ್ಣ ವಯಸ್ಸಿನಲ್ಲಿ ಕ್ರೈಂ ಮಾಡಿ ನಿಮ್ಮ ಕೈಯಾರೆ ನಿಮ್ಮ ಭವಿಷ್ಯಾನ ಹಾಳು ಮಾಡಿಕೊಳ್ಳಬೇಡಿ. ಒಬ್ಬರನ್ನು ನಾಶ ಮಾಡಿದರೆ ನಮಗೇನೂ ಸಿಗೋದಿಲ್ಲ. ಬದಲಿಗೆ ನಿಮ್ಮ ಫ್ಯೂಚರ್‌ಗೆ ಪೆಟ್ಟು ಬೀಳತ್ತೆ. ಆ ಹುಡುಗಿಗೆ ಶಿಕ್ಷೆ ಕೊಡಬೇಕು ಅಂದುಕೊಂಡಿರಲ್ಲಾ, ಅಂಥ ಪರಿಸ್ಥಿತಿ ನಮ್ಮ ಶ್ರಾವಣಿಗೂ ಬಂದರೆ? ನೋವು ಹುಡುಗಿಗೆ ಮಾತ್ರಾ ಅಲ್ಲ ಕುಟುಂಬದ ಎಲ್ಲರಿಗೂ ಶಿಕ್ಷೆ ಆಗುತ್ತದೆ. ಯೋಚ್ನೆ ಮಾಡು ಆನಂದ್, ನಿನ್ನ ಅಕ್ಕನಿಗೋ, ತಂಗಿಗೋ ಆ ಸ್ಥಿತಿ ಬಂದರೆ ನಿಮ್ಮ ಫ್ಯಾಮಿಲಿ ಪರಿಸ್ಥಿತಿ ಹೇಗಿರಬಹುದು?'
'ಸಾರೀ, ಇನ್ಯಾವತ್ತೂ ಅಂತಾ ಕೆಲ್ಸ ಮಾಡೋದಿಲ್ಲ...' ಇಬ್ಬರೂ ಒಟ್ಟಿಗೆ ಹೇಳಿ ನನ್ನ ಕಾಲಿಗೆ ಬಿದ್ದರು. ಇಬ್ಬರ ಕಣ್ಣಲ್ಲೂ ನೀರು.
'ಮಮ್ಮೀ ಶ್ರಾವಣಿಗೆ ತೊಂದ್ರೆ ಕೊಡ್ತಿರೋ ಹುಡುಗ...'
'ಅದಾ...ಆ ಹುಡುಗನಿಗೆ ಚೆನ್ನಾಗಿ ಬುದ್ಧಿ ಹೇಳಿದ್ದೀನಿ ಬಿಡು. ಈಗವನು ತೊಂದ್ರೆ ಕೊಡ್ತಾ ಇಲ್ಲ'
'ಸಾರಿ ಆಂಟೀ, ನನ್ನಿಂದ್ಲೇ ತಾನೇ ಇಷ್ಟೆಲ್ಲಾ ಆಗಿದ್ದು. ಪಾಪ, ರವಿಗೆ ಎಷ್ಟು ನೋವಾಗ್ತಿದೆಯೋ...' ರವಿಯ ಪರಿಸ್ಥಿತಿಗೆ ತಾನೇ ಕಾರಣ ಎಂಬ ಭಾವನೆ ಅವನದು. ಆಗವನ ಕಣ್ಣುಗಳು ಒದ್ದೆಯಾಗಿದ್ದವು. ಅವನಿಗೆ ಸಮಾಧಾನ ಹೇಳಿ ಮನೆಗೆ ಕಳಿಸಿದೆ.
ಆ ಸಂಜೆ ವಿಷಯ ತಿಳಿದ ನನ್ನ ಗಂಡ 'ನನಗೊಂದು ಸಂದೇಹ. ಅವನ ಕೈಮೇಲೆ ಆಸಿಡ್ ಹೇಗೆ ತುಳುಕಿತು?' ಎಂದು ಕೇಳಿದರು.
'ಅದಾ...ಅದು ಹೊಸ ಬಾಟಲ್. ಹಳೆ ಬಾಟಲ್‌ನಲ್ಲಿದ್ದ ಸ್ವಲ್ಪ ಆಸಿಡ್‌ನ ಇದರೊಳಗೆ ಹಾಕಿ ಮುಚ್ಚಳದ ತನಕ ತುಂಬಿಸಿದ್ದೆ. ಅದು ಪ್ಲಾಸ್ಟಿಕ್ ಬಾಟಲ್ ಅಲ್ವಾ? ಗಟ್ಟಿಯಾಗಿ ಹಿಡಿದು ಮುಚ್ಚಳ ತೆಗೆದಾಗ ಸ್ವಲ್ಪ ತುಳುಕಿತು'
'ಎಷ್ಟು ಧೈರ್ಯವೇ ನಿಂಗೆ!' ಎಂದು ಆಶ್ಚರ್ಯಪಟ್ಟರು.
'ಅವನಿಗಾದ ಗಾಯ ಸಣ್ಣದು ರೀ, ಬೇಗ ವಾಸಿಯಾಗುತ್ತೆ ಆದ್ರೆ ಮಚ್ಚೆ ಮಾತ್ರ ಹಾಗೇ ಉಳಿದು ಬಿಡತ್ತೆ. ಆ ಮಚ್ಚೆ ಇವ್ನು ಮತ್ತೆ ಇಂಥಾ ಕೆಲ್ಸಕ್ಕೆ ಕೈ ಹಾಕದ ಹಾಗೆ ತಡೆಯುತ್ತೆ. ಈ ಸಣ್ಣ ಗಾಯ ಆಗದೆ ಇದ್ದರೆ ಇನ್ನೆರೆಡು ದಿನದಲ್ಲಿ ಎಷ್ಟು ಹೃದಯಗಳಿಗೆ ಗಾಯವಾಗ್ತಿತ್ತೋ...'
'ಅವನ ಕೈಗೆ ಆಯಿಂಟ್‌ಮೆಂಟ್ ಹಚ್ಚಬೇಕು' ಎನ್ನತ್ತಾ ರವಿಯ ರೂಂಗೆ ಹೋದೆ. ಅವನು ಗಾಢನಿದ್ರೆಯಲ್ಲಿದ್ದನು. ಅವನ ಕೈಯನ್ನು ಮೆತ್ತಗೆ ನನ್ನ ಕೈಯೊಳಗೆ ತೆಗೆದುಕೊಂಡೆ. ಕೈ ಕಪ್ಪಗೆ ಕಂದಿತ್ತು. 'ಸಾರೀಪ್ಪಾ' ಎಂದು ಪಿಸುಗುಟ್ಟಿದೆ. ನನ್ನ ಕಣ್ಣಿಂದ ಕಣ್ಣೀರ ಧಾರೆ ಹರಿಯಿತು.
ನಾನು ಸಮಾಜವನ್ನು ತಿದ್ದಲಾರೆ, ಆದರೆ ನನ್ನ ಮಗನನ್ನು ತಿದ್ದಿಕೊಂಡಿದ್ದೆ, ನನಗೆ ಅಷ್ಟು ಸಾಕು. ಅದಕ್ಕೇ ಎರಡು ದಿನ ಸ್ಕೂಲಿಗೆ ರಜೆ ಹಾಕಿದೆ. ನನ್ನ ಬಾಬೂನ ಸೇವೆ ಮಾಡಬೇಕಲ್ಲ. ವಾತ್ಸಲ್ಯದಿಂದ ಅವನ ಹಣೆಯ ಮೇಲೆ ಮುತ್ತಿಟ್ಟೆ.
= ಮೂಲ ತೆಲುಗು: ರಾವಾಜ ಶ್ಯಾಮಲಾ = ಅನುವಾದ: ಸಂಡೂರು ವೆಂಕಟೇಶ್