ಸಾಪ್ತಾಹಿಕಪ್ರಭ

ಕನಕನ ಮಾಯೆಯೋ...

Published On :

ಕನಕದಾಸರು ನಮಗೆ ಮುಖ್ಯವಾಗುವುದು ಎರಡು ಕಾರಣಗಳಿಗಾಗಿ. ಒಂದು, ಅವರು ರಚಿಸಿದ ಕೀರ್ತನೆಗಳು ಮತ್ತು ಇತರ ಸಾಹಿತ್ಯ ಕೃತಿಗಳಿಗಳಿಗಾಗಿ. ಇದು ಸಾಹಿತ್ಯದ ಭಾಗ. ಇನ್ನೊಂದು, ಸಮಕಾಲೀನ ಸಮಾಜದಲ್ಲಿ ಅವರು ಬಹುದೊಡ್ಡ ಸಮುದಾಯದ ನಾಯಕನೆಂದು ಪರಿಗಣಿಸಲ್ಪಟ್ಟು ಆ ಜನಾಂಗದ ಅಸ್ಮಿತೆಗೆ ಅವರು ನೆಲೆಯನ್ನು ಒದಗಿಸಿದ್ದಕ್ಕಾಗಿ. ಇದು ಸಾಮಾಜಿಕ ಭಾಗ. ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಕನಕ ಅಧ್ಯಯನ ಪೀಠ ಸ್ಥಾಪನೆ, ಕನಕ ಭವನಗಳ ನಿರ್ಮಾಣ, ಕನಕದಾಸ ಪ್ರಶಸ್ತಿಯ ಸ್ಥಾಪನೆ ಮೊದಲಾದವೆಲ್ಲ ಕನಕದಾಸರ ಪ್ರಾಮುಖ್ಯತೆಯನ್ನು ಹೇಳುತ್ತದೆ. ಈ ಕಾರಣಕ್ಕಾಗಿಯೇ ಉಳಿದ ದಾಸವರೇಣ್ಯರಿಂದ ಕನಕದಾಸರು ಪ್ರತ್ಯೇಕವಾಗಿ ನಿಲ್ಲುತ್ತಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನ ಪೀಠ, ಕನಕದಾಸ ಸಂಶೋಧನ ಕೇಂದ್ರವು ಕನಕದಾಸ ಅಧ್ಯಯನ: ಸಮಗ್ರ ಸಂಪುಟ ಭಾಗ-1ನ್ನು 'ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ' ಹೆಸರಿನಲ್ಲಿ ಹೊರತಂದಿದೆ. ಇದರ ಸಂಪಾದಕರು ಡಾ.ಬಿ. ಶಿವರಾಮ ಶೆಟ್ಟಿ.
ಈ ಕೃತಿಯಲ್ಲಿ ಕನಕದಾಸರ ಬದುಕಿಗೆ ಸಂಬಂಧಪಟ್ಟಂತೆ 118 ಲೇಖನಗಳಿವೆ. ಕನಕದಾಸರ ಜನನ, ಅವರು ಬದುಕಿ ಬಾಳಿದ ಪ್ರದೇಶಗಳು, ಅವರ ಕಾಲ, ಅವರ ಜಾತಿ ಮತ ಮೊದಲಾದವು, ಉಡುಪಿಯ ಕನಕನ ಕಿಂಡಿಯ ಕುರಿತ ವಿಚಾರಗಳ ಆಲೋಚನೆ ಮೊದಲಾದವು ಈ ಲೇಖನಗಳಲ್ಲಿವೆ. ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಿಂದ ತೊಡಗಿ ಇಪ್ಪತ್ತೊಂದನೆಯ ಶತಮಾನದ ಈ ವರೆಗಿನ ಲೇಖನಗಳು ಇದರಲ್ಲಿವೆ.
ಕನಕದಾಸರು 15-16ನೇ ಶತಮಾನಗಳಲ್ಲಿ ಬದುಕಿದವರು. ಅವರು ಸುಮಾರು 98 ವರ್ಷ ಬದುಕಿದ್ದರಂತೆ. ನಾನೂರೈವತ್ತು ವರ್ಷಗಳ ಹಿಂದಿನ ಕನಕ ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಹೇಗೆ ಸಾಂಸ್ಕೃತಿಕವಾಗಿ ಮುಖ್ಯವಾಗುತ್ತಾರೆ ಎಂಬ ಜಿಜ್ಞಾಸೆ ಈ ಕೃತಿಯ ಅನುಸಂಧಾನದಿಂದ ಸಾಧ್ಯ.
ಕನಕದಾಸರ ಕುರಿತು ಕೆಲವು ಪವಾಡಗಳು ಪ್ರಚಲಿತದಲ್ಲಿವೆ. ಅವುಗಳನ್ನು ಒರೆಗೆ ಹಚ್ಚುವ ಪ್ರಯತ್ನ ಈ ಕೃತಿಯಲ್ಲಾಗಿದೆ. ಇದರಲ್ಲಿನ ಮೊದಲ ಲೇಖನ ಕೆ. ವೆಂಕಟರಾವ್ ಎನ್ನುವವರು 1871ರಲ್ಲಿ ಬರೆದುದು. ಇದರಲ್ಲಿ ಕನಕದಾಸರನ್ನು ಬೇಡ ಎಂದು ಹೇಳಿದ್ದಾರೆ. ಕನಕದಾಸನು ಎಂಬ ಏಕವಚನ ಪ್ರಯೋಗವಿದೆ. ಈ ಲೇಖನದಲ್ಲಿ ತರ್ಕಕ್ಕೆ ನಿಲುಕದ ಹಲವು ಸಂಗತಿಗಳಿವೆ. 1873ರಲ್ಲಿ ಕಿಟ್ಟೆಲ್ ಬರೆದ ಮತ್ತು ಎಡ್ವರ್ಡ್ ಪಿ. ರೈಸ್ ಬರೆದ 1915ರ ಇಂಗ್ಲಿಷ್ ಲೇಖನಗಳೂ ಇಲ್ಲಿವೆ.
ಬೆಟಗೇರಿ ಕೃಷ್ಣಶರ್ಮ, ಹಾ.ಮಾ. ನಾಯಕ, ವಿ. ಸೀತಾರಾಮಯ್ಯ, ರಂ.ಶ್ರೀ. ಮುಗಳಿ, ದೇ. ಜವರೇಗೌಡ, ಕಟ್ಟೆ ಶೇಷಾಚಾರ್ಯ, ಆರ್.ಆರ್. ದಿವಾಕರ, ಅರವಿಂದ ಮಾಲಗತ್ತಿ ಮೊದಲಾದವರೆಲ್ಲ ಇಲ್ಲಿ ಬರೆದಿದ್ದಾರೆ. ಎಲ್ಲ 118 ಲೇಖನಗಳನ್ನು ಅವಲೋಕಿಸಿದಾಗ ಒಂದು ಅಂಶ ಸ್ಪಷ್ಟವಾಗುತ್ತದೆ. ಕಳೆದ ಶತಮಾನದ ಎಂಬತ್ತರ ದಶಕದ ವರೆಗೂ ಕನಕದಾಸರ ಬಗ್ಗೆ ಕೆಲವು ಪವಾಡಗಳು, ಅವರ ಕೀರ್ತನಗಳು, ಅವರ ಕಾವ್ಯಗಳ ಬಗ್ಗೆಯಷ್ಟೇ ಚರ್ಚೆಗಳು ನಡೆಯುತ್ತಿದ್ದವು. ಆ ನಂತರ ಕನಕ ಒಂದು ಸಾಂಸ್ಕೃತಿಕ ವಾಗ್ವಾದದ ಭಾಗವಾಗಿ, ಒಂದು ರಾಜಕೀಯ ಮುದ್ದೆಯಾಗಿ ಚರ್ಚೆಗೆ ಒಳಗಾಗುತ್ತಾರೆ. ಉಡುಪಿಯ ಕನಕ ಗೋಪುರದ ಸಂಬಂಧದಲ್ಲಿ ನಡೆದ ವಾಗ್ವಾದ, ತಲೆದೋರಿದ ವಿವಾದ ಎಲ್ಲವೂ ಸಾಂಸ್ಕೃತಿಕ ರಾಜಕಾರಣ ಎನ್ನಿಸದೆ ಇರದು.
ಕನಕನ ಕಿಂಡಿ ಹೇಗೆ ಉಂಟಾಯಿತು ಎಂಬ ಬಗ್ಗೆ ಕಳೆದ ಶತಮಾನದ ಮೂರನೇ ದಶಕದಲ್ಲಿಯೇ ಜಿಜ್ಞಾಸೆ ನಡೆದ ಬಗ್ಗೆ ಇದರಲ್ಲಿ ಲೇಖನವಿದೆ. ಆದರೆ ಇಪ್ಪತ್ತೊಂದನೆಯ ಶತಮಾನದಲ್ಲಿ ಕನಕನಿಗಾಗಿ ಕೃಷ್ಣ ತಿರುಗಿ ನಿಂತನು ಎಂಬುದನ್ನು ನಂಬುವುದಕ್ಕೇ ಹೆಚ್ಚು ಒತ್ತು ನೀಡುತ್ತಿರುವ ಗುಮಾನಿ ಮೂಡುವುದು. ಇದಕ್ಕೆ ಸಾಂಸ್ಕೃತಿಕ ರಾಜಕಾರಣವೇ ಕಾರಣ. ಯೋಧನಾಗಿದ್ದು ಹರಿದಾಸನಾಗಿ ಪರಿವರ್ತನೆಗೊಂಡ ಕನಕದಾಸ ಇದೀಗ ಒಂದು ರಾಜಕೀಯ ಶಕ್ತಿಯಾಗಿ ಪರಿವರ್ತನೆಗೊಂಡಿರುವುದೂ ಅಧ್ಯಯನಯೋಗ್ಯವಾದ ವಿಷಯವೇ ಆಗಿದೆ. ಚಂದ್ರಕಾಂತ ಬಿಜ್ಜರಗಿಯವರು 'ದಾಸರ ಜಾತಿ-ಮತ' ಎಂಬ ನೂರಾರು ಪುಟಗಳ ವಿಸ್ತಾರವಾದ ಲೇಖನವನ್ನು ಬರೆದಿರುವರು. ಕನಕದಾಸರು ಕುರುಬರೆ, ಬೇಡರೆ, ಕಬ್ಬಿಲರೆ ಇತ್ಯಾದಿ ಅಂಶಗಳನ್ನು ಅವರು ಚರ್ಚಿಸುತ್ತಾರೆ. ಹಲವು ಶಾಸನಗಳನ್ನು, ಹಲವು ಕಾವ್ಯಗಳನ್ನು ಚರ್ಚೆಗೆ ಬಳಸಿಕೊಳ್ಳುವ ಅವರ ಅಧ್ಯಯನದ ಪರಿ ಗೌರವ ಮೂಡಿಸದೆ ಇರದು. 'ಕನಕನ ಕಿಂಡಿ ಮತ್ತು ಶಾಸನಗಳು' ಎಂಬ ಲೇಖನವನ್ನು ಕಸಗಾರು ಮಾಧವರಾವ್ ಬರೆದಿರುವರು. 'ಕನಕನ ಕಿಂಡಿಯೂ ಕೃಷ್ಣನ ಹುಂಡಿಯೂ- ಚಾರಿತ್ರಿಕ ವಿಶ್ಲೇಷಣೆ' ಎಂಬ ಲೇಖನವನ್ನು ಡಾ. ಆರ್ಕೆ ಮಣಿಪಾಲ ಬರೆದಿರುವರು. ಇವುಗಳಲ್ಲಿಯ ಚಿಂತನೆಗಳೆಲ್ಲ ರಾಜಕೀಯ ಆಶಯವನ್ನು ಹೊಂದಿರುವಂಥದ್ದು.
ಈ ಹಿನ್ನೆಲೆಯಲ್ಲಿ ಇಲ್ಲಿಯ ಬರೆಹಗಳನ್ನು ಹೊಸ ಮಾನದಂಡದೊಂದಿಗೆ ಅನುಸಂಧಾನ ಮಾಡಬೇಕಾಗುತ್ತದೆ. ಸಾಹಿತ್ಯಿಕವಾಗಿ ಮುಖ್ಯವಾಗುವ ಕನಕದಾಸರು ಸಾಮಾಜಿಕವಾಗಿಯೂ ನಮಗೆ ಏಕೆ ಮುಖ್ಯವಾಗುತ್ತಾರೆ ಎಂಬುದಕ್ಕೆ ಉತ್ತರವನ್ನು ಕಂಡುಕೊಂಡರೆ ಹಲವು ಪ್ರಮೇಯಗಳಿಗೆ ಸಮಾಧಾನ ದೊರೆಯುತ್ತದೆ.
ಒಂದು ವಿಶ್ವವಿದ್ಯಾನಿಲಯದಂಥ ಸಂಸ್ಥೆ ಒಬ್ಬ ಸಂತನ ವಿಷಯದಲ್ಲಿ ಇಷ್ಟೊಂದು ವಿಸ್ತಾರವಾದ ಯೋಜನೆಯನ್ನು ರೂಪಿಸಿದೆ ಎಂದರೆ ಅದೊಂದು ಹೆಮ್ಮೆಪಡುವ ವಿಚಾರವೇ. ಈ ಮೂಲಕ ಅದು ತನ್ನ ಸಾಂಸ್ಕೃತಿಕ ಜವಾಬ್ದಾರಿಯನ್ನು ಪೂರೈಸಿದೆ. ಇನ್ನೂ ಹಲವು ಸಂಪುಟಗಳು ಈ ಯೋಜನೆಯಲ್ಲಿ ಬರಲಿವೆ. ಕನಕನ ಇತಿಹಾಸವನ್ನೆಲ್ಲ ಹೇಳಿದ ಮೇಲೆ ಚರ್ವಿತಚರ್ವಣವಾಗುವ ಅಪಾಯವಿರುತ್ತದೆ. ಇನ್ನು ಅವರ ಕೃತಿಗಳ ಆಶಯದ ಪ್ರಚಾರವಾಗಬೇಕಿದೆ. ಕುಲಕುಲವೆಂದು ಬಡಿದಾಡದಿರಿ ಎಂದ ದಾಸವರೇಣ್ಯರ ಕುಲದ ಬಗ್ಗೆಯೇ ನೂರಾರು ಪುಟಗಳಲ್ಲಿ ಚರ್ಚೆ ನಡೆದಿರುವುದು ಮತ್ತು ಅದರ ಹಿಂದಿರುವ ರಾಜಕೀಯದ ಆಶಯಗಳನ್ನು ಗ್ರಹಿಸಿದಾಗ ಏನನ್ನಿಸಬಹುದು?
ಕೃತಿ: ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ
ಪ್ರಕಾರ: ಸಂಪಾದನೆ
ಏಕೆ ಓದಬೇಕು?: ಕನಕದಾಸರ ಬಗ್ಗೆ ಅರಿಯಲು
ಪ್ರ: ಕನಕದಾಸ ಅಧ್ಯಯನ ಪೀಠ, ಮಂಗಳೂರು ವಿವಿ, ಮೈಸೂರು. ಪುಟಗಳು 1083 (ಎ4) ಬೆಲೆ ರು. 800

ರೋಮ್ಯಾಂಟಿಕ್ ಕತೆ
ಸುಮಾರು 37 ವರ್ಷಗಳಿಂದ ಕತೆಗಳನ್ನು ಬರೆಯುತ್ತಿರುವ ಶಾಂತಾರಾಮ ಸೋಮಯಾಜಿಯವರ 13 ಕತೆಗಳನ್ನು ಒಳಗೊಂಡಿರುವ ಸಂಕಲನ 'ರೋಮ್ಯಾಂಟಿಕ್ ಕತೆ' ಇದೀಗ ಬಂದಿದೆ. 1976ರಲ್ಲಿ ಪ್ರಕಟವಾದ ಅವರ ಮೊದಲ ಕತೆಯೂ ಇದರಲ್ಲಿದೆ. ಮನುಷ್ಯ ವ್ಯಾಪಾರಗಳೇ ಸೋಮಯಾಜಿಯವರಿಗೆ ಮುಖ್ಯವಾಗುತ್ತವೆ. 'ಮಗುವಿನಂಥ ಮನುಷ್ಯ' ಕತೆಯಲ್ಲಿಯ ವೆಂಕಟನ ಮುಖದಲ್ಲಿಯ ತೃಪ್ತಿ ಮತ್ತು ಹೆಮ್ಮೆಯ ನಗುವನ್ನು ಕಾಣಿಸುವುದು ಕತೆಗಾರರ ಪ್ರಮುಖ ಉದ್ದೇಶ. ಇದು ಜೀವನ ಪ್ರೀತಿ. ಪ್ರೀತಿ ಹೊರಚೆಲ್ಲಿದಷ್ಟೂ ಅಕ್ಷಯವಾಗುತ್ತ ಹೋಗುತ್ತದೆ ಎಂಬುದನ್ನು ಲೇಖಕರು ಈ ಸಂಕಲನದ ಮೂಲಕ ಪ್ರತಿಪಾದಿಸುತ್ತಾರೆ. ಕೃತಿಯ ಬೆನ್ನುಪುಟದಲ್ಲಿರುವ, '... ನಿಜಕ್ಕೂ ನಾನು ಕತೆ ಓದುವ ಗೀಳು ಇಟ್ಟುಕೊಂಡವನಲ್ಲ. ಕಥಾಲೋಕದ ಸಾಧ್ಯತೆಗಳೇನೆಂಬುದನ್ನು ಈ ಸಂಕಲನವನ್ನು ಓದಿದರಿಂದ ಅರಿವಾಯಿತು' ಎಂಬ ಕೆ. ಸದಾಶಿವ ಅವರ ಮಾತು, '... ನಿಮಗೆ ನಿಮ್ಮದೇ ಆದ ಭಾಷೆ, ದೃಷ್ಟಿಕೋನ, ಅಭಿವ್ಯಕ್ತಿಯ ತಂತ್ರಗಳಿರುವುದರಿಂದ... ಒಳ್ಳೆಯ ಕತೆಗಾರರು ಎನ್ನುವುದರಲ್ಲಿ ಸಂಶಯವಿಲ್ಲ...' ಎಂಬ ಬಿ.ವಿ. ಕೆದಿಲಾಯರ ಅಭಿಪ್ರಾಯವನ್ನು ಅನುಮೋದಿಸಲೇಬೇಕು.
ಕೃತಿ: ರೋಮ್ಯಾಂಟಿಕ್ ಕತೆ
ಪ್ರಕಾರ: ಕತೆಗಳು
ಏಕೆ ಓದಬೇಕು?: ಕತೆ ಓದಲೇಕೆ ಕಾರಣ
ಪ್ರ: ಹೇಮಂತ ಸಾಹಿತ್ಯ, ಬೆಂಗಳೂರು. ಪುಟಗಳು 160 ಬೆಲೆ ರು. 80


ಚಿಂತನ ಬಯಲು
ಸಾಹಿತ್ಯದ ಚರ್ಚೆಗಾಗಿಯೇ ಮೀಸಲಿಟ್ಟ ಹೊಸ ತ್ರೈಮಾಸಿಕ 'ಚಿಂತನ ಬಯಲು' ರೇಷ್ಮಾ ಜಿ. ಭಟ್ ಅವರ ಸಂಪಾದಕತ್ವದಲ್ಲಿ ಹೊರಬಂದಿದೆ. ಇದರ ಮೊದಲ ಸಂಪುಟದ ಮೂರನೇ ಸಂಚಿಕೆ ಆಕರ್ಷಕವಾಗಿ ಬಂದಿದೆ. ಡಾ.ಬಿ.ವಿ. ವಸಂತಕುಮಾರ್, ಡಾ. ಮಾಧವ ಪೆರಾಜೆ, ರೇಖಾ ವಿ. ಬನ್ನಾಡಿ, ಮೌಲ್ಯ ಜೀವನ್, ಪ್ರೊ. ಆರ್.ಎಲ್.ಎಂ. ಪಾಟೀಲ, ಎಸ್. ಕಾರ್ತಿಕ್, ಡಾ.ಕಾ.ವೆಂ. ಶ್ರೀನಿವಾಸ ಮೂರ್ತಿ, ಸರಸ್ವತಿ ಬಡೆಕ್ಕಿಲ ಅವರ ಪ್ರಬುದ್ಧ ಲೇಖನಗಳು ಇದರಲ್ಲಿವೆ. ಅಲ್ಲದೆ ಕೃತಿ ಸಮೀಕ್ಷೆಯ 'ಹೊತ್ತಿಗೊಂದು ಹೊತ್ತಗೆ' ವಿಭಾಗವಿದೆ. ಉತ್ತಮ ಬರೆಹಗಳ ಕೊರತೆಯ ಪರಿಸ್ಥಿತಿ ಇರುವ ಈ ಕಾಲದಲ್ಲಿ ಸಾಹಿತ್ಯ ಪತ್ರಿಕೆಗಳನ್ನು ನಡೆಸಿಕೊಂಡು ಹೋಗುವುದೇ ಕಷ್ಟದ ಕೆಲಸ. ಹೀಗಿರುವಾಗ ಪ್ರಕಟವಾಗುವ ಬರೆಹಗಳಿಗೆ ಸಂಭಾವನೆಯನ್ನು ನೀಡುವುದಾಗಿ ಸಂಪಾದಕಿ ಪ್ರಕಟಿಸಿದ್ದಾರೆ. ಇದರ ವಾರ್ಷಿಕ ಚಂದಾ ರು. 200. ಇದರ ಚಂದಾದಾರರಾಗ ಬಯಸುವವರು- ಸಂಪಾದಕರು, ಚಿಂತನ ಬಯಲು, ನಂ. 1-109, ಮೊಡಂಕಾಪು ಅಂಚೆ, ಬಂಟ್ವಾಳ ತಾಲೂಕು, ದ.ಕ., 574 219, ಮೊ: 9449772651 ಸಂಪರ್ಕಿಸಬಹುದು.
ಕೃತಿ: ಚಿಂತನ ಬಯಲು
ಪ್ರಕಾರ: ಸಾಹಿತ್ಯ ತ್ರೈಮಾಸಿಕ
ಏಕೆ ಓದಬೇಕು?: ಸಾಹಿತ್ಯ ಚರ್ಚೆಗೆ
ಪ್ರ: ರೇಶ್ಮಾ ಜಿ. ಭಟ್, ಮೊಡಂಕಾಪು, ಬಂಟ್ವಾಳ. ಪುಟಗಳು 88, ಬೆಲೆ ರು. 60


ಹೇಳತೇವ ಕೇಳ
ಹೆಣ್ಣಿನ ಮೇಲೆ ಅತ್ಯಾಚಾರ ಅನಾದಿಯಿಂದ ನಡೆದು ಬಂದಿದೆ. ದೇಶದ ಮೂಲೆಮೂಲೆಯಲ್ಲೂ ಅಮಾನುಷ ಕೃತ್ಯ ನಡೆಯುತ್ತಿದ್ದರೂ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಎರಡು ಘಟನೆಗಳಿಗೆ ತೀವ್ರ ಆಕ್ರೋಶ ವ್ಯಕ್ತವಾಯಿತು. ದೇಶಾದ್ಯಂತ ಸ್ತ್ರೀಶೋಷಣೆಯ ಬಗ್ಗೆ ವೈಚಾರಿಕ ವಾಗ್ವಾದಗಳು ಆರಂಭವಾದವು. 'ಅವಧಿ' ಎಂಬ ಬ್ಲಾಗ್‌ನಲ್ಲಿ ಇಂಥ ಒಂದು ವಾಗ್ವಾದ ನಡೆದದ್ದು ಅದು 'ಹೇಳತೇವ ಕೇಳ..' ಎಂಬ ಕೃತಿಯಾಗಿ ಹೊರಬಂದಿದೆ. 'ದಶಕಗಳ ಕಾಲ ತಮ್ಮೊಳಗೆ ಲೈಂಗಿಕ ಆಕ್ರಮಣದ ನೋವುಗಳನ್ನು ಹೊತ್ತು ಸಾಗುತ್ತಿದ್ದವರು ಈಗ ಅದಕ್ಕೆ ಹೊಸ ರೀತಿಯಲ್ಲಿ ಪ್ರತಿಕ್ರಿಯಿಸಲು ಈ ಸಂಚಿಕೆ ಕಾರಣವಾಯಿತು. ಅವರು ಯಾವಾಗ 'ಇದು ನನ್ನೊಬ್ಬಳ ಕಥೆಯಲ್ಲ' ಎಂದು ಗೊತ್ತಾಯಿತೋ ಈಗ ಪರಸ್ಪರ ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ...' ಎಂದು ಅವಧಿಯ ಪ್ರಧಾನ ಸಂಪಾದಕ ಜಿ.ಎನ್. ಮೋಹನ್ ಹೇಳಿದ್ದಾರೆ. ಮುಂದೊಂದು ದಿನ ಇಂಥ ಸಂಚಿಕೆ ರೂಪಿಸುವ ಕೆಲಸ ಬಾರದಿರಲಿ ಎಂಬುದು ಅವರ ಆಶಯ. ಜಯಲಕ್ಷ್ಮಿ ಪಾಟೀಲ್ ಈ ಕೃತಿಯ ಸಂಪಾದಕಿ. ಮೊದಲ ಭಾಗ 'ಹೀಗಾಯ್ತು...'ದಲ್ಲಿ ಕೆಟ್ಟ ಅನುಭವಗಳ ಕಥನವಿದೆ. ಎರಡನೇ ಭಾಗ 'ಬೇಡ...'. ಮೂರನೇ ಭಾಗ 'ಬಿಕ್ಕು', ಇದರಲ್ಲಿ ನೋವಿನ ಕವಿತೆಗಳಿವೆ. ಕೊನೆಯ ಭಾಗ 'ಬೆಳಕಿನಗಾಗಿ...'ಯಲ್ಲಿ ಕಾರಣ-ಪರಿಹಾರದ ಚಿಂತನೆಗಳಿವೆ.
ಕೃತಿ: ಹೇಳತೇವ ಕೇಳ, ಪ್ರಕಾರ: ಮಹಿಳಾ ಚಿಂತನ
ಏಕೆ ಓದಬೇಕು?: ಹೆಣ್ಣಿನ ನೋವು ಅರಿಯಲು
ಪ್ರ: ಅಭಿನವ, ಬೆಂಗಳೂರು. ಪುಟಗಳು 152 ಬೆಲೆ ರು. 100

ಪ್ರಬಂಧದ ಬಹುನಾದ
ಸಾಹಿತಿಗಳಿಗೆ ವಿಚಾರ ವಿಸ್ತರಣೆಗೆ ಅಧಿಕ ಅವಕಾಶವಿರುವ ಪ್ರಕಾರ ಪ್ರಬಂಧಗಳು. ಪ್ರಬಂಧಗಳಲ್ಲಿಯೇ ಮತ್ತೆ ಅನೇಕ ಒಳಪ್ರಭೇದಗಳಿವೆ. ಎನ್. ಶಿವರಾಮಯ್ಯನವರು ತಮ್ಮ ಅಭಿವ್ಯಕ್ತಿಗೆ ಪ್ರಬಂಧ ಪ್ರಕಾರವನ್ನು ಆಯ್ಕೆಮಾಡಿಕೊಂಡಿದ್ದಾರೆ. 'ಏಕನಾದ ಮತ್ತು ಇತರ ಲಲಿತಪ್ರಬಂಧಗಳು' ಎಂಬ ಅವರ ಕೃತಿಯಲ್ಲಿ 21 ಪ್ರಬಂಧಗಳಿವೆ. ಇವುಗಳನ್ನು ಪ್ರಬಂಧಗಳೆನ್ನಬೇಕೆ ಇಲ್ಲ ಕತೆಗಳೆನ್ನಬೇಕೆ ಎಂಬ ಜಿಜ್ಞಾಸೆಯಲ್ಲಿ ಅವರಿದ್ದಾರೆ. ಸೃಜನಕ್ರಿಯೆಗೆ ಪ್ರಕಾರವೆನ್ನುವುದು ಒಂದು ಔಪಚಾರಿಕತೆ ಅಷ್ಟೇ. ಶಿಶು ಹುಟ್ಟಿದ ಮೇಲಷ್ಟೇ ನಾಮಕರಣ ಮಾಡುವುದು ತಾನೆ? ಏಕನಾದವನ್ನು ಸಂಸಾರಸ್ಥರು ಇಟ್ಟುಕೊಳ್ಳಬಾರದು ಎಂಬುದು ಒಂದು ಸಾಂಪ್ರದಾಯಿಕ ನಂಬಿಕೆ. ಉಳಿದ ವಾದ್ಯಗಳು ಸಲ್ಲುವಾಗ ಇದೇಕೆ ಸಲ್ಲದು. ವೀಣೆ ನುಡಿಸುವವನಿಗೆ ಪ್ರಶಸ್ತಿ, ಏಕತಾರಿ ನುಡಿಸುವವನಿಗೆ ಇಲ್ಲ ಮನ್ನಣೆ. ಇಂಥ ತಾರತಮ್ಯವನ್ನು 'ಏಕನಾದ' ಪ್ರಬಂಧದಲ್ಲಿ ಚರ್ಚಿಸುವರು. ಮನುಷ್ಯ ಜೀವನದ ಸೂಕ್ಷ್ಮತೆಗಳನ್ನು ಒರೆಗೆ ಹಚ್ಚುವ ಇಲ್ಲಿಯ ಬರಹಗಳು ಇಷ್ಟವಾಗುತ್ತವೆ.
ಕೃತಿ: ಏಕನಾದ ಮತ್ತು ಇತರ ಲಲಿತ ಪ್ರಬಂಧಗಳು
ಪ್ರಕಾರ: ಪ್ರಬಂಧಗಳು
ಏಕೆ ಓದಬೇಕು?: ಓದಿನ ಖುಷಿಗೆ
ಪ್ರ: ಸಮರ್ಥ ಪ್ರಕಾಶನ, ಬೆಂಗಳೂರು. ಪುಟಗಳು 148 ಬೆಲೆ ರು. 100

ಹಾಸ್ಯ ಗಂಗೋತ್ರಿ
ಸುಮಾರು ನಾಲ್ಕು ದಶಕಗಳಿಂದ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಬೇಲೂರು ರಾಮಮೂರ್ತಿಯವರು ತಮ್ಮ 22ನೇ ಹಾಸ್ಯ ಬರೆಹಗಳ ಸಂಕಲನ 'ಹಾಸ್ಯ ಗಂಗೋತ್ರಿ'ಯನ್ನು ಈಗ ಪ್ರಕಟಿಸಿರುವರು. ಅವರ ಒಟ್ಟೂ ಕೃತಿಗಳ ಸಂಖ್ಯೆ 88. ಪ್ರಸ್ತುತ ಈ ಕೃತಿಯಲ್ಲಿ 33 ಹಾಸ್ಯ ಬರೆಹಗಳಿವೆ. ನಗು ಮನುಷ್ಯನಿಗೆ ದೇವರು ಕೊಟ್ಟ ವರ. ಒಮ್ಮೆ ನೀವು ನಕ್ಕುಬಿಟ್ಟಿರಿ ಎಂದರೆ ಮನಸ್ಸಿಗೆ ಮತ್ತು ಶರೀರಕ್ಕೆ ಅದೆಷ್ಟೋ ನಿರಾಳತೆ ಒದಗುತ್ತದೆ. ಇಂಥ ಕೃತಿಯನ್ನು ಕೊಂಡು ಮನೆಯಲ್ಲಿ ಇಟ್ಟುಕೊಂಡರೆ ಒತ್ತಡದಲ್ಲಿ ತಲೆ ಕೆಟ್ಟು ಕುಳಿತಾಗ ಇದರಲ್ಲಿಯ ಒಂದು ಬರೆಹ ಓದಿದರೂ ಸಾಕು, ಒತ್ತಡದಿಂದ ಮುಕ್ತರಾಗಿ ನಕ್ಕುಬಿಡುತ್ತೀರಿ. ರಾಮಮೂರ್ತಿಯವರಿಗೆ ಹಾಸ್ಯ ಬರೆವಣಿಗೆ ಎಂದರೆ ಒಂದು ವ್ರತದಂತೆ. ಅವರು ಬರೆಯುತ್ತಲೇ ಇರುತ್ತಾರೆ. ಬರೆದುದರಲ್ಲಿ ಹಾಸ್ಯ ಉಕ್ಕುತ್ತಲೇ ಇರುತ್ತದೆ. ಅವುಗಳ ನಡುವೆ ಲೈಟಾಗಿ ಒಂದು ಜೀವನಪಾಠ. ನಮ್ಮ ಸುತ್ತಮುತ್ತಲಿನ ಪಾತ್ರಗಳೇ ಇಲ್ಲಿ ಮೂರ್ತೀಭವಿಸುವುದರಿಂದ ಅವು ಮಾಡುವ ಪರಿಣಾಮವೂ ತೀವ್ರ.
ಕೃತಿ: ಹಾಸ್ಯ ಗಂಗೋತ್ರಿ
ಪ್ರಕಾರ: ಹಾಸ್ಯ ಬರೆಹಗಳು
ಏಕೆ ಓದಬೇಕು?: ನಕ್ಕು ಹಗುರಾಗಲು
ಪ್ರ: ಹೇಮಂತ ಸಾಹಿತ್ಯ, ಬೆಂಗಳೂರು. ಪುಟಗಳು 200 ಬೆಲೆ ರು. 100


ಪರ್ಷಿಯನ್ ಕವಿತೆಗಳು
ಭಾರತೀಯ ಸಂಸ್ಕೃತಿಗೆ ಸಂವಾದಿಯಾಗಿರುವ ಪರ್ಷಿಯಾದ ಸಾಹಿತ್ಯ ಭಾರತೀಯರನ್ನು ಅಂತೆಯೇ ಕನ್ನಡಿಗರನ್ನು ಆಕರ್ಷಿಸಿದೆ. ಹಂಜಾಲಾಹ್, ಅಬು ರುಡಾಕಿ, ಅಬುಶುಕೂರ್ ಬಾಲ್ಕಿ, ಮಹಮ್ಮದ್ ದಾಖಿಖಿ, ಫಿರ್‌ದೌಸಿ ಮೊದಲಾದವರ ಕಾವ್ಯವನ್ನು ಹದಿಹಸನ್ ಪರ್ಷಿಯನ್‌ನಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದರು. ಅವುಗಳಲ್ಲಿ ಕೆಲವನ್ನು ಡಾ. ವಿಜಯಾ ಸುಬ್ಬರಾಜ್ ಅವರು 'ಪರ್ಷಿಯನ್ ಕವಿತೆಗಳು' ಹೆಸರಿನಲ್ಲಿ ಕನ್ನಡಕ್ಕೆ ತಂದಿರುವರು. 'ಸಿಂಹದ ಬಾಯಲ್ಲಿ ಅಧಿಕಾರ ಇದೆಯೆಂದಾದರೆ ಎದೆಗೆಡದೆ ಮುನ್ನುಗ್ಗು, ಕಸಿದುಕೋ ಅದನು. ಶ್ರೇಷ್ಠತೆ, ಗೌರವ, ಸಿರಿ ಅಧಿಕಾರವೋ, ಇಲ್ಲ, ಧೀರನಿಗೆ ಶೂರನಿಗೆ ಮುಖಾಮುಖಿ ದೊರೆವ ಸಾವೋ' ಎಂಬುದು ಹಂಜಾಲಾಹ್ ಅವರ ಕವಿತೆಯ ಸಾಲುಗಳು. ಈತನ ಕಾಲ ಒಂಬತ್ತನೇ ಶತಮಾನ. ಈತನಿಂದ ಹಿಡಿದು ಮಧ್ಯಯುಗದ ವರೆಗಿನ ಪ್ರಮುಖ ಕವಿಗಳ ಪ್ರಾತಿನಿಧಿಕ ಕಾವ್ಯ ಇಲ್ಲಿದೆ. ಇವು ಪರ್ಷಿಯನ್ ಕಾವ್ಯದ ಅನರ್ಘ್ಯ ಮುತ್ತುಗಳು. ಆಧುನಿಕ ಪರ್ಷಿಯನ್ ಕಾವ್ಯ ಇಲ್ಲಿಲ್ಲ. ಅನುವಾದ ಸಮರ್ಥವಾಗಿದೆ.
ಕೃತಿ: ಪರ್ಷಿಯನ್ ಕವಿತೆಗಳು, ಪ್ರಕಾರ: ಕಾವ್ಯ
ಏಕೆ ಓದಬೇಕು?: ಪರ್ಷಿಯನ್ ಕಾವ್ಯದ ಅರಿವಿಗೆ
ಪ್ರ: ಶುಭದ ಪ್ರಕಾಶನ, ಬೆಂಗಳೂರು. ಪುಟಗಳು 108 ಬೆಲೆ ರು. 80

ಚಿಂತನ ರಶ್ಮಿ
ರಾಮ ಸುಬ್ರಾಯ ಶೇಟ್ ಅವರು ಭದ್ರಾವತಿಯ ಆಕಾಶವಾಣಿ ಕೇಂದ್ರಕ್ಕಾಗಿ ಬರೆದು ಓದಿದ ಚಿಂತನಗಳು ಈಗ 'ಚಿಂತನ ರಶ್ಮಿ' ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಬಂದಿದೆ. ಸಮಯ ಮಿತಿಗೆ ಒಳಪಟ್ಟು ಬರೆದಿರುವ ಇವುಗಳಲ್ಲಿ ಕೆಲವನ್ನು ಇನ್ನಷ್ಟು ವಿಸ್ತರಿಸಬಹುದಿತ್ತೇನೋ ಎನ್ನಿಸದೆ ಇರದು. ಬದುಕಿಗೆ ಉಪಯುಕ್ತವಾದ ಹಲವು ವಿಚಾರಗಳು ಈ ಕೃತಿಯಲ್ಲಿವೆ. ಜೊತೆಗೆ ಸಮಕಾಲೀನ ವಿಚಾರಗಳನ್ನೂ ಇಲ್ಲಿ ಚರ್ಚಿಸಲಾಗಿದೆ. ಇವರದೇ ಇನ್ನೊಂದು ಕೃತಿ 'ಗಮಕ ನೂರೆಂಟು'. ಆರು ಪುರಾಣ ಪ್ರಸಂಗಗಳನ್ನು ಆಯ್ದುಕೊಂಡು ಪ್ರತಿಯೊಂದಕ್ಕೂ ಹದಿನೆಂಟು ಭಾಮಿನಿ ಷಟ್ಪದಿಗಳನ್ನು ಬರೆದಿರುವರು. ಆಧುನಿಕ ಕಾಲದಲ್ಲಿ ಕಾವ್ಯ ರಚನೆಗೆ ಷಟ್ಪದಿಯನ್ನು ಬಳಸಿದ್ದು ಲೇಖಕರ ವಿಶೇಷತೆ. ತಾವು ಆಯ್ಕೆ ಮಾಡಿಕೊಂಡ ವಿಷಯವನ್ನು ಹದಿನೆಂಟು ಷಟ್ಪದಿಗಳಲ್ಲಿ ವಿವರಿಸಲು ಸಾಧ್ಯವಿಲ್ಲ ಎಂಬ ಅರಿವು ಲೇಖಕರಲ್ಲಿದೆ. ಅದಕ್ಕಾಗಿಯೇ ಪ್ರತಿ ಕಾವ್ಯದ ನಂತರ ಗದ್ಯದಲ್ಲಿ ಅವುಗಳ ವಿವರಣೆಯನ್ನು ನೀಡಿದ್ದಾರೆ. ಅಕ್ಷರಗಳನ್ನು ದೊಡ್ಡದಾಗಿ ಮುದ್ರಿಸಿದ್ದರಿಂದ ಕನ್ನಡಕವಿಲ್ಲದೆಯೂ ಓದಬಹುದು.
ಕೃತಿ: ಚಿಂತನ ರಶ್ಮಿ/ ಗಮಕ ನೂರೆಂಟು
ಪ್ರಕಾರ: ಚಿಂತನ/ ಕಾವ್ಯ
ಏಕೆ ಓದಬೇಕು?: ಓದಿನ ಖುಷಿಗೆ
ಪ್ರ: ಶ್ರೀರಾಮತತ್ವ ಪ್ರಕಾಶನ ಸಮಿತಿ, ಚಿಕ್ಕಮಗಳೂರು


ಅಂಬಲಗೆ ಅನುವಾದ
ಪ್ರೊ.ಕಾಶಿನಾಥ ಅಂಬಲಗೆಯರು ಅನುವಾದಿಸಿರುವ ಎಂಟು ಕೃತಿಗಳು ಒಮ್ಮೆಲೇ ಬಂದಿವೆ. ಒಂದು ಎರಡು ಕೃತಿಗಳನ್ನು ಬಿಡುಗಡೆ ಮಾಡುವುದೇ ದೊಡ್ಡ ಸಂಭ್ರಮ. ಅದಕ್ಕಿಂತಲೂ ದೊಡ್ಡ ಸಂಭ್ರಮ ಪಟ್ಟುಕೊಳ್ಳುವವರ ಸಾಲಿಗೆ ಕಾಶಿನಾಥವರು ಅಪರೂಪವಾಗಿ ಸೇರಿಕೊಂಡಿದ್ದಾರೆ. ಅನ್ಯಭಾಷೆಗಳ ಹಿರಿಯ ಕವಿಗಳ ಕವಿತೆಗಳು ಹಾಗೂ ಗಜಲ್‌ಗಳು ಇದರಲ್ಲಿ ಸೇರಿವೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಗುಜರಾತಿನ ಹೆಸರಾಂತ ಕವಿ ಉಮಾಶಂಕರ ಜೋಶಿ, ಆಜ್ಞೇಯ (ಸಚ್ಚಿದಾನಂದ ವಾತ್ಸಾಯನ), ಹಿಂದಿಯ ಪ್ರಸಿದ್ಧ ಕವಿ ಸುಮಿತ್ರಾನಂದನ ಪಂತ, ಡಾ. ರಾಮಧಾರಿ ಸಿಂಹ ದಿನಕರ ಅವರ ಕತೆಗಳು ಮತ್ತು ರಘುವೀರ ಸಹಾಯ ಅವರ ಕವಿತೆ ಮತ್ತು ಕುಂವರ್ ಬೇಚೈನ್, ಅಶೋಕ ಮಿಜಾಜ್ ಹಾಗೂ ಬೇರೆಬೇರೆ ಕವಿಗಳ ಘಜಲ್‌ಗಳನ್ನು ಅಂಬಲಿಗೆ ಕನ್ನಡಕ್ಕೆ ತಂದಿದ್ದಾರೆ. ಇದೊಂದು ಸ್ತುತ್ಯರ್ಹವಾದ ಕಾರ್ಯವಾಗಿದೆ. ಬೇರೆ ಭಾಷೆಯ ಸೊಗಡು ಆದಷ್ಟು ಕನ್ನಡೀಕರಣಗೊಳ್ಳಬೇಕು. ಒಂ ು ಭಾಷೆಯು ಶ್ರೀಮಂತವಾಗುವುದಕ್ಕೆ ಅನುವಾದಗಳೂ ಕಾರಣವಾಗುತ್ತವೆ. ಅನುವಾದ ಸಾಹಿತ್ಯ ಕನ್ನಡದಲ್ಲಿ ಬೆಳೆದಿದೆಯಾದರೂ ಅಷ್ಟರಮಟ್ಟಿಗೆ ಎನ್ನುವಂತಿಲ್ಲ. ಯು.ಆರ್. ಅನಂತಮೂರ್ತಿಯವರು ಅನುವಾದ ಸಾಹಿತ್ಯವನ್ನು ಬಲವಾಗಿ ಪ್ರತಿಪಾದಿಸಿದವರು. ಅವರ ಪ್ರಕಾರ, ಅನುವಾದ ಎನ್ನುವುದೂ ಒಂದು ಸಾಹಿತ್ಯ ಪ್ರೀತಿಯೇ. ಅಂಬಲಿಗೆಯವರ ಸಾಹಿತ್ಯದ ಮೇಲಿನ ಪ್ರೀತಿಯನ್ನು ನಾವು ಈ ಅನುವಾದಗಳಲ್ಲಿ ಕಾಣಬಹುದು. ಘಜಲ್‌ಗಳು ಕನ್ನಡದಲ್ಲಿ ಕಡಿಮೆ. ಈ ಅನುವಾದಗಳನ್ನು ನೋಡಿ ಕನ್ನಡ ಸಾಹಿತಿಗಳೂ ಘಜಲ್‌ಗಳ ರಚನೆಗೆ ಮುಂದಾದರೆ ಆಶ್ಚರ್ಯವಿಲ್ಲ. ಹಾಗೆ ಆದಾಗ ಮಾತ್ರ ಅನುವಾದಕರ ಶ್ರಮ ಸಫಲ.

ಪ್ರೇಮಕಾವ್ಯ
ಇಟಲಿಯ ಮೂಲ ಹೊಂದಿರುವ ಸಾನೆಟ್‌ಗಳು ಕನ್ನಡಿಗರಿಗೆ ಪರಿಚಯವಾದದ್ದು ಇಂಗ್ಲಿಷ್ ಮೂಲಕ. ಕನ್ನಡದ ಪ್ರಮುಖ ಕವಿಗಳು ಈ ಪ್ರಕಾರದಲ್ಲಿ ರಚನೆ ಮಾಡಿದ್ದಾರೆ. ಪ್ರಸ್ತುತ ವೆಂಕಟಗಿರಿ ಕಡೇಕಾರ್ ಅವರು 'ಚೆಲುವ ಚೆಲುವೆಯರ...' ಕೃತಿಯನ್ನು ಸುನೀತದಲ್ಲಿಯೇ ರಚಿಸಿದ್ದಾರೆ. ಇವು ಪ್ರಣಯ ಗೀತೆಗಳು. ಇಲ್ಲಿಯ ಕವಿತೆಗಳಿಗೆ ಒಬ್ಬ ನಾಯಕ ರಾಜ ಯಾನೆ ರಾಜಮೋಹನ, ಒಬ್ಬಳು ನಾಯಕಿ ಮಂದು ಯಾನೆ ಮಂದಾಕಿನಿ ಇದ್ದಾರೆ. ಮೂವತ್ತೈದು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿ ಮೂವರು ಮಕ್ಕಳನ್ನು ಹಡೆದು ಸುಖವಾಗಿ ಬಾಳುತ್ತಿರುವ ಆನಂದ ಕ್ಷಣಗಳ ಚಿತ್ರಣ ಈ ಸುನೀತಗಳಲ್ಲಿದೆ. 'ಆಸೆಯೆ ನಗೆ ಅವಳ ಕೆಂಪು ಕೆನ್ನೆ, ಮುದ್ದುಗಲ್ಲ ಸವರುವ/ ಮುದದಿಯವಳ ಕಣ್ಣ ನೋಟ ಸೆಳೆದುಬಿಡುವ ಕಾತರ' ಎಂಬಂಥ ತೀವ್ರ ವೈಯಕ್ತಿಕವೂ ಮಾನಸಿಕವೂ ಆದ ಪ್ರೀತಿಪ್ರೇಮಗಳ ಅಭಿವ್ಯಕ್ತಿ ಇಲ್ಲಿದೆ. ಇವು ತೀವ್ರ ವ್ಯಾಮೋಹದಲ್ಲಿ ಮಾತ್ರ ಸಾಧ್ಯ. ವೆಂಕಟಗಿರಿಯವರು ಇಲ್ಲಿ ಸ್ವಗತ, ನಿವೇದನ, ಸ್ವೀಕಾರ, ನಡಿಗೆ, ನೆಮ್ಮದಿ ಎಂಬ ಭಾಗಗಳಲ್ಲಿ ಸಾನೆಟ್‌ಗಳನ್ನು ವಿಂಗಡಿಸಿದ್ದಾರೆ. ಬಿಡಿ ಸಾನೆಟ್‌ಗಳು ಇಡಿಯಾಗಿ ಒಂದು ಕತೆಯನ್ನು ಹೆಣೆಯುತ್ತವೆ. ಪ್ರತಿಯೊಂದಕ್ಕೂ ಆಕರ್ಷಕ ರೇಖಾಚಿತ್ರಗಳಿವೆ.
ಕೃತಿ: ಚೆಲುವ ಚೆಲುವೆಯರ...., ಪ್ರಕಾರ: ಕಾವ್ಯ
ಏಕೆ ಓದಬೇಕು?: ಕಾವ್ಯ ಸುಖಕ್ಕೆ
ಪ್ರ: ಭಾರತೀ ಪ್ರಕಾಶನ, ಮೈಸೂರು. ಪುಟಗಳು 130 ಬೆಲೆ ರು. 65

-ಡಾ. ವಾಸುದೇವ ಶೆಟ್ಟಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.