ಮೂರ್ನೇ ಸಲ

ತುಂಬಿದ್ದ ತಿಪ್ಪಿ ನೋಡಿ ಈರಭದ್ರಗ ಆನಂದಾಗೋಯ್ತು. ಗಬ್ರಾಡ್ಕೆಂತಾ ತಳ್ದಾಗ ಕೆದಕಾವಾಗ ಚೆನ್ನಾಗಿರೋ ಅಂಗಿ ಕಾಣಿಸ್ತು. ಸಂಭ್ರಮ್ದಾಗ ಅದುನ್ನ ಮ್ಯಾಲೆ ಎತ್ತ್ತ್ತಿದಂಗ ಅದ್ರಾಗಿಂದ ಸಣ್ಣ ಪಿಸ್ತೂಲು ಬಿತ್ತು! ಹಣೀಮ್ಯಾಗ ಬೆವ್ರು ಸಾಲು ಸಣ್ಣಗ ಮೂಡಕತ್ತಿದ್ವು. ಅತ್ತಾಗಿತ್ತಾಗ ನೋಡಿ ಅದನ್ನ ಎತ್ಕೆಂಡು ಚೀಲದ್ ತಳ್ದಾಗ ಇಟ್ಕಂಡು ಅಲ್ಲಿಂದ ಹೊಂಟ. ಮನ್ಸಿನ್ಯಾಗೆಲ್ಲ ಬರೀ 'ಪಿಸ್ತೂಲು! ಪಿಸ್ತೂಲು! ಪಿಸ್ತೂಲು!!! ಯಲ್ಲೋ ನೋಡೀನಿ? ಯಲ್ಲಿ ನೋಡೀನಿ?'
ವರ್ಷದಿಂದೆ ಇವಾಗಿಂತ ಚೆನ್ನಾಗಿದ್ದ ದಿನಗಳು. ದಿನಕ್ಕ ಬೇಕಾಗೋಷ್ಟು ರೊಕ್ಕಾನ ಗುಜ್ರಿ ಅಂಗ್ಡಿ ನಾಗಣ್ಣ ಕೊಡ್ತಿದ್ದ. ವಯಸ್ಸು ಬಂತು- ಹೋಯ್ತು. ಮದ್ವಿಲ್ಲ- ಮಕ್ಳಿಲ್ಲ. ಈರಭದ್ರನ ಆಸೆ ಅಂದ್ರೆ ದಿನ ಕಳ್ದು ತಿರ್ಗಿ ಬೆಳ್ಕರೀಯೋದ್ರಾಗ ತಿಪ್ಪಿ ತುಂಬಿದ್ರೆ ಸಾಕು ಅನ್ನೋದು.
ವೊಂದಿನ ಬೆಳಗ್ಗೆ ತಿಪ್ಪಿ ಕಡಿ ಓಡ್ಕೆಂತಾ ಬಂದು ಅಲ್ಲಾವಾಗ್ಲೇ ಕಾದ್ರಾಕತ್ತಿದ್ದ ಯೋಳೆಂಟು ವರ್ಷದ ಹುಡ್ಗುನ್ನ ಹಿಡ್ದು ತಲೀಗೆ ಎಲ್ಡೇಟು ಕೊಟ್ಟ. ಹುಡುಗುನ ಚೀಲಾ ಖಾಲಿ ಮಾಡಿ ತನ್ನದುನ್ನ ತುಂಬ್ಕೆಂಡು ಅಲ್ಲಿಂದ ಹೊಂಟ.
ಮುಂದೊಂಟ ಈರಭದ್ರಗ ಕಲ್ಲು ಬಂದು ರಪ್ಪಂತ ಮೊಣಕಾಲಿಗೆ ಬಡೀತು. ತಿರಿಗಿ ನೋಡಿದ್ರೆ ದೂರ್ದಾಗ ಆ ಹುಡುಗ ಓಡ್ತಿದ್ದ. ನವ್ವು- ಸಿಟ್ಟು ಸರ್ರಂತ ಏರಿ ಕೂಗಾಡ್ಕೆಂತ ಬೆನ್ನತ್ತಿದ. ಹುಡ್ಗ ಸಂದಿ-ಗೊಂದ್ಯಾಗ ನುಗ್ಗಿ ಇವ್ನ ಏರಿಯಾದಾಗ ಇವ್ನಿಗೇ ದಿಕ್ತಪ್ಸಿ ಪರಾರ್ಯಾಗ್ಬಿಟ್ಟ.
ಮರ್ದಿನ ಬೆಳಗ್ಗೆ ಚಾದಂಗ್ಡೀಗೆ ಬಂದ. ಮೂಲ್ಯಾಗ ತನೀಗೆ ಕಲ್ಲೋಡ್ದ ಹುಡ್ಗ ಮಕ್ಕಂಡಿದ್ದ. ಸಂತೋಷಾಗೋಯ್ತು. ಸಿಟ್ಟಿನ್ಯಾಗ ಹಿಡ್ದೆಬ್ಸಿದ. ಹುಡ್ಗ ಗಾಬ್ರಿಯಾಗಿ ಕೊಸ್ರಾಡಿ ದಪ್ಪನ್ನಂಗ ಬಿದ್ದ. ಅವ್ನ ಮೈ ಬಿಸಿ ಈರಭದ್ರಗ ತಟ್ಟಿತು. ಆ ಹುಡುಗುನ್ನ ಎಬ್ಸಿ ಕುಂದ್ರಿಸಿ ಉಪ್ಪಿಟ್ಟನ್ನ ಕೈಯಾಗಿಟ್ಟ. ಮಕಾ ನೋಡಿದ ಹುಡ್ಗ ಹೆದ್ರಿಕೆಂಡೇ ಸುಡ್ ಸುಡಾ ಉಪ್ಪಿಟ್ನ ಗಬಗಬಾಂತ ತಿಂದು ನೀರ್ಕುಡ್ದು ಮಕ್ಕಂಡ.
ಮರ್ದಿನ ಬೆಳಗ್ಗೆ ಖಾಲಿ ಚೀಲ ಕೈಯಾಗಿಡ್ಕಂಡು ಆ ಹುಡುಗ ತಿಪ್ಪಿಕಡೀ ನೋಡ್ಕೆಂತಾ ಮಾರು ದೂರಾ ನಿಂತಿದ್ದ. ಈರಭದ್ರ ಮೆಲ್ಲಕ ಹುಡುಗುನ ಹತ್ರ ಬಂದು ಕೆಕ್ಕರ್ಸಿ ನೋಡಿ 'ಬಾ...' ಅಂತಂದ. ಇಬ್ರೂ ತಿಪ್ಪೀನ ಕೆದ್ರಾಕ ಶುರುಮಾಡಿದ್ರು.
ಹುಡ್ಗುಗ ಅಪ್ಪಿಲ್ಲ- ಅವ್ವಿಲ್ಲ- ಸೂರಿಲ್ಲ- ಹೆಸ್ರಿಲ್ಲ. ಇವ್ನೇ ಇರ್ಪಾಕ್ಷಿ ಅಂತೆಸ್ರಿಟ್ಟು 'ನಾನ್ ಈರ್ಭದ್ರ ಈ ನನ್ಮಗ ಇರ್ಪಾಕ್ಷಿ' ಅಂತಂದು ನಕ್ಕ. ಇಬ್ರೂ ಇಡೀ ದಿನ ಅಲ್ದಲ್ದು ಚೀಲ ತುಂಬ್ಸಿ ದುಡ್ಡು- ದಣ್ದು- ಉಂಡು- 'ಶಿವಾ!' ಅಂತ ಮಕ್ಕಂತಿದ್ರು.
ಇನ್ನೊಂದಿನ ಸಂಜೀ ಮುಂದೆ ಇಬ್ರೂ ಅಸ್ಪತ್ರೀ ಕಸದ್ ಗುಂಡ್ಯಾಗಿದ್ದಾಗ ಕೆದ್ರಾಕತ್ತಿದ್ದ ಹುಡ್ಗುಗ ದೊಡ್ಡ ಗಾಜು ಮತ್ತದ್ರ ಜತೀಗಿದ್ದ ಸೂಜಿ ಅಂಗೈನಾಗ ನೆಟ್ಟು ಯಳೇ ಚರ್ಮಾನ ಕೊರುದ್ವು. ಇರ್ಪಾಕ್ಷಿ 'ಯಣ್ಣಾ' ಅಂತ ಕಿರ್ಲಿದ. ಬರೋಬ್ಬರಿ ಗಾಯ ಆಗಿ ಬುಳು ಬುಳು ರಕ್ತ ಬರಾಕತ್ತೀತು. ಯಮ್ಕಿ ಕಾಣಾಕತಿದ್ವು. ಹುಡುಗ ಜ್ಞಾನ ತಪ್ಪಿಟ್ಟ.
ಇರ್ಪಾಕ್ಷಿನ್ನ ಎತ್ಕೆಂಡು ಓಡೋಡಿ ಬರಾದನ್ನ ಗೌರ್ಮೆಂಟ್ ಆಸ್ಪತ್ರಿ ವಾರ್ಡ್ ಬಾಯ್ ದೂರ್ದಿಂದಾನೇ ನೋಡಿ 'ಏಯ್, ದೊಡ್ಡ ಗಾಯ!, ಜಗ್ಗಿ ಖರ್ಚಾಗ್ದತೆ. ಇನ್ನೂರು ರೂಪಾಯಿ!' ಅಂತಂದ. ತನ್ನತ್ರ ಇಲ್ಲದ ದುಡ್ಡುನ್ನ ತರಾಕ ಈರಭದ್ರ ಗುಜ್ರಿ ಅಂಗ್ಡೀ ಕಡೀಗೆ ಓಡ್ದ.
ಅತ್ತೂ ಗಿತ್ತೂ ಗೋಳಾಡಿ ಕಾಲಿಗೆ ಬೀಳಾಕ್ಬಂದ ಈರಭದ್ರಗ ನಾಗಣ್ಣ ಐವತ್ತು ರುಪಾಯಿ ಕೊಟ್ಟು 'ನಡೀ' ಅಂದ. ಆದ್ರೆ ವಾರ್ಡ್ಬಾಯ್ 'ನೀನ್ ಕೊಟ್ಟ ರೊಕ್ಕಕ್ಕ ಇಷ್ಟೇ ಆಗಾದು' ಅಂತ ಬ್ಯಾಂಡೇಜ್ ಕಟ್ಟಿದ್ದ ಇರುಪಾಕ್ಷಿ ಕೈನ ತೋರ್ಸಿ 'ಏಯ್, ದುಡ್ಡು ತಂದು ಸೂಜಿ ಹಾಕ್ಸು ಇಲ್ಲಂದ್ರೆ ಗಾಯ ಜಲ್ದಿ ಮಾಯಂಗಿಲ್ಲ ನೋಡು' ಅಂತಂದು ಗದುಮಿದ.
ಇನ್ನೂರು ರುಪಾಯಿ ಸೇರ್ಸಿ 'ಆಸ್ಪತ್ರೀಗೆ ನಡೀ' ಅಂದ್ರೆ ಹುಡುಗ 'ಬರಾದಿಲ್ಲ' ಅಂತಂದ. ಬೈದ್ರೂ ಕೇಳ್ಲಿಲ್ಲ. ಈರಭದ್ರ ಬಿಡ್ಲಿಲ್ಲ, ತಾನೇ ಏನೇನೋ ಔಷ್ಧಿ ತಂದು ಹಚ್ಚಿದ. ಗಾಯ ಮಾಯ್ಲಿಲ್ಲ.
ಮೂರು ವಾರಾಗಿ ವೊಂದಿನ ಬೆಳಗ್ಗೆ ಬರ್ಳು ಮಡ್ಚಾಕೋದ ಆದ್ರೆ ಆಗ್ಲಿಲ್ಲ. ಇಬ್ರೂ ಗಾಬ್ರಿಯಾಗಿ ಓಡ್ಕೆಂತ ಆಸ್ಪತ್ರಿಗೆ ಬಂದ್ರೆ ಅದೇ ವಾರ್ಡ್ ಬಾಯ್ 'ಲೇ, ಮುಂದ್ಲು ವಾರ ಬಾ, ಇಲ್ಲಾಂದ್ರೆ ಹೋಗಿ ಜಲ್ದಿ ಐನೂರು ತಾಂಬ ಹೋಗು' ಅಂತಂದ. ಕಟ್ಟೀಮ್ಯಾಲೆ ಹೆಣ್ಮಗ್ಲೊಬ್ಬಾಕಿ ಪಕ್ಕುಕ್ಕ ಇರ್ಪಾಕ್ಷಿನ ಮಲುಗ್ಸಿ ಈರಭದ್ರ ಓಡ್ದ.
ನಾಗಣ್ಣ ಕೊಟ್ಟ ಇನ್ನೂರನ್ನ ತಗಂಡು ಬಂದ, ಆಸ್ಪತ್ರಿ ಕಟ್ಟೀಮ್ಯಾಲೆ ಜನಾ ಸೇರಿದ್ರು. ಹೋಗೋವಾಗ ಚೆನ್ನಾಗಿದ್ದ ಆ ಹೆಣ್ಮಗ್ಳು ಸತ್ತೋಗಿದ್ಲು. ಆಕಿ ಪಕ್ದಾಗ ಗೋಳಾಡ್ತಿದ್ದ ಕೂಸುನ್ನ ಕಂಡು ಈರಭದ್ರ ಅಳಾಕತ್ತೀದ. ಒಳಾಗಿದ್ದ ಇರ್ಪಾಕ್ಷಿನ ಎಳ್ಕಂಡು ಆಸ್ಪತ್ರಿಯಿಂದ ಹೊರಗ ಬಂದ. ಇದುನ್ನ ನೋಡ್ಕೆಂತಾ ವಾರ್ಡ್ ಬಾಯ್ ಸುಮ್ನೆ ನಿಂತಿದ್ದ.
ಹದ್ನೈದಿನ ಕಾಡಿದ ಭಯಂಕರ ಜರಕ್ಕ ಒಂದಿನ ರಾತ್ರಿ ಇರ್ಪಾಕ್ಷಿ ಸಣ್ಣ ದನೀಲೆ 'ಯಣ್ಣಾ' ಅಂದು ಕಣ್ಣು ಮುಚ್ದ. ಯಷ್ಟೋತ್ತಾದ್ರು ಇರ್ಪಾಕ್ಷಿ ಸತ್ತಿದ್ದು ಈರಭದ್ರಗ ತಿಳೀಲೇಲ್ಲ. ತಲೀಮ್ಯಾಗಿನ ತಣ್ಣಿರ್ ಬಟ್ಟೀನ ಆವಾಗಾವಾಗ ನೆನ್ಸಿ ಹಾಕ್ತಾನೇ ಇದ್ದ. ಒಂದೊತ್ತಿನ್ಯಾಗ 'ಇರ್ಪಾಕ್ಷಿ' ಅಂದು ಒಮ್ಮೀಲೆ 'ಯವ್ವೋ' ಅಂತ ಯದೀ ಬಡ್ಕಂಡ. ನಡುರಾತ್ರ್ಯಾಗ ಇವ್ನು ಅಳಾದುನ್ನ ಕೇಳಿ ದೂರ್ದಾಗ ನಾಯಿಗುಳು ಬೋಗ್ಳಾಕತ್ತಿದ್ವು.
ಮಸಾಣ ಅನ್ನೋ ಯಣಗುಳ ತಿಪ್ಯಾಗ ಅತ್ಗಂತ ಇರ್ಪಾಕ್ಷಿನ ಮಣ್ಣು ಮಾಡಿ ಬಂದ. ಗುಡುಸ್ಲಿಗೆ ಬೆಂಕಿ ಬಿತ್ತು. ಬದ್ಕು ಬೂದಿಯಾಯ್ತು.
ಇದಾಗಿ ಮೂರ್ನಾಕು ತಿಂಗ್ಳಾದ ವೊಂದಿನ ಸಂಜೀ ಮುಂದೆ ಅಂಗ್ಡಿಗೆ ಬರೋವಾಗ ಜೋರು ಪಟಾಕಿ ಶಬ್ದ ಕೇಳ್ಸಿತು. ಅಂಗ್ಡಿಯಾಗಿಂದ ಓಡಿಬಂದು ಸುಮೋ ಗಾಡಿ ಹತ್ತಿ ಹೋದ ನಾಕು ಜನ್ದಾಗ ಒಬ್ಬನ ಕೈಯಾಗ ಇಂಥದೇ ಪಿಸ್ತೂಲಿತ್ತು!!! ಜನ ಮುಕ್ರಿದ್ರು- ಪೊಲೀಸೋರು ಬಂದ್ರು. ಈರಭದ್ರಗ ಆಮ್ಯಾಲೆ ಗೊತ್ತಾಯ್ತು. ಅದು ಪಟಾಕಿದಲ್ಲ, ಗುಂಡಿನ ಶಬ್ದ ಅಂತ. ಒಳಾಗೋಗಿ ನೋಡಿದ ನಾಗಣ್ಣನ ಯಣ! ಈರಭದ್ರ ಅಳಾಕತ್ತೀದ.
ಇರ್ಪಾಕ್ಷಿ- ನಾಗಣ್ಣ ಹೋದ್ರು, ಖುಷೀ- ದುಡಿಮೀ ಯಣ ಆದ್ವು.
ಇವಾಗ ಕೈಯಾಗಿರೋ ಅಂಥದೇ ಪಿಸ್ತೂಲಿನ್ಯಾಗ ಇನ್ನಾ ನಾಕು ಗುಂಡಿದ್ವು. ಕತ್ಲು ಕಳ್ದು ಬೆಳುಕರೀತು. ಜೋರ್ ಜೋರು ನೆಡ್ದ. ತಿರ್ವಿನ್ಯಾಗ ಯಾವ್ದೋ ಸೈಕಲ್ಲಿನ ಬೆಲ್ಲಿನ ಶಬ್ದ ಆಯ್ತು. ಜತೀಗೆ ಜೋರು ಪಟಾಕಿ ಶಬ್ದ!!!
ಮೂರ್ನೇ ಸಲ ಪಿಸ್ತೂಲಿಂದ ಗುಂಡು ಸಿಡ್ದಿತ್ತು. ಈರಭದ್ರನ ಕಣ್ಮುಂದೆ ಮೂರ್ನೇ ಸಲ ಪರಿಚಯದ್ ಯಣ ಬಿದ್ದಿತ್ತು. ಯತ್ತಾಗೋ ಓಡಾಕತ್ತಿದ. ಈಕಡೀಗೆ ತಲೀಗೆ ಗುಂಡು ಹೊಕ್ಕ ಅದೇ ವಾರ್ಡ್ಬಾಯ್ನ ಮೈಯಾಗುಳು ಉಸ್ರು ನಿಂತು ರೋಡಿನ ಮ್ಯಾಲೆ ರಕ್ತ ತೊಟ್ಟಿಕ್ಕಾಕತ್ತಿತ್ತು...
-ಪ್ರವೀಣ್ಕುಮಾರ್ ಜಿ.
9611360860
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


