

ಚಾರ್ಲಿ ಚಾಪ್ಲಿನ್ ಎಂದ ಕೂಡಲೇ ಕುಳ್ಳಗೆ, ತಲೆ ಮೇಲೊಂದು ಟೋಪಿ, ಕೈಯಲ್ಲೊಂದು ಕೋಲು, ಚಿಂದಿ ಬಟ್ಟೆಯನ್ನು ನೆನಪಿಸುವ ಹರಿದ ಲೂಸ್ ಪ್ಯಾಂಟು, ಕೋಟು ಧರಿಸಿ, ವಕ್ರ ವಕ್ರವಾಗಿ ನಡೆಯುತ್ತ ಚೇಷ್ಟೆ ಮಾಡುವ ಆಕೃತಿ ಕಣ್ಮುಂದೆ ಮೂಡುತ್ತದೆ. ಸುತ್ತಲಿನವರನ್ನೂ ನಗೆಯ ಅಲೆಗಳಲ್ಲಿ ಮೈ ಮರೆಯುವಂತೆ ಮಾಡಿದ ಜಗತ್ತಿನ ಅತಿ ದೊಡ್ಡ ಕಲಾಶಿಖರ ಚಾರ್ಲಿ. ಈತನ ತಾಯಿ ಗಾಯಕಿ. ಶೃತಿ, ಲಯ, ಸ್ವರ ಯಾವುದರ ಪರಿಚಯವಿಲ್ಲದ ಚಾರ್ಲಿಗೆ ವೇದಿಕೆ ಮೇಲೆ ಹಾಡಬೇಕಾದ ಅನಿವಾರ್ಯತೆ ಬರುತ್ತದೆ. ತೆರೆ ಮೇಲಿನ ಆತನ ನಡಿಗೆಯಂತೆ ಹಾಡು ಕೂಡ ವಕ್ರ ವಕ್ರವಾಗಿ ಸಾಗುತ್ತದೆ. ಆತನ ಹಾಡು ಕೇಳಿದ ಜನ ವೇದಿಕೆ ಮೇಲೆ ಹಣ ಬಿಸಾಕುತ್ತಾರೆ. ಇದ್ದಕ್ಕಿದ್ದ ಹಾಗೆ ಹಾಡು ನಿಲ್ಲಿಸುವ ಚಾರ್ಲಿಯನ್ನು 'ಹಾಡಿ, ಪ್ಲೀಸ್...' ಎಂದು ಒತ್ತಾಯಿಸುತ್ತಾರೆ. ಆಗ ಚಾರ್ಲಿ, 'ಹಾಡ್ತೀನಿ. ಮೊದ್ಲು ನೀವು ಬಿಸಾಕಿದ ಹಣವನ್ನು ಕಲೆಕ್ಟ್ ಮಾಡ್ಕೊಳ್ತೀನಿ' ಎಂದ ಚಾರ್ಲಿಯ ಚೇಷ್ಟೆ ನೋಡಿ ಜನ ಬಿದ್ದು ಬಿದ್ದು ನಗುತ್ತಾರೆ. ಹಾಗೆ ನಗಿಸುವ ಕಲೆಯನ್ನು ತೀರಾ ಚಿಕ್ಕ ವಯಸ್ಸಿನಲ್ಲೇ ಕಂಡುಕೊಳ್ಳುತ್ತಾನೆ.
ಜಗತ್ತಿಗೆ ನಗುವೆಂಬ ಅಮೃತ ಕುಡಿಸುತ್ತಲೇ ಬಂದವನು ಚಾರ್ಲಿ. 'ಮಾಡರ್ನ್ ಟೈಮ್ಸ್' ಚಿತ್ರದ ಮೂಲಕ ಬಂಡವಾಳಶಾಹಿಯ ಯಜಮಾನ್ಯದಲ್ಲಿ ನಲುಗುತ್ತಿದ್ದ ಸಮಾಜದ ಒಳಮುಖಗಳನ್ನು ಹಾಸ್ಯದ ಮೂಲಕ ಹರಿತವಾಗಿ ಬಳಸಿ ಜನರ ಮುಂದಿಟ್ಟ. ಬೆಳ್ಳಿತೆರೆಯ 'ಹಾಸ್ಯ ಚಕ್ರವರ್ತಿ' ಚಾಪ್ಲಿನ್, ಹಿಟ್ಲರ್ ಎಂಬ ಜಗತ್ತಿನ ದೈತ್ಯ ಸರ್ವಾಧಿಕಾರಿಯನ್ನು ಬಿಟ್ಟಲ್ಲ. ಯಾವಾಗಲೂ ನಗಿಸುವ ಚಾರ್ಲಿ, 'ದಿ ಗ್ರೇಟ್ ಡಿಕ್ಟೇಟರ್'ನಂಥ ಗಂಭೀರ ಚಿತ್ರ ಮಾಡಿದ. ಸಿನಿಮಾಗಳಲ್ಲಿ 'ಶಬ್ದ'ದ ಇರದ ದಿನಗಳಲ್ಲಿ ಚಾಪ್ಲಿನ್ ಮೂಕಿ ಚಿತ್ರಗಳನ್ನೇ ಮಾಡಿದ, 1930ರ ನಂತರ ಚಿತ್ರಗಳಲ್ಲಿ ಶಬ್ದ ಪ್ರವೇಶಿಸಿದಾಗಲೂ 1936ರ ತನಕ ಮೂಕಿ ಚಿತ್ರಗಳನ್ನೇ ಮಾಡಿದ. ಆದರೆ ಮುಂದೆ ಅನಿವಾರ್ಯವಾಗಿ ತಾನು ಕೂಡ ಮೂಕಿ ಬಿಟ್ಟು ಮಾತಿಗೆ ತಲೆಬಾಗಿದ. ಆಗ ಬಂದಿದ್ದೇ 'ದಿ ಗ್ರೇಟ್ ಡಿಕ್ಟೇರ್' ಚಿತ್ರ. ಆವೇಶಪೂರಿತ ಭಾಷಣಗಳಿಂದ, ಸಾಮರಸ್ಯ ಕದಡುವ ಸಂದೇಶಗಳಿಂದ ಜರ್ಮನ್ ದೇಶವನ್ನು ತನ್ನ ಪಾದದಡಿ ನಿಯಂತ್ರಿಸಲು ಹೊರಟ ಹಿಟ್ಲರ್ ಎಂಬ ಸರ್ವಾಧಿಕಾರಿಯನ್ನು ವ್ಯಂಗ್ಯವಾಗಿ ವಿಡಂಬನೆ ಮಾಡಿದ ಈ ಚಿತ್ರ, ಹಿಟ್ಲರ್ನ ಭವಿಷ್ಯವನ್ನು ಮೊದಲೇ ಊಹಿಸಿತ್ತು!
ಯುದ್ಧದ ಮೂಲಕ ಪ್ರಪಂಚವನ್ನು ತನ್ನ ಅಧೀನದಲ್ಲಿಡಬೇಕೆಂದು ಹೊರಟ ಹಿಟ್ಲರ್ನ ದುರಹಂಕಾರವನ್ನು ಬೆತ್ತಲೆಗೊಳಿಸಿದ ಈ ಚಿತ್ರ, ಮತ್ತೆ ಪ್ರಸ್ತುತವಾಗಿ, ನೆನಪಾಗಿ ಕಾಡುತ್ತಿದೆ. ಎರಡು ಮಹಾಯುದ್ಧಗಳನ್ನು ಕಂಡಿರುವ ಜಗತ್ತು ಅಪಾರ ಮಾನ, ಪ್ರಾಣ ಹಾನಿ ಅನುಭವಿಸಿದೆ. ಆದರೂ ಯುದ್ಧದಾಹ ಇಂಗಿಲ್ಲ. ಉತ್ತರ ಕೊರಿಯಾ, ಅಮೆರಿಕ ಪರಸ್ಪರ ಕತ್ತಿ ಮಸೆಯುತ್ತಿದೆ, ದಕ್ಷಿಣ ಕೊರಿಯಾ ಅಮೆರಿಕದ ನೆರಳಲ್ಲಿ ನಿಂತಿದೆ, ಚೀನಾ ಯಾರ ಪರ ನಿಲ್ಲಬೇಕೆಂದು ಯೋಚಿಸುತ್ತಿದೆ, ಭಾರತ- ಪಾಕಿಸ್ತಾನ ನಡುವೆ ಅನುಮಾನಗಳು ಮರೆಯಾಗಿಲ್ಲ, ಮುಸ್ಲಿಂ ರಾಷ್ಟ್ರಗಳು ಬಂದೂಕಿನ ನಳಿಕೆಯಿಂದ ಹೊರ ಬರುತ್ತಿಲ್ಲ, ಇತ್ತ ಜಗತ್ತಿನ 'ಶಕ್ತಿ'ವಂತ ದೇಶಗಳಿಂದ ವಂಚಿತರಾಗಿರುವ ತೃತೀಯ ರಾಷ್ಟ್ರಗಳು 'ಬ್ರಿಕ್ಸ್' ಹೆಸರಿನಲ್ಲಿ ಧೃವೀಕರಣಗೊಳ್ಳುತ್ತಿವೆ, 3ನೇ ಪ್ರಪಂಚ ಯುದ್ಧದ ಮಾತಿನ ಮೋಡಗಳು ಭೂಗೋಳವನ್ನು ಹೆದರಿಸುತ್ತಿರುವಾಗ ಯುದ್ಧವನ್ನೇ ಗೇಲಿ ಮಾಡಿದ ಚಾಪ್ಲಿನ್ರ ಈ ಚಿತ್ರ ನೆನಪಾಗದಿರಲು ಹೇಗೆ ಸಾಧ್ಯ? ಪ್ರಪಂಚವನ್ನು ತನ್ನ ಮುಷ್ಟಿಯಲ್ಲಿಡಬೇಕೆಂದ ಹಿಟ್ಲರ್ನಿಂದ ಎದುರಾಗುವ ಆಪತ್ತುಗಳನ್ನು ಊಹಿಸಿದ ಚಾಪ್ಲಿನ್ ಆತನ ಸರ್ವಾಧಿಕಾರದ ಕನಸನ್ನು ವ್ಯಂಗ್ಯವಾಗಿಸಲು ಯೋಚಿಸಿದ. ಅದೇ ವೇಳೆ ಚಾಪ್ಲಿನ್ನ ಆತ್ಮೀಯ ಸ್ನೇಹಿತ ಅಲೆಕ್ಸಾಂಡರ್ ಕೊರ್ಡಾ ಚಾಪ್ಲಿನ್ ಬಳಿ 'ನಿಮ್ಮ ಮೀಸೆ ನೋಡಲು ಹಿಟ್ಲರ್ನ ಮೀಸೆಯಂತೆ ಇದೆ. ನಿವ್ಯಾಕೆ ಹಿಟ್ಲರ್ ಮೇಲೆ ಒಂದು ಸಿನಿಮಾ ಮಾಡಬಾರದು?' ಎಂದಿದ್ದೇ 'ದಿ ಗ್ರೇಟ್ ಡಿಕ್ಟೇಟರ್' ಚಿತ್ರದ ನಿರ್ಮಾಣಕ್ಕೆ ಪ್ರೇರಣೆ. ದ್ವಿ ಪಾತ್ರದಲ್ಲಿ ಕಾಣಿಸಿಕೊಂಡ ಚಾಪ್ಲಿನ್, ಒಂದೆಡೆ ಹಿಟ್ಲರ್ ಆಗಿ, ಮತ್ತೊಂದೆಡೆ ಹಾಸ್ಯ ನಟನಾಗಿ ಮೆಚ್ಚುಗೆಯಾಗುತ್ತಾರೆ.
ಚಿತ್ರದ ಕಥೆ ಬಗ್ಗೆ ಹೇಳಬೇಕಿಲ್ಲ. ಜಗತ್ತಿನ ಸಿನಿಮಾ ಪ್ರೇಮಿಗಳ ಮನದಲ್ಲಿ ಈ ಚಿತ್ರ ಅಜರಾಮರ. ಆದರೆ ಯಹೂದಿ ಪಾತ್ರದಲ್ಲಿ ಹಾಸ್ಯ ಮಾಡುತ್ತ ನಗಿಸುತ್ತಲೇ, ಹಿಟ್ಲರ್ ಆಗಿ ಗರ್ಜಿಸುವ ಚಾರ್ಲಿ ಎರಡೂ ಪಾತ್ರಗಳನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ. ಆ ಮೂಲಕ ಚಾರ್ಲಿ ಕೇವಲ ಹಾಸ್ಯ ಮಾತ್ರವಲ್ಲ, ಗಂಭೀರ ಪಾತ್ರಗಳನ್ನೂ ಮಾಡಬಲ್ಲ ಎಂಬುದನ್ನು ತಿಳಿಸಿಕೊಟ್ಟರು. ನೆಪೋಲಿಯನ್ ಬಂದಾಗ ನೆಡಯುವ ನಾಟಕೀಯ ದೃಶ್ಯಗಳು ಹಾಸ್ಯ ಎನ್ನಿಸಿದರೂ ಹಿಟ್ಲರ್ ಅಂತ್ಯವನ್ನು ಕುರ್ಚಿಯಲ್ಲಿ ಕೂರುವ ದೃಶ್ಯಗಳು ಹೇಳುತ್ತಾನೆ. ಅಲ್ಲದೆ ಹಿಟ್ಲರ್ ಒಮ್ಮೆ ಪ್ರಪಂಚದ ಗ್ಲೋಬ್ ಅನ್ನು ಮೇಲೆ, ಕೆಳಗೆ ಎಸೆಯತ್ತ, ಕಾಲಿನಲ್ಲಿ ಒದೆಯುತ್ತ ಆಟವಾಡುತ್ತಿರುತ್ತಾನೆ. ಇದ್ದಕ್ಕಿದ್ದ ಹಾಗೆ ಗ್ಲೋಬ್ ಒಡೆಯುತ್ತದೆ. ಪ್ರಪಂಚವನ್ನು ಕಿರುಬೆರಳಿನ ಮೇಲೆ ಆಡಿಸಿಬೇಕೆಂಬ ಹಿಟ್ಲರ್ನ ಕನಸು ಭಗ್ನವಾಗುತ್ತದೆಂದು ಮಾರ್ಮಿಕವಾಗಿ ತಿಳಿಸುವ ದೃಶ್ಯವದು. ಚಿತ್ರದ ನಿಜವಾದ ತಿರುವು, ಕೊನೆಯಲ್ಲಿ ಬರುವ ಭಾಷಣ. ಯಹೂದಿಯ ಪಾತ್ರಧಾರಿಯನ್ನೇ ಕಂಡು ಈತನೇ ಹಿಟ್ಲರ್ ಎಂದುಕೊಂಡು ಸೈನಿಕರ ಕವಾಯಿತು ಮೈದಾನಕ್ಕೆ ಕರೆತರಲಾಗುತ್ತದೆ. ಆಗ ಹಿಟ್ಲರ್ ವೇಷದಲ್ಲೇ ಇರುವ ಚಾಪ್ಲಿನ್ ಅದೇ ಹಿಟ್ಲರ್ನ ವಿರುದ್ಧ ಗುಡುಗುವ ಮಾತುಗಳು...
'ಕ್ಷಮಿಸಿ, ನಾನು ಚಕ್ರವರ್ತಿಯಾಗಲು ಬಂದಿಲ್ಲ. ಯಾರನ್ನೂ ಜಯಿಸಬೇಕೆಂಬ ಯೋಚನೆಯಾಗಲಿ, ಪಾಲಿಸಬೇಕೆಂಬ ಆಸೆಯಾಗಲಿ ಇಲ್ಲ. ಅದು ನನ್ನ ವೃತ್ತಿಯೂ ಅಲ್ಲ. ಪ್ರತಿಯೊಬ್ಬರ ಸಂತೋಷ, ನೆಮ್ಮದಿಗಾಗಿ ಜೀವಿಸಬೇಕೆ, ಇತರರ ದುಃಖಕ್ಕಾಗಿ ಬದುಕಬಾರದು. ಈ ಪ್ರಪಂಚದಲ್ಲಿರುವ ಪ್ರತಿಯೊಬ್ಬರಿಗೂ ಅವನದ್ದೇ ಆದ ಸ್ಥಾನ ಇದೆ. ಯಂತ್ರಗಳಿಗಿಂತ ಮನುಷ್ಯರಿಗೆ ಮಾನವೀಯತೆ ಮುಖ್ಯ. ಇಲ್ಲದಿದ್ದರೆ ಜೀವನ ಹಿಂಸೆಯಲ್ಲೇ ಅಂತ್ಯಗೊಳ್ಳುತ್ತದೆ. ಆದರೆ ಕೆಲವರು ಮಾಡುತ್ತಿರುವ ಕ್ರೌರ್ಯ ಮುಂದೊಂದು ದಿನ ಕೊನೆಯಾಗುತ್ತದೆ. ಸರ್ವಾಧಿಕಾರಿಗಳು ಸಾಯುತ್ತಾರೆ. ಜನರಿಂದ ದೋಚಿರುವ ಸಂಪತ್ತು ಮತ್ತೆ ಜನತೆಗೆ ಸೇರುತ್ತದೆ. ಸ್ವತಂತ್ರ ಎಂದಿಗೂ ನಾಶವಾಗದು. ಯೋಧರೆ, ಗುಲಾಮಗಿರಿ ಉಳಿವಿಗಾಗಿ ಹೋರಾಡಬೇಡಿ, ಸ್ವಾತಂತ್ರ್ಯದ ಬದುಕಿಗಾಗಿ ಹೋರಾಡಿ. ಈಗ ನಾವೆಲ್ಲ ನಿರ್ಭೀತಿಯ ಸ್ವಾತಂತ್ರ್ಯಕ್ಕಾಗಿ ಹೋರಾಡೋಣ' ಎಂದು ಗಂಭೀರವಾಗಿ, ಬಹು ದೊಡ್ಡ ಕನಸಿನೊಂದಿಗೆ ಚಾರ್ಲಿಯ ಮಾತುಗಳು ಸಾಗುತ್ತವೆ. ಚಾರ್ಲಿ ತನ್ನ ಚಿತ್ರದಲ್ಲಿ ತೋರಿಸಿದಂತೆ ಹಿಟ್ಲರ್ ಪತನದತ್ತ ಮುಖ ಮಾಡಿದ. 1945ರಲ್ಲಿ ಆತ್ಮಹತ್ಯೆ ಮಾಡಿಕೊಂಡ. ಹಿಟ್ಲರ್ನ ಸೋಲಿಗೆ ಈ ಚಿತ್ರ ದೊಡ್ಡ ಕಾರಣವಾಗದೆ ಇರಬಹುದು, ಆದರೆ ಆತನ ಅಂತ್ಯವನ್ನು ಮೊದಲೇ ಅಂದಾಜು ಮಾಡಿದ ಹೆಗ್ಗಳಿಕೆ ಮಾತ್ರ 'ದಿ ಗ್ರೇಟ್ ಡಿಕ್ಟೇಟರ್'ಗೆ ಸಲ್ಲುತ್ತದೆ.
- ಆರ್. ಕೇಶವಮೂರ್ತಿ
keshavarkm1@gmail.com