ಇದು ಹೃದಯದ ಮಾತು
ನಾಡಿನ ಖ್ಯಾತ ಹೃದಯ ರೋಗ ತಜ್ಞರಾಗಿರುವ ಡಾ.ವಿ.ಪರಮೇಶ್ವರ ಅವರು 'ಹೃದಯ ಬೇನೆ ಮತ್ತು ಹೃದಯಾಘಾತ' ಕುರಿತು ಜನಸಾಮಾನ್ಯರಿಗೆ ಉಪಯುಕ್ತವಾಗಿರುವ ಕೃತಿಯನ್ನು ರಚಿಸಿದ್ದಾರೆ. ನಮ್ಮ ರೋಗಗಳಿಗೆಲ್ಲ ನಮ್ಮ ಜೀವನಶೈಲಿಯು ಮುಖ್ಯ ಕಾರಣ. ರೋಗ ಬರದಂತೆ ಬದುಕಬೇಕೆಂದರೆ ರೋಗವು ಹೇಗೆ ಬರುತ್ತದೆ ಎಂಬುದರ ಅರಿವಿರಬೇಕು. ಹೃದಯ ಕಾಯಿಲೆ ಹೇಗೆ ಬರುತ್ತದೆ, ಯಾವ ರೀತಿಯ ಜೀವನ ಶೈಲಿಯನ್ನು ರೂಢಿಸಿಕೊಂಡರೆ ರೋಗವನ್ನು ದೂರ ಇಡಬಹುದು ಇತ್ಯಾದಿ ಮಾಹಿತಿಯನ್ನು ಪರಮೇಶ್ವರ ಅವರು ನೀಡಿದ್ದಾರೆ. ಹೃದಯ ಕಾಯಿಲೆ ಯಾವ ವಯಸ್ಸಿನವರನ್ನಾದರೂ ಕಾಡಬಹುದು. ಒಂದು ಕಾಲದಲ್ಲಿ ಮಹಿಳೆಯರಲ್ಲಿ ಹೃದಯಾಘಾತ ಕಡಿಮೆ ಎಂಬ ನಂಬಿಕೆ ಇತ್ತು. ಅಂಕಿಅಂಶಗಳೂ ಅದನ್ನು ಸಮರ್ಥಿಸುತ್ತಿದ್ದವು. ಆದರೆ ಜನಸಾಮಾನ್ಯರ ಆರ್ಥಿಕ ಚೇತರಿಕೆ ಮತ್ತು ಬದಲಾದ ಜೀವನ ಶೈಲಿಯು ಲಿಂಗ ಭೇದ ವಯಸ್ಸಿನ ತಾರತಮ್ಯವಿಲ್ಲದೆ ಹೃದಯ ಬೇನೆಯನ್ನು ಇಂದು ಯಾರಿಗಾದರೂ ತರಿಸಬಹುದಾಗಿದೆ. ಉಪಯುಕ್ತ ಮಾಹಿತಿ ಇರುವ ಈ ಕೃತಿಯನ್ನು ಎಲ್ಲರೂ ಓದಬೇಕು.
ಕೃತಿ: ಹೃದಯ ಬೇನೆ ಮತ್ತು ಹೃದಯಾಘಾತ
ಪ್ರಕಾರ: ಆರೋಗ್ಯ ಲೇಖನಗಳು
ಏಕೆ ಓದಬೇಕು?: ನಿರೋಗಿಗಳಾಗಲು
ಪ್ರ: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಮೈಸೂರು, ಪುಟಗಳು 158 ಬೆಲೆ ರು. 120
=================
ಮಂಕುತಿಮ್ಮನಿಗೊಬ್ಬ ತಮ್ಮ ನವ್ಯಜೀವಿ
ಸಾಹಿತ್ಯದಲ್ಲಿ ಮುಕ್ತಕಗಳು ಎಂಬೊಂದು ಪ್ರಕಾರವಿದೆ. ಮೂರ್ನಾಲ್ಕು ಸಾಲಿನ ಒಂದು ಪದ್ಯದಲ್ಲಿ ಒಂದು ವಿಚಾರವನ್ನು ಮಂಡಿಸಲು ಕವಿಗಳು ಇದನ್ನು ಬಳಸುತ್ತಿದ್ದರು. ಹಾಗೆ ನೋಡಿದರೆ ಶರಣರ ವಚನಗಳೂ ಒಂದೊಂದು ಮುಕ್ತಕಗಳೇ. ಸರ್ವಜ್ಞನ ವಚನಗಳೂ ಹಾಗೆಯೇ. ಆಧುನಿಕ ಕನ್ನಡದಲ್ಲಿ ಡಿವಿಜಿಯವರ 'ಮಂಕುತಿಮ್ಮನ ಕಗ್ಗ' ಮತ್ತು 'ಮರುಳ ಮುನಿಯನ ಕಗ್ಗ' ಎಂಬೆರಡು ಕೃತಿಗಳು ಅಗ್ರಪಂಕ್ತಿಯಲ್ಲಿ ಪರಿಗಣಿಸಲ್ಪಡುತ್ತವೆ. ಅದೇ ಮಾರ್ಗದಲ್ಲಿ ಇನ್ನೂ ಹಲವರು ಮುಕ್ತಕಗಳನ್ನು ರಚಿಸಿದ್ದಾರೆ. ಇದೀಗ ಸತ್ಯೇಶ್ ಎನ್. ಬೆಳ್ಳೂರ್ ಅವರು 'ಒಲುಮೆಯ ಹೊನಲು' ಹೆಸರಿನಲ್ಲಿ 1021 ಮುಕ್ತಕಗಳನ್ನು ತಂದಿರುವರು. ಇವೆಲ್ಲ ನಾಲ್ಕು ಸಾಲಿನವು. ನವ್ಯಜೀವಿ ಎಂಬ ಅಂಕಿತವನ್ನು ಅವರು ಇದರಲ್ಲಿ ಬಳಸಿದ್ದಾರೆ.
ಕಗ್ಗವಿದನೆನ್ನಲೆ? ಮುಜುಗರವು ಮನದೊಳಗೆ/
ಅಗ್ಗದಾ ಬರಹಕ್ಕೆ ಹಣೆಪಟ್ಟಿ ಏಕೆ?//
ಕಗ್ಗವದು ಮರುಳನದು, ಮಂಕುತಿಮ್ಮನದೊಂದೆ/
ಉಗ್ಗು ಮಾತುಗಳಿಲ್ಲಿ- ನವ್ಯಜೀವಿ/
ಡಿವಿಜಿಯವರ ಕೃತಿಗೆ ತಮ್ಮದು ಸಮನಲ್ಲ ಎಂಬ ವಿನಮ್ರ ಭಾವ ಕವಿಗಿದೆ. ಆದರೆ ಬದುಕಿನ ಅನುಭವಗಳನ್ನು ಹಿಡಿದಿಡುವಲ್ಲಿ, ಅದಕ್ಕೆ ಶಬ್ದಾಲಂಕಾರಗಳನ್ನು ತೊಡಿಸುವಲ್ಲಿ, ಶಬ್ದ ಚಮತ್ಕಾರಗಳನ್ನು ತೋರಿಸುವಲ್ಲಿ ಅವರೇನು ಕಗ್ಗಕ್ಕೆ ಹಿಂದಾಗಿಲ್ಲ.
ರವಿಯ ಬೆಳಕಲಿ ಹೇಗೆ ಕತ್ತಲೆಯ ಭಯವಿಲ್ಲ
ಕವಿಕಾವ್ಯದನುಭವದಿ ಚಿಂತೆ ಎನಗಿಲ್ಲ/
ನವಿರಾದ ಭಾವುಕತೆ ಎನ್ನೆದೆಯ ಬಯಲಿನಲಿ
ಬವರಿಯಂತಾಡುವುದು- ನವ್ಯಜೀವಿ//
ಭಾವವೆಂಬ ಬುಗುರಿ ಭಿನ್ನ ನೆಲೆಗಳಲ್ಲಿ ತಿರುಗುತ್ತ ಸಂದೇಶದ ಹಲವು ಚಿತ್ತಾರಗಳನ್ನು ಮೂಡಿಸುತ್ತ ಹೋಗಿದೆ. 'ಮನದಿ ಯೋಚನೆ ಎಂಬುದು ನದಿಯ ನೀರಿನ ತೆರದಿ' ಎಂದು ಅವರು ಭಾವಿಸಿದ್ದಾರೆ. ಈ ಯೋಚನೆಯ ನದಿಗೆ ನೂರಾರು ತೊರೆಗಳು ಬಂದು ಇಲ್ಲಿ ಸೇರಿವೆ. ಲೋಕಾನುಭವ ಸತ್ಯೇಶ್ ಅವರಲ್ಲಿ ಅಪಾರವಾಗಿದೆ. ಸತತ ದೇಶ ವಿದೇಶಗಳಲ್ಲಿ ಪ್ರವಾಸ ಮಾಡುತ್ತಿರುವ ಅವರು ಹಲವು ರೀತಿಯ ಅನುಭವಗಳಿಗೆ ಮುಖಾಮುಖಿಯಾಗಿದ್ದಾರೆ. ಅವೆಲ್ಲ ಇಲ್ಲಿಯ ಮುಕ್ತಕಗಳಲ್ಲಿ ಮೈತಳೆದಿವೆ.
ಈ ಕೃತಿಯಲ್ಲಿ ಮುಕ್ತಕಗಳನ್ನು ಅವುಗಳ ಅರ್ಥ-ಭಾವಗಳಿಗೆ ಅನುಗುಣವಾಗಿ ಹತ್ತು ಭಾಗಗಳಲ್ಲಿ ವಿಂಗಡಿಸಿದ್ದಾರೆ. ದ್ವಿತೀಯಾಕ್ಷರ ಪ್ರಾಸವನ್ನು ಇದರಲ್ಲಿ ಅನುಸರಿಸಲಾಗಿದೆ. ಕಗ್ಗ ಕಟ್ಟುವುದು ಅವರಿಗೆ ಸುಲಭವಂತೂ ಆಗಿರಲಿಲ್ಲ. ಪ್ರಾಸಕ್ಕಾಗಿ ಹಗಲಿರುಳೂ ಚಿಂತಿಸಿದ್ದಾರೆ. ಅದು ಒಲಿದಮೇಲೆಯೇ ಅವರಿಗೆ ನಿಶ್ಚಿಂತೆ. 'ಆದಿಪ್ರಾಸದ ಗುಂಗು ಕಿವಿಯೊಳಗೆ ಮೊಳಗಿರಲು ಹಾದಿಯಿಡಿ ಅದರದೇ ಹುಡುಕಾಟದಲ್ಲಿ ಬೀದಿ ಸುತ್ತುತ್ತ ತಿರುಗಿ ರಾಗಗಳ ಒರೆಹಚ್ಚಿ ನಾದ ಹೊಮ್ಮಲು ಶಾಂತಿ ನವ್ಯಜೀವಿಗೆ.' ಪ್ರಾಸದ ಸಂಬಂಧದಲ್ಲಿ ಹ್ರಸ್ವ-ದೀರ್ಘದ ಜೊತೆ ಸ್ವಲ್ಪ ರಾಜಿಯಾಗಿದ್ದಾರೆ.
ಈ ನವ್ಯಜೀವಿ ಬುದ್ಧಿಜೀವಿಯೆ? ಬುದ್ಧಿವಂತನೆ? ಅದ್ದಿ ನೀರಿನೊಳರಿವೆ, ಹೊರ ತೆಗೆಯೆ ಶುಭ್ರ, ಒದ್ದೆಯಾಗುತ ದಿನವು ಬದುಕೆಂಬ ಜಲದಲ್ಲಿ ಶುದ್ಧತೆಯನರಸುತ್ತಿರುವವನು. ತನ್ನ ಪರಿಮಿತಿಯಲ್ಲಿ ವಿಷಯಗಳನ್ನು ಗ್ರಹಿಸುತ್ತ, ಪಕ್ವತೆಗಾಗಿ ನಿರಂತರ ಹುಡುಕಾಟವನ್ನು ನಡೆಸಿರುವವನು. ಬರೆಯುವ ಹವ್ಯಾಸಕ್ಕಿಂತ ಹಿರಿದಾವುದೂ ಇಲ್ಲ ಎಂದುಕೊಂಡು ಜಗತ್ತಿಗೆ ಅರಿವಿನ ದೀಪ ಹಚ್ಚುವುದಕ್ಕಾಗಿ ರಚಿಸಿದ ಮುಕ್ತಕಗಳು ಇವು. ಆಧ್ಯಾತ್ಮದೊಂದಿಗೆ ಇವು ಜೀವಪರ ಚಿಂತನೆಗಳಿಂದ ಕೂಡಿದೆ. ಬಾಳು ಬರಿ ಗೋಳಲ್ಲ, ನೋವಿನಾಗರವಲ್ಲ, ಹಾಳು ಹರಟೆಯದಲ್ಲ ರಸಹೀನವಲ್ಲ, ಆಳುತಿರೆ ಒಳ ಕುಳಿತು ಚಿರಸತ್ಯವನ್ನರಸಿ, ಬಾಳು ಸೌಂದರ್ಯದ ಸಿರಿ ಎಂದು ನವ್ಯಜೀವಿ ಹೇಳುತ್ತಾನೆ.
ದುಗುಡಗೊಳ್ಳಲು ಬೇಡ ಸಾಗರನ ಅಲೆ ಕಂಡು/
ತಗ್ಗುಬಗ್ಗುಗಳೆಲ್ಲ ಕಡುಬಾಹ್ಯಚಿತ್ರ//
ಜಿಗಿದೊಳಗೆ ನೀ ನೋಡು ಶಾಂತತೆಯ ಪ್ರತಿರೂಪ/
ಸೊಗವದರ ಉದರದಲಿ- ನವ್ಯಜೀವಿ//
ಇದು ಡಿವಿಜಿಯವರ ಪ್ರಸಿದ್ಧವಾದ ಹುಲ್ಲಾಗು ಬೆಟ್ಟದಡಿ.... ಎಂಬ ಮುಕ್ತಕವನ್ನು ನೆನಪಿಸುತ್ತದೆ. ನಿತ್ಯ ಸ್ಮರಿಸುವಂಥ ಉಪದೇಶದಂತಹ ಹಲವು ಮುಕ್ತಕಗಳು ಈ ಕೃತಿಯಲ್ಲಿವೆ. ಡಿವಿಜಿಯವರ ಕಗ್ಗಗಳಂತೆ ಇವೂ ಜನಪ್ರಿಯವಾಗುವ ಸಾಧ್ಯತೆಗಳಿವೆ. ಕಾರಣ ಇವುಗಳಲ್ಲಿರುವ ವಿಚಾರ ಶ್ರೀಮಂತಿಕೆ ಹಾಗೂ ಗೇಯ ಗುಣ. ಇವನ್ನು ಸಂಗೀತದೊಂದಿಗೆ ಹಾಡಲೂ ಬಹುದು. ಸತ್ಯೇಶ್ ಅವರು ಬದುಕಿನ ಸತ್ಯಗಳನ್ನು ಈ ಮುಕ್ತಕಗಳಲ್ಲಿ ಮನಮುಟ್ಟುವಂತೆ ಹೇಳಿದ್ದಾರೆ.
ಕೃತಿ: ಒಲುಮೆಯ ಹೊನಲು
ಪ್ರಕಾರ: ಮುಕ್ತಕಗಳು
ಏಕೆ ಓದಬೇಕು?: ಓದುವ ಖುಷಿಗೆ
ಪ್ರ: ವ್ಯಾಸ ಪ್ರಕಾಶನ, ಬೆಂಗಳೂರು, ಪುಟಗಳು 228 ಬೆಲೆ ರು. 100
=======================
ಮೋಡಿ ಮಾಡುವ ಗಾಡಿ
ಆಹ್ಲಾದಕರ ಓದಿಗೆ ಲಲಿತ ಪ್ರಬಂಧಗಳು ಸೂಕ್ತವಾದದ್ದು. ಸರಳತೆಯೇ ಅದರ ಆಸ್ತಿ ಮತ್ತು ಶಕ್ತಿ. ಪ್ರಬಂಧಕಾರ ಎಷ್ಟು ವಿನೀತನಾಗುತ್ತಾನೋ ಅವನ ಬರೆಹವೂ ಅಷ್ಟೇ ಯಶಸ್ವಿಯಾಗುತ್ತದೆ. ರಮೇಶಚಂದ್ರ ಅವರು 'ಗಾಡಿ ಎಂಬ ಮೋಡಿ' ಎಂಬ ಲಲಿತಪ್ರಬಂಧಗಳ ಸಂಕಲನವನ್ನು ಪ್ರಕಟಿಸಿದ್ದಾರೆ. ಕನ್ನಡದಲ್ಲಿ ಎ.ಎನ್. ಮೂರ್ತಿರಾಯರಿಂದ ಹಿಡಿದು ಹಿರಿಯ ಸಾಹಿತಿಗಳೇ ಈ ಪ್ರಕಾರದಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಆ ಸಾಲಿಗೆ ಈಗ ರಮೇಶಚಂದ್ರ ಸೇರ್ಪಡೆಯಾಗಿದ್ದಾರೆ. ಇದರಲ್ಲಿ 26 ಪ್ರಬಂಧಗಳಿವೆ. ಹಾಸ್ಯಮಿಶ್ರಿತವಾದ ಆಪ್ತವಾದ ಶೈಲಿ ಓದುಗನನ್ನು ಹಗುರಗೊಳಿಸುತ್ತದೆ. ಓದುತ್ತಿರುವಾಗ ನೀವು ಮಂದಸ್ಮಿತರಾಗದೆ ಇರುವುದಿಲ್ಲ. ಇದು ಇವರ ಬರೆಹದ ದೊಡ್ಡ ಶಕ್ತಿ. ವಸ್ತುವಿಗಾಗಿ ಅವರು ಬಹಳ ಹುಡುಕಾಟ ನಡೆಸುವುದಿಲ್ಲ. ದಿನನಿತ್ಯದ ಆಗುಹೋಗುಗಳನ್ನೇ ಸರಳ ಸುಂದರ ನಿರೂಪಣೆಯೊಂದಿಗೆ ಬರೆಹವಾಗಿಸಿದ್ದಾರೆ ಅವರು. ಸಂಕಲನದ ಶೀರ್ಷಿಕೆಯಾಗಿರುವ 'ಗಾಡಿ ಎಂಬ ಮೋಡಿ' ಪ್ರಬಂಧ 'ಕನ್ನಡಪ್ರಭ' ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದದ್ದು.
ಕೃತಿ: ಗಾಡಿ ಎಂಬ ಮೋಡಿ, ಪ್ರಕಾರ: ಲಲಿತ ಪ್ರಬಂಧ
ಏಕೆ ಓದಬೇಕು?: ಓದಿ ಹಗುರಾಗಲು
ಪ್ರ: ಜಯಂತ್ ಬುಕ್ ಏಜೆನ್ಸಿ, ಬೆಂಗಳೂರು, ಪುಟಗಳು 118 ಬೆಲೆ ರು. 70
==================
ಬಸವರಾಜಮಾರ್ಗ
ಕನ್ನಡದ ಹಿರಿಯ ವಿದ್ವಾಂಸರಲ್ಲಿ ಒಬ್ಬರಾದ ದಿವಂಗತ ಡಾ.ಎಲ್.ಬಸವರಾಜು ಅವರ ಸಂಧನೆಯ ಸಂಪುಟವನ್ನು 'ಬೆಳಕಿನ ಹಾದಿ' ಹೆಸರಿನಲ್ಲಿ ಕೆ.ಸೌಭಾಗ್ಯ ಅವರು ಸಂಗ್ರಹಿಸಿ ಸಂಪಾದಿಸಿಕೊಟ್ಟಿದ್ದಾರೆ. ಲೇಖನಗಳನ್ನು ಮೂರು ಸೋಪಾನಗಳಲ್ಲಿ ವಿಂಗಡಿಸಲಾಗಿದೆ. ಮೊದಲ ಸೋಪಾನದಲ್ಲಿ ಬಸವರಾಜು ಅವರಿಗೆ ಪಂಪ ಪ್ರಶಸ್ತಿ ಬಂದಾಗ ವಿವಿಧ ಪತ್ರಿಕೆಗಳಲ್ಲಿ ಪ್ರಟವಾದ ವಿಶೇಷ ಲೇಖನಗಳು, ಸಂಪಾದಕೀಯಗಳು, ಸಂದರ್ಶನಗಳು, ಕೃತಿ ಬಿಡುಗಡೆ ವರದಿಗಳು, ತವರು ಜಿಲ್ಲೆಯ ಸನ್ಮಾನ, ಪಂಪಪ್ರಶಸ್ತಿ ಪ್ರದಾನ ಸಮಾರಂಭಗಳ ವರದಿಗಳು ಇದರಲ್ಲಿವೆ. ಎರಡನೆ ಸೋಪಾನದಲ್ಲಿ ಅವರು ಅ.ಭಾ. 3ನೆ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಾಡಿದ ಭಾಷಣವಿದೆ. 3ನೆ ಸೋಪಾನದಲ್ಲಿ ಚಿತ್ರದುರ್ಗದಲ್ಲಿ ನಡೆದ ಅ.ಭಾ. ಕನ್ನಡಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅವರು ಮಾಡಿದ ಭಾಷಣ, ಆ ಸಂದರ್ಭದಲ್ಲಿ ಬಂದ ಸಂಪಾದಕೀಯಗಳು, ಸಂದರ್ಶನಗಳು ಮೊದಲಾದವು ಸೇರಿವೆ. ಬಸವರಾಜು ಅವರನ್ನು ಅರಿಯುವುದಕ್ಕೆ ಈ ಕೃತಿ ಸಹಕಾರಿಯಾಗಿದೆ.
ಕೃತಿ: ಬೆಳಕಿನ ಹಾದಿ, ಪ್ರಕಾರ: ಸಂಪಾದನೆ, ಏಕೆ ಓದಬೇಕು?: ಬಸವರಾಜು ಅವರನ್ನು ಅರಿಯಲು, ಪ್ರ: ಜ್ಯೋತಿ ಪ್ರಕಾಶನ, ಮೈಸೂರು, ಪುಟಗಳು 270 ಬೆಲೆ ರು. 200
=====================
ಹೊಸಗನ್ನಡ ವಾಙ್ಮಯ ವಿಹಾರ
ಮುಂಬಯಿ ಕನ್ನಡಿಗರಾಗಿರುವ ಡಾ.ಜಿ.ಎನ್.ಉಪಾಧ್ಯ ಅವರು ಬಹುಮುಖ ಪ್ರತಿಭೆಯವರು. ಅವರ ಆಳವಾದ ಓದು ಮತ್ತು ವಿಮರ್ಶನ ಶಕ್ತಿಯ ಪರಿಚಯವನ್ನು 'ಹೊಸಗನ್ನಡ ವಾಙ್ಮಯ ವಿಹಾರ' ಎಂಬ ಈ ಕೃತಿಯು ಮಾಡಿಸುತ್ತದೆ. ಕೃತಿಯೊಂದನ್ನು ಮನನ ಮಾಡಿಕೊಂಡು ವಿಸ್ತೃತವಾಗಿ ವ್ಯಾಖ್ಯಾನ, ವಿಮರ್ಶೆ ಬರೆದು ಇತರರೂ ಆ ಕೃತಿಯನ್ನು ಓದುವುದಕ್ಕೆ ಅವರು ಪ್ರೇರೇಪಿಸುತ್ತಾರೆ. ಇದರಲ್ಲಿ 46 ಲೇಖನಗಳಿವೆ. ಹಳಗನ್ನಡ, ಹೊಸಗನ್ನಡ, ಜಾನಪದ ಕೃತಿಗಳೆಲ್ಲ ಅವರ ಸಮೀಕ್ಷೆಗೆ ಒಳಪಟ್ಟಿವೆ. ಸುನಂದಾ ಪ್ರಕಾಶ ಕಡಮೆ, ನಾ.ಮೊಗಸಾಲೆ, ಕಣವಿ, ಕೆ.ವಿ.ಸುಬ್ಬಣ್ಣ, ಡಾ.ಕಮಲಾ ಹಂಪನಾ, ಡಾ.ಹಂಪನಾ, ವಿಶುಕುಮಾರ್, ಭೀಮರಾವ್ ಚಿಟಗುಪ್ಪಿ, ಪ್ರೊ.ಸೀತಾರಾಮ ಶೆಟ್ಟಿ ಮೊದಲಾದವರ ಕೃತಿ ವಿಮರ್ಶೆ ಇಲ್ಲಿದೆ. ಪೌರಾಣಿಕ ಕಾದಂಬರಿಗಳ ವಸ್ತುನಿಷ್ಠ ವಿಶ್ಲೇಷಣೆ ಮಾಡಿದ್ದಾರೆ. ಧರ್ಮಸ್ಥಳದ ಬಹುಮುಖೀ ಅಧ್ಯಯನ ಮಾಡಿದ್ದಾರೆ. ಕೊಪ್ಪಳ ಜಿಲ್ಲೆಯ ಸಾಂಸ್ಕೃತಿಕ ಅಧ್ಯಯನ ಮಾಡಿದ್ದಾರೆ. ಗಿರೀಶ್ ಕಾರ್ನಾಡರು, ಡಾ.ಜಿ.ಎಂ.ಹೆಗಡೆ, ರವಿ ಉಪಾಧ್ಯ ಅವರ ಬಗೆಗೂ ಇಲ್ಲಿ ಲೇಖನಗಳಿವೆ. ಜಿ.ಎನ್.ಉಪಾಧ್ಯರ ಬಹುಮುಖೀ ಅಧ್ಯಯನವನ್ನು ಈ ಕೃತಿ ಮನವರಿಕೆ ಮಾಡಿಸುತ್ತದೆ.
ಕೃತಿ: ಹೊಸಗನ್ನಡ ವಾಙ್ಮಯ ವಿಹಾರ, ಪ್ರಕಾರ: ಲೇಖನಗಳು, ಏಕೆ ಓದಬೇಕು?: ಕನ್ನಡ ಸಾಹಿತ್ಯ ಅರಿಯಲು, ಪ್ರ: ಕನ್ನಡ ಅಧ್ಯಯನ ವಿಭಾಗ, ಮುಂಬಯಿ ವಿವಿ, ಮುಂಬಯಿ, ಪುಟಗಳು 272 ಬೆಲೆ ರು. 200
- ಡಾ. ವಾಸುದೇವ ಶೆಟ್ಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

