ಗಾಂಧಿ ಹೆಜ್ಜೆಯಲ್ಲಿ ಹೆಜ್ಜೆ ಇಟ್ಟು
ಕರ್ನಾಟಕದ ರಾಜಕಾರಣದಲ್ಲಿ ಸಮಾಜವಾದಿಗಳಿಗೆ ತುಂಬಾ ಗೌರವವಿದ್ದ ಒಂದು ಕಾಲವಿತ್ತು. ಶಾಂತವೇರಿ ಗೋಪಾಲಗೌಡರು, ಕಿಟ್ಟಪ್ಪಗೌಡರು, ಕಡಿದಾಳ ಮಂಜಪ್ಪನವರು ಮೊದಲಾದವರು ಆ ಸಾಲಿನಲ್ಲಿ ಬರುತ್ತಾರೆ. ಮಂಜಪ್ಪನವರ ಶಿಷ್ಯ ಗೋವಿಂದಗೌಡರೂ ಅವರಲ್ಲಿ ಒಬ್ಬರು. 1952ರಲ್ಲಿ ಕಾಂಗ್ರೆಸ್ ಪಕ್ಷ ಸೇರಿ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ ಗೌಡರು ನಂತರ 1978ರಲ್ಲಿ ಜನತಾಪಕ್ಷ ಸೇರಿದರು. ಪಕ್ಷ ಯಾವುದೇ ಇದ್ದರೂ ಅವರಲ್ಲಿ ಸಮಾಜವಾದಿ ಗುಣವು ದಟ್ಟವಾಗಿಯೇ ಮನೆಮಾಡಿತ್ತು.
ಗೌಡರ ಹೆಗ್ಗಳಿಕೆ ಇರುವುದು ವ್ಯವಸ್ಥೆಯೊಳಗೆ ಇದ್ದುಕೊಂಡು ಅದರ ದುಷ್ಟ ಮಸಲತ್ತುಗಳಿಗೆ ಬಲಿಯಾಗದೆ ಅದನ್ನು ಸುಧಾರಿಸಲು ಪ್ರಯತ್ನಿಸಿದ್ದರಲ್ಲಿ. ಕರ್ನಾಟಕದಲ್ಲಿ ಇಂಥ ರಾಜಕಾರಣಿಗಳು ಅಪರೂಪ. ಅಧಿಕಾರ ಸಿಕ್ಕಿದ ಕೂಡಲೆ ತಮ್ಮ ಮುಂದಿನ ಹತ್ತು ತಲೆಮಾರೂ ತಿಂದು ಮುಗಿಯದಷ್ಟು ಆಸ್ತಿ ಮಾಡಬೇಕೆಂಬ ಹಪಾಹಪಿಯಲ್ಲಿ ಈಗಿನ ರಾಜಕಾರಣಿಗಳು ಬೀಳುತ್ತಾರೆ. ಆದರೆ ಗೋವಿಂದಗೌಡರು ಮಲೆನಾಡಿನ ಕೊಪ್ಪದ ತಾಲೂಕು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ನಂತರ ವಿಧಾನಸೌಧದ ಮೆಟ್ಟಿಲೇರಿ ಸಚಿವರಾದರೂ ಆಸ್ತಿ ಮಾಡುವ ಆಮಿಷಕ್ಕೆ ಬಲಿಯಾಗಲಿಲ್ಲ. ತಮ್ಮಲ್ಲಿದ್ದುದನ್ನು ಇತರರಿಗೆ ಹಂಚಿದರು. ತಮ್ಮಿಂದಾದಷ್ಟು ಸಹಾಯ ಮಾಡಿದರು.
ಇಂಥ ಗೋವಿಂದಗೌಡರನ್ನು ಕುರಿತು ಗಿರೀಶ ಜಕಾಪುರೆ ಅವರು 'ಮಲೆನಾಡ ಗಾಂಧಿ' ಹೆಸರಿನಲ್ಲಿ ಒಂದು ಆಪ್ತ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಕೃತಿಗೆ ಮುನ್ನುಡಿಯ ರೂಪದ ಮಾತನ್ನು ಬರೆದಿರುವ ಯು.ಆರ್.ಅನಂತಮೂರ್ತಿಯವರು, ಇಡೀ ರಾಜಕೀಯದಿಂದಲೇ ಬೇಸತ್ತುಹೋದ ಇಬ್ಬರು ರಾಜಕಾರಣಿಗಳನ್ನು ನೆನೆಯುತ್ತ ಒಬ್ಬರು ಎಂ.ವೈ.ಘೋರ್ಪಡೆ, ಇನ್ನೊಬ್ಬರು ಎಚ್.ಜಿ.ಗೋವಿಂದಗೌಡರು ಎನ್ನುತ್ತಾರೆ. ಪ್ರಜಾತಂತ್ರಕ್ಕೆ ಅಗತ್ಯವಾದ ಒಂದು ಸಮಶ್ರುತಿಯನ್ನು ಬಿಟ್ಟುಕೊಡದ ಸಜ್ಜನರ ಸಾಲಿನಲ್ಲಿ ಇವರನ್ನು ಸೇರಿಸುತ್ತಾರೆ.
ಗೋವಿಂದಗೌಡರ ಬದುಕು ಹಾಗೂ ಹೋರಾಟವನ್ನು ಮತ್ತು ತಾವು ಮಾಡುವ ಕೆಲಸದಲ್ಲಿ ಯಶಸ್ವಿಯಾದರೂ ಅವರ ಮನಸಿನಲ್ಲಿ ಉಳಿದ ಹತಾಶೆಗಳನ್ನು ಆಳವಾಗಿ ಚಿಂತಿಸಬೇಕಾದ ಒಂದು ದುಷ್ಕಾಲದಲ್ಲಿ ನಾವಿದ್ದೇವೆ ಎಂಬ ಮಾತನ್ನೂ ಅನಂತಮೂರ್ತಿ ಹೇಳಿದ್ದಾರೆ. ಗೋವಿಂದಗೌಡರು ಎಂಥ ಸಜ್ಜನರಾಗಿದ್ದರು ಎಂದರೆ, ತಾವು ಮುಖ್ಯಮಂತ್ರಿ ಪದವಿಯನ್ನು ತ್ಯಾಗಮಾಡುವ ಸಂದರ್ಭ ಬಂದರೆ ಸ್ವಚ್ಛ ರಾಜಕಾರಣಿ ಗೋವಿಂದಗೌಡರಿಗೆ ಅದನ್ನು ನೀಡುವುದಾಗಿ ಜೆ.ಎಚ್.ಪಟೇಲರು ಒಮ್ಮೆ ಹೇಳಿದ್ದರು.
ಗೋಪಾಲಗೌಡರಂತೆ ಗೋವಿಂದಗೌಡರು ಕೂಡ ಅಧಿಕಾರಶಾಹಿ ಹಾಗೂ ಆಡಳಿತ ತತ್ವಗಳಲ್ಲಿ ಹುಳುಕುಗಳನ್ನು ಎತ್ತಿತೋರಿಸಿದರು. ರೈತರ ತೆರಿಗೆಯಲ್ಲಿ ಜೀವನಪೂರ್ಣ ಸುಖ ಅನುಭವಿಸುವ ಆಡಳಿತ ವರ್ಗ ದೇಶದ ರೈತನಿಗೆ ಸದಾ ಋಣಿಯಾಗಿರಬೇಕು. ಅವರಲ್ಲಿ ಬದ್ಧತೆ ಇರಬೇಕು ಎಂದು ಹೇಳುತ್ತ ಕೆಲವೊಮ್ಮೆ ಅಧಿಕಾರಶಾಹಿಯ ವಿರುದ್ಧ ಚಾಟಿ ಬೀಸಲೂ ಹೆದರಲಿಲ್ಲ ಎಂದು ಗಿರೀಶ ದಾಖಲಿಸಿದ್ದಾರೆ.
ಗೋವಿಂದಗೌಡರು ಹುಟ್ಟಿದ್ದು 1926ರ ಮೇ 25ರಂದು. ನರಸಿಂಹರಾಜಪುರದ ಹಿಣಚಿ ಅವರ ಜನ್ಮಸ್ಥಳ. ತಂದೆ ಗಿಡ್ಡೇಗೌಡರು ಮತ್ತು ತಾಯಿ ಬೋಬಮ್ಮ. ಇವರು ಬಾಲ್ಯದಲ್ಲಿರುವಾಗಲೇ ತಾಯಿಯನ್ನು ಕಳೆದುಕೊಳ್ಳುತ್ತಾರೆ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಓದುವಾಗಲೇ ಕೆಂಗಲ್, ಕಡಿದಾಳ್, ಎಚ್.ಸಿ.ದಾಸಪ್ಪ, ಟಿ.ಸಿದ್ಧಲಿಂಗಯ್ಯ ಮೊದಲಾದ ಧುರೀಣರ ನಿಕಟ ಸಂಪರ್ಕ ಅವರಿಗೆ ದೊರೆಯಿತು. ಅವರ ಮೇಲೆ ಪ್ರಭಾವ ಬೀರಿದವರಲ್ಲಿ ಕವಿ ಕುವೆಂಪು ಅವರು ಒಬ್ಬರು. ರಾಜಪ್ರಭುತ್ವದ ವಿರುದ್ಧ ಕುವೆಂಪು ತಮ್ಮ ಬರೆಹಗಳಲ್ಲಿ ಪ್ರತಿಪಾದಿಸಿದ್ದು ಇವರನ್ನು ಆಕರ್ಷಿಸಿತು. ಗಾಂಧೀಜಿಯ ಕರೆಗೆ ಓಗೊಟ್ಟ ಗೋವಿಂದಗೌಡರು 1947ರಲ್ಲಿ ಕಾಲೇಜು ಬಿಟ್ಟು ಸಂಗ್ರಾಮಕ್ಕೆ ಧುಮುಕಿದರು. ಇವರ ಬಂಧನಕ್ಕೆ ಸರ್ಕಾರ ವಾರೆಂಟ್ ಹೊರಡಿಸಿತ್ತು. ಆದರೆ ಇವರು ಭೂಗತರಾಗಿ ಬಂಧನ ತಪ್ಪಿಸಿಕೊಂಡರು. ಸ್ವಾವಲಂಬಿ ಬದುಕು, ಜನಪರ ಕಾಳಜಿ, ಶುದ್ಧ ತಾತ್ವಿಕ ಜೀವನ, ಭ್ರಷ್ಟಾಚಾರ ರಹಿತ ಆಡಳಿತ ಮೊದಲಾದ ಗುಣಗಳು ಅವರಲ್ಲಿ ಬೇರೂರಲು ಗಾಂಧೀಯುಗದ ಹೋರಾಟವೇ ಕಾರಣವಾಯಿತು.
ಕರ್ನಾಟಕದ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹವಾದ ಬದಲಾವಣೆಯನ್ನು ತಂದವರಲ್ಲಿ ಎಚ್.ಜಿ.ಗೋವಿಂದಗೌಡರ ಹೆಸರು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಪ್ರಾಥಮಿಕ ಶಿಕ್ಷಕರ ನೇಮಕಾತಿಯಲ್ಲಿ ಶೇ.50ರಷ್ಟು ಮಹಿಳೆಯರಿಗೆ ಮೀಸಲಿಟ್ಟಿದ್ದು ಅವರೇ. ಹೆಣ್ಣುಮಕ್ಕಳು ರಾಜಕೀಯ ಮಾಡದೆ ಕೆಲಸ ಮಾಡುತ್ತಾರೆ. ಮನೆಯಿಂದ ಹೊರಟ ಅವರು ಗಂಡಸರಂತೆ ಅಲ್ಲಿ ಇಲ್ಲಿ ನಿಂತು ಹರಟೆ ಹೊಡೆಯದೆ ತಮ್ಮ ಕೆಲಸವನ್ನು ತಾವು ಮಾಡಿ ಹಿಂದಿರುಗುತ್ತಾರೆ. ಸಮಾಜದ ಬಗ್ಗೆ ಅವರಲ್ಲಿ ಹೆದರಿಕೆ ಇರುತ್ತದೆ. ಮಕ್ಕಳ ಬಗ್ಗೆ ಕಾಳಜಿ ಹಾಗೂ ಅಪಾರ ತಾಳ್ಮೆ ಇರುತ್ತದೆ ಎಂಬುದು ಅವರ ಅಭಿಪ್ರಾಯ. ಮಾಧ್ಯಮಿಕ ಶಾಲೆಯ ಪರೀಕ್ಷೆಯಲ್ಲಿ ರ್ಯಾಂಕ್ ಪ್ರಕಟಿಸುವ ಪದ್ಧತಿಯನ್ನು ಕೈಬಿಟ್ಟವರೂ ಅವರೇ. ಮಕ್ಕಳ ಮೇಲಾಗುವ ಮಾನಸಿಕ ಒತ್ತಡವನ್ನು ಅವರು ಈ ರೀತಿಯಲ್ಲಿ ಕಡಿಮೆ ಮಾಡಿದರು. ಟಿ.ಸಿ.ಎಚ್. ಮತ್ತು ಬಿ.ಎಡ್. ಪ್ರವೇಶವನ್ನೂ ಡೊನೇಷನ್ ಮುಕ್ತಗೊಳಿಸಲು ಹೊಸದಾದ ಪ್ರವೇಶ ನೀತಿಯನ್ನು ರೂಪಿಸಿದರು.
ಲಂಚಕೊಡದೇ ಶಿಕ್ಷಕರಾಗಿ ಅರ್ಹರು ನೇಮಕಗೊಳ್ಳುವ ಕ್ರಾಂತಿಕಾರಿಯಾದ ಪದ್ಧತಿಯನ್ನು ಅವರು ರೂಢಿಗೆ ತಂದರು. ಶಿಕ್ಷಕರ ವರ್ಗಾವಣೆಗೂ ಅದೇ ನೀತಿ. ಈ ಪಾರದರ್ಶಕ ಆಡಳಿತ ಅವರಿಗಷ್ಟೇ ಅಲ್ಲ ಅವರು ಸಚಿವರಾಗಿದ್ದ ಜನತಾ ಸರ್ಕಾರಕ್ಕೂ ಗೌರವ ತಂದಿತು.
ವ್ಯವಸ್ಥೆ ಎಷ್ಟೊಂದು ಕಲುಷಿತವಾಗಿತ್ತು ಎಂದರೆ ಗೋವಿಂದಗೌಡರು ರಾಜಕೀಯದಿಂದಲೇ ದೂರ ಸರಿದರು. ಗೋವಿಂದಗೌಡರನ್ನು ಪೂರ್ಣಚಂದ್ರ ತೇಜಸ್ವಿಯವರು, ಬಹುಶಃ ಕರ್ನಾಟಕ ರಾಜಕಾರಣದಲ್ಲಿದ್ದ ನಿಜವಾದ ಕೊನೆಯ ಗಾಂಧಿವಾದಿ ಎಂದು ಅನ್ನಿಸುತ್ತದೆ ಎಂದು ಹೇಳಿದ್ದರು. ಇವರು ರಾಜಕೀಯದಿಂದ ನಿರ್ಗಮಿಸಿದಾಗ ಅದೊಂದು ಬಹುದಿನಗಳಿಂದ ನಿರೀಕ್ಷಿಸಲಾಗಿತ್ತು ಎಂಬಂತೆ ರಾಜಕಾರಣಿಗಳೂ, ಜನರೂ ಪ್ರತಿಕ್ರಿಯೆ ತೋರಿಸಿದ್ದು ತೇಜಸ್ವಿಯವರಿಗೆ ವಿಷಾದವನ್ನುಂಟುಮಾಡಿತ್ತು. ಶಿಕ್ಷಕರ ನೇಮಕದ ಅರ್ಜಿಗಳನ್ನು ಮಂತ್ರಿಯೊಬ್ಬರು ತಾವೇ ಕುಳಿತು ಪರಿಶೀಲಿಸಿ ನೇಮಕ ಮಾಡುವ ಪರಿಸ್ಥಿತಿ ಬಂದಿದೆ ಎಂದರೆ ಅಧಿಕಾರಶಾಹಿ ಯಾವ ಮಟ್ಟದಲ್ಲಿತ್ತು ಎಂದು ಚಿಂತಿಸಬೇಕಾಗುತ್ತದೆ. ಗಾಂಧಿವಾದದ ಪ್ರಮುಖ ದೌರ್ಬಲ್ಯವೆಂದರೆ ತಾವು ಪ್ರಾಮಾಣಿಕರಾಗಿ ಇದ್ದರೆ, ಪರಿಶುದ್ಧರಾಗಿದ್ದರೆ ನಿಧಾನವಾಗಿಯಾದರೂ ತಮ್ಮ ಸುತ್ತಲಿನ ಪರಿಸರ ಸುಧಾರಿಸುತ್ತದೆ ಎಂದು ನಂಬುವುದು.
ತಾವು ಎಂಥ ವ್ಯವಸ್ಥೆಯಲ್ಲಿ ರಾಜಕೀಯ ಮಾಡಬೇಕಾಗಿದೆ ಎಂಬುದರ ಅರಿವಾಗಿ ಗೋವಿಂದಗೌಡರು ಸಕ್ರಿಯ ರಾಜಕೀಯ ತೊರೆದು ತಮ್ಮ ಊರು ಸೇರಿದರು. ಈ ಕೃತಿಯಲ್ಲಿ ಗೋವಿಂದಗೌಡರ ವ್ಯಕ್ತಿತ್ವವನ್ನು ಖಚಿತಗೊಳಿಸುವ ಹಲವು ಪ್ರಸಂಗಗಳಿವೆ. ಅವರ ಪ್ರಾಮಾಣಿಕತೆ, ಸೇವಾಮನೋಭಾವ, ದೀನರಿಗೆ ಸಹಾಯ ಮಾಡುವ ಗುಣ, ಇಡೀ ಊರನ್ನು, ಸಮಾಜವನ್ನು ಒಂದು ಮನೆಯ ಹಿರಿಯನಂತೆ ಗ್ರಹಿಸುವ ಮನೋಧರ್ಮ ಇಲ್ಲಿ ಬಿಂಬಿತವಾಗಿದೆ. ಮಲೆನಾಡಿನ ಗಾಂಧಿ ಎನ್ನಿಸಿಕೊಂಡ ಅವರ ಮಾರ್ಗದರ್ಶನ ಸಮಾಜಕ್ಕೆ ಸದಾ ಅಗತ್ಯ ಇದೆ. 88ರ ಹರೆಯದ ಗೋವಿಂದಗೌಡರು ಹೊಸ ರಾಜಕಾರಣಿಗಳಿಗೆ ಒಂದು ಆದರ್ಶ. ಅವರನ್ನು ಪರಿಚಯಿಸಿದ ಗಿರೀಶ ಅಭಿನಂದನೆಗೆ ಅರ್ಹರು.
ಕೃತಿ: ಮಲೆನಾಡ ಗಾಂಧಿ,
ಪ್ರಕಾರ: ವ್ಯಕ್ತಿಚಿತ್ರ,
ಏಕೆ ಓದಬೇಕು?: ಗೋವಿಂದಗೌಡರನ್ನು ಅರಿಯಲು
ಪ್ರ: ಅಭಿನವ, ಬೆಂಗಳೂರು,
ಪುಟಗಳು 224, ಬೆಲೆ ರು. 150
ಮಾಯಾ ಕೋಲಾಹಲ
ಯುವ ಕತೆಗಾರ ಮೌನೇಶ ಬಡಿಗೇರ ಅವರು ತಮ್ಮ 'ಮಾಯಾ ಕೋಲಾಹಲ' ಸಂಕಲನದಲ್ಲಿ ಭರವಸೆ ಮೂಡಿಸುವ ಕತೆಗಳನ್ನು ನೀಡಿದ್ದಾರೆ. ಇದರಲ್ಲಿ ಎಂಟು ಕತೆಗಳಿವೆ. ಈ ಕೃತಿಯ ಹೆಚ್ಚಳವೆಂದರೆ ಇದು 'ಛಂದ ಪುಸ್ತಕ' ಬಹುಮಾನವನ್ನು ಪಡೆದಿರುವುದು. ಈ ಕೃತಿಗೆ ಮುನ್ನುಡಿಯನ್ನು ಬರೆದಿರುವ ಓ.ಎಲ್.ನಾಗಭೂಷಣಸ್ವಾಮಿಯವರು, 'ಮೌನೇಶ ಬಡಿಗೇರರ ಕತೆಗಳು ಕಾಣುತ್ತಿರುವುದನ್ನೇ ಚೆನ್ನಾಗಿ ಗಮನವಿಟ್ಟು ನೋಡಲು, ಓದುಗರೂ ನೋಡುವಂತೆ ಮಾಡಲು ಯತ್ನಿಸುತ್ತಿರುವ ಕತೆಗಳು. ಮಧ್ಯಮವರ್ಗ ಅನ್ನುತ್ತೇವಲ್ಲ ಅದರ ಕೆಳ ಅಂಚಿನಲ್ಲೋ, ಅದಕ್ಕಿಂತ ಸ್ವಲ್ಪವೇ ಮೇಲೋ ಇರುವ, ಹಳ್ಳಿಯ ಬದುಕಿನ ನೆನಪು ಮಸುಕಾಗುತ್ತಿರುವ ಅಥವಾ ಕಳೆದುಕೊಂಡಿರುವ ನಗರವಾಸಿಗಳ ಬದುಕನ್ನು ಕಾಣಲು, ಕಾಣಿಸಲು ಈ ಕತೆಗಳು ತೊಡಗಿವೆ. ಹಾಗೆ ಕಾಣಿಸುವುದಕ್ಕೆ ಕಂಡದ್ದನ್ನು ಸೋಗಿಲ್ಲದೆ ವರ್ಣಿಸುವ, ಕಂಡದ್ದೇ ಕಾಡುವ ಕನಸಾಗಿಸುವ, ಕನಸನ್ನೂ ಮೀರಿ ಭವಿಷ್ಯದ ವಿಷಾದಮಯ ಕರಾಳ ಹಾಸ್ಯದ ಭ್ರಮೆಯನ್ನು ಕಟ್ಟುವ ದಾರಿಯನ್ನು ಹಿಡಿದಿವೆ' ಎಂದು ಹೇಳಿದ್ದಾರೆ. ಇಲ್ಲಿಯ ಕತೆಗಳನ್ನು ಬರೆಯುವಾಗ ಇತರರಿಗಿಂತ ಭಿನ್ನವಾಗಿ ಬರೆಯಬೇಕೆಂಬ ತುಡಿತ ಬಡಿಗೇರ ಅವರಲ್ಲಿ ಇರುವುದು ವ್ಯಕ್ತವಾಗುತ್ತದೆ. ಭವ್ಯವಾದುದನ್ನು ಸಾಧಿಸಬೇಕನ್ನುವವರ ಮೊದಲ ಅರ್ಹತೆ ಇದು. ಬಡಿಗೇರರ ಕತೆಗಳ ಹರಹು ಎಲ್ಲ ಗಡಿಗಳನ್ನು ಮೀರಲಿ.
ಕೃತಿ: ಮಾಯಾಕೋಲಾಹಲ,
ಪ್ರಕಾರ: ಕತೆಗಳು
ಏಕೆ ಓದಬೇಕು?: ಮಾಯೆಯ ಅರಿಯಲು
ಪ್ರ: ಛಂದ ಪುಸ್ತಕ, ಬೆಂಗಳೂರು,
ಪುಟಗಳು 138, ಬೆಲೆ ರು. 100
ನಯಾಗರದ ನಾಡಲ್ಲಿ...
ಕನ್ನಡದಲ್ಲಿ ಈಗಾಗಲೆ ಹಲವಾರು ಪ್ರವಾಸ ಕಥನಗಳು ಬಂದಿವೆ. ದೇಶದಲ್ಲಿಯೇ ಬೇರೆ ರಾಜ್ಯಗಳಲ್ಲಿ ಮಾಡುವ ಪ್ರವಾಸ ಕಥನ ಮತ್ತು ವಿದೇಶಗಳಿಗೆ ಹೋಗಿ ಬಂದು ಬರೆದ ಪ್ರವಾಸ ಕಥನಗಳಿವೆ. ಅದರಲ್ಲೂ ಅಮೆರಿಕ ಪ್ರವಾಸ ಮಾಡಿದ ಅನುಭವ ಕಥನಗಳೂ ಸಾಕಷ್ಟಿವೆ. ಸುಮಾರು ನಾಲ್ಕು ದಶಕಗಳಿಂದ ಅಧ್ಯಾಪಕ ವೃತ್ತಿಯಲ್ಲಿರುವ ಡಾ.ಎಸ್.ಸುಧಾ ಅವರು ತಾವು ಅಮೆರಿಕದಲ್ಲಿ ಕಳೆದ ಇಪ್ಪತ್ತು ದಿನಗಳನ್ನು 'ನಯಾಗರದ ನಾಡಲ್ಲಿ ನಾವು....' ಹೆಸರಿನಲ್ಲಿ ಪ್ರಕಟಿಸಿರುವರು. ಭಾರತಕ್ಕಿಂತ ಮೂರು ಪಟ್ಟು ದೊಡ್ಡದಾಗಿರುವ ಅಮೆರಿಕವನ್ನು ಒಂದು ಪ್ರವಾಸದಲ್ಲಿ ನೋಡುವುದು ಅಸಾಧ್ಯ. ಆ ಅರಿವು ಲೇಖಕಿಗೂ ಇದೆ. ಅವರು ತಮ್ಮ ಪತಿಯೊಂದಿಗೆ ಪ್ರವಾಸಿ ಸಂಸ್ಥೆಯೊಂದರ ಸಹಯೋಗದಲ್ಲಿ ಪ್ರವಾಸ ಕೈಗೊಂಡಿದ್ದರು. ಪ್ರವಾಸ ಕೈಗೊಳ್ಳುವಾಗ ಯಾವ ಯಾವ ಸಿದ್ಧತೆಗಳನ್ನು ಕೈಗೊಳ್ಳಬೇಕು ಎನ್ನುವುದರಿಂದ ಹಿಡಿದು ಪ್ರವಾಸದಲ್ಲಿದ್ದಾಗ ವಹಿಸಬೇಕಾದ ಮುನ್ನೆಚ್ಚರಿಕೆಯ ಕುರಿತೂ ಅವರು ವಿವರಿಸಿದ್ದಾರೆ. ನಯಾಗರ ಜಲಪಾತವನ್ನು ಅತಿ ಹತ್ತಿರದಿಂದ ನೋಡಿದ ಅನುಭವದ ರೋಮಾಂಚನವನ್ನು ಅವರು ಓದುಗರಿಗೂ ವರ್ಗಾಯಿಸಿದ್ದಾರೆ. ದೇಶ ನೋಡಲಾಗದವರು ಇಂಥ ಕೋಶ ಓದುವುದರಿಂದ ಲಾಭವಂತೂ ಇದ್ದೇ ಇದೆ.
ಕೃತಿ: ನಯಾಗರದ ನಾಡಲ್ಲಿ ನಾವು ,
ಪ್ರಕಾರ: ಪ್ರವಾಸ ಕಥನ
ಏಕೆ ಓದಬೇಕು?: ಅಮೆರಿಕ ಅರಿಯಲು
ಪ್ರ: ಚೈತ್ರ ಪ್ರಕಾಶನ, ಮೈಸೂರು,
ಪುಟಗಳು 120, ಬೆಲೆ ರು. 65
ಇತಿಹಾಸದ ಎಡ ಮಗ್ಗಲು
ದೇಶದ ಎಡಪಂಥೀಯ ವಿಚಾರಧಾರೆಯ ಲೇಖಕರಲ್ಲಿ ಎಸ್.ಜಿ.ಸರ್ದೇಸಾಯಿ ಅವರಿಗೆ ಪ್ರಮುಖ ಸ್ಥಾನವಿದೆ. ಅವರ ಇಂಗ್ಲಿಷ್ ಕೃತಿಯನ್ನು ಡಾ.ಕೆ.ಎಲ್.ಗೋಪಾಲಕೃಷ್ಣಯ್ಯ ಅವರು 'ಭಾರತೀಯ ಇತಿಹಾಸದ ವೈಲಕ್ಷಣ್ಯಗಳು' ಹೆಸರಿನಲ್ಲಿ ಕನ್ನಡಿಸಿದ್ದಾರೆ. ಭಾರತೀಯ ಇತಿಹಾಸವನ್ನು ಋಗ್ವೇದ ಕಾಲದಿಂದ ಕ್ರಿ.ಶ. ಸುಮಾರು 1200ರ ವರೆಗೆ ಅಂದರೆ ಆಫ್ಘನ್ನರು, ತುರುಷ್ಕರ ಆಗಮನದ ವರೆಗೆ ಒರೆಗೆ ಹಚ್ಚಿದ್ದಾರೆ. ಈ ಅವಧಿಯ ಭಾರತೀಯ ಇತಿಹಾಸವೆಂದರೆ ಪ್ರಗತಿಪರರು ಮತ್ತು ಸಂಪ್ರದಾಯನಿಷ್ಠ ಶಕ್ತಿಗಳ ನಡುವಿನ ಹೋರಾಟವಾಗಿತ್ತು. ಇದರ ಪ್ರತಿಫಲನವು ನಮ್ಮ ಆರ್ಥಿಕತೆ, ರಾಜಕೀಯ, ಸಾಮಾಜಿಕ ಮತ್ತು ಮತಧಾರ್ಮಿಕ ಜೀವನ, ತತ್ವಶಾಸ್ತ್ರ, ವಿಜ್ಞಾನದ ಬೆಳವಣಿಗೆಗಳಲ್ಲಿ ಕಂಡುಬಂದಿದೆ.ಈ ಸಂಘರ್ಷವನ್ನು ಬೆಳಕಿಗೆ ತರುವುದು ಈ ಗ್ರಂಥದ ಉದ್ದೇಶವಾಗಿದೆ. ಭಾರತದ ಪ್ರಾಚೀನ ನಾಗರಿಕತೆಯ, ಇತಿಹಾಸದ, ಪುರಾಣದ ವ್ಯಕ್ತಿಗಳು ಇಂದಿನ ಸಾಮಾಜಿಕ, ರಾಜಕೀಯ ಬದುಕಿನಲ್ಲೂ ಜೀವಂತ ಪಾತ್ರಗಳಾಗಿ ಉಳಿದಿರುವ ವಿಲಕ್ಷಣದ ಬಗ್ಗೆ ಅವರು ಚರ್ಚಿಸುತ್ತಾರೆ. ಭಾರತೀಯ ಇತಿಹಾಸದಲ್ಲಿ ವಾಸ್ತವವು ಭ್ರಮೆಯಾಗುವ, ಭ್ರಮೆಯು ವಾಸ್ತವವಾಗುವ ಅಸಂಗತವನ್ನು ಅವರು ಹುಡುಕುತ್ತಾರೆ. ಚಾತುರ್ವರ್ಣ್ಯ ವ್ಯವಸ್ಥೆಯು ದೈವನಿಯಾಮಕ ಎಂದು ನಂಬಿಸಲು ಯತ್ನಿಸುವ, ಪಾಪಕರ್ಮಗಳ ಫಲವೆಂದು ಪ್ರತಿಪಾದಿಸುವ ಹುಳುಕುಗಳನ್ನು ಎತ್ತಿತೋರಿಸಿದ್ದಾರೆ. ಇತಿಹಾಸದ ಈ ಎಡ ಮುಖ ಬಲವಾಗಿಯೇ ಇದರಲ್ಲಿ ಪ್ರತಿಪಾದನೆಯಾಗಿದೆ.
ಕೃತಿ: ಭಾರತೀಯ ಇತಿಹಾಸದ ವೈಲಕ್ಷಣ್ಯಗಳು,
ಪ್ರಕಾರ: ಇತಿಹಾಸ
ಏಕೆ ಓದಬೇಕು?: ಇತಿಹಾಸದ ವಿಮರ್ಶೆಗೆ
ಪ್ರ: ನವಕರ್ನಾಟಕ ಪ್ರಕಾಶನ, ಬೆಂಗಳೂರು,
ಪುಟಗಳು 144, ಬೆಲೆ ರು. 75
- ಡಾ ವಾಸುದೇವ ಶೆಟ್ಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

